ಭಾಗ - ೬ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ವಾಸ್ತವವನ್ನು ವಿಕೃತಗೊಳಿಸುತ್ತಿರುವ ವಕ್ರೀಕರಣಗಳು......
ರಾಬರ್ಟ್ ಕಾಲ್ಡ್‌ವೆಲ್, ಅಲ್ಲಸಾನಿ ಪೆದ್ದಣ ಚಿತ್ರಕೃಪೆ: ಗೂಗಲ್
ಕ್ರಿ.ಶ. ಎಂಟನೆಯ ಶತಮಾನದಿಂದಲೇ ಮಹಮ್ಮದೀಯ ದರೋಡೆಕೋರರು ಭಾರತದ ದೇವಾಲಯಗಳನ್ನು ಕೊಳ್ಳೆ ಹೊಡೆಯಲಾರಂಭಿಸಿದರು. ಶತಮಾನಗಳ ಕಾಲ ದೇವಸ್ಥಾನಗಳನ್ನು ಇಸ್ಲಾಮಿನ ಅನುಯಾಯಿಗಳು ಧ್ವಂಸ ಮಾಡುತ್ತಲೇ ಬಂದರೆ ನಾವು ಅವನ್ನು ಪುನಃ ನಿರ್ಮಾಣ ಮಾಡುತ್ತಲೇ ಬಂದೆವು. ಗ್ರಂಥಗಳನ್ನು ಸುಟ್ಟು ಹಾಕಿದರೆ ಅವನ್ನು ನಾವು ಮತ್ತೆ ರಚಿಸಿಕೊಂಡೆವು. ಆರಂಭಿಕ ದಿನಗಳಲ್ಲಿ ಬ್ರಿಟೀಷರೂ ಸಹ ಈ ವಿಧವಾದ ಭೌತಿಕ ಬೀಭತ್ಸ್ಯಗಳನ್ನು ಸೃಷ್ಟಿಸಿದರು, ಆದರೆ ಇದಕ್ಕೆ ಸರಿಯಾದ ಫಲವು ದೊರೆಯದು ಎಂದು ಮನಗಂಡ ಅವರು ಬೌದ್ಧಿಕ ಬೀಭತ್ಸ್ಯಗಳನ್ನು ಆರಂಭಿಸಿದರು. ನಮ್ಮ ಗ್ರಂಥಗಳನ್ನು ಅವರು ಸುಟ್ಟು ಹಾಕಿದರು, ಅದರ ಫಲವಾಗಿ ಕ್ರಮೇಣವಾಗಿ ಮಾನಸಿಕ ಗುಲಾಮಿತನವು ನಮ್ಮ ಮೆದುಳನ್ನು ಆಕ್ರಮಿಸಿತು. ನಮ್ಮದೆನ್ನುವ ಪ್ರತಿಯೊಂದನ್ನೂ ಸಹ ನಾವು ಮರೆಯಲಾರಂಭಿಸಿದೆವು. ನಮ್ಮದೆನ್ನುವುದರ ಮೇಲೆ ನಮಗೆ ಧ್ಯಾಸವು ಕಡಿಮೆಯಾಗುತ್ತಾ ಹೋಯಿತು. ಪುಸ್ತಕಗಳನ್ನು ಸುಟ್ಟು ಹಾಕಲು ಬ್ರಿಟಿಷರು ಅವಲಂಭಿಸಿದ ಮಾರ್ಗವೇ ಮೆಕಾಲೆ ವಿದ್ಯಾವಿಧಾನ! ಎಲ್ಲಾ ಕಲೆ ಹಾಗು ವಿಜ್ಞಾನ ವಿಷಯಗಳ ಬೋಧನಾ ವಿಧಾನಗಳಲ್ಲಿ ಬಳಕೆಯಲ್ಲಿದ್ದ ಸಂಸ್ಕೃತ ಭಾಷೆಯನ್ನು ತೊಲಗಿಸಿ ಅದರ ಜಾಗದಲ್ಲಿ ಇಂಗ್ಲೀಷನ್ನು ತಂದು ಕೂರಿಸಲಾಯಿತು. ಭಾಷೆ ಯಾವುದಾದರೇನು ಎಲ್ಲವೂ ಸರಸ್ವತೀ ಸ್ವರೂಪವೇ! ಆದರೆ ಭಾಷೆಯು ಬದಲಾಗುವುದರೊಂದಿಗೆ ನಮ್ಮ ಆಲೋಚನಾ ಪದ್ಧತಿಯೂ ಬದಲಾಗಿ ಹೋಯಿತು.... ಇದನ್ನು ನೋಡಿ ಮೆಕಾಲೆಯ ಭೂತ ಸಮಾಧಿಯಿಂದಲೇ ವಿಕೃತ ನಗೆ ನಗುತ್ತಿರಬಹುದು!
ವಾಸ್ತವವನ್ನು ವಿಕೃತಗೊಳಿಸುತ್ತಿರುವ ವಕ್ರೀಕರಣಗಳು....
ವಿರಾಜಿಸಿದ ರತ್ನರಾಶಿಯ
ಗುರುತಿಸಲೊಲ್ಲರು
ಗಾಜು ತುಣುಕುಗಳ ಮಿಣುಕಿಗೆ
ಮೋಹಗೊಂಡ ಮೇಧಾವಿಗಳು,
ಮೋಸದಾ ಮತ್ತಿನಲಿ ಮುಳುಗಿ
ದಾಸ್ಯದಲಿ ತಲೆಗಳು ತಿರುಗಿ
ಹೆತ್ತ ತಾಯಿಯ ಗರತಿಯಲ್ಲವೆಂದು
ಸಾರುತಿಹರು ಸಂಭ್ರಮದಿ!
