ನೆನಪಿನ ಪಯಣ - ಭಾಗ 9

Submitted by partha1059 on Wed, 08/23/2017 - 10:54

ಶೃಂಗೇರಿಯಲ್ಲಿ ನಾನು ಒಬ್ಬಂಟಿಯಾಗಿ ಅಲೆಯುತ್ತಿದೆ.
ಕತ್ತಲು ಕಳೆದು ಎಷ್ಟು ಹೊತ್ತಾದರು ನದಿಯ ದಡದ ಮೆಟ್ಟಿಲ ಮೇಲೆ ಸುಮ್ಮನೆ ಕುಳಿತಿರುತ್ತಿದ್ದೆ. ಮೂರನೆ ದಿನ ನಾನು ಸಂಜೆ ಹಾಗೆ ಕುಳಿತಿರುವಾಗ ವಯೋವೃದ್ದರೊಬ್ಬರು ಪಕ್ಕದಲ್ಲಿ ಬಂದು ಕುಳಿತರು. ನನ್ನನ್ನು ಸಹಜವಾಗಿ ಎಲ್ಲಿಂದ, ಬಂದಿದ್ದು ಇತ್ಯಾದಿ ಮಾತನಾಡಿಸಿದರು. ನನಗೆ ಅವರಲ್ಲಿ ಮಾತನಾಡುವ ಯಾವ ಉತ್ಸಾಹವು ಇರಲಿಲ್ಲ.
ಕತ್ತಲಿನ ಆ ನಿಶ್ಯಬ್ದದಲ್ಲಿ ಅವರು ಅವರಿಗಷ್ಟೆ ಎನ್ನುವಂತೆ ಮಾತನಾಡಿಕೊಳ್ಳುತ್ತಲೆ ಇದ್ದರು, ನನ್ನ ಕಿವಿಗೆ ಬಿದ್ದರು ನಾನು ಪ್ರತಿಕಿಯಿಸುತ್ತಿರಲಿಲ್ಲ.
ನಡುವೆ ಅವರು ನುಡಿದರು,
ನೋಡಿ ಈ ನದಿಯ ನೀರಿನ ಹರಿವಿನ ಜುಳುಜುಳು ನಾದವನ್ನು, ನಾವು ಮನುಷ್ಯರು ಪ್ರಕೃತಿಯ ಎಲ್ಲವೂ ನಮಗಾಗಿ ಎಂದು ಭ್ರಮಿಸುತ್ತೇವೆ. ಆದರೆ ಇಲ್ಲಿ ಯಾವ ಮನುಷ್ಯ ಇಲ್ಲದಿರುವಾಗಲು. ಪ್ರಕೃತಿ ತನ್ನ ಸಂತಸವನ್ನು ವ್ಯಕ್ತಪಡಿಸುತ್ತಲೆ ಇರುತ್ತದೆ. ಯಾರು ಇಲ್ಲ ಅನ್ನುವಾಗಲು, ಕಾರ್ಗತ್ತಲಿನಲ್ಲು ನದಿ ತನ್ನ ಜುಳು ಜುಳು ಶಬ್ದವನ್ನು ಹೊರಡಿಸುತ್ತಲೆ ಇರುತ್ತದೆ, ಅದು ಬೇರೆ ಯಾರೋ ಕೇಳಲಿ ಎಂದಲ್ಲ ತನಗೆ ತಾನೆ ಕೇಳಿಸಿಕೊಳ್ಳಲು. ಯಾರು ಇರದಿರುವಾಗಲು, ನದಿ ತನ್ನ ದ್ವನಿಯನ್ನು ತಾನೆ ಕೇಳುತ್ತ ಆನಂದ ಪಡುತ್ತಲಿರುತ್ತದೆ.
ಆತ ಏನೇನೊ ಮಾತನಾಡುತ್ತಿದ್ದರು, ನನಗೆ ತಲೆಯಲ್ಲಿ ತಟ್ಟನೆ ಒಂದು ಆಲೋಚನೆ ಹೊಳೆದಿತ್ತು. ಮನುಷ್ಯನ ಮೆದುಳು ಅವನದೆ ದ್ವನಿಗೆ ವಿಶಿಷ್ಟವಾಗಿ ಪ್ರತಿಕ್ರಿಯಿಸುತ್ತದೆ.ಎಲ್ಲಿಯೋ ಓದಿದ್ದ, ಯಾವುದೋ ಪ್ರಯೋಗ ಒಂದು ನೆನಪಿಗೆ ಬಂದಿತ್ತು, ಎಳೆಮಗುವು , ಏನು ಮಾಡಿದರು ತಾನು ಅಳುನಿಲ್ಲಿಸದೆ,ಸುಸ್ತಾಗಿರುತ್ತದೆ. ಅಂತಹ ಮಗುವನ್ನು ಅಳು ನಿಲ್ಲಿಸಲು ಎಲ್ಲ ಪ್ರಯತ್ನಗಳು ವ್ಯರ್ಥವಾದಾಗ, ಡಾಕ್ಟರ್ ಒಬ್ಬ, ಯೋಚಿಸಿ ಆ ಮಗುವಿನ ಅಳುವನ್ನೆ ರೆಕಾರ್ಡ್ ಮಾಡಿ, ಮಗುವಿಗೆ ಕೇಳುವಂತೆ ಅದನ್ನು ಹಾಕಿದ. ಅಳುತ್ತಿದ್ದ ಮಗು ತಟ್ಟನೆ ತನ್ನ ಅಳು ನಿಲ್ಲಿಸಿ, ತನ್ನದೆ ದ್ವನಿ ಆಸಕ್ತಿಯಿಂದ ಕೇಳಲು ಪ್ರಾರಂಭಿಸಿತು.
ಅದಕ್ಕೆ ವೈಜಾನಿಕ ಕಾರಣವು ಇತ್ತು, ಮನುಷ್ಯನ ಮೆದುಳು ತನ್ನದೆ ದ್ವನಿಗೆ ವಿಶಿಷ್ಟವಾಗಿ ಪ್ರತಿಕ್ರಿಯಿಸುತ್ತದೆ. ತಲೆಯಲ್ಲಿ ಎಂತದೋ ಒಂದು ಮಿಂಚು ಹೊಳೆದಂತೆ ಆಗಿತ್ತು. ಯಾರ ದ್ವನಿಗೂ ಪ್ರತಿಕ್ರಿಯೆ ನೀಡದಿರುವ ಜ್ಯೋತಿ, ಒಂದು ವೇಳೆ ತನ್ನದೆ ದ್ವನಿಗೆ ಹೇಗೆ ಪ್ರತಿಕ್ರಿಯಿಸುವಳು. ಹೊಳೆಯುತ್ತಿದ್ದಂತೆ ಎದ್ದುನಿಂತೆ, ಪಕ್ಕದಲ್ಲಿದ್ದ ಮುದುಕ ನನ್ನತ್ತ ಆಶ್ಚರ್ಯದಿಂದ ಎಂಬಂತೆ ನೋಡಿದರು.
ನಿಮ್ಮಿಂದ ತುಂಬಾ ಉಪಕಾರವಾಯಿತು, ಬರುತ್ತೇನೆ , ಸ್ವಲ್ಪ ಅರ್ಜೆಂಟ್ ಕೆಲಸವಿದೆ ಎಂದು ಹೇಳಿ ಹೊರಟೆ. ಆತನಿಗೆ ಪಾಪ ನನ್ನ ಮನಸಿನ ಸ್ಥಿತಿ ಎಷ್ಟು ಅರ್ಥವಾಯಿತೋ ಯಾರಿಗೆ ಗೊತ್ತು.
…..
ನಾನು ಪುನ ಬೆಂಗಳೂರು ಸೇರಿದವನೆ, ಬ್ಯಾಗೆಲ್ಲ ಮನೆಯಲ್ಲಿ ಎಸೆದು, ಆಸ್ಪತ್ರೆಯತ್ತ ಓಡಿದೆ. ಬಹುಷಃ ಜ್ಯೋತಿ ಅದೇ ವಾರ್ಡಿನಲ್ಲಿರಬಹುದು. ಒಳಗೆ ಹೋಗುವಾಗಲೆ ಡಾಕ್ಟರ್ ಹೊರಗೆ ಬರುತ್ತಿದ್ದರು, ನನ್ನನ್ನು ನೋಡಿ , ಇವನು ಇಷ್ಟುದಿನ ಎಲ್ಲಿ ಮಾಯವಾದ ಅಂದುಕೊಂಡರೋ ಏನೊ, ತಿರಸ್ಕಾರವಾಗಿ ನಗುತ್ತ ಹೊರಟುಹೋದರು.
ನನಗೆ ಕೋಪ ಬರಲಿಲ್ಲ, ನನ್ನದೆ ತಪ್ಪು ಇತ್ತಲ್ಲ.
ಅವರ ಹಿಂದೆ ಆನಂದ ಬರುತ್ತಿದ್ದ. ನನ್ನನ್ನು ನೋಡಿ ನಿಂತವನು.
ಎಲ್ಲಿ ಹೋಗಿದ್ದೆ, ಎರಡು, ಮೂರು ದಿನದಿಂದ ಎಂದು ಕೇಳಿದ.
ನಾನು ಅವನಿಗೆ ಉತ್ತರಿಸುವ ಬದಲಿಗೆ,
ಆನಂದ , ಆ ದಿನ ನೀನು , ಜ್ಯೋತಿ ಮಾತನಾಡುತ್ತಿರುವಾಗ ಪೂರ್ತಿ ರೆಕಾರ್ಡ್ ಮಾಡಿದ್ದೆ ಅಲ್ಲವೇ ? ಅದು ಈಗ ನಿನ್ನ ಹತ್ತಿರ ಇದೆಯಾ?
ಅದಕ್ಕವನು ,
ಇದೆಯಲ್ಲ, ಇದೇ ಮೊಬೈಲ್ ನಲ್ಲಿಯೇ ಪೂರ್ತಿ ಸಂಭಾಷಣೆ ಹಾಗೆ ಇದೆ ಎಂದ
ಸರಿ ಒಳ್ಳೆಯದಾಯಿತು, ನಿನ್ನ ಬಳಿ, ಮೊಬೈಲ್ ನಿಂದ ಕಿವಿಗೆ ಸಿಕ್ಕಿಸಿ ಕೇಳುವರಲ್ಲ, ಇಯರ್ ಪೋನ್ , ಅದು ಇರುವುದೇ ? ಎಂದೆ
ಅವನು ಉತ್ತರಿಸುವ ಮೊದಲೆ, ಅವನ ಹಿಂದೆಯೆ ಇದ್ದ , ಅವನ ಮಗ ,
ಇದೇ ಅಂಕಲ್ , ಇದಾಗುತ್ತ ನೋಡಿ
ಎನ್ನುತ್ತ ಅವನ ಜೀನ್ಸ್ ಕೋಟಿನ ಜೋಬಿನಲ್ಲಿದ್ದ, ಈಯರ್ ಪೋನ್ ತೆಗೆದುಕೊಟ್ಟ.
ನನ್ನಿಂದ ತೀರ ಈ ಹುಡುಗನು ಅನುಭವಿಸುವಂತಾಯಿತಲ್ಲ, ಎನ್ನುವ ಬೇಸರ ನನಗೆ.
ಹುಡುಗನ ಮುಖ ನೋಡಿದೆ, ಪಾಪ, ಪೂರ್ತಿಯಾಗಿ ಸೋತು, ಹೋಗಿತ್ತು, ಬಹುಶಃ ಅವರ ಅಮ್ಮ ಅವನ ಬಗ್ಗೆ ಆಡಿದ್ದ ಮಾತುಗಳನ್ನು ಅವನೂ ಕೇಳಿರಬಹುದೇನೊ.
ನಾನು ಆನಂದನ ಮೊಬೈಲ್ ಗೆ ಅವನ ಮಗ ಕೊಟ್ಟ ಈಯರ್ ಪೋನ್ ಸಿಕ್ಕಿಸಿ, ನನ್ನ ಕಿವಿಗೆ ಹಾಕಿ, ಆ ದಿನ ರೆಕಾರ್ಡ್ ಮಾಡಿದ್ದ ವಾಯ್ಸ್ ಪೈಲ್ ರನ್ ಮಾಡಿ ನೋಡಿದೆ. ಅತ್ಯಂತ ಸ್ವಷ್ಟವಾಗಿ ಎಲ್ಲವೂ ರೆಕಾರ್ಡ್ ಆಗಿತ್ತು.

 
ಬನ್ನಿ ಒಳಗೆ ಹೋಗೋಣ
ಎನ್ನುತ್ತ ಒಳ ನಡೆದೆ. ಅವರಿಬ್ಬರಿಗೂ ನನ್ನ ನಡೆ ಅರ್ಥವಾಗದೆ ಹಿಂದೆ ಬಂದರು. ಅವನ ಮಗ ಮತ್ತೆ ಈ ಆಂಕಲ್ ಏನು ಮಾಡುವರೋ ಎನ್ನುವ ಭಯಕ್ಕೋ ಏನೋ
ಏಕೆ ಅಂಕಲ್ , ಏನು ಮಾಡುವಿರಿ,ಮತ್ತೆ ಏನು ಎನ್ನುತ್ತಲೆ ಒಳಗೆ ಬಂದ.
ವಾರ ಕಳೆದಾಗಲು ಜ್ಯೋತಿ ಹಾಗೆ ಮಲಗಿದ್ದಳು. ಮುಖದಲ್ಲಿ ಅದೇ ನಿರ್ಭಾವ. ಮುಚ್ಚಿದ ಕಣ್ಣು. ಬಹುಶಃ ಅದೇ ಶೂನ್ಯದಲ್ಲಿ ಅವಳ ಮನಸ್ಸು ನೆಲೆಸಿರಬಹುದು. ದೇವರೆ ನನ್ನ ಈಗಿನ ಪ್ರಯತ್ನದಲ್ಲಿ ಯಶ ಕೊಡು ಎಂದು ಮೌನವಾಗಿ ಮನದಲ್ಲಿ ಪ್ರಾರ್ಥಿಸಿದೆ.
ಅವಳ ಪಕ್ಕ ಕುಳಿತು. ಈಯರಿಂಗ್ ಪೋನನ್ನು ಅವಳ ಎರಡು ಕಿವಿಗೆ ಸಿಕ್ಕಿಸಿದೆ. ದ್ವನಿ ಎತ್ತರದಲ್ಲಿಟ್ಟೆ. ನಂತರ ಅವಳದೆ ದ್ವನಿ ಇರುವ ರೆಕಾರ್ಡ್ ಹಚ್ಚಿ ಸುಮ್ಮನೆ ಅವಳ ಮುಖ ನೋಡುತ್ತ ಕುಳಿತೆ.
ಎರಡು ಮೂರು ಕ್ಷಣ ಕಳೆದಿರಬಹುದೇನೊ, ಅವಳ ಕಣ್ಣಗುಡ್ಡೆಗಳು ಚಲಿಸುವತ್ತಿವೆ ಅನ್ನಿಸಿತು. ನನ್ನ ಮನ ನುಡಿಯುತ್ತಿತ್ತು, ಆಕೆ ಖಂಡಿತ ಪ್ರತಿಕ್ರಿಯೆ ನೀಡುವಳು ಎಂದು. ಮತ್ತೆ ಹತ್ತು ನಿಮಿಷ ಕಳೆದಿರಬಹುದೇನೊ, ಆಕೆಯ ಕಣ್ಣಲ್ಲಿ ನೀರು ಹರಿಯುತ್ತಿತ್ತು, ಅವಳ ಮನದಲ್ಲಿ ಏನು ನಡೆಯುತ್ತಿರಬಹುದು. ನನಗೆ ತಕ್ಷಣ ಹೊಳೆಯಿತು. ಅಂದು ಅವಳ ಮಗನ ಬಗ್ಗೆ ಮಾತನಾಡುವಾಗ ಆಕೆ ಭಾವಪೂರಿತಳಾಗಿದ್ದಳು, ಈಗ ಬಹುಶಃ ಅದೇ ತನ್ನ ಮಾತುಗಳಿಗೆ ತಾನು ಪ್ರತಿಕ್ರಿಯೆ ನೀಡುತ್ತಿದ್ದಾಳೆ. ನಾನು ವಿಶ್ವಾಸದಿಂದ ಆಕೆಯನ್ನು ನೋಡುತ್ತಿದ್ದರೆ, ಆನಂದ ಮತ್ತು ಅವನ ಮಗನ ಮುಖದಲ್ಲಿ ಗೊಂದಲ.
