ಭಾಗ ೨೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ’ಸ್ವಭಾವ’ವನ್ನು ಚಿಗುರಿಸುವ ವಸಂತನಾಗಮನ ಎಂದಿಗೆ....?

ಭಾಗ ೨೨ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ’ಸ್ವಭಾವ’ವನ್ನು ಚಿಗುರಿಸುವ ವಸಂತನಾಗಮನ ಎಂದಿಗೆ....?

ಚಿತ್ರ

ಮೋಂಬತ್ತಿ ಆರಿಸುತ್ತಿರುವ ಮಗು, ಧ್ಯಾನನಿರತ ಶಿವ, ರಷ್ಯನ್ ಯಾತ್ರಿಕ ನಿಕಿಟಿನ್, ಚಿತ್ರಕೃಪೆ: ಗೂಗಲ್
          ಸೀತೆ ಅದನ್ನು ನಂಬಿದಳು, ರಾಮನು ಅದನ್ನು ಅನುಸರಿಸಿದ, ಲಕ್ಷ್ಮಣ ಅದನ್ನು ತಡೆಯಲಾರದೇ ಹೋದ! ಅದು ಮಾಯಾಮೃಗ. ಅದರ ಪರಿಣಾಮ ಸೀತಾಪಹರಣ. ಲಂಕೆಯಿಂದ ಆಕೆಯನ್ನು ಹಿಂದಕ್ಕೆ ಕರೆತರಲು ಹರಸಾಹಸ ಮಾಡಬೇಕಾಯಿತು! ಇದು ಮುಂದುವರೆಯುತ್ತಿರುವ ಕಥೆ. ಯುಗಗಳನ್ನು ಅಧಿಗಮಸಿದ ಕಥೆ. ಸುಮಾರು ಸಾವಿರ ವರ್ಷಗಳ ಕಾಲ ಜಿಹಾದಿಗಳು ನಮ್ಮ ದೇಶವನ್ನು ಘಾಸಿಗೊಳಿಸಿದರು, ಕಡೆಗೆ ಭರತ ಮಾತೆಯ ಸ್ವರೂಪವನ್ನೇ ಭಂಗಪಡಿಸಿದರು, ಆದರೂ ನಮ್ಮ ರಾಷ್ಟ್ರೀಯ ಸ್ವಭಾವಕ್ಕೆ ಧಕ್ಕೆಯುಂಟಾಗಲಿಲಲ್ಲ. ಬ್ರಿಟೀಷರು ಕೇವಲ ಭರತ ಮಾತೆಯ ಸ್ವರೂಪವನ್ನಷ್ಟೇ ಅಲ್ಲ ಭಾರತೀಯ ಜನಾಂಗದ ಸ್ವಭಾವವನ್ನೇ ಮಾರ್ಪಡಿಸಿ ಬಿಟ್ಟರು. ಸಾವಿರಾರು ವರ್ಷಗಳ ಕಾಲ ಅನೇಕ ವಿದೇಶಿ ಜನಾಂಗಗಳು ನಮ್ಮ ದೇಶದ ಮೇಲೆ ದಾಳಿ ಮಾಡಿದರು, ಸ್ವಾತಂತ್ರ್ಯವನ್ನೂ ಕಬಳಿಸಿದರು. ಆ ಎಲ್ಲಾ ಜನಾಂಗಗಳೊಂದಿಗೆ ಭಾರತೀಯ ಜನಾಂಗವು ಹೋರಾಡಿದೆ. ಕಟ್ಟಕಡೆಯ ವಿದೇಶಿ ದಾಳಿಕೋರರು ಬ್ರಿಟಿಷರು. ಬ್ರಿಟಿಷ್ ಜನಾಂಗವನ್ನೂ ಸಹ ಭಾರತೀಯರು ಎದುರಿಸಿದರು. ಹಾಗಾದರೆ ವ್ಯತ್ಯಾಸವೆಲ್ಲಿಯದು? ಉಳಿದ ಜನಾಂಗಗಳೊಂದಿಗೆ ಸಂಘರ್ಷವುಂಟಾದಾಗ, ಸಮರ ವಿಧಾನವನ್ನು - ರಣನೀತಿಯನ್ನು ಭಾರತೀಯರು ನಿರ್ಣಯಿಸಿದರು. ಬ್ರಿಟಿಷರೊಂದಿಗೆ ಭಾರತೀಯ ಜನಾಂಗವು ಹೋರಾಡಿದಾಗ ಅದರ ರಣನೀತಿಯನ್ನು ಬ್ರಿಟಿಷರು ನಿರ್ದೇಶಿಸಿದರು........!
*****
’ಸ್ವಭಾವ’ವನ್ನು ಚಿಗುರಿಸುವ ವಸಂತನಾಗಮನ ಎಂದಿಗೆ....? 
ಬಾಯೊಳಗೆ ಕೋರೆ ಹಲ್ಲುಳ್ಳ
                                               ನಿಶಾಚರರು ಜಿಹಾದಿಗಳು,
                                               ಕಚ್ಚಿ, ಕಚ್ಚಿ ಭರತ ಖಂಡದ
ಸ್ವರೂಪವ ಸೀಳಿದರು!
                                               ಮೈಯೆಲ್ಲಾ ಕೋರೆ ಹಲ್ಲುಳ್ಳ
                                               ನಿಶಾಚರರು ಪರಂಗಿಗಳು,
                                               ಪರಚಿ ಪರಚಿ ಭಾರತೀಯ
ಸ್ವಭಾವವ ಅಳಿಸಿದರು!
    ಟೀಚರಮ್ಮ ಒಂದು ಮೋಂಬತ್ತಿಯನ್ನು ಹೊತ್ತಿಸಿದಳು, ಎದುರುಗಡೆ ಇದ್ದ ಸುಮಾರು ಹದಿನೆಂಟು ಇಪ್ಪತ್ತು ವರ್ಷದ ವಿದ್ಯಾರ್ಥಿಯೋರ್ವನಿಗೆ ಮತ್ತೊಂದು ಮೋಂಬತ್ತಿಯನ್ನು ಹಚ್ಚಲು ಹೇಳಿದಳು! ಟಿ.ವಿ. ಪರದೆಯ ಮೇಲೆ ಕಂಡು ಬಂದ ದೃಶ್ಯವಿದು....... ಆಕೆ ಆ ವಿದ್ಯಾರ್ಥಿಗೆ ಆಂಗ್ಲ ಭಾಷೆಯನ್ನು ಸರಿಯಾಗಿ ಉಚ್ಛರಿಸುವ ಪದ್ಧತಿಯನ್ನು ಕಲಿಸಿಕೊಡುತ್ತಿದ್ದಳು!
