ಭಾಗ - ೭ ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು! (ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ)
ಆರ್. ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರದ ಕೃಪೆ: ಗೂಗಲ್
ಕ್ರಿ.ಶ. ೧೮೩೪ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ, ಸರ್ವೋನ್ನತ ಮಂಡಳಿಯ (ಸುಪ್ರೀಂ ಕೌನ್ಸಿಲ್ ಆಫ್ ಇಂಡಿಯಾ) ಸಭೆಯೊಂದರಲ್ಲಿ ಒಂದು ವಿಷಯದ ಕುರಿತಾಗಿ ಸದಸ್ಯರಲ್ಲಿ ಭಿನ್ನಾಭಿಪ್ರಾಯವುಂಟಾಯಿತು. ಭಾರತದಲ್ಲಿ ಉನ್ನತ ವ್ಯಾಸಂಗವನ್ನು ಸಂಸ್ಕೃತ ಹಾಗು ಇತರೇ ಭಾರತೀಯ ಭಾಷೆಗಳಲ್ಲಿ ಬೋಧಿಸಬೇಕೆಂದು ಎಂಟು ಸದಸ್ಯರಿದ್ದ ಆ ಮಂಡಳಿಯ ನಾಲ್ಕು ಸದಸ್ಯರು ಅಭಿಪ್ರಾಯಪಟ್ಟರೆ, ಉಳಿದ ನಾಲ್ವರು ಇಂಗ್ಲೀಷೇ ಮಾಧ್ಯಮವಾಗಬೇಕೆಂದು ಪ್ರತಿಪಾದಿಸಿದರು. ಈ ಸಮಸ್ಯೆಯನ್ನು ಪರಿಷ್ಕರಿಸಿ, ಅಂತಿಮ ನಿರ್ಣಯವನ್ನು ಕೈಗೊಳ್ಳಲು ’ಕಂಪನಿ ಸರ್ಕಾರ’ವು ಟಿ.ಬಿ.ಮೆಕಾಲೆಯನ್ನು ನಮ್ಮ ದೇಶಕ್ಕೆ ಕರೆಸಿಕೊಂಡಿತು. ಹಾಗೆ ಮೆಕಾಲೆ, ನಿರ್ಣಾಯಕ ಮತವನ್ನು ಚಲಾಯಿಸಬಹುದಾದ ಒಂಬತ್ತನೇ ಸದಸ್ಯನಾಗಿ ಆಯ್ಕೆಯಾದ. ಕ್ರೈಸ್ತ ಮಿಷನರಿಗಳ ಮತಾಂತರ ಕಾರ್ಯಕ್ರಮಗಳಿಗೆ ಇಂಗ್ಲೀಷ್ ಮಾಧ್ಯಮವು ಬಹಳ ಪರಿಣಾಮಕಾರಿಯಾಗಬಲ್ಲುದೆಂದು ಆಡಳಿತಾರೂಢ ಬ್ರಿಟಿಷರು ಗುರಿತಿಸಿದ್ದರು. ಅದರ ಮೇಲೆ ಮೆಕಾಲೆ ಕ್ರೈಸ್ತಮತ ಪ್ರಚಾರಕ ಝಚರಿ ಮೆಕಾಲೆಯ ಸುಪುತ್ರ. ಸಹಜವಾಗಿಯೇ ಮೆಕಾಲೆ ಉನ್ನತ ವ್ಯಾಸಂಗಗಳಲ್ಲಿ ಇಂಗ್ಲೀಷ್ ಮಾಧ್ಯಮವೇ ಇರಬೇಕೆಂದು ಬಲವಾಗಿ ಪ್ರತಿಪಾದಿಸಿದ. ಹೀಗೆ, ಐದು ಮಂದಿ ‘ಇಂಗ್ಲೀಷ್ ಮೀಡಿಯಂ’ನ ಕಡೆಗೆ ಒಲವು ತೋರಿದ್ದರಿಂದ ಮಂಡಳಿಯಲ್ಲಿ ಅವರ ಸಂಖ್ಯಾಬಲವೇ ಹೆಚ್ಚಾಗಿ ಅವರ ಅನುಮೋದನೆಯೇ ನಿರ್ಣಾಯಕವಾಯಿತು. ಈ ’ನವ’ ನಾಯಕ ಮಂಡಳಿ ತನ್ನ ಶಿಫಾರಸ್ಸನ್ನು ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಆಗಿದ್ದ ವಿಲಿಯಂ ಬೆಂಟಿಕ್‌ಗೆ ನಿವೇದಿಸಿತು. ಈ ವಿಷಯದಲ್ಲಿ ತಕರಾರು ತೆಗೆಯದಂತೆ ಮೆಕಾಲೆ ಮೊದಲೇ ಬೆಂಟಿಕ್‌ನನ್ನು ಒಪ್ಪಿಸಿದ್ದರಿಂದ ಯಾವುದೇ ವಿಧವಾದ ಅಡ್ಡಿ ಆತಂಕಗಳಿಲ್ಲದೆ ಶಿಕ್ಷಣದ ಮಾಧ್ಯಮವಾಗಿ ಇಂಗ್ಲೀಷ್ ನಮ್ಮ ದೇಶದಲ್ಲಿ ಜಾರಿಗೆ ಬಂತು.
