ಭಾಗ - ೮ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:ಕಾಲ್ಡ್‌ವೆಲ್ ಹಾಕಿದ ಸುಳ್ಳಗಳ ಅಡಿಪಾಯ, ಆಗಿದೆ ಸಮೈಕ್ಯತೆಗೆ ಕಂಟಕಪ್ರಾಯ!....

ಭಾಗ - ೮ ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ:ಕಾಲ್ಡ್‌ವೆಲ್ ಹಾಕಿದ ಸುಳ್ಳಗಳ ಅಡಿಪಾಯ, ಆಗಿದೆ ಸಮೈಕ್ಯತೆಗೆ ಕಂಟಕಪ್ರಾಯ!....

ಚಿತ್ರ

ನಳ ದಮಯಂತಿ ಸ್ವಯಂವರದ ಚಿತ್ರಕೃಪೆ: ಗೂಗಲ್ 

        ಸಂಸ್ಕೃತ ಭಾಷೆಯನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎಂದು ಬ್ರಿಟಿಷರು ಕರೆದಿದ್ದಾರೆ. ವಿಲಿಯಂ ಸ್ಮಿತ್‌ನಿಂದ ಆರಂಭಗೊಂಡ ಮೆಕಾಲೆ ವಿದ್ಯಾವಿಧಾನವು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎನ್ನುವ ವಿಷಯವನ್ನು ಪ್ರಚಾರಕ್ಕೆ ತಂದಿತು. ಮೇಲ್ನೋಟಕ್ಕೆ ಇದು ಸಂಸ್ಕೃತವನ್ನು ಗೌರವಿಸಿದಂತೆ ತೋರುತ್ತದೆ. ಆದರೆ ಸಂಸ್ಕೃತವನ್ನು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಎನ್ನುವುದರ ಹಿಂದಿದ್ದ ಉದ್ದೇಶ ಅದು ಕೇವಲ ’ಸಾಹಿತ್ಯಕ ಭಾಷೆ” ಎನ್ನುವುದಾಗಿತ್ತು. ರಾಜರ, ವಿದ್ವಾಂಸರ ’ಆಸ್ಥಾನ ಭಾಷೆ’ ಎಂದೂ ಕೆಲವರು ಕರೆದರು. ಶಾಸ್ತ್ರೀಯ ಬಾಷೆ ಎಂದು ಇನ್ನೂ ಹಲವರು ಕರೆದರು. ಆದರೆ ಕಾಲಕ್ರಮೇಣ ಏನಾಯಿತು? ಕ್ರಿ.ಶ. ೧೮೩೪-೩೫ರ ನಂತರ ಏನಾಯಿತು? ಸಂಸ್ಕೃತ ಭಾಷೆಯು ’ಕ್ಲಾಸಿಕಲ್ ಲ್ಯಾಂಗ್ವೇಜ್’ ಅಂದರೆ ಅದು ಕೇವಲ ಸಾಹಿತ್ಯಕ್ಕೆ ಮಾತ್ರವೇ ಪರಿಮಿತವಾದ ಭಾಷೆ ಮತ್ತದು ವ್ಯಾವಹಾರಿಕ ಭಾಷೆ (ಕಮ್ಯೂನಿಕೇಷನ್ ಲ್ಯಾಂಗ್ವೇಜ್) ಅಲ್ಲವೇ ಅಲ್ಲ ಎನ್ನುವ ಅಭಿಪ್ರಾಯವನ್ನು ವಿದ್ಯಾವಂತರಲ್ಲಿ ಉಂಟು ಮಾಡುವಲ್ಲಿ ಬ್ರಿಟಿಷರು ಸಫಲರಾದರು! ನಮ್ಮ ರಾಷ್ಟ್ರೀಯತೆಯ ಮಹಾನ್ ವೃಕ್ಷಕ್ಕೆ ಬಿದ್ದ ಅತೀ ದೊಡ್ಡ ಕೊಡಲಿ ಪೆಟ್ಟು ಈ ಅಪದ್ಧವೆ! ಸಂಸ್ಕೃತ ಮೊದಲು ಲ್ಯಾಂಗ್ವೇಜ್ ಆಫ್ ಕಮ್ಯೂನಿಕೇಷನ್ - ಪ್ರಜೆಗಳ ವ್ಯವಹಾರ ಭಾಷೆಯಾಗಿತ್ತು, ಆಮೇಲೆಯೇ ಅದು ’ಕ್ಲಾಸಿಕಲ್’ ಭಾಷೆಯಾಯಿತು. ಪ್ರತಿ ಭಾಷೆಯಲ್ಲೂ ಸಾಹಿತ್ಯ ಹಾಗೂ ಸಾಹಿತ್ಯದ ಪ್ರಕಾರಗಳು ಬೆಳೆದಂತೆ ಕಾಲಾನುಕಾಲಕ್ಕೆ ಅದು ಕ್ಲಾಸಿಕಲ್ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಭಾಷೆಯು ಸ್ವರೂಪವು, ಕೇವಲ ಈ ಸಾಹಿತ್ಯಕ, ಶಾಸ್ತ್ರೀಯತೆಯ ರೂಪಗಳಿಗಷ್ಟೇ ಪರಿಮಿತವಾಗದೆ ಅದು ವ್ಯವಹಾರ ರೂಪದಲ್ಲಿಯೂ ಮುಂದುವರೆಯುತ್ತದೆ. ಹೀಗೆ ಪ್ರತಿ ಭಾಷೆಯಲ್ಲಿಯೂ ಎರಡು ವಿಧವಾದ ರೂಪಗಳು ಇದ್ದೇ ಇರುತ್ತವೆ! ಲಕ್ಷಾಂತರ ವರ್ಷಗಳ ಹಿಂದೆಯೇ ಸಂಸ್ಕೃತ ಭಾಷೆ ಈ ಉಭಯ ರೂಪಗಳಲ್ಲಿಯೂ ಚಲಾವಣೆಯಲ್ಲಿತ್ತು. ಅಂತಹ ಭಾಷೆಯನ್ನು ಸಾಮಾನ್ಯ ಪ್ರಜೆಗಳು ಹಿಂದೆಂದೂ ಮಾತನಾಡುತ್ತಲೇ ಇರಲಿಲ್ಲವೆಂದೂ ನಡೆಯುತ್ತಿರುವ ಪ್ರಚಾರಕ್ಕೆ ಮೆಕಾಲೆ ವಿದ್ಯಾವಿಧಾನವೇ ಕಾರಣ! ಪರಂಗಿಗಳು ಸೃಷ್ಟಿಸಿದ ಸುಳ್ಳುಗಳ ಸರಮಾಲೆಯ ಪ್ರಭಾವವು ಕಾರಣ! ಪ್ರಪಂಚದಲ್ಲಿ ಪ್ರತಿಭಾಷೆಯೂ ಸಹ ಪ್ರಜೆಗಳು ಮಾತನಾಡುವುದರಿಂದ ವಿಕಾಸಹೊಂದುತ್ತವೆ ಎಂದು ಭಾಷಾ ಶಾಸ್ತ್ರಜ್ಞರು, ಭಾಷಾ ಚಾರಿತ್ರಿಕ ವಿಜ್ಞಾನಿಗಳು ಒಂದು ಕಡೆ ಹೇಳುತ್ತಿದ್ದಾರೆ. ಹಾಗೆಂದ ಮೇಲೆ ಆ ಸಿದ್ಧಾಂತ, ಆ ಸತ್ಯಗಳು ಸಂಸ್ಕೃತ ಭಾಷೆಗೆ ವರ್ತಿಸುವುದಿಲ್ಲವೇ? ಅನ್ವಯಿಸುವುದಿಲ್ಲವೆಂದು ಹೇಳುವುದು ಅವೈಜ್ಞಾನಿಕ, ಅಪದ್ಧವಾದುದು! ಮೆಕಾಲೆ ವಿದ್ಯಾವಿಧಾನವು ಅವೈಜ್ಞಾನಿಕತೆಯನ್ನು ವೈಜ್ಞಾನಿಕತೆಯನ್ನಾಗಿ ಬದಲಾಯಿಸಿತು, ಅಪದ್ಧಗಳೇ ನಿಜವೆಂದು ನಿರ್ಧರಿಸುವಂತೆ ಮಾಡಿತು.....

