ಭಾಗ ೧೦ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ.....

ಭಾಗ ೧೦ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ.....

ಚಿತ್ರ

     ಗಿಡುಗು ರಾಮಮೂರ್ತಿ ಪಂತುಲು, ಗರಿಮೆಳ್ಳ ಸತ್ಯನಾರಾಯಣ, ಡಮಾಸ್ಕಸ್ ಸ್ಟೀಲಿನ ಕತ್ತಿಗಳ ಚಿತ್ರಕೃಪೆ: ಗೂಗಲ್      
       ಒಂದಾನೊಂದು ಊರಿತ್ತು. ಆ ಊರು ಅನಾದಿಕಾಲದಿಂದಲೂ ಇತ್ತು. ಆ ಊರು ಇತರೆಲ್ಲಾ ಊರಿಗಳಿಗಿಂದ ಸಮೃದ್ಧವಾಗಿ ಸಂಪದ್ಭರಿತವಾಗಿತ್ತು.  ವ್ಯವಸಾಯದಿಂದಾಗಿ ನಿತ್ಯ ಹಸಿರಾಗಿ ಕಂಗೊಳಿಸುತ್ತಿದ್ದ ಹೊಲಗಳು, ಮತ್ತು ತುಂಬಿ ತುಳುಕುತ್ತಿದ್ದ ಸಂಸ್ಕಾರ ಭಾವಗಳು ಆ ಊರಿನ ಆಸ್ತಿ. ಹೀಗೆಯೇ ಹಲವಾರು ವರ್ಷಗಳು ಉರುಳಿದವು. ಆ ಊರಿನ ಮೇಲೆ ಒಂದು ದಿನ ಕಳ್ಳರು ಬಿದ್ದರು, ಮನೆಗಳಿಗೆ ಕನ್ನ ಹಾಕಿದರು. ಊರಿನಲ್ಲಿ ಸ್ವಲ್ಪ ಅಸೌಕರ್ಯವುಂಟಾಯಿತು. ಅನತಿ ಕಾಲದಲ್ಲೇ ಕಳ್ಳರು ಹಾಡುಹಗಲೇ ಊರಿನ್ನು ಕೊಳ್ಳೆ ಹೊಡೆಯುವುದನ್ನು ರೂಢಿಸಿಕೊಂಡರು. ಆಗ ಊರಿನವರಿಗೆ ಮನಶ್ಶಾಂತಿ ಮರೀಚಿಕೆಯಾಯಿತು. "ಕಳ್ಳಕಾರರು, ದರೋಡೆಕೋರರು ಯಾವಾಗ ಬಂದು ಇದ್ದಬದ್ದುದನ್ನೆಲ್ಲಾ ದೋಚುತ್ತಾರೋ" ಎನ್ನುವ ಭಯವು ಅವರನ್ನು ಆವರಿಸಿತು. ಈ ದರೋಡೆಕೋರರನ್ನು ಎದುರಿಸುವುದರಲ್ಲಿ ಊರಿಗೆ ಊರೇ ಕಾರ್ಯಪ್ರವೃತ್ತವಾಯಿತು. ಹಾಗಾಗಿ ವ್ಯವಸಾಯವು ಕುಂಠಿತಗೊಂಡಿತು, ವ್ಯಾಪರವು ಕಡಿಮೆಯಾಯಿತು, ಸಂಸ್ಕಾರಗಳತ್ತ ಗಮನವು ಸಹಜವಾಗಿಯೇ ಸ್ವಲ್ಪ ಕಡಿಮೆಯಾಯಿತು. ಆದರೂ ಸಹ ಊರಿನವರು ಸೋಲಲಿಲ್ಲ. ದರೋಡೆಕೋರರು ದೋಚುವುದನ್ನು ಮುಂದುವರೆಸಿದರು! ಊರಿನವರು ಹೊಸ ಹೊಸ ಸಂಪದಗಳನ್ನು ಸೃಷ್ಟಿಸುತ್ತಲೇ ಹೋದರು, ಅದರೊಂದಿಗೆ ತಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಬೇಕೆಂಬ ಊರಿನವರ ತವಕವೂ ಹೆಚ್ಚುತ್ತಲೇ ಹೋಯಿತು. ವಿಜ್ಞಾನದ ರತ್ನರಾಶಿಗಳು, ಸಾಂಸ್ಕೃತಿಕ ಸಸ್ಯಕ್ಷೇತ್ರಗಳು ತಮ್ಮ ಹಿರಿದಾದ ಸಂಪದ ಎನ್ನುವುದು ಊರಿನವರ ಮನಸ್ಸಿನಿಂದ ಮರೆಯಾಗಲಿಲ್ಲ! ಸ್ವಲ್ಪ ಕಾಲಕ್ಕೆ ಹೊಸ ಕಳ್ಳರು ಊರಿನ ಮೇಲೆ ಬಿದ್ದರು. ಈ ದರೋಡೆಕೋರರು ಬೆಳ್ಳಗಿನ ಮೋರೆಯವರು, ವಿಷತುಂಬಿದ ಕರ್ರಗಿನ ಹೃದಯಗಳವರು! ಸುಮ್ಮನೆ ದೋಚಿಕೊಂಡು ಹೋದರೆ ಏನು ಲಾಭ? ಈ ಸಂಪದದ ಮೇಲೆ ಊರಿನವರ ಧ್ಯಾಸವಿಲ್ಲದಂತೆ ಮಾಡಬೇಕು! ಇದು ಸಂಪತ್ತು, ಅಮೂಲ್ಯವಾದ ಭೌತಿಕ, ಧಾರ್ಮಿಕ, ಆಧ್ಯಾತ್ಮಿಕ ಸುವರ್ಣ ರತ್ನಗಳ ಸಮಾಹಾರ ಎನ್ನುವ ಜ್ಞಾನವು ಇವರಿಗೆ ಇಲ್ಲದಂತೆ ಮಾಡಬೇಕು! ಎಂದು ಆ ಹೊಸ ಕಳ್ಳರು ನಿರ್ಧರಿಸಿದರು. ಊರಿನ ತುಂಬಾ ಹೊಸ ವಿಧದ ಮದ್ಯದ ಬಟ್ಟಿಗಳನ್ನು ತೆರೆದರು. ರುಚಿಕರವಾದ ಮದ್ಯವನ್ನು ಊರಿನವರಿಗೆಲ್ಲಾ ಹಂಚಿದರು. ಆ ಮದ್ಯದ ಅಮಲೇರಿಸಿಕೊಂಡವರೆಲ್ಲಾ ತಮ್ಮ ಊರಿನ ಸಂಪದವನ್ನು ಮರೆತೇ ಹೋದರು! ಈಗ ಕಳ್ಳರು ಊರಿನೊಳಗೇ ಮಕಾಂ ಹೂಡಿದರು! ಊರಿನವರ ಮನಸ್ಸಿನಲ್ಲಿ ಆ ಕಳ್ಳರ ಪದ್ಧತಿಗಳು ಮನೆಮಾಡಿದವು! ಆ ಮದ್ಯವನ್ನು ಕುಡಿಯದ ಅತೀ ಕೆಲವು ಮಂದಿ ಮಾತ್ರ ತಮ್ಮ ಹೋರಾಟವನ್ನು ಮುಂದುವರೆಸಿದರು..... ಈ ಹೊಸ ಕಳ್ಳರ ನಾಯಕನೇ ಥಾಮಸ್ ಬಾಬಿಂಗ್ಟನ್ ಮೆಕಾಲೆ!
