ಭಾಗ ೧೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!

ಭಾಗ ೧೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!

ಚಿತ್ರ

ಶ್ರೀ ಕೋಟ ವೆಂಕಟಾಚಲಂ ಚಿತ್ರಕೃಪೆ: ಗೂಗಲ್
          ಕನ್ನಡ, ಆಂಧ್ರ, ತಮಿಳು, ಮಹಾರಾಷ್ಟ ಮತ್ತು ಗುಜರಾತಿನ ಜನಸಮುದಾಯಗಳಿಗೆ ಪಂಚ ದ್ರಾವಿಡಗಳೆಂದು ಹೆಸರು. ಇದು ಕೇವಲ ಪ್ರಾದೇಶಿಕತೆಯನ್ನು ಸೂಚಿಸುವ ಪಾರಿಭಾಷಿಕ ಪದವಷ್ಟೆ. ಮೊದಲನೇ ಭರತ (ಮನು) ಜನಿಸಿದ ಖಂಡವು ಭರತಖಂಡವಾಯಿತು. ಅದೇ ರೀತಿ ದ್ರಮಿಳನು ಪರಿಪಾಲಿಸಿದ ಪ್ರಾಂತವು ದ್ರಮಿಳ ದೇಶ, ದ್ರವಿಡ ಪ್ರದೇಶವಾಯಿತು. ದ್ರಾವಿಡ ಪ್ರಾಂತ್ಯದ ಪ್ರಜೆಗಳು ಅನಾದಿಕಾಲದಿಂದಲೂ ಭಾರತೀಯ ಜನಾಂಗದ ಭಾಗವಾಗಿದ್ದವರು! ಆರ್ಯ ಶಬ್ದವು ಸಂಸ್ಕಾರಕ್ಕೆ, ವಿದ್ಯಾರ್ಹತೆಗೆ, ಔನ್ಯತ್ಯಕ್ಕೆ ಚಿಹ್ನೆಯಾದ ಶಬ್ದ. ಆರ್ಯ ಮತ್ತು ದ್ರಾವಿಡ ಶಬ್ದಗಳು ಎಂದೆಂದಿಗೂ ಒಂದು ಜನಾಂಗವನ್ನಾಗಲೀ, ಜಾತಿಯನ್ನಾಗಲೀ ಸೂಚಿಸುವ ಶಬ್ದಗಳೆಂದು ನಮ್ಮ ಚರಿತ್ರೆ ನಮಗೆ ಬೋಧಿಸಲಿಲ್ಲ. ಬ್ರಿಟಿಷರು ನಮ್ಮ ದೇಶದಲ್ಲಿ ಅಡಿಯಿಡುವವರೆಗೆ ನಮ್ಮ ಚರಿತ್ರಕಾರರೂ ಈ ವಿಷಯವನ್ನು ಹೇಳಲಿಲ್ಲ. ಇಂಗ್ಲೀಷು ಭಾಷೆ ಮತ್ತು ಪಾಶ್ಚಾತ್ಯ ಜನಾಂಗಗಳು ಏರ್ಪಡುವವರೆಗೆ ಭಾರತೀಯರು ಜಂಬೂ ದ್ವೀಪವನ್ನು ಒಂಬತ್ತು ‘ವರ್ಷ’ಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ವರ್ಷದಲ್ಲೂ ಕೆಲವೊಂದು ಖಂಡಗಳನ್ನು ಗುರುತಿಸಿದ್ದರು. ಖಂಡಗಳನ್ನು ರಾಜ್ಯಗಳಾಗಿ, ಜನಪದಗಳಾಗಿ ವಿಭಜಿಸಿದ್ದರು. ಈ ಶಬ್ದಗಳು ಇಂಗ್ಲೀಷಿನಲ್ಲಿ ಇರದೇ ಇರುವುದರಿಂದ ಅವುಗಳ ಪ್ರಾಮಾಣಿಕತೆಯನ್ನು ಬ್ರಿಟಿಷರು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ! ಹೀಗೆ ಪಂಚ ದ್ರವಿಡ ಪ್ರದೇಶಗಳು ಭರತಖಂಡದಲ್ಲಿನ ವಿಭಾಗಗಳು ಮಾತ್ರವೇ. ವೇದಮಾರ್ಗವನ್ನು ಸರಿಯಾಗಿ ಅನುಷ್ಠಾನ ಮಾಡದವರನ್ನು ದಸ್ಯುಗಳೆಂದೂ, ಮ್ಲೇಚ್ಛರೆಂದೂ ನಮ್ಮ ಪೂರ್ವಿಕರು ಭಾವಿಸುತ್ತಿದ್ದರು. ದಸ್ಯುಗಳು ಭಾರತ ದೇಶದಿಂದ ಹೊರಗೆ ಹೋದರೆಂದೂ, ನಮ್ಮ ಸೀಮೆಗಳನ್ನು ದಾಟಿ ಇತರೇ ದೇಶಗಳಿಗೆ ವಲಸೆ ಹೋದರೆಂದೂ ನಮ್ಮ ಪುರಾಣಗಳು ಹೇಳುತ್ತಿವೆ. ದಸ್ಯುಗಳು ಎಂದರೆ ದ್ರಾವಿಡರು ಎಂದು ಬ್ರಿಟಿಷರು ತೀರ್ಮಾನಿಸಿದರು. ಬ್ರಿಟಿಷ್ ಬೌದ್ಧಿಕ ಬೀಭತ್ಸ್ಯಕಾರರು ತಮ್ಮ ಒಡೆದು ಆಳುವ ನೀತಿಯ ಭಾಗವಾಗಿ, ಆರ್ಯರು ಎನ್ನುವ ಹೊಸ ಜನಾಂಗವನ್ನು ಸೃಷ್ಟಿಸಿದ್ದಲ್ಲದೆ, ದ್ರಾವಿಡರು ಎನ್ನುವ ಮತ್ತೊಂದು ಪ್ರತ್ಯೇಕ ಜನಾಂಗವಿತ್ತೆಂದು ಅಬದ್ಧವಾದ, ಅಸಂಬದ್ಧವಾದ ಪ್ರಚಾರವನ್ನು ಮಾಡಿದರು, ಆರ್ಯರು ಮತ್ತು ದ್ರಾವಿಡರು ಪರಸ್ಪರ ದ್ವೇಷಿಸುತ್ತಿದ್ದರು ಎನ್ನುವ ಕಟ್ಟುಕಥೆಗಳನ್ನೂ ನಮ್ಮ ತಲೆಗೆ ಕಟ್ಟಿ ಹೋದರು.....
                                                      *****
ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!
       ಪುರುವಂಶದಲ್ಲಿ ಜನಿಸಿದ ದುಷ್ಯಂತನು ಭೇಟೆಗಾಗಿ ಅಡವಿಗೆ ಹೋಗಿದ್ದನು. ಅಲ್ಲಿ ಅವನು ಕಾಶ್ಯಪ ಕಣ್ವನ ಕುಮಾರಿಯಾಗಿದ್ದ ಶಕುಂತಲೆಯನ್ನು ನೋಡಿ ಮೋಹಗೊಂಡನು ಆಮೇಲೆ ಆಕೆಯನ್ನು ಗಾಂಧರ್ವ ರೀತಿಯಲ್ಲಿ ವಿವಾಹವಾದನು. ಕಾಡಿನಲ್ಲಿ ಆದ ಈ ಮದುವೆಗೆ ದುಷ್ಯಂತನ ಕಡೆಯಿಂದ ಯಾರೂ ಸಾಕ್ಷಿಗಳಿರಲಿಲ್ಲ.... ಸ್ವಲ್ಪ ಕಾಲದ ನಂತರ ದುಷ್ಯಂತನು ತನ್ನ ರಾಜಧಾನಿಗೆ ಹಿಂದಿರುಗಿದನು.
        ಕಣ್ವ ಮಹರ್ಷಿ ಸ್ವಲ್ಪಕಾಲದ ನಂತರ ತನ್ನ ಕುಮಾರಿಯ ವಿವಾಹದ ಸಂಗತಿಯನ್ನರಿತು ತನ್ನ ಶಿಷ್ಯರನ್ನು ಜೊತೆಮಾಡಿ ಆಕೆಯನ್ನು ದುಷ್ಯಂತ ಮಹಾರಾಜನಿದ್ದ ಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆದರೆ ಅಲ್ಲಿಗೆ ಹೋದ ಮೇಲೆ, ದುಷ್ಯಂತನು ಶಕುಂತಲೆಯು ತನ್ನ ಹೆಂಡತಿಯಲ್ಲವೆಂದು ಸುಳ್ಳನ್ನು ಹೇಳಿದನು, ಆಕೆಯ ಮೇಲೆ ಕೋಪಗೊಂಡನು, ಪ್ರಜೆಗಳ ಸಮಕ್ಷಮದಲ್ಲಿ ಆಕೆಯನ್ನು ನಿರಾಕರಿಸಿದನು. ಆ ಸಂದರ್ಭದಲ್ಲಿ ದುಷ್ಯಂತ, ಶಕುಂತಲೆಯರ ಮಧ್ಯೆ ವಾಗ್ವಿವಾದವು ಜರುಗಿತು. ಶಕುಂತಲೆಯು ತನ್ನ ಪತಿಯನ್ನು, "ಆರ್ಯಪುತ್ರ!" ಎಂದು ಸಂಬೋಧಿಸಲನುವಾಗುತ್ತಾಳೆ, ಆದರೆ ಆಕೆಯ ಮನಸ್ಸಿನಲ್ಲಿ ಹೀಗೆ ಸ್ಫುರಣೆಯುಂಟಾಯಿತು, "ಮದುವೆಯಾಗಿದೆ ಎನ್ನುವ ಸತ್ಯವನ್ನೇ ಇವನು ಸಂದೇಹಿಸುತ್ತಿರುವನು. ಆದ್ದರಿಂದ ಪತಿಯನ್ನು ಕರೆದಂತೆ ಈತನನ್ನು ಆರ್ಯಪುತ್ರಾ ಎಂದು ಕರೆಯುವುದು ಎಷ್ಟು ಸಮಂಜವಾದೀತು?" ಈ ಆಲೋಚನೆ ಅವಳ ಮನದಲ್ಲಿ ಸುಳಿಯುವುದೇ ತಡ, ಶಕುಂತಲೆಯು ದುಷ್ಯಂತನನ್ನು ಆರ್ಯಪುತ್ರಾ ಎಂದು ಕರೆಯುವುದನ್ನು ಬಿಟ್ಟು, "ಪೌರವಾ" ಅಂದರೆ ’ಪುರು ವಂಶ ಸಂಜಾತ’ ಎಂದು ಆತನನ್ನು ಕರೆಯುವುದಲ್ಲದೇ "ಅನಾರ್ಯ!" ಎಂದೂ ಸಮುಚಿತವಾಗಿ ಕರೆದು ಆತನನ್ನು ಸೂಕ್ತವಾಗಿ ನಿಂದಿಸಿದಳೆಂದು ಮಹಾಕವಿ ಕಾಳಿದಾಸನು ತನ್ನ ಅಭಿಜ್ಞಾನ ಶಾಕುಂತಲ ಕೃತಿಯಲ್ಲಿ ವಿವರಿಸಿದ್ದಾನೆ. ಆಮೇಲೆ ದುಷ್ಯಂತನು ತನ್ನ ತಪ್ಪನ್ನು ಅರಿತುಕೊಂಡನು. ಅದು ಎಲ್ಲರಿಗೂ ತಿಳಿದಿರುವ ಇಂದಿಗೂ ಪ್ರಚಲಿತವಿರುವ ಕತೆ.