                                                      *****

          ಆಕೆ ಅದ್ಭುತ ಸೌಂದರ್ಯದ ಗಣಿ. ಆಕೆಯ ಬೌದ್ಧಿಕ ಸೌಂದರ್ಯದ ಪುಷ್ಪವೂ ವಿಕಸಿಸಿ ಸುಗಂಧವನ್ನು ಪಸರಿಸುತ್ತಿತ್ತು. ಆಕೆಯೊಬ್ಬ ರಾಜಕುಮಾರಿ, ತನ್ನ ವಿದ್ಯೆಗ ತಕ್ಕನಾದ ರಾಜಕುಮಾರನನ್ನು ವರಿಸಬೇಕೆನ್ನುವುದು ಆಕೆಯ ಮನೋವಾಂಛೆ.
          ಇನ್ನೊಂದು ದೇಶದ ರಾಜಕುವರನೊಬ್ಬ ಅದು ಹೇಗೋ ಆಕೆಯ ಮೋಹಕ್ಕೆ ಸಿಲುಕಿದ. ಅವರಿಬ್ಬರ ಮನಸುಗಳೂ ಒಂದಾದವು, ಅನತಿ ಕಾಲದಲ್ಲಿಯೇ ಅವರಿಬ್ಬರೂ ಸತಿಪತಿಗಳಾದರು. ಒಂದು ದಿನ ರಾಜೋದ್ಯಾನದ ಕೊಳದಲ್ಲಿ ಅವರೀರ್ವರೂ ಜಲಕ್ರೀಡೆಯಾಡತೊಡಗಿದರು. ಆಗ ಯುವರಾಜನು, ನೀರಿನಲ್ಲಿ ಆಟವಾಡುತ್ತಾ ಒಂದೇ ಸಮನೆ ನೀರನ್ನು ಆ ಯುವರಾಣಿಯ ಮುಖಕ್ಕೆ ಎರೆಚಲಾರಂಭಿಸಿದನು. ಸ್ವಲ್ಪ ಹೊತ್ತು ಸುಮ್ಮನಿದ್ದ ಆಕೆ, "ಮೋದಕೈಃ ತಾಡಯ, ಮೋದಕೈಃ ತಾಡಯ" ಎಂದು ಕಿರುಚಿಕೊಂಡಳು. ಕೂಡಲೇ ಆ ಯುವರಾಜನು, ಕೊಳದಿಂದ ಮೇಲೆದ್ದು ದಡಕ್ಕೆ ಬಂದವನೇ ಸಮೀಪದಲ್ಲಿದ್ದ ಪರಿಚಾರಕರಿಗೆ ಅದೇನನ್ನೋ ಹೇಳಿದನು. ಸ್ವಲ್ಪ ಹೊತ್ತಿಗೆ ಆ ಪರಿಚಾರಕರು ಒಂದು ಬುಟ್ಟಿಯಲ್ಲಿ ಕಡಬುಗಳನ್ನು ಹೊತ್ತು ತಂದರು. ಯುವರಾಜನು ದಡದ ಮೇಲೆ ನಿಂತು ಕಡುಬುಗಳಿಂದ ಯುವರಾಣಿಯನ್ನು ಹೊಡೆಯಲಾರಂಭಿಸಿದ....! ಯುವರಾಣಿಯು ಕಡುಬುಗಳ ಹೊಡೆತಗಳನ್ನು ಭರಿಸಲಾರದೆ ಆಕೆಯೂ ಕೊಳದಿಂದ ಮೇಲೆದ್ದು ಬಂದಳು.
        "ಏನಿದು, ಕಡುಬುಗಳನ್ನು ನೀರು ಪಾಲು ಮಾಡಿದೆ?" ಎಂದು ಆಕೆ ಪತಿಯನ್ನು ಆಕ್ಷೇಪಣಾಪೂರ್ವಕವಾಗಿ ಕೇಳಿದಳು.
        "ನೀನೇ ಹೇಳಿದೆಯಲ್ಲವೇ, ಕಡುಬಿನಿಂದ ನನ್ನನ್ನು ಹೊಡೆಯೆಂದು...ಅದಕ್ಕಾಗಿ ಹಾಗೆ ಮಾಡಿದೆ!" ಎಂದು ಯುವರಾಜನು ಆಕೆಗೆ ಉತ್ತರಿಸಿದನು. ತನ್ನ ಪತಿಯು ಸಂಸ್ಕೃತ ಭಾಷೆಯಲ್ಲಿ ಅಷ್ಟಾಗಿ ಜ್ಞಾನವನ್ನು ಹೊಂದಿಲ್ಲವೆಂದು ತಿಳಿದು ಆ ರಾಜಕುಮಾರಿ ಬಹುವಾಗಿ ನೊಂದುಕೊಂಡಳು. ಯುವರಾಜನಿಗೂ ಸಹ ತನ್ನ ಭಾಷಾ ಪಾಂಡಿತ್ಯ ಅರಿವಾಗಿ ಅವನು ನಾಚಿಕೆಯಿಂದ ತಲೆತಗ್ಗಿಸಿದನು. ಭಾಷೆಯ ವಿಷಯದಲ್ಲಿ ಹೆಂಡತಿಯ ಮುಂದೆ ತಲೆತಗ್ಗಿಸಬೇಕಾಗಿ ಬಂದುದಕ್ಕಾಗಿ ಅವನೂ ಸಹ ಬಹುವಾಗಿ ವ್ಯಥೆಗೊಂಡ. ಅವನು ಸಂಸ್ಕೃತವನ್ನು ಓದಿಕೊಂಡವನಾದರೂ ಸಹ ಅದರಲ್ಲಿ ಅಷ್ಟೊಂದು ಪಾಂಡಿತ್ಯವನ್ನು ಸಂಪಾದಿಸಿರಲಿಲ್ಲ ಅಂದರೆ ಅದು ಅವನ ತಲೆಗೆ ಹತ್ತಿರಲಿಲ್ಲ! ತನ್ನ ಹೆಂಡತಿಗೆ ಸರಿಸಮಾನವಾಗಿ ತಾನೂ ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಪಡೆಯಬೇಕೆಂದು ಹಠತೊಟ್ಟ ಆ ಯುವರಾಜನು ಸೂಕ್ತ ಗುರುವನ್ನು ಅನ್ವೇಷಿಸುತ್ತಾ ಊರೂರು ಅಲೆಯತೊಡಗಿದನು!
         ವಾಸ್ತವವಾಗಿ ಯುವರಾಣಿಯು, "ಉದಕೈಃ ತಾಡಯ, ಮಾ" ಎಂದು ಹೇಳಿದ್ದು. "ನೀರಿನಿಂದ ಹೊಡೆಯ ಬೇಡ". ನೀರಿನಿಂದ ತನ್ನನ್ನು ಯುವರಾಜನು ಹೊಡೆಯ ಬಾರದು ಎನ್ನುವುದು ಆಕೆಯ ಉದ್ದೇಶವಾಗಿತ್ತು. ಮಾ ಉದಕೈಃ ಎನ್ನುವಲ್ಲಿ ಸಂಧಿಯೇರ್ಪಟ್ಟು ಅಲ್ಲಿ ಮೋದಕೈಃ ಎನ್ನುವ ಪದವೇರ್ಪಟ್ಟಿತ್ತು, ಹಾಗಾಗಿ ಯುವರಾಜನು ಅದನ್ನು "ಮೋದಕೈಃ ತಾಡಯ" ಅಂದರೆ "ಮೋದಕಗಳಿಂದ (ಕಡುಬುಗಳಿಂದ) ಹೊಡೆ’ ಎಂದು ಅರ್ಥ ಮಾಡಿಕೊಂಡಿದ್ದ. ಹಾಗಾಗಿ ಅವನು ಕಡುಬುಗಳನ್ನು ತರಿಸಿ ಹೊಡೆದಿದ್ದ. ಹೀಗೆ ಗುರುವನ್ನು ಹುಡುಕಿಕೊಂಡು ಹೊರಟ ಯುವರಾಜನು ಒಮ್ಮೆ ಮೇನೆಯಲ್ಲಿ (ಪಲ್ಲಕ್ಕಿ) ಪ್ರಯಾಣಿಸುತ್ತಿದ್ದ. ಮೇನೆಯನ್ನು ಹೊರುತ್ತಿದ್ದ ಒಬ್ಬನಿಗೆ ಏನೋ ಒಂದು ಸಮಸ್ಯೆಯುಂಟಾಯಿತು. ಅವನು ಪಲ್ಲಿಕ್ಕಿಯನ್ನು ಹೊರಲಾರದೆ ಹೊರಟುಹೋದ. ಪಲ್ಲಕ್ಕಿಯನ್ನು ಹೊರಲಿಕ್ಕಾಗಿ ಇನ್ನೊಬ್ಬ ವ್ಯಕ್ತಿಗಾಗಿ ಉಳಿದವರು ಹುಡುಕ ತೊಡಗಿದರು, ಆಗ ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದ ಒಬ್ಬ ಬಡ ಬ್ರಾಹ್ಮಣನು ಅವರ ಕಣ್ಣಿಗೆ ಬಿದ್ದ. ಉಳಿದವರು ಪಲ್ಲಕ್ಕಿಯನ್ನು ಹೊತ್ತರೆ ಸೂಕ್ತ ಸಂಭಾವನೆಯನ್ನು ಕೊಡುವುದಾಗಿ ಹೇಳಿ ಆ ಬ್ರಾಹ್ಮಣನನ್ನು ಪಲ್ಲಕ್ಕಿಯನ್ನು ಹೊರಲು ಒಪ್ಪಿಸಿದರು. ಹೀಗೆ ಯುವರಾಜನ ಪ್ರಯಾಣವು ಪಲ್ಲಕ್ಕಿಯಲ್ಲಿ ಮುಂದುವರೆಯಿತು. ಆ ಬ್ರಾಹ್ಮಣನಿಗೆ ಪಲ್ಲಕ್ಕಿಯನ್ನು ಹೊರುವುದರಲ್ಲಿ ಅನುಭವವಿಲ್ಲದೇ ಇದ್ದದ್ದರಿಂದ ಯುವರಾಜನು ಕುಳಿತ ಪಲ್ಲಕ್ಕಿಯು ಒಲಾಡತೊಡಗಿತು ಮತ್ತು ಅವನು ಆಯಾಸಗೊಂಡಿದ್ದರಿಂದ ಪಲ್ಲಕ್ಕಿಯನ್ನು ಬಹಳ ದೂರದವರೆಗೆ ಹೊರಲಾರದವನಾದ. ಇದನ್ನು ಗಮನಿಸಿದ ಯುವರಾಜನು,
         "ಓ ವಿಪ್ರನೇ! ಪಲ್ಲಕ್ಕಿಯನ್ನು ಹೊರುವುದಕ್ಕೆ ನಿನಗೇನು ಕಷ್ಟ? ಹೇಳುವಂತವನಾಗು......." ಎಂದು ಪ್ರಶ್ನಿಸಿದನು.
          "ಕಿಂ ಬಾಧತಿ ತ್ವಾಂ ವಿಪ್ರಾ ಶಿಬಿಕಾ ವಹನೇ, ವದ....?
          ಈ ಪ್ರಶ್ನೆಯಿಂದ ಯುವರಾಜನ ಸಂಸ್ಕೃತ ಜ್ಞಾನವು ಅಷ್ಟಕಷ್ಟೆ ಎನ್ನುವ ವಿಷಯವು ಮತ್ತೊಮ್ಮೆ ಬಹಿರಂಗವಾಯಿತು. ’ಬಾಧತೇ’ ಎನ್ನುವ ಸಂಸ್ಕೃತ ಕ್ರಿಯಾ ಪದವನ್ನು ಯುವರಾಜನು ’ಬಾಧತಿ’ ಎಂದು ತಪ್ಪಾಗಿ ಹೇಳಿದ. ಆಗ ಆ ಬಡ ಬ್ರಾಹ್ಮಣನು,
          "ಓ ರಾಜಾ, ನೀನು ಬಾಧತೇ ಎನ್ನುವ ಪದವನ್ನು ಬಾಧತಿ ಎಂದು ಹೇಳಿದ್ದರಿಂದ ಉಂಟಾದ ಬಾಧೆಯು ಪಲ್ಲಕ್ಕಿ ಹೊರುವುದರಿಂದ ಉಂಟಾದ ಬಾಧೆಗಿಂತ ಹೆಚ್ಚಿನದು" ಎಂದು ಉತ್ತರಿಸಿದನಂತೆ.
           "ನ ತಥಾ ಬಾಧತೇ ರಾಜನ್ ಯಥಾ ಬಾಧತಿ ಬಾಧತೇ!"
          ಕೂಡಲೇ ಆ ಯುವರಾಜನು ಪಲ್ಲಕ್ಕಿಯಿಂದ ಇಳಿದು ಆ ಬಡ ಬ್ರಾಹ್ಮಣನ ಕಾಲಿಗೆರಗಿ ತನ್ನನ್ನು ಕ್ಷಮಿಸುವಂತೆ ಬೇಡಿಕೊಂಡನಂತೆ. ಆಮೇಲೆ ಆ ಬ್ರಾಹ್ಮಣನನ್ನು ಗುರುವಾಗಿ ಸ್ವೀಕರಿಸಿದ ಯುವರಾಜನು, ತನ್ನ ಹೆಂಡತಿಗೆ ಸರಿಸಮಾನವಾದ ಪಾಂಡಿತ್ಯವನ್ನು ಸಂಸ್ಕೃತ ಭಾಷೆಯಲ್ಲಿ ಪಡೆದುಕೊಂಡನಂತೆ.
      ಈ ಕಥೆ ಅಥವಾ ಇಂತಹ ಘಟನೆಗಳು, ಮಹಾಕವಿ ಕಾಳಿದಾಸನ ಕಾಲಕ್ಕಿಂತಲೂ ಬಹು ಹಿಂದಿನ ಕಾಲಕ್ಕೆ ಸಂಬಂಧಿಸಿದವು. ಕಾಳಿದಾಸ, ವಿಕ್ರಮರು, ಕ್ರಿ.ಪೂ. ಒಂದನೇ ಶತಮಾನಕ್ಕೆ ಸೇರಿದವರು. ಈ ಘಟನೆಯನ್ನಾಗಲಿ ಅಥವಾ ಇಂತಹ ಘಟನೆಗಳು ಜರುಗಿದಂತೆ ಅನಾದಿಕಾಲದಿಂದಲೂ ಕತೆಗಳನ್ನು ಹೇಳಲಾಗುತ್ತಿದೆ. ಇದರಿಂದ ಎರಡು ವಿಷಯಗಳು ಸ್ಪಷ್ಟವಾಗುತ್ತವೆ. ವ್ಯವಹಾರ ಭಾಷೆಯನ್ನು ಮಾತ್ರವೇ ಜನಸಾಮಾನ್ಯರು ಮಾತನಾಡುತ್ತಾರೆ. ಸಾಹಿತ್ಯಕ ಭಾಷೆಯನ್ನು ಕಲಿತುಕೊಳ್ಳುವವರು ಮೊದಲು ವ್ಯಾಕರಣ ತಪ್ಪುಗಳನ್ನು ಮಾಡುತ್ತಾರೆ, ಆಮೇಲೆ ಅವನ್ನು ಕ್ರಮೇಣ ತಿದ್ದಿಕೊಳ್ಳುತ್ತಾರೆ. ಆದ್ದರಿಂದ, ಆ ಯುವರಾಜನ ಕಾಲದಲ್ಲಿಯೂ ಸಹ ಕ್ಲಾಸಿಕಲ್ (ಸಾಹಿತ್ಯಕ) ರೂಪದಲ್ಲಿಯೂ, ಕಮ್ಯೂನಿಕೇಟಿವ್ (ವ್ಯವಹಾರ) ರೂಪದಲ್ಲೂ ಸಂಸ್ಕೃತ ಭಾಷೆ ಇತ್ತೆಂದು ತಿಳಿದುಬರುತ್ತದೆ. ಅಥವಾ ಜನಸಾಮಾನ್ಯರು ದೈನಂದಿನ ವ್ಯವಹಾರಗಳಲ್ಲಿ ಪ್ರಾಕೃತಭಾಷೆಗಳನ್ನು ಮಾತನಾಡುತ್ತಾ, ಸಂಸ್ಕೃತ ಭಾಷೆಯನ್ನು ವಿದ್ಯಾವಂತರು ಮಾತ್ರವೇ ಉಪಯೋಗಿಸುತ್ತಿದ್ದಂತಹ ಪರಿಸ್ಥಿತಿ ಅಂದಿಗಾಗಲೇ ಏರ್ಪಟ್ಟಿರಬಹುದು.
        ವೈವಿಧ್ಯತೆಗಳನ್ನು ಮುಂದುವರೆಸಿಕೊಂಡು ಹೋಗುವುದು, ಅವುಗಳನ್ನು ಸಂರಕ್ಷಿಸುವುದು ಅನಾದಿ ಕಾಲದಿಂದಲೂ ಭಾರತೀಯರು ರೂಢಿಸಿಕೊಂಡಡು ಬಂದಿರುವ ಸಂಪ್ರದಾಯ. ಈ ಸ್ವಭಾವದಿಂದಾಗಿಯೇ ಅನೇಕಾನೇಕ ಮತಗಳು ಈ ದೇಶದಲ್ಲಿ ಜನ್ಮತಾಳಿವೆ, ಬೆಳೆದಿವೆ, ಅವು ಮತ್ತೆ ಹೊಸ ಹೊಸ ಪಂಗಡಗಳಿಗೆ ಜನ್ಮವಿತ್ತಿವೆ. ಈ ಸ್ವಭಾವಂದಿಂದಾಗಿಯೇ ಮೇಲ್ನೋಟಕ್ಕೆ ಪರಸ್ಪರ ವಿರೋಧಾಭಾಸಗಳಿಂದ ಕೂಡಿರುವಂತೆ ಕಾಣುವ ದರ್ಶನಗಳು, ಸ್ಮೃತಿಗಳು, ಆಗಮಗಳು, ಮೊದಲಾದವುಗಳಂತೆ ಇನ್ನೂ ಅನೇಕಾನೇಕ ವೈವಿಧ್ಯತೆಗಳೂ ಇಲ್ಲಿ ಹುಟ್ಟಿ, ಬೆಳೆದು, ಕಾಲಗರ್ಭದಲ್ಲಿ ಕಲಿಸಿಹೋಗಿವೆ, ಮತ್ತೆ ಅನೇಕ ಹೊಸ ಮತಗಳು ಹುಟ್ಟಿಕೊಂಡಿವೆ. ಈ ಸ್ವಭಾವದಿಂದಾಗಿಯೇ ವಿಭಿನ್ನವಾದ ಭಾಷೆಗಳು, ಭಾಷೆಗಳೊಳಗಡೆಯೇ ಪ್ರಾಂತೀಯ ವೈವಿಧ್ಯತೆಗಳು (ಮಾಂಡಲೀಕಗಳು), ಉಚ್ಛಾರಣೆಯಲ್ಲಿ ಸ್ಥಳೀಯ ವೈವಿಧ್ಯತೆಗಳು ಹುಟ್ಟಿ, ಬೆಳದಿವೆ, ಹೊಸ ಹೊಸವು ಮತ್ತೆ ಮತ್ತೆ ಹುಟ್ಟಿವೆ. ವೈವಿಧ್ಯ ರೀತಿಗಳೆಲ್ಲವೂ ನಮ್ಮ ರಾಷ್ಟ್ರೀಯ ತಾತ್ತ್ವಿಕ ಭೂಮಿಕೆಯ ಮೇಲೆ ಜನ್ಮತಾಳಿ ವಿಕಾಸಗೊಂಡಿರಬಹುದು, ರೂಪಗಳನ್ನು ಮಾರ್ಪಡಿಸಿಕೊಂಡಿರಬಹುದು, ಆದರೆ ರಾಷ್ಟ್ರೀಯ ತತ್ತ್ವವೆಂದಿಗೂ ಬದಲಾಗಲಿಲ್ಲ. ಕಾಲನ ಹೊಡೆತಕ್ಕೆ ಸಿಕ್ಕು ಅದೆಷ್ಟೋ ಭಾರತೀಯ ಭಾಷೆಗಳು ನಾಶವಾಗಿವೆ, ಹೊಸವು ಜನ್ಮತಾಳಿವೆ, ರೂಪಗಳನ್ನು ಬದಲಿಸಿಕೊಂಡಿವೆ. ಆದರೆ, ಎಲ್ಲ ಭಾಷೆಗಳೂ ಸಹ ಸಂಸ್ಕೃತ ಭಾಷಾ ಸ್ತೋತಸ್ಸಿನಿಂದ ಚಿಕ್ಕ ಚಿಕ್ಕ ಕಾಲುವೆಗಳಂತೆ ಹೊರಟು ಮತ್ತೆ ಅದರಲ್ಲೇ ಲೀನವಾಗಿವೆ, ಸಮಾಂತರವಾಗಿ ಪ್ರವಹಿಸಿವೆ, ಪ್ರವಹಿಸುತ್ತಲೂ ಇವೆ. ರಾಮಾಯಣ ನಡೆದ ಇಲ್ಲಾ ರಚಿತವಾದ ಕಾಲದಲ್ಲಿ ಸಂಸ್ಕೃತ ಇತ್ತು ಹಾಗೆಯೇ ಪ್ರಾಂತೀಯ ಭಾಷೆಗಳೂ ಇದ್ದವು. ರಾಮನಿಗಿಂತ ಹಿಂದಿನವನು ನಳ ಚಕ್ರವರ್ತಿ. ದಮಯಂತಿಯ ಸ್ವಯಂವರಕ್ಕೆ ಬಂದ ವಿವಿಧ ದೇಶಗಳ ರಾಜರು ಅಂದು ಭಿನ್ನಭಾಷೆಗಳನ್ನು ಮಾತನಾಡುವ ಪ್ರಾಂತಕ್ಕೆ ಸೇರಿದವರು! ಹಾಗಾಗಿ ಅವರು ಎಲ್ಲರಿಗೂ ಅರ್ಥವಾಗುವಂತಹ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು. ನಮ್ಮ ಜೀವನದಲ್ಲಿ ನಾವು ನೋಡದ ಸಂಗತಿಗಳೇನಾದರೂ ಇದ್ದರೆ ಅವನ್ನು ನಂಬುವುದು ಅಥವಾ ನಂಬದೇ ಇರುವುದು ನಮ್ಮ ವಿಶ್ವಾಸಿಸುವ ಸ್ವಭಾವವನ್ನು ಆಧರಿಸುತ್ತದೆ. ಮೆಕಾಲೆ ವಿದ್ಯಾವಿಧಾನದಿಂದಾಗಿ ಭಾರತೀಯ ವಿದ್ಯಾವಂತರಲ್ಲನೇಕರ ವಿಶ್ವಾಸಿಸುವ ಸ್ವಭಾವವು ಬದಲಾಗಿ ಹೋಗಿದೆ! ನಾವು ನೋಡದೇ ಇರುವ ವಿಷಯವು ಹತ್ತು ವರ್ಷದ ಕೆಳಗಿನದಿರಬಹುದು, ನೂರು ವರ್ಷಗಳ ಹಿಂದಿನದಿರಬಹುದು ಅಥವಾ ಲಕ್ಷಾಂತರ ಸಂವತ್ಸರಗಳ ಪೂರ್ವದಲ್ಲಿ ನಡೆದಿರಬಹುದು! "ಲಕ್ಷಾಂತರ ವರ್ಷಗಳ ಹಿಂದಿನ ಚರಿತ್ರೆ ಎಂದು ಹೇಳುವುದೇ ತಡ ಮುಖವನ್ನು ಸಿಂಡರಿಸಿಕೊಳ್ಳುವುದನ್ನು ಮೆಕಾಲೆ ವಿದ್ಯಾವಿಧಾನವು ನಮಲ್ಲಿ ಪೋಷಿಸಿದೆ" ನಮ್ಮ ಯುಗಗಳ ಚರಿತ್ರೆಯನ್ನು ಕೇವಲ ಐದು ಸಾವಿರ ವರ್ಷಗಳ ಕಾಲಕ್ಕೆ ಪರಿಮಿತಗೊಳಿಸಿ, ಅದನ್ನೇ ತಲೆಯಲ್ಲಿ ಒತ್ತೊತ್ತಿ ತುರುಕಿ, ತುಂಬಿ ಹೋಗಿದ್ದಾರೆ ಬ್ರಿಟಿಷರು! ಈಗ ಪ್ರಚಲಿತವಿರುವ ದೇಶೀಯ ಭಾಷೆಗಳಾಗಲಿ, ಪ್ರಾಂತೀಯ ಭಾಷೆಗಳಾಗಲಿ, ಪ್ರಾಕೃತ ಭಾಷೆಗಳಾಗಲಿ, ಸುಮಾರು ಎರಡು ಸಾವಿರ ಅಥವಾ ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಸಂಸ್ಕೃತ ಭಾಷೆಯಿಂದ ಹೊರಹೊಮ್ಮಿದ ವಿಭಿನ್ನ ಪ್ರಾಂತೀಯ ರೂಪಾಂತರಗಳು. ಈ ಭಾಷೆಗಳಲ್ಲಿ ಕೆಲವೊಂದಕ್ಕೆ ಸಾವಿರ ವರ್ಷಗಳ ಹಿಂದೆಯಷ್ಟೆ ವ್ಯಾವಹಾರಿಕ ಹಾಗು ಸಾಹಿತ್ಯಕ ರೂಪಗಳು ಸ್ಥಿರಗೊಂಡಿವೆ. ಹಾಗಾದರೆ ಲಕ್ಷಾಂತರ ವರ್ಷಗಳ ಹಿಂದೆ ಆವಿರ್ಭಾವವಾದ ಸಂಸ್ಕೃತ ಭಾಷೆಗೆ ‘ವ್ಯಾವಹಾರಿಕ’ ಹಾಗು ‘ಸಾಹಿತ್ಯಕ’ ರೂಪಗಳು ಯಾವಾಗ ಸ್ಥಿರಪಟ್ಟಿರಬಹುದು? ಪ್ರಾಂತೀಯ ಭಾಷೆಗಳೆಲ್ಲವಕ್ಕೂ ಪ್ರಾದೇಶಿಕ ಭಿನ್ನತೆಗಳಿವೆ (ಮಾಂಡಲೀಕ ರೂಪ). ಈ ಮಾಂಡಲೀಕಗಳು ಕಾಲಕ್ರಮೇಣ ಹೊಸ ಭಾಷೆಗಳಾಗಿ ಸಹ ರೂಪುಗೊಳ್ಳುತ್ತಿವೆ. ಅದೇ ವಿಧವಾಗಿ ದೇಶಾದ್ಯಂತ ವ್ಯಾಪಿಸಿದ್ದ ಸಂಸ್ಕೃತ ಭಾಷೆಗೆ ದೂರ ಪ್ರಾಂತಗಳಲ್ಲಿದ್ದ ಪ್ರಾಂತೀಯ ರೂಪವೇ ಪ್ರಾಂತೀಯ ದೇಶೀ ಭಾಷೆಗಳು.....
        ವೇದಗಳ ಭಾಷೆಯಲ್ಲಿಯೇ ಒಂದು ಕಾಲದಲ್ಲಿ ದೇಶವಾಸಿಗಳೆಲ್ಲಾ ಮಾತನಾಡುತ್ತಿದ್ದರು. ಕ್ರಮೇಣ ‘ಲೌಕಿಕ ಸಂಸ್ಕೃತ’ವು ವೇದಭಾಷೆ ಅಥವಾ ‘ವೈದಿಕ ಸಂಸ್ಕೃತ’ದಿಂದ ದೂರ ಸರಿಯಿತು. ಕಾಲಕ್ರಮೇಣ ಲೌಕಿಕ ಸಂಸ್ಕೃತವು ವಿಭಿನ್ನ ಪ್ರಾಂತಗಳಲ್ಲಿ ಬದಲಾಗುತ್ತಾ ಹೋಗಿ ವಿಭಿನ್ನ ಭಾಷೆಗಳ ಉಗಮವಾಯಿತು. ಹೀಗೆ ಉದ್ಭವವಾದ ಪ್ರಾಕೃತ ಭಾಷೆಗಳೂ ಸಹ ಹಾಗೆಯೇ ಇರಲಿಲ್ಲ, ಅವೂ ಸಹ ಕ್ರಮೇಣ ಬದಲಾವಣೆ ಹೊಂದುತ್ತಾ ಹೊಂದುತ್ತಾ ವಿಭಿನ್ನ ಪ್ರಾಂತೀಯ ಭಾಷೆಗಳಾಗಿ ರೂಪುಗೊಂಡವು. ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಆಂಧ್ರ ಶಾತವಾಹನರು* ಭಾರತದ ಸಾಮ್ರಾಟರಾದರು, ಅವರು ಗಿರಿವ್ರಜವನ್ನು ರಾಜಧಾನಿಯಾಗಿ ಮಾಡಿಕೊಂಡು ಮಗಧ ಸಾಮ್ರಾಜ್ಯವನ್ನು ಪರಿಪಾಲಿಸಿದರು. (*ಮೂಲ ಲೇಖಕರು ಆಂಧ್ರರು ಎಂದು ಹೇಳಿದ್ದರೂ ಸಹ ಅದನ್ನು ಆಂಧ್ರ ಪ್ರಾಂತದಿಂದ ಬಂದವರೆಂದು ಅರ್ಥೈಸಿಕೊಳ್ಳೋಣ, ಏಕೆಂದರೆ ಅಂದು ಗೋದಾವರಿಯಿಂದ ಹಿಡಿದು ಕಾವೇರಿಯವರೆಗೆ ಪ್ರಚಲಿತವಿದ್ದ ಭಾಷೆ ಕನ್ನಡವೇ ಆಗಿತ್ತು ಎನ್ನುವುದು ನಮಗೆಲ್ಲರಿಗೂ ತಿಳಿದ ವಿಷಯ. ಇದಕ್ಕೆ ಪೂರಕವಾಗಿ ತೆಲುಗಿನ ಆದಿ ಕವಿಗಳಲೊಬ್ಬನಾದ ಶ್ರೀನಾಥನು ಎರಡನೇ ಹರಿಹರ ರಾಯನಿಂದ ಸನ್ಮಾನಿತನಾದಾಗ, ನಿನ್ನ ಕಾವ್ಯ ಭಾಷೆ ಯಾವುದು ಎಂದು ಕೇಳಿದಾಗ ಅವನು ನನ್ನದು ಕರ್ಣಾಟಕ ಭಾಷೆ ಎಂದು ಹೇಳಿಕೊಂಡಿದ್ದಾನೆ. ಹಾಗಾಗಿ ಇಂದಿನ ತೆಲುಗು ಅಂದಿನ ಕನ್ನಡದ ಒಂದು ಮಾಂಡಲೀಕವಾಗಿತ್ತೆಂದು ಹೇಳಬಹುದು - ನಮ್ಮ ಧಾರವಾಡ, ಕುಂದಾಪುರ ಕನ್ನಡಗಳಂತೆ). ಆಗ ಪ್ರಚಲಿತವಿದ್ದ ಪ್ರಾಕೃತ ಭಾಷೆಗಳು, ಕ್ರಿ.