ಎಷ್ಟು ಮೌನವಾಗಿ

ಎಷ್ಟು ಮೌನವಾಗಿ

ಕವನ

 
 

 

 

ಮಾತೊಳು ಭಾವವು, ಕಣ್ಣೊಳು ನೋಟವು

ಅದ್ಹೇಗೆ ಬೆರೆತವೆಂದು

ಬೆಪ್ಪಾಗಿ ಎಲ್ಲರಲಿ ಹುಡುಕಿದೆ

ಹುಡುಕಾಟಕ್ಕೆ ಇನ್ನಷ್ಟು ಹೊಸ ಜಾಗಗಳು

ಕಂಡವೇ ವಿನಃ ಎಲ್ಲೂ ಉತ್ತರ ಸಿಗಲಿಲ್ಲ

ಸೋತು ಹುಡುಕಾಟವ ಬಿಟ್ಟು,

ಮಾತಿನ ಭಾವವ ಸವಿಯಲು, ಕಣ್ಣಿನ ನೋಟವ ತುಂಬಲು

ಎಲ್ಲವೋ ನನ್ನ ಅಭಿವ್ಯಕ್ತಿಯೇ ಎಂದು ನೀ ತೋರಿದೆ  

 

ಹೂವಲಿ ಗಂಧವ, ಹಣ್ಣಲಿ ಸಿಹಿಯ

ಯಾರೂ ಹುದುಗಿಸಿಟ್ಟರು ಎಂದು

ಕೇಳುತ ಜಗವೆಲ್ಲಾ ಅಲೆದಾಡಿದೆ

ಕೇಳಲು ಇನ್ನಷ್ಟು ಹೊಸ ಜನರು

ಹುಟ್ಟಿದರೆ ವಿನಃ ಯಾರೊ ಉತ್ತರಿಸಲಿಲ್ಲ

ಸೋತು ಅಳೆದಾಟವ ಬಿಟ್ಟು,

ಹೂವ ಗಂಧವ ಹೀರಲು, ಹಣ್ಣ ಸವಿಯ ಸವಿಯಲು

ಎಲ್ಲವೂ ನನ್ನೊಳಗಿನ ಸ್ವಾದವೇ ಎಂದು ನೀ ತೋರಿದೆ

 

ಆನಂದದಿ ನಗುವ, ದುಃಖದಿ ಅಳುವ

ಅದ್ಯಾರು ಬೆರೆಸಿದರೆಂದು

ಸಿಕ್ಕಸಿಕ್ಕವರ ಹಿಡಿದಿಡಿದು ಕೇಳಿದೆ

ಎಲ್ಲರ ಮುಖದಲ್ಲೊ ಅದೇ ಪ್ರಶ್ನಾರ್ಥಕ

ಚಿಹ್ನೆಗಳೇ ಕಂಡವೇ ಹೊರತು ಯಾರೊ ಉತ್ತರಿಸಲಿಲ್ಲ

ಸೋತು ಪ್ರಶ್ನೆ ಕೇಳುವುದ ಬಿಟ್ಟು,

ಮನಸ್ಬಿಚ್ಚಿ ನಗಲು, ಕಣ್ತುಂಬಿ ಅಳಲು

ಎಲ್ಲ ಭಾವವು ನಾನೇ ಆಗಿರಿವೆನೆಂದು ನೀ ತೋರಿದೆ

 

ನೀನೊಂದು ಮಿಥ್ಯ!

ಬೂಧಿಯ ಬಳಿದು ಗಂಧವ ಧರಿಸಿ

ಎಡಬಿಡದೆ  ನಿನ್ನ ಜಪಿಸುವ

ಇವರು ಮೂರ್ಖರು, ಎಂದೆಲ್ಲ

ನಿನ್ನ ದೂಶಿಸಿವಾಗ

ನಿನಗೆ ಕೂಪ ಬರಲಿಲ್ಲವೇ ?

ನೀನು ನಿಜವಾಗಿಯೂ ಇದ್ದರೆ

ಕಣ್ಣಿಗೇಕೆ ಕಾಣದಾದೆ?

ಎಂದೆಲ್ಲ ಪ್ರಶ್ನೆ ಕೇಳುವಾಗ

ನೀನೇಕೆ ಸುಮನಿದ್ದೆ ?

ಬಹುಷಃ, ಇಂದಲ್ಲ ನಾಳೆ ಸರಿ ಹೋಗುವನೆಂದು

ನಮ್ಮಮ್ಮ ನನಗೆನ್ನುವಂತೆ

ಒಂದು ದಿನ ತಾನೇ ಅರೆಯುವನೆಂದು

ನಕ್ಕು, ಸುಮ್ಮನಿದ್ದು ಬಿಟ್ಟೆ ಎಂದೆನ್ನಿಸುತ್ತಿದೆ

ನಿನ್ನನ್ನು ಅರಿಯದ ನಾನೇ ಮೂರ್ಖನೆಂದು

ಎಷ್ಟು ಮೌನವಾಗಿ ಹೇಳಿಬಿಟ್ಟೆ, ಸುಲಭವಾಗಿ. 

 

- ಬುರುಡೆ ದಾಸ     
 

 

Comments