ಭಾಗ ೧೬ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕಬಂಧನು ಕದಲನು......ಮಿಸುಕದಿದ್ದರೆ ಒಳಿತು ಮಾಡುತ್ತಾನೆ!

ಭಾಗ ೧೬ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕಬಂಧನು ಕದಲನು......ಮಿಸುಕದಿದ್ದರೆ ಒಳಿತು ಮಾಡುತ್ತಾನೆ!

ಚಿತ್ರ

ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರ ಚಿತ್ರಕೃಪೆ: ಗೂಗಲ್  
     ಮೆಕಾಲೆಯು ಕ್ರಿ.ಶ. ೧೯೩೪ರಲ್ಲಿ ಒಪ್ಪಿಸಿದ ವರದಿಯನ್ನು ಆಧರಿಸಿ ೧೯೪೯ರವರೆಗೂ ಅನೇಕ ವಿದ್ಯಾ ಸಮಿತಿಗಳು  ಬ್ರಿಟಿಷರಿಂದ ರಚಿಸಲ್ಪಟ್ಟವು. ಇವೆಲ್ಲವೂ ಕ್ರಮೇಣ ’ಕಬಂಧ ಬಾಹು’ವಿನಂತೆ ಆಂಗ್ಲರ ಪ್ರಭಾವವು ನಮ್ಮ ಮಿದುಳಿನೊಳಕ್ಕೆ ವಕ್ಕರಿಸಲು ಮಾತ್ರವೇ ಅನುಕೂಲಕರವಾಗಿದ್ದವು! "ವಿದ್ಯಾ ಸಂಸ್ಥೆಗಳ ಮೇಲೆ ಬ್ರಿಟಿಷ್ ಆಧಿಪತ್ಯದ ಹಿಡಿತವನ್ನು ಸಡಿಲಿಸಬೇಕಾದರೆ ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕೆಂದು ಕ್ರಿ.ಶ. ೧೮೮೨ರಲ್ಲೇ ಹಂಟರ್ ಎನ್ನುವ ಶಿಕ್ಷಣ ತಜ್ಞನು ಅಂದಿನ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ರಿಪ್ಪನ್‌ಗೆ ಕಿವಿಮಾತು ಹೇಳಿದ್ದ. "ಕಾಲೇಜುಗಳನ್ನು ನಡೆಸುವ ವಿದ್ಯಾಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯರಿಗೆ ವರ್ಗಾವಯಿಸುವ ಮುನ್ನ ಬ್ರಿಟಿಷರ ವಿದ್ಯಾವಿಧಾನದ ಲಕ್ಷ್ಯಗಳಿಗೆ ಭಂಗವುಂಟಾಗದೆನ್ನುವ ಸಂಪೂರ್ಣ ನಂಬಿಕೆಯುಂಟಾದ ಮೇಲಷ್ಟೆ ಅವರಿಗೆ (ಭಾರತೀಯರಿಗೆ) ಜವಾಬ್ದಾರಿಯನ್ನು ಹಸ್ತಾಂತರಿಸಬೇಕು" ಎಂದು ಹಂಟರ್ ತನ್ನ ವರದಿಯಲ್ಲಿ ಹೇಳಿದ್ದ. ಆ ಲಕ್ಷ್ಯಗಳು ಯಾವುವು ಎನ್ನುವುದನ್ನು ಅದಾಗಲೇ ಕ್ರಿ.ಶ. ೧೮೩೪ರಲ್ಲಿ ಮೆಕಾಲೆ ಹಾಗು ೧೮೫೪ರಲ್ಲಿ ಚಾರ್ಲ್ಸ್ ವುಡ್ ನಿರ್ಧರಿಸಿದ್ದರು. ಬ್ರಿಟಿಷರಂತೆ ಆಲೋಚಿಸುವ ಉದ್ಯೋಗಿಗಳನ್ನು (ಗುಮಾಸ್ತ) ತಯಾರು ಮಾಡುವುದೇ ಅವರ ಪ್ರಧಾನ ಲಕ್ಷ್ಯವಾಗಿತ್ತು! "ಮುಸ್ಲಿಮರಿಗೆ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡಬೇಕು" ಎನ್ನುವ ಮತ್ತೊಂದು ಶಿಫಾರಸ್ಸನ್ನು ಮಾಡುವ ಮೂಲಕ ಹಂಟರ್ ಕೋಮುದ್ವೇಷದ ವಿಷಬೀಜಕ್ಕೆ ಅಂಕುರಾರ್ಪಣ ಮಾಡಿದ್ದ!
*****
ಕಬಂಧನು ಕದಲನು......ಮಿಸುಕದಿದ್ದರೆ ಒಳಿತು ಮಾಡುತ್ತಾನೆ!
          ಮಹಾಭಾರತ ಯುದ್ಧ ಮುಗಿದು ಅಷ್ಟರಲ್ಲಾಗಲೇ ಸಾವಿರದ ಮುನ್ನೂರು ವರ್ಷಗಳಾಗಿದ್ದವು. ಸುಮಾರು, ಕ್ರಿಸ್ತಪೂರ್ವ ನಾನ್ನೂರು ವರ್ಷಗಳ ಹಿಂದಿನ ಮಾತು....... ಆದಿ ಶಂಕರರು ಸುಮಾರು ನೂರು ವರ್ಷಗಳ ಹಿಂದೆ ಜನಿಸಿ ಸರ್ವಮತ ಸಮನ್ವಯ ವ್ಯವಸ್ಥೆಯ ಪುನುರುತ್ಥಾನವನ್ನು ಕೈಗೊಂಡಿದ್ದರು.  ಅದರ ಫಲವಾಗಿ ಯಾವತ್ ಭಾರತ ದೇಶದಲ್ಲಿ ವೇದಗಳನ್ನು ವಿರೋಧಿಸುತ್ತಿದ್ದ ಬೌದ್ಧಮತದ ಪ್ರಭಾವವು ಕ್ರಮೇಣ ಕ್ಷೀಣಿಸುತ್ತಿದ್ದ ದಿನಗಳವು! ಆದರೆ ಮಗಧ ಪ್ರಾಂತ್ಯವು ಮಾತ್ರ ಆಗಲೂ ವೇದಗಳನ್ನು ತೀವ್ರವಾಗಿ ಖಂಡಿಸುವ ಬೌದ್ಧಮತದ ಪ್ರಮುಖ ಕೇಂದ್ರವಾಗಿ ಮುಂದುವರೆದಿತ್ತು. ವೈದಿಕ ಧರ್ಮದ ಅನುಯಾಯಿಗಳನ್ನು ಬೌದ್ಧ ಧರ್ಮಕ್ಕೆ ಮತಾಂತರಿಸುವ ಪ್ರಯತ್ನಗಳು ಇನ್ನೂ ಪ್ರಬಲವಾಗಿ ಸಾಗುತ್ತಲೇ ಇದ್ದವು. ಗಿರಿವ್ರಜವನ್ನು ರಾಜಧಾನಿಯಾಗಿ ಮಾಡಿಕೊಂಡು ಭಾರತ ದೇಶದ ಸಾಮ್ರಾಟರಾದ ಆಂಧ್ರ ಶಾತವಾಹನರು ರಾಜ್ಯಾಡಳಿತದ ಚುಕ್ಕಾಣಿ ಹಿಡಿದು ನಾಲ್ಕು ಶತಮಾನಗಳಾಗಿತ್ತು. ಆ ಸಾಮ್ರಾಟರು ಬೌದ್ಧಧರ್ಮದ ಅನುಯಾಯಿಗಳಾಗಿದ್ದರು. ಆಮೇಲೆ ಸುಮಾರು ನೂರು ವರ್ಷಗಳ ನಂತರ ಶಾತವಾಹನರನ್ನು ಜಯಿಸಿ ಗುಪ್ತವಂಶದವರು ಭರತ ಖಂಡದ ಅಧಿಪತಿಗಳಾದರು.