ಈ ಹೊಸ ವಿಧಾನವನ್ನೇ ಮೆಕಾಲೆ, ’ರಾಷ್ಟ್ರೀಯ ವಿದ್ಯಾವಿಧಾನ - ನ್ಯಾಷನಲ್ ಎಜುಕೇಷನ್ ಸಿಸ್ಟಂ’ ಎಂದು ನಾಮಕರಣ ಮಾಡಿದ. ’ಇಂಗ್ಲೀಷ್ ರಾಷ್ಟ್ರೀಯತೆ’ಯ ಉಗಮಕ್ಕೆ ಈ ರಾಷ್ಟ್ರೀಯ ವಿದ್ಯಾವಿಧಾನವು ಸಹಕಾರಿಯಾಗುತ್ತದೆ ಎನ್ನುವುದು ಮೆಕಾಲೆಯ ದೃಢವಾದ ನಂಬಿಕೆಯಾಗಿತ್ತು. ಈಗ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಚಾರಿತ್ರಿಕ ಗ್ರಂಥಗಳಲ್ಲಿ, ವಿದ್ಯಾ ಚರಿತ್ರೆಯ ಅಧ್ಯಯನವು ಆರಂಭವಾಗುವುದು ಮೆಕಾಲೆಯಿಂದಲೇ...... ಇದಕ್ಕೂ ಮುಂಚೆ ದೇಶದಲ್ಲಿ ಪ್ರಚಲಿತವಿದ್ದ ವಿದ್ಯಾ ವ್ಯವಸ್ಥೆ ಏನು, ಅದರ ಚರಿತ್ರೆ ಏನು, ಮುಂತಾದ ವಿಷಯಗಳ ಕುರಿತು ಅದರಲ್ಲಿ ಉಲ್ಲೇಖಗಳೇ ಇಲ್ಲ, ಇದ್ದರೂ ಅವನ್ನು ಗೌರವಪೂರ್ವಕವಾಗಿ ಒಕ್ಕಣಿಸಿಲ್ಲ. ಇದಕ್ಕೆ ಕಾರಣವೇನೆಂದರೆ, ಭಾರತೀಯ ವಿದ್ಯಾವಿಧಾನಕ್ಕಾಗಲಿ, ವಿದ್ಯಾ ಚರಿತ್ರೆಗಾಗಲಿ ಮೆಕಾಲೆಯ ಆಮೋದ ಮುದ್ರೆ ಬಿದ್ದಿಲ್ಲವಾದ್ದರಿಂದ......!
*****
ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು!
ಶಾಲೆಗೆ ಹೋಗುವ ಪುಟ್ಟನಿಗೆ
ನಾಮ ಮುದ್ರೆಗಳೇತಕೆಂದರು ಅಮ್ಮ,
ದೇವರನಾಮಗಳ ಹಾಡೆನೆಂದರು
ಬೆಲ್ ಬಾಟಮ್ ಟೀಚರಮ್ಮ!
ಅರಿಷಿಣ-ಕುಂಕುಮಕ್ಕೆ ಬನ್ನಿ ಎಂದರೆ
ಅಪಹಾಸ್ಯದಿ ಮುಸಿಮುಸಿ ನಗುವರು
ಫಂಕ್ಷನ್ನಿಗೆ ಬನ್ನಿ ಎಂದಾಕ್ಷಣ
ಥ್ಯಾಂಕ್ಯೂ ಎಂದು ಪುಳುಕುವರು!
ತೆಲುಗಿನಲ್ಲಿ - ವಿನು, ವಿನುಪಿಂಚು, ಲೈಫ್ ಅಂದಿಂಚು (ಕೇಳಿ, ಕೇಳಿಸಿರಿ! ಲೈಫ್ ಅಂದಿಸಿರಿ) ಹೀಗೆ ಎಫ್. ಎಂ. ಬ್ರಾಂಡಿನ ಆಕಾಶವಾಣಿಗಳು ಅರ್ಧಗಂಟೆಗೊಮ್ಮೆ ಇಲ್ಲಾ ಹತ್ತು ನಿಮಿಷಕ್ಕೊಂದಾವರ್ತಿ ಪ್ರಕಟಣೆಗಳನ್ನು ಕೊಡುವುದನ್ನು ನೋಡುತ್ತಿರುತ್ತೇವೆ. (ಕನ್ನಡಲ್ಲಿಯೂ ಸಹ, ಕೇಳ್ತಾ ಇರಿ, ರೇಡಿಯೋ ಮಿರ್ಚಿ ೯೮. ೩ ಎಫ್. ಎಂ. - ಇದು ಸಖತ್ ಹಾಟ್ ಮಗಾ!) "ಕೇಳಿ, ಕೇಳಿಸಿರಿ, ವಿನೋದವನ್ನು ಅಂದಿಸಿರಿ" ಎಂದು ಹೇಳಬಹುದು! "ಕೇಳಿ, ಕೇಳಿಸಿರಿ, ಜೀವನವನ್ನು ಆನಂದಿಸಿ" ಎಂದು ಪ್ರಕಟಿಸಬಹುದು. ಅಥವಾ "ಕೇಳಿ, ಕೇಳಿಸಿರಿ, ಸಾರ್ಥಕತೆಯನ್ನು ಸಾಧಿಸಿರಿ" ಎಂದು ಹೇಳಬಹುದು ಅಥವಾ ಇನ್ನೂ ನೂರಾರು ವಿಧವಾಗಿ ಹೇಳಬಹುದು. ಆದರೆ ’ಲೈಫ್’ ಎನ್ನುವ ಆಂಗ್ಲ ಪದವನ್ನೇಕೆ ಇಲ್ಲಿ ಬಳಸಲಾಗುತ್ತಿದೆ? ಏಕೆಂದರೆ ನಮ್ಮದೀಗ, ಕುಲಗೆಟ್ಟ ಅಥವಾ ’ಸಂಕರ’ಗೊಂಡ ಸಂಸ್ಕೃತಿ..... ಅದಕ್ಕೇ! ಇಂಗ್ಲೀಷಿನಲ್ಲಿ ಸಂಭಾಷಿಸುವಾಗ, ಪಂಡಿತರಾಗಲಿ ಪಾಮರರಾಗಲಿ ಭಾರತೀಯ ಭಾಷಾ ಪದಗಳನ್ನು ಮಧ್ಯದಲ್ಲಿ ಬಳಸುವುದಿಲ್ಲ ಅಂದರೆ ಇಂಗ್ಲೀಷನ್ನು