… ವಿನಾ ದೈನ್ಯೇನ ಜೀವನಂ-1 ಜೀವಂತ ಉಯಿಲು ಎಂಬ ಸಾಧನ

… ವಿನಾ ದೈನ್ಯೇನ ಜೀವನಂ-1 ಜೀವಂತ ಉಯಿಲು ಎಂಬ ಸಾಧನ

                        … ವಿನಾ ದೈನ್ಯೇನ ಜೀವನಂ-1
                                                  ಜೀವಂತ ಉಯಿಲು ಎಂಬ ಸಾಧನ
 
          "ಡಾಕ್ಟರೇ, ದಯವಿಟ್ಟು ನನ್ನನ್ನು ಆಸ್ಪತ್ರೆಗೆ ಸೇರಿಸಬೇಡಿ. ನನ್ನ ಅಂತ್ಯ ಸಮಯ ಬಂದಿದೆ ಎಂದು ನನಗೆ ಮನವರಿಕೆಯಾಗಿದೆ. ನಾನು ಶಾಂತಿಯಿಂದ ಜೀವ ತ್ಯಜಿಸಬಯಸುತ್ತೇನೆ." ಎಂದು ಅನುನಯದಿಂದ ಕೇಳಿಕೊಂಡು, ಹತ್ತಿರದಲ್ಲಿದ್ದ ತಮ್ಮ ಆತ್ಮೀಯರೆಲ್ಲರಿಗೂ ಧನ್ಯವಾದಗಳನ್ನಿತ್ತು, ಕೆಲವೇ ನಿಮಿಷಗಳಲ್ಲಿ ತಮ್ಮ ಪ್ರಾಣ ತ್ಯಜಿಸಿದ ನನ್ನ ರೋಗಿಯೊಬ್ಬರನ್ನು ನಾನು ಬಹಳ ಆಪ್ಯಾಯಮಾನವಾಗಿ ನೆನೆದುಕೊಳ್ಳುತ್ತೇನೆ. ಎಲ್ಲರೂ ಅಸೂಯೆ ಪಡುವಂತಹ ಅವರ ಅಂತ್ಯ ಸಮಯದ ಬಗ್ಗೆ ನನಗೆ ಸ್ವಲ್ಪ ಅಸೂಯೆಯಿದೆಯೆಂದರೂ ಸರಿಯೇ.
          ಯಾರ ಹಂಗಿಗೂ ಸಿಲುಕದೆ ಜೀವನವನ್ನು ಕಳೆಯುವುದು ಬಹುಶಃ ಎಲ್ಲರ ಅಪೇಕ್ಷೆಯಾಗಿರುತ್ತದೆ.  ಅದರಂತೆಯೇ, ನಾವು ಸ್ಪಷ್ಟವಾಗಿ ಹೇಳದಿದ್ದರೂ, ಈ ಲೇಖನದ ಶೀರ್ಷಿಕೆಯ ಮುಂದಿನ ಭಾಗವನ್ನೂ ನಾವು ಅಷ್ಟೇ ಅಪೇಕ್ಷೆ ಪಡುತ್ತೇವೆ. ಅದೆಂದರೆ- "ಅನಾಯಾಸೇನ ಮರಣಂ". ಮರಣದ ಬಗ್ಗೆ ಭಯವೋ ಅಥವಾ ಅದೊಂದು ಮೈಲಿಗೆಯ ವಿಚಾರವೆಂದೋ ಅದನ್ನುನಾವು ಅಷ್ಟಾಗಿ ಬಾಯಿ ಬಿಟ್ಟು ಹೇಳುವುದಿಲ್ಲ ಮತ್ತು ಮರಣ ಎಂಬ ಶಬ್ದವನ್ನು ಕೇಳಲೂ ಸಹ ಸಿಧ್ದರಿಲ್ಲ. ಇದೇ ಕಾರಣಕ್ಕಾಗಿ ನಾನು ಈ ಭಾಗವನ್ನು ಶೀರ್ಷಿಕೆಯಲ್ಲಿ ಸೇರಿಸಿಲ್ಲ. ಆದರೆ ಮರಣ ಬರುವುದಾದರೆ, ಅದು ಶಾಂತಿಯುತವಾಗಿರಲಿ ಎಂದೇ ಬಯಸುತ್ತೇವೆ.
