' ಚಾರಿತ್ರಿಕ ನಟ ಓಂ ಪುರಿ '
ಕ್ರಿ.ಶ. 2016 ನೇ ಇಸವಿ ಇತಿಹಾಸದ ಪುಟ ಸೇರಿ ಹೊಸ ವರ್ಷ 2017 ನೇ ಇಸವಿ ಪ್ರಾರಂಭಿಕ ಭಾನುವಾರದಿಂದಲೆ ಪಾದಾರ್ಪಣೆ ಮಾಡಿದೆ. ಕಳೆದ ವರ್ಷ ಬೇರ್ಪಡಿಸಲಾಗದ ಸಿಹಿ ಕಹಿ ನೆನಪುಗಳ ಸಂಗಮ. ಕನ್ನಡದ ‘ಮಾಸ್ತಿಗುಡಿ’ ಚಲನ ಚಿತ್ರದ ಸಾಹಸ ಕಲಾವಿದರೀರ್ವರ ದುರ್ಮರಣದ ದುರಂತ ಸಾವು ನೆನಪಿನಿಂದ ಮಾಸುವ ಮೊದಲೆ ಜನೇವರಿ 6 ನೇ ತಾರೀಕಿನ ಬೆಳಗು ಖ್ಯಾತ ಚಾರಿತ್ರಿಕ ನಟ ಓಂ ಪುರಿಯ ಹಟಾತ್ ಸಾವಿನ ಸುದ್ದಿಯನ್ನು ಹೊತ್ತು ತಂದಿದೆ. ಟೆಲಿವಿಜನ್ ಜಾಲಗಳು ಎಲ್ಲ ವೀಕ್ಷಕರ ಮನೆ ಮನೆಗಳಿಗೆ ಈ ಸುದ್ದಿಯನ್ನು ತಲುಪಿಸಿವೆ. ನಿಜಕ್ಕೂ ಇದೊಂದು ಆಘಾತಕರ ಸಾವಿನ ಸುದ್ದಿ. 90 ವರ್ಷಗಳ ಆಸುಪಾಸಿನ ವಯಸ್ಸಿನ ನಟ ನಟಿಯರು ಇನ್ನೂ ಪ್ರತಿದಿನ ಸೂಯೋದಯ ಮತ್ತು ಸೂರ್ಯಾಸ್ತಗಳನ್ನು ನೋಡುತ್ತಿರುವ ಕಾಲದಲ್ಲಿ ಏನೊಂದು ಸುದ್ದಿಯನ್ನು ಕೊಡದೆ ನಟ ಓಂ ಪುರಿ ಬಾರದ ಲೋಕಕ್ಕೆ ಪಯಣ ಬೆಳೆಸಿ ಬಿಟ್ಟಿದ್ದಾನೆ. ಇಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ವೈಜ್ಞಾನಿಕ ಆವಿಷ್ಕಾರ ಮತ್ತು ಶೋಧಗಳು ಮನುಷ್ಯನ ಸಾವನ್ನು ಗಣನೀಯವಾಗಿ ಮುಂದಕ್ಕೆ ಹಾಕುತ್ತ ಹೊಗುತ್ತಿರುವ ಈ ಕಾಲದಲ್ಲಿ ಆತ ಹೃದಯ ಸ್ತಂಭನದಿಂದ ಸಾವನ್ನಪ್ಪಿರುವುದು ದುರ್ದೈವದ ಸಂಗತಿ. 66 ವರ್ಷಗಳು ಇಂದಿನ ದಿನಗಳಲ್ಲಿ ಅಂತಹ ಸಾಯುವ ವಯಸ್ಸೇನೂ ಅಲ್ಲ, ಆದರೆ ಏನು ಮಾಡುವುದು ಎಷ್ಟೇ ಎಚ್ಚರಿಕೆ ವಹಿಸಿದರೂ ಇಂತಹ ದುರಂತಗಳು ಬಂದೆರಗಿ ಬಿಡುತ್ತವೆ ಅಂತಹ ಒಂದು ಹಟಾತ್ ಸಾವು ಈ ಓಂ ಪುರಿಯದು ಎನ್ನಬಹುದು.
ಓಂ ಪುರಿ ಎಂದ ತಕ್ಷಣ ನಮ್ಮ ಕಣ್ಮುಂದೆ ಸಾಧಾರಣ ಎತ್ತರದ ಅಷ್ಟೆನೂ ಧಡೂತಿಯಲ್ಲದ ಮೈಲಿ ಕಲೆಗಳ ಮುಖದ ಸಾಮಾನ್ಯರಲ್ಲಿ ಸಾಮಾನ್ಯ ಎನ್ನಿಸ ಬಹುದಾದ ನಟನೊಬ್ಬನ ಚಿತ್ರ ಸುಳಿದು ಹೋಗುತ್ತದೆ. ಸಾಮಾನ್ಯವಾದ ಒಂದು ಪ್ರತೀತಿ ಏನೆಂದರೆ ಸಿನಿಮಾದ ನಾಯಕನಟನಾಗ ಬೇಕೆನ್ನುವವನಿಗೆ ಅಂದವಾದ ಮುಖ ಸುಂದರ ಅಂಗ ಸೌಷ್ವವ ಗೌರವರ್ಣ ಎತ್ತರದ ನಿಲುವುಗಳಿರಬೇಕು ಎನ್ನುವುದು ಒಂದು ಗ್ರಹಿಕೆಯಾಗಿತ್ತು. ದೈನಂದಿನ ಬದುಕಿನ ಜಂಜಡಗಳನ್ನು ಮರೆಯಲು ಜನ ಸಾಮಾನ್ಯ ಅಗ್ಗದ ಮನರಂಜನೆಯ ಸಾರ್ವಕಾಲಿಕ ಲಭ್ಯದ ಸಿನೆಮಾದ ಮೊರೆ ಹೋದ. ತನ್ನ ವಾಸ್ತವದ ಬದುಕಿನ ನೋವನ್ನು ಮರೆಯಲು ಕನಸಿನ ಲೋಕದ ಈ ಸಿನೆಮಾ ಆತನ ಮನರಂಜನಾ ಮಾಧ್ಯಮವಾಯಿತು. ಮಾನವ ಬದುಕಿನ ಎಲ್ಲ ನೋವು ನಲಿವುಗಳನ್ನು ಸಿನೆಮಾ ತೆರೆಯ ಮೇಲೆ ನೋಡಿ ಆನಂದಿಸಲು ಪ್ರಾರಂಭಿಸಿದ. ತಾನು ಸುಂದರನಲ್ಲದಿದ್ದರೂ ತೆರೆಯ ಮೇಲಿನ ಸುಂದರ ನಟನಲ್ಲಿ ತನ್ನನ್ನು ತಾನು ಕಂಡು ಅನುಭವಿಸಿ ಆತನೆ ತಾನಾಗ ತೊಡಗಿದ ಆ ಕಾರಣದಿಂದಾಗಿ ಹುಟ್ಟಿ ಕೊಂಡದ್ದು ನಟ ನಟಿಯರ ಆರಾಧನೆ. ಈ ಕಾರಂಣದಿಂದಾಗಿ ತೆರೆಯ ನಾಯಕ ನಟ ಸುಂದರನಾಗಿಯೆ ಇರುತ್ತಿದ್ದ. ಕೆಲವೊಬ್ಬ ಪ್ರೇಕ್ಷಕರ ವಿಷಯದಲ್ಲಿ ಇದು ತಿರುವು ಮುರುವು ಸಹ ಆಗುತ್ತಿತ್ತು ಎನಿಸುತ್ತದೆ. ತಾನು ತೆರೆಯ ಮೇಲಿನ ನಟನಷ್ಟು ಸುಂದರನಲ್ಲ ಎಂಬ ಭಾವನೆ ದುರ್ಬಲ ಮನಸ್ಥಿತಿಯ ನೋಡುಗನ ಮನದಲ್ಲಿ ಬಂದಿತೆಂದರೆ ಆತ ಕೀಳುರಿಮೆಯಿಂದ ಬಳಲುವಂತಾಗುತ್ತಿತ್ತು ಎಂದು ಕಾಣುತ್ತದೆ. ಇಂತಹ ಕಾಲದಲ್ಲಿ ಸುಂದರರಲ್ಲದ ನಟರೂ ತೆರೆಯ ಮೇಲೆ ನಾಯಕ ನಟರಾಗಿ ವಿಜ್ರಂಭಿಸಲು ಪ್ರಾರಂಭಿಸಿದರು. ಉದಾಹರಣೆಗೆ ತಮಿಳು ನಟ ರಜನಿಕಾಂತ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಲನಚಿತ್ರ ಕುರಿತಂತೆ ಜಗ್ತೇಶ ಮತ್ತು ದುನಿಯಾ ವಿಜಿ ಮುಂತರಾದವರ ಹೆಸರುಗಳನ್ನು ಉಲ್ಲೇಖಿಸಬಹುದು. ಕಪ್ಪು ಮೈಬಣ್ಣದ ಅಷ್ಟೇನೂ ಸುಂದರರಲ್ಲದ ಈ ನಟರೂ ಸಹ ತಮ್ಮ ತಮ್ಮ ಭಾಷೆಗಳ ಚಲನಚಿತ್ರಗಳಲ್ಲಿ ಅಭಿನಯಿಸಿ ನಾಯಕ ನಟರುಗಳಾಗಿ ವಿಜ್ರಂಭಿಸುತ್ತಿರುವವರು. ಈ ನಟರುಗಳಿಗೆ ಕೆಲವು ಮಿತಿಗಳಿವೆ ಇವರೆಲ್ಲ ನಾಯಕನ ಪಾತ್ರಗಳಲ್ಲಿಯೆ ನಟಿಸುವವರು. ನೂತನ ಪ್ರಯೋಗಗಳೆಂದರೆ ಕೆಲವೊಂದಷ್ಟು ಅಪವಾದಗಳನ್ನು ಬಿಟ್ಟರೆ ಮಾಮೂಲಿ ಮನರಂಜನಾ ಸೂತ್ರಗಳಲ್ಲಿ ಅಭಿನಯಿಸಿ ತಮ್ಮ ಆರಾಧಕರನ್ನು ರಂಜಿಸುವ ಗಲ್ಲಾ ಪೆಟ್ಟಿಗೆ ಸೂತ್ರದ ಕೈಗೊಂಬೆಗಳಾಗಿ ಹೋಗಿದ್ದಾರೆ. ಇಂತಹವರ ಮಧ್ಯದಲ್ಲಿಯೆ ತಮ್ಮ ಕಣ್ಣೋಟ ಮತ್ತು ಕಂಚಿನ ಕಂಠಗಳ ಮೂಲಕ ಸಂಧರ್ಭೋಚಿತ ಪಾತ್ರಗಳಲ್ಲಿ ಅಭಿನಯ ನೀಡಿದ ವಜ್ರಮುನಿ ಮತ್ತು ಸುಂದರಕೃಷ್ಣ ಅರಸರಂತಹವರೂ ಇದ್ದರು, ಆದರೆ ಇವರುಗಳು ನಾಯಕ ನಟರಾಗಿಯಾಗಲಿ ಇಲ್ಲ ಚಾರಿತ್ರಿಕ ಪಾತ್ರಗಳಲ್ಲಿಯಾಗಲಿ ಅಭಿನಯಿಸಲಾಗಲಿಲ್ಲ.
