ಸಂಗೀತಪ್ರಿಯರ ಗ್ಯಾರೇಜು - ಗರಾಜ್ ಬ್ಯಾಂಡ್

Submitted by hpn on Sat, 01/27/2018 - 21:51

ಪಲ್ ಕಂಪೆನಿ ಹೊರತಂದಿರುವ ಡಿವೈಸುಗಳು ಮತ್ತು ತಂತ್ರಾಂಶಗಳು ಸಾಧಾರಣವಾಗಿ ಎಲ್ಲವೂ ಉತ್ತಮಗುಣಮಟ್ಟದ್ದು ಎಂಬ ಅಭಿಪ್ರಾಯವನ್ನು ಹಲವರಲ್ಲಿ ನಾವು ಕಾಣುತ್ತೇವೆ. ಈ ಕಂಪೆನಿ ಕೆಲವು ದಶಕಗಳಿಂದ ಪ್ರತಿ ವರ್ಷವೂ ಹೊಸ ಆವಿಷ್ಕಾರಗಳನ್ನೊಳಗೊಂಡ ಉತ್ತಮ ಗುಣಮಟ್ಟದ ಡಿವೈಸುಗಳನ್ನು ಹೊರತರುತ್ತಿರುವುದಲ್ಲದೆ ಮತ್ಯಾರೂ ನೀಡದ ಹಲವು ಉಪಯುಕ್ತ ತಂತ್ರಾಂಶಗಳನ್ನು ನೀಡುವುದರಿಂದ ತಂತ್ರಜ್ಞಾನ ಜಗತ್ತಿನಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದೆ. ಆದರೆ ಅದರಂತೆಯೇ ಸಾಧಾರಣವಾಗಿ ಅದರ ಡಿವೈಸುಗಳ ಬೆಲೆ ಕೂಡ ವಿಪರೀತ ಎನಿಸುವಷ್ಟು ಇರುತ್ತದೆ. ಹೀಗಾಗಿ ಎಂದಿನಂತೆ ಸ್ಟೇಟಸ್ ಸಿಂಬಲ್ ಎಂಬಂತೆ ಇಟ್ಟುಕೊಳ್ಳುವವರಿಗೆ ಬಿಕರಿ ಆಗಿಬಿಡಬಹುದಾದ ಈ ಡಿವೈಸುಗಳಲ್ಲಿ ಅಡಕವಾಗಿರುವ ಉಪಯುಕ್ತ ತಂತ್ರಾಂಶಗಳು ಹೆಚ್ಚು ಖರ್ಚು ಮಾಡಲು ಇಷ್ಟಪಡದವರಿಗೆ ತಲುಪದೇ ಹೋಗಿಬಿಡುವ ಸಾಧ್ಯತೆಗಳಿವೆ.  ಕೆಲವೊಮ್ಮೆ ಆಪಲ್ ಡಿವೈಸುಗಳನ್ನು ಇಟ್ಟುಕೊಂಡಿರುವವರಿಗೂ ಆ ಡಿವೈಸುಗಳನ್ನು ಬಳಸಿ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲು ಅಥವ ಓದಿಕೊಳ್ಳಲು ಅವಕಾಶವಾಗುವುದಿಲ್ಲ. ಆದರೆ ಒಮ್ಮೆ ಆಪಲ್ ಡಿವೈಸುಗಳನ್ನು ಬಳಸಿದವರು ಮುಂಚೆ ಬಳಸಿದ ಡಿವೈಸುಗಳಿಗೆ ತಿರುಗಿ ಹೋಗುವುದೇ ಇಲ್ಲ. ಆಪಲ್ ಡಿವೈಸುಗಳು ಸಾಧಾರಣವಾಗಿ ಅಷ್ಟು ಚೆನ್ನಾಗಿರುತ್ತವೆ. 
 