        "ಎಫ್ ಏ ಟಿ ಹೆಚ್ ಇ ಆರ್" "ಫಾದರ್" ಎಂದು ಉಚ್ಛರಿಸುವಂತೆ ಟೀಚರಮ್ಮ ವಿದ್ಯಾರ್ಥಿಗೆ ಹೇಳಿದರು. ಆ ವಿದ್ಯಾರ್ಥಿ "ಪಾದರ್’ ಎಂದು ಉಚ್ಛರಿಸಿದ. ಎರಡು, ಮೂರು, ನಾಲ್ಕು ಸಾರಿ ಟೀಚರಮ್ಮ ಪ್ರಯತ್ನಿಸಿದರು, ಪುನಃ ಪುನಃ ಆ ಹುಡುಗ ’ಪ್ಪಾ..ದರ್’ ಎಂದು ಹೇಳಿದ. ಈ ಘಟ್ಟದಲ್ಲಿ ಆ ಟೀಚರಮ್ಮ ಹಾಗು ವಿದ್ಯಾರ್ಥಿ ಇಬ್ಬರೂ ಮೇಣದಬತ್ತಿಗಳನ್ನು ಹೊತ್ತಿಸಿದರು. ಆಮೇಲೆ ಟೀಚರಮ್ಮ, "ಫ್" ಎಂದು ಶಬ್ದ ಮಾಡುತ್ತಾ ಬಾಯಿಂದ ದೀಪವನ್ನು ಆರಿಸಿದಳು. ವಿದ್ಯಾರ್ಥಿಯೂ ಸಹ "ಫ್" ಎಂದು ಧ್ವನಿ ಬರುವಂತೆ ಬಾಯಿಂದ ದೀಪವನ್ನು ಊದಿ ಆರಿಸಿದ. "ಬಾಯಿಂದ ದೀಪವನ್ನು ಆರಿಸುವಾಗ ಯಾವ ವಿಧವಾಗಿ ಧ್ವನಿ ಬರುತ್ತದೆಯೋ ಅಂತಹ ಉಚ್ಛಾರಣೆಯಂತೆ "ಫಾದರ್"ನಲ್ಲಿರುವ "ಎಫ್" ಅನ್ನು ಹೇಳಬೇಕು ಎಂದು ಟೀಚರಮ್ಮ ವಿದ್ಯಾರ್ಥಿಗೆ ಉಪದೇಶಿಸಿದಳು. ಹೀಗೆ ದೀಪವನ್ನು ಆರಿಸುತ್ತಾ, ಬಾಯಿಂದ ಎಂಜಲನ್ನು ಸಿಂಪರಿಸುತ್ತಾ ಆ ಟೀಚರಮ್ಮ ಅರ್ಧ ಘಂಟೆಯ ಹೊತ್ತು "ಫಾದರ್" ಪದದಲ್ಲಿನ "ಫ"ವನ್ನು ಉಚ್ಛರಿಸುವ ಪದ್ಧತಿಯನ್ನು ಪ್ರದರ್ಶಿಸಿದಳು. ಆ ವಿದ್ಯಾರ್ಥಿ ಅದನ್ನು ಕಲಿತುಕೊಂಡನೋ ಇಲ್ಲವೋ ಅದು ಮಾತ್ರ ಇತ್ಯರ್ಥವಾಗಲಿಲ್ಲ........!
ಈ ಪದ್ಧತಿಯನ್ನು ಯಾರೂ ಟೀಕಿಸುವುದಿಲ್ಲ, ಬದಲಾಗಿ ಮೆಚ್ಚಿಕೊಳ್ಳುತ್ತಾರೆ!
        "ಬೆಳ್ಳಂಬೆಳಗ್ಗೆ ಎದ್ದು ಸೂರ್ಯೋದಯ ಸಮಯದಲ್ಲಿ ಗೋಮೂತ್ರವನ್ನು ಸೇವಿಸಿದರೆ ನಾಲಿಗೆ ಚೆನ್ನಾಗಿ ಹೊರಳುತ್ತದೆ. ಉಚ್ಛಾರಣೆ ಸ್ಪಷ್ಟವಾಗಿ ಬರುತ್ತದೆ" ಎಂದು ಹೇಳಿದರೆ ಜನ ಅದನ್ನು ನಂಬುವುದಿಲ್ಲ. ಬದಲಾಗಿ ಅದನ್ನು ಅಪಹಾಸ್ಯ ಮಾಡುತ್ತಾರೆ. "ಉಗ್ಗು" "ತೊದಲು" ಮುಂತಾದ ಮಾತನಾಡುವ ಲೋಪಗಳು ಗೋಮೂತ್ರವನ್ನು ಪಾನ ಮಾಡುವುದರ ಮೂಲಕ ತೊಲಗಿ, ನಾಲಿಗೆ ಸ್ಪಷ್ಟವಾಗಿ ಹೊರಳುತ್ತದೆ, ಉಚ್ಛಾರಣೆಯು ಸ್ಪಷ್ಟವಾಗುತ್ತದೆ! ಚಿಕ್ಕಂದಿನಲ್ಲಿ ಇದನ್ನು ಮಾಡಿದರೆ ದೊಡ್ಡವರಾದ ಮೇಲೆ ಎಂಜಲು ಬಾಯಿಂದ ದೀಪವನ್ನು ಆರಿಸುವ ಕೆಲಸವಿಲ್ಲ! ಆದರೆ, ಬೆಳಗಿನ ಝಾವ ಏಳುವುದನ್ನು ಮರೆತು ಸುಮಾರು ಮೂರ್ನಾಲ್ಕು ತಲೆಮಾರುಗಳು ಕಳೆದಿವೆ. ಹೀಗೆ ಮರೆತ ತಲೆಮಾರುಗಳ ಸ್ವಭಾವ, ದೃಷ್ಟಿಕೋನ, ಆಲೋಚನಾ ವಿಧಾನ, ಆಸಕ್ತಿ ಎಲ್ಲವೂ ಬದಲಾಗಿ ಹೋಗಿವೆ! ಪತನವಾಗಲಿ, ಪ್ರಗತಿಯಾಗಲಿ ಕ್ರಮೇಣವಾಗಿ ಬರುತ್ತದೆ, ಬಂದಿದೆ! ಗೋಮೂತ್ರದಿಂದ ತಯಾರಾಗುವ "ಅರ್ಕ’ ಮೊದಲಾದ ಔಷಧಿಗಳು ದೊಡ್ಡವರ "ಮೂಗು ಮುಚ್ಚಿಕೊಳ್ಳುವ ಕ್ರಿಯೆಗೆ" ಗುರಿಯಾಗುತ್ತಿವೆ. "ವಾಸನೆ ಅಲ್ವಾ....!" "ಘಾಟು ಅಲ್ವಾ.....!" ಎಂದು ವ್ಯಾಖ್ಯಾನಿಸುವವರೂ ಇದ್ದಾರೆ! ಸ್ವಭಾವವು ಬದಲಾಗಿದೆ. ಮೆಕಾಲೆ ವಿದ್ಯಾವಿಧಾನವು ಅದನ್ನು ನಮಗೆ ಗೊತ್ತಾಗದಂತೆ ಬದಲಾಯಿಸಿ ಬಿಟ್ಟಿದೆ!
        "ಥಾಮಸ್ ಬಾಬಿಂಗ್ಟನ್ ಮೆಕಾಲೆ ಮೇಲೆ ಬಿದ್ದು ಅಳುವುದೇತಕ್ಕೆ? ಹೇಗೆ ಮಾಡಿದರೆ ಆ ಸ್ವಭಾವವು ಮಾಯವಾಗುತ್ತದೆನ್ನುವುದನ್ನು ನೀವೇ ಹೇಳಿ!" ಎಂದು ಎದುರು ಬಿದ್ದು ಪ್ರಶಿಸುವವರು ತಯಾರಾಗಿದ್ದಾರೆ! "ರುಚಿ ಚೆನ್ನಾಗಿಲ್ಲ" ಎಂದು ಹೇಳುವ ಪ್ರತಿಯೊಬ್ಬರಿಗೂ "ನೀವೆ ಅಡುಗೆ ಮಾಡಿ" ಎಂದು ಹೇಳುತ್ತಿದ್ದಾರಾ? "ಆಡಳಿತ ಸರಿಯಾಗಿಲ್ಲ!" ಎಂದು ಹೇಳಿದರೆ "ಬನ್ನಿ ನೀವೇ ಪರಿಪಾಲಿಸಿ ತೋರಿಸಿ!" ಎಂದು ವ್ಯಾಖ್ಯಾನಿಸಿದರೆ ಯಾರೇನು ಹೇಳಲಾದೀತು? ನಗರಗಳಲ್ಲಿ ಬೆಳಗಾಗದು, ಹಸುಗಳು ಕಂಡುಬಾರವು! ಟಿ.ವಿ. ನೋಡುತ್ತಾ ಅರ್ಧರಾತ್ರಿಯವರೆಗೂ ಎಚ್ಚರವಿರುವವರು ಅಷ್ಟು ಬೇಗೆನೇ ಏಳಬಲ್ಲರೇ? ನಮ್ಮ ದೇಶದಲ್ಲಿನ ವಿದ್ಯಾರ್ಥಿಗಳು ಮತ್ತು ವಿದ್ಯಾವಂತರು ಅತ್ಯಧಿಕ ಸಂಖ್ಯೆಯಲ್ಲಿ ಬೆಳಗಿನ ಝಾವ ಬೇಗನೇ ಏಳುವುದನ್ನು ರೂಢಿಸಿಕೊಂಡರೆ ಮೆಕಾಲೆ ವಿದ್ಯಾ ಪ್ರಭಾವದಿಂದ ವಿಮುಕ್ತಿ ಪಡೆಯಲು ಅದು ಮೊದಲ ಹೆಜ್ಜೆಯಾಗಬಲ್ಲದು.
         ದಿನಕ್ಕೆ ಕೇವಲ ಎರಡು ಹೊತ್ತು ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಅದು ಶಕ್ತಿಯನ್ನು ವರ್ಧಿಸುತ್ತದೆ ಎಂದು ಆಯುರ್ವೇದವು ಹೇಳುತ್ತದೆ. ಅದೇ ಆಚಾರವಾಗಿತ್ತು. ಮಕ್ಕಳು, ವೃದ್ಧರು, ರೋಗಿಗಳು, ನಿರಂತರ ಶಾರೀರಿಕ ಶ್ರಮವನ್ನು ಮಾಡುವವರನ್ನು ಹೊರತು ಪಡಿಸಿ ಉಳಿದವರೆಲ್ಲಾ ಅದನ್ನೇ ಪಾಟಿಸುತ್ತಿದ್ದರು ಅದು ತಲೆಮಾರುಗಳ ಆಚಾರವಾಗಿತ್ತು! ಸಾವಿರಾರು ವರ್ಷಗಳ ಜಿಹಾದಿಗಳ ಆಕ್ರಮಣಕ್ಕೆ ಈ ಸ್ವಭಾವವು ಬದಲಾಗಲಿಲ್ಲ. ನೂರು ವರ್ಷಗಳ ಕಾಲ ವ್ಯವಧಿಯಲ್ಲಿ ಮೆಕಾಲೆ ವಿದ್ಯಾವಿಧಾನ ಈ ಸ್ವಭಾವವನ್ನು ಬದಲಾಯಿಸಿತು. "ಬ್ರೇಕ್ ಫಾಸ್ಟ್" ಬಂತು! ಹಾಗೆ ನಾಲ್ಕೈದು ಸಾರಿ ತಿಂದು ಬುದ್ಧಿವಂತರು ಬೊಜ್ಜುವಂತರಾಗಿ ತಯಾರಾಗಿದ್ದಾರೆ.
                   "ಸಾಯಂ ಪ್ರಾತರ್ ದ್ವಿಜಾತೀನಾಂ
                    ಭೋಜನಂ ಶ್ರುತಿಚೋದಿತಂ"
        ಮೇಧಾವಿಗಳು, ನಿರ್ವಾಹಕರು, ಆಡಳಿತಗಾರರು, ವ್ಯಾಪಾರಿಗಳು, ಧನವಂತರು ಮೊದಲಾದವರು "ದ್ವಿಜಾತಿಗಳು!" ಈ ದ್ವಿಜಾತಿಗಳು ದಿನಕ್ಕೆ ಎರಡು ಸಾರಿ ಭುಜಿಸಬೇಕು ಎನ್ನುವುದು ಶ್ರುತಿವಾಕ್ಯ! ಮೂರು ನಾಲ್ಕು ಸಾರಿ ಉಂಡರೆ ಈ ದ್ವಿಜಾತೀಯರು ಬೊಜ್ಜು ಬೆಳೆಸಿಕೊಂಡು ಕದಲಲಾರರು, ಆದ್ದರಿಂದ ವೇದಗಳು ಹೀಗೆ ನಿರ್ದೇಶಿಸುತ್ತವೆ!
