.....ವಿನಾ ದೈನ್ಯೇನ‌ ಜೀವನಂ 2

.....ವಿನಾ ದೈನ್ಯೇನ‌ ಜೀವನಂ 2

 
         LIving Will ಅಥವಾ ಜೀವಂತ ಉಯಿಲು: ಈ ದಾಖಲೆಗೆ ಹಲವು ದೇಶಗಳಲ್ಲಿ ನಿಗದಿತ ನಮೂನೆಗಳಿವೆ (prescribed forms). ಈ ದಾಖಲೆಯನ್ನು ವ್ಯಕ್ತಿಯು ತಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರುವಾಗಲೇ ಬರೆದಿಡುತ್ತಾನೆ. ಮುಂದೊಮ್ಮೆ ಯಾವುದೋ ಕಾರಣದಿಂದಾಗಿ ಅವನ ಆರೋಗ್ಯ ಸಂಪೂರ್ಣ ಹದಗೆಟ್ಟು, ಕೃತಕ ವಿಧಾನಗಳಿಂದ ಅವನನ್ನು ಜೀವಂತವಾಗಿಡುವಂತಹ ಸಂದರ್ಭ ಬಂದಲ್ಲಿ ಮತ್ತು ಆ ಸಮಯದಲ್ಲಿ ತಾನು ತನ್ನ ಅಭಿಪ್ರಾಯವನ್ನು ಸೂಚಿಸಲಾಗದಂತಿದ್ದರೆ (ಅರೆಪ್ರಜ್ಞಾವಸ್ಥೆಯಲ್ಲಿಯೋ ಅಥವಾ ಪ್ರಜ್ಞಾಹೀನ ಸ್ಥಿತಿಯಲ್ಲಿಯೋ ಇರುವುದರಿಂದ) ಈ ದಾಖಲೆಯ ಮೇರೆಗೆ ಚಿಕಿತ್ಸೆಯನ್ನು ನಡೆಸಬೇಕೆಂದು ಸೂಚಿಸುತ್ತಾನೆ. ಯಾವ ಯಾವ ಬಗೆಯ ಚಿಕಿತ್ಸೆಗಳಿಗೆ (ಕೃತಕ ಉಸಿರಾಟಕ್ಕೆ, ಹೃದಯಕ್ಕೆ ಯಂತ್ರಗಳನ್ನಳವಡಿಸುವುದು, ಡಯಾಲಿಸಿಸ್ ಚಿಕಿತ್ಸೆ, ನಳಿಕೆಗಳ ಮೂಲಕ ಆಹಾರ ನೀಡುವಂತಹ ಇತ್ಯಾದಿ) ತನ್ನ ವಿರೋಧವಿದೆ ಎಂದು ಸ್ಪಷ್ಟ ಪಡಿಸುತ್ತಾನೆ. ಈ ದಾಖಲೆಗೆ ಇಬ್ಬರು ಸಾಕ್ಷಿಗಳೂ ತಮ್ಮ ಹಸ್ತಾಕ್ಷರವನ್ನು ಹಾಕಿರುತ್ತಾರೆ. ಈ ದಾಖಲೆಯ ಪ್ರತಿಗಳನ್ನು ತನ್ನ ಆಪ್ತರಿಗೆ ಕೊಟ್ಟಿರುತ್ತಾನೆ. ಸಮಯ ಕಳೆದಂತೆ ಈ ಬಗೆಯ ಚಿಕಿತ್ಸೆಗಳು ಹೆಚ್ಚು ಫಲಕಾರಿಯೋ ಅಥವಾ ಕಡಿಮೆ ವೆಚ್ಚಕ್ಕೆ ದೊರಕುವಂತಾಗುವ ಸಾಧ್ಯತೆಯಿರುವುದರಿಂದ ಆ ವ್ಯಕ್ತಿಯು ಈ ದಾಖಲೆಯನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಬಹುದಾಗಿದೆ. ಮುಂದೊಮ್ಮ ಆ ವ್ಯಕ್ತಿಯ ಆರೋಗ್ಯ ತುಂಬಾ ಹದಗೆಟ್ಟು ಆಸ್ಪತ್ರೆಯಲ್ಲಿ ದಾಖಲಾಗಿ ಇಂತಹ ಚಿಕಿತ್ಸೆಯನ್ನು ವೈದ್ಯರು ಸೂಚಿಸಿದಾಗ, ಆ ವ್ಯಕ್ತಿಯ ಸಂಬಂಧಿಗಳು, ಆ ವ್ಯಕ್ತಿಯ Living Will ನ್ನು ವೈದ್ಯರ ಗಮನಕ್ಕೆ ತಂದು, ಅಂತಹ ಚಿಕಿತ್ಸೆಯನ್ನು ಕೊಡದಿರುವಂತೆ ಮಾಡಬಹುದು. ಇದೇ Living Will ನ ಸುಧಾರಿತ ಸ್ವರೂಪ ಎಂದರೆ, ವ್ಯಕ್ತಿಯೊಬ್ಬನು ಇಂತಹ ನಿರ್ಧಾರಗಳಿಗೆ ತನ್ನ ಆಪ್ತರೊಬ್ಬರಿಗೆ Power of Attorney ಯನ್ನು ನೀಡಬಹುದು. ಕೆಲವರು ಇನ್ನೂ ಮುಂದುವರೆದು, ತಮ್ಮ ಮರಣಾನಂತರ ತಮ್ಮ ದೇಹದ ಅಂಗಗಳನ್ನು ಅವುಗಳ ಅಗತ್ಯವಿರುವ ಬೇರೊಬ್ಬರಿಗೆ ಕಸಿ ಮಾಡಲು ಒಪ್ಪಿಗೆಯನ್ನೂ ಸೂಚಿಸಿರಬಹುದು. ಜೀವಂತ ಉಯಿಲಿಗೆ ಕಾನೂನಿನ ಮನ್ನಣೆ ದೊರೆತಿರುವ ದೇಶಗಳಲ್ಲಿ ಅತಿ ಗಣ್ಯ ವ್ಯಕ್ತಿಗಳೂ ಸೇರಿದಂತೆ ಸಾವಿರಾರು ಜನರು ತಮ್ಮ ಜೀವಂತ ಉಯಿಲನ್ನು ಬರೆದಿಟ್ಟಿದ್ದಾರೆ ಮತ್ತು ಈ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಜೀವಂತ ಉಯಿಲನ್ನು ಆಯ್ದುಕೊಂಡಿರುವ ಗಣ್ಯರಲ್ಲಿ ಪ್ರಮುಖರೆಂದರೆ ಅಮೆರಿಕೆಯ ಅಧ್ಯಕ್ಷ ಬರಾಕ್ ಒಬಾಮಾ ಒಬ್ಬರು.
                