          ಪತಿಯನ್ನು ಹೀಗೆ "ಆರ್ಯಪುತ್ರ" ಎಂದು ಸಂಭೋದಿಸುವುದು ಭಾರತೀಯರ ಆಚಾರ, ಸಂಪ್ರದಾಯ. ಸಂಸ್ಕಾರವಂತನನ್ನು ’ಆರ್ಯ’ನೆಂದೂ ಮತ್ತು ಸಂಸ್ಕಾರಹೀನನನ್ನು ’ಅನಾರ್ಯ’ನೆನ್ನುವುದು ಕೇವಲ ಗುಣಗಳಿಗೆ ಸಂಬಂಧಿಸಿದ ನುಡಿಗಟ್ಟುಗಳು. ಈ ಆರ್ಯರು, ಅನಾರ್ಯರು ದ್ರಾವಿಡ ದೇಶದಲ್ಲಿ ಇದ್ದಾರೆ, ಗೌಡ ಪ್ರಾಂತದಲ್ಲಿ ಇದ್ದಾರೆ, ಉತ್ತರಾದಿ ಪ್ರಾಂತಗಳಲ್ಲಿ ಇದ್ದಾರೆ, ಕಾಶ್ಮೀರದಲ್ಲಿ ಇದ್ದಾರೆ, ನೇಪಾಳದಲ್ಲಿಯೂ ಇದ್ದಾರೆ! ಆದರೆ ಬ್ರಿಟಿಷರು ಮಾತ್ರ, ಆರ್ಯರು ಹೊರದೇಶಗಳಿಂದ ಬಂದು ಈ ದೇಶದಲ್ಲಿ ಸ್ಥಿರಪಟ್ಟ ಹೊಸ ಜನಾಂಗವೆಂದೂ ಅವರು ದುರಾಕ್ರಮಣಕಾರರೆಂದೂ ನಿರ್ಧರಿಸಿ ಬಿಟ್ಟಿದ್ದಾರೆ. ಹೀಗೆ ಹೊರಗಡೆಯಿಂದ ಬಂದ ಆರ್ಯ ಜನಾಂಗದವರು, ಇಲ್ಲಾಗಲೇ ಸ್ಥಿರಪಟ್ಟಿದ್ದ ಅನಾರ್ಯ ಜನಾಂಗಗಳೊಂದಿಗೆ ಯುದ್ಧ ಮಾಡಿ ಅವರನ್ನು ಕೊಲೆಗೈದು, ಉತ್ತರ ಭಾರತದಲ್ಲಿ ಅನಾರ್ಯರು ತಲೆಯೆತ್ತದಂತೆ ಮಾಡಿದರೆಂದು ಬ್ರಿಟಿಷರು ಸುಳ್ಳುಗಳ ಕಂತೆಯನ್ನು ಹೇಳಿದರು. ಹೀಗೆ ಅನಾದಿಕಾಲದಿಂದಲೂ ಒಂದೇ ಜನಾಂಗವಾಗಿದ್ದ ಭಾರತವನ್ನು ಎರಡು ಪ್ರಧಾನ ಜನಾಂಗಗಳ ಯುದ್ಧಭೂಮಿಯನ್ನಾಗಿ ಬ್ರಿಟಿಷರು ಚಿತ್ರಿಸಿದರು. ಆರ್ಯ ಜನಾಂಗದವರು ಮತ್ತು ಅನಾರ್ಯ ಜನಾಂಗದವರು ಪರಸ್ಪರ ಹೊಡೆದಾಡಿಕೊಂಡು ಕಡೆಗೆ ಅನಾರ್ಯರು ದಕ್ಷಿಣ ಭಾರತಕ್ಕೆ ಓಡಿ ಬಂದು ಸ್ಥಿರಪಟ್ಟರಂತೆ. ಮೆಕಾಲೆ ವಿದ್ಯಾವಿಧಾನವು, ಹೀಗೆ ದಕ್ಷಿಣಕ್ಕೆ ಬಂದು ತಲೆಮರೆಸಿಕೊಂಡ ಅನಾರ್ಯರೇ, ದಸ್ಯುಗಳೆಂದೂ, ದ್ರಾವಿಡರೆಂದೂ ಭಾರತೀಯರ ತಲೆಯಲ್ಲಿ ಹುಳು ಬಿಟ್ಟಿತು, ಈಗಲೂ ಹಲವರು ಬಿಡುತ್ತಲಿದ್ದಾರೆ. ಇದಾದ ನಂತರ ನಮ್ಮ ಮೇಧಾವಿಗಳು ಇನ್ನೊಂದಷ್ಟು ಹೆಜ್ಜೆ ಮುಂದೆ ಹೋದರು. ತಮಿಳುನಾಡಿನಲ್ಲಿ ದ್ರಾವಿಡ ಕಳಗಂ ಹೋರಾಟವು ಆರಂಭವಾಯಿತು. ರಾಮ ರಾವಣರ ಯುದ್ಧವನ್ನು ಆರ್ಯ ದ್ರಾವಿಡರ ಸಂಘರ್ಷವೆನ್ನುವ ವಿಷ ಪ್ರಚಾರ ಮೊದಲಾಯಿತು. ದ್ರಾವಿಡ ಕಳಗಂ ಪಕ್ಷದವರು ರಾಕ್ಷಸನಾದ ರಾವಣನು ಬಹುದೊಡ್ಡ ದ್ರಾವಿಡ ರಾಜನೆಂದೂ ಪ್ರಚಾರ ಮಾಡಿದರು. (ಕರ್ನಾಟಕದಲ್ಲೂ ರಾಕ್ಷಸನಾಗಿದ್ದ ಮಹಿಷಾಸುರನು ಮಹಿಷ ಶೂರನೆಂಬ ದ್ರಾವಿಡ ಜನಾಂಗಕ್ಕೆ ಸೇರಿದ ಮಹಿಷಮಂಡಲವನ್ನು ಆಳುತ್ತಿದ್ದ ರಾಜನೆಂದೂ, ಅವನನ್ನು ಉತ್ತರದ ಆರ್ಯರು ಕೊಂದರೆಂದು ಇತ್ತೀಚೆಗೆ ಗಲಾಟೆಗಳು ನಡೆಯುತ್ತಿವೆಯಲ್ಲವೇ?) ರಾಮನು ಆರ್ಯ ದುರಾಕ್ರಮಣಕಾರನಂತೆ, ಉತ್ತರ ಭಾರತೀಯರು ದೇವತೆಗಳಂತೆ ಹಾಗು ದಕ್ಷಿಣ ಭಾರತೀಯರು ರಾಕ್ಷಸರೆನ್ನುವ ಸಿದ್ಧಾಂತಗಳು ಮೈದೆಳೆದಿವೆ. "ಆಕಳು ಆರ್ಯರ ಪ್ರತಿನಿಧಿ"ಯಾಗಿರುವುದರಿಂದ ಆಕಳನ್ನು ಕೊಲ್ಲುವ ಆಟವನ್ನೂ ಕೂಡಾ ದ್ರಾವಿಡ ಕಳಗಂ ಪಕ್ಷದವರು ಕೆಲವೊಂದು ಕಾಲ ಆಟವಾಡಿದ್ದರು. ಕಟ್ಟುಕಥೆಗಳನ್ನು ಚರಿತ್ರೆಯೆಂದು ಚಿತ್ರೀಕರಿಸುತ್ತಾ ಅನೇಕ ಮಂದಿ ಸಾಹಿತ್ಯ ಶಿರೋಮಣಿಗಳು ಕಾದಂಬರಿಗಳನ್ನು ಸಹ ರಚಿಸಿದ್ದಾರೆ. "ಲಲ್ಲಾದೇವಿ" ಎನ್ನುವ ಕಾವ್ಯನಾಮದಿಂದ ಈ ಮಧ್ಯೆ ಒಬ್ಬ ತೆಲುಗು ಸಾಹಿತಿ ಬ್ರಿಟಿಷರ ವಕ್ರೀಕರಣಗಳನ್ನು ಆಧಾರವಾಗಿಟ್ಟುಕೊಂಡು ಕಾದಂಬರಿಯೊಂದನ್ನು ರಚಿಸಿದ್ದಾನೆ. ಆರ್ಯರು ಹರಿಸಿದ ದ್ರಾವಿಡರ ರಕ್ತದಿಂದ ಗೋದಾವರಿಯನ್ನು ಆ ಮಹಾಶಯ ಕೆಂಪಾಗಿಸಿದ್ದಾನೆ!
           ಇನ್ನೊಬ್ಬ ತಮಿಳು ಸಾಹಿತಿ ಮತ್ತೊಂದು ಕಥೆ ಹೇಳಿದ್ದಾನೆ... ಸೀತೆ ರಾವಣಾಸುರನೆಂಬ ದ್ರಾವಿಡ ಉರ್ಫ್ ರಾಕ್ಷಸ ರಾಜನ ಮಗಳಂತೆ! ಆಕೆಯನ್ನು ಆರ್ಯರು ಅಪಹರಿಸಿಕೊಂಡು ಹೋಗಿ ಮಕ್ಕಳಿಲ್ಲದ ಜನಕನಿಗೆ ಒಪ್ಪಿಸಿದರಂತೆ. ಈ ವಿಷಯವು ರಾವಣನಿಗೆ ತಿಳಿಯಿತಂತೆ. ಆದರೆ ಅಷ್ಟೊತ್ತಿಗಾಗಲೇ ಆಕೆ ರಾಮನನ್ನು ಮದುವೆಯಾಗಿದ್ದಳಂತೆ. ಅಡವಿಯಲ್ಲಿ ತನ್ನ ಮಗಳು ಕಷ್ಟಪಡುವುದನ್ನು ಇಷ್ಟಪಡದ ರಾವಣನು ಸೀತೆಯನ್ನು ಎತ್ತಿಕೊಂಡು ಹೋದನಂತೆ. ಇದನ್ನು ಅರ್ಥ ಮಾಡಿಕೊಳ್ಳದೆ ಕರುಣಾರ್ದ್ರಹೃದಯನಾದ ಆಕೆಯ ತಂದೆಯನ್ನು ರಘುರಾಮನು ಅಮಾನುಷವಾಗಿ ಕೊಂದನಂತೆ! ದ್ರಾವಿಡ ಜನಾಂಗವನ್ನು ಅವಮಾನಿಸಲಿಕ್ಕಾಗಿ ಆರ್ಯರು ಈ ಕಥೆಯನ್ನು ಮಾರ್ಪಡಿಸಿ ಬರೆದುಕೊಂಡರಂತೆ! (ಇದೇ ಕತೆಯನ್ನಾಧರಿಸಿ ’ಮಹಾರಾವಣ’ ಎನ್ನುವ ಹೆಸರಿನ ಸಿನಿಮಾ ಕೂಡ ಕನ್ನಡದಲ್ಲಿ ಬಂದಂತೆ ನೆನಪು). ತಮಿಳರ ವೈಚಾರಿಕಬದ್ಧವಾದ ಸಾಹಿತ್ಯದ ಕುರಿತು ಈ ವಿಷಯವನ್ನು ತೆಲುಗಿನ ವಿಚಾರವಾದಿಗಳೊಬ್ಬರು ಹಲವಾರು ಸಭೆಗಳಲ್ಲಿ ಪ್ರಸ್ತಾವಿಸುತ್ತಿದ್ದರು. ಈ ವಿಷಯವನ್ನು ಸಭೆಯೊಂದರಲ್ಲಿ ಅವರು ವಿವರಿಸುತ್ತಿದ್ದಾಗ ಕೆಲವು ಸಭಿಕರು, "ಸ್ವಾಮಿ, ನೀವು ಹೇಳಿರುವುದು ನಿಜವೇ ಆಗಿದ್ದಲ್ಲಿ ಈ ವಿಷಯವನ್ನು ರಾವಣನು ತನ್ನ ಮಗಳಾದ ಸೀತೆಗೆ ಹಾಗು ಅವನ ಪತಿಯಾದ ರಾಮನಿಗೆ ತಿಳಿಸಬಹುದಾಗಿತ್ತಲ್ಲವೇ?" ಎಂದು ಪ್ರಶ್ನಿಸಿದರು. ಅದರಿಂದ ಕ್ಷುದ್ರರಾದ ಆ ವಿಚಾರವಾದಿಗಳು ತನ್ನನ್ನು ಪ್ರಶ್ನಿಸಿದ ಸಭಿಕರನ್ನು ದೂಷಿಸುತ್ತಾ ಆ ಸಭೆಯಿಂದ ಮಧ್ಯದಲ್ಲಿಯೇ ನಿಷ್ಕ್ರಮಿಸಿದರು.