       ಮೂರು ನಾಲ್ಕು ಬಾರಿ ತಿನ್ನದೆ ಆ ಪದಾರ್ಥವನ್ನು ಹಾಗು ಆ ಖರ್ಚನ್ನು ಉಳಿಸಿ ತಿನ್ನಬಲ್ಲವರಿಗೆ ಹಾಗು ಊಟಕ್ಕೆ ಗತಿಯಿಲ್ಲದವರಿಗೆ ಅದನ್ನು ಹಂಚಬೇಕೆನ್ನುವುದು ಸನಾತನ ಪದ್ಧತಿ. "ತ್ಯಾಗೇನ ಏಕೇ ಅಮೃತತ್ವ ಮಾನಸುಃ" ಅದು ಮಾಯವಾಗಿದೆ. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿಯೂ ದೇಶೀಯ ಸಮಾಜದಲ್ಲಿ ಅದು ನಾಶವಾಗಲಿಲ್ಲ! ಮೆಕಾಲೆ ವಿದ್ಯಾವಿಧಾನವು ಅಮಲಿನಲ್ಲಿ ಬಂದ ನಂತರ ಅದು ಮಾಯವಾಯಿತು!! "ತಪಃ ಅನಶನಾತ್" .... ಭೋಜನ ರಾಹಿತ್ಯವೇ ತಪಸ್ಸು! ಹೀಗೆ ಈ ಭೋಜನ ರಾಹಿತ್ಯ ಸ್ಥಿತಿಯಲ್ಲಿರುತ್ತಿದ್ದ ಮೇಧಾವಿ ಅಥವಾ ಸಂಪನ್ನನು ಮನೆಯ ಹೊರಗಿನ ಜಗಲಿಯ ಮೇಲೆ ನಿಂತು ಅತಿಥಿಗಳಿಗಾಗಿ ಎದುರು ನೋಡುತ್ತಿದ್ದನಂತೆ. ದತ್ತೋಪಂತ್ ಠೇಂಗ್ಡಿ, ದೀನದಯಾಳ್ ಉಪಾಧ್ಯಾಯ ಮೊದಲಾದ ಮಹನೀಯರು ಪುನಃ ಪ್ರಚಾರ ಮಾಡಿದ, "ನೀಡುವ ಸಾಂಸ್ಕೃತಿಕ ಸ್ವಭಾವ"ವದು! ಕಬಳಿಸುವ ಸ್ವಭಾವ, ಪ್ರಪಂಚವನ್ನೇ ಸ್ವಾಹಾ ಮಾಡಿದ ಸ್ವಭಾವವು ಮೆಕಾಲೆ ವಿದ್ಯೆಯ ಹೆಸರಿನಲ್ಲಿ ಬಂದು ನಮ್ಮ ಸ್ವಭಾವವನ್ನು ಪ್ರಭಾವಿತಗೊಳಿಸಿದೆ! "ನಾವು ಸಂಪಾದಿಸುತ್ತೇವೆ, ನಾವು ಖರ್ಚು ಮಾಡುತ್ತೇವೆ! ಅಷ್ಟೆ! - ಯಾರು ಬದಲಾಯಿಸಬಲ್ಲರು?
          ಮನೆಯ ಹೊರಗೆ ಜಗಲಿ, ಜಗಲಿಯ ಮೇಲೆ ಛಾವಣಿ ಇರುವ ಪದ್ಧತಿಯಲ್ಲಿ ಮನೆಯನ್ನು ನಿರ್ಮಿಸುವುದು ಭಾರತೀಯ ಪದ್ಧತಿ. ಆ ಜಗಲಿಯ ಮೇಲೆ ಹೊಸಬರು ಕುಳಿತುಕೊಳ್ಳಲಿ ಅಥವಾ ಮಲಗಿಕೊಳ್ಳಲಿ ಎನ್ನುವುದು ಅದರ ಉದ್ದೇಶ. ಈಗ ಜಗಲಿಯಿದ್ದರೆ ಕಳ್ಳರು ಬಂದು ಮಲಗುತ್ತಾರೆ ಎನ್ನುವ ಭಯ! ಮೌಲ್ಯಗಳೇ ಕಳೆದು ಹೋಗುತ್ತಿರುವಾಗ ಜಗಲಿಗಳು ಕಳೆದು ಹೋಗುವುದರಲ್ಲಿ ವಿಶೇಷವೇನಿಲ್ಲವಷ್ಟೆ! ಮನೆಗಳ ಸಂಖ್ಯೆ ಅಡ್ಡವಾಗಿಯೂ, ಮನುಷ್ಯರು ಎತ್ತರವಾಗಿಯೂ ಬೆಳೆಯುತ್ತಿದ್ದುದು ಬ್ರಿಟಿಷ್ ಪೂರ್ವ ಭಾರತದ ಸ್ವಭಾವ. ಈಗ ಮನೆಗಳು ಎತ್ತರವಾಗಿಯೂ ಮನುಷ್ಯರೂ ಅಡ್ಡವಾಗಿಯೂ ಬೆಳೆಯುತ್ತಿದ್ದಾರೆ. ಕಬಳಿಸುವ ಮತ್ತು ಕೊಳ್ಳುಬಾಕ ಸಂಸ್ಕೃತಿ (Consumerism) ಭಾರತೀಯ ಸ್ವಭಾವವನ್ನು ನುಂಗಿದೆ. ತಿನ್ನುವ ಸಂಸ್ಕೃತಿ ಮೆಕಾಲೆ ವಿದ್ಯೆಯಿಂದ ಆಮದಾಗಿದೆ. ಉದ್ಯೋಗವನ್ನು ಮಾಡುವವನಿಗೆ ಧ್ಯಾನ ಮಾಡಲು ಸಮಯವಿಲ್ಲ!!
          ಪ್ರಣವಮೂರ್ತಿಗಳಾದ ಪಾರ್ವತೀ ಪರಮೇಶ್ವರರು ಪ್ರಥಮ ಪ್ರಣಯಮೂರ್ತಿಗಳೂ ಹೌದು. ಪರ್ವತರಾಜನ ಮಗಳು ಪತಿಗಾಗಿ ತಪಸ್ಸು ಮಾಡಿದಳು. ಮನ್ಮಥನು ಅವರಿಬ್ಬರಿಗೂ ಮದುವೆ ಮಾಡಿಸಿದನು, ಸುಟ್ಟು ಬೂದಿಯಾದರೂ ಸಹ ಮನ್ಮಥನು ತನ್ನ ಪಟ್ಟನ್ನು ಸಡಲಿಸಲಿಲ್ಲ, ಅವರಿಬ್ಬರಿಗೂ ಮದುವೆಯನ್ನು ಮಾಡಿಸಿದ! ಈಗ ಮನ್ಮಥನನ್ನು ಮರೆತು ಹೋಗುತ್ತಿದ್ದೇವೆ, ಅವನ ಸ್ಥಾನದಲ್ಲಿ ವೆಲಂಟೈನ್ ವಕ್ಕರಿಸಿದ್ದಾನೆ! ಇದು ಮೆಕಾಲೆ ವಿದ್ಯಾವಿಧಾನದ ಫಲಿತದಿಂದ ಹೆಚ್ಚುತ್ತಿರುವ ಪ್ರಭಾವವಲ್ಲದೆ ಮತ್ತೇನಲ್ಲ! ಪ್ರೇಮಯಾತ್ರೆಗೆ ತೆರಳಿದ ಶಿವಪಾರ್ವತಿಯರು ದಿನವೆಲ್ಲಾ ಸುಂದರವಾದ ಪ್ರದೇಶಗಳಲ್ಲಿ ವಿಹರಿಸಿದರು. ಅವೆಲ್ಲಕ್ಕೂ ಕಲಶ ಪ್ರಾಯವಾಗಿ ಸೂರ್ಯಾಸ್ತ ಸಮಯವು ಗೋಚರಿಸಿತು. ಆಗ ಶಿವನು ಪಾರ್ವತಿಯನ್ನು ಮರೆತು ಸಂಧ್ಯಾವಂದನೆಯನ್ನು ಮಾಡುವುದರಲ್ಲಿ ಮಗ್ನನಾದನು.... ಮಹಾಕವಿ ಕಾಳಿದಾಸ ಬರೆದದ್ದನ್ನು ಕಲಿಸಿದರೆ ವಿದ್ಯಾರ್ಥಿಗಳಿಗೆ ಈ ಕಥೆ ತಿಳಿಯುತ್ತದೆ. ಮಹಾಕವಿ ಷೇಕ್ಸ್‌ಪಿಯರ್ ಬರೆದದ್ದನ್ನು ಮಾತ್ರವೇ ಕಲಿಸಿದರೆ ಈ ಕಥೆ ತಿಳಿಯದು. ಮೆಕಾಲೆ ವಿದ್ಯೆಯು ಹೀಗೆ ವಿದ್ಯಾರ್ಥಿಗಳಿಗೆ ವಿಷಯವು ತಿಳಿಯದಂತೆ ಮಾಡಿದೆ. ಎಲ್ಲರಿಗೂ ಈ ಸಂಗತಿಗಳು ತಿಳಿಯಬೇಕಾದರೆ ಏನು ಮಾಡಬೇಕೆಂದು ಸ್ಪಷ್ಟವಾಗಿ ಎಲ್ಲರಿಗೂ ತಿಳಿದಿದೆ, ಆದರೆ ತಿಳಿದುಕೊಳ್ಳಲು ಬಹುತೇಕರು ಬಯಸುತ್ತಿಲ್ಲ.
          ಪ್ರಪಂಚವೆಲ್ಲಾ ಶಿವನನ್ನು ಧ್ಯಾನಿಸುತ್ತಿದ್ದರೆ ಶಿವನು ಯಾರನ್ನು ಕುರಿತು ಧ್ಯಾನಿಸುತ್ತಾನೆ? ಅವನು ಏತಕ್ಕಾಗಿ ಸಂಧ್ಯಾವಂದನೆಯನ್ನು ಮಾಡುತ್ತಾನೆ? "ಯದ್ಯದಾಚರಿತಿ ಶ್ರೇಷ್ಠಃ ತತ್ತದೇವತರೋ ಜನಾಃ - ಶ್ರೇಷ್ಠರು ಆಚರಿಸಿದ್ದನ್ನು ಇತರೇ ಜನರು ಕೂಡಾ ಆಚರಿಸುತ್ತಾರೆ" ಎನ್ನುವ ಮೇಲ್ಪಂಕ್ತಿಯನ್ನು ಶಿವನು ತೋರಿಸಿಕೊಟ್ಟ. ಈಗ ಸಂಧ್ಯಾವಂದನೆಯನ್ನು ಯಾರು ಮಾಡುತ್ತಿದ್ದಾರೆ? ಅಕ್ಷರಗಳನ್ನು ಓದಲಾರದ ರೈತ ಮಾಡುತ್ತಿದ್ದಾನೆ, ಮೆಕಾಲೆಯ ಕುರಿತು ಅರಿಯದ ಜನಸಾಮಾನ್ಯರು ಪಾಲಿಸುತ್ತಿದ್ದಾರೆ. ಬೆಳಗಿನ ಝಾವದಲ್ಲಿ ಏಳುವುದರ ಮೂಲಕ ರೈತರು ಸೂರ್ಯೋದಯವನ್ನು ನೋಡುತ್ತಿದ್ದಾರೆ. ಎರಡೂ ಕೈಗಳನ್ನೆತ್ತಿ ಸೂರ್ಯನಿಗೆ ನಮಸ್ಕರಿಸುತ್ತಿದ್ದಾರೆ. ಅದೇ ಸಂಧ್ಯಾವಂದನೆ! ಪ್ರಭಾತ ಸಂಧ್ಯಾವಂದನೆ! ಅಸ್ತಮಿಸುವ ಸೂರ್ಯನನ್ನು ನೋಡಿ ಪುನಃ ನಮಸ್ಕರಿಸುವುದು ಸಾಯಂಕಾಲದ ಸಂಧ್ಯಾವಂದನೆ. ಹೀಗೆ ಸೂರ್ಯ ನಮಸ್ಕಾರ ಮಾಡಿದ ಗ್ರಾಮೀಣರು ಹೊಲದಿಂದ ಹಿಂದಿರುಗಿ ಬರುತ್ತಿದ್ದಾರೆ. ಹೀಗೆ ಸಂಧ್ಯಾವಂದನೆಯನ್ನು ಮಾಡುವುದು ಭಾರತೀಯ ಜನಾಂಗದ ಸಾಮಾಜಿಕ ಪದ್ಧತಿ. ಸಂಧ್ಯಾವಂದನೆ ಮಾಡುವ ಮೂಲಕ ಪುಣ್ಯಬಾರದು ನಿಜ, ಆದರೆ ಮಾಡದಿದ್ದರೆ ಪಾಪ ಬರುತ್ತದೆ!