ಆದರೆ ಚಲನಚಿತ್ರರಂಗದ ಎಲ್ಲ ಮಿಥ್‍ಗಳನ್ನು ಹೊಡೆದು ಹಾಕಿ ನಾಯಕ ಖಳನಾಯಕ ಚಾರಿತ್ರಿಕ ಮತ್ತು ಹಾಸ್ಯ ಪಾತ್ರಗಳಲ್ಲಿ ಸಮರ್ಥವಾಗಿ ಯಾವುದೆ ಇಮೇಜುಗಳಿಗೆ ಪಕ್ಕಾಗದೆ ಧೈರ್ಯದಿಂದ ನಟಿಸಿ ಯಶಸ್ವಿಯಾದ ನಟನೊಬ್ಬನಿದ್ದ ಎನ್ನುವುದಾದರೆ ಅದುವೆ ಹಿಂದಿ ಚಲನಚಿತ್ರ ರಂಗದ ಓಂ ಪುರಿಯ ಹೆಸರನ್ನು ನಿರ್ವಿವಾದವಾಗಿ ಹೆಸರಿಸಬಹುದು. ಆತನ ಮುಖ ಸಿಡುಕುತನ ಮತ್ತು ಗಾಂಭಿರ್ಯವನ್ನು ತೋರಿಸುವಂತಿದ್ದರೂ ಆತನದು ಅಪ್ಪಟ ಮಗುವಿನ ಮನಸು. ತನ್ನ ವೃತ್ತಿಯಲ್ಲಿ ಆತ ಶಿಸ್ತು ಸಮಯ ಪರಿಪಾಲನೆ ಮತ್ತು ತನ್ನ ವೃತ್ತಿ ಬದುಕಿನ ಸುತ್ತ ಮುತ್ತಲಿನವರಿಗೆ ಸ್ಪಂದಿಸುವ ಮಾನವೀಯ ಕಳಕಳಿ ಆತನ ಸ್ವಭಾವದಲ್ಲಿತ್ತು. ಬದುಕನ್ನು ಹೇಗೆ ಎದುರಿಸಬೇಕು ಮತ್ತು ಸವಾಲಾಗಿ ಸ್ವೀಕರಿಸಬೇಕು ಎಂಬುದಕೆ ಈತನ ಬದುಕು ಒಂದು ಜ್ವಲಂತ ಉದಾಹರಣೆಯಾಗಿತ್ತು. ಈತ ಒಬ್ಬ ಸೂಕ್ಷ್ಮ ಮನದ ಸಂವೇದನಾಶೀಲ ವ್ಯಕ್ತಿಯಾಗಿದ್ದ ಎಂಬುದು ಆತನನ್ನು ಅರಿತಿದ್ದ ಒಡನಾಡಿಗಳ ಅಭಿಪ್ರಾಯವಾಗಿತ್ತು. ಮೊದಲು ಈತ ಎನ್‍ಎಸ್‍ಡಿಗೆ ಬಂದಾಗ ಕೀಳುರಿಮೆಯಿಂದ ಬಳಲುತ್ತಿದ್ದ ಮುನ್ನುಗ್ಗುವ ಧೈರ್ಯವಿರಲಿಲ್ಲ ಆದರೆ ಏನನ್ನಾದರೂ ಸಾಧಿಸಬೇಕೆನ್ನುವ ಛಲ ಮಾತ್ರ ಆತನಲ್ಲಿ ಆದಮ್ಯವಾಗಿತ್ತು. ಪಾತ್ರ ಯಾವುದೆ ಇರಲಿ ಅದರೊಳಗೆ ಆತ ಪರಕಾಯ ಪ್ರವೇಶ ಮಾಡಿ ಬಿಡುತ್ತಿದ್ದ. ಈ ವೃತ್ತಿ ನಿಷ್ಟೆಯಿಂದಾಗಿ ಆತ ನಟನಾಗಿ ಬಹಳ ಎತ್ತರಕ್ಕೆ ಬೆಳೆದು ನಿಂತ ಈತ ನಾಟಕ ಶಾಲೆಗೆ ಬಂದ ಪ್ರಾರಂಭದಲ್ಲಿ ಇಂಗ್ಲೀಷ್ ಬಾರದು ಎನ್ನುವ ಹಿಂಜರಿಕೆಯಿಂದ ಬಳಲುತ್ತಿದ್ದವನು ಮುಂದೆ ಹಾಲಿವುಡ್ ಮತ್ತು ಬ್ರಿಟಿಶ್ ಚಲನಚಿತ್ರಗಳಲ್ಲಿ ಅಭಿನಯಿಸುವ ಮಟ್ಟಿಗೆ ಇಂಗ್ಲೀಷ್ ಭಾಷೆಯಲ್ಲಿ ಪರಿಣತಿ ಸಾಧಿಸಿದ. ನಾಟಕ ಸಿನೆಮಾ ಮತ್ತು ಪುಸ್ತಕಗಳು ಆತನಿಗೆ ಪ್ರೀತಿ ಪಾತ್ರ ವಾಗಿದ್ದವು. ಕೆಲವು ನಟರಿಗೆ ಇರುವಂತೆ ಆತನಿಗೆ ರಾಜಕೀಯ ಆಸಕ್ತಿಯ ವಿಷಯವಾಗಿರಲಿಲ್ಲ.
ಈತ 1950ನೇ ಇಸವಿಯ ಅಕ್ಟೋಬರ್ 18 ರಂದು ಹರಿಯಾಣಾ ರಾಜ್ಯದ ಅಂಬಾಲಾದಲ್ಲಿ ಜನಿಸಿದ. ಈತ ತನ್ನ ಪ್ರಾರಂಭಿಕ ವರ್ಷಗಳನ್ನು ಪಂಜಾಬಿನ ಪಟಿಯಾಲಾದ ಸನೌನ್ ಗ್ರಾಮದ ಸೋದರಮಾವನ ಮನೆಯಲ್ಲಿ ಕಳೆದ. ಈತ ತನ್ನ ಬಾಲ್ಯದ ದಿನಗಳಲ್ಲಿ ಡಾಬಾವೊಂದರಲ್ಲಿ ಕೆಲಸ ಮಾಡಿದ. ನಂತರದಲ್ಲಿ ಭಾರತೀಯ ಚಲನಚಿತ್ರ ಮತ್ತು ಕಿರು ತೆರೆಯ ಶಿಕ್ಷಣ ಸಂಸ್ಥೆಯಿಂದ ಪದವಿಯನ್ನು ಪಡೆದ .ಇಲ್ಲಿ ಈ ಸಂಸ್ಥೆಗೆ ನಿರ್ದೇಶಕರಾಗಿದ್ದವರು ಗಿರೀಶ ಕಾರ್ನಾಡ. ಮುಂದೆ ಈತ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿಯನ್ನು ಪಡೆಯಲು ಹೋಗಿದ್ದ. ಈ ದಿನಗಳಲ್ಲಿ ಖ್ಯಾತ ನಟ ನಸೀರುದ್ದೀನ್ ಶಹಾ, ಕನ್ನಡತಿ ರಂಗ ಭೂಮಿಯ ನಟಿ ಮೇಲಾಗಿ ರಂಗಭೂಮಿಯ ದಿಗ್ಗಜ ಗುಬ್ಬಿ ವೀರಣ್ಣನವರ ಮೊಮ್ಮಗಳು ಕಂಚಿನ ಕಂಠದ ಹವ್ಯಾಸಿ ಗಾಯಕಿ ಬಿ.