ಅಂಕಲ್ ಅಮ್ಮ ಅಳುತ್ತಿದ್ದಾರೆ ಎಂದ ಅವನು ಭಯದಿಂದ
ನನ್ನಲ್ಲಿ ಎಂತದೋ ನಿರಾಂತಕ
ಅಳಲಿ ಬಿಡು ಒಳ್ಳೆಯದೇ ಎಂದೆ
ಕೆಲವೇ ಕ್ಷಣ ಆಕೆ ಜೋರಾಗಿಯೆ ಅಳುತ್ತಿದ್ದಳು,
ಶಶಾಂಕ ಶಶಾಂಕ ನನ್ನ ಮಗ ಎಂದು ಆಕೆ ಬಿಕ್ಕುತ್ತಿದ್ದಳು,
ನನ್ನಲ್ಲಿ ಸಂತಸ ಉಕ್ಕಿಹರಿಯುತ್ತಿತ್ತು,
ಮಲಗಿದ್ದ ಆಕೆ ತಟ್ಟನೆ ಎದ್ದು ಕುಳಿತಳು,
ಆಕೆಗಿನ್ನು ತನ್ನ ಅಳು ಹಿಡಿತಕ್ಕೆ ಬಂದಿರಲಿಲ್ಲ, ಅಳುತ್ತಲೆ ನಮ್ಮನೆಲ್ಲ ನೋಡಿದಳು. ಆನಂದನತ್ತ ನೋಡಿದಳು.
ನಿದಾನಕ್ಕೆ ಅಳು ನಿಲ್ಲಿಸಿದಳು. ಶಶಾಂಕನನ್ನು ನೋಡಿದವಳು ಸ್ವಲ್ಪ ಆಶ್ಚರ್ಯಗೊಂಡಂತೆ,
ನೀನು ಯಾವಗ ಊಟಿಯಿಂದ ಬಂದೆ ಶಶಾಂಕ್ ಎಂದಳು.
ಅವನು ಅಳುತಿದ್ದ,
ಏಕೊ ಏನಾಯಿತು, ಎನ್ನುತ್ತ ಸುತ್ತಲು ನೋಡಿ, ಇದೇನು ನಾನೆಲ್ಲಿದ್ದಿನಿ, ಇದು ನಮ್ಮ ಮನೆಯಲ್ಲವೇನು? ನನಗೆ ಏನಾಗಿತ್ತು ಎಂದಳು.
ನನಗೆ ಮನಸ್ಸು ತುಂಬಿ ಬರುತ್ತಿತ್ತು.
ಆ ಮೂವರು ನೆಮ್ಮದಿಯಾಗಿ ಏನು ಬೇಕೊ ಅದು ಮಾತನಾಡಲಿ ಎನ್ನುವಂತೆ, ನಾನು ಮಾತನಾಡದೆ ಎದ್ದು ಹೊರಗೆ ಬಂದೆ.
ಆಸ್ಪತ್ರೆಯ ಕಾರಿಡಾರಿನಲ್ಲಿದ್ದ ಕಿಟಕಿಯ ಬಳಿ ಹೋಗಿ ನಿಂತಾಗ
ಹೊರಗಿನ ಹೂಗಿಡಗಳೆಲ್ಲ ಸೂರ್ಯನ ಬಿಸಿಲಿನಲ್ಲಿ ಹೊಳೆಯುತ್ತಿದ್ದವು,
ನನ್ನ ಕಣ್ಣಿನಲ್ಲಿ ತೆಳುನೀರು ತುಂಬಿ ಹೊರಗಿನ ದೃಷ್ಯ ಅಸ್ವಷ್ಟವಾಗುತಿತ್ತು.
ನನ್ನ ಕನ್ನಡಕ ತೆಗೆದು ಕಣ್ಣಿರನೊಮ್ಮೆ ಒರೆಸಿಕೊಂಡೆ.

 
ಶುಭಂ .
photo courtesy:https://www.google.co.in/url?sa=i&rct=j&q=&esrc=s&source=images&cd=&cad=...