ಕುಲಗೆಡಿಸುತ್ತಿಲ್ಲ! ಆದರೆ ತೆಲುಗಿನಲ್ಲಾಗಲಿ, ಕನ್ನಡದಲ್ಲಾಗಲಿ ಮಾತನಾಡಬೇಕಾದರೆ ಅದರಲ್ಲಿ ಇಂಗ್ಲೀಷ್ ಪದಗಳು ನುಸುಳಬೇಕಾದ್ದೆ! ಹೀಗೆ ಇಂಗ್ಲೀಷನ್ನು ಪರಿಶುದ್ಧವಾಗಿರಿಸಿಕೊಂಡು ಬರುತ್ತಿದ್ದೇವೆ ನಾವು! ಆದರೆ ಭಾರತೀಯ ಭಾಷೆಗಳಿಗೆ ಆ ಕಟ್ಟುಪಾಡುಗಳ ಅವಶ್ಯಕತೆಯಿಲ್ಲವೆಂದು ನಾವು ನಿರ್ಧರಿಸಿಕೊಂಡು ಬಿಟ್ಟಿದ್ದೇವೆ! ಇದೆಲ್ಲದಕ್ಕೂ ಒಂದೇ ಕಾರಣ! ಅದೇನೆಂದರೆ, "ಇಂಗ್ಲೀಷ್ ಭಾಷೆ, ಪಾಶ್ಚಾತ್ಯ ಸಂಸ್ಕೃತಿ ಶ್ರೇಷ್ಠವಾದವುಗಳು ನಮ್ಮವೆಲ್ಲಾ ಕೀಳಾದವುಗಳು". ಈ ವಿಧವಾದ ನ್ಯೂನತಾ ಭಾವ ಅಥವಾ ಕೀಳರಿಮೆ ಭಾರತದ ರಾಷ್ಟ್ರೀಯ ಆತ್ಮವನ್ನು ಆವಾಹಿಸಿದೆ. ತನಗಿಂತ ದೊಡ್ಡವರೊಂದಿಗೆ ಮಾತನಾಡುವುದು, ಜೊತೆಯಲ್ಲಿ ಕುಳಿತುಕೊಳ್ಳುವುದು, ಅವರೊಂದಿಗೆ ಸ್ನೇಹವನ್ನೇರ್ಪಡಿಸಿಕೊಳ್ಳುವುದು ತಮಗೂ ದೊಡ್ಡಸ್ತಿಕೆಯನ್ನು ತಂದುಕೊಡುವ ವಿಷಯವೆಂದು ಪ್ರತಿಯೊಬ್ಬರೂ ಭಾವಿಸತ್ತಾರೆ, ಹಾಗಾಗಿ ನಮಗಿಂತ ಹಿರಿದಾದ ಇಂಗ್ಲೀಷಿನ ಕುಡಿಯಿಂದ ನಮ್ಮ ಭಾಷೆಯ ಬೇರನ್ನು ಹೊಂದಿದ ಗಿಡವನ್ನು ಕಸಿ ಮಾಡುವುದರಿಂದ ಶ್ರೇಷ್ಠವಾದುದನ್ನೇನೋ ಸಾಧಿಸಿದ್ದೇವೆಂದು ಹೆಮ್ಮೆಯಿಂದ ಬೀಗುವಷ್ಟು ನಮ್ಮ ಭಾರತೀಯ ಸಮಾಜದ ಮನಸ್ಸು ರೋಗಗ್ರಸ್ತವಾಗಿವೆ. ಮೆಕಾಲೆ ವಿದ್ಯಾವಿಧಾನದ ಫಲಿತವಾಗಿ ಈ ರುಗ್ಮತೆಯ ನಮ್ಮ ಮೆದುಳನ್ನು ಸಂಕ್ರಮಿಸಿದೆ. ೧೮೩೪ರಲ್ಲಿ ಈ ರೋಗವು ಬೀಜಪ್ರಾಯವಾಗಿತ್ತು. ೧೯೪೭ರ ಸಮಯಕ್ಕಾಗಲೇ ಅದು ಬೆಳೆದ ಮರವಾಗಿತ್ತು. ಸ್ವಾತಂತ್ರ್ಯಾನಂತರ ಈ ವಿಷವೃಕ್ಷವು ಬೃಹದಾಕಾರವಾಗಿ ಬೆಳೆದು ಅದರ ಕಹಿ ಫಲಗಳನ್ನು ನಾವೀಗ ಉಣ್ಣುತ್ತಿದ್ದೇವೆ. "ನಮ್ಮ ಭಾಷೆಗಳು ಕೀಳು" ಎನ್ನುವ ದುರ್ಬಲ ಮಾನಸಿಕ ಸ್ಥಿತಿಯಿಂದಾಗಿ ಇಂಗ್ಲೀಷಿನಲ್ಲಿ ಭಾಷಣ ಮಾಡುವಾಗ ತೆಲುಗು, ಕನ್ನಡ, ಹಿಂದಿ, ತಮಿಳು ಅಥವಾ ಇನ್ನಿತರ ಭಾರತೀಯ ಭಾಷೆಗಳ ಪದಗಳನ್ನು ಮಧ್ಯದಲ್ಲಿ ಬಳಸುವುದಿಲ್ಲ. ಕಾಡು ಜಾತಿಯ ಗಿಡಗಳಿಗೆ ಉತ್ತಮ ಜಾತಿಯ ಗಿಡಗಳ ಕುಡಿಗಳನ್ನು ಕಸಿ ಮಾಡುತ್ತಾರೆಯೇ ಹೊರತು ಉತ್ತಮ ಜಾತಿಯ ಗಿಡಗಳಿಗೆ ಕಾಡು ಜಾತಿಯ ಕುಡಿಯನ್ನು ಕಸಿ ಮಾಡುವುದಿಲ್ಲವಷ್ಟೇ! "ನಾವು ನಾವಾಗಿ ಉಳಿಯುತ್ತಿಲ್ಲ" ಎನ್ನುವ ಕಳಕಳಿ ನಮಗಿಲ್ಲ ಅಥವಾ ಪರಕೀಯತೆಗೆ ದಾಸರಾಗಿದ್ದೇವೆ ಎನ್ನುವ ನಾಚಿಕೆಯೂ ನಮಗಿಲ್ಲ. ಹೀಗೆ ಸ್ವಾಭಿಮಾನ ತೊರೆದು ಅಭಿಮಾನ ಶೂನ್ಯರಾಗಿದ್ದೇವೆ. ಇದಕ್ಕೆ ಕಾರಣವಾಗಿರುವುದು ನಾವು ಮುಡಿಗೇರಿಸಿಕೊಂಡಿರುವ ಮ್ಲೇಚ್ಛರ ವಿದ್ಯಾವಿಧಾನ....... ಅದು ಎಲ್ಲವನ್ನೂ ಆಪೋಶನ ತೆಗೆದುಕೊಂಡುಬಿಟ್ಟಿದೆ.
