ಕಗ್ಗ ದರ್ಶನ – 20 (1)
ಶಕ್ತಿ ಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ
ಯುಕ್ತಿ ಮೀರ್ದ ಪ್ರಶ್ನೆಗಳನು ಕೇಳುತಿರೆ
ಚಿತ್ತವನು ತಿರುಗಿಸೊಳಗಡೆ ನೋಡು ನೋಡಲ್ಲಿ
ಸತ್ವದಚ್ಛಿನ್ನ ಝರಿ - ಮಂಕುತಿಮ್ಮ
ವಿಧಿ ನಮ್ಮನ್ನು ಮತ್ತೆಮತ್ತೆ ಪರೀಕ್ಷಿಸುತ್ತಲೇ ಇರುತ್ತದೆ – ನಮ್ಮ ಸಾಮರ್ಥ್ಯ ಮೀರಿದ ಪರೀಕ್ಷೆಗಳಿಗೆ ಒಡ್ಡುವ ಮೂಲಕ, ನಮ್ಮ ಬುದ್ಧಿವಂತಿಕೆ ಮೀರಿದ ಪ್ರಶ್ನೆಗಳನ್ನು ಎದುರಾಗಿಸುವ ಮೂಲಕ. ಅಂತಹ ಸವಾಲುಗಳನ್ನು ಎದುರಿಸುವುದು ಹೇಗೆ? ಎಂಬ ಮಹಾನ್ ಪ್ರಶ್ನೆಗೆ ಈ ಮುಕ್ತಕದಲ್ಲಿ ಸರಳ ಉತ್ತರ ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಅಂತಹ ಸವಾಲುಗಳು ಎದುರಾದಾಗ ನಮ್ಮ ಚಿತ್ತವನ್ನು ಒಳಕ್ಕೆ ತಿರುಗಿಸಬೇಕು; ಅಲ್ಲಿ ನಿರಂತರವಾಗಿ (ಅಚ್ಛಿನ್ನ) ಹರಿಯುತ್ತಿರುವ ಸತ್ವದ ಝರಿ ಇದೆ. ನಮ್ಮೊಳಗಿನ ಸತ್ವವೇ ನಮ್ಮ ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ದಾರಿ ತೋರಿಸುತ್ತದೆ.
ಬಿಹಾರದ ಬೆಟ್ಟದ ಮೂಲೆಯ ಹಳ್ಳಿಯಲ್ಲಿದ್ದರು ದಶರಥ ಮಾಂಜಿ. ಅವರ ಪತ್ನಿಯನ್ನು ಆಸ್ಪತ್ರೆಗೆ ಒಯ್ಯಲಾಗದೆ, ಆಕೆ ತೀರಿಕೊಂಡರು.ಆಗ ದಶರಥ ಮಾಂಜಿ ನಿರ್ಧರಿಸಿದರು: ಈ ಗತಿ ಇನ್ನಾರಿಗೂ ಬರಬಾರದೆಂದು. ಆದರೆ ಪರಿಹಾರ ಏನು? ಬೆಟ್ಟ ಸುತ್ತಿ ಇಳಿಯಬೇಕಾದರೆ ೭೦ ಕಿಮೀ ದೂರ. ಆ ಬೆಟ್ಟ ಕಡಿದರೆ ಕೇವಲ ಒಂದು ಕಿಮೀ ಅಂತರದಲ್ಲಿತ್ತು ರಸ್ತೆ. ಮಾಂಜಿ ತನ್ನೊಳಗಿನ ಶಕ್ತಿಯನ್ನೇ ನಂಬಿ ಬೆಟ್ಟ ಕಡಿಯಲು ತೊಡಗಿದರು. ಮುಂದಿನ ೨೨ ವರುಷ ದಿನದಿನವೂ ಏಕಾಂಗಿಯಾಗಿ ಆ ಬೆಟ್ಟ ಕಡಿದು, ೩೦ ಅಡಿ ಅಗಲದ ರಸ್ತೆ ನಿರ್ಮಿಸಿದರು. ಎಂತಹ ಸಾಧನೆ!
ಥೋಮಸ್ ಆಲ್ವಾ ಎಡಿಸನಿಗೆ ಒಂದು ಕನಸು: ವಿದ್ಯುತ್ತಿನಿಂದ ಬೆಳಕು ಬೆಳಗಿಸಬೇಕೆಂದು. ಆದರೆ ಹೇಗೆ? ಒಂದಾದ ಮೇಲೊಂದು ವಿಧಾನವನ್ನು ಪರೀಕ್ಷಿಸುತ್ತ ನಡೆದರು. ಹಾಗಲ್ಲ, ಹಾಗಲ್ಲ ಎಂಬುದನ್ನು ದಾಖಲಿಸುತ್ತ ಸಾಗಿದರು. ೯೯೯ ವಿಧಾನಗಳಿಂದ ಯಶಸ್ಸು ಸಿಗಲಿಲ್ಲ. ಅವರು ಎದೆಗುಂದಲಿಲ್ಲ. ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿಯೇ ಸಿಗುತ್ತದೆಂಬ ನಂಬಿಕೆ ಅವರಿಗೆ – ಆ ನಂಬಿಕೆಗೆ ಬಲ ಬಂದದ್ದು ಅವರೊಳಗಿನ ಸತ್ವದಿಂದಲೇ. ಕೊನೆಗೂ ಅವರ ೧೦೦೦ನೇ ಪ್ರಯತ್ನದಲ್ಲಿ ವಿದ್ಯುತ್ ಬಲ್ಬ್ ಬೆಳಗಿತು! ಬದುಕಿನ ಎಲ್ಲ ಪರೀಕ್ಷೆಗಳನ್ನು, ಎಲ್ಲ ಪ್ರಶ್ನೆಗಳನ್ನು ನಮ್ಮೊಳಗಿನ ಸತ್ವದ ಬಲದಿಂದಲೇ ಎದುರಿಸುತ್ತೇವೆ ಎಂಬ ಸಂಕಲ್ಪ ತೊಟ್ಟರೆ ಆಂತರಿಕ ಶಕ್ತಿ ಚಿಮ್ಮುತ್ತದೆ; ಹೊಸಹೊಸ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.
Comments
ಉ: ಕಗ್ಗ ದರ್ಶನ – 20 (1)
ಒಳ್ಳೆಯ ಸಮೀಕ್ಷಾತ್ಮಕ ವಿಮರ್ಶೆ.