ವೃತ್ತಿಪರ ಕೆಲಸಗಳಿಗಾಗಿ ನಿರ್ದಿಷ್ಟ ತಂತ್ರಾಂಶಗಳನ್ನು ಬಳಸುವವರು ಆಪಲ್ ಹೊರತಂದಿರುವ ಮ್ಯಾಕ್, ಐಪಾಡ್ ಮುಂತಾದವುಗಳನ್ನು ಖರೀದಿಸುತ್ತಲೇ ಇರುತ್ತಾರೆ. ಒಂದಷ್ಟು ವರ್ಷಗಳಾದ ಮೇಲೆ ವೃತ್ತಿಗೆ ಅನಿವಾರ್ಯವಾಗುವುದರ ಜೊತೆಗೆ ಇದೊಂದು ರೀತಿಯ ಅಭ್ಯಾಸವೂ ಆಗಿಬಿಡುತ್ತದೆ. ಜೊತೆಗೆ ಅವುಗಳಲ್ಲಿರುವ ತಂತ್ರಾಂಶಗಳನ್ನು ಬಳಸುವುದು ಹವ್ಯಾಸವಾಗಿಬಿಡುತ್ತದೆ. ಹವ್ಯಾಸೀ ಬರಹಗಾರರಿಗೆ, ಚಿತ್ರಕಾರರಿಗೆ ಹಾಗು ಸಂಗೀತಗಾರರಿಗೆ - ಹಾಗು ಒಟ್ಟಾರೆ ಕಲಾವಿದರಿಗೆ ಆಪಲ್ ಡಿವೈಸುಗಳಲ್ಲಿ ಉತ್ತಮ ಗುಣಮಟ್ಟದ ಪ್ರತ್ಯೇಕ ತಂತ್ರಾಂಶಗಳು ಲಭ್ಯ. ಈ ವಾರ ಸಂಗೀತಪ್ರಿಯರಿಗೆ ತುಂಬ ಉಪಯುಕ್ತವಾಗಬಲ್ಲ Garage Band (ಗರಾಜ್ ಬ್ಯಾಂಡ್) ಕುರಿತು ನೋಡೋಣ. 
 