          ಈ ಸಂಧಿಕಾಲದಲ್ಲಿ ಕಜಂಗಾಲ ಎನ್ನುವ ಗ್ರಾಮದಲ್ಲಿ ಶೋಣೋತ್ತರ ಎನ್ನುವ ವೇದ ಪಂಡಿತನೊಬ್ಬನಿದ್ದನಂತೆ.  ಆ ಶೋಣೋತ್ತರನಿಗೆ ಮೂರು ಜನ ಕುಮಾರರಿದ್ದರು. ಎರಡನೆಯ ಕುಮಾರನಾದ ನಾಗಸೇನನು ತನ್ನ ಜೀವಮಾನವನ್ನೆಲ್ಲಾ ವೈದಿಕ ಧರ್ಮಾಚರಣೆ ಮತ್ತು ಪ್ರಚಾರಕ್ಕೆ ಮುಡುಪಾಗಿಟ್ಟಿದ್ದ. ಆದರೆ, ಇದೇ ನಾಗಸೇನನು ರಚಿಸಿದ ’ಮಿಲಿಂದಪನ್ಹಾ’ ಎನ್ನುವ ಬೌದ್ಧ ಧರ್ಮಗ್ರಂಥದ ಪ್ರಭಾವದಿಂದಾಗಿ ಬೌದ್ಧಧರ್ಮವು ಮತ್ತಷ್ಟುಕಾಲ ವಿರಾಜಮಾನವಾಗಿರಲು ಕಾರಣವಾಯಿತು! ಇದು ಐತಿಹಾಸಿಕ ಸತ್ಯ. ಈ ಸತ್ಯವನ್ನು ಆಧರಿಸಿ ಶ್ರೀಯುತ ವಿಶ್ವನಾಥ ಸತ್ಯನಾರಾಯಣ ಎನ್ನುವವರು ’ನಾಗಸೇನುಡು’ ಎನ್ನುವ ಕಾದಂಬರಿಯನ್ನು ತೆಲುಗಿನಲ್ಲಿ ರಚಿಸಿದರು. ಅದರಲ್ಲಿ ಬರುವ ಶೋಣೋತ್ತರನ ಹಿರಿಯ ಮಗನ ಹೆಸರು ಧೂರ್ಜಟಿ, ಎರಡನೆಯವನು ನಾಗಸೇನ ಮತ್ತು ಕಿರಿಯವನು ಶೌರಿ. ಆ ಮೂವರೂ ವೇದ ಪಾರಂಗತರೆ, ಆದರೆ ಶೌರಿ ರಾಜನ ಆಸ್ಥಾನದಲ್ಲಿ ಉನ್ನತ ಹುದ್ದೆಯೊಂದನ್ನು ಪಡೆಯಲು ಬೌದ್ಧಮತಾನುಯಾಯಿಯಾದ ಅಧಿಕಾರಿಯೊಬ್ಬನ ಮಗಳನ್ನು ಮದುವೆಯಾದನು. ಆ ’ಅಧಿಕಾರಿ ಮಾವ’ನ ದೆಸೆಯಿಂದಾಗಿ ಶೌರಿಯು ಒಂದು ಪ್ರಾಂತಕ್ಕೆ ಅಧಿಪತಿಯೂ ಆದ! ಅವನಿಗೆ ಮತಧರ್ಮಗಳಿಗಿಂತ ಅಧಿಕಾರ ಲಾಲಸೆ ಹೆಚ್ಚಾಗಿತ್ತು.
          ಕಜಂಗಾಲ ಗ್ರಾಮದಿಂದ ಹೊರಟ ದೊಡ್ಡಣ್ಣ ಧೂರ್ಜಟಿ ರಾಜಧಾನಿಯನ್ನು ಸೇರಿದ. ಶೌರಿಯ ಅರಮನೆಯಲ್ಲಿ ಉಳಿದುಕೊಂಡದ್ದರಿಂದ ಅವನಿಗೆ ಕಸಿವಿಸಿಯುಂಟಾಯಿತು. ಹೀಗೆ ಐದಾರು ದಿನಗಳು ಗತಿಸಿದವು. ಅಣ್ಣನಿಗೆ ಸ್ವಲ್ಪ ಮನೋರಂಜನೆಯನ್ನು ಒದಗಿಸೋಣವೆಂದು ಭಾವಿಸಿದ ಶೌರಿಯು ಒಬ್ಬ ಗಾಯಕನನ್ನು ಕರೆಸಿದ. ಆ ಗಾಯಕನ ಹೆಸರು "ವೆಲಿಯೋನಸ್". ಈ ವೆಲಿಯೋನಸನು ಬಹಳ ಅಸಭ್ಯವಾದ ಭಾವಗೀತೆಗಳನ್ನು ಹಾಡುತ್ತಿದ್ದ. ಆದರೆ ಅವನು ಹಾಡುತ್ತಿದ್ದ ಶೈಲಿ ಮಾತ್ರ ಶಿಷ್ಠತನದಿಂದ ಕೂಡಿತ್ತು! "ಅಸಭ್ಯವೆಂದು ಅಕ್ಷೇಪಣೆಯನ್ನು ವ್ಯಕ್ತ ಪಡಿಸುತ್ತಲೇ ಶ್ರೋತೃಗಳು ಆ ಹಾಳು ಗೀತೆಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದರು. ಪ್ರೇಕ್ಷಕರು ಆ ಹಾಳು ಭಾವಗೀತೆಗಳನ್ನು ಕೇಳುವುದನ್ನು ಒಂದು ವ್ಯಸನವಾಗಿ ರೂಢಿಸಿಕೊಂಡಿದ್ದರು". ತನ್ನ ಅಣ್ಣ ವೆಲಿಯೋನಸ್‌ನ ಹಾಡುಗಳನ್ನು ಕೇಳಿ ಪುಳಕಿತಗೊಂಡು ಇನ್ನೂ ಸ್ವಲ್ಪ ದಿನಗಳ ಕಾಲ ತನ್ನಲ್ಲಿರುತ್ತಾನೆನ್ನುವುದು ಶೌರಿಯ ಮನೋಭಿಲಾಷೆಯಾಗಿತ್ತು. ಆದರೆ, ವೆಲಿಯೋನಸನನ್ನು ಕೋಟೆಯೊಳಗೆ ಬಿಟ್ಟುಕೊಂಡರೆ ಒಂದು ಸಮಸ್ಯೆಯಿತ್ತು, ಅದೇನೆಂದರೆ ಅವನೊಂದಿಗೆ ಮತ್ತೊಬ್ಬನೂ ಬಂದು ತಳವೂರುತ್ತಿದ್ದ. ಅವನ ಹೆಸರು ಕಬಂಧ! ಈ ಕಬಂಧನು ಕೊಳಗದಷ್ಟು ಗುಗ್ಗರಿಯನ್ನು (ಬೇಯಿಸಿದ ಕಡಲೆಕಾಳು) ತಿನ್ನುತ್ತಿದ್ದ. ಅವನದು ಬಾಯಿಯಾಗಿರಲಿಲ್ಲ..... ಅದು ಬೀಸುವ ಕಲ್ಲಾಗಿತ್ತು! ವೆಲಿಯೋನಸ್‌ನನ್ನು ಆಹ್ವಾನಿಸಿದ ಮೇಲೆ ಅವನಿಂದ ಬೇಕಾದರೆ ತಪ್ಪಿಸಿಕೊಳ್ಳಬಹುದು ಆದರೆ ಕಬಂಧನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ಶೌರಿಯ ಸೇವಕನು ಅವನನ್ನು ಎಚ್ಚರಿಸುತ್ತಲೇ ಇದ್ದನು. ಆ ಕಬಂಧನು ಒಂದು ಕಡೆ ಕುಳಿತುಕೊಂಡಿರುತ್ತಾನಂತೆ! ಆಗಾಗ ಅಷ್ಟೋ ಇಷ್ಟೊ ನಗುತ್ತಾನಂತೆ. ಆಗ ಅವನಿಗೆ ಗುಗ್ಗರಿಯನ್ನು ಕೊಟ್ಟವರಿಗೆ "ಬಹಳ ಒಳ್ಳೆಯದು" ಜರುಗುತ್ತದಂತೆ...... ಎಂದು ಹೇಳುತ್ತಾ ಶೌರಿ ಸೇವಕನ ಮಾತನ್ನು ನಿರ್ಲಕ್ಷಿಸಿದ.
          ಧೂರ್ಜಟಿ ಮೊದಲನೆಯ ದಿವಸ ವೆಲಿಯೋನಸನ ಹಾಡನ್ನು ಕೇಳಿದ. ಅದನ್ನು ಕೇಳಿ ಅಸಹ್ಯ ಪಟ್ಟುಕೊಂಡ. ತನ್ನ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡ. ಹಾಡುಗಳನ್ನು ನಿಲ್ಲುಸುವಂತೆ ಸೇವಕನಿಗೆ ಹೇಳೋಣವೆಂದುಕೊಂಡನು. ಆದರೆ ಅಲ್ಲೆಲ್ಲೂ ಸೇವಕರ ಸುಳಿವೇ ಕಾಣಲಿಲ್ಲ. ಮೊದಲನೆಯ ದಿನ, ಧೂರ್ಜಟಿ ಸ್ನಾನವನ್ನು ಮಾಡಿ ಗಾಯತ್ರಿ ಜಪವನ್ನು ಮಾಡಿದ. ಎರಡನೆಯ ದಿನವೂ ವೆಲಿಯೋನಸನ ಹಾಡನ್ನು ಕೇಳಿದ. ಧೂರ್ಜಟಿಯು ಅವನು ಹಾಡುವುದನ್ನು ನಿಲ್ಲಿಸಿದ ಮೇಲೆ ಸ್ನಾನವನ್ನು ಮಾಡಿದ, ಆದರೆ ಗಾಯತ್ರಿ ಮಂತ್ರವನ್ನು ಜಪಿಸುವುದನ್ನು ಮರೆತುಹೋದ. ಮೂರನೆಯ ದಿವಸ  ವೆಲಿಯೋನಸನು ಆಲಾಪಿಸಿದ ಮ್ಲೇಚ್ಛ ಗೀತೆಗಳನ್ನು ಕೇಳಿದ. ಧೂರ್ಜಟಿಯು, ಮರುದಿನ ಸ್ನಾನ ಮಾಡುವುದನ್ನೂ ಮರೆತುಹೋದ. ಪ್ರಾಯಶ್ಚಿತ್ತಕ್ಕಾಗಿ ಗಾಯತ್ರಿ ಮಂತ್ರವನ್ನು ಜಪಿಸಬೇಕು ಎನ್ನುವ ನೆನಪೂ ಸಹ ಅವನಿಗೆ ಉಂಟಾಗಲಿಲ್ಲ. ಆದರೆ ಧೂರ್ಜಟಿ ದೃಢಚಿತ್ತವುಳ್ಳವನಾಗಿದ್ದ ಹಾಗಾಗಿ ನಾಲ್ಕನೆಯ ದಿವಸ ಅವನಿಗೆ ಸಂಧ್ಯಾವಂದನೆಯ ಸಮಯಕ್ಕೆ ತನ್ನ ತಪ್ಪಿನ ಅರಿವಾಯಿತು - ತಾನು ವೆಲಿಯೋನಸನ ಹಾಡಿನಿಂದ ಪ್ರಭಾವಿತನಾಗುತ್ತಿದ್ದೇನೆನ್ನುವುದರೆಡೆಗೆ ಅವನ ದೃಷ್ಟಿಯು ನೆಟ್ಟಿತು. ಐದನೆಯ ದಿನ ಅವನು ಬೆಳ್ಳಂಬೆಳಿಗ್ಗೆ ಯಾರಿಗೂ ಹೇಳದೇ ಕೇಳದೇ ಶೌರಿಯ ಅರಮನೆಯಿಂದ ತಪ್ಪಿಸಿಕೊಂಡು ತನ್ನ ಊರಾದ ಕಜಂಗಾಲಕ್ಕೆ ಹೊರಟು ಹೋದ. ಹಾಗೆ ಧೂರ್ಜಟಿಯು ತಪ್ಪಿಸುಕೊಂಡು ಹೋಗುತ್ತಿದ್ದಾಗ ವೆಲಿಯೋನಸನ ಜೊತೆಗೆ ಬಂದು ಅರಮನೆಯ ಮಹಾದ್ವಾರದಲ್ಲಿ ಕದಲದೆ ಗೂಟದಂತೆ ನಿಂತಿದ್ದ ಕಬಂಧನು ಗಟ್ಟಿಯಾಗಿ ನಕ್ಕನು! ವೆಲಿಯೋನಸನು