ಆದಿ ಶಂಕರಾಚಾರ್ಯರು ಕ್ರಿಸ್ತಪೂರ್ವ ಐದನೆಯ ಶತಮಾನದಲ್ಲಿ ಜೀವಿಸಿದ್ದರು. ಕುಮಾರಿಲ ಭಟ್ಟ ಮತ್ತು ಆತನ ಶಿಷ್ಯನಾದ ಮಂಡನ ಮಿಶ್ರರು ಶ್ರೀ ಶಂಕರರ ಸಮಕಾಲೀನರಾದ ವೇದ ಪಂಡಿತರು. ಇವರೀರ್ವರೂ ಷಡ್ದರ್ಶನಗಳೆಂದು ಕರೆಯಲ್ಪಡುವ ಭಾರತೀಯ ದರ್ಶನಗಳಾದ - ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವ ಮೀಮಾಂಸ ಮತ್ತು ಉತ್ತರ ಮೀಮಾಂಸಗಳಲ್ಲಿ; ಐದನೆಯದಾದ ಪೂರ್ವ ಮೀಮಾಂಸ ಪದ್ಧತಿಯ ಪ್ರವರ್ತಕರು. ಕುಮಾರಿಲ ಭಟ್ಟನನ್ನು ಭೇಟಿಯಾದ ಆದಿಶಂಕರರು ಆತನ ಇಚ್ಛೆಯಂತೆ ಮಂಡನ ಮಿಶ್ರನೊಂದಿಗೆ ಶಾಸ್ತ್ರಚರ್ಚೆಯನ್ನು ಮಾಡಲು ಮಾಹಿಷ್ಮತಿ ಪಟ್ಟಣಕ್ಕೆ ಬರುತ್ತಾರೆ. ಮಾಹಿಷ್ಮತಿ ಪಟ್ಟಣದ ಹೊರವಲಯದಲ್ಲಿ ಒಂದು ಉದ್ಯಾನವನದಲ್ಲಿ ಪಾತ್ರರ್ವಿಧಿಗಳನ್ನು ಪೂರೈಸಿದ ಆದಿ ಶಂಕರರು ನಗರವನ್ನು ಪ್ರವೇಶಿಸುತ್ತಾರೆ. ದಾರಿಯಲ್ಲಿ ಅವರಿಗೆ ನೀರು ತರಲು ಬಿಂದಿಗೆಗಳನ್ನು ಹೊತ್ತು ಹೊಳೆಯ ಕಡೆ ನಡೆಯುತ್ತಿದ್ದ ಕೆಲವು ಗ್ರಾಮೀಣ ಮಹಿಳೆಯರು ಎದುರಾಗುತ್ತಾರೆ. ಮಂಡನ ಮಿಶ್ರನ ಗೃಹವು ಎಲ್ಲಿದೆ ಎಂದು ಅವರು ಆ ಹೆಂಗಸರನ್ನು ಕೇಳುತ್ತಾರೆ. ಆ ಹಳ್ಳಿಯ ಹೆಂಗಸರು ಮಂಡನ ಮಿಶ್ರನ ಮನೆಯ ಗುರುತನ್ನು ಹೀಗೆ ಹೇಳುತ್ತಾರೆ. "ಆ ಮನೆಯ ಪ್ರಧಾನ ದ್ವಾರದ ಬಳಿ ಪಕ್ಷಿಯ ಗೂಡುಗಳಿವೆ. ಆ ಗೂಡುಗಳಲ್ಲಿ ಗಿಳಿಗಳು ಇವೆ. ವೇದಗಳು ಸ್ವಯಂ ಪ್ರಮಾಣವೋ ಅಥವಾ ವೇದಗಳು ಇತರ ಪ್ರಮಾಣಗಳನ್ನು ಆಧರಿಸಿವೆಯೋ? ಎಂದು ಆ ಗಿಳಿಗಳು ಉಲಿಯುತ್ತಿರುತ್ತವೆ. ಆ ಮನೆಯನ್ನು ಗುರುತಿಸಿ, ಅದೇ ಮಂಡನ ಮಿಶ್ರನ ಮನೆ". ಹೀಗೆ ಮಂಡನ ಮಿಶ್ರನ ಮನೆಯ ಗುರುತುಗಳನ್ನು ಗ್ರಾಮೀಣ ಮಹಿಳೆಯರು ಆದಿ ಶಂಕರರಿಗೆ ಹೇಳಿದರು ಎನ್ನುವ ವಿಷಯವನ್ನು "ಶಂಕರ ವಿಜಯಂ" ಎನ್ನುವ ತಮ್ಮ ಗ್ರಂಥದಲ್ಲಿ ಮಾಧವ ವಿದ್ಯಾರಣ್ಯರು (ವಿಜಯ ವಿದ್ಯಾರಣ್ಯರು) ಉಲ್ಲೇಖಿಸಿದ್ದಾರೆ.
"ಸ್ವತಃ ಪ್ರಮಾಣಂ ಪರತಃ ಪ್ರಮಾಣಂ
ಕೀರಾಂಗನಾ ಯತ್ರ ಗಿರಂ ಗಿರಂತಿ,
ದ್ವಾರಸ್ಥ ನೀಡಾಂತರ ಸನ್ನಿರುದ್ಧಾ
ಜಾನೀಹಿ ತನ್ಮಂಡನ ಪಂಡಿತೌ ಕಃ"
ಈ ಗಿಳಿಗಳು ಉಲಿಯುತ್ತಿದ್ದ ಇನ್ನೂ ಅನೇಕ ವೇದಶಾಸ್ತ್ರಗಳ ವಿಷಯಗಳನ್ನು ಆ ಮಹಿಳೆಯರು ಶಂಕರರಿಗೆ ಹೇಳುತ್ತಾರೆ - "ಆ ಗೂಡಿನ ಹಕ್ಕಿ ಆ ಗೂಡಿನ ಮಾತನ್ನೇ ಉಲಿಯುತ್ತದೆ". ಮಂಡನ ಮಿಶ್ರನ ಗೃಹಪ್ರಾಂಗಣವು ಹೀಗೆ ವೇದಸ್ವರಗಳಿಂದ ಶಾಸ್ತ್ರಚರ್ಚೆಗಳಿಂದ ಮಾರ್ದನಿಸುತ್ತಿತ್ತು. ಆದ್ದರಿಂದ ಅವನ ಮನೆಯ ಗೂಡಿನ ಗಿಳಿಗಳು ಅವನ ಮನೆಯ ನುಡಿಗಳನ್ನು ಉಲಿಯುತ್ತಿದ್ದವು. ಆ ನುಡಿಗಳನ್ನು ಮೆಕಾಲೆ ವಿದ್ಯಾವಿಧಾನವು ಕಬಳಿಸಿ ಬಿಟ್ಟಿದೆ. ಭರತ ಮಾತೆಯ ಮಂದಿರ ಪ್ರಾಂಗಣದ ಗಿಳಿಗಳು ತಮ್ಮ ಮನೆಯ ನುಡಿಗಳನ್ನು ಮರೆತು ಹೋಗಿವೆ. ಇಂದು ಬಹುತೇಕ ಭಾರತೀಯರು, ಬ್ರಿಟಿಷರ ಮನೆಯ ಮಾತನ್ನು ಉಲಿಯುತ್ತಿರುವ ಗಿಳಿ, ಗೊರವಂಕಗಳಾಗಿವೆ! ಆದಿಶಂಕರರ ಕಾಲದ ಆ ಗ್ರಾಮೀಣ ಸ್ತ್ರೀಯರು ವಿದ್ಯಾವಂತರು ಆದರೆ ಅಕ್ಷರವಂತರಲ್ಲವೇನೋ! ಆದರೆ ಇಂದಿನ ಭಾರತೀಯ ವಿದ್ಯಾವಂತರು ಅಂದಿನ ವಿದ್ಯೆಗಳಿಂದ ದೂರವಾಗಿ ಹೋಗುತ್ತಿದ್ದಾರೆ.
ಬ್ರಿಟೀಷರು ನಮ್ಮ ದೇಶದೊಳಕ್ಕೆ ನುಸುಳುವವರೆಗೂ ದೇಶದಲ್ಲಿ ರೂಡಿಗತವಾಗಿದ್ದ ಆಚಾರ, ವಿಚಾರಗಳು, ಶಾಸ್ತ್ರ ಸಂಪ್ರದಾಯಗಳು, ನಮ್ಮ ನಂಬಿಕೆ, ವಿಶ್ವಾಸಗಳು, ನಮ್ಮ ಅನುಭವಗಳು, ಭಾವನೆಗಳು, ಮಾನಸಿಕ ಪರಿಸ್ಥಿತಿ, ವಿವೇಕ, ವಿಚಕ್ಷಣೆ, ರೀತಿ ನೀತಿಗಳು ಹೀಗೆ ಎಲ್ಲವನ್ನೂ ಮೆಕಾಲೆ ವಿದ್ಯಾವಿಧಾನ ನಿಧಾನವಾಗಿ ಎಲ್ಲವನ್ನೂ ಬದಲಾಯಿಸಿ ಬಿಟ್ಟಿತು. ನಮ್ಮ ನೈತಿಕ ದೃಷ್ಟಿಕೋನವನ್ನೂ ತಲೆಕೆಳಗಾಗಿಸಿತು. ಈ ನೈತಿಕ ಅಧಃಪತನವೂ ದಿನೇ ದಿನೇ ವೃದ್ಧಿಯಾಗುತ್ತಿದೆ......!
ಸುಮಾರು ನೂರು ವರ್ಷಗಳ ಹಿಂದೆ ಮೈಸೂರು ಸಂಸ್ಥಾನವನ್ನು ಸಂದರ್ಶಿಸಲು ಒಬ್ಬ ಉನ್ನತ ಬ್ರಿಟೀಷ್ ಅಧಿಕಾರಿ ಬಂದಿದ್ದನಂತೆ. ಮೈಸೂರು ಮಹಾರಾಜರು ಅತ್ಯುತ್ಸಾಹದಿಂದ ಅವನ ಬೆನ್ನುಹತ್ತಿ ಬೆಂಬಿಡದೆ ಅವನಿಗೆ ತಮ್ಮ ಬೃಂದಾವನವನ್ನೂ ತೋರಿಸಿದರಂತೆ. ಆ ಬೃಂದಾವನದಲ್ಲಿ ಸಾವಿರಾರು ಆಕಳುಗಳು, ಎತ್ತುಗಳು, ಹೋರಿಗಳು, ಕರುಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದವಂತೆ. ಸುಮಾರು ಒಂದೂವರೆ ವರ್ಷ ವಯಸ್ಸಾಗಿದ್ದ ಒಂದು ಎಳೆಗರುವೊಂದನ್ನು ಮಹಾರಾಜರು ಬಹಳ ಮುದ್ದಿನಿಂದ ಸಾಕಿದ್ದರಂತೆ. ಮಹಾರಾಜರು, ಆ ಕರುವನ್ನು ಆ ಪರಂಗಿ ದೊರೆಗೆ ತೋರಿಸುತ್ತಾ ಅದನ್ನು ಬಹುವಾಗಿ ಕೊಂಡಾಡಿದರಂತೆ. ಸ್ವಲ್ಪ ಹೊತ್ತಿನ ನಂತರ ಆ ಪರಂಗಿ ದೊರೆ ಆ ಹಸುಗರುವಿನ ಮಾಂಸದಿಂದ ಅಡಿಗೆ ಮಾಡಿಸಿ ತನಗೆ ಔತಣವೇರ್ಪಡಿಸಬೇಕೆಂದು ಆ ಗೋಶಾಲೆಯ ನಿರ್ವಾಹಕನಿಗೆ ತಿಳಿಯಪಡಿಸದನಂತೆ. ಅದು ಅವನ ಸ್ವಭಾವ. ಈ ಸುದ್ದಿಯನ್ನು ಕೇಳಿದ ಮೈಸೂರು ನಗರಕ್ಕೆ ನಗರವೇ ಉರಿದು ಬಿತ್ತಂತೆ, ಇದು ನಮ್ಮವರ ಸ್ವಭಾವ! ಅಂದಿನಿಂದ ಮೈಸೂರರಸರು ಮತ್ತೆಂದಿಗೂ ತಮ್ಮ ಗೋಶಾಲೆಯನ್ನು ಪರಂಗಿಗಳಿಗೆ ತೋರಿಸುವ ಗೋಜಿಗೆ ಹೋಗಲಿಲ್ಲವಂತೆ. ಹೀಗೊಂದು ಕಥೆ ಅಂದು ಪ್ರಚಲಿತವಿತ್ತು.
ಗಬ್ಬಾದ ಹಸುವಿನುದರದ
ಬಿಸಿ ಬಿಸಿ ಬಾಡೂಟವು
ಅವನಿಗೆ ಬಹು ಪ್ರಿಯವಂತೆ, ನಮ್ಮ
ಗೋವುಗಳನವನು ಕೊಲುವನಂತೆ!
ನಮ್ಮ ಗಬ್ಬಾದ ಹಸುಗಳ ಮಂದೆಯ
ಪುಣ್ಯಕೋಟಿಯು ಮನೆಗೆ ಬಾರದು ಇನ್ನು...
ಇದೇ ನಮ್ಮ ಪರಂಗಿ ದೊರೆತನವು ದೇವಾ
ಇದೇ ನಮ್ಮ ಪರಂಗಿ ಸಿರಿತನವು!
ಈ ವಿಧವಾಗಿ ಬೆಳ್ಳಗಿದ್ದ ಬ್ರಿಟಿಷ್ ಅಧಿಕಾರಶಾಹಿಯ ಕರ್ರಗಿನ ಸ್ವಭಾವದ ವಿರುದ್ಧ ಜರುಗಿದ ಸ್ವಾತಂತ್ರ್ಯೋದ್ಯಮದಲ್ಲಿ ಗುಡುಗಿದವರು ತೆಲುಗು ಕವಿಯಾದ ಗರಿಮೆಳ್ಳ ಸತ್ಯನಾರಾಯಣ. ಆದರೆ ಬ್ರಿಟಿಷರ ಈ ಕಪಟ ಸ್ವಭಾವವು ಇಂದು ನಮ್ಮನ್ನಾವಾಹಿಸಿದೆ. ನಾವು ಗೋಮಾಂಸವನ್ನು ಭಕ್ಷಿಸಿದ್ದೇವೆಂದು ಮಣಿಶಂಕರ ಅಯ್ಯರ್ ಅವರಂತಹವರಿಂದ ರಾಜಕೀಯ ನಾಯಕರಿಂದ ಹಿಡಿದು ಜಸ್ಟೀಸ್ ಮಾರ್ಕಂಡೇಯ ಕಾಟ್ಜುವಿನಂತಹ ವಾಮಪಂಥೀಯ ಬುದ್ಧಿಜೀವಿಗಳೆಲ್ಲಾ ಇಂದು ಬಹಿರಂಗವಾಗಿ ಯಾವ ಎಗ್ಗೂ ಸಿಗ್ಗೂ ಇಲ್ಲದೆ ಹೇಳಿಕೊಳ್ಳುತ್ತಿದ್ದಾರೆ. ಅದು ಆಹಾರ ಭಕ್ಷಣೆಯ ಹಕ್ಕಂತೆ ಅದು ಅವರ ಆಹಾರದ ಪದ್ಧತಿಯ ಆಯ್ಕೆಯ ಸ್ವಾತಂತ್ರ್ಯವಂತೆ. ಇವರೆಲ್ಲಾ, ಮೆಕಾಲೆ ವಿದ್ಯೆಯ ಮತ್ತಿನ ಅಮಲೇರಿದ ಸಾಕ್ಷರ ರಾಕ್ಷಸರು. ಇಂತಹ ಮಾನಸಿಕ ಗುಲಾಮಿತನದ ವ್ಯಸನದ ಮತ್ತಿನಲ್ಲಿ ಮುಳುಗಿ ತೇಲುತ್ತಿರುವವರು ಒಂದು ವೇಳೆ ಇಲ್ಲದಿದ್ದರೆ ಒಂದು ಗೋವನ್ನು ರಕ್ಷಿಸುವುದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕೆ ಒಡ್ಡುತ್ತಿದ್ದ ಶಿವಾಜಿ ಮಹಾರಾಜರಂತಹವರು ಇಂದು ನಮ್ಮ ರಾಜಕೀಯದ ಮುಂಚೂಣಿಯಲ್ಲಿರುತ್ತಿದ್ದರು. (ಇದೀಗ ಶ್ರೀಯುತ ನರೇಂದ್ರ ಮೋದಿಯವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎನ್ನುವುದೊಂದು ಸಮಾಧಾನಕರ ಸಂಗತಿ). ದಿಲೀಪ ಮತ್ತು ಆಕಳಿನ ಕಥೆ, ಜಮದಗ್ನಿ ಮತ್ತು ವಸಿಷ್ಠ ಮಹರ್ಷಿಗಳ ಗೋವುಗಳ ಕಥೆ, ಪುಣ್ಯಕೋಟಿಯೆಂಬ ಸತ್ಯಸಂದ ಹಸುವಿನ ಕಥೆ, ಇವೆಲ್ಲಾ ನಮ್ಮ ಸ್ಮೃತಿಪಟಲದಿಂದ ಜಾರಿಹೋಗುತ್ತಿವೆ. ಇನ್ನೊಂದೆಡೆ ಗೋಮಾಂಸದ ಬಿರಿಯಾನಿಗಳು ವಿಕ್ರಯವಾಗುತ್ತಿವೆ. ನಾವು ಕ್ಷಣಹೊತ್ತು ಆ ವಿಷಯಗಳ ಕುರಿತು ಆಲೋಚಿಸುವುದಾದರೂ ಯಾವಾಗ? ಅವರವರ ಉದ್ಯೋಗದ ತರಾತುರಿಯಲ್ಲಿ ಅವರವರು ಮಗ್ನರಾಗಿದ್ದಾರೆ! ಉದರ ಪೋಷಣೆಯ ಈ ಉದ್ಯೋಗದ ಅವಲಂಬನೆಗೆ ಟಿ.ಬಿ. ಮೆಕಾಲೆ ಮುನ್ನುಡಿ ಬರೆದು ಹೋಗಿದ್ದಾನೆ.... ಇದೀಗ ನಮ್ಮ ದೃಷ್ಟಿಕೋನವೇ ಬದಲಾಗಿದೆ, ಜೀವನದ ಗುರಿಯೂ ಬದಲಾಗಿ ಹೋಗಿದೆ!
ಸುಪ್ರಸಿದ್ಧ ಲೇಖಕರಾದ ಶ್ರೀಯುತ ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ (ಆರ್. ಕೆ. ನಾರಾಯಣ್) ಕ್ರಿ.ಶ. ೧೯೨೦ರ ದಶಕದಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೊಫೆಸರ್ ಟಾಬಿ ಎನ್ನುವವರು ಅವರಿಗೆ ಪಾಠ ಮಾಡುತ್ತಿದ್ದರಂತೆ. ಟಾಬಿಯವರ ಆಂಗ್ಲ ಉಚ್ಚಾರಣೆ ವಿದ್ಯಾರ್ಥಿಗಳಿಗೆ ಎಳ್ಳಷ್ಟೂ ಅರ್ಥವಾಗುತ್ತಿರಲಿಲ್ಲವಂತೆ. ಭಾರತೀಯವಾಗಿದ್ದ ಒಂದೇ ಒಂದು ಹೆಸರನ್ನೂ ಸಹ ಆ ಮಹಾಶಯನಿಗೆ ಉಚ್ಛರಿಸಲಾಗುತ್ತಿರಲಿಲ್ಲವಂತೆ. ಆದ್ದರಿಂದ ಆತ ಹಾಜರಿ ಪುಸ್ತಕವನ್ನೇ ತೆರೆಯುತ್ತಿರಲಿಲ್ಲವಂತೆ. ಟಾಬಿಯಂತಹ ಮಹಾಶಯರ ಕಷ್ಟಗಳನ್ನು ನಿವಾರಿಸುವುದಕ್ಕಾಗಿ ಕ್ರಮೇಣವಾಗಿ ಭಾರತೀಯರು ಬಾಯನ್ನು ಬಿಗಿ ಹಿಡಿದು ಮಾತನಾಡುವುದನ್ನು ರೂಢಿ ಮಾಡಿಕೊಂಡರು! ಬ್ರಿಟೀಷರು ಬಾಯಿ ಬಿಗಿದುಕೊಂಡು ಮಾತನಾಡುತ್ತಾರೆ - ಚಳಿಯ ಕಾರಣದಿಂದ. ಬಾಯಿ ತಿರುಗದೇ ಇದ್ದದ್ದರಿಂದ ಅವರು ಭಾರತೀಯ ಭಾಷಾ ಶಬ್ದಗಳನ್ನು ಅಂಕು ಡೊಂಕಾಗಿ ಉಚ್ಚರಿಸಿದರು.
"ಹಾಗೆ ಉಲಿಯುವುದೇ ಶ್ರೇಷ್ಠ" ಎಂದು ಭಾವಿಸಿಕೊಂಡ ನಾವುಗಳೂ ಹಾಗೇ ಮಾತನಾಡುವುದನ್ನು ರೂಢಿಸಿಕೊಂಡೆವು. ಮೇಧಾವಿಗಳನೇಕರು "ಬ್ಯಾಂಗಲೂರ್" ಎಂದೇ ಉಚ್ಛರಿಸುತ್ತಾರೆ ಒಂದು ವೇಳೆ ಬೆಂಗಳೂರೆಂದು ಸ್ಥಳೀಯರು ಮಾತನಾಡಿದರೆ ಅವರು ಹಳ್ಳಿಗಮಾರರೆಂದೇ ಲೆಕ್ಕ. (ಈ ವಿಷಯವನ್ನು ಕಾಶ್ಮೀರವನ್ನು ಕ್ಯಾಷ್ ಮೀರ್ ಎಂದು ಉಚ್ಚರಿಸುವ ಆಧುನಿಕ ತೆಲುಗು ಮೇದಾವಿಗಳ ಕುರಿತು ಮೂಲ ಲೇಖನದಲ್ಲಿ ಹೇಳಲಾಗಿದೆ). ದೂರದರ್ಶನ ವಾಹಿನಿಗಳಲ್ಲಿ ’ಯಾಂಕರ್’ಗಳ ವಕ್ರೋಚ್ಚಾರಣೆಯ ವಿಷಯವನ್ನು ಕೈಬಿಡೋಣ. ಏಕೆಂದರೆ ಅವರು ಪಾಪ ಭಾಷಾಜ್ಞಾನವಿಲ್ಲದ ಅಮಾಯಕರು....! ಆದರೆ ಪ್ರಸಿದ್ಧ ವ್ಯಕ್ತಿಗಳಿಗೆ, ಪ್ರಸಿದ್ಧ ನಟ ಹಾಗು ಕಲಾವಿದರುಗಳಿಗೂ ಸಹ ಕನ್ನಡ ಪದಗಳಿಗಾಗಿ ತಡಕಾಡುವಂತೆ ನಟಿಸುವುದು, ಸಂಕೋಚಿಸುತ್ತಾ ಕನ್ನಡ ಪದಗಳನ್ನು ಉಚ್ಛರಿಸುವುದು, ಸಂಕೋಚಿಸುತ್ತಾ ಕನ್ನಡವನ್ನು ಮಾತನಾಡುವುದು ಪರಿಪಾಟವಾಗಿ ಹೋಗಿದೆ. ತಮಗೆ ಕನ್ನಡಕ್ಕಿಂತ ಇಂಗ್ಲೀಷೇ ಚೆನ್ನಾಗಿ ಮಾತನಾಡಲು ಬರುತ್ತದೆಂದೂ, ಅದೇ ದೊಡ್ಡಸ್ತಿಕೆಯೆಂದೂ ಮತ್ತು ತಮ್ಮ ಕಾರ್ಯಕ್ರಮವನ್ನು ವೀಕ್ಷಿಸುವ ಜನಸಾಮಾನ್ಯರೂ ಸಹ ಇವರ ಇಂಗ್ಲೀಷ್ ಪ್ರೌಢಿಮೆಗೆ ತಲೆದೂಗಿ ಇವರ ಅಸಾಮಾನ್ಯತೆಯನ್ನು ಕೊಂಡಾಡಬೇಕೆನ್ನುವುದು ಇವರ ಹಂಬಲ, ತಾಪತ್ರಯ. ಇದು ಮೆಕಾಲೆ ಪ್ರಭಾವವೆನ್ನವುದರಲ್ಲಿ ಎರಡು ಮಾತಿಲ್ಲ......