****
ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ.....
ಬಸವನುಳುಗಳ ತಿನ್ನುವ ಬೆಳ್ಳಕ್ಕಿಗೆ
ಮುತ್ತುಗಳಿರುವ ಮಾಲೆ ಬೇಕೇತಕೆ?
ಮದವೇರಿದ ಬುದ್ಧಿ ಜೀವಿಗಳಿಗೆ
ಮನಸ್ಸಾಕ್ಷಿಯ ಭಯವೇತಕೆ?
ಮದಿರೆಯನು ಸುಧೆಯೆಂದು ಭ್ರಮಿಪ
ನಿದಿರಿಸುವ ತಲೆಮಾರುಗಳಿಗೆ
ನಿದಿರೆಯಿಂ ಎಚ್ಚರಗೊಂಡರೂ
ನಿನ್ನೆಗಳ ಜ್ಞಾಪಿಸುವವೆ ಈ ತಲೆಮಾರಿಗೆ?
          "ಜನಗಣತಿ ಮಾಡುವಾಗ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ತೆಲುಗಿನಲ್ಲಿ ಸಹಿ ಮಾಡಬಲ್ಲವರೆಲ್ಲರೂ ಓದು ಬಲ್ಲವರೇ ಎಂದು ಅಂದುಕೊಂಡರೂ ಸಹ ತೆಲುಗರಲ್ಲಿ ಓದಿಕೊಂಡಿರುವವರು ಸಾವಿರಕ್ಕೆ ಕೇವಲ ೭೫ ಜನರು ಮಾತ್ರ, ಇದರರ್ಥ ಸಾವಿರದಲ್ಲಿ ೯೨೫ ಜನ ತೆಲುಗಿನಲ್ಲಿ ಸಹಿಯನ್ನೂ ಮಾಡಲಾಗದವರು! ಒಂದು ಪೋಸ್ಟ್ ಕಾರ್ಡಿನ ಮೇಲೆ ಸಣ್ಣ ಪತ್ರವನ್ನೂ ಬರೆಯಲಾಗದವರು, "ರೈಲ್ವೆ ಟಿಕೇಟ್" ಮೇಲೆ ಯಾವ ಊರಿನ ಹೆಸರು ಬರೆದಿದೆ ಎಂದು ಓದಲಾಗದವರು ಸಾವಿರಕ್ಕೆ ೯೨೫ ಮಂದಿ ಇರುವಾಗ ತೆಲುಗು ಜನಾಂಗದವರು ನಾಗರೀಕರೆಂದು ಹೇಳಲು ನಾಲಿಗೆ ಹೊರಳುತ್ತದೆಯೇ? ಯೂರೋಪು ಖಂಡದಲ್ಲಿ ಇಂದು "ನ್ಯೂಸ್ ಪೇಪರ್" ಓದಲಾರದವರನ್ನು ಕಾಡಿನಲ್ಲಿ ವಾಸಿಸುವ ಅನಾಗರೀಕ ಕಿರಾತರನ್ನಾಗಿ ಕಾಣುತ್ತಾರೆ. ಅಷ್ಟರವರೆಗೆ ಆ ದೇಶಗಳಲ್ಲಿ ಓದುವುದು, ಬರೆಯುವುದು ಸರ್ವೇಸಾಮಾನ್ಯವಾಗಿದೆ" ಎಂದು ರಾವ್ ಸಾಹೇಬ್ ಶ್ರೀ ಗಿಡುಗು ರಾಮಮೂರ್ತಿ ಪಂತುಲು ಅವರು ಕ್ರಿ.ಶ. ೧೯೧೩ರಲ್ಲಿ ಬರೆದಿದ್ದಾರೆ. (ಇದು ತೆಲುಗು ಮಾತನಾಡುವವರ ಕುರಿತು ಅವರು ಹೇಳಿದ್ದರೂ ಸಹ ಸ್ವಲ್ಪ ಹೆಚ್ಚೂ ಕಡಿಮೆ ಇದೇ ಪರಿಸ್ಥಿತಿ ದೇಶದ ಇತರ ಭಾಗಗಳಲ್ಲೂ ಆ ಕಾಲಕ್ಕೆ ಇತ್ತು. ಬಹುಶಃ ಮೈಸೂರು ಸಂಸ್ಥಾನ ಇದಕ್ಕೆ ಹೊರತಾಗಿರಬಹುದು). ’ನೇಟಿ ತೇಟ ತೆಲುಗು - ಇಂದಿನ ಅಚ್ಚ ತೆಲುಗು’ ಎನ್ನುವ ಆ ಲೇಖನದಲ್ಲಿ ಅವರು ಬ್ರಿಟಿಷ್ ಆಳರಸರನ್ನು ಪ್ರಶಂಸಿಸಿದ್ದಾರೆ. ಗಿಡುಗು ಅವರು ಮಹಾನ್ ಭಾಷಾ ಉದ್ಯಮಕಾರರು (ಚಳವಳಿಗಾರರು), ಸಂಸ್ಕೃತ ಭಾಷೆಯ ಹಿಡಿತದಿಂದ ತೆಲುಗು ಭಾಷೆಯ ಪ್ರಭಾವವನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ಅಚ್ಚ ತೆಲುಗು ಭಾಷೆಯನ್ನಾಗಿ (ತೇಟ ತೆಲುಗುಗಾ) ತಿದ್ದಿತೀಡಲು, ಸಾಹಿತ್ಯಕ (ಗ್ರಾಂಥಿಕ) ಭಾಷೆಯನ್ನು ತೊಲಗಿಸಿ ವ್ಯವಹಾರ ಭಾಷೆಯನ್ನು ಅಕ್ಷರಬದ್ಧವನ್ನಾಗಿಸಲು ಕಂಕಣತೊಟ್ಟ ಮಹನೀಯರು. ’ಸವರ’ ಎನ್ನುವ ವನವಾಸಿ ಜನಾಂಗದ ಭಾಷೆಯನ್ನು ಪ್ರಚಾರ ಮಾಡಿದ ಮಹಾನ್ ಪರಿಶೋಧಕರು! ಆದರೆ ಇಂತಹವರೆಲ್ಲಾ ಕೀಳರಿಮೆಗೆ ಗುರಿಯಾಗಿ, ಯೂರೋಪಿಯನ್ನರ ದೊಡ್ಡಸ್ತಿಕಯನ್ನು ಮತ್ತು ಭಾರತೀಯರ ಅಲ್ಪತನವನ್ನು ಕುರಿತು ಮೆಕಾಲೆ ವಿದ್ಯಾವಿಧಾನವು ಪ್ರಚಾರ ಮಾಡಿದ ಅಬದ್ಧಗಳನ್ನೆಲ್ಲಾ ಸತ್ಯವೆಂದು ಭ್ರಮಿಸಿ ಅದನ್ನು ನಂಬಿದವರು! ಆಂಗ್ಲರ ಆಡಳಿತವು ಬಂದ ನಂತರವಷ್ಟೆ ಜನಸಾಮಾನ್ಯರಿಗೆಲ್ಲಾ ವಿದ್ಯೆಯು ಕೈಗೆಟುಕುವಂತಾಯಿತೆಂದೂ ಗಿಡುಗು ತರಹದವರು ಗುಡುಗಿನಂತೆ ಪ್ರಚಾರ ಮಾಡಿದರು. "ಈಶ್ವರಾನುಗ್ರಹ"ದಿಂದಲೇ ನಮ್ಮ ದೇಶಕ್ಕೆ ಪರಂಗಿಗಳ ಪರಿಪಾಲನೆ ಪ್ರಾಪ್ತವಾಯಿತೆಂದು ನಂಬಿದ ಶ್ರೀ ವೀರೇಶಲಿಂಗಂ ತರಹದ ಮಹನೀಯರೂ ಇದ್ದಾರೆ. ಇವರೆಲ್ಲಾ ಜೀವಿಸಿದ್ದ ಕಾಲವು ಕ್ರಿ.ಶ. ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧ, ಅಷ್ಟೊತ್ತಿಗಾಗಲೇ ಮೆಕಾಲೆ ಬೃಂದದ ವಿಷದ ಅಮಲು ತನ್ನ ಪ್ರಭಾವವನ್ನು ತೋರಿಸಲಾರಂಭಿಸಿತ್ತು. ಅಚ್ಚ ತೆಲುಗಿನಲ್ಲಿ ಗಿಡುಗು ತರಹದವರು, ಅವರಿಂದ ಪ್ರಭಾವಿತರಾದ ’ಭಾವಸಾಮ್ಯಸಿದ್ದಾಂತವೇತ್ತರು’ ಆಂಗ್ಲ ಪದಗಳನ್ನು ಪುಂಖಾನು ಪುಂಖವಾಗಿ ಸೇರಿಸಲಾರಂಭಿಸಿದರು. "ಇಂಡಿಯಾ ಗವರ್ನಮೆಂಟು" ಎನ್ನುವ ಪದಗಳಿಗೂ ಸಹ ಪಾಪ ಈ ತೆಲುಗು ಪಂಡಿತರಿಗೆ ಅಚ್ಚ ತೆಲುಗು ಪದಗಳು ಸಿಗಲಿಲ್ಲವಂತೆ!