ಗರಾಜ್ ಬ್ಯಾಂಡ್ ವೃತ್ತಿಪರ ಸಂಗೀತಗಾರರಿಗೆಂದು ತಯಾರಿಸಲ್ಪಟ್ಟ ತಂತ್ರಾಂಶ. ಆದರೆ ಇದನ್ನು ಬಳಸುವುದು ಸಂಗೀತ ತಿಳಿದಿಲ್ಲದವರಿಗೂ ಸುಲಭ. ಸಂಗೀತ ತಿಳಿದಿಲ್ಲದವರೂ ಸಂಗೀತವನ್ನು ತಯಾರಿಸಬಹುದು ಎನ್ನುವಷ್ಟರ ಮಟ್ಟಿಗೆ ಈ ತಂತ್ರಾಂಶವನ್ನು ತಯಾರಿಸಿದ್ದಾರೆ. ಸುಮಾರು ಹದಿಮೂರು ವರ್ಷಗಳ ಹಿಂದೆ ೨೦೦೪ರಲ್ಲಿ  ಮೊದಲ ಆವೃತ್ತಿಯೊಂದಿಗೆ ಹೊರಬಂದ ಈ ತಂತ್ರಾಂಶ ಈಗ ಮ್ಯಾಕ್ ಅಲ್ಲದೆ ಐಪ್ಯಾಡ್ ಹಾಗು ಐಫೋನಿನಲ್ಲೂ ಲಭ್ಯವಿದೆ. ಈಗಿನ ಐಪ್ಯಾಡ್ ಆವೃತ್ತಿ ಮಕ್ಕಳ ಆಟಕ್ಕೂ ಆಗಬಹುದು! ೨೦೦೯ರಲ್ಲಿ ಗಿಟಾರ್ ಮತ್ತು ಪಿಯಾನೋ ಕಲಿಯುವವರಿಗೆ ಸುಲಭವಾಗಲೆಂದು ಗರಾಜ್ ಬ್ಯಾಂಡಿನಲ್ಲಿ ಮುಂಚಿತವಾಗಿ ರೆಕಾರ್ಡ್ ಮಾಡಿದ ಸಂಗೀತ ಪಾಠಗಳನ್ನು ಕೊಡಲು ಪ್ರಾರಂಭಿಸಿದರು. ಇದರಲ್ಲಿ ಮೊದಲ ಹಂತದ ಕಲಿಕೆಗೆ ಬೇಕಾದ ಸಂಗೀತ ಪಾಠಗಳು ಉಚಿತವಾಗಿ ಲಭ್ಯವಿದ್ದು ಕಲಾವಿದರಿಗೆಂದೇ ಇರುವ ಮುಂದುವರೆದ ಭಾಗಗಳನ್ನು ಹಣ ಕೊಟ್ಟು ಕೊಳ್ಳಬೇಕು. ಗರಾಜ್ ಬ್ಯಾಂಡ್ ಬಹುಶಃ ಪ್ರತಿಯೊಬ್ಬರಿಗೂ ತುಂಬ ಇಷ್ಟವಾಗಬಹುದಾದ ತಂತ್ರಾಂಶ. ಇದರಲ್ಲಿ ಏನೂ ಕಷ್ಟವಿಲ್ಲದೆ ಅಪಸ್ವರವಿಲ್ಲದ ಸಂಗೀತವನ್ನು ನುಡಿಸಬಹುದು. ಆದರೆ ಲಯಬದ್ಧವಾಗಿ ನುಡಿಸಲು ಸಂಗೀತದ ಜ್ಞಾನ ಬೇಕು. ಈ ತಂತ್ರಾಂಶದಲ್ಲಿ ತೀರ ಇಷ್ಟವಾಗುವ ಸಂಗತಿಯೆಂದರೆ ಸಂಗೀತದ ಪರಿಚಯ ಇಲ್ಲದವರೂ ಹಲವು ವಾದ್ಯಗಳ ಪರಿಚಯವನ್ನು ಇದರಲ್ಲಿ ಮಾಡಿಕೊಳ್ಳಬಹುದು. ನನಗೆ ಈ ತಂತ್ರಾಂಶದಲ್ಲಿ ತುಂಬಾ ಇಷ್ಟವಾದ ಸಂಗತಿಯೆಂದರೆ ಪರಿಸರದಲ್ಲಿ ನಮಗೆ ಸಿಗುವ ಹಲವು ಶಬ್ಧಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡು ಯಾವುದೇ ಟ್ಯೂನು ತಯಾರಿಸುವಾಗ ಬಳಸಬಹುದು. ಜೊತೆಗೆ ರಿಂಗ್ ಟೋನ್ ಮಾಡುವುದು ಕೂಡ ಇದರಲ್ಲಿ ಬಹಳ ಸುಲಭ. 
 
audio loops (ಆಡಿಯೋ ಲೂಪ್ಸ್)
ಗರಾಜ್ ಬ್ಯಾಂಡಿನಲ್ಲಿ ವಿವಿಧ ವಾದ್ಯಗಳಲ್ಲಿ  ಮುಂಚಿತವಾಗಿಯೇ ನುಡಿಸಿಟ್ಟಿರುವ ಸಂಗೀತದ ತುಣುಕುಗಳು ಸಿಗುತ್ತವೆ. ಅದನ್ನು ನಿಮ್ಮ ಸಂಗೀತದ ಪ್ರಾಜೆಕ್ಟಿಗೆ ಸುಲಭದಲ್ಲಿ ಸೇರಿಸಿಕೊಳ್ಳಬಹುದು. ಇದನ್ನು ಬಳಸಿ ಹಿನ್ನೆಲೆಯಲ್ಲಿ ವಾದ್ಯವೊಂದರ ತುಣುಕು ಮತ್ತೆ ಮತ್ತೆ ಕೇಳುವಂತೆ ಮಾಡಬಹುದು. ಅಥವ ಸಂದರ್ಶನವೊಂದನ್ನು ರೆಕಾರ್ಡ್ ಮಾಡಿದ್ದೀರಿ ಎಂದು ಇಟ್ಟುಕೊಳ್ಳಿ - ಅದಕ್ಕೆ ಮುನ್ನುಡಿಯೊಂದಿಗೆ ಸಂಗೀತದ ತುಣುಕೊಂದನ್ನು ಸುಲಭದಲ್ಲಿ ಇದನ್ನು ಬಳಸಿ ಸೇರಿಸಬಹುದು.
 