         ಬ್ರಿಟಿಷರ ಕಥೆಯಾನುಸಾರ ಉತ್ತರ ಧ್ರುವವೇ ಸ್ವರ್ಗವಂತೆ. ಅಲ್ಲಿಯವರೇ ದೇವತೆಗಳಂತೆ. ಅಲ್ಲಿಂದ ದೇವತೆಗಳು ಅಂದರೆ ಆರ್ಯರು ಎದ್ದು ಬಂದು ಮಧ್ಯಪ್ರಾಚ್ಯಕ್ಕೆ ಬಂದರಂತೆ, ಅಲ್ಲಿಂದ ಪಶ್ಚಿಮಾಭಿಮುಖವಾಗಿ ಪಯಣಿಸಿ ಪುನಃ ಪೂರ್ವಕ್ಕೆ ಪಯಣಿಸಿ ಪರ್ಷಿಯಾ (ಪ್ರಸ್ತುತ ಇರಾನ್) ಪ್ರಾಂತವನ್ನು ಹೊಕ್ಕರಂತೆ! ಅಲ್ಲಿಂದ ಈ ದೇವತೆಗಳು ಹಲವಾರು ದಶೆಗಳಲ್ಲಿ ಭಾರತದೇಶಕ್ಕೆ ಬಂದು ಸ್ಥಿರಪಟ್ಟರೆಂದು ಬ್ರಿಟಿಷರು ಹೇಳಿದರು. ಈ ಕಪೋಲ ಕಲ್ಪಿತ ಸುಳ್ಳಿನ ಕಥೆಯನ್ನು ನಂಬಿದ ದ್ರಾವಿಡ ಕಳಗಂ ಹೋರಾಟಗಾರರು ಅದನ್ನು ಮತ್ತಷ್ಟು ಹಿಗ್ಗಿಸಿ ಊರಗಲ ಮಾಡಿದರು. ಕಮ್ಯೂನಿಷ್ಟ್ ಮೇಧಾವಿಗಳು ಈ ಅಪದ್ಧಗಳನ್ನು ಆಧಾರವಾಗಿಟ್ಟುಕೊಂಡು ಬರೆದ "ಪ್ರಾಮಾಣಿಕ" ಚರಿತ್ರೆ ಇಂದಿಗೂ ಮುಂದುವರೆಯುತ್ತಿದೆ. "ಆರ್ಯಪುತ್ರರು" ಎನ್ನುವ ಮತ್ತೊಂದು ಜನಾಂಗವನ್ನು ಬ್ರಿಟಿಷರು ಹುಟ್ಟುಹಾಕದಿದ್ದದ್ದು ಭಾರತೀಯರ ಪುಣ್ಯ!
ಆದರೆ ನಿಜವೇನು?
          ಆರ್ಯರು ಹೊರಗಿನಿಂದ ಬಂದು ಭರತ ಖಂಡದಲ್ಲಿ ನೆಲಸಿದರೆನ್ನುವ ಬ್ರಿಟಿಷ್ ಮೇಧಾವಿಗಳು ನಿರ್ಧರಿಸಿದ ವಿವಿಧ ಹಂತಗಳ ಕತೆಯು ವಾಸ್ತವವಾಗಿ ದಸ್ಯುಗಳು ಭಾರತ ದೇಶದಿಂದ ಹೊರಗೆ ಹೋದ ಹಂತಗಳೆಂದು ಕೋಟ ವೆಂಕಟಾಚಲಂ ಅವರು ತಮ್ಮ ’ಆರ್ಯುಲ ಧ್ರುವನಿವಾಸ ಖಂಡನಮು - ಆರ್ಯರ ಧ್ರುವ ನಿವಾಸ ಖಂಡನೆ’ ಎನ್ನುವ ತೆಲುಗು ಕೃತಿಯಲ್ಲಿ ತಾರ್ಕಿಕವಾಗಿ ತೀರ್ಮಾನಿಸಿರುತ್ತಾರೆ. ಈ ’ದಸ್ಯು’ಗಳು ಬ್ರಿಟಿಷರು ವ್ಯಾಖ್ಯಾನಿಸಿದಂತೆ, ದ್ರಾವಿಡ ಜನಾಂಗವಲ್ಲ! ವಿವಿಧ ದಶೆಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ವ್ಯತಿರೇಕಿಸಿದವರು, ಅದನ್ನು ಪಾಲಿಸದವರು ’ದಸ್ಯುಗಳು. ಅವರೇ ಮ್ಲೇಚ್ಛರು. ವೇದ ಸಂಸ್ಕೃತಿಯನ್ನು ಒಪ್ಪಿಕೊಳ್ಳದ ದಸ್ಯುಗಳನ್ನು ವೈದಿಕ ಪರಂಪರೆಯ ಪ್ರವರ್ತಕರು ಸಾಯಿಸಲಿಲ್ಲ, ಏಕೆಂದರೆ ಸಾಯಿಸುವುದು ವೇದ ಸಂಸ್ಕೃತಿಯಲ್ಲ. "ನ ಹಿಂಸಂತಿ ಕಿಮಪಿ ಪ್ರಾಣಿಜಾತಂ..... - ಯಾವ ಪ್ರಾಣಿಯನ್ನು ಕೂಡಾ ಹಿಂಸಿಸಬಾರದು...." ಎನ್ನುವುದು ಭಾರತೀಯರ ಸ್ವಭಾವ. ಆದ್ದರಿಂದ ದಸ್ಯುಗಳಾಗಿ ಬದಲಾದವರು ಸಾಮಾಜಿಕ ಬಹಿಷ್ಕರಣಕ್ಕೆ ಮಾತ್ರ ಗುರಿಯಾದರು. ಹೀಗೆ ಬಹಿಷ್ಕೃತಗೊಂಡವರು ಬಹಳ ಬಹಳ ಹಿಂದೆ ಬಹು ದೂರದ ಪ್ರಾಂತಗಳಿಗೆ ವಲಸೆ ಹೋದವರು ಭಾರತೀಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಮರೆತು ಹೋದರು. ಆದರೆ ಸ್ವಲ್ಪ ಕಾಲದ ಹಿಂದೆ ಅಂದರೆ ಕೆಲವು ಸಾವಿರ ವರ್ಷಗಳ ಹಿಂದೆಯಷ್ಟೆ ನಮ್ಮ ದೇಶದಿಂದ ಹೊರಹೋದವರು, ಭಾರತ ಭೂಭಾಗದ ಹತ್ತಿರ ನಿವಾಸವಿದ್ದವರು ಹಾಗೆ ಎಲ್ಲವನ್ನೂ ಮರೆತು ಹೋಗಲಿಲ್ಲ! ಪರ್ಷಿಯಾದಲ್ಲಿ ನೆಲಸಿದ "ದಸ್ಯು"ಗಳು ಪಾರಶಿಕರಾಗಿ ಮಾರ್ಪಟ್ಟರೆಂದು ಕೋಟ ವೆಂಕಟಾಚಲಂ ಅವರು ನಿರ್ಧರಿಸಿದ್ದಾರೆ. ವಲಸೆ ಹೋದ ಪ್ರದೇಶದ ದೂರ ಮತ್ತು ಸಮಯವನ್ನಾಧರಿಸಿ ಭಾರತದಿಂದ ವಲಸೆಹೋದವರ ರೀತಿ ನೀತಿಗಳನ್ನು ಸಂಪೂರ್ಣವಾಗಿ ಮರೆತುಹೋಗಿ ನಮ್ಮ ಸಂಸ್ಕೃತಿಯ ಲವಲೇಶವೂ ಇಲ್ಲದಂತೆ ಹೊಸ ವಿದೇಶಿ ಜನಾಂಗಗಳು ಏರ್ಪಟ್ಟವು. ಹಲವು ಸಾವಿರ ವರ್ಷಗಳ ನಂತರ ಕೊತ್ತ ಜನಾಂಗವಾಗಿ ಮಾರ್ಪಟ್ಟ ’ದಸ್ಯು’ಗಳು ಪುನಃ ನಮ್ಮ ದೇಶದೊಳಕ್ಕೆ ಕಾಲಿಟ್ಟರು. ಕೆಲವರು ಕೊಳ್ಳೆ ಹೊಡೆಯಲು ಬಂದರೆ, ಕೆಲವರು ದರೋಡೆಕೋರರಿಂದ, ದುರಾಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ನಮ್ಮ ದೇಶಕ್ಕೆ ಬಂದ ಚರಿತ್ರೆ ನಮಗೆಲ್ಲರಿಗೂ ಗೊತ್ತಿದೆ. ಗ್ರೀಕರು, ಹೂಣರು, ಶಕರು, ಅರಬ್ಬರು ಮೊದಲನೇ ವರ್ಗಕ್ಕೆ ಸೇರಿದವರು. ಯಹೂದಿಗಳು, ಪಾರಶೀಕರು, ಮೊದಲಾದವರು ಎರಡನೇ ವರ್ಗಕ್ಕೆ ಸೇರಿದವರು. ಆದರೆ ಯುಗಗಳನ್ನು ಅಧಿಗಮಿಸಿದ ಚಾರಿತ್ರಿಕ ಸ್ಮೃತಿಗಳಿಗೆ ನಾವು ದೂರವಾದೆವು, ಇದಕ್ಕೆ ಮೆಕಾಲೆ ವಿದ್ಯಾವಿಧಾನವು ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! "ಸ್ಮೃತಿರಾಹಿತ್ಯವೇ ಮೃತಿ" ಎಂದು ಬ್ರಹ್ಮಶ್ರೀ ತೆಲಕಪಲ್ಲೆ ವಿಶ್ವನಾಥ ಶರ್ಮ ಎನ್ನುವ ತೆಲುಗು ವಿದ್ವಾಂಸರೊಬ್ಬರು ಒಂದೆಡೆ ವಿವರಿಸುತ್ತಾರೆ. ಇದೇ ಜೀವನ ಸೂತ್ರವನ್ನು ನಾವು ದೇಶಕ್ಕೆ ಅನ್ವಯಿಸಿಕೊಂಡಾಗ, "ಸ್ವದೇಶೀಯ ಚರಿತ್ರೆಯ ಸ್ಮೃತಿರಾಹಿತ್ಯವೇ ದೇಶೀಯ ಅಸ್ತಿತ್ವಕ್ಕೆ ಮಾರಣಾಂತಿಕ ಪೆಟ್ಟಾಗಿ ಪರಿಣಮಿಸುತ್ತದೆ". ಈ ಪೆಟ್ಟನ್ನು ಕೊಟ್ಟದ್ದು ಮೆಕಾಲೆ ವಿದ್ಯೆ!
