ಕಾಳಧನ - ಭ್ರಮ ನಿರಸನ

ಕಾಳಧನ - ಭ್ರಮ ನಿರಸನ

    ಇತ್ತೀಚಿನ ದಿನಗಳ ಹೊಸ ವಿದ್ಯಮಾನ ಏನೆಂದರೆ, ಕಾಳಧನಿಕರಿಂದ ಭಾರಿ ಹಣ ಜಪ್ತಿ.  ಹೊಸತನ ಜಪ್ತಿಯಲ್ಲಿಲ್ಲ, ಬದಲಿಗೆ, ಸಿಕ್ಕಿದ್ದು ಕೋಟಿಗಟ್ಟಲೆ ಹೊಸ ನೋಟು ಎಂದ ವಾರ್ತೆ.  ಇದು ಹೇಗೆ ಸಾಧ್ಯ? ಮೋದಿಯ‌ ನೋಟ್-ರದ್ದತಿಯ ನಿರ್ಧಾರವನ್ನು ಬೆಂಬಲಿಸಿ, ಕಷ್ಟ ಸಹಿಸಿದ ಜನರಿಗೆ ಭ್ರಮನಿರಸನ ಆಗುವುದು ಸಹಜ. ಏನಿದರ ಕರಾಮತ್ತು ಎಂದು, ಇದರ ಆಳದಲ್ಲಿಳಿದರೆ ಕಾಣುವುದು ಕೆಲ ಬ್ಯಾಂಕ್ ಅಧಿಕಾರಿಗಳ ಮಸಲತ್ತು.

    ನಮ್ಮ ಖಾತೆಯಲ್ಲಿರುವ ದುಡ್ಡನ್ನು ನಾವು ತೆಗೆಯುವುದೇ ಕಷ್ಟವಾಗಿದೆ,  ಈ  ಬ್ಯಾಂಕ್‍ಗಳ  ನಿಯಮಾವಳಿಗಳಲ್ಲಿ. ಕಷ್ಟಪಟ್ಟು  ನಿಯಮ ಪಾಲಿಸಿಯೂ ಬ್ಯಾಂಕಿಂಗ್  ಸೇವೆ ಒದಗಿಸಿದ ಸಿಬ್ಬಂದಿ  ಎಲ್ಲಿ, ಕಾಸಿನಾಸೆಗೆ ನಿಯಮ ಉಲ್ಲಂಘಿಸಿ, ಕಾಳಧನಿಕರಿಗೆ ಅನುಕೂಲ ಮಾಡಿಕೊಟ್ಟ `ಕೆಲ'  ಬ್ಯಾಂಕ್ ಸಿಬ್ಬಂದಿಯವರೆಲ್ಲಿ? ಇದರಿಂದಾಗಿ, ಈಗ, 'ಬ್ಯಾಂಕುಗಳಲ್ಲಿ ಭ್ರಷ್ಟಾಚಾರ ಕಡಿಮೆ' ಎಂಬ‌ ಸಾರ್ವಜನಿಕರಲ್ಲಿದ್ದ‌ ನಂಬಿಕೆ ಸಂಪೂರ್ಣ ನೆಲಕಚ್ಚಿದೆ.  ನೋಟ್-ರದ್ದತಿಯಂಥ ದೃಢ ನಿರ್ಧಾರ ಕೈಗೊಂಡಾಗ ಮೋದಿಗೆ, ಹೀಗಾಗಬಹುದೆಂಬ ಕಿಂಚಿತ್ ಸುಳಿವೂ ಸಿಕ್ಕಿರಲಾರದು.  ಸಾರ್ವಜನಿಕರಲ್ಲಿಯೇ  ಈ ಮಟ್ಟದ ಭ್ರಷ್ಟಾಚಾರವಿದ್ದಲ್ಲಿ, ಯಾವ ದೇಶವೂ ಉದ್ಧಾರವಾಗಲಾರದು.

    ಅಷ್ಟಾಗಿಯೂ, ಆಶಾವಾದಿಯಾದ ನನಗೆ ಅನ್ನಿಸುವುದೇನೆಂದರೆ, ಹೀಗೆ ಪರಿವರ್ತಿತವಾಗಿದ್ದ ಹಾಗೂ ಪರಿವರ್ತಿತವಾಗಿರುವ (ಇನ್ನೂ ಸಿಕ್ಕಿಲ್ಲದ) ಕಾಳಧನದ ಬಾಬ್ತು, ಒಟ್ಟಾರೆ  ಅಪಮೌಲ್ಯಗೊಂಡ ಕಾಳಧನದ ಒಂದೆರಡು  ಪ್ರತಿಶತವಿರಬಹುದು. ಹಾಗಾಗಿ ಸಾರ್ವಜನಿಕರು ಭ್ರಮನಿರಸನ ಪಡುವ ಅಗತ್ಯವಿಲ್ಲ.  ಆದರೆ, ಈ 1-2% ಭ್ರಷ್ಟ ಬ್ಯಾಂಕ್ ಸಿಬ್ಬಂದಿಯಿಂದ, ಹಗಲು-ರಾತ್ರಿ ಅವಿರತ ದುಡಿದ ಪ್ರಾಮಾಣಿಕ ಬ್ಯಾಂಕ್ ಸಿಬ್ಬಂದಿಯ ಶ್ರಮ/ಗರಿಮೆ ಮಣ್ಣು ಪಾಲಾಗಿದ್ದಂತೂ ದಿಟ !
                    * * *