ಅಂದು ಪ್ರೊಫೆಸರ್ ಟಾಬಿಯವರು ತಮ್ಮ ತರಗತಿಯಲ್ಲಿ ಶೇಖಡಾ ಎಂಬತ್ತರಷ್ಟು ಜನ ಹುಡುಗಿಯರಿದ್ದರೆಂದು ಭಾವಿಸುತ್ತಿದ್ದರಂತೆ. ಈ ವಿಷಯವನ್ನು ಆರ್. ಕೆ. ನಾರಾಯಣ್ ಅವರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ಅದು ಗಂಡುಮಕ್ಕಳ ತರಗತಿಯಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಅಂದು ತಲೆಯಲ್ಲಿ ಜುಟ್ಟನ್ನು (ಚಂಡಿಕೆ ಅಥವಾ ಶಿಖೆ) ಬಿಟ್ಟುಕೊಂಡು, ಹಣೆಯಲ್ಲಿ ಕುಂಕುಮದ ಬೊಟ್ಟನ್ನಿಟ್ಟುಕೊಂಡು, ಪಂಚೆಗಳನ್ನು ಕಟ್ಟಿಕೊಂಡು ಕಾಲೇಜಿಗೆ ಹೋಗುತ್ತಿದ್ದರಂತೆ. ಈ ವಿಧವಾದ ವೇಷಭೂಷಣಗಳನ್ನು ಕೇವಲ ಸ್ತ್ರೀಯರು ಮಾತ್ರವೇ ಧರಿಸುತ್ತಾರೆಂದು ಟಾಬಿಯವರ ಅಭಿಪ್ರಾಯ. ಹುಡುಗರ ತಲೆಯ ಮೇಲೆ ರಾರಾಜಿಸುತ್ತಿದ್ದ ಜುಟ್ಟುಗಳನ್ನು ನೋಡಿ ಅದನ್ನವರು ಜಡೆಗಳೆಂದು ಭಾವಿಸುತ್ತಿದ್ದರಂತೆ! ಪಾಪ, ಟಾಬಿಯಂತಹ ಪರಂಗಿಗಳಿಗೆ ವ್ಯತ್ಯಾಸವನ್ನು ತಿಳಿಸಬೇಕೆಂದುಕೊಂಡು ಕ್ರಮೇಣ ವಿದ್ಯಾವಂತರಾದ ನಮ್ಮ ಭಾರತೀಯ ಯುವಕರು ಜುಟ್ಟನ್ನು ಕತ್ತರಿಸಿಕೊಂಡರು. ಕುಂಕುಮದ ಬೊಟ್ಟನ್ನು ಅಳಿಸಿಕೊಂಡರು ಮತ್ತು ಪಂಚೆಯ ಜಾಗವನ್ನು ಪ್ಯಾಂಟು ಆಕ್ರಮಿಸಿತು. ಇಂದು ಸಮಾನತೆಯ ದ್ಯೋತಕವಾಗಿ ಮಹಿಳೆಯರೂ ಸಹ ಇವನ್ನೆಲ್ಲಾ ಇಂದು ಅನುಸರಿಸುತ್ತಿದ್ದಾರೆ. ವಿದ್ಯಾರ್ಥಿನಿಯರು, ಕಾಲೇಜು ಯುವತಿಯರು ಹಾಗು ಮಾಡರ್ನ್ ಮಹಿಳೆಯರು ಇಂದು ಕಂಡೂ ಕಾಣದಷ್ಟು ಸೂಜಿಮೊನೆಯಷ್ಟು ಚಿಕ್ಕದಾದ ಚುಕ್ಕಿಗಳನ್ನು ತಮ್ಮ ಹುಬ್ಬುಗಳ ನಡುವೆ ಇಟ್ಟುಕೊಳ್ಳುತ್ತಿದ್ದಾರೆ. ಹೀಗೆ, ನಮ್ಮದಾದ ಪ್ರತಿಯೊಂದು ವಿಷಯವೂ ಸಹ ಇದ್ದೂ ಇಲ್ಲದಂತಾಗಿ ಹೋಗುತ್ತಿವೆ.
ಕ್ಷತಧರಿತ್ರಿಯ ಚರಿತೆಯಲಿ
ಶಿಥಿಲ ಶಿಶಿರ ಸಮಯವಿದು
ಸರ್ವ ಸನಾತನ ಶೋಭಿತ
ಮಧುಮಾಸವು ಅದೆಂದಿಗೋ?
ಗ್ರಹಣವೇ ಶಾಶ್ವತವೆಂದು
ಕತ್ತೆಲೆಯೂ ಗರ್ಜಿಸುತಿಹುದು,
’ ಶ್ವೇತ’ಕೇತುಗ್ರಸ್ತ ರವಿಯ
ಮುಕ್ತಗೊಳಿಸುವವರಾರೋ?
*****
ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಏಳನೆಯ ಕಂತು, ’ಎಂಗಿಲಿತನಂತೋ ಮುರಿಸಿ, ನಂಗಿನಂಗಿಗಾ ಮೆರೆಸಿ - ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು!’
ಈ ಸರಣಿಯ ಆರನೆಯ ಲೇಖನಕ್ಕೆ "ವಾಸ್ತವವನ್ನು ವಿಕೃತಗೊಳಿಸುತ್ತಿರುವ ವಕ್ರೀಕರಣಗಳು.... ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%AE...
Comments
ಉ: ಭಾಗ - ೭ ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು!...
ಎಂದಿನಂತೆ ಸಂಪದದ ವಾಚಕ ಮಿತ್ರರು ಸರಣಿಯ ಈ ಲೇಖನವನ್ನೂ ಸಹ ಅತ್ಯಂತ ಆದರದಿಂದ ಸ್ವೀಕರಿಸಿದ್ದೀರಿ. ಅದಕ್ಕೆ ನಿಮೆಗೆಲ್ಲಾ ನಾನು ಆಭಾರಿಯಾಗಿದ್ದೇನೆ. ಈ ಸರಣಿಯ ಮುಂದಿನ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AE-%E0%B2%AE...