ಹಗಲು ಬಂದು ರಾತ್ರಿಯಾಗುವುದರೊಳಗೆ ನಿಷ್ಕ್ರಮಿಸುತ್ತಿದ್ದ. ಆದರೆ ಕಬಂಧನು ಮೊದಲನೆಯ ದಿನ ಬಂದವನು ಹಿಂದಿರುಗಿ ಹೋಗಿರಲಿಲ್ಲ. ಅವನು ಬರುವಾಗ ಅವನನ್ನು ಯಾರಿಗೂ ಕಾಣಿಸಿರಲಿಲ್ಲ! ವೆಲಿಯೋನಸನು ಕೆಲಸವಾದ ಮೇಲೆ ಹೊರಟು ಹೋದ, ಆದರೆ ಕಬಂಧನು ಮಾತ್ರ ಹಿಂತಿರುಗಿ ಹೋಗಲಿಲ್ಲ. ವೆಲಿಯೋನಸನನ್ನು ಶೌರಿ ಮತ್ತೆ ಕರೆಯುವ ಗೋಜಿಗೆ ಹೋಗಲಿಲ್ಲ. ಆದರೆ ಕಬಂಧನನ್ನು ಅಲ್ಲಿಂದ ಓಡಿಸಲು ಶೌರಿಗಾಗಲಿ ಅವನ ಸೈನಿಕರಿಗಾಗಲಿ ಸಾಧ್ಯವಾಗಲಿಲ್ಲ. ಅವನು ಕಂಬದಂತೆ ಕದಲದೇ ಅಲ್ಲೇ ತಳವೂರಿ ನಿಂತುಬಿಟ್ಟಿದ್ದ. ಅವನನ್ನು ಸರಪಳಿಯಿಂದ ಬಂಧಿಸಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದರೆ ಅವನು ಆ ಕಬ್ಬಿಣದ ಸರಪಳಿಯನ್ನೇ ತುಂಡರಿಸಿದ. ಕಬಂಧನನ್ನು ಬಂಧಿಸುವ ಎಲ್ಲಾ ಪ್ರಯತ್ನಗಳೂ ವಿಫಲವಾದವು........ ಅಲ್ಲಿಗೆ ವೆಲಿಯೋನಸನ ಉದ್ದೇಶ ಈಡೇರಿತ್ತು. ಕಬಂಧನನ್ನು ಶೌರಿಯ ಮನೆಯಲ್ಲಿ ತಳವೂರಿಸುವುದು ಅವನ ಗುರಿಯಾಗಿತ್ತು! ಕಬಂಧನು ಕದಲದೆ ಅಲ್ಲಿಯೇ ಸ್ಥಿರಪಟ್ಟ.....! ಬ್ರಿಟಿಷರು ನಮ್ಮ ದೇಶದಿಂದ ಹೊರಟು ಹೋದರು, ಆದರೆ ಅವರ ಕರೆತಂದು ಬಿಟ್ಟ ಮೆಕಾಲೆ ವಿದ್ಯೆ ಇಲ್ಲಿಂದ ತೊಲಗಲಿಲ್ಲ!
         ಕದಲದ ಕಬಂಧನು ಶೌರಿಗೆ ಎಷ್ಟೋ "ಒಳಿತ"ನ್ನು ಮಾಡಿದನು! ಆದ್ದರಿಂದ ಕಬಂಧನು ಇಲ್ಲದಿದ್ದರೆ ತನಗೆ ಗತ್ಯಂತರವಿಲ್ಲವೆಂದು ಶೌರಿಯು ನಿಶ್ಚಯಿಸಿಕೊಂಡನು. "ಮೆಕಾಲೆ ವಿದ್ಯಾವಿಧಾನವನ್ನು ನಾವು ಕೈಬಿಟ್ಟರೆ ಹೇಗೆ? ವಿಶ್ವದೊಂದಿಗೆ ನಮ್ಮ ಸಂಬಂಧವು ಕಡಿದು ಹೋಗುವುದಿಲ್ಲವೇ? ನಮಗೆ ಉದ್ಯೋಗಗಳು ಹೇಗೆ ಬರುತ್ತವೆ? ಎಂದು ಪ್ರಶ್ನಿಸುವ ಮೇಧಾವಿಗಳ ಸಂಖ್ಯೆ ದಿನದಿನಕ್ಕೆ ಅಧಿಕವಾಗುತ್ತಲೇ ಇದೆ. ಕಬಂಧನು ಶೌರಿಗೆ ಮಗಧ ಸಾಮ್ರಾಜ್ಯದ ಸೇನಾಧಿಪತ್ಯವನ್ನು ಕೊಡಿಸಿದ್ದ! ಅಲ್ಲದೆ ಅವನಿಗೆ ಕತ್ತಿವರೆಸೆಯನ್ನೂ ಕಲಿಸಿಕೊಟ್ಟಿದ್ದ....... ಕಬಂಧನು ಇಲ್ಲದಿದ್ದರೆ ಖಡ್ಗದ ಮೂಲಕ ಯುದ್ಧ ಮಾಡುವುದು ಸಾಧ್ಯವಿಲ್ಲ ಎಂದು ಶೌರಿ ಭಾವಿಸಿದ! "ಮೆಕಾಲೆ ವಿದ್ಯಾವಿಧಾನವನ್ನು ನಾವು ಕೈಬಿಟ್ಟರೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮಗೆ ಮಾನ್ಯತೆಯಿಲ್ಲದೇ ಹೋಗುತ್ತದೆ" ಎನ್ನುವ ಮಾತುಗಳು ಸುರೇಂದ್ರನಾಥ ಬ್ಯಾನರ್ಜಿಯಂಥವರಿಂದ ಮೊದಲಾದವು. ಬಂಕಿಮಚಂದ್ರ ಚಟರ್ಜಿ, ಶ್ರೀ ಅರವಿಂದರು  ಮೊದಲಾದವರು ಧೂರ್ಜಟಿಯಂತೆ ತಾವಿದ್ದ ಪ್ರಭಾವಲಯವನ್ನು ಭೇದಿಸಿದರು, ಅದರಿಂದ ತಪ್ಪಿಸಿಕೊಂಡರು. ಸುರೇಂದ್ರನಾಥ ಬ್ಯಾನರ್ಜಿಯ ಥರದವರು ಮಾತ್ರ ಆ ಪ್ರಭಾವಲಯದೊಳಗೆ ಸಿಲುಕಿ ಗಿರಿಕಿ ಹೊಡೆದರು! "ಮೊಟ್ಟಮೊದಲ ಬಾರಿಗೆ ಒಂದು ರಾಷ್ಟ್ರದ (ದೇಶದ) ಅವತರಣವಾಗುತ್ತಿದೆ ಎಂದು ಮೆಕಾಲೆ ಪ್ರಭಾವಿತರು ೧೩೦-೧೪೦ ವರ್ಷಗಳ ಹಿಂದೆಯೇ ಪ್ರಚಾರ ಮಾಡಿದರು. ಬ್ಯಾನರ್ಜಿಯವರು ಇಂಗ್ಲೀಷಿನಲ್ಲಿ "ಎ ನೇಷನ್ ಇನ್ ದಿ ಮೇಕಿಂಗ್ - ನಿರ್ಮಾಣವಾಗುತ್ತಿರುವ ಒಂದು ದೇಶ (ರಾಷ್ಟ್ರ)" ಎನ್ನುವ ಗ್ರಂಥವನ್ನು ರಚಿಸಿದರು. ಅಲ್ಲಿಯವರೆಗೆ ಅಂದರೆ ೧೯೪೭ರವರೆಗೆ ನಾವು ಒಂದು ದೇಶವಾಗಿ ಏರ್ಪಟ್ಟಿರಲಿಲ್ಲವೆನ್ನುವ ಭ್ರಮೆಯು ಜನರಲ್ಲಿ ಆವರಿಸಿಕೊಂಡಿತು! ತಪ್ಪಿಸಿಕೊಂಡು ಹೋದ ಧೂರ್ಜಟಿ ಧರ್ಮವನ್ನು ರಕ್ಷಿಸಿದ, ಆದರೆ ಅಧಿಕಾರವನ್ನು ಹೊಂದಿದ ಶೌರಿ, ಹೊಸ ಧರ್ಮ - ರಾಜಕೀಯ ಧರ್ಮವನ್ನು- ಕುರಿತು ಪ್ರಚಾರ ಮಾಡಿದ. ಶ್ರೀ ಅರವಿಂದರು, ಬಂಕಿಮಚಂದ್ರ ಚಟರ್ಜಿ, ಸಂಘ ಸ್ಥಾಪಕ ಡಾಕ್ಟರ್ ಕೇಶವ ಬಲಿರಾಮ್ ಹೆಡ್ಗೆವಾರ್ ಮೊದಲಾದವರು ಮೆಕಾಲೆ ಪ್ರಭಾವಲಯವನ್ನು ಛಿದ್ರಗೊಳಿಸಿದರು. ಈ ದೇಶವು ಅನಾದಿಕಾಲದಿಂದಲೂ ಒಂದು ರಾಷ್ಟ್ರವಾಗಿಯೇ ಇತ್ತೆಂದೂ ಪದೇ ಪದೇ ನಿರೂಪಿಸಿ ತೋರಿಸಿದರು. ಸುರೇಂದ್ರನಾಥ ಬ್ಯಾನರ್ಜಿಯ ವಾರಸುದಾರರಾದ ಕಾಂಗ್ರೆಸ್ ಚಳವಳಿಗಾರರು ಹೊಸದಾದ ರಾಷ್ಟ್ರವೊಂದನ್ನು ಕಟ್ಟುತ್ತಿದ್ದೇವೆಂಬ ಭ್ರಮೆಗೆ ಸಿಲುಕಿದರು. ಅವರು, ಶೌರಿಯಂತೆ, ಕಬಂಧನು ನಿರ್ಣಯಿಸಿದ ಮಾರ್ಗದಲ್ಲಿ ಸ್ವಾತಂತ್ರ್ಯ ಉದ್ಯಮವನ್ನು ಮುಂದಕ್ಕೆ ಕೊಂಡೊಯ್ದರು. ಈ ಚಳವಳಿಗಾರರಿಗೆ ೧೯೪೭ರವರೆಗೆ ಬ್ರಿಟಿಷರ ಮಾನ್ಯತೆ ಕೂಡಾ ಸಿಕ್ಕಿತ್ತು. ಅವರಿಗೆ ಸುಖಕರವಾದ ಜೈಲುಗಳು, ಆ ಜೈಲುಗಳಲ್ಲಿ ಮೆಕಾಲೆ ವಿದ್ಯೆಗೆ ಇಂಬು ಕೊಡುವ ಪುಸ್ತಕಗಳೂ ಲಭ್ಯವಾದವು. ನಾಗಸೇನನಂತೆ ಲೋಕಮಾನ್ಯ ತಿಲಕರೂ ಸಹ ಆಂಗ್ಲರನ್ನು ವಿರೋಧಿಸಿದ್ದಕ್ಕಾಗಿ ತಮ್ಮ ಜೀವನದಲ್ಲಿ ನಾನಾ ವಿಧವಾದ ಕಷ್ಟಗಳನ್ನು ಅನುಭವಿಸುವಂತಾಯಿತು. ಕಡೆಯಲ್ಲಿ, ಬ್ರಿಟೀಷರು ಪ್ರತಿಪಾದಿಸಿದ ಕೆಲವೊಂದು ಸಿದ್ಧಾಂತಗಳನ್ನು ಒಪ್ಪಿಕೊಂಡು ತಮ್ಮ ಸ್ವರಾಜ್ಯವ್ರತವನ್ನು ಭಂಗ ಮಾಡಿಕೊಂಡು ಧರ್ಮಭ್ರಷ್ಟರಾದರು. "ಆರ್ಯರು ಎನ್ನುವ ಜನಾಂಗವು ಹೊರಗಿನಿಂದ ಭರತ ಖಂಡಕ್ಕೆ ವಲಸೆ ಬಂದಿತು" ಎನ್ನುವ ಪರಂಗಿ ದೊರೆಗಳ ಸುಳ್ಳುಗಳನ್ನು ತಿಲಕರಂಥಹ ಪ್ರಖರ ರಾಷ್ಟ್ರೀಯವಾದಿಗಳು ಹಾಗು ದೇಶಭಕ್ತರು ನಂಬಿದ್ದಲ್ಲದೆ, ಆ ನಂಬಿಕೆಯನ್ನಾಧರಿಸಿ ಗ್ರಂಥಗಳನ್ನು ಬರೆದಿರುವುದು ಅವರು ದೇಶಭಕ್ತಿವ್ರತವು ಭಂಗವಾದುದಕ್ಕೆ ನಿದರ್ಶನ! ಮೆಕಾಲೆ ವಿದ್ಯಾಪ್ರಭಾವದ ತೀಕ್ಷ್ಣತೆಗೆ ಸಾಕ್ಷಿ.....!