ಜಯಶ್ರೀ ಈತನ ಸಹಪಾಠಿಗಳಾಗಿದ್ದರು. ಈ ಜಯಶ್ರೀಗೆ ಹಿಂದಿ ಭಾಷೆಯನ್ನು ಕಲಿಯುವಲ್ಲಿ ಮುತುವರ್ಜಿ ವಹಿಉಸಿದ್ದವರು ಇದೆ ಶಹಾ ಮತ್ತು ಪುರಿಯವರು. ಈತನ ನಟನಾ ವೃತ್ತಿ ಬದುಕು ಪ್ರಾರಂಭವಾದುದು ಕ್ರಿ.ಶ. 1976 ರಲ್ಲಿ ಮರಾಠಿ ಚಿತ್ರ ‘ಘಾಸಿರಾಮ್ ಕೊತ್ವಾಲ್’ ಚಿತ್ರದಲ್ಲಿ ಅಭಿನಯಿಸುವ ಮೂಲಕ. ಈತನ ಸಮಕಾಲೀನ ನಟ ನಟಿಯರೆಂದರೆ ನಸೀರುದ್ದೀನ್ ಶಹಾ, ಪಂಕಜ ಕಪೂರ, ಅಮರೀಶ ಪುರಿ, ಕುಲಭೂಷಣ ಖರಬಂದಾ, ಫಾರೂಖ್ ಶೇಖ್, ಸಯೀದ್ ಜಾಫ್‍ರಿ, ಅನಂತ ನಾಗ್, ಶಬಾನಾ ಆಜ್ಮಿ, ಸ್ಮಿತಾ ಪಾಟೀ¯, ರೇಖಾ ಮತ್ತು ದೀಪ್ತಿ ನವಲ್ ಮುಂತಾದ ಚಾರಿತ್ರಿಕ ನಟ ನಟಿಯರು. ಇವರುಗಳ ಪೈಕಿ ಶಬಾನಾ ಮತ್ತು ಸ್ಮಿತಾ ಹಾಗೂ ನಸೀರುದ್ದೀನ್ ಮತ್ತು ಓಂ ಪುರಿ ಸ್ಪರ್ದೆಗೆ ಬಿದ್ದವರಂತೆ ನಟಿಸಿ ಚಿತ್ರಗಳ ಮತ್ತು ಪಾತ್ರಗಳ ತೂಕವನ್ನು ಹೆಚ್ಚಿಸಿದವರು. ಹಿಂದಿ ಮರಾಠಿ ಪಂಜಾಬಿ ಕನ್ನಡ ತೆಲುಗು ತಮಿಳು ಮಲೆಯಾಳಮ್ ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಒಟ್ಟು 120 ಚಿತ್ರಗಳಲ್ಲಿ ಅಭಿನಯ ನೀಡಿದ. ಅತ ಚಿತ್ರದ ಪಾತ್ರ ದೊಡ್ಡದಿರಲಿ ಚಿಕ್ಕದಿರಲಿ ತನ್ನ ಮನ ಮುಟ್ಟುವ ಅಭಿನಯದ ಮೂಲಕ ಆ ಪಾತ್ರಕ್ಕೆ ಜೀವ ತುಂಬುತ್ತಿದ್ದ.
ಈತನಿಗೆ ಬಹಳ ಹೆಸರನ್ನು ತಂದು ಕೊಟ್ಟ ಚಿತ್ರಗಳ ಪೈಕಿ ಹಿಂದಿಯ ‘ಅರ್ಧ ಸತ್ಯ’ ಹೆಸರಿಸ ಬೇಕಾದಂತಹದು. ಗೋವಿಂದ ನಿಹಲಾನಿ ಆ ಕಾಲದಲ್ಲಿ ಹಿಂದಿ ಚಿತ್ರರಂಗದ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬನಾಗಿದ್ದ. ಹಿಂದಿಯ ಚಿತ್ರರಂಗ ವ್ಯಾಪಾರಿಕರಣದ ಸೂತ್ರದಲ್ಲಿ ಬಂದಿಯಾಗಿ ಗಿರಕಿ ಹೊಡೆಯುತ್ತಿತ್ತು ಆಗ ಬಂದ ನಿರ್ದೇಶಕ ಶಾಮ ಬೆನಗಲ್ ತನ್ನ ಆಫ್ ಬೀಟ್ ಚಿತ್ರಗಳ ಮೂಲಕ ಒಂದು ವಿಭಿನ್ನ ರೀತಿಯ ಸಂಚಲನವನ್ನು ತಂದಿದ್ದ ಅಂತಹ ಬೆನಗಲ್‍ರ ಕೆಲವು ಚಿತ್ರಗಳಿಗೆ ಈ ನಿಹಲಾನಿ ಛಾಯಾಗ್ರಹಣ ಮಾಡಿದ್ದ, ಇಂತಹ ವಾತಾವರಣದಲ್ಲಿ ಬೆಳೆಯುತ್ತಿದ್ದ ನಿಹಲಾನಿಗೆ ತಾನೂ ಸಹ ಚಿತ್ರ ನಿರ್ದೇಶಿಸಬೇಕು ಎಂಬ ಆಶೆ ಹುಟ್ಟಿರಬಹುದು ಅದರ ಫಲವೆ ಈ ಚಿತ್ರದ ನಿರ್ಮಾಣ ನಿರ್ದೇಶನದ ಕಥೆ. ತನ್ನ ಈ ಚಿತ್ರಕ್ಕೆ ಆತ ನಾಯಕನನ್ನಾಗಿ ಆಯ್ಕೆ ಮಾಡಿದ್ದು ಈ ಓಂ ಪುರಿಯನ್ನು. ಆತನ ಆಯ್ಕೆಯನ್ನು ನೋಡಿ ಅನೇಕ ಹಿಂದಿ ಚಿತ್ರರಂಗದ ಪ್ರಮುಖರು ಹುಬ್ಬೇರಿಸಿದ್ದರು. ಆದರೆ ಚಿತ್ರ ಬಿಡುಗಡೆಗೊಂಡು ಅಪೂರ್ವ ಯಶಸ್ಸಿನ ಹಾದಿ ಹಿಡಿದಾಗ ಹಿಂದಿ ಚಿತ್ರರಂಗ ಬೆರಗಾಗಿ ಹೋಗಿತ್ತು. ಅದ್ಭುತ ನಟನೊಬ್ಬ ಹಿಂದಿ ಚಿತ್ರರಂಗಕ್ಕೆ ದೊರಕಿದ್ದ. ಇದೇ ಸಂಧರ್ಭದಲ್ಲಿ ಅಮಿತಾಬ ಅಭಿನಯದ ಚಿತ್ರವೊಂದು ಸಹ ಬಿಡುಗಡೆ ಗೊಂಡಿತ್ತು ಅದನ್ನು ಹಿಂದಿಕ್ಕಿ ಈ ಚಿತ್ರ ಯಶಸ್ಸಿನ ನಾಗಲೋಟದೆಡೆಗೆ ಸಾಗಿತ್ತು. ಇದಕ್ಕೆ ಕಾರಣ ಸತ್ವಪೂರ್ಣ ಚಿತ್ರಕಥೆ, ಸಂಭಾóಷಣೆ, ಪಾತ್ರಗಳ ಆಯ್ಕೆ,, ಕಡಿಮೆ ಬಜೆಟ್‍ನಲ್ಲಿ ನಿರ್ಮಾಣ ಯಾವುದೆ ಅತಿಗೆ ಹೋಗದೆ ನೈಜ ಚಿತ್ರಣ ಚಿತ್ರದ ಯಶಸ್ಸಿಗೆ ಕಾರಣಗಳಾಗಿದ್ದವು. ಈ ಚಿತ್ರದಲ್ಲಿ ರಾಮಾಶೆಟ್ಟಿ ಪಾತ್ರದ ಮೂಲಕ ಬೆಳಕಿಗೆ ಬಂದ ಮರಾಠಿ ರಂಗಭೂಮಿಯ ನಟ ಸದಾಶಿವ ಅಮ್ರಾಪುರಕರಗೆ ಒಂದೊಳ್ಳೆಯ ವೇದಿಕೆಯನ್ನು ಈ ಚಿತ್ರ ನಿರ್ಮಿಸಿ ಕೊಟ್ಟಿತು. ಈ ಚಿತ್ರದ ಮೂಲಕ ಓಂ ಪುರಿ ಹಿಂದಿ ಚಲನಚಿತ್ರ ರಂಗ ಗಮನಿಸುವಂತಾದ ಮುಂದೆ ಆತ ಸೃಷ್ಟಿಸಿದ್ದು ಒಂದು ವಿಭಿನ್ನ ಅಪರೂಪದ ಇತಿಹಾಸ. ಈ ಚಿತ್ರದಲ್ಲಿನ ಆತ ಅಭಿನಯಿಸಿದ ಅನಂತ ವೇಲಂಕರ ಪಾತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಮತ್ತು ಕಾರ್ಲೋ ವಿವಾರಿ ಚಲನ ಚಿತ್ರೋತ್ಸವದಲ್ಲಿ ಸಹ ಪ್ರಶ್ತಿ ಪಡೆದು ತಾನೇಂಥ ಸಮರ್ಥ ನಟ ಎಂಬುದನ್ನು ಸಾಬೀತು ಪಡಿಸಿದ. ಈತ ಬರಿ ನಾಯಕ ಪಾತ್ರಗಳಿಗೆ ಜೋತು ಬೀಳಲಿಲ್ಲ ತನ್ನ ಇತಿಮಿತಿಯ ಅರಿವು ಅವನಿಗಿತ್ತು ಖಳನ ಪಾತ್ರಗಳಲ್ಲದೆ ಹಾಸ್ಯ ಮತ್ತು ಚಾರಿತ್ರಿಕ ವೆನಿಸುವಂತಹ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನದಲ್ಲಿ ಸ್ಥಾಪಿಸಿಕೊಂಡ. ಅದರ ಪರಿಣಾಮವೆ ಆತ ತಾನು ಸಾಯುವ ದಿನದ ವರೆಗೂ ನಟನಾ ವೃತ್ತಿಯಲ್ಲಿ ತೊಡಗಿ ಕೊಂಡಿದ್ದ.
ಈತನ ಚಿತ್ರ ಬದುಕಿನ ವೈಶಿಷ್ಟ್ಯವೆಂದರೆ ಪಾತ್ರ ಸಣ್ಣದು ಇಲ್ಲ ದೊಡ್ಡದು ಯಾವುದೆ ಇರಲಿ ವಿಶಿಷ್ಟ ಪಾತ್ರವಾಗಿದ್ದರೆ ಈತ ಆ ಚಿತ್ರವನ್ನು ಒಪ್ಪಿಕೊಂಡು ಅದಕ್ಕೆ ಜೀವ ತುಂಬುತ್ತಿದ್ದ. ಇದಕ್ಕೊಂದು ಉದಾಹರಣೆ ನೀಡುವುದಾದಲ್ಲಿ ಹಿಂದಿಯ ‘ರುಡಾಲಿ’ ಚಿತ್ರ. ಇದೊಂದು ರಾಜಸ್ಥಾನದ ಶೋಷಿತ ಸಮುದಾಯದ ಕುಟುಂಬದ ವ್ಯಥೆಯ ಕಥೆ ಹೇಳುವ ಚಿತ್ರ. ರಾಜಸ್ಥಾನದ ಶ್ರೀಮಂತ ರಜಪೂತ ಕುಟುಂಬಗಳಲ್ಲಿ ಯಾರಾದರೂ ತೀರಿ ಕೊಂಡರೆ ಅವರಲ್ಲಿ ಇದ್ದ ಇರದಿದ್ದ ಗುಣ ಸ್ವಭಾವಗಳ ಕುರಿತು ಶವದ ಮುಂದೆ ಕುಳಿತು ರೋಧಿಸುತ್ತ ಹಾಡುತ್ತ ತೀರಿಕೊಂಡ ವ್ಯಕ್ತಿಯ ಕುರಿತು ದುಃಖ ವ್ಯಕ್ತ ಪಡಿಸಬೇಕಾದ ಕರುಣಾಜನಕ ಸ್ಥಿತಿ ಇವರದಾಗಿತ್ತು. ಈ ಚಿತ್ರದಲ್ಲಿ ನಾಯಕಿಯಾಗಿ ಡಿಂಪಲ್ ಕಪಾಡಿಯಾ ಹೃದಯಸ್ಪರ್ಶಿ ಅಭಿನಯ ನೀಡಿದ್ದಾಳೆ ಹಿಂದಿ ಚಲನಚಿತ್ರ ರಂಗದ ಇತಿಹಾಸದಲ್ಲಿ ದಾಖ ಲಾಗುವ ಪ್ರಮುಖ ನಟಿಯರ ಸಾಲಿನಲ್ಲಿ ಈಕೆಯೂ ನಿಲ್ಲ ಬಲ್ಲಳು ಅಷ್ಟು ಪ್ರಬುದ್ಧ ಮತ್ತು ಮನ ಮಿಡಿದ ಅಭಿನಯ ಈಕೆಯದಾಗಿತ್ತು. ಪೂರಕವಾಗಿ ರಜಪೂತ ಸಿರಿವಂತ ಕುಟುಂಬದ ಯಜಮಾನನ ಪಾತ್ರದಲ್ಲಿ ಅಮ್ಜದ್ ಖಾನನ ಅಭಿನಯವಿದ್ದರೆ ಅತನ ಮಗನ ಪಾತ್ರದಲ್ಲಿ ಇನ್ನೊಬ್ಬ ಖ್ಯಾತ ನಟ ರಾಜ ಬಬ್ಬರ್ ಅಭಿನಯಿಸಿದ್ದ. ಇಂತಹ ದಿಗ್ಗಜರ ಮಧ್ಯೆ ಡಿಂಪಲ್‍ಳ ಗಂಡನ ನಗಣ್ಯವೆನಿಸುವ ಪಾತ್ರದಲ್ಲಿ ಈತ ಅಭಿನಯಿಸಿದ್ದರೂ ತನ್ನ ಹೃದಯಸ್ಪರ್ಶಿ ಅಭಿನಯದ ಮೂಲಕ ಅದಕ್ಕೆ ಜೀವ ತುಂಬಿ ಆ ಪಾತ್ರಕ್ಕೆ ನ್ಯಾಯ ದೊರಕಿಸಿ ಕೊಟ್ಟಿದ್ದ. ಹೀಗೆ ಆತನ ನಟನೆಯ ಪಾತ್ರಗಳನ್ನು ವಿವರಿಸುತ್ತ ಹೋದರೆ ಅದೊಂದು ಓಂ ಪುರಿಯ ಸತ್ವಪೂರ್ಣ ಪಾತ್ರಗಳ ಅಭಿನಯದ ಮೆರವಣಿಗೆ ಎನಿಸಿ ಕೊಳ್ಳುತ್ತದೆ.