          ಕ್ರಿ.ಪೂ. ೧೫೩೪ನೇ ವರ್ಷದಲ್ಲಿ ಚಾಣಕ್ಯನು ಮೌರ್ಯ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿದನು. ಅದಕ್ಕೂ ಮುನ್ನ ಸುಮಾರು ಏಳೆಂಟು ದಶಕಗಳ ಹಿಂದೆ ಮಹಾಪದ್ಮನಂದನು ರಾಜ್ಯಭಾರ ಮಾಡುತ್ತಿದ್ದ. ಈ ನಂದನು ಮಹಾ ಜಿಪುಣ, ದಾನಧರ್ಮಗಳಿಂದ ಬಹುದೂರವುಳಿಯುತ್ತಿದ್ದವನು. ಬಂಗಾರದ ಕೊಡಗಳಲ್ಲಿ ನವರತ್ನಗಳನ್ನು ತುಂಬಿಸಿ ಆ ಬಿಂದಿಗೆಗಳನ್ನು ನೆಲದಲ್ಲಿ ಬಚ್ಚಿಡುತ್ತಿದ್ದನಂತೆ ಆ ಮಹಾಪದ್ಮನಂದ. ಅವನ ಕಾಲದಲ್ಲಿ ವ್ಯಾಡಿ ಮತ್ತು ಇಂದ್ರದತ್ತ ಎನ್ನುವ ಇಬ್ಬರು ಯುವಕರು ಹೆಚ್ಚಿನ ವಿದ್ಯಾರ್ಜನೆಯನ್ನು ಕೈಗೊಳ್ಳಲು ಉಪವರ್ಷನೆಂಬ ಪ್ರಸಿದ್ಧ ಆಚಾರ್ಯನ ಬಳಿಗೆ ಹೋದರು. ಇವರನ್ನು ಪರೀಕ್ಷಿಸಿದ ಉಪವರ್ಷನು, "ನಾನು ನಿಮಗೆ ಕಲಿಸಿಕೊಡುವುದಕ್ಕೆ ಏನೂ ಉಳಿದಿಲ್ಲ. ನನ್ನ ಅಣ್ಣನಾದ ವರ್ಷನ ಬಳಿಗೆ ನೀವು ಹೆಚ್ಚಿನ ವ್ಯಾಸಂಗಕ್ಕಾಗಿ ಹೋಗಿ" ಎಂದು ಅವರನ್ನು ಕಳುಹಿಸಿ ಕೊಟ್ಟನು. ಆ ಯುವಕರಿಬ್ಬರೂ ಆಚಾರ್ಯ ವರ್ಷನ ಬಳಿಗೆ ಹೋದರು. ಆಚಾರ್ಯ ವರ್ಷನು, "ನಾನು ತಪಸ್ಸನ್ನಾಚರಿಸುತ್ತಿದ್ದೇನೆ. ನನಗೆ ಕಲಿಸಲು ಸಮಯವು ಸಾಲದು. ಆದರೂ ಸಹ ವಿದ್ಯಾರ್ಜನೆಗಾಗಿ ಬಂದಿರುವುದರಿಂದ ನಿಮಗೆ ವಿದ್ಯೆಯನ್ನು ಬೋಧಿಸುತ್ತೇನೆ. ಆದರೆ ನಾನು ಒಂದು ವಿಷಯವನ್ನು ಒಂದೇ ಬಾರಿ ಹೇಳುತ್ತೇನೆ. ನೀವದನ್ನು ಕಲಿತುಕೊಂಡು ಮರುದಿನ ನನಗೆ ಆ ಪಾಠವನ್ನು ಒಪ್ಪಿಸಬೇಕು" ಎಂದು ಹೇಳಿದ.
          ವ್ಯಾಡಿ ಮತ್ತು ಇಂದ್ರದತ್ತರಿಗೆ ಇದು ಸಾಧ್ಯವಾಗದ ಕೆಲಸ. ಏಕೆಂದರೆ ವ್ಯಾಡಿ ಯಾವುದಾದರೂ ವಿಷಯವನ್ನು ಎರಡು ಬಾರಿ ಕೇಳಿದರೆ ಮಾತ್ರ ಅವನಿಗೆ ಆ ವಿಷಯವು ಕಂಠಸ್ಥವಾಗುತ್ತಿತ್ತು. ಇಂದ್ರದತ್ತನಿಗಾದರೋ ಯಾವುದಾದರೂ ವಿಷಯವನ್ನು ಮೂರು ಬಾರಿ ಕೇಳಿದರೆ ಮಾತ್ರ ಕಂಠಸ್ಥವಾಗುತ್ತಿತ್ತು. ಆದ್ದರಿಂದ ಅವರಿಬ್ಬರೂ, ಏಕಸಂಧಿಗ್ರಾಹಿಯನ್ನು ಹುಡುಕಿಕೊಂಡು ಹೊರಟರು. ಒಂದು ದಿನ ರಾತ್ರಿ ಅವರು ಒಂದು ಜಾಗದಲ್ಲಿ ತಂಗಿದ್ದರು. ರಾತ್ರಿ ಊಟವಾದ ನಂತರ ಅವರಿಬ್ಬರೂ ಸ್ವಲ್ಪ ಹೊತ್ತು ಶಾಸ್ತ್ರ ಚರ್ಚೆ ಮಾಡಿಕೊಂಡು ಮಲಗಿದರು. ಮರುದಿನ ಬೆಳಿಗ್ಗೆ ಎದ್ದಾಗ ಆ ಮನೆಯಲ್ಲಿದ್ದ ಬಾಲಕನೊಬ್ಬನು, ಸುಮಾರು ನಾಲ್ಕು ವರ್ಷದವನು - ಆ ಶಾಸ್ತ್ರ ಚರ್ಚೆಯನ್ನು ಯಥಾವತ್ತಾಗಿ ಹೇಳಿಕೊಳ್ಳುತ್ತಿದ್ದ..... ಅವನ ಹೆಸರು ಕಾತ್ಯಾಯನ. ಅವನು ಏಕಸಂಧಿಗ್ರಾಹಿ ಅಂದರೆ ವಿಷಯವೊಂದನ್ನು ಒಂದು ಸಾರಿ ಕೇಳಿದರೆ ಅದನ್ನು ಕಂಠಸ್ಥ ಮಾಡಿಕೊಳ್ಳುತ್ತಿದ್ದ. ಇನ್ನು ಹೇಳುವುದೇನಿದೆ, ಇವನ ಸಹಾಯದಿಂದ ಆ ಯುವಕರಿಬ್ಬರೂ ಆಚಾರ್ಯ ವರ್ಷನ ಬಳಿ ವ್ಯಾಸಂಗವನ್ನು ಪೂರೈಸಿದರು.