ಪೂ. ಒಂದನೆಯ ಶತಮಾನದ ಹೊತ್ತಿಗೆ ಬದಲಾದವು. ಕ್ರಿ.ಪೂ. ಒಂದನೇ ಶತಮಾನದಲ್ಲಿದ್ದ ಮಹಾಕವಿ ಕಾಳಿದಾಸನು ತನ್ನ ಸಂಸ್ಕೃತ ನಾಟಕಗಳಲ್ಲಿ ಬಳಸಿರುವ ದೇಶೀಯ ಭಾಷೆಗಳು ಇಂದು ಮೂಲ ರೂಪದಲ್ಲಿ ಇಲ್ಲ, ಅವು ರೂಪಾಂತರಗೊಂಡಿವೆ. ಆ ಪ್ರಾಕೃತಿಕ ಭಾಷೆಗಳೊಳಗಿನ ವಿಷಯಗಳನ್ನು ಸಂಸ್ಕೃತ ಭಾಷೆಗೆ ಅನುವಾದಿಸಿದವರು ಆ ಭಾಷೆಗಳಲ್ಲಿ ಪ್ರಚಲಿತವಿದ್ದ ವಿಷಯಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ. ಗುಣಾಢ್ಯನೆಂಬ ಮಹಾಕವಿ ಪೈಶಾಚಿ ಪ್ರಾಕೃತ ಭಾಷೆಯಲ್ಲಿ ’ಬೃಹತ್ಕಥಾ’ ಎನ್ನುವ ಗ್ರಂಥವನ್ನು ಬರೆದ. ಆ ಭಾಷೆ ಇಂದು ಪ್ರಚಲಿತವಿಲ್ಲ, ಅದೀಗ ರೂಪಾಂತರ ಹೊಂದಿದೆ. ಆ ಪ್ರಾಕೃತ ಭಾಷೆಯು ಕನ್ನಡ, ತೆಲುಗು ಅಥವಾ ಮತ್ತೊಂದು ಭಾರತೀಯ ಭಾಷೆಯ ಪೂರ್ವರೂಪವಾಗಿದ್ದಿರಲೂಬಹುದು! ಸಂಸ್ಕೃತ ಭಾಷೆಯ ಇಬ್ಬರು ಮಹಾಕವಿಗಳಾದ ಕ್ಷೇಮೇಂದ್ರ ಮತ್ತು ಸೋಮದೇವಸೂರಿಯರು ಆ ಬೃಹತ್ಕಥೆಯನ್ನು  ಸಂಸ್ಕೃತೀಕರಣಗೊಳಿಸಿದ್ದರಿಂದ ಇಂದು ನಮಗೆ ಬೃಹತ್ ಕಥೆ ಹಾಗು ಅದರ ಹಿಂದಿನ ಚರಿತ್ರೆಯು ಲಭ್ಯವಿದೆ. ಕಾಲಕಾಲಕ್ಕೆ ಬದಲಾಗುವ ಪ್ರಾಕೃತ ಭಾಷೆಯನ್ನು ನಮ್ಮ ಪೀಳಿಗೆಯವರಿಗೂ ತಂದು ತಲುಪಿಸಿದ ಭಾಷೆ ಸಂಸ್ಕೃತ!
       ಒಂದು ತೋಟದಲ್ಲಿ ಪಕ್ಷಿಯೊಂದಿತ್ತು. ಆ ತೋಟದಲ್ಲಿ ಒಂದೇ ವಿಧವಾದ ಗಿಡಗಳಿದ್ದವು. ಕೆಲವೊಂದು ತಲೆಮಾರುಗಳವರೆಗೆ ಈ ಪಕ್ಷಿಯ ಸಂತತಿಯು ಅದೇ ತೋಟದಲ್ಲಿ ಜೀವಿಸುತ್ತಿತ್ತು. ಸಹಜವಾಗಿ ತೋಟವೆಂದರೆ ಒಂದೇ ವಿಧವಾದ ಗಿಡಗಳಿರುವ ಪ್ರದೇಶವೆಂದು ಆ ಪಕ್ಷಿಯ ಸಂತತಿಗೆ ಭಾಸವಾಗುವುದರಲ್ಲಿ ಸಂದೇಹವಿಲ್ಲ. ಒಮ್ಮೆ ಆ ಪಕ್ಷಿಯ ಸಂತತಿಗೆ ಅಲ್ಲಿ ಆಹಾರವು ಲಭ್ಯವಾಗದೇ ಹೋದದ್ದರಿಂದು ಅವು ಅಲ್ಲಿಂದ ಬೇರೆ ಪ್ರದೇಶಕ್ಕೆ ವಲಸೆ ಹೋದವು. ಅಲ್ಲಿ ಅನೇಕ ವಿಧವಾದ ಫಲಪುಷ್ಟಗಳಿಂದ ಪರಿಪುಷ್ಟವಾದ ಒಂದು ದೊಡ್ಡ ತೋಟವು ಅವುಗಳ ಕಣ್ಣಿಗೆ ಬಿತ್ತು! ಅವು ಆ ತೋಟದೊಳಕ್ಕೆ ಇಳಿದು ತರಹೇವಾರಿ ಹಣ್ಣುಗಳನ್ನು ತಿಂದು ಆನಂದಿಸಿದವು. ಆಗ ಅವುಗಳು ಹೀಗೆ ಭಾವಿಸಿದವು - "ಇದು ಅನೇಕ ತೋಟಗಳ ಸಮೂಹ....!" ಏಕೆಂದರೆ, ಒಂದು ತೋಟದಲ್ಲಿ ಒಂದೇ ರೀತಿಯ ಹಣ್ಣಿನ ಗಿಡಗಳಿರುತ್ತಾವೆಂದೂ ಮತ್ತದು ಹಾಗೇ ಇರಬೇಕೆಂದು ಅವುಗಳಿಗೆ ಅನೇಕ ತಲೆಮಾರುಗಳಿಂದ ಬಂದ ನಂಬಿಕೆಯಾದ್ದರಿಂದ ಅವು ಸಹಜವಾಗಿ ಹಾಗೆ ಭಾವಿಸಿದವು! ಒಂದು ದೇಶ ಅಥವಾ ರಾಷ್ಟ್ರಕ್ಕೆ ಒಂದೇ ವಿಧವಾದ ಧರ್ಮ ಮತ್ತು ಒಂದೇ ವಿಧವಾದ ಭಾಷೆಯಿರಬೇಕೆಂದು ಭಾವಿಸಿದ ಬ್ರಿಟೀಷರು, ಭಾರತದೇಶದಲ್ಲಿ ಅನೇಕ ಮತ ಧರ್ಮಗಳು ಹಾಗೂ ಭಾಷೆಗಳಿದ್ದುದರಿಂದ ಇಲ್ಲಿ ಅನೇಕ ರಾಷ್ಟ್ರಗಳು (ನೇಷನ್‌ ಅಥವಾ ಕಂಟ್ರಿಗಳು) ಇವೆಯೆಂದು ಭ್ರಮಿಸಿದರು. ಅದಕ್ಕೇ ಅವರು ’ಇಂಡಿಯಾ ಈಸ್ ಏ ಕಂಟ್ರಿ ಆಫ್ ಕಂಟ್ರೀಸ್" ಎಂದು ಹೇಳಿದ್ದು. ಆದರೆ ತಮ್ಮ ಭ್ರಮೆ ಸುಳ್ಳೆನ್ನುವುದನ್ನೂ ಭಾರತವು ಬಹು ಹಿಂದೆಯೇ ಒಂದು ರಾಷ್ಟ್ರವಾಗಿ ವಿಕಾಸಗೊಂಡಿತ್ತೆಂದೂ ವಿಲಿಯಂ ಜೋನ್ಸ್‌ನ ಕಾಲಕ್ಕಾಗಲೇ ಬ್ರಿಟಿಷರು ಮನಗಂಡಿದ್ದರು. ಆದರೆ ಅಷ್ಟೊತ್ತಿಗಾಗಲೇ ಬ್ರಿಟಿಷರು ಕಡಲ್ಗಳ್ಳರ ಸ್ಥಾಯಿಯಿಂದ ದುರಾಕ್ರಮಣಕಾರರಾಗಿ ಬಡ್ತಿ ಪಡೆದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿನ ಪ್ರಭುಗಳಾಗಿ ಸ್ಥಿರಗೊಂಡಿದ್ದರು. ತಮ್ಮ ಪ್ರಭುತ್ವವನ್ನು ಬಲಗೊಳಿಸಿಕೊಳ್ಳುವ ಉದ್ದೇಶಕ್ಕನುಗುಣವಾಗಿ ವಿಲಿಯಂ ಜೋನ್ಸ್‌ನಿಂದ ಮೊದಲುಗೊಂಡು ಬಿಷಪ್ ರಾಬರ್ಟ್ ಕಾಲ್ಡ್‌ವೆಲ್‌ನವರೆಗೆ ಬ್ರಿಟಿಷ್ ಮೇಧಾವಿಗಳು ಭಾಷೆಗಳ ಹೆಸರಿನಲ್ಲಿ ಇಲ್ಲಿ ಅನೇಕ ರಾಷ್ಟ್ರಗಳಿದ್ದವು ಎನ್ನುವುದನ್ನು ನಿರೂಪಿಸಿ ಜನರನ್ನು ವಿಭಜಿಸಿ ಪರಿಪಾಲಿಸಲು ನೋಡಿದರು. ಏಕೆಂದರೆ ಬ್ರಿಟಿಷರ ರಾಜನೀತಿಯೇ ಒಡೆದು ಆಳುವುದಾಗಿತ್ತು. ಆದರೆ ಪ್ರತಿಯೊಂದು ಭಾಷಿಕರೂ ಒಂದೊಂದು ರಾಷ್ಟ್ರಕ್ಕೆ ಸೇರಿದವರೆಂದು ನಿರೂಪಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಭಾಷೆಯ ಹೆಸರಿನಲ್ಲಿ, ಭಾಷಾ ಕುಟುಂಬಗಳ ಹೆಸರಿನಲ್ಲಿ ಇಲ್ಲದೇ ಇದ್ದ ರಾಷ್ಟ್ರಗಳನ್ನು, ಹೊಸ ಹೊಸ ರಾಷ್ಟ್ರಗಳನ್ನು ಮೆಕಾಲೆ ವಿದ್ಯಾವಿಧಾನ ಸೃಷ್ಟಿಸಿತು! ದಕ್ಷಿಣ ಭಾರತೀಯ ಭಾಷೆಗಳು ಸಂಸ್ಕೃತ ಭಾಷೆಯಿಂದ ಹುಟ್ಟಲಿಲ್ಲವೆಂದೂ, ಅವು ಸಂಸ್ಕೃತದ ರೂಪಾಂತರಗಳಲ್ಲವೆಂದು ಬ್ರಿಟಿಷ್ ಬಿಷಪ್‌ ರಾಬರ್ಟ್ ಕಾಲ್ಡ್‌ವೆಲ್ ನಿರ್ಧರಿಸಿದ. ಕ್ರಿ.ಶ. ೧೮೫೮ಕ್ಕೇ ಈ ಸಿದ್ಧಾಂತದ ಅನಾವರಣವಾಯಿತು. ಈ ಸಿದ್ಧಾಂತದ ಆಧಾರದ ಮೇಲೆ ದಕ್ಷಿಣ ಭಾರತದಿಂದ ಮಹಾರಾಷ್ಟ್ರವನ್ನು ಬೇರ್ಪಡಿಸಲಾಯಿತು. ಅನಾದಿಕಾಲದಿಂದಲೂ ಭರತ ಖಂಡದ ಭಾಗವಾಗಿದ್ದ ದ್ರಾವಿಡ ಪ್ರಾಂತ್ಯದ ಪ್ರಜೆಗಳನ್ನು ಪ್ರತ್ಯೇಕ ರಾಷ್ಟ್ರೀಕರನ್ನಾಗಿ ಬ್ರಿಟಿಷ್ ಮೇಧಾವಿಗಳು ಪ್ರತ್ಯೇಕಿಸಿ ಅವರನ್ನು ದ್ರಾವಿಡ ಜನಾಂಗವೆಂದು ಗುರುತಿಸಿದರು....... ಮಹಾರಾಷ್ಟ್ರ ಭಾಷೆಯನ್ನು ಮತ್ತು ಕೆಲವು ಉತ್ತರ ಭಾರತದ ಭಾಷೆಗಳನ್ನು ಒಂದಾಗಿಸಿ ’ಇಂಡೋ-ಯೂರೋಪಿಯನ್’ (ಭಾರತ-ಐರೋಪ್ಯ) ಭಾಷಾ ಕುಟುಂಬಗಳಾಗಿ ಬೇರ್ಪಡಿಸಿದರು.  ಈ ಭಾಷಾ ಕುಟುಂಬವನ್ನು ಆರ್ಯ ಜನಾಂಗವೆಂದು ಕರೆದರು. "ಇಂಡೋ-ಟಿಬೆಟ್" ವರ್ಣ ಸಮುದಾಯ (ರೇಸ್‌) ಎಂದು ಭಾರತ ದೇಶದ ಈಶಾನ್ಯ ಪ್ರಾಂತ ಹಾಗೂ ಇಂದಿನ ಬರ್ಮಾ ದೇಶಗಳನ್ನೊಳಗೊಂಡ ಪ್ರದೇಶವನ್ನು ಬ್ರಿಟಿಷರು ಚಿತ್ರೀಕರಿಸಿದರು. ದೇಶದಲ್ಲಿ ವಿವಿಧ ಪ್ರಾಂತಗಳಲ್ಲಿ ನಿವಸಿಸುವ ವಿಭಿನ್ನ ಜಾತಿಯ ಜನರನ್ನು ವಿಭಿನ್ನ ರಾಷ್ಟ್ರೀಕರೆಂದು ಪ್ರಚಾರ ಮಾಡಿ ಹೋಗಿದ್ದಾರೆ. ಒಂದೇ ಭಾರತೀಯ ಸಮುದಾಯವನ್ನು ಭಾಷೆಗಳ ಹೆಸರಿನಲ್ಲಿ ಒಡೆದು ಆರ್ಯಜಾತಿ, ದ್ರಾವಿಡ ಜಾತಿ, ಅನಾದಿ ಜಾತಿ (ಮೂಲ ನಿವಾಸಿಗಳು) ಎನ್ನುವ ಹೊಸ ಹೊಸ ಜಾತಿಗಳನ್ನು ಬ್ರಿಟಿಷರು ಹುಟ್ಟುಹಾಕಿದರು. ಈ ಅಪದ್ಧಗಳನ್ನೇ ಇಂದು ಮಾರ್ಕ್ಸ್‌ವಾದಿಗಳು ಪ್ರಚಾರ ಮಾಡುತ್ತಿದ್ದಾರೆ........
                ಅಜನಾಭದ ಚರಿತೆಯನು ಶಿಥಿಲಗೊಳಿಸಿ
                ಅಪದ್ಧಗಳ ಶಿಖರಗಳನು ಕಟ್ಟಿದವರು,
                ಸಮಯ ಸಾಧಿಸಿ ವಿದ್ವೇಷದ ದಳ್ಳುರಿಯ
                ಕಿಚ್ಚನು ಪ್ರಜ್ವಲಿಸಿ ಹೊತ್ತಿಸಿದವರು.
                ಪಾಶ್ಚಾತ್ಯ ವಿಷವ್ಯೂಹದ
               ಮಾಯಾ ಮಾರೀಚ ಮೃಗಗಳವು
               ಬೆಳ್ಳಗಿನ ಚರ್ಮದೊಳಿದ್ದ ಕರ್ರಗಿನ

