ಪ್ರತಿಧ್ವನಿ
ಒಳಗಿನ ಧ್ವನಿಯೊಂದು
ಪ್ರತಿಸಲವೂ ಮಾರ್ಧನಿಸಿ
ಏನನ್ನೋ ಹೇಳಲು ಯತ್ನಿಸಿದಾಗ
ಮನಕ್ಕೆ ಮುಸುಕು ಹಾಕಿ ಕುಳಿತು,
ಮರುದಿನ
ಮೌನ ಮನದ ಮಾತಿಗೆ ಎದುರು ನೋಡಿದಹಾಗೆ!
ಅಂತರಂಗ ಕಳೆದುಹೋಗುವ ಮುನ್ಸೂಚನೆ
ಆಗಾಗ ಮಿಂಚುತ್ತಲೇ ಕರಗಿಹೋಗುವಾಗ,
ಕಣ್ಣ ಎದುರಿನ ಅಂದಕ್ಕೆ ಮನಸೋತು
ಅಂತರಂಗ ಬಲಿಕೊಟ್ಟರೆ !!
ಗುಲಾಬಿಗೆ ತಾನು ಕೆಂಪೆಂದು ಗೊತ್ತೇನು ?
ತನ್ನದೂ ಒಂದು ಬಣ್ಣವಷ್ಟೆ, ಎಂದು
ಅದು ನಗುತ್ತಾ ಬದುಕುವಾಗ,
ಮನಸ್ಸಿಗೆ ಮುದನೀಡಿದ ಮಾತ್ರಕ್ಕೆ
ಹೂವುಗಳಿಗೂ ಬಣ್ಣದ ಅಂತರ ಹಬ್ಬಿಸಿ,
ಪ್ರೇಮಿಗೆ ಕೆಂಪು ಗುಲಾಬಿ ಕೊಟ್ಟವರೆಲ್ಲ,
ನಿಜವಾಗಿಯೂ ಪ್ರೇಮಿಸಿದರೇನು ?
ಮುಗಿಯದ, ನಗರದ ಡಾಂಬಾರು ದಾರಿಯಲಿ
ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ
ದಿನವೂ ನಡೆಯುವ ನವ ಯುವಕನೊಬ್ಬ
ಜೇಬು ತುಂಬಿಸಿ, ಹೊಟ್ಟೆ ಹೊರೆಯುವ ದಾವಂತದಲಿ,,,,,
ಅವನಪ್ಪ ನಡೆದ ಹಳ್ಳ ಕೊಳ್ಳದ
ಮಣ್ಣಿನ ರಸ್ತೆಯ ನೆನಪಿಟ್ಟುಕೊಂಡಿರುವನೇನು?
ಕಂಪು ಬೀರುವ ಸುವಾಸನೆ ,,,,,,,
ಅವಳ್ಯಾರೋ ಹುಡುಗಿಯ ಪಕ್ಕ ನಿಂತಾಗ,
ಕಾಸು ಕೊಟ್ಟು ಕೊಂಡು ತಂದ ಪರಿಮಳ,
ಹೊಲ ಬಿತ್ತುವ ನಮ್ಮಪ್ಪನ ಬೆವರಿನಷ್ಟೇನೂ ಬೆಲೆ ಬಾಳುವುದಿಲ್ಲ,
ಆದರೂ ಅದು ದುಬಾರಿ,
ಮರುಕವಿದೆ, ಅನ್ನ ನೀಡುವ ಅವನ ಮೇಲೆ,
ಕಚಕುಳಿ ಇಡುವ ನೆನಪುಗಳಿಗೆ ನಾಚಿಕೆಯೇ ಇಲ್ಲ
ಮಧ್ಯರಾತ್ರಿಯಲೆ ಎದ್ದು ಬಂದು ಗುದ್ದುತ್ತವೆ
ನಿದ್ದೆಯ ಮಂಪರಿನಲ್ಲಿ, ನೈಜ ಆತ್ಮ ಎದ್ದು ಕುಣಿದ ಹಾಗೆ,
ಆಗ ಯಾವ ನೈತಿಕತೆಯೂ ಇರುವುದಿಲ್ಲ ದೇಹಕ್ಕೆ,
-ಜಿ.ಕೆ ನವೀನ್ ಕುಮಾರ್
Comments
ಉ: ಪ್ರತಿಧ್ವನಿ
:) ಒಳ್ಳೆಯ ಕನವರಿಕೆ, ಅಲ್ಲಲ್ಲ, ಕವನರಿಕೆ!