          ನಮ್ಮ ಜೀವನದ ಕೊನೆಯ ಕ್ಷಣಗಳು ಹೇಗಿರಬೇಕೆಂದು ನಿರ್ಧರಿಸುವ ಸೌಲಭ್ಯ ನಮಗಿಲ್ಲ. ನಮ್ಮ ಜೀವನದಲ್ಲಿ ನಾವು ಕಾಣಬಹುದಾದುದೆಲ್ಲವನ್ನೂ ಕಂಡು ನಮ್ಮ ಎಲ್ಲಾ ಬಾಧ್ಯತೆಗಳನ್ನು ಪೂರೈಸಿ, ಒಂದು ದಿನ ಇದ್ದಕ್ಕಿದ್ದಂತೆ ನಿರ್ಜೀವರಾಗುವಂತಹ ಅಂತ್ಯವನ್ನು ಯಾರು ತಾನೇ ಬಯಸುವುದಿಲ್ಲ? ಆದರೆ ಇದಕ್ಕೆ ವಿರುದ್ಧವಾಗಿ, ನಮ್ಮ ಬಾಧ್ಯತೆಗಳನ್ನು ಪೂರೈಸುವ ಮುನ್ನವೇ ಮರಣ ಹೊಂದುವುದೋ ಅಥವಾ ವರ್ಷಗಟ್ಟಲೆ ಹಾಸಿಗೆಯಲ್ಲಿಯೇ ಯಾತನೆಯಿಂದ ನರಳಿ ಮರಣ ಹೊಂದುವಂತಹ ಸಂದರ್ಭವೋ ಬರಬಹುದು.
ರೋಗಿಯ ಪುನಶ್ಚೇತನಗೊಳಿಸುವ ಕೃತಕ ಸಾಧನಗಳು
          ಕೆಲವು ದಶಕಗಳ ಹಿಂದೆ, ಆಸ್ಪತ್ರೆಯಲ್ಲಿ  ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಒಬ್ಬ ರೋಗಿಯ ಉಸಿರಾಟವೋ ಅಥವಾ ಹೃದಯ ಕ್ರಿಯೆಯೋ ನಿಂತು ಹೋದಾಗ ಬೇರೆ ಯಾವ ಉಪಾಯವಿಲ್ಲದೇ, ರೋಗಿಯ ಅಂತ್ಯವುಂಟಾಗುತ್ತಿತ್ತು. ಆದರೆ ಇತ್ತೀಚಿನ ಸಮಯದಲ್ಲಿ, ವೈದ್ಯಕೀಯ ತಂತ್ರಜ್ಞಾನದಲ್ಲಿ ಸಾಧಿಸಿರುವ ಪ್ರಗತಿಯಿಂದಾಗಿ, ಇಂತಹ ಸಂದರ್ಭಗಳಲ್ಲಿ, ಯಂತ್ರಗಳ ಸಹಾಯದಿಂದ (ಕೃತಕ ಉಸಿರಾಟವನ್ನೊದಗಿಸಬಲ್ಲಂತಹ ಯಂತ್ರ ವೆಂಟಿಲೇಟರ್, ಹೃದಯದ ಬಡಿತವನ್ನು ನಿಯಂತ್ರಿಸುವ ಪೇಸ್ ಮೇಕರ್ ಇತ್ಯಾದಿ) ರೋಗಿಯನ್ನು ಸಂಭವಿಸಬಹುದಾಗಿದ್ದ ಮೃತ್ಯುವಿನಿಂದ ರಕ್ಷಿಸಬಹುದಾಗಿದೆ.  ಕೇವಲ ಬೆರಳೆಣಿಕೆಯಷ್ಟು ಸಂದರ್ಭಗಳಲ್ಲಿ ಮಾತ್ರ ಇಂತಹ ಪ್ರಯತ್ನಗಳು ಸೂಕ್ತವಾಗಿದ್ದು ಆ ವ್ಯಕ್ತಿಗೆ ಪುನರ್ಜೀವನವನ್ನು ನೀಡಬಲ್ಲವು. ಉದಾಹರಣೆಗೆ: ಟೆಟನಸ್ ಕಾಯಿಲೆ, ಮಯಸ್ಥೀನಿಯಾ ಗ್ರೇವಿಸ್, ನಾಗರಹಾವಿನ ಕಡಿತ, ಕೆಲವು ಬಗೆಯ ವಿಷಸೇವನೆಯ ಪ್ರಕರಣಗಳಲ್ಲಿ ಈ ಸಾಧನಗಳು ರೋಗಿಯನ್ನು ಅದ್ಭುತ  ರೀತಿಯಲ್ಲಿ ಸಾವಿನ ದವಡೆಯಿಂದ ಹೊರಗೆಳೆಯಬಲ್ಲವು. ಆದರೆ ಗಂಭೀರ ಸ್ಥಿತಿಯಲ್ಲಿರುವ ಎಲ್ಲಾ ರೋಗಿಗಳಿಗೂ, ಅದರಲ್ಲಿಯೂ ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವವರಿಗೋ, ಮಿದುಳಿಗೀಗಾಗಲೇ ಅಪಾರ ಹಾನಿಯುಂಟಾಗಿ ಜೀವಚ್ಛವದಂತಿರುವವರಿಗೋ ಅಥವಾ    ವೃದ್ಧ್ಯಾಪದಿಂದೊದಗಿರುವ ಗಂಭೀರ ಸ್ಥಿತಿಗಳಲ್ಲಿಯೋ ಇಂತಹ ಸಾಧನಗಳನ್ನು ಬಳಸಿ ರೋಗಿಗಳನ್ನು ಅನಿರ್ದಿಷ್ಟ ಕಾಲ ಸಾವು ಬದುಕಿನ ತೂಗುಯ್ಯಾಲೆಯಲ್ಲಿಡುವುದು ಅಷ್ಟು ಸಮಂಜಸವೆನಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಬಹಳಷ್ಟು ಬಾರಿ ರೋಗಿಯ ಅಂತ್ಯವನ್ನು ಅನವಶ್ಯಕವಾಗಿ ಧೀರ್ಘಗೊಳಿಸುವಷ್ಟಕ್ಕೆ ಮಾತ್ರ ಈ ಸಾಧನಗಳು ಉಪಯುಕ್ತವಾಗಿವೆ.
           ಇಂತಹ ಚಿಕಿತ್ಸೆಯನ್ನು ಆರಂಭಿಸುವಾಗ  ರೋಗಿಯು ಸಾಮಾನ್ಯವಾಗಿ ಅರೆಪ್ರಜ್ಞಾವಸ್ಥೆಯಲ್ಲಿಯೋ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿಯೋ ಇರುವುದರಿಂದ ಅವನಾಗಿಯೇ ಈ ಬಗೆಯ ಚಿಕಿತ್ಸೆಗೆ ಒಪ್ಪಿಗೆ ಕೊಡುವ ಇಲ್ಲವೇ ನಿರಾಕರಿಸುವ ಸಂಭವವಿರುವುದಿಲ್ಲ. ಆ ನಿರ್ಧಾರವು ರೋಗಿಯನ್ನು ಉಪಚರಿಸುತ್ತಿರುವ ವೈದ್ಯನ ಮೇಲೆ ಮತ್ತು ಅವನ ಚಿಕಿತ್ಸಾ ಜವಾಬ್ದಾರಿಯನ್ನು ಹೊತ್ತಿರುವ ಅವನ ಸಮೀಪದ ಸಂಬಂಧಿಗಳ ಮೇಲೆ ಇರುತ್ತದೆ. ಒಬ್ಬ ವ್ಯಕ್ತಿಯನ್ನುಳಿಸುವುದರಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲೇಬೇಕೆಂಬ ದೃಷ್ಟಿಯಿಂದ ವೈದ್ಯನೂ ಮತ್ತು ಆ ರೋಗಿಯನ್ನುಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆವೆಂಬ ಸಾರ್ಥಕತೆಗಾಗಿ ಅವನ ಬಂಧುಗಳೂ ಈ ಚಿಕಿತ್ಸೆಗೆ ಯಾಂತ್ರಿಕವಾಗಿ ಒಪ್ಪಿಕೊಳ್ಳುತ್ತಾರೆ. ಆ  ಸಮಯದಲ್ಲಿ ರೋಗಿಯು ದಯನೀಯ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ಇರಬೇಕಾದಂತಹ ಸಾಧ್ಯತೆಯ ಬಗ್ಗೆಯಾಗಲೀ ಮತ್ತು ಅದರಿಂದ ತಮಗೆ ಉಂಟಾಗಬಹುದಾದ ಭಾರೀ ವೆಚ್ಚದ ಬಗ್ಗೆಯಾಗಲೀ ಯಾರಿಗೂ ಗಮನವಿರುವುದಿಲ್ಲ. ಹಾಗಾಗಿ, ಬಹಳಷ್ಟು ಸಂದರ್ಭಗಳಲ್ಲಿ ರೋಗಿಯು ತೀವ್ರ ಋಗ್ಣಾವಸ್ಥೆಯಲ್ಲಿದ್ದು,  ಕಡೆಗೊಂದು ದಿನ ಚಿಕಿತ್ಸೆ ನಿಷ್ಫಲವಾಗಿ ಅವನು ಕಡೆಯುಸಿರೆಳೆಯುತ್ತಾನೆ, ಇದಲ್ಲದೇ,  ಅವನ ಕುಟುಂಬವು ಭಾರೀ ಮೊತ್ತದ ಆಸ್ಪತ್ರೆಯ ಶುಲ್ಕವನ್ನು ಭರಿಸಲಾರದೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ. ಆರ್ಥಿಕವಾಗಿ ಸಾಕಷ್ಟು ಸುಸ್ಥಿತಿಯಲ್ಲಿರುವ ಮತ್ತು ಆರೋಗ್ಯವಿಮೆಯ ಸೌಲಭ್ಯವಿರುವ ಅಮೇರಿಕದಂತಹ ರಾಷ್ಟ್ರದಲ್ಲಿ, ಇಂತಹ ಪರಿಸ್ಥಿತಿಗಳಲ್ಲಿ ಕುಟುಂಬದ ಯಾರಾದರೊಬ್ಬ ವ್ಯಕ್ತಿ ತನ್ನ ಕೆಲಸವನ್ನು ಕಳೆದುಕೊಳ್ಳುವ (೨೦%), ಕುಟುಂಬದವರು ತಮ್ಮ ಸಕಲ ಉಳಿತಾಯವನ್ನು ಕಳೆದುಕೊಂಡಂತಹ (೩೧%), ತಮ್ಮ ಆದಾಯದ ಬಹು ಮುಖ್ಯವಾದ ಮೂಲವನ್ನು ಕಳೆದುಕೊಂಡಂತಹ (೨೦%)  ಪ್ರಕರಣಗಳಿವೆ. ಅಷ್ಟೇಕೆ, ಇಂತಹ ಸಂದರ್ಭಗಳಲ್ಲಿ ತಮಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದಿದ್ದರೆ, ನಾವು ಈ ಬಗೆಯ ವೈದ್ಯಕೀಯ ಉಪಚಾರವನ್ನು ನಿರಾಕರಿಸುತ್ತಿದ್ದೆವೆಂದು ೭೦ ರಿಂದ ೯೫% ನಾಗರಿಕರು ಹೇಳಿಕೊಂಡಿದ್ದಾರೆ. (ಅಂಕಿಅಂಶ: ವಿಕಿಪೀಡಿಯಾ). ಅಮೇರಿಕದಂತಹ ದೇಶದಲ್ಲಿಯೇ ಪರಿಸ್ಥಿತಿ ಹೀಗಿರುವಾಗ, ಕೈಗೆಟುಕುವಂತಹ ಆರೋಗ್ಯ ವಿಮೆಯ ಸೌಲಭ್ಯವಿಲ್ಲದ, ಸರಾಸರಿ ಅರ್ಥಿಕ ಪರಿಸ್ಥಿತಿ ಇನ್ನೂ ಹೀನ ಪರಿಸ್ಥಿತಿಯಲ್ಲಿರುವ ನಮ್ಮ ದೇಶದ ನಾಗರಿಕರ ಪಾಡೇನು?  ನಾನು ಹಾಗೂ ನನ್ನ ಅನೇಕ ಸಹೋದ್ಯೋಗಿಗಳು ನಮ್ಮ ವೃತ್ತಿ ಜೀವನದಲ್ಲಿ ಗಮನಿಸಿರುವಂತೆ, ಇಂತಹ ಆರ್ಥಿಕ ದುರಂತಗಳು ನಮ್ಮಲ್ಲಿ ಬಹಳ ಸಾಮಾನ್ಯವಾಗಿವೆ. ಒಬ್ಬ ವ್ಯಕ್ತಿಯ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ, ಮುಂದೊದಗಬಹುದಾದ ಖರ್ಚುವೆಚ್ಚಗಳ ಬಗ್ಗೆ ಸ್ವಲ್ಪವೂ ಚಿಂತಿಸದೆ, ಹತ್ತಿರವಿರುವ ಆಸ್ಪತ್ರೆಗೆ ಆ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವುದು ಮತ್ತು ವೆಚ್ಚವನ್ನು ಭರಿಸಲು ತಮ್ಮ ಸಕಲ ಆಸ್ತಿಪಾಸ್ತಿಯನ್ನು ಕಳೆದುಕೊಂಡಂತಹ ಪ್ರಕರಣಗಳನ್ನು ನಾವು ಕಾಣುತ್ತಲೇ ಇರುತ್ತೇವೆ.
          ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ವೈದ್ಯಕೀಯ ನಿಯತಕಾಲಿಕವೊಂದರಲ್ಲಿ "Living Will" ಎಂಬ ಲೇಖನವನ್ನೋದಿದಾಗ ನನಗೆ ಬಹಳ ಆಶ್ಚರ್ಯವಾಯಿತು. ಈ ಲೇಖನವನ್ನು ಬರೆದವರು ಅಮೇರಿಕದ ಒಬ್ಬ ವೈದ್ಯರು. ಅಮೇರಿಕನ್ನರೂ ಸೇರಿದಂತೆ ಎಲ್ಲಾ ಪಾಶ್ಚಾತ್ಯರೂ ವಾಸ್ತವವಾದಿಗಳು (Materialistic) ಮತ್ತು ಅವರ  ಎಲ್ಲಾ ಬಗೆಯ ಚಿಂತನೆಗಳು ಅದಕ್ಕೆ ತಕ್ಕಂತೆಯೇ ಇರುತ್ತವೆ ಎಂಬ  (ತಪ್ಪು) ಅಭಿಪ್ರಾಯ ನನ್ನಲ್ಲಿ ಬಲವಾಗಿತ್ತು. ಈ ಲೇಖನವನ್ನು ಭಾರತೀಯರೋ ಅಥವಾ ಅಭಿವೃಧ್ದಿ ಹೊಂದುತ್ತಿರುವ ಇನ್ನಾವ ದೇಶದ  ಪ್ರಜೆಯೋ ಬರೆದಿದ್ದರೆ ನನಗೇನೂ ಅಚ್ಚರಿಯಾಗುತ್ತಿರಲಿಲ್ಲ.
ಲಿವಿಂಗ್ ವಿಲ್ ಅಥವಾ ಜೀವಂತ ಉಯಿಲು
            ಒಬ್ಬ ವ್ಯಕ್ತಿ ತಾನು ಅರೋಗ್ಯವಾಗಿರುವಾಗಲೇ, ಮುಂದೊಮ್ಮೆ ಇಂತಹ ಪರಿಸ್ಥಿತಿ ತನಗುಂಟಾಗಬಹುದಾದ ಸಾಧ್ಯತೆಯನ್ನು ಮನಗಂಡು, ಅಂತಹ ಸಂದರ್ಭದಲ್ಲಿ ಆ ಬಗೆಯ ಚಿಕಿತ್ಸೆಗೆ ತನ್ನ ವಿರೋಧವಿದೆ ಎಂದು ದಾಖಲಿಸುವ ದಾಖಲೆ ಪತ್ರಕ್ಕೆ "Living Will" ಅಥವಾ ಜೀವಂತ ಉಯಿಲು  ಎನ್ನುತ್ತಾರೆ. ೧೯೬೯ ರಲ್ಲಿ ಲೂಯಿ ಕುಟ್ನರ್ ಎಂಬ ಅಮೇರಿಕದ ವಕೀಲರೊಬ್ಬರು ಇಂತಹ ಒಂದು ದಾಖಲೆಯನ್ನು ಸೂಚಿಸಿದರು. ಅಮೇರಿಕ ಮತ್ತು ಇನ್ನೂ ಹಲವಾರು ರಾಷ್ಟ್ರಗಳಲ್ಲಿ ಈ ದಾಖಲೆಗೆ ಕಾನೂನಿನ ಮನ್ನಣೆ ದೊರೆತಿದೆ. ನಮ್ಮ ದೇಶದಲ್ಲಿ ಇದಕ್ಕೆ ಇನ್ನೂ ಕಾನೂನಿನ ಅನುಮೋದನೆ ದೊರೆತಿಲ್ಲ.
          ಒಬ್ಬ ವ್ಯಕ್ತಿ ತಾನು ಗತಿಸಿದ ನಂತರ ಜಾರಿಗೆ ತರಲು  ಬಯಸುವ ಕಾರ್ಯಸೂಚಿಯನ್ನು ಸಾಮಾನ್ಯವಾಗಿ "ವಿಲ್" ಅಥವಾ "ಉಯಿಲು" ಎಂದು ಕರೆಯುತ್ತೇವೆ. ಇದರಲ್ಲಿ  ಒಬ್ಬ ವ್ಯಕ್ತಿ ತಾನು ಗತಿಸಿದ ನಂತರ ತನ್ನ ಅಂತಿಮ ಕ್ರಿಯೆ ಹೇಗೆ ಜರುಗಬೇಕೆಂದೋ ಅಥವಾ ಮರಣಾನಂತರ  ತನ್ನ ಬಯಕೆಗಳನ್ನು ಹೇಗೆ ಪೂರೈಸಬೇಕೆಂದೋ ವಿವರವಾಗಿ ತಿಳಿಸಿರುತ್ತಾನೆ. ಅದರಲ್ಲಿ  ಅವನ ಆಸ್ತಿಯನ್ನು ಅವನ ವಾರಸುದಾರರು ಹೇಗೆ ಪಾಲುಮಾಡಿಕೊಳ್ಳಬೇಕೆಂದು ತಿಳಿಸುವುದೇ ಪ್ರಧಾನವಾಗಿರುತ್ತದೆ. Living will ಅಥವಾ ಜೀವಂತ ಉಯಿಲು ಎನ್ನುವ ದಾಖಲೆ ಇನ್ನೊಂದು ಬಗೆಯದಾಗಿರುತ್ತದೆ. ಒಬ್ಬ ವ್ಯಕ್ತಿ, ತನ್ನ ಅಂತಿಮ ಸಮಯದಲ್ಲಿ ತನಗೆ ನೀಡಬಹುದಾದ ಚಿಕಿತ್ಸೆಯನ್ನು ಕುರಿತಂತೆ ತನ್ನ ಸೂಚನೆಗಳನ್ನು ಇದರಲ್ಲಿ ದಾಖಲಿಸಿರುತ್ತಾನೆ. DNR  (Do Not