ಈತನ ಅಭಿನಯದ ಇನ್ನೂ ಕೆಲವು ಪ್ರಮುಖ ಚಿತ್ರಗಳನ್ನು ಹೆಸರಿಸುವುದಾದಲ್ಲಿ ಭೂಮಿಕಾ, ಆಕ್ರೋಶ, ಮಿರ್ಚ ಮಸಾಲಾ, ಜಾನೇ ಭಿ ದೋ ಯಾರೋ, ಚಾಚಿ 420, ಸತ್ಯಜೀತ ರೇ ನಿರ್ದೇಶನದ ಸದ್ಗತಿ ಅಲ್ಲದೆ ಧಾರಾವಿ, ಮಾಚಿಸ್, ಧೂಪ, ಗುಪ್ತ, ರಂಗ ದೇ ಬಸಂತಿ, ಸಿಂಗ್ ಈಜ್ ಕಿಂಗ್ ಮತ್ತು ಭಜರಂಗಿ ಭಾಯಿಜಾನ್ ಮುಂತಾದವುಗಳು. ಅಲ್ಲದೆ ಈತ ಕಿರು ತೆರೆಯ ಮಿ.ಯೋಗಿ, ಕಕ್ಕಾಜಿ ಕಹೇ ಮತ್ತು ಲೇಖಕ ಭೀಷಚ್ಮ ಸಹಾನಿ ರಚಿತ ಕೃತಿ ಆಧಾರಿತ ತವiಸ್ ಧಾರಾವಾಹಿಗಳಲ್ಲಿ ನಟಿಸಿ ಜನ ಪ್ರಿಯತೆ ಪಡೆದ. ಈತನ ನಟನಾ ವೃತ್ತಿ ಬದುಕಿನಲ್ಲಿ ಈತ ಎರಡು ಸಲ ರಾಷ್ಟ್ರೀಯ ಪ್ರಶಸ್ತಿ, ಐದು ಸಲ ಫಿಲಂಫೇರ್ ಪ್ರಶಸ್ತಿಗಳು ಸಂದುವಲ್ಲದೆ ಈತನ ಪ್ರತಿಭೆಗೆ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿಯನ್ನು 1990 ರಲ್ಲಿ ಕೊಡ ಮಾಡಿತು. ಈತನ ಜೀವಮಾನ ಸಾಧನೆಯನ್ನು ಪರಿಗಣಿಸಿ ಫಿಲಂ ಫೇರ್ ಸಂಸ್ಥೆ 2009 ರಲ್ಲಿ ಈತನನ್ನು ಗೌರವಿಸಿತು
ಈತ ಹಿಂದಿ ಚಲನಚಿತ್ರಗಳಲ್ಲದೆ ಕೆಲವು ಆಂಗ್ಲ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿದ ಅವುಗಳು ಯಾವುವೆಂದರೆ ಗಾಂಧಿ, ವಾರ್, ಮೈ ಸನ್ ಈಜ್ ಫೆನಾಟಿಕ್, ಈಸ್ಟ್ ಈಜ್ ಈಸ್ಟ್, ಪೆರೋಲ್ ಆಫೀಸರ್, ಘೋಸ್ಟ್ ಆಂಡ್ ದಿ ಡಾಕ್ನೆಸ್, ಸಿಟಿ ಆಫ್ ಜಾಯ್, ವೂಲ್ಫ್ ಚಿತ್ರಗಳು. ಆ ಪೈಕಿ ಸರ್. ರಿಚಾರ್ಡ್ ಆಟಿನಬರೋ ನಿರ್ದೇಶನದ ‘ಗಾಂಧಿ’ ಚಿತ್ರ ಸಹ ಒಂದು, ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ಬೇನ್ ಕಿಂಗಸ್ ಲೇ ಮತ್ತು ರೋಹಿಣಿ ಹತ್ತಂಗಡಿಯುವರ ಅಭಿನಯವಿದ್ದರೆ ಈತನದು ಒಂದು ಪೂರಕ ಪಾತ್ರವಾಗಿತ್ತು ಅಲ್ಲದೆ ಗಾಂಧೀಜೀಯ ಒಡನಾಡಿಗಳ ಪಾತ್ರಗಳಲ್ಲಿ ಅನೇಕ ಭಾರತೀಯ ರಂಗ ಭೂಮಿಯ ಕಲಾವಿದರು ಅಭಿನಯಿಸಿದ್ದರು. ಇದರಲ್ಲಿನ ಬೇನ್ ಕಿಂಗ್ಸ್ ಲೇಗೆ ಗಾಂಧೀಜಿ ಪಾತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಸಂದರೆ ಕಸ್ತೂರ ಬಾ ಪಾತ್ರದ ರೋಹಿಣಿ ಹತ್ತಂಗಡಿಗೆ ಒಂದು ಮತದ ಅಂತರದಲ್ಲಿ ಆಸ್ಕರ್ ಕೈ ತಪ್ಪಿತು. ಅಲ್ಲದೆ ಆ ಚಿತ್ರದ ವಸ್ತ್ರವಿನ್ಯಾಸಕ್ಕಾಗಿ ನಮ್ಮ ಕೊಡಗಿನ ಮೂಲದ ಭಾನು ಅತ್ತಯ್ಯಾಗೆ ಆಸ್ಕರ ಪ್ರಶಸ್ತಿ ಬಂದುದು ಹೆಮ್ಮೆಯ ಸಂಗತಿಯಾಗಿತ್ತು. ಈಕೆ ಆ ಮೊದಲು ರಾಜಕಪೂರನ ಆರ್.ಕೆ. ಬ್ಯಾನರಿನ ಕೆಲವು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿದುದು ವಿಶೇಷವಾಗಿತ್ತು. ಬಹು ಪ್ರತಿಭೆಯ ಈ ನಟ ಕೆಲವು ಕನ್ನಡ ಚಿತ್ರಗಳಲ್ಲಿಯೂ ಸಹ ನಟಿಸಿದ್ದು ನಾವು ಹೆಮ್ಮೆ ಪಡುವ ಸಂಗತಿ. ಆ ಚಿತ್ರಗಳ ಪೈಕಿ ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪರವರ ಕೃತಿ ‘ತಬ್ಬಲಿಯು ನೀನಾದೆ ಮಗನೆ’ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಅಭಿನಯಿಸಿದ್ದ. ಇದನ್ನು ಗಿರೀಶ ಕಾರ್ನಾಡ ನಿರ್ದೆಶಿಸಿ ಬಿ.ವಿ.ಕಾರಂತರ ಉಸ್ತುವಾರಿಯಿತ್ತು ಮತ್ತು ಈ ಚಿತ್ರಕ್ಕೆ ಭಾಸ್ಕರ ಚಂದಾವರಕರ ಸಂಗೀತ ಸಂಯೋಜನೆ ಮಾಡಿದ್ದರೆಂದು ನೆನಪು. ಈ ಚಿತ್ರದ ನಾಯಕ ಕಾಳಿಂಗನ ಪಾತ್ರದಲ್ಲಿ ತೀರ್ಥಹಳ್ಳಿ ತಾಲೂಕಿನ ಮಾನು (ಗುತ್ತಿಗೆರೆ ಮಾನಪ್ಪ), ಪುರೋಹಿತ ವೆಂಕಟರಮಣನ ಪಾತ್ರದಲ್ಲಿ ನಾಸೀರುದ್ದೀನ್ ಶಹಾ ಮತ್ತು ನಾಯಕಿ ಪಾತ್ರದಲ್ಲಿ ವಿದೇಶಿ ಮೂಲದ ಮಹಿಳೆಯೊಬ್ಬರು ನಟಿಸಿದ್ದರು. ಪೂರಕ ಪಾತ್ರಗಳಲ್ಲಿ ಸುಂದರರಾಜ ಮತ್ತಿತರರು ನಟಿಸಿದ್ದು ಆ ಪೈಕಿ ಓಂ ಪುರಿ ಸಹ ಒಬ್ಬನಾಗಿದ್ದ. ಓಂ ಪುರಿಗೆ ಈ ಚಿತ್ರದಲ್ಲಿ ಅಳವಡಿಸಲಾಗಿದ್ದ ಗೋವಿನ ಹಾಡು ‘ಧರಣಿ ಮಂಡಲ ಮಧ್ಯದೊಳಗೆ’ ತುಂಬಾ ಇಷ್ಟವಾಗಿತ್ತು. ಹೆಸರಿಸ ಬಹುದಾದ ಇನ್ನೊಂದು ಪಾತ್ರ ಓಂ ಪ್ರಕಾಶರಾವ್ ನಿರ್ದೇಶನದ ಶಿನರಾಜ ಕುಮಾರ ಅಭಿನಯದ ‘ಎಕೆ 47’ ಚಿತ್ರದಲ್ಲಿನ ಓಂ ಪುರಿ ಅಭಿನಯದ ಪೋಲೀಸ್ ಅಧಿಕಾರಿಯ ಪಾತ್ರ ಸಹ ಒಂದು, ಈತನ ಅಭಿನಯದಿಂದಾಗಿ ಚಿತ್ರಕ್ಕೆ ಒಂದು ರೀತಿಯ ವಜನ್ ಬಂದಿತ್ತು. ಅಲ್ಲದೆ ಈತ ದರ್ಶನ ಅಭಿನಯದ ‘ಧ್ರುವ’ ಮತ್ತು ಶಿವರಾಜ ಕುಮಾರ ಅಭಿನಯದ ‘ಸಂತೆಯಲ್ಲಿ ನಿಂತ ಕಬೀರ’ ಮತ್ತು ‘ಟೈಗರ್’ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದ.