          ಮೆಕಾಲೆ "ಪ್ರಭಾವಲಯ"ದಲ್ಲಿ ಸಿಲುಕಿ ಗಿರಿಕಿ ಹೊಡೆದವರು ೧೯೪೭ರ ಆಗಷ್ಟ್‌, ೧೫ನೇ ತಾರೀಖು ಹೊಸದೊಂದು ರಾಷ್ಟ್ರವು ಆವಿರ್ಭಾವಗೊಂಡಿತೆಂದು ಸಂಭ್ರಮಿಸಿದರು. ಅಮೇರಿಕಾದಲ್ಲಿನ ಒಂದು ’ಸಂಕರ ಜನಾಂಗ’ಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಹಾಗೆ ಭಾರತದಲ್ಲಿಯೂ ಸಹ ಒಂದು ’ಮಿಶ್ರ ಜನಾಂಗ’ಗಳ ರಾಷ್ಟ್ರವೇರ್ಪಟ್ಟಿತು ಎಂದು ಪ್ರಚಾರ ಮಾಡಲಾಯಿತು. ’ಮಿಶ್ರಮ ಸಂಸ್ಕೃತಿ - ಕಾಂಪೋಸಿಟ್ ಕಲ್ಚರ್’ ಎನ್ನುವ ಹೊಸ ಶಬ್ದವನ್ನು ಹುಟ್ಟು ಹಾಕಲಾಯಿತು. ನವೀನವಾಗಿ ಒಂದು ರಾಷ್ಟ್ರವು ಉದಯಿಸಿದ್ದರಿಂದ ಅದಕ್ಕೆ ಒಬ್ಬ ’ರಾಷ್ಟ್ರಪಿತ’ನ ಅವಶ್ಯಕತೆಯೂ ಉಂಟಾಯಿತು. ಮಹಾತ್ಮಗಾಂಧಿ ಈ ಹೊಸ ರಾಷ್ಟ್ರದ ಪಿತ ಎಂದು ಕೆಲವರು ಕರೆಯಲಾರಂಭಿಸಿದರು. ಉಳಿದವರೂ ಅದನ್ನು ಅನುಸರಿಸಿದರು! "ಅದೇನು ಸ್ವಾಮಿ ಅನಾದಿಕಾಲದಿಂದಲೂ ಇರುವ ರಾಷ್ಟ್ರಕ್ಕೆ ಈಗ ಹೊಸದಾಗಿ "ಪಿತ"ನೊಬ್ಬನು ಬರುವುದೆಂದರೇನು?" ಎಂದು ಪ್ರಶ್ನಿಸಿದರೆ, "ನೀವು ಗಾಂಧೀಜಿಯವರನ್ನು ಅವಮಾನಿಸುತ್ತಿದ್ದೀರಿ" ಎಂದು ಹೇಳಿ ಪ್ರಶ್ನಿಸಿದವರ ಬಾಯನ್ನು ಮುಚ್ಚಿಸಲಾಯಿತು! ಹೀಗೆ ಮಹಾತ್ಮಾ ಗಾಂಧಿಯವರನ್ನು ರಾಷ್ಟ್ರಪಿತನನ್ನಾಗಿ ವರ್ಣಿಸುವುದು ಆ ಮಹಾತ್ಮನಿಗೇ ಮಾಡುವ ಅಪಚಾರ! ಏಕೆಂದರೆ, ಗಾಂಧಿ ಭರತಮಾತೆಯು ಹೆತ್ತ ಅಪೂರ್ವ ಪುತ್ರರತ್ನಗಳಲ್ಲಿ ಒಬ್ಬರು. ಅಂತಹ ಸುಪುತ್ರನನ್ನು ಈ ರಾಷ್ಟ್ರದ ತಂದೆ ಎನ್ನುವುದು ವಿಚಿತ್ರವಲ್ಲವೇ?
          ಮಹಾತ್ಮಗಾಂಧಿಯಷ್ಟೇ ಅಲ್ಲ, ಆದಿಶಂಕರ, ಯದುಕುಲ ಕೃಷ್ಣ, ರಘುಕುಲ ರಾಮ, ದಿಲೀಪ, ಕಡೆಗೆ ಮೊಟ್ಟಮೊದಲ ಧರಣೀಪಾಲನಾದ ಸ್ವಾಯಂಭುವ ಮನುವೂ ಸಹ ಈ ರಾಷ್ಟ್ರಕ್ಕೆ "ಪಿತ"ರಾಗಲು ಸಾಧ್ಯವಿಲ್ಲ. ಅವರೆಲ್ಲರೂ ಭೂತಾಯಿಗೆ ಮಂಗಳವನ್ನುಂಟು ಮಾಡಿದ ಮಹೋನ್ನತ ಚಾರಿತ್ರ್ಯವುಳ್ಳವರು, "ರಾಷ್ಟ್ರಪಿತ"ರಾಗಲು ಸಾಧ್ಯವಿಲ್ಲ ಏಕೆಂದರೆ ಅವರು ಭರತ ಮಾತೆಯ ಮಕ್ಕಳು, ಚಾರಿತ್ರಿಕ ಪುರುಷರು, ರಾಷ್ಟ್ರೀಯ ವೀರರು.........
          ಒಂದು ಜನಸಮುದಾಯವು ಒಂದು ರಾಷ್ಟ್ರವಾಗಿ ಏರ್ಪಡಲು ಅವಶ್ಯವಾದ ಎಲ್ಲಾ ಮೂಲಭೂತ ಲಕ್ಷಣಗಳನ್ನು ನಮ್ಮ ದೇಶ ನಿವಾಸಿಗಳಿಗೆ ಇತ್ತೆನ್ನುವುದು ಮೆಕಾಲೆ ವಿದ್ಯಾವಿಧಾನವು ಅಮಲಿನಲ್ಲಿ ಬರುವುದಕ್ಕೆ ಮುಂಚಿತವಾಗಿ ಜನರಿಗೆ ತಿಳಿದಿತ್ತು. ಈ ಭೂ ಪ್ರದೇಶದಲ್ಲಿ ನಿವಸಿಸುವ ಪ್ರಜೆಗಳು ಸೃಷ್ಟಿಯ ಆರಂಭಕಾಲದಿಂದಲೂ ಒಂದು ರಾಷ್ಟ್ರವಾಗಿ ಏರ್ಪಟ್ಟಿದ್ದಾರೆ. ತಾವು ನಿವಸಿಸುವ ಭೂಭಾಗದ ಮೇಲೆ ಸಹಜವಾದ ಮಾತೃಭಾವವನ್ನು ಹೊಂದಿರುವ ಜನಾಂಗವು ಇರುವುದು ರಾಷ್ಟ್ರವೊಂದಕ್ಕೆ ಇರಬೇಕಾದ ಮೂಲಭೂತ ಲಕ್ಷಣಗಳಲ್ಲಿ ಪ್ರಧಾನವಾದುದು! ಸೃಷ್ಟಿಯ ಆರಂಭದಲ್ಲಿಯೇ ವೇದದ್ರಷ್ಟಾರರಿಂದ, "ಮಾತಾ ಭೂಮಿಃ ಪುತ್ರೋsಹಂ ಪೃಥಿವ್ಯಾಃ" ಎನ್ನುವ ಭಾವವು ವ್ಯಕ್ತವಾಗಿರುವುದು ಅದಕ್ಕೆ ಸಿಕ್ಕಿರುವ ಎಣೆಯಿಲ್ಲದ ಸಾಕ್ಷಿ. ಅಷ್ಟೇ ಅಲ್ಲ, ಮತಗಳು, ಭಾಷೆಗಳು, ವೈಜ್ಞಾನಿಕ ಪರಂಪರೆ ಒಂದು ರಾಷ್ಟ್ರದ ಲಕ್ಷಣಗಳು! ಭೌತಿಕ, ಆಧ್ಯಾತ್ಮಿಕ (ಧಾರ್ಮಿಕ), ವಿಜ್ಞಾನ ವಾಹಿನಿಗಳ ತ್ರಿವೇಣಿ ಸಂಗಮಗಳ ಕ್ಷೇತ್ರವಾಗಿ ಅಜನಾಭವು ಅನಾದಿಕಾಲದಿಂದಲೂ ವಿರಾಜಮಾನವಾಗಿದೆ. ಮೊಟ್ಟಮೊದಲು ಪ್ರಪಂಚದಲ್ಲೆಲ್ಲಾ ಒಂದೇ ಒಂದು ಜನಾಂಗವು ಇತ್ತು. ಹಾಗಾಗಿ ಆ ಜನಾಂಗಕ್ಕೆ ಪ್ರತ್ಯೇಕವಾದ ಹೆಸರಿರಲಿಲ್ಲ. ಈ ಜನಾಂಗವು ಈ ಭೂಮಿಯ ಮೇಲೆ ಹುಟ್ಟಿದ ಅತ್ಯಂತ ಸನಾತನವಾದ ಅಂದರೆ ಶಾಶ್ವತವಾದ ಜನಾಂಗ. ಅಷ್ಟೇ ಅಲ್ಲದೇ ಈ ಭೂಭಾಗವು ’ಅಜನಾಭ’ ಅಂದರೆ ’ಸೃಷ್ಟಿಗೆ ಮೂಲಸ್ಥಾನ’. ಈ ಅಜನಾಭದಲ್ಲಿ ಪ್ರಪ್ರಥಮ ಮಾನವನ ಉಗಮವಾಗುವುದರೊಂದಿಗೆ ಇಲ್ಲಿ ಮೊಟ್ಟಮೊದಲ ಸಂಸ್ಕಾರವೂ ವಿಕಾಸಗೊಂಡಿತು. ಕ್ರಮೇಣ ಇದು ಭಾರತೀಯ ಜನಾಂಗವೆಂದು ಗುರುತಿಸಲ್ಪಟ್ಟಿತು. ಗತ ಎರಡು ಸಾವಿರ ಸಂವತ್ಸರಗಳ (ವಿಕ್ರಮ ಶಾಲಿವಾಹನರ ಕಾಲದಿಂದ) ಹಿಂದಿನಿಂದ, ಇದು ಹಿಂದೂ ರಾಷ್ಟ್ರ ಅಥವಾ ಹಿಂದೂ ಜನಾಂಗವೆಂದು ಗುರುತಿಸಲ್ಪಡುತ್ತಿದೆ.... ಎಲ್ಲಾ ಹೆಸರುಗಳೂ ಸಹ ಅನಾದಿಕಾಲದಿಂದಲೂ ಇರುವ ಒಂದೇ ಜನಾಂಗವನ್ನು ಸೂಚಿಸುತ್ತವೆ. ಈ ಸತ್ಯವನ್ನು ಮೆಕಾಲೆ ವಿದ್ಯಾವಿಧಾನವು ಅಮಲಿನಲ್ಲಿ ಬಂದ ನಂತರವೂ ಸಹ ಬಂಕಿಮಚಂದ್ರರು ಅನಾವರಣಗೊಳಿಸಿದರು. ಇದನ್ನೇ ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು, ಪರಮಪೂಜ್ಯ ಡಾಕ್ಟರ್ ಕೇಶವ್ ಬಲಿರಾಮ್ ಹೆಡ್ಗೆವಾರರು ಮತ್ತೆ ಮತ್ತೆ ದೃಢಪಡಿಸಿದ್ದಾರೆ. ರಾಷ್ಟ್ರೀಯವಾದಿಗಳು ಈ ಸತ್ಯವನ್ನು ಪ್ರಮಾಣಪೂರ್ವಕವಾಗಿ ನಿರೂಪಿಸಿದ್ದಾರೆ. ಅನಾದಿ ಕಾಲದಿಂದಲೂ ಇರುವ ಈ ಜನಾಂಗಕ್ಕೆ ಭೂಮಿಯೇ ತಾಯಿ, ಆಕಾಶವೇ ತಂದೆ! ಮಳೆಯ ರೂಪದಲ್ಲಿ ಆಕಾಶವು ಭೂಮಿಯ ಮೇಲೆ ಸುರಿದು ಇದನ್ನು ಫಲಭರಿತವಾಗಿಸುತ್ತಿದ್ದಾನೆ ಮತ್ತು ಜನಾಂಗವನ್ನು ಪೋಷಿಸುತ್ತಿದ್ದಾನೆ. ಆದ್ದರಿಂದ ಈ ಜನಾಂಗಕ್ಕೆ ಆಕಾಶವೇ ತಂದೆ (ಪಿತ).
          ಭೂಮ್ಯಾಕಾಶಗಳು ಸನಾತನ ಜನಾಂಗಕ್ಕೆ ತಂದೆ ತಾಯಿಗಳೆಂದು ವೇದಗಳು ಪದೇ ಪದೇ ಸಾರಿ ಹೇಳಿವೆ. ಆಕಾಶ ಭೂಮಿಗಳು ಸತಿಪತಿಯರೆಂದೂ ಸಹ ವೇದಗಳಲ್ಲಿ ವಿವರಿಸಲಾಗಿದೆ.