               ಹೃದಯದ ಠಕ್ಕ ನರಿಗಳವು!
                              *****
         ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಎಂಟನೆಯ ಕಂತು, ’ಕಾಲ್ಡ್‌ವೆಲ್ ಚಾಟಿನ ಕಲ್ಲಲು ಸಮೈಕ್ಯತಕು ಚಿಲ್ಲುಲು - ಕಾಲ್ಡ್‌ವೆಲ್ ಹಾಕಿದ ಸುಳ್ಳಗಳ ಅಡಿಪಾಯ, ಆಗಿದೆ ಸಮೈಕ್ಯತೆಗೆ ಕಂಟಕಪ್ರಾಯ!
         ಈ ಸರಣಿಯ ಏಳನೆಯ ಲೇಖನಕ್ಕೆ "ಪರಂಗಿಗಳ ಹಾಗೆ ಉಳುಕಿ, ಬಳುಕಿದರೆ ಮೈಮನ ಪುಳಕಿತವಾಗುವುದು!" ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AD-%E0%B2%AA...
 
 

 

 

Rating
No votes yet

Comments

Submitted by makara Wed, 10/26/2016 - 08:21

ಈ ಸರಣಿಯ ಎಂಟನೆಯ ಲೇಖವನ್ನೂ ಸಹ ಆದರಪೂರ್ವಕವಾಗಿ ವಾಚಿಸಿದ ಸಂಪದದ ಆತ್ಮೀಯರೆಲ್ಲರಿಗೂ ಧನ್ಯವಾದಗಳು. ಈ ಲೇಖನದ ಕೊಂಡಿಯನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡು ಹೆಚ್ಚಿನ ಓದುಗರಿಗೆ ಇದು ತಲುಪುವಂತೆ ಮಾಡಿರುವ ಸಂಪದದ ಮಿತ್ರರಾದ ನಾಗೇಶರಿಗೂ ಹಾಗೂ ಅವರ ಮಿತ್ರರಾದ ನಿರಂಜನ ಮಣಿಯವರಿಗೂ ನನ್ನ ಕೃತಜ್ಞತೆಗಳು. ಈ ಸರಣಿಯ ಮುಂದಿನ ಲೇಖನಕ್ಕಾಗಿ ಕೆಳಗಿನ ಕೊಂಡಿಯನ್ನು ನೋಡಿ. ವಂದನೆಗಳೊಂದಿಗೆ. ಶ್ರೀಧರ್ ಬಂಡ್ರಿ https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AE...

Submitted by makara Sat, 10/29/2016 - 19:42

ಈ ಲೇಖವನ್ನೂ ಸಹ ವಾರದ ವಿಶೇಷ ಲೇಖನವಾಗಿ ಆಯ್ಕೆ ಮಾಡಿದ ಶ್ರೀಯುತ ಹರಿಪ್ರಸಾದ್ ನಾಡಿಗ್ ಅವರ ನೇತೃತ್ವದ ಸಂಪದ ಬಳಗಕ್ಕೆ ನನ್ನ ಕೃತಜ್ಞತೆಗಳು. ಅವರಿಗೂ ಹಾಗೂ ಸಮಸ್ತ ಸಂಪದಿಗರಿಗೂ ದೀಪಾವಳಿ ಹಬ್ಬದ ಶುಭಾಶಯಗಳು, ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ :)