ಸ್ಮಾರ್ಟ್ ಫೋನ್ ಸಂತೆ

ಸ್ಮಾರ್ಟ್ ಫೋನ್ ಸಂತೆ

ಕೆಲವು ತಿಂಗಳುಗಳ ಹಿಂದೆ ನನ್ನ ಜೊತೆ ಒಂದೇ ಶಾಲೆಯಲ್ಲಿ ಓದಿದ ಗೆಳೆಯ ಅಪರೂಪಕ್ಕೆ ಫೋನ್ ಮಾಡಿದ್ದ. ಅವನು ಸ್ಮಾರ್ಟ್ ಫೋನ್ ಒಂದನ್ನು ಕೊಳ್ಳಲು ಹೊರಟಿದ್ದನಂತೆ. ಹೀಗೆ ಫೋನ್ ಮಾಡಿದ ಅವನಿಗೆ ನಾನು ಕೇಳಿದ ಪ್ರಶ್ನೆ “ನೀನು ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ಹೊರಟಿರುವುದು ಯಾವುದಕ್ಕಾಗಿ? (ಯಾವುದೆಲ್ಲ ಬಳಕೆಗಾಗಿ)” ಎಂಬುದು. ಇದೇ ಪ್ರಶ್ನೆ ಹೀಗೆ ನನಗೆ ಫೋನ್ ಮಾಡಿದವರಿಗೆ ಕೇಳುತ್ತ ಬಂದಿರುವೆ. ಅಂದರೆ ಎಂದಿನಂತೆ ಫೋನ್ ಮಾಡಲು ಬಳಸುವುದನ್ನು ಬಿಟ್ಟು ಉಳಿದ ಯಾವ ಬಳಕೆಗೆ ಒಗ್ಗುವಂತಹ ಸ್ಮಾರ್ಟ್ ಫೋನ್ ಹುಡುಕುತ್ತಿದ್ದೀರೆಂಬುದು ಪ್ರಶ್ನೆ. ನಾನು ನಿರೀಕ್ಷಿಸುವ ಉತ್ತರಗಳು ಹೀಗಿರುತ್ತವೆ - “ಗೇಮ್ಸ್ ಆಡಲು ಬೇಕು; ಆನ್ಲೈನ್ ಶಾಪಿಂಗ್ ಮಾಡಲು ಬೇಕು; ಫೊಟೊಗ್ರಫಿಗೆ ಒಳ್ಳೆಯ ಕ್ಯಾಮೆರ ಇರುವ ಫೋನ್ ಬೇಕು; ಹಾಡು ಕೇಳಲು ಬೇಕು; ಆಫೀಸಿನ ಕೆಲಸ ಮಾಡಿಕೊಳ್ಳಲು ಇ-ಮೇಯ್ಲ್ ಮತ್ತೊಂದು ಓದಿಕೊಳ್ಳಲು, ಬರೆಯಲು ಬೇಕು” - ಹೀಗೆ ಯಾವುದಾದರೊಂದು ನಿರ್ದಿಷ್ಟ ಬಳಕೆ ಅಥವ ಇವೆಲ್ಲವೂ. ಆದರೆ ನನ್ನ ಪ್ರಶ್ನೆಗೆ ಸಿಗುವ ಉತ್ತರಗಳು ಕೆಲವು ಹೀಗಿರುತ್ತವೆ - “ಫೋನ್ ಮಾಡುವುದನ್ನು ಬಿಟ್ಟು ಬೇರೆ ಹೆಚ್ಚೇನೂ ಇಲ್ಲ, ಆದರೆ  ಈಗ ಸಿಗೋದೆಲ್ಲ ಸ್ಮಾರ್ಟ್ ಫೋನೇ ಅಲ್ಲವಾ?” ಅಥವ “ಎಲ್ಲರೂ ತೆಗೆದುಕೊಳ್ಳುತ್ತಿದ್ದಾರೆ ಮಾರಾಯ. ನನಗೂ ಒಂದು ಇರಲಿ” ಅಥವ  “ವಾಟ್ಸಾಪ್ ಬೇಕು” ಅಥವ “ಫೇಸ್ಬುಕ್ ಬೇಕು”;
“ಟ್ರಿಪ್ ಹೋಗ್ತಿದೀನಿ, ಕ್ಯಾಮೆರ ಬದಲು ಹೊಸ ಫೋನೇ ತೆಗೆದುಕೊಂಡು ಹೋಗೋಣಾಂತ”. 
 
ಇದನ್ನೆಲ್ಲ ಕೇಳುವಾಗ ನನಗೆ — ಬೇಕಿರುವ, ಬೇಡದ ಎಲ್ಲ ಸಾಮಗ್ರಿಗಳನ್ನು ತುಂಬಿಸಿರುವ ಸ್ಮಾರ್ಟ್ ಫೋನುಗಳನ್ನು ಬಿಸಿ ಬಿಸಿ ಮೆಣಸಿನಕಾಯಿ ಬೋಂಡದಂತೆ ಮಾರುತ್ತ ಲಾಭ ಕಾಣುತ್ತಿರುವ ಸ್ಮಾರ್ಟ್ ಫೋನ್ ಕಂಪೆನಿಗಳ ಮೇಲೆ ತೀರ ಅಸೂಯೆ. ಈಗ ಎಲ್ಲ ಸ್ಮಾರ್ಟ್ ಫೋನುಗಳು ಹತ್ತಾರು ಸೆನ್ಸರುಗಳನ್ನು ಹೊತ್ತು ಬರುತ್ತವೆ. ಅವುಗಳಲ್ಲಿ ಕೆಲವನ್ನಂತೂ ಆ ಫೋನು ನಿಮ್ಮ ಬಳಿ ಇರುವಷ್ಟೂ ಕಾಲ ನೀವು ಬಳಸುವುದೇ ಇಲ್ಲ. ಆದರೂ ಎಲ್ಲರಿಗೂ ಎಲ್ಲವೂ ಇರುವ ಸ್ಮಾರ್ಟ್ ಫೋನೇ ಬೇಕು. ಕೊಳ್ಳುವವರು ತಮಗೆ ಬೇಕಿರುವ ಸವಲತ್ತುಗಳಿರುವ ಸ್ಮಾರ್ಟ್ ಫೋನುಗಳನ್ನು ಕೊಳ್ಳುವ ಬದಲು ಎಲ್ಲ ಸವಲತ್ತುಗಳು ಇರುವ ಸ್ಮಾರ್ಟ್ ಫೋನುಗಳಲ್ಲಿ ಯಾವುದು ಕಡಿಮೆ ಬೆಲೆಗೆ ಸಿಗುತ್ತದೆಂದು ನೋಡುತ್ತಾರೆ! ಪ್ರತಿ ವರ್ಷ ಅಥವ ಎರಡು ವರ್ಷಗಳಿಗೊಮ್ಮೆ ಹೊಸ ಫೋನು ತೆಗೆದುಕೊಳ್ಳಲೇಬೇಕು. ಅಷ್ಟು ಹೊತ್ತಿಗಾಗಲೇ ಹೊಸತು ಬಂದಿರುತ್ತದೆ. ಇದರಿಂದಾಗಿ ಸ್ಮಾರ್ಟ್ ಫೋನು ಮಾರುವ ಕಂಪೆನಿಗಳಿಗೆ ಪ್ರತಿ ವರ್ಷವೂ ಲಾಭ ಕಾಣುವ ಅವಕಾಶ. ಹೊಸ ತಂತ್ರಜ್ಞಾನ ಬರುತ್ತಿರುವಂತೆ ಇನ್ನಷ್ಟು ಬೆಲೆ ಏರಿಸುತ್ತ ಹೋಗುವ ಅವಕಾಶ ಕೂಡ. ಹೀಗಾಗಿ ಈಗ ಸ್ಮಾರ್ಟ್ ಫೋನುಗಳದ್ದೇ ಸಂತೆ. ಸೆಲ್ಫಿ ತಜ್ಞ ಅಂತಲೋ ಡ್ಯೂಯಲ್ ಕ್ಯಾಮೆರ ಅಂತಲೋ ಸಾಗ ಹಾಕಿದರೂ ಆಯಿತು. ಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ. 
 