         ದೇಶದಲ್ಲಿ ಅಂದು ಇದ್ದಂತಹ ಘನ ವಿದ್ವಾಂಸರೆಲ್ಲರೂ ಹೀಗೆ ಪಾಶ್ಚಾತ್ಯರ ಭಾವದಾಸ್ಯಕ್ಕೊಳಗಾಗಿ ಅದನ್ನು ವೈಭವೀಕರಿಸುತ್ತಿದ್ದ ಸಮಯದಲ್ಲಿ ದಿವಾನ್ ಬಹಾದ್ದೂರ್ ಹರವಿಲಾಸ ಸಾರದರು ಎನ್ನುವ ವಿದ್ವಾಂಸ, ರಾಜಕೀಯ ಮುತ್ಸದ್ಧಿ ಹಾಗು ಚರಿತ್ರಕಾರರು, "ಹಿಂದು ಸುಪೀರಿಯಾರಿಟಿ - ಹಿಂದೂ ಔನತ್ಯ" ಎನ್ನುವ ಆಂಗ್ಲ ಗ್ರಂಥವನ್ನು ರಚಿಸಿದರು. ಅದು ೧೯೦೬ ಸುಮಾರಿನಲ್ಲಿ ಅಚ್ಚಾಯಿತು. ಆ ಪುಸ್ತಕದಲ್ಲಿ ಪ್ರಾಚೀನ ಭಾರತದಲ್ಲಿ ಪ್ರಚಲಿತವಿದ್ದ ವಿದ್ಯೆಗಳು ಹಾಗು ಅವು ಹೇಗೆ ಜನಸಾಮನ್ಯರಲ್ಲಿಯೂ ವ್ಯಾಪಿಸಿದ್ದವು ಎನ್ನುವ ಸತ್ಯಸಂಗತಿಗಳನ್ನು ವಿವರಿಸಲಾಗಿದೆ. ಅಲೆಗ್ಜಾಂಡರ್ ಎನ್ನುವ ’ವಿಶ್ವವಿಜೇತ(?)’ ನಮ್ಮ ದೇಶಕ್ಕೆ ಲಗ್ಗೆ ಇಡುವುದಕ್ಕೆ ಮೊದಲೇ ಗ್ರೀಕರು ಹಾಗು ಇತರೇ ಮ್ಲೇಚ್ಛ ಜನಾಂಗಗಳು ನಮ್ಮ ದೇಶವನ್ನು ಕೊಳ್ಳೆ ಹೊಡೆಯಲು ಬರುತ್ತಲೇ ಇದ್ದರು. ಹಾಗೆ ಬಂದ ಅಸಿರಿಯನ್ ಸೆಮಿರೆಮಿಸ್ ಎನ್ನುವ ಮ್ಲೇಚ್ಛ ಸೈನಿಕರ ದಳವೊಂದಕ್ಕೆ ತಕ್ಷಶಿಲಾ ವಿಶ್ವವಿದ್ಯಾಲಯ ಪ್ರಾಂಗಣದಲ್ಲಿ* ಎದುರಾದ ಒಂದು ಅನುಭವದ ಕುರಿತು ಸ್ವತಃ ಗ್ರೀಕರೇ ತಮ್ಮ ಗ್ರಂಥಗಳಲ್ಲಿ ಬರೆದುಕೊಂಡಿದ್ದಾರೆ. ಈ ವಿಷಯವನ್ನು ತಮ್ಮ ‘ಹಿಂದೂ ಔನ್ಯತ್ಯ’ ಗ್ರಂಥದಲ್ಲಿ ಶ್ರೀಯುತ ಹರವಿಲಾಸರು ಉಲ್ಲೇಖಿಸಿದ್ದಾರೆ. ಅವರು ಹೇಳಿರುವ ಪ್ರಕಾರ ಮ್ಲೇಚ್ಛರ ಸೈನ್ಯವು ತಕ್ಷಶಿಲಾ ವಿಶ್ವವಿದ್ಯಾಲಯದ ಪ್ರಾಂಗಣದ ಹತ್ತಿರ ಬಂದಾಗ ಆ ಪ್ರಾಂಗಣವು ಪ್ರಶಾಂತವಾಗಿರುವಂತೆ ಕಂಡು ಬಂದಿತು. ಅಲ್ಲಿನ ವಿದ್ಯಾರ್ಥಿಗಳಾಗಲಿ, ಆಚಾರ್ಯರುಗಳಾಗಲಿ ಅಥವಾ ಆ ಪ್ರಾಂಗಣದಲ್ಲಿ ನಿವಸಿಸುತ್ತಿದ್ದ ಋಷಿ, ಮುನಿಗಳಾಗಲಿ ಮ್ಲೇಚ್ಛ ಸೈನಿಕರನ್ನು ನೋಡಿ ತಲೆಕಡಿಸಿಕೊಳ್ಳಲಿಲ್ಲ. ಮ್ಲೇಚ್ಛ ಸೈನಿಕರು ಆ ವಿಶ್ವವಿದ್ಯಾಲಯದ ಪ್ರಾಂಗಣವನ್ನು ಒಳಹೊಕ್ಕು ವಿಧ್ವಂಸಕ ಕೃತಗಳನ್ನು ಆರಂಭಿಸಿದರೋ ಇಲ್ಲವೋ, ಅಷ್ಟರಲ್ಲಿ ಅದೆಲ್ಲಿಂದಲೋ ಇದ್ದಕ್ಕಿದ್ದಂತೆ ಆ ಸೈನಿಕರ ಮೇಲೆ ಅಗ್ನಿವರ್ಷವಾಯಿತು, ಸಿಡಿಲು, ಗುಡುಗುಗಳು ಒಮ್ಮೆಲೇ ಅವರ ಮೇಲೆ ಎರಗಿದವು. ಮ್ಲೇಚ್ಛ ಸೈನಿಕರು ಅದರಲ್ಲಿ ಸುಟ್ಟು ಕರಕಲಾದರು, ಬದುಕುಳಿದವರು ಪಶ್ಚಿಮ ದಿಕ್ಕಿಗನೆಡೆಗೆ ಪಲಾಯನಗೈದರು. ನಿರಾಯುಧರಾಗಿ ಕಂಡು ಬಂದ ವಿದ್ಯಾರ್ಥಿಗಳು, ವಿದ್ವಾಂಸರು, ಈ ವಿದ್ಯೆಯನ್ನು ಯಾವ ವಿಧವಾಗಿ ರೂಪಿಸಿದ್ದರು, ಎನ್ನುವುದು ಸೋಜಿಗದ ಸಂಗತಿಯಲ್ಲವೇ? ಗಿಡುಗು ಪಂಡಿತರ ಕಾಲಕ್ಕೆ ಇಂತಹ ವಿದ್ಯೆಗಳೆಲ್ಲಾ ವಿದ್ಯೆಗಳಲ್ಲದೇ ಹೋಗಿದ್ದವು! (*ಹಿಂದೂ ಸುಪೀರಿಯಾರಿಟಿ ಪುಸ್ತಕದಲ್ಲಿ ಈ ಘಟನೆಯು ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಜರುಗಿದ್ದೆನ್ನುವುದರ ಕುರಿತ ಪ್ರಸ್ತಾಪವಿಲ್ಲ, ಆದರೆ ಮೂಲ ಲೇಖಕರು ಇತರೇ ಗ್ರಂಥಗಳ ಆಧಾರದ ಮೇಲೆ ಅದು ತಕ್ಷಶಿಲಾ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಜರುಗಿರಬಹುದೆಂದು ನಿರ್ಧರಿಸಿರುತ್ತಾರೆ)
         ಸಿರಿಯಾ ದೇಶದಲ್ಲಿರುವ ಡಮಾಸ್ಕಸ್ ಪಟ್ಟಣವು ಕ್ರಿ.ಪೂ. ಎಂಟನೇ ಶತಮಾನಕ್ಕಾಗಲೇ ವಿಶ್ವವಿಖ್ಯಾತವಾದ ವಾಣಿಜ್ಯ ಕೇಂದ್ರವಾಗಿತ್ತಂತೆ. ಅತ್ಯಂತ ಶ್ರೇಷ್ಠವಾದ ಉಕ್ಕು ಆ ವಾಣಿಜ್ಯ ಕೇಂದ್ರದಿಂದ ವಿವಿಧ ದೇಶಗಳಿಗೆ ಸರಬರಾಜುಗುತ್ತಿತ್ತಂತೆ. ಹಾಗಾಗಿ ಡಮಾಸ್ಕಸ್ ಉಕ್ಕು ಹೆಸರುವಾಸಿಯಾಗಿತ್ತು. ಆ ಡಮಾಸ್ಕಸ್ ಉಕ್ಕು ವಾಸ್ತವವಾಗಿ ತಯಾರಾಗುತ್ತಿದ್ದದ್ದು ನಮ್ಮ ದೇಶದಲ್ಲೇ. ದೇಶದಲ್ಲೆಲ್ಲಾ ಹರಡಿದ್ದ ಕಮ್ಮಾರರ ಕುಲುಮೆಗಳಲ್ಲಿ ಈ ವಿಶಿಷ್ಠವಾದ ಉಕ್ಕು ತಯಾರಾಗುತ್ತಿತ್ತು*.  (*ರಂಧ್ರಗಳುಳ್ಳ ಕಬ್ಬಿಣದ ಅದಿರನ್ನು ಹೊಟ್ಟು ಅಥವಾ ಇದ್ದಿಲಿನ ಮಿಶ್ರಣದೊಂದಿಗೆ  ಮೂಸೆಗಳಲ್ಲಿ ಕುದಿಸುವುದರ ಮೂಲಕ ಕಬ್ಬಿಣದಲ್ಲಿನ ಇಂಗಾಲದ ಅಂಶವು ಹೆಚ್ಚಾಗುವಂತೆ ಮಾಡುವ ಕೌಶಲ್ಯವು ನಮ್ಮ ಭಾರತೀಯರಿಗೆ ತಿಳಿದಿತ್ತು. ಇದನ್ನು ’ವೂಟ್ಜ್’ ಎಂದು ಪಾಶ್ಚಾತ್ಯರು ಕರೆಯುತ್ತಿದ್ದರು. ಈ ವೂಟ್ಜ್‌ನಿಂದ ತಯಾರಾದ ಉಕ್ಕಿನ ಕತ್ತಿಗಳು ಎಷ್ಟು ಉತ್ಕೃಷ್ಟವಾಗಿದ್ದವೆಂದರೆ, ಅವು ತೆಳುವಾದ ಕೋಳಿಯ ಪುಕ್ಕವನ್ನು ಗಾಳಿಯಲ್ಲಿ ತುಂಡರಿಸುವಷ್ಟು ಮತ್ತು ಖಡ್ಗಗಳು ಗಾಳಿಯಲ್ಲಿ ಹಾರಿಬಿಟ್ಟ ರೇಷ್ಮೆಯ ವಸ್ತ್ರವನ್ನು ಕತ್ತರಿಸುವಷ್ಟು ಸೂಕ್ಷ್ಮ ಮತ್ತು ಹರಿತವಾಗಿರುತ್ತಿದ್ದವಂತೆ. ಇನ್ನಷ್ಟು ವಿವರಗಳಿಗೆ ಆಸಕ್ತರು, ಈ ಕೊಂಡಿಯನ್ನು ನೋಡಬಹುದು http://www.nytimes.com/1981/09/29/science/the-mystery-of-damascus-steel-appears solved.html). ಉದ್ಯಮಗಳ ಅಥವಾ ಪರಿಶ್ರಮಗಳ ವಿಕೇಂದ್ರೀಕರಣಕ್ಕೆ ಅಂದಿನ ಉಕ್ಕಿನ ಕುಲಮೆಗಳೇ ಸಾಕ್ಷಿಯಾಗಿದ್ದವು. ಇಂತಹ ಉತ್ಕೃಷ್ಟವಾದ ಉಕ್ಕನ್ನು ತಯಾರು ಮಾಡುತ್ತಿದ್ದವರು ವಿದ್ಯಾವಂತರಲ್ಲವೇ? ಒಬ್ಬೊಬ್ಬ ಕಮ್ಮಾರನೂ ಸಹ ಆಧುನಿಕ ಆಂಗ್ಲ ಪರಿಭಾಷೆಯಲ್ಲಿ ಒಬ್ಬೊಬ್ಬ ಸೈಂಟಿಷ್ಟ್! ಆದರೆ ಅವರಿಗೆ ಸಹಿ ಹಾಕಲು ಬರುತ್ತಿರಲಿಲ್ಲ! ಆದ್ದರಿಂದ ಅವರು ವಿದ್ಯಾವಂತರಲ್ಲವೆಂದು ಬ್ರಿಟಿಷರು, ಆಮೇಲಾಮೇಲೆ ಗಿಡುಗು ರಾಮಮೂರ್ತಿಯವರಂತಹ ಮೆಕಾಲೆ ಪಂಡಿತರು ತೀರ್ಮಾನಿಸಿದ್ದಾರೆ!