beat sequencer (ಬೀಟ್ ಸೀಕ್ವೆನ್ಸರ್)
ಹಲವು ಬೀಟ್ಸ್ ಜೊತೆಗೂಡಿಸಿ ಒಂದು ಸೀಕ್ವೆನ್ಸ್ ರೆಡಿ ಮಾಡುವುದು ಗರಾಜ್ ಬ್ಯಾಂಡಿನಲ್ಲಿ ತೀರ ಸುಲಭ. ಐಪ್ಯಾಡ್ ಅಥವ ಐಫೋನು ಬಳಸುತ್ತಿದ್ದರೆ ಟಚ್ ಸ್ಕ್ರೀನ್ ಬಳಸಿ ಮಕ್ಕಳೂ ಬೀಟ್ಸ್ ರೆಡಿ ಮಾಡಬಲ್ಲರು. 
 
ಮೈಕ್ ಅಥವ ಗಿಟಾರ್ ಕೂಡ ಕನೆಕ್ಟ್ ಮಾಡಬಹುದು
ಒಂದು ವೇಳೆ ಹಾಡು ಹಾಡುವುದಿದ್ದರೆ ಅಥವ ಗಿಟಾರ್ ನುಡಿಸುವುದಿದ್ದರೆ ಮೈಕ್ ಅಥವ ಗಿಟಾರ್ ನಿಮ್ಮ ಆಪಲ್ ಡಿವೈಸುಗಳಿಗೆ ಕನೆಕ್ಟ್ ಆಗಿದ್ದರಾಯಿತು. ನೇರ ಗರಾಜ್ ಬ್ಯಾಂಡಿನಲ್ಲಿ ಟ್ರಾಕ್ ಒಂದನ್ನು ಹಾಕಿಕೊಂಡು ಅದರಲ್ಲಿ ರೆಕಾರ್ಡ್ ಮಾಡಿಟ್ಟುಕೊಳ್ಳಬಹುದು. ತದನಂತರ ಅದಕ್ಕೆ ಬೇಕಾದ ಹಿನ್ನೆಲೆ ಸಂಗೀತ ಅಥವ ಬೀಟ್ಸ್ ಮುಂತಾದವುಗಳನ್ನು ಆರಾಮದಲ್ಲಿ ಹಾಕಿಕೊಳ್ಳಬಹುದು. 
 
ಸೌಂಡ್ ಲೈಬ್ರೆರಿ
ಇತ್ತೀಚಿನ ಐ ಓ ಎಸ್ ಆವೃತ್ತಿಯಲ್ಲಿ ಪರಿಚಯಿಸಲಾಗಿರುವ ಸೌಂಡ್ ಲೈಬ್ರರಿಯಲ್ಲಿ ಹಲವು ವಾದ್ಯಗಳಲ್ಲಿ ರೆಕಾರ್ಡ್ ಮಾಡಿದ ಸಂಗೀತ ಉಚಿತವಾಗಿ ಲಭ್ಯ. ಇವುಗಳಲ್ಲಿ ಮೇಲೆ ತಿಳಿಸಿದ ಆಪಲ್ ಲೂಪ್ಸ್ ಹಾಗೂ ಸಿಂಥೆಸೈಸ್ ಮಾಡಿದ ಸೌಂಡುಗಳ ಜೊತೆಗೆ ಡ್ರಮ್ ಕಿಟ್ಟುಗಳೂ ಸಿಗುತ್ತವೆ. 
 