ಅದೊಂದು ದಿನ ಅನಿವಾರ್ಯ ಕಾರಣಗಳಿಂದ ನಾನೇ ಸ್ವತಃ ಬಹುರಾಷ್ಟ್ರೀಯ ಸ್ಮಾರ್ಟ್ ಫೋನ್ ಕಂಪೆನಿಯೊಂದರ ಸರ್ವೀಸ್ ಸೆಂಟರಿಗೆ ತೆರಳಿದ್ದೆ. ಅಲ್ಲಿ ಮಿಸುಕಾಡಲೂ ಜಾಗವಿಲ್ಲದಷ್ಟು ಜನ. ಸಾಲದ್ದಕ್ಕೆ ಎ ಸಿ ಬೇರೆ ಬಂದ್ ಮಾಡಿಕೊಂಡು ಕುಳಿತಿದ್ದರು. ಅಲ್ಲೊಂದು ಇಲ್ಲೊಂದು ಫ್ಯಾನು.  ತಾವು ಕೊಂಡ ಸ್ಮಾರ್ಟ್ ಫೋನಿನ ಬೆಲೆಯ ತಾರತಮ್ಯವಿಲ್ಲದಂತೆ ಆ ಫ್ಯಾನುಗಳ ಅಡಿ ಕೂರಲು/ನಿಲ್ಲಲು ಸ್ಮಾರ್ಟ್ ಫೋನ್ ಮಾಲೀಕರು ಹೊಡೆದಾಡುತ್ತಿದ್ದರು. ಹೋದ ಕೂಡಲೆ ಅಲ್ಲಿ ಟೋಕನ್ ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದವರು ಮಾತ್ರ ತೆಗೆದುಕೊಂಡಿಯಾರು. ಉಳಿದವರಿಗೆ ಯಾರಾದರೂ ಅದರ ಬಗ್ಗೆ ಹೇಳದೇ ಇದ್ದರೆ ಆ ಉಸಿರು ಕಟ್ಟುವ ಜಾಗದಲ್ಲಿ ಏನೂ ಗೊತ್ತಿಲ್ಲದಂತೆ ಸ್ವಲ್ಪ ಹೆಚ್ಚಿನ ಹೊತ್ತು ಕೂರುವ ಪನಿಷ್ಮೆಂಟೇ ಸೈ. ಸರ್ವೀಸ್ ಸೆಂಟರಿನ ಸಿಬ್ಬಂದಿಗಳಲ್ಲಿ ಯಾರಿಗೂ ಪುರುಸೊತ್ತಿಲ್ಲದಷ್ಟು ಕೆಲಸ. ಜನರಿಂದ ತುಂಬಿದ್ದ ದಿನ ಆ ಸರ್ವೀಸ್ ಸೆಂಟರಿನಲ್ಲಿ ಸ್ವಲ್ಪ ಹೊತ್ತು ಕೂತರೆ ಸಾಕು ಸಂತೆಯಲ್ಲಿ ಕೊಂಡ ಸಲಕರಣೆಗೆ ವಾರಂಟಿ ಪಡೆದಷ್ಟೇ ಕಷ್ಟ ಇದು ಎಂಬ ಅರಿವು ನಿಮಗಾಗಬಹುದು. ಆನಾರೋಗ್ಯದಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಡಾಕ್ಟರುಗಳಿಗೆ ಕಾಯುತ್ತ ಅಲ್ಲೊಂದು ಟೆಸ್ಟ್ ಇಲ್ಲೊಂದು ಟೆಸ್ಟ್ ಮಾಡಿಸಿಕೊಂಡು ಬಂದು ರಿಪೋರ್ಟ್ ಕೊಟ್ಟು ಗಾಬರಿಯಲ್ಲಿ ದುಡ್ಡು ತೆತ್ತು “ಏನಾಗಿದೆ" ಎಂಬುದನ್ನು ತಿಳಿಯುವ ಪೇಶೆಂಟುಗಳ ಆತಂಕದ ಅನುಭವ ಇಲ್ಲಿಯೂ ನಿಮಗಾಗುವ ಸಂಭವ ಉಂಟು.
 
ಸರ್ವೀಸ್ ಸೆಂಟರ್ ಸಿಬ್ಬಂದಿ ಬಂದವರಿಗೆಲ್ಲ “ನೋಡಿ, ಈಗ ನಿಮ್ಮ ಸ್ಮಾರ್ಟ್ ಫೋನನ್ನು ನಾವು ಒಮ್ಮೆ ತೆಗೆದು ನೋಡಿದರೆ ನಿಮಗೆ ಇಷ್ಟು ಚಾರ್ಚ್ ಬೀಳುತ್ತದೆ. ಮುಂದುವರೆಸಬಹುದೇ?” ಎಂದು ತಮ್ಮ ಕಾರ್ಯವೈಖರಿಗೆ ಪೀಠಿಕೆ ಇಡುತ್ತಲೇ ರಿಪೇರಿ ಕೆಲಸಕ್ಕೆ ಕೈ ಹಾಕುತ್ತಿದ್ದರು. ಅಲ್ಲಿಗೆ ಬಂದವರು ಬೆಪ್ಪರಂತೆ “ಸರಿ ಎಷ್ಟಾಗುತ್ತದೆ? ಮಾಡಿ” ಎಂದು ಬೇರೆ ದಾರಿ ಕಾಣದೆ ಹೂಂ ಎನ್ನುತ್ತಿದ್ದರು. ರಿಪೇರಿಗೋ, ವಾರಂಟಿ ಪಡೆಯುವುದಕ್ಕೋ ಬಂದ ಸ್ಮಾರ್ಟ್ ಫೋನುಗಳಲ್ಲಿ ಹೆಚ್ಚಿನವು ಕೆಳಗೆ ಬೀಳಿಸಿಕೊಂಡು ಸ್ಕ್ರೀನ್ ಒಡೆದು ಹೋದವುಗಳು. ಅಥವ ಬ್ಯಾಟರಿ ಹೋದವುಗಳು. 
ಟೋಕನ್ ತೆಗೆದುಕೊಂಡು ಕಾದು ಕುಳಿತ್ತಿದ್ದ ಕಾಲೇಜು ಹುಡುಗನೊಬ್ಬ ತನ್ನ ಸರದಿ ಬಂದಾಗ “ಅಣ್ಣ, ನೀವು ಹಿಂದಿನ ಸಾರಿ ರಿಪೇರಿ ಮಾಡಿ ಎರಡು ತಿಂಗಳುಗಳೂ ಆಗಿಲ್ಲ. ಈಗ ಬ್ಯಾಟರಿ ಚಾರ್ಜ್ ಆಗುತ್ತಿಲ್ಲ” ಎಂದು ಅಲ್ಲಿದ್ದ ಸಿಬ್ಬಂದಿಯೊಂದಿಗೆ ತನ್ನ ಗೋಳು ತೋಡಿಕೊಂಡ. “ನಾವು ಬ್ಯಾಟರಿಗಳಿಗೆ ವಾರಂಟಿ ಕೊಡೋದಿಲ್ಲ ಸರ್. ಬ್ಯಾಟರಿ ನೀವು ಹೇಗೆ ಬಳಸುತ್ತೀರೋ ಅದರ ಮೇಲೆ ಡಿಪೆಂಡ್ ಆಗುತ್ತೆ” ಎಂಬ ಉತ್ತರ ಬಂತು. ನನ್ನ ಪಕ್ಕ ಕುಳಿತಿದ್ದ ಒಬ್ಬರು ನನ್ನ ಕಡೆ ತಿರುಗಿ “ಬ್ಯಾಟರಿಗೆ ಯಾರೂ ವಾರಂಟಿ ಕೊಡೋದಿಲ್ಲ ಸಾರ್” ಎಂದು ತಲೆಯಲ್ಲಾಡಿಸಿದರು. “ನಿಮ್ಮ ಸ್ಮಾರ್ಟ್ ಫೋನಿನದೇನು ಪ್ರಾಬ್ಲಮ್?” ಎಂದು ನಾನವರಿಗೆ ಕೇಳಿದೆ. “ಸಾರ್, ಮೊನ್ನೆ ಮಳೇಲಿ ನೆಂದುಬಿಡ್ತು” ಎಂದರು. “ಹಾಗೇ ನಿಧಾನಾನೂ ಆಗಿತ್ತು. ನೋಡೋಣ - ರಿಪೇರಿ ಹೇಗಿದ್ರೂ ಮಾಡಿಸೋದಾದ್ರೆ, ಹೊಸಾದು ಏನಾದ್ರೂ ಹಾಕಿಸಿ ಸರಿ ಮಾಡಿಸೋಣಾಂತ” ಎಂದರು. ಅವರು ಓದುತ್ತಿದ್ದ ನ್ಯೂಸ್ ಪೇಪರಿನಲ್ಲಿ ಇದೇ ಸ್ಮಾರ್ಟ್ ಫೋನ್ ಕಂಪೆನಿಯ ಜಾಹೀರಾತು ಇತ್ತು. ಅದರ ಬದಿಗೆ ಮಾರುಕಟ್ಟೆಗೆ ಬಂದಿರುವ ಹೊಸ ಸ್ಮಾರ್ಟ್ ಫೋನುಗಳ ಧಾರಾಕಾರ ಪಟ್ಟಿ ಹಾಗೂ ರಿವ್ಯೂ ಇದ್ದುವು. ಅದನ್ನೇ ಒದುತ್ತಿದ್ದ ಅವರು ನನ್ನ ಕಡೆ ತಿರುಗಿ “ಸಾರ್, ಇದೇ ರೀತಿ ಇದ್ದ ರಿವ್ಯೂ ನೋಡಿ ಈ ಸ್ಮಾರ್ಟ್ ಫೋನ್ ತಗೊಂಡೆ - ॑'ಸೂಪರ್ರಾಗಿದೆ' ಎಂದು ಬರೆದಿದ್ದರು ಸಾರ್.” ಎಂದರು. 
 
