ಡ್ರೀಮ್ ವೈಫ್

ಡ್ರೀಮ್ ವೈಫ್

ಕನಸು ಕಾಣಬೇಕು ಎನ್ನುತ್ತಾರೆ ಕಲಾಂ ಸಾಹೇಬರು. ಅಂದರೆ ಮೊದಲು ನಿದ್ದೆ ಮಾಡಬೇಕು ಎಂದಾಯಿತು. ನಿದ್ದೆ ಮಾಡದೆ ಕನಸು ಕಾಣಲು ತೊಡಗಿದರೆ ಅದು ಹಗಲುಗನಸು ಆಗುತ್ತದೆ. ಅದು ಬರೀ ಥಿಯರಿ. ಆದರೆ ನಿದ್ದೆ ಮಾಡುತ್ತಾ ಕನಸು ಕಂಡರೆ ಅದು ಪ್ರಾಕ್ಟಿಕಲ್ ಇದ್ದಹಾಗೆ.
ನಿದ್ದೆ ಹೋಗುತ್ತಾ ಹೋಗುತ್ತಾ ಅಥವಾ ನಿದ್ದೆಗೆ ಜಾರುತ್ತಾ ಇದ್ದಾಗ ನೀವು - ನಾನೂ ಸಹ - ತರಾವರಿ ಕನಸುಗಳನ್ನು ಕಾಣಬಹುದು. ಬಿಪಾಷಾ ಬಾಸು ಜೊತೆ ವಾಕಿಂಗ್ ಹೋಗಬಹುದು. ಅವಳು ಒಪ್ಪದಿದ್ದರೂ ಸಹ. ರಾಖಿ ಸಾವಂತ್ ಜೊತೆ ಚಾ ಸೇವಿಸಬಹುದು; ಒಂದು ಫೈವ್ ಅಥವಾ ಸೆವೆನ್ ಸ್ಟಾರ್ ಹೋಟೆಲ್‍ನಲ್ಲಿ ಮಾಧುರಿ ದೀಕ್ಷಿತ್ ಜತೆ ಲೋಕಾಭಿರಾಮವಾಗಿ ಹರಟಿರಬಹುದು - ಅವಳ ಗಂಡನನ್ನು ದೂರವಿಟ್ಟು, ಎಸ್ ಆರ್ ಖಾನ್ - ಅದೇ ಷಾ ರುಖ್ - ಜೊತೆ ಔಟಿಂಗ್... ವ್ಹಾ! ಎಂತಹ ಕಲರ್‍ಫುಲ್ ಕನಸುಗಳು. ರೋಮಾಂಚನ ನೀಡುವಂತಹ ಸೀನುಗಳು. ಸಿನೆಮಾ ಈಸ್ ಆ ಬ್ಯೂಟಿಫುಲ್ ಫ್ರಾಡ್ ಎಂದಿದ್ದಾನೆ ಒಬ್ಬ ಮಹಾಶಯ. ಹಾಗೆಯೇ ಕನಸುಗಳು ಸಹ. ಫ್ರಾಯ್ಡ್ ಏನಾದರೂ ಹೇಳಲಿ.
ಆದರೆ ಕೆಲವು ನತದೃಷ್ಟರೂ ಇರುತ್ತಾರೆ. ನಿದ್ದೆಯೇ ಮಾಡದವರ ಬಗ್ಗೆ ನಾನು ಹೇಳುತ್ತಿಲ್ಲ. ನಿದ್ದೆ ಮಾಡಿಯೂ ಬಿ ಎಮ್ ಡಬ್ಲ್ಯೂ ಕನಸು ಕಾಣುವ ನತದೃಷ್ಟ ಮಂದಿಯ ಬಗ್ಗೆ ನಾನು ಹೇಳಬೇಕಾಗಿದೆ. ಇಂತಹ ಷ್ಯೂರ್ ನತದೃಷ್ಟರ ಕನಸಿನಲ್ಲಿ ಬಿಪಾಷಾ ಬಾಸು, ರಾಖಿ ಸಾವಂತ್, ಮಾಧುರಿ ದೀಕ್ಷಿತ್, ಷಾ ರುಖ್ ಮುಂತಾದ ಮುದ ನೀಡುವವರ ಬದಲು