Logic Pro (ಲಾಜಿಕ್ ಪ್ರೋ) ಮತ್ತು Logic Pro remote (ಲಾಜಿಕ್ ಪ್ರೋ ರಿಮೋಟು) 
ಸಂಪೂರ್ಣ ಹಾಡೊಂದನ್ನು ರೆಕಾರ್ಡ್ ಮಾಡಬೇಕೆನ್ನುವವರಿಗೆ ಆಪಲ್ ಲಾಜಿಕ್ ಪ್ರೋ ತುಂಬ ಉಪಯುಕ್ತವಾಗುತ್ತದೆ. ವೃತ್ತಿಪರ ಗೀತರಚನೆಗೆ ಲಾಜಿಕ್ ಪ್ರೋ ತಂತ್ರಾಂಶವನ್ನು ಬಳಸಲಾಗುತ್ತದೆ. ಇದರಲ್ಲಿ ಮಿಕ್ಸಿಂಗ್ ಕೂಡ ಮಾಡಬಹುದು. ಇತ್ತೀಚಿನ್ ಐ ಓ ಎಸ್ ಆವೃತ್ತಿಯಲ್ಲಿ ಈ ತಂತ್ರಾಂಶವನ್ನು ಬಳಸಲು ಸುಲಭವಾಗುವಂತೆ ಒಂದು ರಿಮೋಟ್ ರೀತಿಯ ಆಪ್ ಕೂಡ ಬಿಡುಗಡೆಯಾಗಿದೆ. ಐಪ್ಯಾಡಿನಲ್ಲಿ ಈ ಆಪ್ ಬಳಸಿ ಸಂಪೂರ್ಣ ತಂತ್ರಾಂಶವನ್ನು ಸುಲಭದಲ್ಲಿ ಬಳಸಬಹುದು. 
 
ಮತ್ತಷ್ಟು ವಾದ್ಯಗಳು
ವಿವಿಧ ಕಂಪೆನಿಗಳು ಗರಾಜ್ ಬ್ಯಾಂಡಿಗೆಂದು ತಯಾರಿಸಿದ ಆಡಿಯೋ ಯೂನಿಟ್ ಎಕ್ಸ್ಟೆನ್ಶನ್ನುಗಳನ್ನು ಬಳಸಿ ಮತ್ತಷ್ಟು ವಾದ್ಯಗಳನ್ನು ಗರಾಜ್ ಬ್ಯಾಂಡಿನಲ್ಲಿ ಹಾಕಿಕೊಳ್ಳಬಹುದು. 
ಇಷ್ಟೆಲ್ಲ ಆಯ್ಕೆಗಳು ಹಾಗು ಇನ್ನೂ ಹತ್ತು ಹಲವು ತಂತ್ರಜ್ಞಾನ ಹೊತ್ತು ತರುವ ಗರಾಜ್ ಬ್ಯಾಂಡ್ ತಂತ್ರಾಂಶದ ಸವಲತ್ತುಗಳನ್ನು ಕೇವಲ ಪರಿಣಿತಿ ಹೊಂದಿದವರು ಮಾತ್ರ ಬಳಸಬೇಕೆಂದಿಲ್ಲ. ಎಲ್ಲರೂ ಒಮ್ಮೆ ಪ್ರಯತ್ನಿಸಿ ನೋಡಬಹುದು - ತಪ್ಪಾದರೆ ತಿದ್ದುವ, ಸರಿಪಡಿಸುವ ಸಾಧ್ಯತೆ ಇದರಲ್ಲಿದೆ. 
(೨೭ ಜನವರಿ ೨೦೧೮ರಂದು ವಿಶ್ವವಾಣಿಯ ಗೆಜೆಟಿಯರ್ ಸಪ್ಲಿಮೆಂಟಿನಲ್ಲಿ ಪ್ರಕಟವಾದ ಲೇಖನ)