ಸ್ಮಾರ್ಟ್ ಫೋನ್ ಕೊಳ್ಳುವಾಗ ಏನನ್ನು ನೋಡಿ ಅದನ್ನು ಕೊಂಡುಕೊಳ್ಳಬೇಕು? 
ಈಗ ಸ್ಮಾರ್ಟ್ ಫೋನುಗಳು ಅಗ್ಗದ ಬೆಲೆಯಲ್ಲಿ ಸಿಗುತ್ತಿರುವುದರಿಂದ ಕೊಳ್ಳುವಾಗ ಹಿಂದಿನಂತೆ ಆಲೋಚನೆ ಮಾಡಿ, ವಿಚಾರಿಸಿ ಕೊಂಡುಕೊಳ್ಳುತ್ತಿರುವವರು ಕಡಿಮೆಯಾಗುತ್ತಿರುವುದು ಸಹಜ. ಜೊತೆಗೆ ದಾರಿ ತಪ್ಪಿಸುವ ಜಾಹೀರಾತುಗಳು, ಮಾರ್ಕೆಟಿಂಗ್ ತಂತ್ರಗಳು ಯಾವುದೋ ಸ್ಮಾರ್ಟ್ ಫೋನ್ ಒಂದನ್ನು ನಮಗೆ ತಗಲುಹಾಕಿಬಿಡುತ್ತವೆ. ಅದಾದಮೇಲೆ ಮುಂದಿನ ಎರಡು ಮೂರು ವರುಷ ಅದರೊಂದಿಗೆ ಜೀವನ ಕಟ್ಟಿಕೊಂಡಂತೆ. ಅದೊಂದು ದಿನ ಮೆಟ್ರೋ ರೈಲಿನೊಳಗೆ ಎಲ್ಲರೂ ಸ್ಮಾರ್ಟ್ ಫೋನು ಹಿಡಿದು ಮಗ್ನರಾಗಿರುವಾಗ ಹೊಸತಾದ ಜಗಮಗಿಸುವ ಸ್ಮಾರ್ಟ್ ಫೋನನ್ನು ಬಳಸದೆಯೇ ಕೈಯಲ್ಲಿ ಹಿಡಿದು ಬಾಗಿಲ ಬಳಿ ನಿಂತಿದ್ದ ಕಾಲೇಜು ಹುಡುಗನೊಬ್ಬನನ್ನು ನೋಡಿ ಅವನನ್ನು ಮಾತನಾಡಿಸಿದೆ. “ಈಗಷ್ಟೇ ಈ ಸ್ಮಾರ್ಟ್ ಫೋನ್ ತೆಗೆದುಕೊಂಡೆ ಸಾರ್.” ಎಂದು ಹೇಳಿದ. ಯಾಕೆ ಇದನ್ನೇ ತೆಗೆದುಕೊಂಡದ್ದು ಎಂದು ವಿಚಾರಿಸಲಾಗಿ ತನಗೆ ಅದರ ಜಾಹೀರಾತು ಇಷ್ಟವಾಯಿತೆಂದೂ ಆ ಜಾಹೀರಾತಿನಲ್ಲಿ ಬರುವ ನಟಿ ತನ್ನ ನೆಚ್ಚಿನ ನಟಿ ಎಂದೂ ತಿಳಿಸಿದ. ನನಗೆ ಏನೂ ಆಶ್ಚರ್ಯವಾಗಲಿಲ್ಲ. ಬಹಳಷ್ಟು ಜನ ಹೀಗೆಯೇ ಜಾಹೀರಾತು ನೋಡಿ ಅಥವ ಯಾವುದೋ ರಿವ್ಯೂ ಓದಿಕೊಂಡು ಸ್ಮಾರ್ಟ್ ಫೋನ್ ತೆಗೆದುಕೊಂಡುಬಿಡುತ್ತಾರೆ. ತದನಂತರ ತಮ್ಮ ಸ್ಮಾರ್ಟ್ ಫೋನಿನಲ್ಲಿ ಅದೇನೋ ಸರಿಯಿಲ್ಲ, ಇದೇನೋ ಸರಿಯಿಲ್ಲ ಎಂದೆಲ್ಲ ಹೇಳಿಕೊಂಡು ಓಡಾಡುವುದೇ ಗತಿ. 
 
ಕೊಂಡ ಸ್ಮಾರ್ಟ್ ಫೋನ್ ಹೆಚ್ಚು ದಿನ ನಮ್ಮ ಸಂಗಾತಿಯಾಗಿ ಇರಲಾರದು ಎಂಬ ಕಟು ಸತ್ಯ ತಿಳಿದು ಸ್ಮಾರ್ಟ್ ಫೋನ್ ಕೊಳ್ಳುವುದು ಇಂದಿನ ಅವಶ್ಯಕತೆ. ಹೀಗಾಗಿ ಸ್ಮಾರ್ಟ್ ಫೋನ್ ಕೊಳ್ಳುವಾಗ ಇನ್ನು ಎರಡು ಮೂರು ವರ್ಷ (ಮತ್ತೇನೂ ತೊಂದರೆಯಾಗದೆ ಅದು ನಮ್ಮ ಜೊತೆ ಇದ್ದಲ್ಲಿ) ಅದರಿಂದ ಏನೆಲ್ಲ ಬಳಕೆ ಸಾಧ್ಯವಾದೀತು ಎಂಬುದನ್ನು ಗ್ರಹಿಸಿ ಅಥವಾ ಅವಲೋಕಿಸಿ ತೆಗೆದುಕೊಳ್ಳುವುದು ಅನಿವಾರ್ಯ. ಹೀಗೆ ಆಲೋಚಿಸಿ ತೆಗೆದುಕೊಂಡ ಮೇಲೆ ಅದನ್ನು ಆಯಾ ಬಳಕೆಗೆ ಸಂಪೂರ್ಣ ಬಳಸಿಕೊಂಡರೆ ಮಾತ್ರ ಅದಕ್ಕೆ ಕೊಟ್ಟ ಬೆಲೆಗೆ ಮೌಲ್ಯ. 
 
ಆಪರೇಟಿಂಗ್ ಸಿಸ್ಟಮ್
ನೀವು ಕೊಳ್ಳುವ ಸ್ಮಾರ್ಟ್ ಫೋನಿನ ಆಪರೇಟಿಂಗ್ ಸಿಸ್ಟಮ್ ಯಾವುದು ಹಾಗೂ ಅದರ ಆವೃತ್ತಿ (ವರ್ಶನ್ ನಂಬರ್) ಏನು ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಧಾರಣವಾಗಿ ಆಂಡ್ರಾಯ್ಡ್ ಫೋನುಗಳಾದರೆ ಹೊಸ ಆವೃತ್ತಿ ಇದ್ದಷ್ಟೂ ಒಳ್ಳೆಯದು. ಏಕೆಂದರೆ ಆಪರೇಟಿಂಗ್ ಸಿಸ್ಟಮಿನ ಹೊಸ ಆವೃತ್ತಿಗಳನ್ನು ಗೂಗಲ್ ಕಂಪೆನಿಯು ತಯಾರಿಸುತ್ತದಾದರೂ ನಿಮಗೆ ಸ್ಮಾರ್ಟ್ ಫೋನ್ ಮಾರಿದ ಕಂಪೆನಿಯ ಮೂಲಕವೇ ಅದು ಬರಬೇಕು. ಈಗಿನಂತೆ ಆಂಡ್ರಾಯ್ಡ್ 8.0 - ಓರಿಯೋ ಹೊಚ್ಚ ಹೊಸತು. ತೀರ ಇದಿಲ್ಲದಿದ್ದರೆ 7.0 ಆದರೂ ಇದ್ದರೆ ಒಳಿತು. 
ಐಫೋನಿನಲ್ಲಿ ತೀರ ಹಳೆಯ ಮಾಡೆಲ್ ತೆಗೆದುಕೊಂಡರೆ ಯಾವ ಹೊಸ ಆವೃತ್ತಿಯವರೆಗೂ ಅದರಲ್ಲಿ ಅಪ್ಗ್ರೇಡ್ ಮಾಡಬಹುದು ಎಂಬುದನ್ನು ನೋಡಬೇಕಾಗಬಹುದು. ಹೊಸ ಐಫೋನುಗಳಿಗೆ ಈ ತೊಂದರೆಯಿಲ್ಲ - ಏಕೆಂದರೆ ಹೊಸ ಆಪರೇಟಿಂಗ್ ಸಿಸ್ಟಮ್ ತಂತಾನೆ ರವಾನೆಯಾಗಿಬಿಡುತ್ತದೆ. 
 
RAM 
ಸ್ಮಾರ್ಟ್ ಫೋನಿನಲ್ಲಿ RAM ಹೆಚ್ಚು ಇದ್ದಷ್ಟೂ ಒಳ್ಳೆಯದು. ನಾನು ಮೊದಲು ಬಳಸಿದ ಕಂಪ್ಯೂಟರುಗಳಲ್ಲಿ ಇರುತ್ತಿದ್ದ RAM ಈಗಿನ ಸ್ಮಾರ್ಟ್ ಫೋನುಗಳಲ್ಲಿ ಕೆ ಹೋಲಿಸಿದರೆ ತೀರ ಕಡಿಮೆ. ಈಗ ಸಿಗುವ ಸ್ಮಾರ್ಟ್ ಫೋನುಗಳು ಆಗಿನ ಕಂಪ್ಯೂಟರುಗಳಿಗಿಂತ ತೀರ ಹೆಚ್ಚಿನ ಕ್ಷಮತೆಯುಳ್ಳವು. ಆದರೆ ಮೊಬೈಲ್ ಫೋನಿನಲ್ಲಿ ಗೇಮ್ಸ್ ಆಡುವುದಿದ್ದರೆ ಹೆಚ್ಚು RAM ಇರುವ ಮೊಬೈಲ್ ಫೋನು ಬೇಕೇಬೇಕು. ಹೆಚ್ಚಿನ RAM ಇರುವ ಡಿವೈಸುಗಳು ಮಾರುಕಟ್ಟೆಯಲ್ಲಿ ಬರುತ್ತಿರುವಂತೆ ಗೇಮ್ಸ್ ಕೂಡ ಅದಕ್ಕೆ ಒಗ್ಗಿಕೊಂಡು ಬರುತ್ತಿರುವುದು ಸಹಜ. 
 
3G/4G LTE
ಫೋನು ತೆಗೆದುಕೊಳ್ಳುವಾಗ ಇದೊಂದು ತುಂಬ ಮುಖ್ಯವಾದ, ಅಗತ್ಯವಾದ ವಿಷಯ. ರಿಲಯನ್ಸ್ ಜಿಯೋ ಹೊರಬಂದ ಕೆಲವು ತಿಂಗಳುಗಳಲ್ಲಿ ಹಲವರು ತಮ್ಮ ಫೋನುಗಳನ್ನೇ ಬದಲಾಯಿಸುವ ಪ್ರಮೇಯ ಬಂದಿತ್ತು. 4G LTE ಸಪೋರ್ಟ್ ಇಲ್ಲದ ಸ್ಮಾರ್ಟ್ ಫೋನು ತೆಗೆದುಕೊಂಡರೆ ರಿಲಯನ್ಸ್ ಜಿಯೋ ಬಳಸಲು ಸಾಧ್ಯವಾಗುವುದಿಲ್ಲ. ಈಗ ಎಲ್ಲ ಟೆಲಿಕಾಂ ಕಂಪೆನಿಗಳು 4G ಸವಲತ್ತು ಒದಗಿಸುತ್ತಿರುವುದರಿಂದ ಆದಷ್ಟೂ 4G LTE ಸಪೋರ್ಟ್ ಇರುವ ಡಿವೈಸು ಕೊಂಡರೆ ಉತ್ತಮ. 
 
ಸ್ಕ್ರೀನ್ ಅಳತೆ
ಸ್ಕ್ರೀನ್ ಉದ್ದ, ಅಗಲ ಇದ್ದಷ್ಟೂ ಒಳ್ಳೆಯದೇ ಅಲ್ಲವೆ? ಆದರೆ ತೀರ ದೊಡ್ಡದಿರುವ ಫೋನನ್ನು ಎತ್ತಿಕೊಂಡು ಹೋಗುವುದು, ಜೇಬಿನಲ್ಲಿಡುವುದು ತ್ರಾಸಾದೀತು. ಹೀಗಾಗಿ ನಿಮಗೆ ಒಗ್ಗುವ ಸ್ಕ್ರೀನ್ ಗಾತ್ರ ಇರುವ ಫೋನ್ ತೆಗೆದುಕೊಂಡರೆ ಉತ್ತಮ. ಕೆಲವರಿಗೆ ಉದ್ದನೆಯ ಸ್ಕ್ರೀನ್ ಇರುವ ಸ್ಮಾರ್ಟ್ ಫೋನ್ ಹೆಚ್ಚು ಉಪಯುಕ್ತವಾಗುತ್ತದೆ. 
 
ಬ್ಯಾಟರಿಯ ಕ್ಷಮತೆ
ಬ್ಯಾಟರಿಯ ಕ್ಷಮತೆಯನ್ನು mAh ಎಂಬ ಪ್ರಮಾಣದಲ್ಲಿ ಅಳೆಯುತ್ತಾರೆ.  ಸ್ಮಾರ್ಟ್ ಫೋನಿನಲ್ಲಿ ಬ್ಯಾಟರಿ ಬಹುಶಃ ಬಹುಮುಖ್ಯವಾದ ಅಂಗ. ಒಳ್ಳೆಯ ಬ್ಯಾಟರಿ ಇಲ್ಲದ ಸ್ಮಾರ್ಟ್ ಫೋನ್ ತೆಗೆದುಕೊಂಡರೆ ಮತ್ತೆ ಮತ್ತೆ ಚಾರ್ಚ್ ಮಾಡುವುದರಲ್ಲಿ ದಿನವೆಲ್ಲ ಕಳೆದುಹೋಗುವ ಸಾಧ್ಯತೆಯಿದೆ. 
 'ಫಾಸ್ಟ್ ಚಾರ್ಚಿಂಗ್' ಅಥವ  ॑ರ್ಯಾಪಿಡ್ ಚಾರ್ಚಿಂಗ್' ವ್ಯವಸ್ಥೆ ಇರುವ ಸ್ಮಾರ್ಟ್ ಫೋನು ತೆಗೆದುಕೊಂಡರೆ ಇದ್ದಿದ್ದರಲ್ಲಿ ಫೋನು ಬೇಗ ಚಾರ್ಚ್ ಆಗುತ್ತದೆ. ಸ್ಮಾರ್ಟ್ ಫೋನ್ ಕೊಂಡವರಲ್ಲಿ ಬಹುಪಾಲು ಜನ ದೂರುವುದು ಬ್ಯಾಟರಿಯನ್ನೇ. “ಅರ್ಧ ದಿನದಲ್ಲೇ ಚಾರ್ಚ್ ಹೋಗಿಬಿಡುತ್ತದೆ. ನನ್ನ ಹಳೆಯ ಫೋನಿನಲ್ಲಿ ಎರಡು ಮೂರು ದಿನ ಆದರೂ ಚಾರ್ಚ್ ಇರುತ್ತಿತ್ತು” ಎಂದು ಕೇಳಿಬರುವುದು ಸಾಮಾನ್ಯ. 
ಅತಿ ಹೆಚ್ಚು ರೆಸಲ್ಯೂಶನ್ ಇರುವ ಸ್ಮಾರ್ಟ್ ಫೋನುಗಳಲ್ಲಿ ಈಗೆಲ್ಲ ಹೆಚ್ಚಿನ ಕ್ಷಮತೆಯುಳ್ಳ ಸ್ಪೀಕರುಗಳನ್ನು ಕೂಡ ಅಳವಡಿಸಿರುತ್ತಾರೆ. ಜೊತೆಗೆ ಹತ್ತಾರು ಸೆನ್ಸರುಗಳಿರುತ್ತವೆ. ಚಾರ್ಜ್ ಕಡಿಮೆಯಾಗಲು ಲೊಕೇಶನ್ ಸೆನ್ಸರ್ ಒಂದೇ ಸಾಕು. ಈಗೆಲ್ಲ ಓಲಾ, ಊಬರ್ ಮುಂತಾದವುಗಳಿಂದ ಹಿಡಿದು ಸ್ವಿಗ್ಗಿ, ಫುಡ್ ಪಾಂಡಾ, ಗೂಗಲ್ ಮ್ಯಾಪ್ಸ್ - ಹೀಗೆ ಹಲವಾರು ಆಪ್ಗಳು ನಿಮ್ಮ ಮೊಬೈಲ್ ಎಲ್ಲಿದೆ ಎಂಬ ಮಾಹಿತಿಯನ್ನು ಪಡೆದುಕೊಂಡು ಕೆಲಸ ಮಾಡುವುದರಿಂದ ಲೊಕೇಶನ್ ಸೆನ್ಸರ್ ಆಫ್ ಮಾಡಿಟ್ಟುಕೊಂಡು ಸ್ಮಾರ್ಟ್ ಫೋನ್ ಬಳಸಲೂ ಸಾಧ್ಯವಾಗದಂತೆ ಆಗಿದೆ. ಹೀಗಾಗಿ ಹೆಚ್ಚು ಹೊತ್ತು ಚಾರ್ಚ್ ಉಳಿಸಿಕೊಳ್ಳುವ ಬ್ಯಾಟರಿ ಇರುವ ಸ್ಮಾರ್ಟ್ ಫೋನ್ ಕೊಂಡಲ್ಲಿ ಉತ್ತಮ. 
ಕೆಲವು ಸ್ಮಾರ್ಟ್ ಫೋನುಗಳಲ್ಲಿ “ಬ್ಯಾಟರಿ ಸೇವಿಂಗ್ ಮೋಡ್” ಎಂಬ ಆಪ್ಶನ್ ಇರುತ್ತದೆ. ಇದನ್ನು ಸ್ವಿಚ್ ಆನ್ ಮಾಡಿದಲ್ಲಿ ಸಾಧಾರಣವಾಗಿ ಐದಾರು ಗಂಟೆಗಳ ಕಾಲ ಉಳಿಯುವ ಚಾರ್ಚ್ ಮತ್ತಷ್ಟು ಗಂಟೆಗಳ ಕಾಲ ಉಳಿದೀತು. 
 
ಸ್ಟೋರೇಜ್
ಸ್ಮಾರ್ಟ್ ಫೋನ್ ಕೊಳ್ಳುವ ಪ್ರತಿಯೊಬ್ಬರೂ ಎದುರಿಸುವ ಸಮಸ್ಯೆ - ಫೋನಿನಲ್ಲಿ ಫೈಲುಗಳಿಗೆ ಜಾಗ ಇಲ್ಲದೇ ಹೋಗುವಂತೆ ಆಗುವುದು. ವಾಟ್ಸಾಪ್ ನಿರಂತರ ಅತಿಹೆಚ್ಚು ಬಳಸುವವರ ಸ್ಮಾರ್ಟ್ ಫೋನುಗಳಲ್ಲಂತು ಇದು ತೀರ ಸಾಮಾನ್ಯ. ಆಗಾಗ ಬೇಡದ ಫೋಟೋ, ವೀಡೀಯೋಗಳನ್ನು ಅಳಿಸಿಹಾಕದಿದ್ದರೆ ಫೋನಿನಲ್ಲಿ ಹೊಸ ಫೋಟೋ ಹಾಗೂ ವೀಡಿಯೋಗಳಿಗೆ ಜಾಗವಿಲ್ಲದಂತಾಗಿ ಹೋಗುತ್ತದೆ. ಹೀಗಾಗಿ ಸ್ಮಾರ್ಟ್ ಫೋನು ಕೊಳ್ಳುವಾಗಲೇ ಆದಷ್ಟೂ ತಮ್ಮ ಬಳಕೆಗೆ ತಕ್ಕಂತೆ ಜಾಗವಿರುವ ಫೋನು ತೆಗೆದುಕೊಳ್ಳುವುದು ಒಳ್ಳೆಯದು. ಉದಾಹರಣೆಗೆ, ಗೂಗಲ್ಲಿನ ಪಿಕ್ಸೆಲ್ ಫೋನು 64GB ಹಾಗು 128GB ಜಾಗವಿರುವ ಅವತರಿಣೆಗಳಲ್ಲಿ ಲಭ್ಯವಿದೆ. 
 
 
ಕ್ಯಾಮೆರ
ಬಹುಶಃ ಸ್ಮಾರ್ಟ್ ಫೋನ್ ಖರೀದಿ ಮಾಡುವವರು ಅದರಲ್ಲಿರುವ ಕ್ಯಾಮೆರ ಎಷ್ಟು ಮೆಗಾ ಪಿಕ್ಸೆಲ್ ಹೊಂದಿದೆ ಎಂಬುದರೆಡೆಗೆ ತೀರ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಮೆಗಾ ಪಿಕ್ಸೆಲ್ ಒಂದೇ ಮುಖ್ಯವಲ್ಲ. ಸ್ಮಾರ್ಟ್ ಫೋನ್ ಕ್ಯಾಮೆರಾದಲ್ಲಿ ಎಚ್ ಡಿ ಆರ್ ಮೋಡ್ (ಅಂದರೆ ಹೈ ಡೈನಮಿಕ್ ರೇಂಜ್) ಸಪೋರ್ಟ್ ಇದ್ದಲ್ಲಿ ಒಳ್ಳೆಯದು. ಈಗ ಬರುವ ಕೆಲವು ಹೊಸ ಸ್ಮಾರ್ಟ್ ಫೋನುಗಳಲ್ಲಿ ಎಚ್ ಡಿ ಆರ್ ಪ್ಲಸ್ ಎಂಬ ತಂತ್ರಜ್ಞಾನ ಕೂಡ ಬರುತ್ತಿದೆ. 
ಕೆಲವು ಸ್ಮಾರ್ಟ್ ಫೋನುಗಳು ಕತ್ತಲೆಯಲ್ಲೂ ಅಂದದ ಚಿತ್ರ ತೆಗೆಯುವ ಕ್ಷಮತೆಯುಳ್ಳ ಕ್ಯಾಮೆರಗಳೊಂದಿಗೆ ಬರುತ್ತಿವೆ. ಇದೆಲ್ಲ ಸವಲತ್ತುಗಳನ್ನು ಅಯಾ ಸ್ಮಾರ್ಟ್ ಫೋನಿನ ಸ್ಪೆಕ್ಸ್ (specs) ನೋಡಿ ತಿಳಿದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ಯಾವುದಾದರೂ ಶೋ ರೂಮಿಗೆ ಹೋಗಿ ಕ್ಯಾಮೆರ ಹೇಗಿದೆ ಎಂಬುದನ್ನು ಪ್ರಯತ್ನಿಸಿ ನೋಡುವುದು ಉತ್ತಮ. 
ಸೆಲ್ಫೀ ತೆಗೆದುಕೊಳ್ಳಲು ಉತ್ತಮ ಎಂದೆಲ್ಲ ಹತ್ತಾರು ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿ ಸ್ಮಾರ್ಟ್ ಫೋನುಗಳನ್ನು ಮಾರುವ ಪ್ರಯತ್ನವನ್ನು ಕಂಪೆನಿಗಳು ಮಾಡುತ್ತವೆ. ಹೀಗಾಗಿ ಕ್ಯಾಮೆರ ಎಷ್ಟಿದೆ, ಎಷ್ಟು ಮೆಗಾ ಪಿಕ್ಸೆಲ್ ಇದೆ ಎನ್ನುವುದಕ್ಕಿಂತ ಮುಖ್ಯವಾಗಿ ಅದರ ಪರ್ಫಾರ್ಮೆನ್ಸ್ ಹೇಗಿದೆ, ಏನೆಲ್ಲ ತಂತ್ರಜ್ಞಾನ ಸಪೋರ್ಟ್ ಮಾಡುತ್ತದೆ ಎಂಬುದನ್ನು ನೋಡುವುದು ಮುಖ್ಯ. 
 
 
ಸ್ಮಾರ್ಟ್ ಫೋನಿಗೊಂದು ಕವರ್ 
ಸ್ಮಾರ್ಟ್ ಫೋನು ಬಿದ್ದು ಒಡೆದು ಹೋದರೆ ಅಥವ ಅದರ ಸ್ಕ್ರೀನ್ ಹಾಳಾದರೆ ಬೇಡದ ರಗಳೆ ಎದುರಿಸಬೇಕು. ಹೀಗಾಗಿ ಸ್ಮಾರ್ಟ್ ಫೋನಿಗೊಂದು ಒಳ್ಳೆಯ ಹೊರ ಹೊದಿಕೆ ಅಥವ ಕವರ್ ತೆಗೆದುಕೊಂಡಲ್ಲಿ ಯಾವುದಾದರು ಅವಗಡದಿಂದ ಆಗಬಹುದಾದ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಮೊಬೈಲ್ ಕವರುಗಳಲ್ಲಿ ಕೊರಿಯ ದೇಶದಿಂದ ಆಮದಾಗುವ ಸ್ಪೈಜೆನ್ ಎಂಬ ಕಂಪೆನಿಯ ಮೊಬೈಲ್ ಕವರುಗಳು ತುಂಬ ಉಪಯುಕ್ತ ಹಾಗು ಉತ್ತಮ ಕ್ವಾಲಿಟಿಯವು.   
 
 
ಸರ್ವೀಸ್ ಹೇಗೆ
ಸ್ಮಾರ್ಟ್ ಫೋನುಗಳನ್ನು ಜಾಹೀರಾತು ನೋಡಿ ಖರೀದಿಸಿಬಿಡುತ್ತೇವೆ. ಆದರೆ ಸರ್ವೀಸ್, ರಿಪೇರಿ - ಇದೆಲ್ಲದರ ಅರಿವಾಗುವುದು ಅದೊಮ್ಮೆ ಬಿದ್ದು ಒಡೆದು ಹೋದದ್ದೋ ಅಥವ ಮತ್ತೇನೋ ತೊಂದರೆ ಆದಾಗಲೇ. ಯಾವ ಕಂಪೆನಿ ಹೇಗೆ ಸರ್ವೀಸ್ ಕೊಡುತ್ತದೆಂಬುದನ್ನು ತಿಳಿದುಕೊಳ್ಳುವುದು ಸುಲಭವಲ್ಲ. ಮುಂಚೆ ಕೊಂಡವರನ್ನು ಕೇಳಿ ತಿಳಿದುಕೊಳ್ಳಬೇಕಷ್ಟೆ. ಸಾಧಾರಣವಾಗಿ ಅತಿ ಹೆಚ್ಚು ಸ್ಮಾರ್ಟ್ ಫೋನುಗಳನ್ನು ಮಾರುವ ಕಂಪೆನಿಗಳ ಸರ್ವೀಸ್ ಸಹಜವಾಗಿಯೇ ಸಮಸ್ಯೆಗಳಿಂದ ಕೂಡಿರುವ ಸಾಧ್ಯತೆಗಳುಂಟು. ಒಮ್ಮೆ ನಾನು ಖರೀದಿ ಮಾಡಿದ ಸ್ಮಾರ್ಟ್ ಫೋನಿನಲ್ಲಿ ಒಂದು ದಿನಕ್ಕೇ ಸ್ಪೀಕರ್ ಗುರುಗುಟ್ಟುತ್ತಿತ್ತು. ಆದರೆ ಅದನ್ನು ಹಿಂದೆಗೆದುಕೊಂಡು ಹೊಸತು ಕೊಡಲು ಅಂಗಡಿಯವರು ಒಪ್ಪಲೇ ಇಲ್ಲ. ಸರ್ವೀಸ್ ಸೆಂಟರಿಗೆ ತೆಗೆದುಕೊಂಡು ಹೋದಾಗ “ಅದನ್ನು ನಿಮಗೆ ಮಾರಿದವರೇ ತಂದುಕೊಡಬೇಕಿತ್ತು” ಎಂದು ನನಗೆ ತಿಳಿಸಿದರು. ಕೊನೆಗೆ ಮೂರ್ನಾಲ್ಕು ಬಾರಿ ಅಂಗಡಿಯಿಂದ ಸರ್ವೀಸ್ ಸೆಂಟರಿಗೆ ಓಡಾಡಿದ ತರುವಾಯ ನಾನು ಖರೀದಿ ಮಾಡಿದ ಫೋನು ಸರಿಯಾಗದೆಂದು ಹೇಳಿ ಅದನ್ನು ವಾಪಸ್ ತೆಗೆದುಕೊಂಡರು. ಹೊಸ ಡಿವೈಸ್ ಈಗ ಲಭ್ಯವಿಲ್ಲ ಎಂದು ಹೇಳಿಬಿಟ್ಟರು. ಕೊನೆಗೆ ಹಣ ವಾಪಸ್ ಬರುವಲ್ಲಿ ಹದಿನೈದು ದಿನಗಳೂ ಆದುವು. ಹೀಗೆ ಹಲವು ರೀತಿಯ ಅನುಭವಗಳು ಗ್ರಾಹಕರಿಗೆ ಆಗುವ ಸಂಭವ ಉಂಟು. 
 
ಸಿ ಪಿ ಯು ಎಂಥದ್ದು? 
ನಿಮ್ಮ ಸ್ಮಾರ್ಟ್ ಫೋನ್ ಕೈಯಲ್ಲಿ ಹಿಡಿದ ಒಂದು ಕಂಪ್ಯೂಟರ್ ಇದ್ದ ಹಾಗೆ. ಅದರಲ್ಲಿ ಯಾವ ಸಿ ಪಿ ಯು ಹಾಕಿದ್ದಾರೆ ಎಂಬುದು ತಿಳಿದಿದ್ದರೆ ಉತ್ತಮ. ಮುಖ್ಯವಾಗಿ ಗೇಮ್ಸ್ ಆಡಲು ಒಳ್ಳೆಯ ಸಿ ಪಿ ಯು ಇರುವ ಸ್ಮಾರ್ಟ್ ಫೋನ್ ಬೇಕಾಗುತ್ತದೆ. 
 
ಸ್ಮಾರ್ಟ್ ಫೋನುಗಳ ಡೇಟ
ಮೊನ್ನೆ ನನ್ನ ಪತ್ರಕರ್ತ ಗೆಳೆಯರೊಬ್ಬರು “ಸಾರ್, ಮೊಬೈಲು ಬಿದ್ದು ಒಡೆದುಹೋಯ್ತು. ನಂಬರುಗಳೆಲ್ಲ ಕಳೆದುಹೋದ್ವು. ನಿಮ್ಮ ನಂಬರ್ ಕಳುಹಿಸಿಕೊಡಿ” ಎಂದು ಫೇಸ್ಬುಕ್ಕಿನಲ್ಲಿ ಹಾಕಿಕೊಂಡದ್ದು ನೋಡಿ ನನಗೆ ಆಶ್ಚರ್ಯವಾಯಿತು. ಈಗ್ಗೆ ಬರುವ ಸ್ಮಾರ್ಟ್ ಫೋನುಗಳಲ್ಲಿ ಎಲ್ಲ ನಂಬರುಗಳು, ಫೋಟೋಗಳು ಕ್ಲೌಡ್ ಸ್ಟೋರೇಜಿಗೆ ತಾನಾಗಿಯೇ ರವಾನೆಯಾಗಿಬಿಟ್ಟಿರುತ್ತದೆ. ಅದು ಎನೇಬಲ್ ಆಗಿಲ್ಲದಿದ್ದಲ್ಲಿ ಎನೇಬಲ್ ಮಾಡಿಕೊಳ್ಳುವುದು ಬಹುಶಃ ಒಳ್ಳೆಯದು. ಆದರೆ ಇದರೊಂದಿಗೆ ಪ್ರೈವೆಸಿ ಎಂಬ ಕೆಂಭೂತದ ಹಾವಳಿ ಇದ್ದದ್ದೇ. ಹೀಗೆ ಕ್ಲೌಡ್ ಸ್ಟೋರೇಜಿನಲ್ಲಿ ಇರುವ ಮಾಹಿತಿ ನಿಮ್ಮ ಡಿವೈಸ್ ಒಡೆದು ಹೋದರೂ ಜೋಪಾನವಾಗಿ ಅಳಿಯದೇ ಉಳಿಯುತ್ತದೆ. ಮತ್ತೊಂದು ಡಿವೈಸ್ ತೆಗೆದುಕೊಂಡಾಗ ಇಂಟರ್ನೆಟ್ ಮೂಲಕ ತಕ್ಷಣ ಹೊಸ ಫೋನಿಗೆ ಇದೆಲ್ಲ ಹಾಕಿಕೊಳ್ಳಬಹುದಾದ ಸಾಧ್ಯತೆಯಿದೆ. ಒಳ್ಳೆಯ ಇಂಟರ್ನೆಟ್ ಕನೆಕ್ಷನ್ ಇದ್ದಲ್ಲಿ ಹೊಸ ಸ್ಮಾರ್ಟ್ ಫೋನು ತೆಗೆದುಕೊಂಡ ಹತ್ತಾರು ನಿಮಿಷಗಳಲ್ಲಿಯೇ ನಿಮ್ಮ ಹಳೆಯ ಫೋನಿನಲ್ಲಿದ್ದ ಎಲ್ಲ ನಂಬರುಗಳು, ಅಪ್ಲಿಕೇಶನ್ನುಗಳು ಹಾಗೂ ಫೋಟೋ ಇತ್ಯಾದಿ ಹೊಸ ಫೋನಿನಲ್ಲಿ ಲಭ್ಯವಾಗಿಬಿಡುತ್ತವೆ. 
ಸಾವಿರಾರು ಫೋಟೋಗಳನ್ನು ತೆಗೆದಿಟ್ಟುಕೊಂಡಿದ್ದು ಒಮ್ಮೆ ಹಠಾತ್ ಫೋನು ನೀರಿಗೆ ಬಿದ್ದೋ ಅಥವ ಮತ್ತೇನೋ ತೊಂದರೆಯಾಗಿ ಹಾಳಾದಾಗ ಎಲ್ಲ ಫೋಟೋಗಳನ್ನು ಕಳೆದುಕೊಳ್ಳುವಂತಾಗಿಬಿಡುತ್ತದೆ. ಇದನ್ನು ತಪ್ಪಿಸಬೇಕೆಂದರೆ ಒಂದೋ ಆಗಾಗ ಫೋಟೋಗಳನ್ನು ನೀವೇ ಪೆನ್ ಡ್ರೈವಿನಿಂದ ತೆಗೆದುಕೊಂಡು ಬೇರೆಡೆ ಹಾಕಿಕೊಳ್ಳಬೇಕು ಇಲ್ಲವಾದರೆ ಕ್ಲೌಡ್ ಸ್ಟೋರೇಜಿಗೆ ಅಪ್ಲೋಡ್ ಮಾಡಿಟ್ಟುಕೊಂಡು ಫೋಟೋಗಳನ್ನು ಉಳಿಸಿಕೊಳ್ಳಬೇಕು. 
ಸ್ಮಾರ್ಟ್ ಫೋನುಗಳಲ್ಲಿ ಬಳಸಲೆಂದೇ ನಿರ್ದಿಷ್ಟವಾದ ಪೆನ್ ಡ್ರೈವುಗಳು ಮಾರುಕಟ್ಟೆಯಲ್ಲಿ ಲಭ್ಯವುಂಟು. ಸ್ಯಾನ್ ಡಿಸ್ಕ್ ಕಂಪೆನಿಯವರ ಓ ಟಿ ಜಿ ಪೆನ್ ಡ್ರೈವ್ ಅಥವ ಡ್ಯುಯಲ್ ಯೂ ಎಸ್ ಬಿ ಡ್ರೈವ್ ಈ ರೀತಿಯ ಬ್ಯಾಕಪ್ ತೆಗೆದುಕೊಳ್ಳಲು ಬಳಕೆಯಾಗುತ್ತವೆ. ಕ್ಲೌಡ್॑ ಬಳಕೆ ಬೇಡ ಅಥವ ಇಂಟರ್ನೆಟ್, ಡೇಟ ಕನೆಕ್ಷನ್ ಇಲ್ಲ ಎಂದಾದಲ್ಲಿ ಈ ರೀತಿಯ ಬ್ಯಾಕಪ್ ವಿಧಾನ ಬಳಸುವುದು ಉತ್ತಮ. 
ಆಂಡ್ರಾಯ್ಡಿನಲ್ಲಿ ಸೆಟ್ಟಿಂಗ್ಸ್ - > ಸಿಸ್ಟಮ್ -> ಬ್ಯಾಕಪ್ ಆಪ್ಶನ್ ಬಳಸಿ ಗೂಗಲ್ ಡ್ರೈವ್ ಅಕೌಂಟಿಗೆ ಎಲ್ಲ ಡೇಟ ಬ್ಯಾಕಪ್ ಆಗುವಂತೆ ಮಾಡಬಹುದು. 
 