ರೇವಣ್ಣ, ವರ್ತೂರು ಪ್ರಕಾಶ್, ರೇಣುಕಾಚಾರ್ಯ, ಹಾಲಪ್ಪ, ಮೋಟಮ್ಮ ಮುಂತಾದವರು ಬಂದುಹೋಗುತ್ತಾರೆ. ಮೌಲ್ಯಗಳನ್ನು ಎತ್ತಿಹಿಡಿಯುವ ಬಗ್ಗೆ ಈ ಮಂದಿ ಮಾಡುವ ಭಾಷಣಗಳನ್ನು ಅವರು ಕನಸಿನಲ್ಲಿ ಕೇಳಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿಬಂದಿರುತ್ತದೆ. ಮರುದಿನ ಪೇಪರ್‍ನಲ್ಲೂ ಇದನ್ನೇ ಓದಬೇಕಾದ ಅಸಹಾಯಕ ಸ್ಥಿತಿ ಅವರದ್ದು ಪಾಪ.
ಆದರೆ ನನ್ನ ಸ್ನೇಹಿತನದು ಒಂದು ಕೇಸ್. "ನಿನ್ನೆ ರಾತ್ರಿ ನನಗೊಂದು ಕನಸು ಬಿದ್ದಿತ್ತು. ಗಾಬರಿ ಆಗಿ ಎದ್ದುಕುಳಿತುಕೊಂಡೆ" ಎಂದ.
"ಹೆದರಿಕೆ ಆಯಿತೇನು?" ಎಂದು ನಾನು ಕಳವಳದಿಂದ ಕೇಳಿದೆ.
"ಹೆದರಿಕೆ ಅಲ್ಲ. ಗಾಬರಿ" ಎಂದ ಅವನು ಹೇಳಿದಾಗ ಹೆದರಿಕೆಯೇ ಆಗದೆ ಗಾಬರಿ ಆಗಲು ಸಾಧ್ಯವೇ ಎಂದು ನನಗೆ ಗೊಂದಲ ಆಯಿತು.
"ಗಾಬರಿ ಏಕಾಯಿತು" ಕನಸಿನಲ್ಲಿ ನಾನು ಮಾಮೂಲಿನಂತೆ ಅಂದು ರಾತ್ರಿ ತಡವಾಗಿ ಬಂದಿದ್ದೆ. ಲೆಕ್ಚರ್ ಕೇಳಲಿಕ್ಕೆ ಮಾನಸಿಕವಾಗಿ ತಯಾರಾಗಿಯೇ ಬೆಲ್ ಮಾಡಿದೆ. ಹೆಂಡತಿ ಬಾಗಿಲು ತೆಗೆದಳು. 'ಬನ್ನಿ ಬನ್ನಿ' ಎಂದು ಒಳಗೆ ಕರೆದಳು. 'ಇಷ್ಟು ಹೊತ್ತಿನಲ್ಲಿ ಓಡಾಡೋದು ಸರಿ ಅಲ್ಲ. ಸ್ವಲ್ಪ ಬೇಗ ಬರೋದಿಕ್ಕೆ ಟ್ರೈ ಮಾಡಿ' ಎಂದು ಸಮಾದಾನವಾಗಿಯೇ ಹೇಳಿದಳು".
"ಹೌದೇ?" ಎಂದು ನಾನು ಆಶ್ಚರ್ಯದಿಂದ ಕೇಳಿದೆ.
ಅವನು ಮುಂದುವರೆಸಿದ "ಹೌದು. ಅಷ್ಟೇ ಅಲ್ಲ. 'ಊಟ ಆಯಿತೇನು?' ಅಂದು ಕೇಳಿದಳು. ನಾನು 'ಇಲ್ಲಿ' ಅಂದೆ. ಅದಕ್ಕೆ ಅವಳು  ಛೆ! ಛೆ! ಹಸಿದುಕೊಂಡೇ ಇದ್ದರೆ ಹೆಲ್ತ್ ಕೆಡುತ್ತೆ. ತಾಳಿ. ಅಡುಗೆ ಬಿಸಿ ಮಾಡುತ್ತೇನೆ' ಎಂದು ಹೇಳಿ ಅಡುಗೆಮನೆಗೆ ಧಾವಿಸಿದಳು".