    ನಿರ್ನೋಟೀಕರಣದ ಇನ್ನೊಂದು ಮಜಲು. ನೋಟ್ ರದ್ದತಿಯಿಂದಾಗಿ, ಖಾತೆಯಲ್ಲಿ ಹಣವಿದ್ದೂ ತೆಗೆಯಲಾಗದ‌ ಪರಿಸ್ಥಿತಿ ಬಂದು, ಮದುವೆ-ಮುಂಜಿಗಳನ್ನು  ಮುಂದೂಡೋ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಇರುವಾಗ, ಜನಾರ್ಧನ ರೆಡ್ಡಿ, ನಿತಿನ್ ಗಡ್ಕರಿ ಮುಂತಾದವರು (ಇವರಿಬ್ಬರೂ ಬೀಜೇಪಿಯವರು ಅನ್ನುವುದು ಕಾಕತಾಳೀಯವಲ್ಲ!) ಹೇಗೆ ವೈಭವೋಪೇತವಾಗಿ  ಮದುವೆ ನೆರವೇರಿಸಲು ಸಾಧ್ಯವಾಗುತ್ತದೆ? ಜನಸಾಮಾನ್ಯರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು, ಬಿಸಿಲಲ್ಲಿ  ಹಣಕ್ಕಾಗಿ ಕ್ಯೂ ನಿಂತು ಬಸವಳಿದರೆ, (ಕೆಲವರ  ಸಾವು ಕೂಡಾ ಸಂಭವಿಸಿದೆ!), ಧನಿಕರು / ಕಾಳಧನಿಕರು ಸ್ವಲ್ಪವೂ  ಕಷ್ಟಪಡದೇ, ಇವರನ್ನು ನೋಡಿ ಮುಸಿ ಮುಸಿ ನಗುತ್ತಿದ್ದಾರೆ.  ಇಂಥವರಿಗೆ ಐ.ಟಿ. ಧಾಳಿ ಆಗದೇ ರೂ. 2.50 ಲಕ್ಷ ಖಾತೆಗೆ ತುಂಬಿದವನಿಗೆ ಐ.ಟಿ. ನೋಟೀಸ್ ಹೋಗುತ್ತಲ್ಲಾ – ಯಾಕೆ ಸ್ವಾಮಿ, ಯಾವ ಪುರುಷಾರ್ಥಕ್ಕೆ? ಜನ-ಧನ ಖಾತೆಗೆ ದುಡ್ಡು ಹಾಕಿ,  ಕಾಳ-ಧನ ಪರಿವರ್ತನೆ ಮಾಡಿಕೊಂಡ ಧನಿಕ ಪಾರಾಗಿ, ಆ ಖಾತೆಯ ಬಡವ ಜೈಲು ಪಾಲಾದರೆ, ಈ ವ್ಯವಸ್ಥೆಗೆ ಅರ್ಥವಿದೆಯೇ? ಇದರಿಂದ ಕಾಳಧನದ ವಿರುದ್ಧದ ಹೋರಾಟಕ್ಕೆ ಅರ್ಥ ಬರುತ್ತದೆಯೇ? ಈ ನಿಟ್ಟಿನಲ್ಲಿ  ಯೋಚಿಸಿದಾಗ, ಜನರಿಗೆ ಭ್ರಮನಿರಸನ ತಪ್ಪಿದ್ದಲ್ಲ.

                    * * *

    ಆದರೂ ಮೋದಿಯ ಕಾರ್ಯ ಶೈಲಿ ಹಾಗೂ ನಿಸ್ವಾರ್ಥ ವ್ಯಕ್ತಿತ್ವವನ್ನು ಗಮನದಲ್ಲಿರಿಸಿ  ನೋಡಿದಾಗ, ನೋಟ್ ರದ್ಧತಿಯ ದೃಢ ನಿರ್ಧಾರದಲ್ಲಿ ದೂರಾಲೋಚನೆ,  ಹೊರತಾಗಿ  ದುರಾಲೋಚನೆ ಕಂಡು ಬರದು.  ನಿಜ ಹೇಳಬೇಕೆಂದರೆ ಸಿಂಗಾಪೂರವೂ ಈಗಿನ ಸ್ವಚ್ಛ ಹಾಗೂ ಮಾದರಿಯ ಸಿಂಗಾಪುರವಾಗಲು, ಅಲ್ಲಿನ ಅಧ್ಯಕ್ಷರ ಸರ್ವಾಧಿಕಾರೀ ಧೋರಣೆಯೇ ಮೂಲಕಾರಣ ಎನ್ನುವುದನ್ನು ಅಲ್ಲಗೆಳೆಯಲಾಗದು.

* * *
 

Comments

Submitted by Sachin LS Fri, 12/30/2016 - 18:57

ಹೌದು ಸರ್... ಕಷ್ಟವಾದರೂ ಎಲ್ಲರೂ ಇದನ್ನು ಒಪ್ಪಿಕೊಂಡು, ಸಹಿಸಿಕೊಂಡು ನಡೆಯುತ್ತಿದ್ದಾರೆ. ದೇಶದ ಪ್ರಗತಿಯ ಆಸೆ ಮತ್ತು ಕನಸಿನಲ್ಲಿದ್ದಾರೆ. ಆದರೆ, ಮಧ್ಯ ತಮ್ಮ ಬೇಳೆ ಬೇಯಿಸಿಕೊಳ್ಳುವವರಿಂದ ಹಲವರಿಗೆ ಕೆಟ್ಟ ಹೆಸರು, ಪರಿಶ್ರಮಕ್ಕೆ ಒಂದಿಷ್ಟು ಮಸಿ. ದೇಶದ ಪ್ರಗತಿಯ ಬಗೆಗಿನ ಕಾಳಜಿ ಎಲ್ಲರನ್ನು ಆವರಿಸಬೇಕಿದೆ..