ದಿವಂಗತ ನಾರ‍್ಲ ವೆಂಕಟೇಶ್ವರ ರಾವ್ ಅವರು ಪ್ರಸಿದ್ಧ ಲೇಖಕರು ಹಾಗು ಪ್ರಖ್ಯಾತ ಪತ್ರಕರ್ತರು. ೧೯೮೨ನೇ ಇಸವಿಯಲ್ಲಿ ಅವರ ‘ಜಾನಕಿಯ ಜ್ಯೋತಿಷ್ಯ - ಸೀತಾ ಜೋಸ್ಯಂ’ ಎನ್ನುವ ತೆಲುಗು ನಾಟಕವು ಪ್ರಕಟವಾಯಿತು. ಆ ಗ್ರಂಥದಲ್ಲಿನ ನಾಟಕದ ಭಾಗವು ಬಹಳ ಚಿಕ್ಕದು ಆದರೆ ಅದಕ್ಕೆ ಬರೆದ ಪೀಠಿಕೆಯು (ಮುನ್ನುಡಿ) ಬಹಳ ಸುದೀರ್ಘವಾದದ್ದು. ಈ ಗ್ರಂಥವು, ’ರಾಷ್ಟ್ರೀಯ ಸಮೈಕ್ಯ ಸಾಹಿತ್ಯ ಸುಧಾಕಲಶ’ದಲ್ಲಿನ ವಿಷ ಬಿಂದುವಿನಂತಹುದು. ರಘುರಾಮನು ದುಷ್ಟನೆಂದೂ ದಶಕಂಠನು ಶಿಷ್ಟನೆಂದೂ ಈ ಗ್ರಂಥದಲ್ಲಿ ನಾರ‍್ಲ ಅವರು ನಿರೂಪಿಸಿದ್ದಾರೆ! ಈ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ದೊರೆತಿದೆ, ಇದು ಎಲ್ಲಕ್ಕಿಂತಲೂ ಸೋಜಿಗದ ಸಂಗತಿ. ಸಾಹಿತ್ಯ ಅಕಾಡೆಮಿಯ ಓರ್ವ ಸದಸ್ಯರು ಮಾತ್ರವೇ ನಾರ‍್ಲ ಅವರ ಗ್ರಂಥವನ್ನು ವಿಮರ್ಶಿಸಿರುವರಂತೆ ಮತ್ತು ಆ ಲೇಖನವನ್ನು ಅಕಾಡೆಮಿಯ ತನ್ನ ಪತ್ರಿಕೆಯಲ್ಲಿಯೂ ಪ್ರಕಟಿಸಿದೆಯಂತೆ. ಆ ವಿಶ್ಲೇಷಣಾತ್ಮಕ ಲೇಖನದ ಕುರಿತು ನಾರ‍್ಲ ಅವರು ನಾನಾ ರೀತಿಯ ರಂಪಾಟಗಳನ್ನು ಮಾಡಿ ಹಲವಾರು ಆಕ್ಷೇಪಣೆಗಳನ್ನು ಎತ್ತಿದರಂತೆ ಹಾಗು ಕಡೆಯಲ್ಲಿ ಅದಕ್ಕೆ ಉತ್ತರರೂಪವಾದ ತಮ್ಮ ಪ್ರತಿಕ್ರಿಯೆಯನ್ನೂ ಸಹ ಅದರಲ್ಲಿ ಪ್ರಕಟಿಸಬೇಕೆಂದೂ ಕೋರಿಕೊಂಡರಂತೆ, ಎನ್ನುವ ವಾರ್ತೆಗಳು ಆ ಸಮಯದಲ್ಲಿ ಹರಿದಾಡಿದವು. ಅದೇನೆ ಇರಲಿ, ಆ ಪುಸ್ತಕದ ಸಾರಾಂಶವೇನೆಂದರೆ ಸೀತೆಯು ತನ್ನ ಪತಿಯಾದ ರಾಮನು ಯುದ್ಧೋನ್ಮಾದಿಯೆಂದೂ, ದುರಾಕ್ರಮಣಕಾರನೆಂದೂ ಭಾವಿಸಿ ರಾಮನೊಂದಿಗೆ ರಾಕ್ಷಸರ ಪರವಾಗಿ ವಾದಿಸುವುದು ಆ ನಾಟಕದ ಸಾರಾಂಶ. ಉತ್ತರ ದೇಶದವರು ದಕ್ಷಿಣದೇಶದಲ್ಲಿ ವಾಸಿಸುತ್ತಿರುವವರ ಮೇಲೆ ದಂಡೆತ್ತಿ ಬಂದು ದುರಾಕ್ರಮಣ ಮಾಡುವುದಕ್ಕೆ ಪೂರ್ವಭಾವಿಯಾಗಿ ಭೂಮಿಕೆಯನ್ನು ಸಿದ್ಧಪಡಿಸಲು ಮಹರ್ಷಿಗಳು ವಿಂಧ್ಯ ಪರ್ವತವನ್ನು ದಾಟಿ ಬಂದು ಆಶ್ರಮಗಳು ಅಥವಾ ಸ್ಥಾವರಗಳನ್ನು ದಕ್ಷಿಣ ಭಾರತದಲ್ಲಿ ಏರ್ಪಡಿಸಿಕೊಂಡರಂತೆ. ಈ ಪವಿತ್ರವಾದ ಕಲ್ಪನೆಗಳಿಗೆ ವಾಲ್ಮೀಕಿ ವಿರಚಿತ ರಾಮಾಯಣ ಗ್ರಂಥವೇ ಆಧಾರವಂತೆ! ಆದರೆ ಗ್ರಂಥದ ಕೊನೆಯಲ್ಲಿ ನಾರ‍್ಲ ಅವರು ಪಟ್ಟಿ ಮಾಡಿರುವ ಉಲ್ಲೇಖ ಗ್ರಂಥಗಳೆಲ್ಲಾ ಇಂಗ್ಲೀಷ್ ಭಾಷೆಯಲ್ಲಿ ರಚಿತವಾದವುಗಳು ಎನ್ನುವುದು ವಿಶೇಷ. ಭಾರತೀಯ ಸಂಸ್ಕೃತಿಯನ್ನೂ, ಭಾರತೀಯ ಸಾಹಿತ್ಯವನ್ನೂ ವಿಮರ್ಶಿಸುವ ಅನೇಕ ಇಂಗ್ಲೀಷ್ ಪಂಡಿತರಂತೆ ನಾರ‍್ಲ ಅವರಿಗೂ ಸಹ ಸಂಸ್ಕೃತದ ಗಂಧಗಾಳಿಯೂ ಇರಲಿಲ್ಲ!