          ಸಮಾಜವನ್ನು ರಕ್ಷಿಸ ಬೇಕೆಂದರೂ, ಸಮಾಜವನ್ನು ದೋಚ ಬೇಕೆಂದುಕೊಂಡರೂ ಅದನ್ನು ಸುಲಭವಾಗಿ ಮಾಡಲು ಶಕ್ತರಾದವರು ಬುದ್ಧಿಜೀವಿಗಳು ಹಾಗು ಮೇಧಾವಿಗಳು. ಶಾರೀರಿಕ ಶ್ರಮವನ್ನು ಕೈಗೊಳ್ಳುವವರಿಗೆ ಬುದ್ಧಿಯನ್ನು ಅತಿಯಾಗಿ ಉಪಯೋಗಿಸುವ ಅಗತ್ಯವಿರುವುದಿಲ್ಲ. ಆದ್ದರಿಂದ ಅವರ ಬುದ್ಧಿ ಅಡ್ಡದಾರಿ ಹಿಡಿಯುವ ಅವಕಾಶ ಕಡಿಮೆ. ಬುದ್ಧಿಯನ್ನು ದೋಚುವ ಕೆಲಸಕ್ಕೆ ಬಳಸದೆ ಅದನ್ನು ಸಮಾಜದ ರಕ್ಷಣೆಯ ಕಡೆಗೆ ತಿರುಗಿಸುವ ಪ್ರಧಾನವಾದ ಜವಾಬ್ದಾರಿ ಬುದ್ಧಿಜೀವಿಗಳದು. ಈ ಬಾಧ್ಯತೆಯೆಡೆಗೆ ನಿಬದ್ಧತೆಯನ್ನು ಹೆಚ್ಚಿಸುವ ಪ್ರಕ್ರಿಯೆ ಸಂಧ್ಯಾವಂದನೆ, ಧ್ಯಾನ, ಯೋಗಗಳು...! ಈ ಸಂಧ್ಯಾವಂದನೆಯನ್ನು ಬುದ್ಧಿಜೀವಿಗಳು ಕೈಬಿಟ್ಟಿದ್ದಾರೆ, ಉನ್ನತ ಹುದ್ದೆಗಳಲ್ಲಿರುವವರಿಗೆ ಸಮಯವಿಲ್ಲ, ಧನವಂತರಿಗೆ ಅದರೆಡೆಗೆ ದ್ಯಾಸವಿಲ್ಲ! "ಪ್ರಾರ್ಥನೆ ಮಾಡಿದರೆ ಪಾಪಗಳು ತೊಲಗುತ್ತವೆ" ಎನ್ನುವ ಪಾಶ್ಚಾತ್ಯ ಪ್ರಕೃತಿ ಸಂಧ್ಯಾವಂದನೆಯ ಸಂಸ್ಕೃತಿಯನ್ನು ನುಂಗಿ ಹಾಕಿದೆ, ಪಾಪ ಮಾಡಿದರೆ ಅದರ ಫಲವನ್ನು ಅನುಭವಿಸಬೇಕು ಎನ್ನುವ ಭಾರತೀಯ ಸನಾತನ ತತ್ತ್ವವನ್ನು ಅದು ನುಂಗಿ ಹಾಕಿದೆ. ಸನಾತನ ತತ್ತ್ವವುಳ್ಳ ಭಾರತೀಯರು ಇತರ ದೇಶಗಳನ್ನು ದೋಚಲಿಲ್ಲ, ಅಲ್ಲಿನ ನಾಗರೀಕರನ್ನು ಸಾಯಿಸಲಿಲ್ಲ, ಅವರ ಸಂಸ್ಕೃತಿಯನ್ನು ಧ್ವಂಸ ಮಾಡಲಿಲ್ಲ. ಸನಾತನ ತತ್ತ್ವವನ್ನು ನುಂಗಿ ನೊಣೆದ ಪಾಶ್ಚಾತ್ಯ ತತ್ತ್ವವು ಇವೆಲ್ಲವನ್ನೂ ಮಾಡಿಸಿತು, ಮಾಡಿತು. ಒಳಿತನ್ನು ಮಾಡುವ ಬುದ್ಧಿಯನ್ನು ಪ್ರೇರೇಪಿಸುವ ಸಂಧ್ಯಾವಂದನೆಯನ್ನು ಮಾಡುವವರಾರು?
          ಸಾವಿರ ವರ್ಷಗಳ ಕಾಲ ಪರಕೀಯ ಜಿಹಾದಿಗಳ ಆಳ್ವಿಕೆಯ ನಂತರವೂ ಸಹ ಭೌತಿಕ ಸಂಪತ್ತಿನ ವಿಷಯದಲ್ಲಿ ಭಾರತ ದೇಶವು ಅಗ್ರಗಾಮಿಯಾಗಿಯೇ ಇತ್ತು. ವಿದೇಶಿ ಯಾತ್ರಿಕರ ಬರವಣಿಗೆಗಳೇ ಇದಕ್ಕೆ ಸಾಕ್ಷಿ! ಮೆಕಾಲೆ ವಿದ್ಯೆ ಈ ಸ್ಮೃತಿಯನ್ನು (ನೆನಪನ್ನು) ಇಲ್ಲದಂತೆ ಮಾಡಿತು. ಪೂರ್ವಸ್ಮೃತಿ ಇಲ್ಲದ ಸಮಾಜವು ಬ್ರಿಟಿಷರ ಜಮಾನಾವನ್ನು ಹೊಗಳಿತು! ತೆಲುಗಿನ ಕವಿ ಸಾಮ್ರಾಟ್ ಸತ್ಯನಾರಾಯಣಗಾರು ಒಂದು ಕಥೆಯನ್ನು ಹೇಳಿದ್ದಾರೆ. ಬಹು ಹಿಂದೆ, ಧರ್ಮದ ಕಟ್ಟಾಳುವಾಗಿದ್ದ ಒಬ್ಬ ರಾಜನಿದ್ದನು. ಅವನು ಎಷ್ಟೋ ಪುಣ್ಯಕಾರ್ಯಗಳನ್ನು ಮಾಡಿದ್ದ, ಆದರೆ ಅಲ್ಪಸ್ವಲ್ಪ ಪಾಪ ಕಾರ್ಯಗಳನ್ನೂ ಮಾಡಿದ್ದ. ಅವನು ಮಾಡಿದ ಪಾಪದ ಫಲದಿಂದಾಗಿ ಅವನಿಗೆ ಅಲ್ಪಕಾಲ ಹಂದಿಯ ಜನ್ಮವುಂಟಾಗುತ್ತದೆ, ಅದನ್ನನುಭವಿಸಿದ ನಂತರ ಅವನಿಗೆ ಪುನಃ ಒಳ್ಳೆಯ ಜನ್ಮವುಂಟಾಗುತ್ತದೆ ಎಂದು ಒಬ್ಬ ಮಹರ್ಷಿಗಳು ಅವನಿಗೆ ಭವಿಷ್ಯ ಹೇಳಿದರು. ಇದನ್ನು ಕೇಳಿ ರಾಜ ಬಹಳ ದುಃಖಿತನಾದ. ಹಂದಿ ಜನ್ಮ ಬಂದ ತಕ್ಷಣ, ಯಾರಾದರೂ ಆ ಹಂದಿ ಮರಿಯನ್ನು ಹೊಡೆದು ಕೊಂದರೆ, ರಾಜನಿಗೆ ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ ಎಂದೂ ಅದಕ್ಕೆ ಪರಿಹಾರವನ್ನು ಆ ಮಹರ್ಷಿಗಳು ಸೂಚಿಸಿದರು. ಅವರು ಭವಿಷ್ಯ ನುಡಿದಂತೆ ಆ ರಾಜ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟಿದ. ಆದರೆ ಪೂರ್ವಜನ್ಮದ ಸ್ಮೃತಿಯಿಲ್ಲದೆ ಹಂದಿಯ ಶರೀರವನ್ನು ಹೊಂದಿದ ರಾಜನು ಕೊಳಚೆಯಲ್ಲಿ ಬಿದ್ದು ಹೊರಳಾಡುವುದೇ ಮಹದಾನಂದವೆಂದು ಸಂಭ್ರಮಿಸಿದನು!