'!' ನಾನು. ಅವನು '!!' ಆಗಿದ್ದನಂತೆ.
"ನಂತರ ಬಿಸಿ ಮಾಡಿದ ಅಡುಗೆ ಬಡಿಸಿದಳು. 'ಲೇಟ್ ಆಗಿದೆ. ಆದರೆ ನಿಧಾನವಾಗಿ ತಿನ್ನಿ' ಎಂದು ಹೇಳಿದಳು. 'ಇಷ್ಟು ಹೊತ್ತಿನಲ್ಲಿ ತಿಂದರೆ ಮೈಗೆ ಹತ್ತುವುದಿಲ್ಲ ಎಂದು ಸಮಾಧಾನವಾಗಿಯೇ ಹೇಳಿದಳು".
ಈಗ '!!!' ನಾನು.
"ಊಟ ಆಯಿತು. ತಾಳಿ, ಒಂದು ಲೋಟ ಹಾಲು ಬಿಸಿ ಮಾಡಿ ಕೊಡುತ್ತೇನೆ. ಕುಡಿದು ಮಲಗಿ. ಚೆನ್ನಾಗಿ ನಿದ್ದೆ ಬರುತ್ತೆ' ಅಂದಳು".
"ಹೌದೇ?" ಎಂದೆ ನಾನು.
"ಹೌದು. ಆಮೇಲೆ ಹಾಲು ತಂದುಕೊಟ್ಟಳು. 'ಸ್ವೆಟರ್ ಹಾಕಿಕೊಡು ಮಲಗಿ ಚಳಿ ಇದೆ' ಎಂದು ಹೇಳಿ 'ರಗ್' ಹೊದೆಸಿ, ಲೈಟ್ ಆರಿಸಿ, 'ನಾನು ಡೈನಿಂಗ್ ಡೇಬಲ್ ಕ್ಲೀನ್ ಮಾಡಿ ಬರ್ತೀನಿ' ಅಂತ ಹೋದಳು."
"ಆಮೇಲೆ?"
"ಆಗಲೇ ನಾನು ಗಾಬರಿ ಆಗಿ ಎದ್ದು ಕುಳಿತದ್ದು" ಎಂದು ಹೇಳಿದ.
"ಗಾಬರಿ ಆಗದೇ ಇರುತ್ಯೇ?" ಎಂದು ನಾನು ಕೇಳಿದೆ.
"ಸರಿ ಅಲ್ಲವಾ?" ಎಂದು ಅವನು ಕೇಳಿದ.
"ನಿನಗೆ ಬರೇ ಗಾಬರಿ ಆಯಿತು. ನನಗಾಗಿದ್ದರೆ ಮೈಯೆಲ್ಲಾ ಬೆವೆತೆ ಹೋಗಿತ್ತು" ಎಂದು ನನಗಾಗಬಹುದಾಗಿದ್ದ ಅನುಭವವನ್ನು ಪ್ರಾಮಾಣಿಕವಾಗಿ ಹೇಳಿಕೊಂಡೆ. ನಿಮ್ಮ ಅನುಭವ?
 
ನೀತಿ : ಇಂತಹ ಹೆಂಡತಿಯರು ಕನಸಿನಲ್ಲಿ ಮಾತ್ರ ಸಿಗಲು ಸಾಧ್ಯ.

Comments

Submitted by santhosha shastry Thu, 01/12/2017 - 00:06

ಲೇಖನ ತುಂಬಾ ಚೆನ್ನಾಗಿತ್ತು. ಸಾಧ್ಯವಾದರೆ ಅಂತಹ ಕನಸಿನ ಹೆಂಡ್ತೀನ ನಮಗೂ ಪಾರ್ಸೆಲ್ ಮಾಡೀಪ್ಪಾ ದಯವಿಟ್ಟು!!!!!