ಕಗ್ಗ ದರ್ಶನ – 4 (2)
ಗಿಡದಿ ಹೂ ನಗುತಲಿರೆ ನೋಡಿ ನಲಿವನು ಜಾಣ
ಗುಡಿಗದನು ಕೊಂಡೊಯ್ವೆನೆನ್ನುವನು ಭಕುತ
ಮಡದಿ ಮಕ್ಕಳ ಮುಡಿಗದೆನ್ನುವನು ಸಂಸಾರಿ
ಸಡಲದೆದೆಯವನಾರು? – ಮರುಳ ಮುನಿಯ
ಹೂವನ್ನು ಆಧಾರವಾಗಿಟ್ಟುಕೊಂಡು, ಬದುಕಿನ ಇನ್ನಷ್ಟು ಒಳನೋಟಗಳನ್ನು ನಮಗೆ ಈ ಮುಕ್ತಕದಲ್ಲಿ ನೀಡುತ್ತಾರೆ, ಮಾನ್ಯ ಡಿ.ವಿ.ಜಿ.ಯವರು.
ನಳನಳಿಸುವ ಗಿಡದಲ್ಲಿ ನಗುತ್ತಿರುವ ಹೂ ಅಲ್ಲೇ ಇರಲಿ; ಗಿಡದಲ್ಲಿದ್ದಾಗಲೇ ಅದು ಮನಮೋಹಕವೆಂದು ಭಾವಿಸುತ್ತಾ ಸಂತೋಷ ಪಡುವವನು ಜಾಣ. ಹೂ ಗಿಡದಲ್ಲಿದ್ದರೇ ಪರಿಪೂರ್ಣ ಎಂಬುದು ಅವನ ಭಾವ. ಅದನ್ನು ಕೀಳಬೇಕೆಂದು ಅವನಿಗೆ ಅನಿಸುವುದೇ ಇಲ್ಲ.
ಇನ್ನೊಬ್ಬನಿಗೆ ಗಿಡದಲ್ಲಿರುವ ಹೂವನ್ನು ಕಂಡಾಗ ಮೂಡುವ ಭಾವ ಬೇರೆ. ಅದು ದೇವರ ಗುಡಿಯಲ್ಲಿರಬೇಕು;ದೇವರ ಮುಡಿಗೇರಬೇಕು; ಹೂ ಅಲ್ಲಿರುವುದೇ ಸೂಕ್ತ ಎಂಬುದು ಇವನ ಭಾವ. ಯಾಕೆಂದರೆ ಅವನು ದೇವರಲ್ಲಿ ವಿಶ್ವಾಸ ಇಟ್ಟವನು. ಈ ಭೂಮಿಯ ಎಲ್ಲವೂ ದೇವರಿಗೆ ಅರ್ಪಿತವಾಗಬೇಕು ಎಂದು ನಂಬಿದ ಅವನೇ ಭಕ್ತ.
ಮತ್ತೊಬ್ಬನಿದ್ದಾನೆ – ಗಿಡದ ಹೂ ಮಡದಿ ಮಕ್ಕಳ ಮುಡಿಯಲ್ಲಿರಬೇಕು; ಅದು ಹುಟ್ಟಿದ್ದೇ ಅವರ ಮುಡಿಗೇರಲಿಕ್ಕಾಗಿ ಎಂದು ಭಾವಿಸುವವನು. ಹೂವನ್ನು ಗಿಡದಲ್ಲೇ ಇರಗೊಟ್ಟರೆ, ಕೆಲವೇ ಗಂಟೆಗಳಲ್ಲಿ ಬಾಡಿ ಹೋಗುತ್ತದೆ; ಅದರ ಬಾಳು ವ್ಯರ್ಥವಾಗುತ್ತದೆ ಎಂದು ಯೋಚಿಸುವ ಇವನು ಸಂಸಾರಿ. ಇವನಿಗೆ ಯಾವಾಗಲೂ ತನ್ನ ಕುಟುಂಬದವರ ಚಿಂತೆ. ಎಲ್ಲವೂ ತನ್ನವರ ಬಳಕೆಗಾಗಿ ಇದೆಯೆಂದು ಅವನಿಗೆ ಅನಿಸುತ್ತದೆ.
ಈ ಮೂರೂ ತರಹದ ಭಾವನೆಗಳಿಗೆ ನೀವು ತೆರೆದುಕೊಳ್ಳಬೇಕು. ಆಗ ನಿಮ್ಮ ಎದೆ ಹಗುರವಾಗುತ್ತದೆ (ಸಡಿಲವಾಗುತ್ತದೆ). ನನ್ನ ಯೋಚನೆಯೇ ಸರಿ ಎಂಬ ಹಟಕ್ಕೆ ಬಿದ್ದರೆ ಎದೆ ಭಾರವಾದೀತು; ಬದುಕು ಜಟಿಲವಾದೀತು. “ಅವರವರ ಭಾವ ಅವರವರಿಗೆ ಸರಿ” ಎಂಬ ಅರಿವು ಮೂಡಿದಾಗ ತಪ್ಪು ಗ್ರಹಿಕೆಗೆ ಅವಕಾಶ ಇರುವುದಿಲ್ಲ, ಅಲ್ಲವೇ?
Comments
ಉ: ಕಗ್ಗ ದರ್ಶನ – 4 (2)
Testing App! Please ignore.
ಉ: ಕಗ್ಗ ದರ್ಶನ – 4 (2)
Test again! Please ignore