          ಭಾರತೀಯ ವಿದ್ಯೆಗಳ ಮಹತ್ವವನ್ನು ಅರಿಯದ ಮೆಕಾಲೆ ಪಂಡಿತರು, ತಿಳಿದಿದ್ದರೂ ಸಹ ನಮ್ಮ ವಿದ್ಯೆಗಳನ್ನು ನಾಶಮಾಡ ಹೊರಟ ಬ್ರಿಟಿಷರು ನಮ್ಮ ಕಥೆಯನ್ನು ನಡೆಸಿದರು, ನಡೆಸುತ್ತಿದ್ದಾರೆ. ಒಂದು ಹಂಸವು ದೇಶ ಸಂಚಾರ ಮಾಡುತ್ತಾ  ಇದ್ದಾಗ ಒಂದು ಕೆರೆಯ ಬಳಿಯಿದ್ದ ಕೆಲವು ಬೆಳ್ಳಕ್ಕಿಗಳು (ಕೊಕ್ಕರೆ) ಅದನ್ನು ಅಸಕ್ತಿಕರವಾಗಿ ನೋಡಿದವು. ಹಂಸವು ಈ ಕೆರೆಯಿರುವ ಪ್ರದೇಶಕ್ಕೆ ಹೊಸತು, ಹಾಗಾಗಿ ಅದನ್ನು ನಿಲ್ಲಿಸಿ ಬೆಳ್ಳಕ್ಕಿಗಳು ಅದನ್ನು ನಾನಾ ವಿಧವಾದ ಪ್ರಶ್ನೆಗಳನ್ನು ಕೇಳಲುಪಕ್ರಿಮಿಸಿದವು.
          ನಿನ್ನ ಮುಖ ಮತ್ತು ಕಾಲುಗಳು ಕೆಂಪಗಿವೆಯಲ್ಲಾ, ಯಾರಯ್ಯಾ ನೀನು? ಎಂದು ಹಂಸ ಪಕ್ಷಿಯನ್ನು ಆ ಬೆಳ್ಳಕ್ಕಿಗಳು ಪ್ರಶ್ನಿಸಿದವು.
          "ನಾನು ಹಂಸ"
          "ನೀನು ಎಲ್ಲಿ ವಾಸಿಸುತ್ತೀಯಾ?"
          "ಇಲ್ಲಿಂದ ಬಹಳ ದೂರ ಮಾನಸ ಸರೋವರದ ಹತ್ತಿರ ಇರುತ್ತೇನೆ"
          "ಅಲ್ಲಿನ ವಿಶೇಷಗಳೇನು?"
          "ಅಲ್ಲಿ ಮನಮೋಹಕವಾದ ಸುವರ್ಣಕಾಂತಿಯ ತಾವರೆ ಹೂವುಗಳಿವೆ, ನಯನ ಮನೋಹರವಾದ ಮುತ್ತುಗಳಿವೆ!"
          ಆ ಕೊಕ್ಕರೆಗಳಿಗೆ ಇವೆಲ್ಲಾ ಏನೂ ತಿಳಿಯದು, ಅದಕ್ಕಾಗಿ ಅವು ತಮಗೆ ತಿಳಿದ ವಿಷಯಗಳ ಕುರಿತು ಹಂಸವನ್ನು ಪ್ರಶ್ನಿಸಿದವು.
          "ಅಲ್ಲಿ ಬಸವನ ಹುಳುಗಳಿವೆಯೇ?"
          "ಬಸವನ ಹುಳುವೆಂದರೆ ಏನೋ ನಮಗೆ ತಿಳಿಯದು" ಎಂದಿತು ಹಂಸ.
          "ಹ್ಹ...ಹ್ಞ್....ಹ್ಞಾ! ಏನು ಬಸವನ ಹುಳು ಎಂದರೆ ಏನೆಂದು ಗೊತ್ತಿಲ್ಲವೇ?" ಎಂದು ಆ ಬೆಳ್ಳಕ್ಕಿಗಳು ನಗುತ್ತಾ ಆ ಹಂಸವನ್ನು ಪರಿಹಾಸ್ಯ ಮಾಡಿದವು.
          ಬ್ರಿಟಿಷರು ತಮಗೆ ತಿಳಿದದ್ದು ಮಾತ್ರವೇ ವಿದ್ಯೆ ಎಂದು ಭಾವಿಸಿದರು, ಆ ಕರೆಯ ಬೆಳ್ಳಕ್ಕಿಗಳಂತೆ ತಮಗೆ ತಿಳಿಯದ ವಿದ್ಯೆಗಳನ್ನು ಕುರಿತು ಕುಹಕವಾಡಿದರು. ಬ್ರಿಟಿಷರು ಅಂಗೀಕರಿಸಿದ್ದೇ ವಿದ್ಯೆ ಎಂದೂ, ಅವರು ಒಪ್ಪಿಕೊಳ್ಳದೇ ಇರುವುದೆಲ್ಲವೂ ಮೂಢ, ಅನಾಗರೀಕ ಪದ್ಧತಿಗಳೆಂದು ನಮ್ಮ ಮೇಧಾವಿಗಳು ಭಾವಿಸುವುದಕ್ಕೆ ಮೊದಲು ಮಾಡಿದರು. ಅವರು ಅಷ್ಟಕ್ಕೇ ನಿಲ್ಲದೆ, "ವಿದ್ಯೆಗಳು ಕೂಡಾ ಎಲ್ಲಾ ಕಾಲದಲ್ಲಿಯೂ ಒಂದೇ ವಿಧವಾಗಿ ಇರುವುದಿಲ್ಲ.... ಈಗಿನ ಸಿವಿಲ್ ಹಾಗು ಕ್ರಿಮಿನಲ್ ಕೋರ್ಟುಗಳಲ್ಲಿ ಹಿಂದಿನ ಸ್ಮೃತಿಗಳು ಕೆಲಸಕ್ಕೆ ಬರುವುದಿಲ್ಲ" ಎಂದೂ ಸಹ ಗಿಡುಗು ರಾಮಮೂರ್ತಿ ಪಂಡಿತರು ತಮ್ಮ ಲೇಖನಗಳಲ್ಲಿ ಖಂಡಿಸಿದ್ದಾರೆ. ಕಾಲಕ್ಕೆ ತಕ್ಕ ಹಾಗೆ ಆಗಬೇಕಾದ ಬದಲಾವಣೆಗಳಿಗೆ ನಾಗರೀಕ ಸಮಾಜ ಸಹಜವಾಗಿಯೇ ತನ್ನ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳುತ್ತದೆ. ಆ ವಿಧವಾದ ಬದಲಾವಣೆಗಳು ಬೇರೆ ಏಕೆಂದರೆ ಅವು ಸಾಮಾಜಿಕ ಅವಶ್ಯಕತೆಗಳು. ಆ ಬದಲಾವಣೆಗಳಿಂದ ಆಯಾ ದೇಶಗಳ ಸಾಮಾಜಿಕ ಸಿದ್ಧಾಂತಗಳಲ್ಲಿ, ಜೀವನ ಮೌಲ್ಯಗಳಲ್ಲಿ ಬದಲಾವಣೆಯುಂಟಾಗದು. ನೈತಿಕ ಮೌಲ್ಯ ಹೊಂದಿದ ಜೀವನ ಪದ್ಧತಿಗಳು ಭಾವದಾಸ್ಯಕ್ಕೆ ಸಿಲುಕುವುದಿಲ್ಲ. ಆದರೆ ವಿದೇಶೀಯರು, ದುರುದ್ದೇಶದಿಂದ ಸ್ವದೇಶೀಯ ಸಾಮಾಜಿಕ, ಧಾರ್ಮಿಕ, ವಿದ್ಯಾ ಸಾಂಸ್ಕೃತಿಕ ವ್ಯವಸ್ಥೆಗಳನ್ನು ವಿಕೃತಗೊಳಿಸಲು ಹೇರುವ ಬದಲಾವಣೆಗಳಿಂದ ಸ್ವದೇಶೀಯ ತತ್ತ್ವ, ಸಿದ್ಧಾಂತಗಳು, ಜೀವನದ ನೈತಿಕ ಮೌಲ್ಯಗಳು, ಭಾವದಾಸ್ಯಗ್ರಸ್ತವಾಗುತ್ತವೆ. ಭಾರತೀಯರ ಉದಾತ್ತವಾದ ಚಿಂತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಮೆಕಾಲೆ ವಿದ್ಯಾವಿಧಾನವು ಪ್ರಮುಖ ಪಾತ್ರ ವಹಿಸಿತು. ಹಿಂದೂಗಳನ್ನು ಕ್ರೈಸ್ತರನ್ನಾಗಿಸುವ ದಿಶೆಯಲ್ಲಿ ಮಿಷಿನರಿಗಳು ಕೈಗೊಂಡ ಪ್ರಯತ್ನಗಳಿಗೆ ಆ ದಿನಗಳಲ್ಲಿ ಪ್ರತಿರೋಧವು ಎದುರಾಯಿತು,  ಅದಕ್ಕಿದ್ದ ಪ್ರಧಾನ ಕಾರಣ ಹಿಂದುತ್ವದ ಸ್ಪೃಹೆ. ಆ ಸ್ಪೃಹೆಯನ್ನು ನಿರ್ಮೂಲಿಸುವುದಕ್ಕಾಗಿಯೇ ಮೆಕಾಲೆ ಕುಟಿಲ ಯೋಜನೆಯನ್ನು ರೂಪಿಸಿದ. ಇಂದಿನ ಕೋರ್ಟುಗಳಲ್ಲಿ ಪೂರ್ವದಲ್ಲಿದ್ದ ಸ್ಮೃತಿಗಳನ್ನು (ನ್ಯಾಯ ವ್ಯವಸ್ಥೆಗಳು) ಬ್ರಿಟೀಷರು ಉದ್ದೇಶಪೂರ್ವಕವಾಗಿ ಕೆಲಸಕ್ಕೆ ಬಾರದಂತೆ ಮಾಡಿದರು! ಅಷ್ಟೇ ಹೊರತು ಭಾರತೀಯ ಪುರಾತನ ಸ್ಮೃತಿಗಳು ತಮ್ಮಷ್ಟಕ್ಕೆ ತಾವೇ ಕೆಲಸಕ್ಕೆ ಬಾರದಂತೆ ಹಾಳಾಗಲಿಲ್ಲ. ಅಂದಿನವರೆಗೂ ಇದ್ದ ನ್ಯಾಯ ವ್ಯವಸ್ಥೆಯನ್ನು, ನ್ಯಾಯಾಧೀಶರ ವ್ಯವಸ್ಥೆಯನ್ನು ಆಂಗ್ಲ ಆಡಳಿತಾರೂಢರು ತೊಲಗಿಸಿದರು ಮತ್ತದರ ಜಾಗದಲ್ಲಿ ಹೊಸವನ್ನು ಜಾರಿಗೆ ತಂದರು.
ಕೋರ್ಟುಗಳನು ಕಟ್ಟಿಸಿ,
ಪಾರ್ಟಿಗಳನು ಹುಟ್ಟಿಸಿ,
ಸ್ನೇಹಭಾವವನು ಸಂಹರಿಸಿ
ದ್ರವ್ಯದಾಹವನು ಉಲ್ಬಣಿಸಿ,
ತಿನ್ನುವಾಹಾರವನು ಕಸಿದು,
"                       "ಆಹಾ" ಎನುವಂತೆ ಮಾಡಿಹನು,
ಇದೇ ನಮ್ಮ ಪರಂಗಿ ದೊರೆತನವು ದೇವಾ!