ಭಾರತೀಯ ಕೃತಿಗಳಲ್ಲಿ ತಮಗೆ ಇಷ್ಟವಾದ ಭಾಗಗಳನ್ನು ನಂಬುವುದು, ಇಷ್ಟವಾಗದ ಭಾಗಗಳನ್ನು ನಂಬದೇ ಇರುವುದು ನಾರ‍್ಲರಂತಹ ಮೇಧಾವಿಗಳ ಸಿದ್ಧಾಂತ! ಇದು ಕ್ರಿ.ಶ. ಹದಿನೆಂಟನೇ ಶತಮಾನದಲ್ಲಿ ಸರ್ ವಿಲಿಯಂ ಜೋನ್ಸ್ ಆರಂಭಿಸಿದ ವಿಕೃತ ಸಂಪ್ರದಾಯ, ವಸ್ತುಸ್ಥಿತಿಯನ್ನು ವಕ್ರೀಕರಿಸುವುದು ಈ ಮೆಕಾಲೆ ಪಂಡಿತರ ಗುರಿ. ಗಂಗಾ ನದಿಯನ್ನು ದಾಟಲು ಸೀತೆ, ರಾಮ ಹಾಗು ಲಕ್ಷ್ಮಣರು ತೆಪ್ಪವನ್ನು ಹತ್ತಿದರೆಂದು ಕವಿ ವಾಲ್ಮೀಕಿ ಬರೆದಿದ್ದಾನೆ. ಲಕ್ಷ್ಮಣನು ಸೀತೆಯು ತೆಪ್ಪವನ್ನು ಹತ್ತಲು ಸಹಾಯ ಮಾಡಿದ ನಂತರ ತಾನು ತೆಪ್ಪವನ್ನು ಹತ್ತಿದ. ತದನಂತರ ರಾಮನು ತೆಪ್ಪವನ್ನು ಏರಿದ. ಸೀತೆಯನ್ನು ಲಕ್ಷ್ಮಣನು ಹತ್ತಿಸಿದ್ದರಿಂದ ಸೀತೆಯ ಮುಖವನ್ನು ಲಕ್ಷ್ಮಣನು ನೋಡಿಲ್ಲವೆನ್ನುವ ಮಾತು ಸರಿಯಲ್ಲವೆಂದು ನಾರ‍್ಲ ಅವರು ಕಡಾ ಖಂಡಿತವಾಗಿ ಹೇಳಿದ್ದಾರೆ. ವಾಲ್ಮೀಕಿಯನ್ನು ಅದೇ ವಿಧವಾಗಿ ವಕ್ರೀಕರಿಸಿದ್ದಾರೆ. ಸೀತೆಯ ಮುಖವನ್ನು ಲಕ್ಷ್ಮಣ ನೋಡೇ ಇರಲಿಲ್ಲವೆಂದು ವಾಲ್ಮೀಕಿ ತನ್ನ ಗ್ರಂಥದಲ್ಲಿ ಹೇಳಿರುವನೆಂದು ಇನ್ನೂ ಕೆಲವರು ಪ್ರಚಾರ ಮಾಡಿದ್ದಾರೆ. ಆದ್ದರಿಂದ ಸೀತೆಯ ಆಭರಣಗಳನ್ನು ಗುರುತಿಸುವ ಸಮಯದಲ್ಲಿ ಲಕ್ಷ್ಮಣನು ಹೇಳಿದ ಮಾತುಗಳು ಅಸತ್ಯವೆಂದೂ ಸಹ ಕೆಲವರು ಪ್ರಚಾರ ಮಾಡಿದ್ದಾರೆ. ರಾವಣನು ಸಂನ್ಯಾಸಿಯ ವೇಷದಲ್ಲಿ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ, ಸೀತೆಯು ಆಕಾಶದಿಂದ ಕೆಳಗೆ ಬಿಸಾಡಿದ ಆಭರಣಗಳ ಗಂಟನ್ನು ಸುಗ್ರೀವನು ರಾಮ, ಲಕ್ಷ್ಮಣರಿಗೆ ತೋರಿಸುತ್ತಾನೆ. ಇದನ್ನು ನೆನಪಿಡಿ, ಲಕ್ಷ್ಮಣನು ನಾನು ಕೇಯೂರಗಳನ್ನು ಅರಿಯೆನು, ಕುಂಡಲಗಳನ್ನು ಅರಿಯೆ, ಆದರೆ ಪ್ರತಿದಿನ ಪಾದಾಭಿವಂದನೆಯನ್ನು ಮಾಡುತ್ತಿದ್ದರಿಂದ ನೂಪುರಗಳನ್ನು (ಗೆಜ್ಜೆ ಅಥವಾ ಕಾಲಂದುಗೆಗಳನ್ನು) ಮಾತ್ರವೇ ಗುರುತಿಸಬಲ್ಲೆ ಎಂದು ಹೇಳುತ್ತಾನೆಂದು ಕವಿ ವಾಲ್ಮೀಕಿ ಕಿಷ್ಕಿಂದಾ ಕಾಂಡದ ಆರನೆಯ ಸರ್ಗದಲ್ಲಿ ಹೀಗೆ ವಿವರಿಸುತ್ತಾನೆ.
ನಾಹಂ ಜಾನಾಮಿ ಕೇಯೂರೆ
ನಾಹಂ ಜಾನಾಮಿ ಕುಂಡಲೆ l
ನೂಪುರೇ ತ್ವಭಿಜಾನಾಮಿ
ನಿತ್ಯಂ ಪಾದಾಭಿವಂದನಾತ್ ll
ಲಕ್ಷ್ಮಣನು ಸೀತೆಯ ಮುಖವನ್ನು ನೋಡಲಿಲ್ಲವೆಂದು ವಾಲ್ಮೀಕಿ ಎಲ್ಲಿ ಹೇಳಿದ್ದಾನೆ? ಹಾಗೆ ಹೇಳಲಾರ, ಆದರೆ ಹಾಗೆ ಹೇಳಿದ್ದಾನೆಂದು ಅಪಪ್ರಚಾರ ಮಾಡಿ ಅನಾವಶ್ಯವಾಗಿ ವಾಲ್ಮೀಕಿಯ ಮೇಲೆ ಗೂಬೆ ಕೂರಿಸಲಾಯಿತು. ಅತ್ತಿಗೆಯನ್ನು ತಾಯಿಯಂತೆ ಭಾವಿಸುವುದು ಭಾರತೀಯ ಸಂಪ್ರದಾಯ. ಈ ಸಂಪ್ರದಾಯವನ್ನು ಅನುಸರಿಸುತ್ತಿದ್ದ ಲಕ್ಷ್ಮಣನು ಸಹಜವಾಗಿಯೇ ಸೀತೆಯನ್ನು ಮಾತೆಯಂತೆ ಕಾಣುತ್ತಿದ್ದ. ಸನಾತನ ಸಂಪ್ರದಾಯವನ್ನು ಅನುಸರಿಸುವ ಪುರುಷರು, ತಾಯಿಯನ್ನು, ಅತ್ತಿಗೆಯನ್ನು, ನಾದಿನಿಯನ್ನು ಮತ್ತು ಅಕ್ಕತಂಗಿಯರನ್ನು ಪರಿಶೀಲನಾ ದೃಷ್ಟಿಯಿಂದ ನೋಡುವುದಿಲ್ಲ. ಆದರೆ ಹೆಂಡತಿಯನ್ನು ಮಾತ್ರವೇ ಪರಿಶೀಲನಾ ದೃಷ್ಟಿಯಿಂದ ನೋಡುತ್ತಾರೆ. ಲಕ್ಷ್ಮಣನು ಸೀತೆಯ ಕಾಲಂದುಗೆಯನ್ನು ಮಾತ್ರವೇ ಪರಿಶೀಲಿಸಿ ನೋಡಿದ್ದ. ಆದರೆ ಸೀತೆಯು, ಮುಖಕ್ಕೆ, ಕುತ್ತಿಗೆಗೆ ಹಾಗು ನಡುವಿಗೆ ಹಾಕಿಕೊಳ್ಳುವ ಆಭರಣಗಳನ್ನು ಹಾಗೆ ಪರೀಕ್ಷಿಸಿ ನೋಡಿರಲಿಲ್ಲ. ಹಾಗೆಂದ ಮಾತ್ರಕ್ಕೆ ಸೀತಾಮಾತೆಯನ್ನು ಲಕ್ಷ್ಮಣನು ನೋಡೇ ಇರಲಿಲ್ಲವೇ? ಮುಖವನ್ನು ನೋಡಿ ಆಕೆಯನ್ನು ಗುರುತಿಸಲಾರದವನಾಗಿದ್ದನಾ? ತಾಯಿ ತಂಗಿಯರನ್ನು ಪುರುಷರು ನೋಡುವುದೇ ಇಲ್ಲವೇ ಅಥವಾ ಅವರನ್ನು ಗುರುತು ಹಿಡಿಯಲಾರರೇ? ಕಡೆಗೆ ನಾರ‍್ಲಾ ಅವರು ಸಮುದ್ರವೆಂದರೆ ಮಧ್ಯಪ್ರದೇಶ ಹಾಗು ಓರಿಸ್ಸಾ ರಾಜ್ಯಗಳು ಸೇರುವ ಪ್ರಾಂತದಲ್ಲಿನ ಒಂದು ದೊಡ್ಡ ಕೆರೆಯೆಂದೂ ನಿರೂಪಿಸಿದ್ದಾರೆ. ಹಾಗಾದರೆ ಕಪಿಗಳು ಯಾವುದಕ್ಕೆ ಮತ್ತು ಏತಕ್ಕೆ ಸೇತುವೆಯನ್ನು ಕಟ್ಟಿದರೆಂದರೆ ಅದಕ್ಕೆ ಅವರ ಬಳಿ ಉತ್ತರವಿಲ್ಲ. ವಿಂಧ್ಯ ಪರ್ವತಗಳು ಬೇರೆ ಮತ್ತು ವಿಂದ್ಯಗಿರಿ ಎಂದು ಕರೆಯಲ್ಪಡುವ ಗುಡ್ಡಗಳೇ ಬೇರೆ ಎಂದು ಅರಿಯದ ನಾರ‍್ಲ ಮಹಾಶಯರು ವಾಲ್ಮೀಕಿಗೆ ವಿಂಧ್ಯ ಪರ್ವತಗಳು ಎಲ್ಲಿವೆ ಎಂದು ತಿಳಿಯದು ಎಂದು ನಿರ್ಧರಿಸಿದ್ದಾರೆ! ವಿಂಧ್ಯ ಪರ್ವತ ಶ್ರೇಣಿಯು ಈಗಿನ ಮಧ್ಯಪ್ರದೇಶದಲ್ಲಿದೆ. ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದಲ್ಲಿ, ಕರ್ನಾಟಕ ಪ್ರಾಂತದಲ್ಲಿ, ವಿಂದ್ಯಗಿರಿ ಎನ್ನುವ ಚಿಕ್ಕ ಗುಡ್ಡವಿದೆ. ಅದಕ್ಕೂ ಇದಕ್ಕೂ ವ್ಯತ್ಯಾಸವನ್ನರಿಯದ ಮೇಧಾವಿಗಳು, "ವಾಲ್ಮೀಕಿ ವಿಂಧ್ಯ ಪರ್ವತಗಳು ಕರ್ನಾಟಕ ಪ್ರಾಂತದಲ್ಲಿವೆ ಎಂದು ಬರೆದಿದ್ದಾನೆ" ಎಂದು ಅವಹೇಳನ ಮಾಡಿದ್ದಾರೆ.
ಮೆಕಾಲೆ ವಿದ್ಯಾವಿಧಾನದ ಪರಿಣಾಮದಿಂದಾಗಿ ಭಾರತೀಯ ಸಂಸ್ಕೃತಿ ಹೀಗೆ ಕ್ರಮೇಣವಾಗಿ ವಕ್ರೀಕರಣಕ್ಕೆ ಗುರಿಯಾಗುತ್ತಿದೆ. ಕತ್ತಿ ಪದ್ಮಾರಾವ್ ಎನ್ನುವವರೊಬ್ಬರು ತಾನು ಮಾತನಾಡುವುದಕ್ಕೆ ಆರಂಭಿಸುವ ಮುನ್ನ ವ್ಯಂಗ್ಯವಾಗಿ ಒಂದು ಪದ್ಯವನ್ನು ಹಾಡುತ್ತಿದ್ದರು. ತೆಲುಗಿನಲ್ಲಿ ಅಲ್ಲಸಾನಿ ಪೆದ್ದಣ ಬರೆದ ಮನುಚರಿತ್ರೆಯಲ್ಲಿ ಬರುವ ಉತ್ಪಲಮಾಲ ಶೈಲಿಯ ಪದ್ಯವಿದು.......
ಅಂಕಮು ಜೇರಿ ಶೈಲತನಯಾಸ್ತನ ದುಗ್ಧಮುಲಾನುವೇಳ ಬಾ
ಲ್ಯಾಂಕ ವಿಚೇಷ್ಟ ತೊಂಡಮುನ ನವ್ವಲಿಚನ್ ಕಬಳಿಂಪಬೋಯಿ, ಯಾ
ವಂಕ ಕುಚಂಬು ಕಾನ ಕಹಿವಲ್ಲಭ ಹಾರಮು ಗಾಂಚಿ ವೇಮೃಣಾ
ಳಾಂಕುರ ಶಂಕನಂಟೆಡು ಗಜಸ್ಯುನಿ ಕಾಲ್ತು ನಭೀಷ್ಟ ಸಿದ್ಧಿಕನ್ l
ಮಾತ್ರಾ ಛಂದಸ್ಸುಗಳ ನಿಯಮವನ್ನನುಸರಿಸದೆ ಈ ಪದ್ಯದ ಸ್ಥೂಲ ಅನುವಾದವನ್ನು ಹೀಗೆ ಮಾಡಬಹುದು.