          "ಭಾರತದೇಶವು ಅತಿ ಕಡಿಮೆ ದರಗಳನ್ನುಳ್ಳ ದೇಶ ಮತ್ತು ಅತಿ ಹೆಚ್ಚು ಪ್ರಾಮಾಣಿಕತೆಯಿರುವ ದೇಶ" ಎಂದು ಪ್ರಸಿದ್ಧ ರಷ್ಯಾ ಯಾತ್ರಿಕನಾದ ’ಅಫಾನಸಿ ನಿಕಿಟಿನ್’ ತನ್ನ ಬರವಣಿಗೆಯಲ್ಲಿ ವರ್ಣಿಸಿದ್ದಾನೆ. ಬ್ರಿಟಿಷರು ನಮ್ಮ ದೇಶದೊಳಕ್ಕೆ ಅಡಿಯಿಡುವ ಮುನ್ನ ಸುಮಾರು ಮುನ್ನೂರು ವರ್ಷಗಳ ಹಿಂದೆ ಅಂದರೆ ೧೫ನೇ ಶತಮಾನದ ಅಂತ್ಯದಲ್ಲಿ ಮಧ್ಯಪ್ರಾಚ್ಯ ಮೊದಲಾದ ದೇಶಗಳೊಂದಿಗೆ ನಮ್ಮ ದೇಶವನ್ನು ಸಂದರ್ಶಿಸುವುದಕ್ಕೆ ಬಂದಿದ್ದ ನಿಕಿಟಿನ್. ನಮ್ಮ ದೇಶದ ಭೌತಿಕ ಸಂಪತ್ತು, ಸುಖಜೀವನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಅವನಿಗೆ ಆಶ್ಚರ್ಯವನ್ನುಂಟು ಮಾಡಿದವಂತೆ. ಕ್ರಮೇಣ ಈ ನೆನಪುಗಳೆಲ್ಲಾ ಮಾಸಿ ಹೋಗಿವೆ, ಮೆಕಾಲೆ ವಿದ್ಯೆ ಸಾಧಿಸಿದ ವಿಜಯವದು. ಕ್ರಮೇಣವಾಗಿ ಏರಿದ ಮೆಕಾಲೆ ವಿದ್ಯೆಯ ನಂಜು ತೊಲಗಬೇಕಾದರೆ ಅದು ಕ್ರಮೇಣವಾಗಿಯೇ ಇಳಿಯಬೇಕು. ವಿದ್ಯಾವಂತರು ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ಕೀಲಕ ವ್ಯಕ್ತಿಗಳು. ವಿದ್ಯಾವಂತರು ’ಬರ್ಮುಡಾ’ ಹಾಕಿಕೊಂಡರೆ ಅದಕ್ಕೆ ಗೌರವ. ಉನ್ನತ ಅಧಿಕಾರಿ ಪಂಚೆ ಹಾಕಿಕೊಂಡರೆ ಅದಕ್ಕೆ ಗೌರವ ಧಕ್ಕುತ್ತದೆ. ಉನ್ನತ ವ್ಯಾಸಂಗ ಮಾಡಿದ ವ್ಯಕ್ತಿ ಸಂಸ್ಕೃತವನ್ನು ಮಾತನಾಡಿದರೆ ಅದಕ್ಕೆ ಗೌರವ ಬರುತ್ತದೆ ಹಾಗೆಯೇ ಅವನು ಇಂಗ್ಲೀಷ್ ಮಾತನಾಡಿದರೆ ಅದಕ್ಕೆ ಗೌರವ ಬರುತ್ತದೆ! ಈ ಗೌರವವು ಸಮಾಜದ ಸ್ವಭಾವವನ್ನು ಪ್ರಭಾವಿತಗೊಳಿಸುತ್ತದೆ!
ಶಾಲೆಗೆ ಹೋಗುವ ಪುಟ್ಟನಿಗೆ
ನಾಮ ಮುದ್ರೆಗಳೇತಕೆಂದರು ಅಮ್ಮ,
ದೇವರನಾಮಗಳ ಹಾಡೆನೆಂದರು
ಬೆಲ್ ಬಾಟಮ್ ಟೀಚರಮ್ಮ!