 DNR: (Do Not  Resuscitate);  ಪುನಶ್ಚೇತನಗೊಳಿಸಬೇಡಿ ಎಂಬ ಆದೇಶ: ಯಾವುದಾದರೊಬ್ಬ ವ್ಯಕ್ತಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ  ಸಂದರ್ಭದಲ್ಲಿ, ತನ್ನ ಸ್ಥಿತಿ ಇನ್ನೂ ಗಂಭೀರವಾಗಿ ಪ್ರಾಣಾಂತಿಕವಾಗಬಹುದು ಎಂದು ಕಂಡಾಗ, ಅವನು ಇದುವರೆಗೂ Living Will ಮಾಡಿರದೇ  ಇದ್ದರೂ, ಆಗಲೂ ಕೂಡ ಅವನು ತನ್ನ ಇಚ್ಢೆಯನ್ನು ಈ ಮೂಲಕ ತಿಳಿಸಬಹುದು. ಆಸ್ಪತ್ರೆಗಳಲ್ಲಿ ಯಾವುದೇ ರೋಗಿಯ ಹೃದಯದ ಬಡಿತ ನಿಂತಾಗ (cardiac arrest) ಇಲ್ಲವೇ ಶ್ವಾಸೋಚ್ಛಾಸ ನಿಂತುಹೋದಾಗ (respiratory arrest), ತಕ್ಷಣವೇ ಅಲ್ಲಿ ಹಾಜರಿರುವ ವೈದ್ಯರು ಆ ವ್ಯಕ್ತಿಗೆ ಕೃತಕ ಶ್ವಾಸೋಚ್ಛಾಸದ ವ್ಯವಸ್ಥೆಮಾಡುವುದಾಗಲೀ ಅಥವಾ ಅವನ ಎದೆಯ ಮೇಲೆ ತಮ್ಮ ಕೈಗಳಿಂದ
ಬಲವಾಗಿ ಒತ್ತುವುದನ್ನಾಗಲೀ (cardiac massage) ಮಾಡಿ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಾರೆ. ಈ ಕ್ರಿಯೆ ಯಶಸ್ವಿಯಾಗಲು ಸ್ವಲ್ಪವೂ ತಡವಾಗಬಾರದು. ಹಾಗಾಗಿ ಇಂತಹ ಸಂದರ್ಭಗಳಲ್ಲಿ ವೈದ್ಯರು ಆ ವ್ಯಕ್ತಿಯನ್ನಾಗಲೀ, ಅವನ ಸಂಬಂಧಿಕರನ್ನಾಗಲೀ ಅನುಮತಿಗಾಗಿ ಕೇಳದೇ ಯಾಂತ್ರಿಕವಾಗಿ ಈ ಕ್ರಿಯೆಯಲ್ಲಿ ತೊಡಗುತ್ತಾರೆ. ಇದಕ್ಕೆ ಆ ರೋಗಿಯ ಆಕ್ಷೇಪವಿದ್ದರೆ, ಅವನು ಮುಂಚಿತವಾಗಿಯೇ DNR ಎಂಬ ಆಯ್ಕೆಯನ್ನು ಮಾಡಿಕೊಳ್ಳಬಹುದು. ಅವನು ಹಾಗೆ ಮಾಡಿದಾಗ ಅವನ ಹಾಸಿಗೆಯ ಬಳಿ DNR ಎಂದು  ದಪ್ಪಕ್ಷರಗಳಲ್ಲಿ ಬರೆದಂತಹ ಫಲಕವೊಂದನ್ನು ತೂಗುಹಾಕುತ್ತಾರೆ. ಅಂತಹ ಸೂಚನೆಯಿರುವ ಹಾಸಿಗೆಯ ಮೇಲಿನ ವ್ಯಕ್ತಿಗೆ ಹೃದಯದ ಕ್ರಿಯೆ ಇಲ್ಲವೇ ಶ್ವಾಸಕ್ರಿಯೆ ನಿಂತುಹೋದಾಗ, ವೈದ್ಯರು ನಿಷ್ಕ್ರಿಯರಾಗಿದ್ದು, ಆ ವ್ಯಕ್ತಿಯು ಶಾಂತಿಯಿಂದ ಮರಣ ಹೊಂದಲು ಅನುವು ಮಾಡಿಕೊಡುತ್ತಾರೆ.
 
             Living Will ಮತ್ತು DNR ಗಳಿಗಿರುವ ಪ್ರಮುಖ ವ್ಯತ್ಯಾಸವೆಂದರೆ, ಲಿವಿಂಗ್ ವಿಲ್, ವ್ಯಕ್ತಿಯು ಆರೋಗ್ಯವಂತನಾಗಿರುವಾಗಲೇ ಮಾಡಬಹುದಾದ ದಾಖಲೆ ಆದರೆ ಡಿ.ಎನ್. ಆರ್ ವ್ಯಕ್ತಿಯೊಬ್ಬನ ಆರೋಗ್ಯ ತೀವ್ರವಾಗಿ ಹದಗೆಟ್ಟು ಚಿಕಿತ್ಸೆಪಡೆಯುತ್ತಿರುವ ಸಂದರ್ಭದಲ್ಲಿ ಮಾತ್ರ ನೀಡಬಹುದಾದಂತಹ ಸೂಚನೆ. ಯಾವುದಾದರೊಬ್ಬ ವ್ಯಕ್ತಿ ಲಿವಿಂಗ್ ವಿಲ್ ಅಥವಾ ಡಿ.ಎನ್.ಆರ್ ಸೂಚನೆಯಿನ್ನಿತ್ತಿದ್ದರೆ, ಅವನ ಅಂತ್ಯ ಸಮಯದಲ್ಲಿ ಅವನ ಬಂಧುಗಳಿಗೆ ಉಂಟಾಗಬಹುದಾದ ಧರ್ಮಸಂಕಟವನ್ನು ನಿವಾರಿಸಬಹುದಾಗಿದೆ.
 