Resuscitate) ಅಥವಾ "ಪುನಶ್ಚೇತನಕ್ಕೆ ಪ್ರಯತ್ನಿಸದಿರಿ" ಎನ್ನುವುದೂ ಕೂಡ ಒಬ್ಬ ವ್ಯಕ್ತಿಯು ತನ್ನ ಅಂತಿಮ ಸಮಯದಲ್ಲಿ ನೀಡಬಹುದಾದ ಚಿಕಿತ್ಸೆಯನ್ನು ಕುರಿತಂತೆ ನೀಡಬಹುದಾದಂತಹ ಒಂದು ಸೂಚನೆಯಾಗಿರುತ್ತದೆ. LIving Will ಮತ್ತು DNR ಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಅದನ್ನು  ಮುಂದೆ ವಿವರಿಸುತ್ತೇನೆ. ಈ ಎರಡೂ ಸೂಚನೆಗಳನ್ನು Advance health care directives (Advance directives in short) ಅಥವಾ ಅಂತಿಮ ಚಿಕಿತ್ಸಾ ಪೂರ್ವಭಾವಿ ಸೂಚನೆಗಳು ಅಥವಾ ನಿರ್ದೇಶನಗಳು ಎಂದು ಕರೆಯಬಹುದು. (ಎರಡನೇ ಭಾಗದಲ್ಲಿ ಮುಕ್ತಾಯವಾಗುವುದು)

Comments

Submitted by smurthygr Mon, 11/06/2017 - 16:29

ಅತ್ಯುತ್ತಮ ಸಮಯೋಚಿತ ಲೇಖನ. ಮುಂದಿನ ಭಾಗದಲ್ಲಿ ಲಿವಿಂಗ್ ವಿಲ್ ಹಾಗೂ DNRಗಳ ಮಾದರಿಯನ್ನೂ ಕೊಟ್ಟರೆ ಅನೇಕರಿಗೆ ಸಹಾಯವಾಗಲಿದೆ.

Submitted by karababu Tue, 11/07/2017 - 19:18

In reply to by smurthygr

ತಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಲಿವಿಂಗ್ ವಿಲ್ ಮತ್ತು ಡಿ.ಎನ್. ಆರ್ ಆಯ್ಕೆಗಳು ಅಮೇರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಕಾನೂನಿನ ಮಾನ್ಯತೆ ಪಡೆದಿವೆಯಾದರೂ, ನಮ್ಮ ದೇಶದಲ್ಲಿ ಇವಕ್ಕೆ ಇನ್ನೂ ಕಾನೂನಿನ ಮಾನ್ಯತೆ ದೊರೆತಿಲ್ಲ. ಹಾಗಾಗಿ ಇವುಗಳಿಗೆ ತಕ್ಕಂಥ ನಮೂನೆಗಳು ಲಭ್ಯವಿಲ್ಲ. ಇವೆರಡೂ ಭಾರತದ ಸರ್ವೋಚ್ಛ ನ್ಯಾಯಲಯದಲ್ಲಿ ಸದ್ಯಕ್ಕೆ ಪರಿಶೀಲನೆಯಲ್ಲಿವೆ. .