          ಹಲವು ವರ್ಷಗಳ ನಂತರ ಆಚಾರ್ಯ ವರ್ಷನಿಗೆ ಗುರುದಕ್ಷಿಣೆಯನ್ನು ಸಮರ್ಪಿಸಬೇಕೆಂದು ಈ ಶಿಷ್ಯರು ಭಾವಿಸಿದರು! ಆ ಮೂವರೂ ಸೇರಿಕೊಂಡು ರಾಜನಾದ ಮಹಾಪದ್ಮನಂದನ ಬಳಿಗೆ ಹೋದರು. ಆದರೆ ದೊರೆಯಾದ ನಂದನು ಅವರಿಗೆ ಒಂದು ಕಿಲುಬು ಕಾಸನ್ನೂ ಕೊಡಲಿಲ್ಲ! ಹೀಗಾದರೆ ನಡೆಯುವುದಿಲ್ಲವೆಂದು ಭಾವಿಸಿದ ಆ ಮೂರೂ ಜನ ಒಂದ ಯೋಜನೆಯನ್ನು ಹಾಕಿಕೊಂಡರು. ಅದರ ಪ್ರಕಾರ ಮರುದಿನ ಇಬ್ಬರು ಮಾತ್ರ ರಾಜನ ಬಳಿಗೆ ಹೋದರು, ಮೂರನೆಯವನು ಪರಕಾಯ ಪ್ರವೇಶ ವಿದ್ಯೆಯ ಮೂಲಕ ರಾಜನ ಬುದ್ಧಿಯನ್ನು ಆವಾಹಿಸಿದನು. ಆ ಇಬ್ಬರಿಗೆ ಮಹಾಪದ್ಮನಂದನು ಬಂಗಾರದ ಹರಿವಾಣಗಳಲ್ಲಿ ನವರತ್ನಗಳನ್ನು ತರಿಸಿಕೊಟ್ಟ. ಆ ರಾಜನ ಪ್ರಧಾನ ಮಂತ್ರಿಗೆ ಆಶ್ಚರ್ಯವಾಯಿತು. "ನಿನ್ನೆಯ ದಿವಸ ಒಂದು ಬಿಡಿಗಾಸನ್ನೂ ನೀಡದ ರಾಜ ಈ ದಿವಸ ಇಷ್ಟು ದೊಡ್ಡ ಮೊತ್ತದ ದಾನವನ್ನು ಅದು ಹೇಗೆ ಮಾಡಿದ?!"
          ಮಂತ್ರಿ ಆಲೋಚಿಸಿ ಅವರ ಕಾರ್ಯವನ್ನು ಗ್ರಹಿಸಿದ....."ನಿನ್ನೆ ಬಂದಾಗ ಮೂರು ಜನ ಬಂದಿದ್ದರು, ಈ ದಿನ ಇಬ್ಬರೇ ಬಂದಿದ್ದಾರೆ........ ಅಂದರೆ ಮೂರನೆಯವನು ರಾಜನನ್ನು ಆವಾಹಿಸಿದ್ದಾನೆ, ಅವನ ಶರೀರವನ್ನು ಅದೆಲ್ಲಿಯೋ ಭದ್ರವಾಗಿ ಇರಿಸಿದ್ದಾನೆ. ಹಾಗಾಗಿ ಅವನ ಬುದ್ಧಿಯು ನಂದರಾಜನನ್ನು ಆವಾಹಿಸಿದೆ......."
          ಆ ಕಥೆ ಆಮೇಲೇನಾಯಿತೋ ದೇ.ಗೊ. ಅಂದರೆ ದೇವರಿಗೇ ಗೊತ್ತು! ಆದರೆ ಇಂದು ಭಾರತದ ಕಥೆ ಅದಲು ಬದಲಾಗಿದೆ. ಅಂದು ಜಿಪುಣಾಗ್ರೇಸರನ ಆತ್ಮವನ್ನು ಪಂಡಿತನೊಬ್ಬ ಆವಾಹಿಸಿ ಒಳ್ಳೆಯ ಕೆಲಸವನ್ನು ಮಾಡಿಸಿದ್ದ. ಆ ವಿದ್ಯೆಯ ಹೆಸರು ಪರಕಾಯ ಪ್ರವೇಶ! ಇಂದು ಭಾರತದ ಶರೀರವನ್ನು ಬ್ರಿಟಿಷ್‌ ಬುದ್ಧಿಯು ಆವಾಹಿಸಿದೆ. ಅದು ಭಾರತೀಯ ಆತ್ಮವನ್ನು ನುಂಗಿಬಿಟ್ಟಿದೆ! ಸಂಸ್ಕೃತಿಯನ್ನು ವಿಕೃತಿಯನ್ನಾಗಿ ಮಾರ್ಪಡಿಸಿದೆ..... ಈ ಪರಕಾಯ ಪ್ರವೇಶ ವಿದ್ಯೆಯ ಹೆಸರು ಮೆಕಾಲೆ ವಿದ್ಯೆ!
                                           ******
         ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹನ್ನೆರಡನೆಯ ಕಂತು, ’ದ್ರಾವಿಡುಲನು ’ದಸ್ಯು’ಲನಡಂ ಬ್ರಿಟಿಷ್‌ವಾರಿ ’ತಂತ್ರಂ’ - ದ್ರಾವಿಡರನ್ನು ’ದಸ್ಯು’ಗಳೆಂದು ಕರೆದದ್ದು ಬ್ರಿಟಿಷರ ಕುಟಿಲ ನೀತಿ!
 
      ಈ ಸರಣಿಯ ಹನ್ನೊಂದನೆಯ ಲೇಖನಕ್ಕೆ "ಸಾಹಿತ್ಯ ಚಳವಳಿ ಎನ್ನುವ ಅಂಧಾನುಕರಣೆಯ ದೊಂಬರಾಟ....." ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A7-...
 
 

Rating
No votes yet

Comments

Submitted by makara Fri, 12/23/2016 - 20:17

ಈ ಸರಣಿಯ ಹದಿಮೂರನೆಯ ಕಂತು ನಮ್ಮದೆನ್ನುವುದು ಬದಲಾಗುತ್ತಿದೆ! ಮಾಯವಾಗಿ ಹೋಗುತ್ತಿದೆ........! ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%A9-...