 Euthanasia (ದಯಾಮರಣ): ಲಿವಿಂಗ್ ವಿಲ್ ಮತ್ತು ಡಿ.ಎನ್.ಆರ್ ಗಳು ದಯಾಮರಣಕ್ಕೆ ಸಮನಲ್ಲ. ಯಾವುದೇ ಒಬ್ಬ ರೋಗಿಯು ಗುಣಪಡಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಲ್ಲಿದ್ದು ಮತ್ತು ಅಂತಹ ರೋಗಿಯು ದಯನೀಯ ಸ್ಥಿತಿಯಲ್ಲಿದ್ದರೆ ಅವನ ಮರಣವನ್ನು ಅನುಮೋದಿಸುವಂತಹ ವ್ಯವಸ್ಥೆಗೆ ದಯಾಮರಣ ಎನ್ನುತ್ತಾರೆ. ದಯಾಮರಣದಲ್ಲಿ ಎರಡು ಬಗೆಗಳಿವೆ.  ಅವನಿಗೆ ನೀಡುತ್ತಿರುವ ಎಲ್ಲಾ ಬಗೆಯ ಉಪಚಾರಗಳನ್ನು ನಿಲ್ಲಿಸಿ ಅವನ ಮರಣ ಸಹಜವಾಗಿಯೇ ಸಂಭವಿಸುವಂತೆ ಮಾಡುವ ವ್ಯವಸ್ಥೆಗೆ ಪ್ಯಾಸಿವ್ ಯುಥೆನೇಸಿಯಾ  (passive euthanasia )  ಎನ್ನುತ್ತಾರೆ. ಅವನಿಗೆ ಹಲವು ಬಗೆಯ ಪ್ರಾಣಹಾನಿಕಾರಕ ದ್ರವ್ಯಗಳನ್ನು ನೀಡಿ ಅವನ ಮರಣವನ್ನು ಉಂಟುಮಾಡಿದರೆ ಅದಕ್ಕೆ ಆಕ್ಟಿವ್ ಯುಥೆನೇಸಿಯಾ (active euthanasia ) ಎನ್ನುತ್ತಾರೆ. ದಯಾಮರಣಕ್ಕೆ ಕಾನೂನಿನ ಮಾನ್ಯತೆ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಅಪಾರ ಚರ್ಚೆಯಾಗಿದೆ, ಆದರೆ ಇದುವರೆಗೂ ಕಾನೂನಿನ ಮಾನ್ಯತೆ ದೊರಕಿಲ್ಲ. ದಯಾಮರಣವನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವ ಅದೆಷ್ಟೋ ಜನರಿಗೂ ಇದಕ್ಕೆ ಅನುಮೋದನೆ ನೀಡಲು ಹಿಂಜರಿಕೆಯಿದೆ. ದಯಾಮರಣವನ್ನು ಸಮರ್ಥವಾಗಿ ಆಚರಣೆಗೆ ತರಲು ಇರುವ ಅಡೆತಡೆಗಳು ಮತ್ತು ಅದರ ದುರುಪಯೋಗವಾಗಬಹುದಾದ ಸಾಧ್ಯತೆ ಈ ಹಿಂಜರಿಕೆಗೆ ಕಾರಣವಾಗಿವೆ.  ನಮ್ಮ ದೇಶದ ಜನತೆಯ ಗಮನ ಸೆಳೆದಿದ್ದ ಅರುಣಾ ಶಾನುಭಾಗ್ ಳ ಪ್ರಕರಣ ಓದುಗರಿಗೆ ನೆನಪಿರಬಹುದು. ಶ್ರೀಮತಿ ಪಿಂಕಿ ವಿರಾನಿ ಎನ್ನುವ ಸಾಮಾಜಿಕ ಕಾರ್ಯಕರ್ತೆ ಹಾಗೂ ಪತ್ರಕರ್ತೆ ಈ ಸಂಬಂಧವಾಗಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸುಪ್ರೀಮ್ ಕೋರ್ಟ್ ಅವರ ಕೋರಿಕೆಯನ್ನು ತಳ್ಳಿ ಹಾಕಿತು. ಕೇವಲ ಇದೊಂದೇ ಪ್ರಕರಣವಲ್ಲದೇ, ಮೇಲ್ನೋಟಕ್ಕೆ ದಯಾ ಮರಣಕ್ಕೆ ಅತ್ಯಂತ ಸೂಕ್ತವೆನಿಸುವಂತಹ ಅನೇಕ ಪ್ರಕರಣಗಳಿವೆ. ಆದರೆ, ಕಾನೂನಿನ ಮಾನ್ಯತೆಯಿಲ್ಲದಿರುವುದರಿಂದ ಅವರೆಲ್ಲರೂ ದಯನೀಯ ಸ್ಥಿತಿಯಲ್ಲಿಯೇ ಕಾಲ ಕಳೆಯಬೇಕಾಗಿದೆ. ಜೀವಂತ ಉಯಿಲು ದಯಾಮರಣಕ್ಕೆ ಪರ್ಯಾಯವಲ್ಲದಿದ್ದರೂ, ಬಹಳಷ್ಟು ಜನರು ಜೀವಂತ ಉಯಿಲನ್ನು ಆಯ್ಕೆ ಮಾಡಿದಲ್ಲಿ, ದಯಾಮರಣದ ಅಗತ್ಯವೇ ಬೇಕಾಗಲಿಕ್ಕಿಲ್ಲ.
 
         ಆದಕಾರಣ, ದಯಾಮರಣದ ಬಗ್ಗೆ ಚರ್ಚೆಮಾಡುವಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಜೀವಂತ ಉಯಿಲಿನ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡುವುದು ಮತ್ತು ಅದಕ್ಕೆ ನಮ್ಮ ದೇಶದಲ್ಲಿ ಕಾನೂನಿನ ಮಾನ್ಯತೆ ದೊರಕಿಸುವತ್ತ ಪ್ರಯತ್ನಿಸುವುದು ಉತ್ತಮವೆನಿಸುತ್ತದೆ. ಈ ಲೇಖನ ಮತ್ತು ಇದೇ ವಿಷಯವನ್ನು ಕಥಾವಸ್ತುವಾಗಿ ಮಾಡಿಕೊಂಡು ನಾನು ರಚಿಸಿರುವ ಕಾದಂಬರಿ "ಹಂಸ ಹಾಡುವ ಹೊತ್ತು" ಈ ನಿಟ್ಟಿನಲ್ಲಿ ನಾನು ಮಾಡಿರುವ ಅಲ್ಪ ಪ್ರಯತ್ನಗಳಲ್ಲಿ ಒಂದು.
 *************************************************************************************

Comments

Submitted by smurthygr Fri, 11/10/2017 - 16:11

ಭಾರತದಲ್ಲಿ ಇದೂ ಇನ್ನೂ ಜಾರಿಗೆ ಬಂದಿಲ್ಲದಿದ್ದರೂ ಕೂಡ, ಮಾನವೀಯತೆಯನ್ನು ಇನ್ನೂ ಉಳಿಸಿಕೊಂಡಿರುವ ವೈದ್ಯರು (ಹಣ ಮಾಡುವುದೊಂದೇ ಗುರಿಯಾಗಿಸಿಕೊಂಡಿರುವ ವೈದ್ಯ ವೃತ್ತಿಯಲ್ಲಿ ಮಾನವೀಯ ದೃಷ್ಟಿಕೋನ ಹೊಂದಿರುವ ವೈದ್ಯರೂ ಸಾಕಷ್ಟು ಸಂಖ್ಯೆಯಲ್ಲಿ ಇನ್ನೂ ಇದ್ದಾರೆ ಎಂದು ನಾನು ಭಾವಿಸುತ್ತೇನೆ), ಮತ್ತು ನ್ಯಾಯವಾದಿಗಳು ಸೇರಿ ಇಂತಹ Template (ಮಾದರಿ)ಗಳನ್ನು ಪ್ರಚುರಪಡಿಸಿದರೆ ಕನಿಷ್ಠ ಕೆಲವು ಜನರಾದರೂ ಪ್ರಯೋಜನ ಹೊಂದಬಹುದು. ಅಂತಹ ಸಂದರ್ಭದಲ್ಲಿರುವ ವ್ಯಕ್ತಿಯ ಸಂಬಂಧಿಕರಿಗೆ ಈ ವಿಷಯ ಗೊತ್ತಿದ್ದರೆ ಅನಾವಶ್ಯಕ ಚಿಕಿತ್ಸೆಯ ಹೆಸರಿನಲ್ಲಿ ಆ ವ್ಯಕ್ತಿಗೆ ಹಿಂಸೆ ಹಾಗೂ ಲಕ್ಷಗಟ್ಟಲೆ ಖರ್ಚು ಮಾಡುವುದನ್ನು ತಪ್ಪಿಸಬಹುದೇನೋ.

Submitted by karababu Sat, 11/11/2017 - 11:36

In reply to by smurthygr

ತಮ್ಮ‌ ಸಲಹೆ ಸರಿಯಾಗಿದೆಯಾದರೂ, ಅವುಗಳಿಗೆ ಕಾನೂನಿನ‌ ಮಾನ್ಯತೆ ದೊರೆಯುವವರೆಗೂ, ವೈದ್ಯರು ಇವುಗಳನ್ನು ಅನುಸರಿಸಲು ಒಪ್ಪುವುದಿಲ್ಲ‌. ಆದ್ದರಿಂದ‌ ನಮ್ಮ‌ ಸರ್ವೋಚ್ಫ‌ ನ್ಯಾಯಾಲಯವು ಇವುಗಳನ್ನು ಪುರಸ್ಕರಿಸುವವರೆಗೂ ನಾವು ಕಾಯಲೇ ಬೇಕು. ಇತ್ತೀಚೆಗೆ ನಾನು ಕಂಡ‌ ಒಂದು ಪ್ರಸಂಗವನ್ನು ತಮಗೆ ತಿಳಿಸಬಯಸುತ್ತೇನೆ. ನನಗೆ ಆತ್ಮೀಯರಾದ‌ ಹಿರಿಯರೊಬ್ಬರು, ಇಂತಹ‌ ಒಂದು ದಾಖಲೆಯನ್ನು ಬರೆದು, ಅವುಗಳಿಗೆ ಸಾಕ್ಶ್ಹಿಗಳಿಬ್ಬರ‌ ಸಹಿ ಹಾಕಿಸಿ, ಅದರ‌ ಪ್ರತಿಗಳನ್ನು ಅವರ‌ ಸಂಬಂಧಿಗಳಿಗೂ ನನಗೂ ಇತ್ತಿದ್ದರು. ಆದರೆ, ಅವರ‌ ಅಂತ್ಯ‌ ಸಮಯದಲ್ಲಿ ಅವರ‌ ಹ್ಱುದಯ‌ ಕ್ರಿಯೆ ನಿಂತು ಹೋದಾಗ‌ ಅವರ‌ ಸಂಬಂಧಿಗಳು ಅವರ‌ ಪುನಶ್ಚೇತನಕ್ಕೆ ಒತ್ತಾಯಿಸಿದಾಗ‌ ನಾವು ವ್ಯರ್ಥವಾದರೂ ಮಾಡಲೇ ಬೇಕಾಯಿತು.