ಭೂದಿ ಮುಚ್ಚಿದ ಕೆಂಡ(ಸಣ್ಣ ಕಥೆ)

ಭೂದಿ ಮುಚ್ಚಿದ ಕೆಂಡ(ಸಣ್ಣ ಕಥೆ)

ಒಂದಾನೊಂದು ಊರು.  ಅಲ್ಲಿ ವೃದ್ಧ ದಂಪತಿಗಳಿಬ್ಬರು ಅನ್ನೋನ್ಯವಾಗಿ ವಾಸಿಸುತ್ತಿದ್ದರು.  ಯಾವುದೋ ಕೇಂದ್ರ ಸರಕಾರಿ ನೌಕರಿಯಲ್ಲಿರುವ ಅವರು ನಿವೃತ್ತಿಯ ನಂತರ ಪುಟ್ಟದಾದ ಮನೆ ಖರೀದಿಸಿ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್ದರು.  ಒಬ್ಬರನ್ನೊಬ್ಬರು ಎಲ್ಲ ಕೆಲಸದಲ್ಲೂ ಸಹಾಯ ಮಾಡಿಕೊಳ್ಳುತ್ತ ಸಾಯಂಕಾಲವಾದರೆ ಸಾಕು ಹತ್ತಿರದ ಉಧ್ಯಾನವನದಲ್ಲಿ ತಪ್ಪದೇ ವಾಯು ವಿಹಾರ ಮಾಡುವುದು  ಪ್ರತಿನಿತ್ಯದ ದಿನಚರಿಯಾಗಿತ್ತು.  ಅಲ್ಲೊಂದಿಷ್ಟು ಇವರಂತೆ ಬರುವ ಸಮವಯಸ್ಕರ ಪರಿಚಯ ಒಂದಷ್ಟು ಹರಟೆ,ನಗು,ಹಳೆಯ ನೆನಪುಗಳು ಹೊತ್ತು ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ.  ಆದರೆ ಮನೆಗೆ ಬಂದು ಊಟ ಮಾಡಿ ಮಲಗಿದಾಗ ಆಗಾಗ ಒಂದು ಕೊರಗು ಕಾಡುತ್ತಿತ್ತು.  ಛೆ!ನಮಗೊಂದು ಸಂತಾನವಿದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು.  ಇದೇ ಯೋಚನೆಯಲ್ಲಿ ಹೆಂಡತಿಯ ಕಣ್ಣಂಚು ಒದ್ದೆಯಾದಾಗಲೆಲ್ಲ ಗಂಡ ಸಮಾಧಾನ ಮಾಡುವುದು, ತಾನು ಮಾತ್ರ ಒಳಗೊಳಗೇ ಅಳುವುದು.
 
ಅದೇ ಉಧ್ಯಾನವನದಲ್ಲಿ ದಿನವೂ ಸಾಯಂಕಾಲ ಅಲ್ಲೇ ಇರುವ ನಿಯಾನ್ ದೀಪದ ಕಂಬದ ಕೆಳಗೆ ಒಬ್ಬ ಚಂದದ ಹುಡುಗ ಪುಸ್ತಕ ಹಿಡಿದು ಓದುತ್ತ ಕುಳಿತಿರುತ್ತಿದ್ದ.  ಇವರು ದಿನಾ ನೋಡುತ್ತಿದ್ದರಲ್ಲ ;  ಹೀಗೆ ಒಂದು ದಿನ ವಾಕಿಂಗ ಮಾಡುತ್ತಿರುವಾಗ ಹೆಂಡತಿ ಯಾಕೊ ಸ್ವಲ್ಪ ವಾಲಿದಂತಾಗಿ ಇವರನ್ನು ಹಿಡಿದುಕೊಂಡಾಗ ಭಾರಕ್ಕೆ ಇವರೂ ಕೂಡಾ ಆಯ ತಪ್ಪಿ ಅಲ್ಲೇ ಕುಸಿದರು.  ಹತ್ತಿರದಲ್ಲೆ ಇರುವ ಆ ಹುಡುಗ ಓಡಿ ಬಂದು ಹಿಡಿದು ಸರಿಯಾಗಿ ಕೂಡಿಸಿ ಇವರ ಚೀಲದಲ್ಲಿದ್ದ ನೀರು ಕುಡಿಸಿ ಸುಧಾರಿಸಿಕೊಳ್ಳಲು ಸಹಾಯ ಮಾಡಿದ.  ಒಂದಷ್ಟು ಪರಿಚಯ ತನ್ನದು ಹೇಳಿಕೊಂಡು ನಡಿರಿ ನಿಮ್ಮನ್ನು ಮನೆಗೆ ನಾನೇ ಬಂದು ಬಿಡುತ್ತೇನೆ.  ಈ ಸ್ಥಿತಿಯಲ್ಲಿ ನೀವಿಬ್ಬರೇ ಹೋಗುವುದು ಸರಿಯಲ್ಲ ಎಂದು ಹೇಳಿ ಇವರನ್ನು ಮನೆಯವರೆಗೂ ತಂದು ಬಿಟ್ಟ.  
 