          "ದ್ಯೌರ್ವಃ ಪಿತಾ ಪೃಥಿವೀ ಮಾತಾ"
          "ನಿನಗೆ ಆಕಾಶವು ತಂದೆ ಮತ್ತು ಭೂಮಿಯು ತಾಯಿ"
          "ದ್ಯೌರ್ಮೇ ಪಿತಾ ಮಾತಾ ಪೃಥಿವೀ"
          "ನನಗೆ ಆಕಾಶವು ತಂದೆ, ಭೂಮಿಯು ತಾಯಿ"
          "ಇದಂ ದ್ವಾವಾಪೃಥಿವೀ ಸತ್ಯಮಸ್ತು
             ಪಿತರ್ಮಾತರ್ಯದಿಹೋಪಭ್ರುವೇ"
          "ತಂದೆ ತಾಯಿಗಳಾದ ಭೂಮಿ ಮತ್ತು ಆಕಾಶಗಳೆ
          ನಿಮ್ಮನ್ನು ನಾನು ಪ್ರಾರ್ಥಿಸಿದ್ದು ಸತ್ಯವಾಗಲಿ"
(ಈ ಪ್ರಾರ್ಥನೆ ತನಗೆ ಮಾತ್ರವಲ್ಲದೆ ಸಮಸ್ತ ಭೂತಗಳನ್ನು ರಕ್ಷಿಸು ಎಂದು ಬೇಡುವುದಾಗಿದೆ.... ಅದು ಬೇರೆ ವಿಷಯ)
          ವ್ಯವಸ್ಥೆ ಒಂದು ರಾಷ್ಟ್ರಕ್ಕೆ ಇರಬೇಕಾದ ಮತ್ತೊಂದು ಅಂಗ. ಈ ವ್ಯವಸ್ಥೆಯಲ್ಲಿ ಅನೇಕ ಅಂಶಗಳಿರುತ್ತವೆ. ವಿದ್ಯಾವ್ಯವಸ್ಥೆ, ಕೃಷಿ ವ್ಯವಸ್ಥೆ, ವಾಣಿಜ್ಯ ವ್ಯವಸ್ಥೆ, ರಾಜ್ಯ (ಆಡಳಿತ) ವ್ಯವಸ್ಥೆ..... ಮೊದಲಾದವು! ಹೀಗೆ ಭಾರತೀಯ ಜನಾಂಗಕ್ಕೆ ವ್ಯವಸ್ಥೆ ಅನ್ನುವುದು ಅನೇಕ ಅಂಗಗಳಲ್ಲಿ ಒಂದು (ಯಾವುದೇ ರಾಷ್ಟ್ರ ಅಥವಾ ಜನಾಂಗಕ್ಕಾಗಲಿ ಇದು ವರ್ತಿಸುತ್ತದೆ). ಈ ವ್ಯವಸ್ಥೆಯಲ್ಲಿ ರಾಜ್ಯ (ಆಡಳಿತ) ವ್ಯವಸ್ಥೆ ಒಂದು ಅಂಶ ಮಾತ್ರವೇ. ಈ "ಶಕಲ"ವೇ "ಸಕಲ"ವೆಂದು ಬ್ರಿಟಿಷರ ವಿದ್ಯೆ ನಮ್ಮ ತಲೆಗೆ ತುಂಬಿಟ್ಟಿದೆ!" ಇದು ಎಂಥಹ ದೌರ್ಭಾಗ್ಯ! ನಮ್ಮ ಭಾರತೀಯ ಜನಾಂಗದ ವಯಸ್ಸು ಯುಗಗಳು, ಮನ್ವಂತರಗಳಷ್ಟಿದೆ..... “ಆದರೆ, ಭಾರತೀಯ ಜನಾಂಗಕ್ಕೆ ಕೇವಲ ೬ - ೭ ದಶಕಗಳಷ್ಟು ಮಾತ್ರವೇ ವಯಸ್ಸಾಗಿದೆ ಎಂದು ಮೆಕಾಲೆ ವಿದ್ಯಾ ಗ್ರಹಣದಿಂದ ಏರ್ಪಟ್ಟ ಕತ್ತಲೆಯಲ್ಲಿ ಕೇಕೆ ಹಾಕಿ ಕುಣಿಯುತ್ತಿರುವವರು ಹೇಳುತ್ತಿದ್ದಾರೆ!
          ಪ್ರತಿಯೊಂದು ಜನಾಂಗಕ್ಕೂ ಇರುವ ಪ್ರಧಾನ ಲಕ್ಷಣ ಚಾರಿತ್ರಿಕ ಸ್ಮೃತಿ! ಮೆಕಾಲೆ ವಿದ್ಯೆಯ ಪ್ರಭಾವದಿಂದಾಗಿ ಮತಿಗೆಟ್ಟ ನಮಗೆ ನಮ್ಮ ಜನಾಂಗದ ಚಾರಿತ್ರಿಕ ಸ್ಮೃತಿಯೇ ಇಲ್ಲವಾಗಿದೆ!
*****
         ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಹದಿನಾರನೆಯ ಕಂತು, "ಕಬಂಧುಡು ಕದಲಡು.... ಮಿನ್ನಕುಂಟೆ ಮೇಲು ಚೇಸ್ತಾಡು  -ಕಬಂಧನು ಕದಲನು...... ಮಿಸುಕದಿದ್ದರೆ ಒಳಿತು ಮಾಡುತ್ತಾನೆ
 
      ಈ ಸರಣಿಯ ಹದಿನೈದನೆಯ ಕಂತು, "ಜನಾಂಗಗಳನ್ನು ನಿರ್ಮೂಲಿಸಿದ್ದು ಯಾರು?" ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AB-...
 

Rating
No votes yet

Comments

Submitted by H A Patil Tue, 01/10/2017 - 20:09

ಶ್ರೀಧರ ಬಂಡ್ರಿಯವರಿಗೆ ವಂದನೆಗಳು
ನಿಮ್ಮ ಈ ಲೇಖನ ಮಾಲೆಯ ಇಂ ದಿನ ಕಂತನ್ನು ನೋಡಿದೆ ಲಾರ್ಡ ಮೆಕಾಲೆಯ ಶಿಕ್ಷಣ ಪದ್ಧತಿ ಮಾಡಿದ ಅನಾಹುತದಿಂದಾಗಿ ನಮಗಿನ್ನೂ ಹೊರ ಬರಲು ಆಗಿಲ್ಲ, ಈ ಬಗೆಗೆ ನಿಜವಾದ ಚಿಂತನೆ ನಡೆದು ಅದು ಕಾರ್ಯಗತವಾಗ ಬೇಕಿದೆ ಇಂದಿನ ಪರಸ್ಥಿತಿಯಲ್ಲಿ ಇವೆಲ್ಲ ಅಸಾಧ್ಯದ ಮಾತು ಎನಿಸುತ್ತಿದೆ ಉತ್ತಮ ಲೇಖನ ಸರಣಿ ಧನ್ಯವಾದಗಳು.

ಪಾಟೀಲರಿಗೆ ಧನ್ಯವಾದಗಳು. ನಿಮ್ಮ ಮಾತು ನಿಜ ನಾವು ಮೆಕಾಲೆ ವಿದ್ಯೆಯ ಅಮಲಿನಿಂದ ಹೊರಬರುವುದು ಅಷ್ಟು ಸುಲಭ ಸಾಧ್ಯವಲ್ಲ. ಆದರೆ ನಿಧಾನವಾಗಿ ಭಾರತೀಯರ ಚಿಂತನೆಗಳು ಆ ದಿಶೆಯಲ್ಲಿ ಸಾಗಿದರೆ ಮುಂದೊಂದು ದಿನ ನಮ್ಮ ಭವ್ಯ ಭಾರತೀಯ ಪರಂಪರೆ ಮರುಕಳಿಸುವುದರಲ್ಲಿ ಸಂಶಯವಿಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Sat, 01/14/2017 - 17:37

ಸಂಪದಿಗ ಮಿತ್ರರೆಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಉತ್ತರಾಯಣ ಪುಣ್ಯಕಾಲವು ಆರಂಭವಾಗುವ ಇಂದಿನಿಂದ ಹಗಲು ಹೆಚ್ಚುತ್ತಾ ರಾತ್ರಿಯು ಕಡಿಮೆಯಾಗುತ್ತಾ ಹೋಗುತ್ತದೆ. ಅದೇ ವಿಧವಾಗಿ ನಮ್ಮ ಕಷ್ಟಗಳು ಕಡಿಮೆಯಾಗುತ್ತಾ ಒಳಿತುಗಳು ಹೆಚ್ಚಾಗುತ್ತಾ ಸಾಗಲಿ. ಈ ಸರಣಿಯ‌ ಮುಂದಿನ ಲೇಖನಕ್ಕೆ ಇಲ್ಲಿ ಚಿಟುಕಿಸಿ https://sampada.net/blog/%E0%B2%AD%E0%B2%BE%E0%B2%97-%E0%B3%A7%E0%B3%AD-...