ಬಂದ ಎಸ್ ಎಂ ಎಸ್ ಕಾಪಾಡಿಟ್ಟುಕೊಳ್ಳುವುದು ಹೇಗೆ? 
ಕ್ಲೌಡ್ ಸ್ಟೋರೇಜಿನಲ್ಲಿ ಅಥವ ಗೂಗಲ್ ಡ್ರೈವಿನಲ್ಲಿ ನೀವು ಹಾಕಿಟ್ಟುಕೊಂಡ ಬ್ಯಾಕಪ್ ಎಸ್ ಎಂ ಎಸ್ಸುಗಳನ್ನು ಕೆಲವೊಮ್ಮೆ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದರರ್ಥ ಆಗ ನಿಮ್ಮ ಎಸ್ ಎಂ ಎಸ್ ಬ್ಯಾಕಪ್ ಆಗುವುದಿಲ್ಲ. ಸೆಟ್ಟಿಂಗ್ಸ್ -> ಸಿಸ್ಟಮ್ -> ಬ್ಯಾಕಪ್ ಆಪ್ಶನ್ ಬಳಸಿದಾಗ ಬರುವ ಪಟ್ಟಿಯಲ್ಲಿ ಎಸ್ ಎಂ ಎಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಒಂದು ಪಕ್ಷ ಅದಿಲ್ಲದಿದ್ದರೆ ಗೂಗಲ್ ಪ್ಲೇ ಸ್ಟೋರಿನಲ್ಲಿ ಎಸ್ ಎಂ ಎಸ್ ಬ್ಯಾಕಪ್ ತೆಗೆದುಕೊಳ್ಳಲು ಹಲವು ಆಪ್ಗಳು ಲಭ್ಯ ಇವೆ. ಅವುಗಳಲ್ಲಿ ಉತ್ತಮ ಆಪ್ ಒಂದನ್ನು ಬಳಸಿ ಎಸ್ ಎಂ ಎಸ್ ಬ್ಯಾಕಪ್ ತೆಗೆದುಕೊಳ್ಳಬಹುದು. 
 
 
ವಾಟ್ಸಾಪ್ ಸಂದೇಶಗಳನ್ನು ಉಳಿಸಿಕೊಳ್ಳುವುದು ಹೇಗೆ? 
ಸಾಮಾನ್ಯವಾಗಿ ಫೋನು ಬದಲಿಸಿದಾಗ ಹಳೆಯ ಫೋನಿನಲ್ಲಿದ್ದ ವಾಟ್ಸಾಪ್ ಸಂದೇಶಗಳನ್ನು ಹೇಗೆ ಹಾಕಿಕೊಳ್ಳುವುದು ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದು ಬಹಳ ಸುಲಭ. ವಾಟ್ಸಾಪಿನಲ್ಲಿ ಸೆಟ್ಟಿಂಗ್ಸ್ -> ಚಾಟ್ಸ್ ಆಪ್ಶನ್ ಬಳಸಿದಲ್ಲಿ “ಚಾಟ್ ಬ್ಯಾಕಪ್” ಎಂಬುದೊಂದು ಆಯ್ಕೆಯಿದೆ. ಈ ಆಯ್ಕೆ ಬಳಸಿ ವಾಟ್ಸಾಪ್ ಸಂದೇಶಗಳನ್ನು ನಿಮ್ಮ ಗೂಗಲ್ ಅಕೌಂಟಿಗೆ ನಿತ್ಯ ಅಥವ ವಾರಕ್ಕೊಮ್ಮೆ ಅಥವ ತಿಂಗಳಿಗೊಮ್ಮೆ ಬ್ಯಾಕಪ್ ತೆಗೆದಿಟ್ಟುಕೊಳ್ಳಬಹುದು. 
 
ನನ್ನ ಸ್ಮಾರ್ಟ್ ಫೋನಿನಲ್ಲಿ ಹೊಸ ಫೋಟೋಗಳಿಗೆ ಜಾಗವೇ ಇಲ್ಲ, ಏನು ಮಾಡುವುದು?  
ಹೆಚ್ಚಿನಂತೆ ವಾಟ್ಸಾಪ್ ಫೋಟೋಗಳು ಫೋನಿನಲ್ಲಿ ತುಂಬಿ ಹೋದರೆ ಫೋನಿನಲ್ಲಿ ಜಾಗವೇ ಇಲ್ಲದಂತಾಗಿಬಿಡುತ್ತದೆ. ನಿಮ್ಮದೇ ಫೋಟೋಗಳು ಹೆಚ್ಚಾದಲ್ಲಿ ಮೇಲೆ ತಿಳಿಸಿದಂತೆ ಪೆನ್ ಡ್ರೈವ್ ಬಳಸಿ ಕಾಪಿ ಮಾಡಿಟ್ಟುಕೊಂಡು ಅಳಿಸಿಹಾಕಬಹುದು. ವಾಟ್ಸಾಪ್ ಗ್ರೂಪುಗಳಲ್ಲಿ ಬರುವ ಸಂದೇಶಗಳಲ್ಲಿ ನಿಮಗೆ ಬೇಕಿರುವುದನ್ನು ಉಳಿಸಿಟ್ಟುಕೊಂಡು (ಇದಕ್ಕೆ ಆಯಾ ಸಂದೇಶವನ್ನು ಒತ್ತಿ ಹಿಡಿದಾಗ ಮೇಲೆ ದೃಶ್ಯವಾಗುವ ಸ್ಟಾರ್ ಬಟನ್ ಒತ್ತಬೇಕು) ಉಳಿದವುಗಳನ್ನು ಅಳಿಸಿಹಾಕುತ್ತ ಬಂದರೆ ಉತ್ತಮ. ಒಂದು ವೇಳೆ ತೀರ ಹೆಚ್ಚಿನ ಸಂದೇಶಗಳು ಬರುತ್ತಿದ್ದಲ್ಲಿ ವಾಟ್ಸಾಪ್ ಸೆಟ್ಟಿಂಗ್ಸ್ ಆಯ್ಕೆಯಲ್ಲಿ “ಡೇಟ ಯೂಸೇಜ್” ಎಂಬ ಸೆಟ್ಟಿಂಗ್ ಬಳಸಿ ಫೋಟೋಗಳನ್ನು ನಿಮಗೆ ಬೇಕಾದಾಗ ಮಾತ್ರ ಡೌನ್ಲೋಡ್ ಆಗುವಂತೆ ಮಾಡಬಹುದು. ಫೇಸ್ಬುಕ್ ಅಪ್ಲಿಕೇಶನ್ನಿನಲ್ಲಿ ಕೂಡ ಇದೇ ರೀತಿಯ ಆಯ್ಕೆಗಳನ್ನು ಆಯ್ದುಕೊಳ್ಳುವುದು ಉತ್ತಮ. ಜೊತೆಗೆ ಫೇಸ್ಬುಕ್ ಮುಂತಾದ ಅಪ್ಲಿಕೇಶನ್ನುಗಳಲ್ಲಿ ಈಗ “ಡೇಟ ಸೇವರ್” ಎಂಬ ಆಯ್ಕೆ ಕೂಡ ಲಭ್ಯವಿದೆ. 
 
ಸ್ಮಾರ್ಟ್ ಫೋನ್ ಕೊಂಡ ಮೇಲೆ ಗಮನಿಸಬೇಕಾದ ವಿಷಯಗಳು
ಸ್ಮಾರ್ಟ್ ಫೋನ್ ಕೊಂಡ ತಕ್ಷಣ ಅದನ್ನು ಒಮ್ಮೆ ಸ್ವಿಚ್ ಆನ್ ಮಾಡಿ ಪರೀಕ್ಷಿಸಿ ನೋಡುವುದು ಒಳ್ಳೆಯದು. ಹಾಗೆಯೇ ಒಮ್ಮೆ ಯಾವುದಾದರೂ ವೀಡಿಯೋ ಫೈಲೊಂದನ್ನು ಪ್ಲೇ ಮಾಡಿ ಸ್ಪೀಕರ್ ಮತ್ತು ಸ್ಕ್ರೀನ್ ಎಲ್ಲ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಪರೀಕ್ಷಿಸಿ ನೋಡುವುದು ಉತ್ತಮ. ಸಿಮ್ ಕಾರ್ಡ್ ಹಾಕಿ ಒಮ್ಮೆ ಡಿವೈಸ್ ಚೆಕ್ ಮಾಡಿಕೊಂಡುಬಿಟ್ಟರೆ ಇನ್ನೂ ಉತ್ತಮ. ಕೊಂಡ ಕೂಡಲೆ ಸ್ಮಾರ್ಟ್ ಫೋನಿಗೊಂದು ಕವರ್ ಕೂಡ ತೆಗೆದುಕೊಂಡು ಹಾಕಿಬಿಡುವುದು ಒಳ್ಳೆಯದು. 
ಇತ್ತೀಚೆಗೆ ಸಿಮ್ ಕಾರ್ಡ್ ಹಾಕಿ ತೆಗೆಯುವುದಕ್ಕೆ ಸ್ಮಾರ್ಟ್ ಫೋನುಗಳೊಂದಿಗೆ ಒಂದು ಪುಟ್ಟ ಪಿನ್ ಕೊಟ್ಟಿರುತ್ತಾರೆ. ಅದು ಕಳೆದುಹೋದರೆ ಸಿಮ್ ಕಾರ್ಡ್ ಹಾಕುವುದು-ತೆಗೆಯುವುದು ಕಷ್ಟ. ಹೀಗಾಗಿ ಸ್ಮಾರ್ಟ್ ಫೋನ್ ಜೊತೆ ಬಂದ ಬಾಕ್ಸಿನಲ್ಲೇ ಅದನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳುವುದು ಒಳ್ಳೆಯದು. 
ಸ್ಮಾರ್ಟ್ ಫೋನ್ ತೆಗೆದುಕೊಂಡ ಬಿಲ್ಲನ್ನು ಮರೆಯದೇ ಕಾಪಾಡಿಟ್ಟುಕೊಳ್ಳುವುದು ಅವಶ್ಯಕ. ಏಕೆಂದರೆ ವಾರಂಟಿ ಮುಂತಾದವುಗಳು ಇದಿಲ್ಲದೆ ನಿಮಗೆ ಸಿಗದು. ಕೆಲವೊಂದು ಶೋ ರೂಮುಗಳಲ್ಲಿ ಕೊಡುವ ಬಿಲ್ ಬೇಗನೆ ಅಳಿಸಿಹೋಗಿಬಿಡುತ್ತದೆ. ಹೀಗಾಗಿ ಶೋರೂಮಿನಲ್ಲಿ ಕೊಂಡರೆ ಒಮ್ಮೆ ಬಿಲ್ ಪ್ರತಿಯೊಂದನ್ನು ಇ-ಮೇಯ್ಲ್ ಮೂಲಕ ಪಡೆಯುವುದು ಉತ್ತಮ. 
 
 
ಸ್ಕ್ರೀನ್ ಗಾರ್ಡ್ ಬೇಕೆ? 
ಬಹಳಷ್ಟು ಜನ ಸ್ಮಾರ್ಟ್ ಫೋನ್ ಕೊಂಡ ತಕ್ಷಣ ಅದಕ್ಕೊಂದು ಸ್ಕ್ರೀನ್ ಗಾರ್ಡ್ ಹಾಕಿಸುತ್ತಾರೆ. ಆದರೆ ಅದು ಧೂಳು ಹಿಡಿದು ಗಲೀಜಾಗುವುದಷ್ಟೇ ಅಲ್ಲದೆ ಟಚ್ ಸ್ಕ್ರೀನನ್ನು ಬಳಸುವಾಗ ತ್ರಾಸಾಗುವಂತೆ ಮಾಡಿಬಿಡುತ್ತದೆ. ಸ್ಕ್ರೀನ್ ಹಾಳಾಗದಂತೆ ಇಟ್ಟುಕೊಳ್ಳುವುದು ಬಹಳ ಸುಲಭ - ಮೊಬೈಲ್ ಇಟ್ಟುಕೊಳ್ಳಲು ಒಂದು ಪೌಚ್ ಅಥವ ಬಟ್ಟೆಯಿಂದ ಮಾಡಿದ ಕವರ್ ಬಳಸಿದರೂ ಆಯಿತು, ಆಗ ಸ್ಕ್ರೀನ್ ಗಾರ್ಡ್ ಬೇಕಾಗುವುದಿಲ್ಲ. 
 
ಸ್ಮಾರ್ಟ್ ಫೋನ್ ಸಂತೆಯಲ್ಲಿ ಕೊಳ್ಳಲು ಹೋಗುವವರೊಂದಿಗೆ ಹಂಚಿಕೊಳ್ಳಲು ಇನ್ನೂ ತುಂಬ ವಿಷಯಗಳಿವೆ. ಆದರೆ ಈ ವಾರಕ್ಕೆ ಇಷ್ಟಿರಲಿ. ಇಷ್ಟೆಲ್ಲ ವಿಷಯಗಳನ್ನು ಬರೆದಿಡುತ್ತಿರುವಾಗ ನನಗೆ ಬಂದ ಆಲೋಚನೆ - ಮುಂದೊಂದು ದಿನ ದಾರಿ ಬದಿಯಲ್ಲೂ ಸ್ಮಾರ್ಟ್ ಫೋನುಗಳನ್ನು ಮಾರಾಟ ಮಾಡುವ ಕಾಲ ಬರುವ ಸಾಧ್ಯತೆಗಳಿವೆ. ಆಗ ಇಷ್ಟೆಲ್ಲ ವಿಷಯಗಳನ್ನು ಅಥವ ಆಗಿನ ಕಾಲಕ್ಕೆ ಇನ್ನೇನೇನು ಹೊಸತು ಬರುತ್ತದೆಯೋ ಅದನ್ನೆಲ್ಲ ತಿಳಿದುಕೊಂಡು ಕೊಳ್ಳುವವರ ಎಷ್ಟು ಜನ ಇದ್ದಾರು? 
 
ಚಿತ್ರ ಕೃಪೆ: Senado Federal

Comments

Submitted by shreekant.mishrikoti Sun, 10/29/2017 - 10:05

ತುಂಬಾ ಉಪಯುಕ್ತ ಬರಹ, ನಾಡಿಗರೇ, ತುಂಬಾ ಸರಳ ಹಾಗೂ ಸುಲಲಿತ ಕೂಡ. ನಿಮ್ಮ ಮುಂದಿನ ಬರಹ ಎದುರು ನೋಡುತ್ತೇವೆ

Submitted by karababu Sun, 11/05/2017 - 11:01

ನಿಮ್ಮ‌ ಲೇಖನ‌ ತುಂಬಾ ಉಪಯುಕ್ತವಾಗಿದೆ. ಮೊಬೈಲ್ ಪೋನ್ ನ‌ ತಾಂತ್ರಿಕ‌ ಅಂಶಗಳ‌ ಅರಿವಿಲ್ಲದ‌ ನನ್ನಂಥವರಿಗೆ ತಾಂತಿಕ‌ ಮಾಹಿತಿಯನ್ನು ಬಹಳ‌ ಸರಳವಾಗಿ ಬರೆದಿದ್ದೀರಿ. ರಮೇಶ‌ ಬಾಬು.