ಈತನ ರಂಗಭೂಮಿ ಚಲನಚಿತ್ರ ರಂಗಗಳ ಬದುಕು ಉಜ್ವಲವಾಗಿದ್ದರೂ ಈತನ ಖಾಸಗಿ ವೈವಾಹಿಕ ಬದುಕು ದುರಂತಮಯ ವಾಗಿದ್ದುದು ಒಂದು ವಿಪರ್ಯಾಸ. ಈತ 1991 ರಲ್ಲಿ ಈತ ಅಣ್ಣು ಕಪೂರನ ಸೋದರಿ ಸೀಮಾ ಕಪೂರಳನ್ನು ಮದುವೆಯಾದ ಆದರೆ ಈ ವಿವಾಹ ಬಂಧನ ಕೇವಲ ಎಂಟು ತಿಂಗಳಲ್ಲಿ ಮುರಿದು ಬಿದ್ದುದು ಬಹಳ ನೋವಿನ ಸಂಗತಿಯಾಗಿತ್ತು. ಮುಂದೆ 1993 ರಲ್ಲಿ ಈತ ಪತ್ರಕರ್ತೆ ನಂದಿತಾಳೊಂದಿಗೆ ವೈವಾಹಿಕ ಬಂಧಕ್ಕೆ ಒಳಗಾದ, ಇವರ ದಾಂಪತ್ಯಕ್ಕೆ ಒಂದು ಗಂಡು ಮಗುವಾಯಿತು ಆತನ ಹೆಸರು ಇಶಾನ್. ಆದರೆ ಗಂಡ ಹೆಂಡತಿ ಮಧ್ಯೆ ಒಡಕುಂಟಾಗಿ 2013 ರಲ್ಲಿ ಇವರು ವಿಚ್ಛೇದನೆ ಪಡೆದು ಕೊಂಡರು, ಇದಕ್ಕೆ ಕಾರಣವಾಗಿದ್ದುದು ಓಂ ಪುರಿ ಕುರಿತು ಆತನ ಪತ್ನಿ ನಂದಿತಾ ಬರೆದ ‘ಅನ್ ಲೈಕ್ಲಿ ಹೀರೋ-ದಿ ಸ್ಟೋರಿ ಆಫ್ ಓಂ ಪುರಿ’ ಎಂಬ ಪುಸ್ತಕ, ಇದರಲ್ಲಿ ಆಕೆ ಓಂ ಪುರಿಯ ಹೊರ ಸಂಬಂಧಗಳ ಕುರಿತು ಬರೆದುದು ಆತನಿಗೆ ಇಷ್ಟವಾಗದೆ ಗಂಡ ಹೆಂಡತಿಯರ ಸಂಬಂಧ ಮುರಿದು ಬಿದ್ದುದು. ಈ ಕುರಿತು ‘ಯಾವುದೆ ವ್ಯಕ್ತಿಯ ಖಾಸಗಿ ಬದುಕು ಬೇರೆಯವರಿಗೆ ದಕ್ಕುವುದು ಅರ್ಧ ಸತ್ಯವಾಗಿಯೆ’ ಎನ್ನುವುದು ಆತನ ಪತ್ರಿಕ್ರಿಯೆಯಾಗಿತ್ತು. 2017ರ ಜನೇವರಿ 5 ರಂದು ಬೆಳಿಗ್ಗೆ ಮುಂಬೈನ ಅಂಧೇರಿಯ ತನ್ನ ಮನೆಯಲ್ಲಿ ಅಡುಗೆ ಮನೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದಾಗ ಈತ ಒಬ್ಬಂಟಿಯಾಗಿದ್ದುದು ಒಂದು ದುರಂತ.
ಆತನ ನಾಲ್ಕು ದಶಕಗಳ ಕಾಲದ ಧೀರ್ಘ ಬದುಕಿನಲ್ಲಿ ಸಮರ್ಥ ನಿರ್ಮಾಪಕ ಮತ್ತು ನಿರ್ದೇಶಕರ ಚಿತ್ರಗಳಲ್ಲಿ ಭಿನ್ನ ಭಿನ್ನ ಶೈಲಿಯ ಪಾತ್ರಗಳಲ್ಲಿ ಅಭಿನಯಿಸಿದ. ನೋಡುಗರ ಅರಿವಿನ ದಿಗಂತವನ್ನು ವಿಸ್ತರಿಸಿದ, ಇನ್ನೂ ಕೆಲ ಕಾಲ ನಮ್ಮನ್ನು ರಂಜಿಸುತ್ತ ಸಕ್ರಿಯವಾಗಿ ಇರಬಲ್ಲ ಎನ್ನುವ ನಂಬಿಕೆಯ ಸಂಧರ್ಭದಲ್ಲಿಯೆ ನಮಗೆಲ್ಲ ಅನಿರೀಕ್ಷಿತವಾದ ವಿದಾಯ ಹೇಳಿ ಹೊರಟು ಬಿಟ್ಟಿದ್ದಾನೆ. ‘ಹುಟ್ಟು ಸುಳ್ಳು ಸಾವು ಸತ್ಯ’ ಎಂಬ ಬದುಕಿನ ವಾಸ್ತವದ ದರ್ಶನವನ್ನು ನಮಗೆ ಮಾಡಿಸಿ ತೆರಳಿದ್ದಾನೆ. ಚಿತ್ರರಂಗದಲ್ಲಿ ಅನೇಕ ಕಲಾವಿದರು ತಮ್ಮವೆ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿ ಸಾಗಿ ಹೋಗಿದ್ದಾರೆ, ಓಂ ನೀನೂ ಸಹ ನಿನ್ನದೆ ಛಾಪಿನ ವೈಶಿಷ್ಟ್ಯಪೂರ್ಣ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿದ್ದೀಯಾ. ಅವುಗಳು ಎಂದಿಗೂ ಅಳಿಸಲಾಗದ ಹೆಜ್ಜೆ ಗುರುತುಗಳು ಅವ್ಯಕ್ತ ಲೋಕದೆಡೆಗಿನ ನಿನ್ನ ಪಯಣ ಸುಖಕರವಾಗಿರಲಿ ಓಂ! ಶಾಂತಿ ಶಾಂತಿ ಶಾಂತಿಃ!.
ಚಿತ್ರಕೃಪೆ ;ಅಂತರ್ ಜಾಲ(http://bit.ly/2j4UMC2)
ದಿನಾಂಕ. 7. 1. 2017.
*
Comments
ಉ: ' ಚಾರಿತ್ರಿಕ ನಟ ಓಂ ಪುರಿ '
ಓಂ ಪುರಿಯವರಿಗೆ ’ಧರಣಿ ಮಂಡಲ ಮಧ್ಯದೊಳಗೆ’ ಹಾಡಿನ ಕುತೂಹಲ ಎಷ್ಟರ ಮಟ್ಟಿಗೆ ಇತ್ತೆಂದರೆ ಅವರು ಈ ಹಾಡಿನ ರೆಕಾರ್ಡಿಂಗಿನಲ್ಲೂ ಬಂದು ಪಾಲ್ಗೊಳ್ಳುತ್ತಿದ್ದರಂತೆ. ಅವರು ಕನ್ನಡದ ಅನೇಕ ಪದಗಳನ್ನು ಕಲಿತು ಉಪಯೋಗಿಸುತ್ತಾ ಮಾತಾಡುವುದು ಎಲ್ಲರಿಗೂ ಮುದ ನೀಡುತ್ತಿತ್ತಂತೆ.
ಪಾಟೀಲರಿಗೆ ಇನ್ನೊಂದು ಗುರುತರ ಲೇಖನಕ್ಕಾಗಿ ಅನೇಕ ಧನ್ಯವಾದಗಳು
ಅರವಿಂದ
In reply to ಉ: ' ಚಾರಿತ್ರಿಕ ನಟ ಓಂ ಪುರಿ ' by Aravind M.S
ಉ: ' ಚಾರಿತ್ರಿಕ ನಟ ಓಂ ಪುರಿ '
ಅರವಿಂದ.ಎಂ.ಎಸ್. ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಸಂತಸವಾಯಿತು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.