ಇದೇ ನಮ್ಮ ಪರಂಗಿ ಸಿರಿತನವು"
          ಈ ವಿಧವಾಗಿ ಆ ಕಾಲದ ತೆಲುಗು ಕವಿ ಗರಿಮೆಳ್ಳ ಸತ್ಯನಾರಾಯಣ ಅವರು ಬದಲಾದ ವಿದ್ಯಾವಿಧಾನಗಳು, ಜೀವನದ ರೀತಿ ನೀತಿಗಳು, ತಾತ್ತ್ವಿಕ ಮೌಲ್ಯಗಳ ಕುರಿತು ವ್ಯಥೆಪಟ್ಟುಕೊಂಡಿದ್ದಾರೆ.
       ಸಹಿ ಮಾಡಲು ಬಾರದ ಗ್ರಾಮೀಣರು ಮಹಾಭಾರತದಲ್ಲಿನ ಪದ್ಯಗಳನ್ನು ಕಂಠಸ್ಥ ಮಾಡಿ ಹಾಡಬಲ್ಲವರಾಗಿದ್ದರು, ಅಕ್ಷರಗಳನ್ನು ತಿದ್ದದ ಜನಪದರು ಅಕ್ಷಯ ಭಾವಗಳನ್ನು ಪದ್ಯಗಳಾಗಿಸಿ ಹಾಡಬಲ್ಲವರಾಗಿದ್ದರು, ವೇದ ಪಂಡಿತರು ಮಂತ್ರಗಳನ್ನು ಕಲಿತು ಪ್ರಚಾರ ಮಾಡಿದ ಸಂಸ್ಕಾರಗಳನ್ನೇ ’ಏತ’ದಿಂದ (ಕಪಿಲೆ) ನೀರುಣಿಸಿ ಕೃಷಿ ಮಾಡುತ್ತಿದ್ದ ರೈತನೂ ಸಹ ಪದಗಳಲ್ಲಿ ಹಾಡಬಲ್ಲವನಾಗಿದ್ದ. ಇಬ್ಬರಿಗೂ ಸಹಿ ಮಾಡಲು ಬರುತ್ತಿದ್ದಿಲ್ಲ, ಆದರೆ ಭಾರತೀಯ ವಿದ್ಯೆಗಳು ಸಂಸ್ಕಾರವಾಹಕಗಳಾಗಿದ್ದವು! ಗಮನಿಸಬೇಕಾದಂತಹ ಇನ್ನೊಂದು ಸಂಗತಿಯೂ ಇದೆ, ಅದೇನೆಂದರೆ ಬ್ರಿಟಿಷರು ನಮ್ಮ ದೇಶದಲ್ಲಿ ಕಾಲಿಡುವುದಕ್ಕೆ ಮುಂಚೆ, ಹಸ್ತಾಕ್ಷರವನ್ನು ಹಾಕಬಲ್ಲವರ ಸಂಖ್ಯೆಯೂ ಸಹ ಅಧಿಕವಾಗಿಯೇ ಇತ್ತು! ಅವರು ಕಾಲಿಟ್ಟ ನೂರಾ ಐವತ್ತು ವರ್ಷಗಳ ನಂತರವಷ್ಟೇ ಗಿಡುಗು ಪಂಡಿತರು ಗುಡುಗಿದಂತಹ ಪರಿಸ್ಥಿತಿಯೇರ್ಪಟ್ಟದ್ದು. ರಾಷ್ಟ್ರೀಯ ಸ್ಪೃಹೆಯನ್ನು ಮರೆತವರು ದುಃಸ್ಥಿತಿಯನ್ನೇ ವಾಸ್ತವವೆಂದು ಭಾವಿಸಿದರು.....!
                            *****
        ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹತ್ತನೆಯ ಕಂತು, ’ಸ್ವಜಾತೀಯ ಸ್ಮೃತಿ ಸನ್ನಗಿಲ್ಲಿಪೋಯಿಂದಿ - ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ.....
   ಈ ಸರಣಿಯ ಒಂಬತ್ತನೆಯ ಲೇಖನಕ್ಕೆ "ಧರ್ಮಬುದ್ಧಿಗೆ ತೊಡಕಾಗಿರುವ ಭಾವ ದಾಸ್ಯ (ಮಾನಸಿಕ ಗುಲಾಮಿತನ)......" ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AF-%E0%B2%AE...
 

Rating
No votes yet

Comments

Submitted by makara Tue, 11/01/2016 - 21:26

ಮೆಕಾಲೆ ವಿದ್ಯಾವಿಧಾನ ಸರಣಿಯ ಈ ಕಂತನ್ನೂ ಸಹ ವಾರದ ವಿಶೇಷ ಲೇಖನವನ್ನಾಗಿ ಆಯ್ಕೆ ಮಾಡಿರುವುದಕ್ಕಾಗಿ ಸಂಪದದ ಆಡಳಿತ ಮಂಡಳಿ ಹಾಗು ಹರಿಪ್ರಸಾದ್ ನಾಡಿಗರಿಗೆ ನಾನು ಚಿರ‍ಋಣಿ. ಎಂದಿನಂತೆ ಈ ಲೇಖನವೂ ಶತಕ ಹಿಟ್‌ಗಳನ್ನು ದಾಟಿ ನನ್ನನ್ನು ಮುಂದಿನ ಲೇಖನವನ್ನು ಬರೆಯಲು ಪ್ರೋತ್ಸಾಹಿಸುತ್ತಿರುವ ಸಂಪದದ ವಾಚಕರ ಬಳಗಕ್ಕೂ ಧನ್ಯವಾದಗಳು. ಸಮಸ್ತ ಸಂಪದಿಗರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ವಂದನೆಗಳೊಂದಿಗೆ ಶ್ರೀಧರ್ ಬಂಡ್ರಿ. ಆಸಕ್ತರು ಮುಂದಿನ ಲೇಖಕ್ಕೆ ಈ ಕೊಂಡಿಯನ್ನು ನೋಡಬಹುದು.
https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A7-...