ತೊಡೆಯನೇರಿ ಶೈಲಜಾತನಯೆಯ ಸ್ತನ್ಯಪಾನವ ಮಾಡುತಿರಲು
ಶಿಶು ಚೇಷ್ಟೆಯಲಿ ಆ ಕಡೆಯ ಸ್ತನವಂ ಕುಡಿಯಲಿಚ್ಚಿಸಿ ತಿರುವಲು
ಸೊಂಡಿಲನು ಕಾಣದಾಯ್ತು ಕುಚವು ಇಹುದಲ್ಲಿ ಅಹಿವಲ್ಲಭವನ ಹಾರವು
ಗಜಗಳಿಷ್ಟವಾದ ತಾವರೆಯ ಎಸಳೆಂ ಭ್ರಮಿಪದವನೀಡೇರಿಸಲಭೀಷ್ಟೆಯ l
ಈ ಪದ್ಯದಲ್ಲಿ ಅಶ್ಲೀಲತೆಯಿದೆ ಎಂದು ಪದ್ಮಾರಾವ್ ಅವರು ವೇದಿಕೆಗಳ ಮೇಲೆ ಘಂಟಾಘೋಷವಾಗಿ ಹೇಳುತ್ತಿದ್ದರು. ಪ್ರಾರ್ಥನೆಯ ಸಮಯದಲ್ಲಿಯೂ ಸಹ ಭಾರತೀಯ ಕವಿಗಳು ಅಶ್ಲೀಲ ಶೃಂಗಾರವನ್ನು ಜೋಡಿಸಿದ್ದಾರೆಂದು ನಾಸ್ತಿಕರ ಸಭೆಗಳಲ್ಲಿಯೂ, ರಾಷ್ಟ್ರವಿರೋಧೀ ಶಕ್ತಿಗಳ ಕೂಟಗಳಲ್ಲಿಯೂ ಅವರು ತಮ್ಮ ನಿಶಿತಾಭಿಪ್ರಾಯವನ್ನು ಸಮರ್ಥಿಸುತ್ತಿದ್ದರು! ನಿಜವಾಗಿ ನೋಡಿದರೆ, ಅತಿ ಮನೋಜ್ಞವಾದ ಜೀವನದ ರೀತಿಯನ್ನು ಮತ್ತು ಶಿಶು ಸಹಜ ಪ್ರವೃತ್ತಿಯನ್ನು ಅಲ್ಲಸಾನಿ ಪೆದ್ದಣನು ಈ ಪದ್ಯದಲ್ಲಿ ವ್ಯಕ್ತಮಾಡಿದ್ದಾನೆ.
’ಬಾಲ ಗಣಪತಿಯು ಅಮ್ಮನ ತೊಡೆಯ ಮೇಲೆ ಕುಳಿತು ಒಂದು ಸ್ತನದಿಂದ ಹಾಲು ಕುಡಿಯುತ್ತಿದ್ದಾನೆ. ಬಾಲ್ಯಚಾಪಲ್ಯದಂತೆ ಹಾಲು ಕುಡಿಯುವಾಗ ಶಿಶುಗಳು ಉಳಿದೊಂದು ಸ್ತನದ ಮೇಲೆಯೂ ಕೈಯ್ಯಾಡಿಸುತ್ತವೆ. ತಾಯಿಯ ಎದೆ ಹಾಲು ಕುಡಿಯುವ ಶಿಶುಗಳಿಗೆ ಇದು ಸಹಜವಾದ ಕ್ರಿಯೆ. ಬಾಲ ಗಣಪತಿಯೂ ಸಹ ಒಂದು ಸ್ತನದಿಂದ ಹಾಲು ಕುಡಿದ ನಂತರ ತಾಯಿಯ ಇನ್ನೊಂದು ಸ್ತನದಿಂದ ಹಾಲು ಕುಡಿಯಲುಪಕ್ರಮಿಸಿ ಅದರ ಮೇಲೆ ತನ್ನ ಸೊಂಡಿಲನ್ನಾಡಿಸಿದನು. ಆದರೆ ಆ ಇನ್ನೊಂದು ಭಾಗದಲ್ಲಿ ಕುಚವು ಇರಲಿಲ್ಲ ಏಕೆಂದರೆ ಆ ಭಾಗವು ಅರ್ಧನಾರೀಶ್ವರನಾಗಿದ್ದ ಶಿವನ ಪುರುಷ ಭಾಗವಾಗಿದ್ದಿತು. ಆದ್ದರಿಂದ ನಾಗಾಭರಣನಾದ ಶಿವನು ಧರಿಸುತ್ತಿದ್ದ ಹಾವಿನ ಹಾರಗಳು ಅಲ್ಲಿರುತ್ತವೆ. ಒಂದು ಪಾರ್ಶ್ವದಲ್ಲಿ ಪಾರ್ವತೀ ದೇವಿಯಿದ್ದರೆ ಮತ್ತೊಂದು ಪಾರ್ಶ್ವದಲ್ಲಿ ಶಿವನಿದ್ದದ್ದರಿಂದ ಗಣಪತಿಯ ಸೊಂಡಿಲಿಗೆ ಆ ಹಾವುಗಳ ಹಾರವು ತಗುಲಿತು. ಹಾವುಗಳು ತಾವರೆಯ ದಂಟುಗಳೆಂದು ಆನೆಯ ಪ್ರತಿರೂಪನಾಗಿರುವ ಬಾಲ ಗಣಪತಿಯು ಭ್ರಮೆಪಡುತ್ತಾನೆ. ಇಂತಹ ಬಾಲಗಣಪತಿಯನ್ನು ತನ್ನ ಅಭೀಷ್ಟ ಸಿದ್ಧಿಗಾಗಿ ಕವಿ ಪ್ರಾರ್ಥಿಸುತ್ತಿದ್ದಾನೆ. ಆನೆಗಳಿಗೆ ತಾವರೆಯ ದಂಟುಗಳೆಂದರೆ ಪ್ರೀತಿಯಲ್ಲವೇ? ಹಾಗಾಗಿ ಕವಿ ಇಲ್ಲಿ ಹಾವುಗಳ ಹಾರವನ್ನು ತಾವರೆಯ ದೇಟುಗಳಿಗೆ ಹೋಲಿಸಿದ್ದಾನೆ.