          ಹೀಗೇಕೆ? ವಿದ್ಯೆಯ ಸ್ಥಾಯಿ ಹೆಚ್ಚಿದಂತೆಲ್ಲಾ ಭಾರತೀಯತೆ, "ಹಳಸಿದ ಹುಣಿಸೆಕಾಯಿ ಉಪ್ಪಿನಕಾಯಿ" ಎನ್ನುವ ಸ್ವಭಾವವು ಏರ್ಪಡುತ್ತದೆ! ಸಂಸ್ಕೃತ ಭಾಷೆಯನ್ನು ಆರನೇ ತರಗತಿಯಿಂದಲೇ ಕ್ರಮಬದ್ಧವಾಗಿ ಬೋಧಿಸುವ ವ್ಯವಸ್ಥೆ ಏರ್ಪಡಬೇಕು. ಇದು ಪ್ರಾಥಮಿಕ ಹಂತ. ಹತ್ತು ಹದಿನೈದು ವರ್ಷಗಳ ನಂತರ ಸಂಸ್ಕೃತ ಭಾಷಾ ಮಾಧ್ಯಮದಲ್ಲಿ ಉನ್ನತ ವಿದ್ಯಾಬೋಧನೆ ಜರುಗುವ ವ್ಯವಸ್ಥೆ ಏರ್ಪಡಬೇಕು! ಮತ್ತೊಂದು ಹತ್ತು ಹದಿನೈದು ವರ್ಷಗಳ ನಂತರ ಕೇಂದ್ರ ಸರ್ಕಾರದ ಅಧಿಕಾರಿಕ ಭಾಷೆಯಾಗಿ ಮತ್ತು ವಿವಿಧ ರಾಜ್ಯ ಸರ್ಕಾರಗಳ ಮಧ್ಯೆ ಅನುಸಂಧಾನ ಭಾಷೆಯಾಗಿ, ನ್ಯಾಯಾಲಯಗಳಲ್ಲಿ ಅಧಿಕಾರಿಕ ಭಾಷೆಯಾಗಿ ಸಂಸ್ಕೃತವನ್ನು ಉಪಯೋಗಿಸಬೇಕು! ಇಂಗ್ಲೀಷ್ ಭಾಷೆಯನ್ನು, ವಿದೇಶೀ ಭಾಷೆಗಳನ್ನು ಕಲಿತುಕೊಳ್ಳುವ ಆಸಕ್ತಿಯುಳ್ಳವರು ಅವನ್ನು ಬೇಕಾದರೆ ಕಲಿತುಕೊಳ್ಳಲಿ. ಮೆಕಾಲೆ ಮೂವ್ವತ್ತು ವರ್ಷಗಳಲ್ಲಿ ಸಾಧಿಸಿದ್ದನ್ನು ಭಾರತೀಯರು ಮೂವ್ವತ್ತು ವರ್ಷಗಳಲ್ಲಿ ಇಲ್ಲವಾಗಿಸಬಹುದು. ಸುಮಾರು ನೂರಾ ಎಂಬತ್ತು ವರ್ಷಗಳ ವಿಷಜಾಡ್ಯಕ್ಕೆ ಸಂಸ್ಕೃತ ಭಾಷೆಯೇ ಪ್ರತ್ಯೌಷಧ. ಎಷ್ಟು ಪರಿಹಾರಗಳನ್ನು ಕಂಡು ಹಿಡಿದರೂ ಸಹ ಅಂತಿಮ ಪರಿಷ್ಕಾರವು ಇದೊಂದೇ!
*****
        ಮೆಕಾಲೆ ವಿದ್ಯಾವಿಧಾನದಿಂದ ಉಂಟಾದ ದುಷ್ಪರಿಣಾಮಗಳನ್ನು ಒಂದೊಂದಾಗಿ ವಿಶ್ಲೇಷಿಸುವುದೇ ಈ ಸರಣಿಯ ಉದ್ದೇಶ. ಮೂಲತಃ ತೆಲುಗಿನಲ್ಲಿ "ಮೇಕ ವನ್ನೆಲ ಮೇಕಂ, ಮೆಕಾಲೆ ವಿದ್ಯಾ ವಿಧಾನಂ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ" ಎನ್ನುವ ಈ ಸರಣಿಯನ್ನು ಜಾಗೃತಿ ವಾರಪತ್ರಿಕೆಯಲ್ಲಿ ೨೦೦೮ರ ಆಸುಪಾಸಿನಲ್ಲಿ ಧಾರಾವಾಹಿಯಂತೆ, ಶ್ರೀಯುತ ತಂಗೇಡುಕುಂಟ ಹೆಬ್ಬಾರ್ ನಾಗೇಶ್ವರ್ ರಾವ್ ಅವರು ಬರೆದಿರುತ್ತಾರೆ. ಆ ಲೇಖನದ ಸೊಗಡನ್ನು ಕನ್ನಡಿಗರು ಆಸ್ವಾದಿಸುವಂತೆ ಮಾಡುವ  ಒಂದು ಪ್ರಯತ್ನವನ್ನು ನಾನಿಲ್ಲಿ ಮಾಡಿದ್ದೇನೆ. ಈಗ ನಿಮ್ಮ ಮುಂದಿರುವುದು ಈ ಸರಣಿಯ ಇಪ್ಪತ್ತೆರಡನೆಯ ಕಂತು, "ಸ್ವಭಾವಂ ಚಿಗುರಿಂಚೇ ವಸಂತಂ ಎಪ್ಪುಡು?...... - ’ಸ್ವಭಾವ’ವನ್ನು ಚಿಗುರಿಸುವ ’ವಸಂತ’ನಾಗಮನ ಎಂದಿಗೆ....?
    ಈ ಸರಣಿಯ ಇಪ್ಪತ್ತೊಂದನೆಯ ಕಂತು, ಕ್ಷತಗಾತ್ರವಾಗಿಹ ನಮ್ಮ ಇತಿಹಾಸ.... ಎನ್ನುವ ಲೇಖನಕ್ಕೆ ಈ ಕೊಂಡಿಯನ್ನು ನೋಡಿ - https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A7-...
 
 
 
 
 
 
 

Rating
No votes yet

Comments

Submitted by makara Sun, 02/12/2017 - 13:03

ಈ ಮಾಲಿಕೆಯನ್ನು ವಿಶೇಷ ಅಕ್ಕರೆಯಿಂದ ಓದಿ ಪ್ರೋತ್ಸಾಹಿಸಿದ ಸಂಪದ ಬಳಗಕ್ಕೆ ಧನ್ಯವಾದಗಳು. ಈ ಸರಣಿಯ ಮೂಲ ತೆಲುಗು ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೈದರಾಬಾದಿನ ನವಯುಗ ಭಾರತಿ ಪ್ರಕಾಶನವು ಕೈಗೊಂಡಿದೆ. ಅದರ ಪ್ರಕಾಶಕರ ಮುನ್ನುಡಿಯನ್ನು ಓದಲು ಈ ಕೊಂಡಿಯನ್ನು ನೋಡಿ. https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A8-...

Submitted by makara Mon, 02/13/2017 - 11:13

ಮುಂಚಿನ ಪ್ರತಿಕ್ರಿಯೆಯಲ್ಲಿ ಸರಣಿಯ ಮುಂದಿನ ಲೇಖನದ ಕೊಂಡಿಯ ಬದಲಾಗಿ ಇದೇ ಲೇಖನದ ಕೊಂಡಿಯು ಅಚಾತುರ್ಯದಿಂದ ಕೊಡಲ್ಪಟ್ಟಿತ್ತು. ಹಾಗಾಗಿ ಈ ಕೆಳಗಿನ ಕೊಂಡಿಯನ್ನು ಮುಂದಿನ ಲೇಖನಕ್ಕಾಗಿ ನೋಡಿ. https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%A9-...