ಅವನ ಅಪರೂಪದ ಗುಣ ಮಾತು ಈ ದಂಪತಿಗಳಿಗೆ ಮೋಡಿನೇ ಮಾಡಿತು.  ಆಗಾಗ ಬಂದು ವಿಚಾರಿಸುವುದು,ಸ್ವಲ್ಪ ಹೊತ್ತು ಇದ್ದು ಹೋಗುವುದು ನಡೆದೇ ಇತ್ತು.  ಹೀಗಿರಲಾಗಿ ಒಂದು ದಿನ ಅವರಿಬ್ಬರೂ "ನೀನು ಯಾಕೆ ಒಬ್ಬನೇ ರೂಮು ಮಾಡಿಕೊಂಡಿರಬೇಕು?  ಬಂದು ನಮ್ಮ ಜೊತೆ ಇರು.  ನಮಗೂ ಮಕ್ಕಳಿಲ್ಲ.  ನಿನ್ನ ಓದು ಕೆಲಸ ಸಿಕ್ಕ ಮೇಲೆ ಬೇರೆ ಮನೆ ಮಾಡುವಂತೆ" ಅಂದರು.
 
ಅವರ ಒತ್ತಾಯಕ್ಕೆ ಮಣಿದು ಈ ಹುಡುಗ ಅವರ ಮನೆಯಲ್ಲೇ ಇರಲು ಶುರು ಮಾಡಿದ.  ಹೀಗೆ ಕೆಲವು ತಿಂಗಳು ಒಂದೆರಡು ವರ್ಷಗಳೇ ಕಳೆದವು.  ಒಂದು ದಿನ ಉಧ್ಯಾನವನದಲ್ಲಿರುವ ಯಾರೊ ಅಪರಿಚಿತರೊಬ್ಬರು ಇವರನ್ನು ಕೇಳುತ್ತಾರೆ "ನಿಮ್ಮ ಮಗನಿಗೆ ಮದುವೆ ಮಾಡುತ್ತೀರಾ?  ನನ್ನ ಮಗಳಿದ್ದಾಳೆ.  ಹೇಗೂ ಕೆಲಸಕ್ಕೆ ಹೊಸದಾಗಿ ಸೇರಿದ್ದಾನಂತೆ.  ಮೊನ್ನೆ ನಾನೇ ಮಾತನಾಡಿಸಿದೆ."
 
ಅದಕ್ಕವರು "ಇಲ್ಲಾರಿ.  ನಮಗೆ ಅಷ್ಟು ಶಕ್ತಿ ಇಲ್ಲ.  ಏನೊ ಓದಿಕೊಂಡು ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವವರೆಗೆ ನಮ್ಮ ಕೈಲಾದ ಸಹಾಯ ಮಾಡೋಣವೆಂದು ಅವನಿಗೆ ನಮ್ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದೇವೆ.  ಇನ್ನೇನು ಕೆಲಸ ಸಿಕ್ಕಿದೆ.  ಬೇರೆ ಮನೆ ಮಾಡಿ ಹೋಗುತ್ತೇನೆ ಎಂದು ಹೇಳಿದ್ದಾನೆ."
 
"ಅಲ್ಲಾ ಮತ್ತವನು ಇವರು ನನ್ನ ದತ್ತಕ್ಕೆ ತೆಗೆದುಕೊಂಡಿದ್ದಾರೆ.  ಈ ಮನೆ ಅವರ ತಂದೆಯವರಿಂದ ಬಂದಿದದ್ದು.  ದತ್ತು ತೆಗೆದುಕೊಳ್ಳುವಾಗಲೆ ಈ ಮನೆ ಕೂಡಾ ಅವರಪ್ಪ ನನ್ನ ಹೆಸರಿಗೆ ದಾನ ಪತ್ರ ಮಾಡಿಕೊಟ್ಟಿದ್ದಾರೆ.  ಇವರನ್ನು ಕೊನೆವರೆಗೆ ಚೆನ್ನಾಗಿ ನೋಡಿಕೊ ಅಂತ ಹೇಳಿದ್ದಾರೆ "ಅಂದನಲ್ಲಾ.
 
ಯಲಾ ಇವನಾ?  ಹೀಗೊ ಸಮಾಚಾರಾ? ಅಂತಂದುಕೊಂಡು ಮನಸ್ಸಿನಲ್ಲೇ ಅವರಿಗೆ ಏನೂ ಹೇಳದೇ ಸೀದಾ ಮನೆಗೆ ಬಂದ ದಂಪತಿಗಳು ಅಕ್ಕ ಪಕ್ಕದವರ ಹತ್ತಿರ ನೆಂಟರಲ್ಲಿ ಈ ವಿಚಾರ ತಿಳಿಸುತ್ತಾರೆ.  ನೋಡಿದರೆ ಹಲವರ ಹತ್ತಿರ ಇದು ನನ್ನ ಮನೆ.  ನಾನು ಇವರನ್ನು ನೋಡಿಕೊಳ್ಳುತ್ತಾ ಇರೋದು ಅಂತ ಆಗಲೇ ಪ್ರಚಾರ ಬೇರೆ  ಮಾಡಿದ್ದಾನೆ!!
 
ನಂತರ ಇವನನ್ನು ಹೊರ ಹಾಕಲು ಪೋಲೀಸರ ಮೊರೆ ಹೋಗುವ ಹಂತಕ್ಕೆ ತಲುಪಿತು.  ಇದಕ್ಕೇ ಹೇಳೋದು "ಅಂಗೈ ಕೊಟ್ಟರೆ ಮುಂಗೈ ನುಂಗಿದಾ" ಅಂತ.  ಜೀವನದಲ್ಲಿ ಎಷ್ಟು ಎಚ್ಚರಿಕೆ ಇದ್ದರೂ ಸಾಲದು.  
 
29-12-2017. 1.19pm

Comments