ಇಷ್ಟು ಸೊಗಸಾಗಿ ಇರುವ ವಿಷಯಗಳನ್ನು ವಿಕೃತಗೊಳಿಸುವ ದೈತ್ಯಪ್ರತಿಭೆ ಮೆಕಾಲೆ ವಿದ್ಯಾವೇತ್ತರಿಗೆ ಮಾತ್ರ ಸಿದ್ಧಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಂತಹ ವಿಷದ ಅಮಲು ಒಂದೇ ಬಾರಿಗೆ ಏರಲಿಲ್ಲ, ಈ ಪರಂಗಿಗಳ ವಿಷದ ಅಮಲು ಕ್ರಮೇಣವಾಗಿ ತಲೆಗೆ ಏರಿದೆ. ಈ ವಿಧವಾದ ಮತಿಭ್ರಮಣೆಯಾದ ಚಿತ್ತವೃತ್ತಿಗಳಿಗೆ ಶಿಖರಪ್ರಾಯವಾಗಿ ಪಟ್ಟಾಭಿ (ಪಠಾಭಿ) ಎನ್ನುವ ಕವಿ ಸೀತಾಮಾತೆಗೂ ರಾವಣನಿಗೂ ಪ್ರಣಯವೇರ್ಪಟ್ಟಿತೆಂದು ತನ್ನ ಕವಿತೆಯೊಂದರಲ್ಲಿ ಚಿತ್ರೀಕರಿಸಿದ್ದಾನೆ. ರಾವಣನು ತನ್ನ ಹತ್ತು ಮೂತಿಗಳಿಂದ ಸೀತಾದೇವಿಯನ್ನು ಚುಂಬಿಸಬೇಕೆಂದು ಕೋರಿಕೊಂಡನೆಂದೂ ಸೀತಾದೇವಿ ಕೂಡಾ ಅವನ ಆ ಅಭಿಲಾಷೆಯು ಈಡೇರುವಂತಾಗಲಿ ಎಂದು ಹೇಳಿ ನಾಚಿ ನೀರಾದಳೆಂದು ಆ ಮಹಾಕವಿ ಪಠಾಭಿ ತನ್ನ ಕವಿತೆಯೊಂದರಲ್ಲಿ ವಿಷವನ್ನು ಕಾರಿಕೊಂಡಿದ್ದಾನೆ. ಆ ಕವಿತಾ ಸಂಕಲನದ ಹೆಸರು, "ಫಿಡೆಲ್ ರಾಗಾಲ್ ಡಜನ್ - ಪಿಟೀಲು ರಾಗಗಳು ಹನ್ನೆರಡು! ಓದಿದವರು ಅದನ್ನು ಸುಟ್ಟುಹಾಕಲಿಲ್ಲ, ಚಳವಳಿಗಳನ್ನು ಮಾಡಲಿಲ್ಲ ಅಥವಾ ಅದನ್ನು ನಿಷೇಧಿಸಿರೆಂದು ಕೋರ್ಟುಗಳ ಮೆಟ್ಟಲೇರಲಿಲ್ಲ. ಸೀತಾಮಾತೆಗೆ ಇಂಥಹ ಅವಮಾನವೇ ಎಂದು ರಾಷ್ಟ್ರ ಪ್ರಜ್ಞೆಯಿರುವವರು ವ್ಯಥೆ ಪಟ್ಟರು. ರಾಷ್ಟ್ರದ ಕುರಿತ ಸ್ಪೃಹೆಯಿಲ್ಲದವರು ಮೆಕಾಲೆ ಪ್ರಭಾವಗ್ರಸ್ತರು ಈ ವಿಷಯದ ಕುರಿತು ಆಲೋಚಿಸದೇ ಇರುವುದು ಮತ್ತು ರಾಷ್ಟ್ರದ ಕುರಿತು ಕಳಕಳಿಯಿರುವವರು ಬಾಧೆ ಪಡುವುದು ಹೊಸ ವಿಷಯವೇನಲ್ಲ, ಏಕೆಂದರೆ ಸುಮಾರು ಹತ್ತು ತಲೆಮಾರುಗಳ ಕಾಲದಿಂದಲೂ ಇದಕ್ಕೆ ನಾವು ಒಗ್ಗಿಕೊಂಡು ಬಿಟ್ಟಿದ್ದೇವೆ.
ಮೆಕಾಲೆ ಜನಿಸುವುದಕ್ಕೆ ಮುಂಚೆಯೇ ನಮ್ಮ ದೇಶಕ್ಕೆ ಭೇಟಿಯಿತ್ತ ವಿಲಿಯಂ ಜೋನ್ಸ್ ಸಂಸ್ಕೃತ ಪಂಡಿತರ ಹತ್ತಿರ ಭಾರತೀಯರ ಸಾಹಿತ್ಯ ಚರಿತ್ರೆಯನ್ನು ಅಭ್ಯಸಿಸಿದ. ಆಮೇಲೆ ಆ ವಿಷಯವಾಗಿ ಇಂಗ್ಲೀಷಿನಲ್ಲಿ ಲೇಖನಗಳನ್ನು ಬರೆಯುತ್ತಾ ಹೋದ. ಈ ಪ್ರಭಂದಗಳಲ್ಲಿ ಹತ್ತು ಸತ್ಯ ಸಂಗತಿಗಳನ್ನು ಬರೆದರೆ ಹನ್ನೊಂದು ಸುಳ್ಳುಗಳನ್ನು ಪೋಣಿಸಿ ಬರೆದ. ’ಏಷಿಯಾಟಿಕ್ ರಿಸೆರ್ಚ್ ಸೊಸೈಟಿ - ಏಷಿಯಾ ವಿಷಯಗಳ ಸಂಶೋಧನಾ ಸಂಸ್ಥೆ’ಯವರ ಪತ್ರಿಕೆಗಳು ಹಾಗು ಇತರೇ ಪತ್ರಿಕೆಗಳಲ್ಲೂ ಜೋನ್ಸ್ ಮಹಾಶಯನ ಪ್ರಭಂದಗಳು ಅಚ್ಚಾಗುತ್ತಿದ್ದವು. ಆ ಕಾಲದಲ್ಲಿ ಭಾರತೀಯ ಮೇದಾವಿಗಳೆಲ್ಲರೂ ಬಹುತೇಕ ಸಂಸ್ಕೃತ ಭಾಷಾ ಕೋವಿದರಾಗಿದ್ದರು, ಅವರಿಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಹಾಗಾಗಿ ವಿಲಿಯಂ ಜೋನ್ಸ್ ಹಾಗು ಅವನ ಅನುಚರರು ಬರೆದ ಲೇಖನಗಳನ್ನು ನಮ್ಮವರಿಗೆ ಓದಲಾಗಲಿಲ್ಲ, ಒಂದು ವೇಳೆ ಓದಿದ್ದರೆ ಅಂದೇ ಅವುಗಳನ್ನು ಖಂಡಿಸುತ್ತಿದ್ದರು. ಆಮೇಲೆ ಕ್ರಮೇಣವಾಗಿ ಇಂಗ್ಲೀಷ್ ಭಾಷೆಯನ್ನು ಓದಿಕೊಂಡ ಭಾರತೀಯರು ವಿಲಿಯಂ ಜೋನ್ಸ್ ಹಾಗು ಅವನ ಅನುಚರರು ಬರೆದ ಅಪದ್ಧಗಳನ್ನು ಖಂಡಿಸಿದರು, ಆದರೆ ಅವಕ್ಕೆ ಪ್ರಚಾರವು ಸಿಗಲಿಲ್ಲ. ಹೀಗೆ ಸ್ವಲ್ಪ ಹೆಚ್ಚೂ ಕಡಿಮೆ ಮೂರು ತಲೆಮಾರುಗಳ ಕಾಲ ಪಾಶ್ಚಾತ್ಯರು ಲಂಡನ್ನಿನಲ್ಲಿ ಕುಳಿತುಕೊಂಡು, ಪಾಶ್ಚಾತ್ಯ ದೇಶಗಳಲ್ಲಿ ಕುಳಿತುಕೊಂಡು ಭಾರತೀಯ ಸಂಸ್ಕೃತಿಯನ್ನು ಕುರಿತ ಗ್ರಂಥಗಳನ್ನು ಬರೆದು ಗುಡ್ಡೆ ಹಾಕಿದರು. ವಿಲಿಯಂ ಜೋನ್ಸ್ ಆರಂಭಿಸಿದ ಕಡ್ಡಿಯಷ್ಟಿದ್ದ ಸುಳ್ಳುಗಳ ಕಂತೆಯು ಮೆಕಾಲೆ ಮಹಾಶಯನ ಕಾಲಕ್ಕೆ ಗುಡ್ಡದಷ್ಟಾಗಿದ್ದವು. ಬಿಷಪ್ ಕಾಲ್ಡ್‌ವೆಲ್ ಎನ್ನುವ ಮಹಾನುಭಾವ ಅವನ್ನು ಬೆಟ್ಟಗಳನ್ನಾಗಿಸಿದ.
ಭಾರತೀಯ ಸಂಸ್ಕೃತಿಯನ್ನು ಪರಮ ವೈಭವದ ಸ್ಥಿತಿಗೆ ಕೊಂಡೊಯ್ದ ವಿಕ್ರಮ ಮತ್ತು ಶಾಲಿವಾಹನರು ಶಕಪುರುಷರೆಂದು ಓದಿಕೊಂಡ ವಿಲಿಯಂ ಜೋನ್ಸ್ ಅದನ್ನು ಅಲ್ಲಗಳೆದು ಅವರು ಚಾರಿತ್ರಿಕ ಪುರುಷರಲ್ಲ ಅವರು ಕೇವಲ ಕಾಲ್ಪನಿಕ ಪುರುಷರೆಂದೂ ತನ್ನ ಸಿದ್ಧಾಂತವನ್ನು ಮಂಡಿಸಿದ. ಅದಕ್ಕೆ ಆಧಾರವಾಗಿದ್ದುದು ಏಸುಕ್ರಿಸ್ತನಿಗೆ ಪೂರ್ವದಲ್ಲಿ ಕೇವಲ ನಾಲ್ಕು ಸಾವಿರ ವರ್ಷಗಳ ಹಿಂದೆಯಷ್ಟೇ ಪ್ರಪಂಚದ ಉಗಮವಾಯಿತೆನ್ನುವ ಪರಮ ಪ್ರಮಾಣವಾಗಿದ್ದ ಪಾಶ್ಚಾತ್ಯ ಪಂಡಿತರ ಅಭಿಮತ! ಕಾಲ್ಡ್‌ವೆಲ್ ಮಹಾಶಯನ ಕಾಲಕ್ಕೆ ವಿಲಿಯಂ ಜೋನ್ಸ್ ಬರೆದ ಪ್ರಬಂಧಗಳು ವೇದಕ್ಕೆ ಸಮಾನವಾದ ಅಂತಿಮ ಪ್ರಮಾಣಗಳಾಗಿ ಬದಲಾದವು. ಮೇಧಾವಿಗಳಾದ ಭಾರತೀಯರಿಗೆಲ್ಲಾ ಆಂಗ್ಲ ಭಾಷೆಯಲ್ಲಿ ರಚಿತವಾದ ಆ ಪ್ರಬಂಧಗಳು ವಿಶ್ವಾಸಾರ್ಹವಾದ ಉಲ್ಲೇಖ ಗ್ರಂಥಗಳಾಗಿ ಸ್ವೀಕಾರಾರ್ಹವಾದವು. ಸುಳ್ಳುಗಳ ಕಂತೆಯ ಮೇಲೆ ನಿಂತ ಆಕರ ಗ್ರಂಥಗಳನ್ನು ಆಧರಿಸಿ ತದನಂತರದ ಸಂಶೋಧನೆ ಹಾಗು ಪ್ರಬಂಧಗಳನ್ನು ನಮ್ಮ ಭಾರತೀಯ ಮೇಧಾವಿಗಳು ಬರೆಯಲು ಮೊದಲು ಮಾಡಿದರು, ಅದರೊಂದಿಗೆ ನಮ್ಮ ಮೌಲ್ಯಗಳೂ ಸಹ ಬದಲಾಗುತ್ತಾ ಹೋದವು….. ನಮ್ಮ ಮೇಧಾವಿಗಳಿಗೆ ಎಲ್ಲದಕ್ಕೂ ಪರಮ ಪ್ರಮಾಣವಾಗಿದ್ದು ಆ ಆಂಗ್ಲ ಭಾಷೆಯಲ್ಲಿ ರಚಿತವಾದ ಗ್ರಂಥಗಳೇ! ಮೆಕಾಲೆ ವಿದ್ಯಾವಿಧಾನವು ಅಮಲಿಗೆ ಬಂದ ನಂತರ ಉನ್ನತ ವ್ಯಾಸಂಗ ಮಾಡಿದ ಭಾರತೀಯ ವಿದ್ಯಾವಂತರೆಲ್ಲ ಸಂಸ್ಕೃತ ಭಾಷೆಗೆ ದೂರವಾದರು ಮತ್ತು ಅವರೆಲ್ಲಾ ಇಂಗ್ಲೀಷ್ ಪಂಡಿತರಾದರು. ಇದರ ಪರಿಣಾಮವಾಗಿ ಸಾವಿರಾರು ವರ್ಷಗಳಿಂದ ಭಾರತೀಯರಿಗಿದ್ದ ‘ಅಕ್ಷರ ಪ್ರಮಾಣ’ಗಳನ್ನು (ಶ್ರುತಿ - ವೇದೋಪನಿಷತ್ತುಗಳು) ಭಾರತೀಯ ಪಂಡಿತರೇ ಮರೆತುಹೋದರು. ಸಂಸ್ಕೃತದ ಜ್ಞಾನವಿಲ್ಲದ್ದರಿಂದ ಸಹಜವಾಗಿಯೇ ವೇದದಿಂದ ಹಿಡಿದು ಎಲ್ಲಾ ಭಾರತೀಯ ವಿದ್ಯೆಗಳ ಕುರಿತು ಬರೆಯಬೇಕೆಂದುಕೊಳ್ಳುವ ನಮ್ಮವರಿಗೆ ಲಭ್ಯವಿರುವುದು ವಿಲಿಯಮ್ ಜೋನ್ಸ್ ಮುಂದಿನ ಪೀಳಿಗೆಗೆ ಬಿಟ್ಟು ಹೋಗಿರುವ ಆಂಗ್ಲ ಸಾಹಿತ್ಯಕ ಗ್ರಂಥಗಳು. ನಮ್ಮವರಿಗೆ ಅವೇ ಇಂದು ಪರಮ ಪ್ರಾಮಾಣ್ಯ ಗ್ರಂಥಗಳಾಗಿವೆ. ಹೀಗೆ ಭಾರತೀಯರ ಮಿದುಳನ್ನೇ ಕಸಿಮಾಡಿಬಿಟ್ಟರು ಬ್ರಿಟಿಷರು. ವಿಶ್ವನಾಥ ಸತ್ಯನಾರಾಯಣ ಎನ್ನುವ ತೆಲುಗು ಗ್ರಂಥ ಕರ್ತರು ತಮ್ಮ ’ನಿವೇದಿತ’ ಎನ್ನುವ ಕಾದಂಬರಿಯಲ್ಲಿ ವಿಲಿಯಂ ಜೋನ್ಸನನ್ನು ’ವಿಲಿಯನೋನ್’ ಅಂದರೆ ವಿಲನ್ ಅಥವಾ ಖಳನಾಯಕನಾಗಿ ಚಿತ್ರಿಸಿದ್ದಾರೆ. ಜೋನ್ಸ್ ಬರೆದ ಅಪದ್ಧಗಳನ್ನೆಲ್ಲಾ ಸತ್ಯವೆಂದು ನಂಬುವ ಮೇಧಾವಿಗಳು ಇಂದು ದೇಶಾದ್ಯಂತ ವಿಸ್ತರಿಸಿದ್ದಾರೆ. ಕಡೆಗೆ ರಾಷ್ಟ್ರೀಯ ಚರಿತ್ರಕಾರರಾದ ಡಿ.ಆರ್. ಭಂಡಾರ್ಕರ್ (ಇವರ ಹೆಸರಿನಲ್ಲೇ ಪುಣೆಯಲ್ಲಿರುವ ‘ಭಂಡಾರ್ಕರ್ ಇನ್ಸ್‌ಟಿಟ್ಯೂಟ್ ಆಫ್ ಓರಿಯಂಟಲ್ ಸ್ಟಡೀಸ್’ನ ಸ್ಥಾಪನೆಯಾಗಿದೆ) ಅವರಂತಹವರೂ ಸಹ ಶಕಕರ್ತನಾದ ವಿಕ್ರಮನು ಹುಟ್ಟಿರಲೇ ಇಲ್ಲವೆಂದು ಬರೆಯುವವರೆಗೆ ಮೆಕಾಲೆ ವಿದ್ಯಾವಿಧಾನ ಈ ದೇಶವನ್ನು ದುಸ್ಥಿತಿಗೆ ತಳ್ಳಿತು...
ಒಡೆದಾಳಿದ ವಿದ್ರೋಹಿಗಳ ಕುಟಿಲತೆಗೆ
ರಾಷ್ಟ್ರೀಯತೆ ಸೋಕದು ಎಮ್ಮ ತಲೆಗಳಿಗೆ
ಸ್ವಗೃಹವು ಧ್ವಂಸವಾಗುತಿರುವುದ ನೋಡಿ
ಕಣ್ಣೀರ್ಗರೆಯುತಿಹಳು ತಾಯಿ ಭಾರತಿ!
ಪರಂಗಿ ನಿಶೆಯಾವರಿಸಿದ ಮಂದಮತಿಗಳು
ಎರೆಚಿಕೊಳ್ಳುತಿಹರು ತಮ್ಮ ಮೈಗೆ ಕೆಸರನು
ಎಚ್ಚರಗೊಳ್ಳದ ಅವರು ತೂಕಡಿಸುತಿಹರು
ಅದೇ ಸುಖವೆಂದು ಭ್ರಮಿಸಿ ಸಂಭ್ರಮಿಸುತಿಹರು!!
******
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಆರನೆಯ ಕಂತು, "ವಾಸ್ತವಾನ್ನಿ ವಿಕೃತಂ ಚೇಸ್ತುನ್ನ ವಕ್ರೀಕರಣಲು.... - ವಾಸ್ತವವನ್ನು ವಿಕೃತಗೊಳಿಸುತ್ತಿರುವ ವಕ್ರೀಕರಣಗಳು...."
ಈ ಸರಣಿಯ ಐದನೆಯ ಲೇಖನಕ್ಕೆ ಶ್ವೇತ ಕತ್ತಲೆ ನಮ್ಮ ಬುದ್ಧಿಯನ್ನು ಮಸಕು ಗೊಳಿಸಿತು.....! ಈ ಕೊಂಡಿಯನ್ನು ನೋಡಿ
https://sampada.net/blog/%E0%B2%AD%E0%B2%BE%E0%B2%97-%E0%B3%AB-%E0%B2%AE...
Comments
ಉ: ಭಾಗ - ೬ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:...
ಈ ಸರಣಿಯ ಆರನೆಯ ಲೇಖನವನ್ನೂ ಸಹ ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿರುವ ಸಂಪದದ ನಿರ್ವಾಹಕ ಮಂಡಳಿಗೆ ನನ್ನ ಕೃತಜ್ಞತೆಗಳು ಹಾಗು ಈ ಸರಣಿಯನ್ನು ಆದರದಿಂದ ಓದಿ ಪ್ರೋತ್ಸಾಹಿಸುತ್ತಿರುವ ವಾಚಕರ ಬಳಗಕ್ಕೂ ಧನ್ಯವಾದಗಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ. ಈ ಸರಣಿಯ ಮುಂದಿನ ಲೇಖನಕ್ಕಾಗಿ - ಭಾಗ - ೭ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು! ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AA...