ಗಿಡಗೆಳೆತನದಿಂದ ಕೃಷಿಬದುಕಿನ “ಸಮೃದ್ಧಿ”

ಗಿಡಗೆಳೆತನದಿಂದ ಕೃಷಿಬದುಕಿನ “ಸಮೃದ್ಧಿ”

ಸಿಹಿಹುಣಿಸೆ, ಸಿಹಿಧಾರೆಹುಳಿ, ಕರಿಯಾಲ ಹರಿವೆ, ಬಾಂಗ್ಲಾ ಬಸಳೆ, ರೆಕ್ಕೆಬದನೆ, ಹಾವುಬದನೆ, ಏಲಕ್ಕಿ ತುಳಸಿ, ಕನಕಚಂಪಕ, ಕರ್ಪೂರಗಿಡ, ಬಂಟ ಕೇಪುಳ, ಮೊಟ್ಟೆಮುಳ್ಳು, ಕಾಂಚಿಕೇಳ ಬಾಳೆ, ಆಫ್ರಿಕನ್ ಚಿಕ್ಕು, ನೀರುಹಲಸು, ಭೀಮಫಲ, ಹನುಮಫಲ, ಮುಳ್ಳುಸೀತಾಫಲ – ಇಂತಹ ಹತ್ತುಹಲವು ಅಪರೂಪದ ಸಸ್ಯಗಳು ಇಂದು ದಕ್ಷಿಣಕನ್ನಡದ ಹಲವು ಕೃಷಿಕರ ತೋಟಗಳಲ್ಲಿ ಬೆಳೆಯುತ್ತಿದ್ದರೆ ಅದಕ್ಕೆ ಕಾರಣ “ಸಮೃದ್ಧಿ” ಎಂಬ ಗಿಡಗೆಳೆತನ ಸಂಘ.

“ಸಮೃದ್ಧಿ”ಯಂತಹ ಕೃಷಿಕರ ವೇದಿಕೆ ಜಗತ್ತಿನಲ್ಲಿ ಬೇರೆಲ್ಲಿಯೂ ಇರಲಿಕ್ಕಿಲ್ಲ. ಇದು ಕಳೆದ ೨೪ ವರುಷಗಳಲ್ಲಿ ಸದ್ದುಗದ್ದಲವಿಲ್ಲದೆ “ಕೃಷಿಕರಿಂದ ಕೃಷಿಕರಿಗಾಗಿ” ಎಂಬ ತತ್ವದ ನೆಲೆಯಲ್ಲಿ ಮೌಲಿಕ ಕೆಲಸ ಮಾಡಿದೆ. ಈ ದೀರ್ಘ ಅವಧಿಯಲ್ಲಿ, ನೂರಾರು ಕೃಷಿಕರನ್ನು ಅದ್ಯಾವ ಆಕರ್ಷಣೆ “ಸಮೃದ್ಧಿ”ಯತ್ತ ಸೆಳೆಯಿತು? ಅಪರೂಪದ ಸಸ್ಯಗಳ ಬೀಜ ಅಥವಾ ಸಸಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ಅವರೆಲ್ಲ “ಸಮೃದ್ಧಿ”ಯ ಕಾರ್ಯಕ್ರಮಗಳಿಗೆ ಬಂದರೇ?

ಅದಕ್ಕಿಂತ ಮಿಗಿಲಾಗಿ, ಹಲವರನ್ನು ಸೆಳೆದದ್ದು ಇನ್ನೊಂದು ಆಕರ್ಷಣೆ ಅನಿಸುತ್ತದೆ. ಅದೇನೆಂದರೆ, ನಿರಂತರವಾಗಿ ಪ್ರತಿ ತಿಂಗಳೂ “ಸಮೃದ್ಧಿ” ತನ್ನ ಸದಸ್ಯರಿಗೆ ಒದಗಿಸಿದ ಬೆಲೆಕಟ್ಟಲಾಗದ ಅವಕಾಶ: ಕೃಷಿಕರ ಹೊಲ-ತೋಟಗಳಿಗೆ ಭೇಟಿ ನೀಡುವ ಅವಕಾಶ. ಯಾಕೆಂದರೆ, ಪ್ರತಿಯೊಬ್ಬ ಕೃಷಿಕನ ಮನದಾಳದಲ್ಲಿ ಒಂದು ಹಂಬಲವಿರುತ್ತದೆ: ಇತರ ಕೃಷಿಕರ ಕೃಷಿ ಹಾಗೂ ಬದುಕಿನೊಂದಿಗೆ ತನ್ನದನ್ನು ಹೋಲಿಸಿ ನೋಡುವುದು. ಆ ಹಂಬಲವನ್ನು “ಸಮೃದ್ಧಿ”ಯ “ತಿಂಗಳ ಕ್ಷೇತ್ರಭೇಟಿ”ಗಳು ತುಂಬಿವೆ ಎನ್ನಬಹುದು.

ಇಂತಹ ಕ್ಷೇತ್ರಭೇಟಿಗಳಲ್ಲಿ ಇತರರ ಜಮೀನು, ತೋಟ, ಬೆಳೆಗಳು, ಗಿಡಮರಗಳನ್ನು ಕಣ್ಣಾರೆ ಕಾಣುತ್ತಾ, ಅವರ ಮಾತುಗಳನ್ನು ಕೇಳುತ್ತಾ, ಅವರ ಕೃಷಿ ವಿಧಾನಗಳನ್ನು ತಿಳಿಯುತ್ತಾ ಕಲಿಯುವುದು ಬಹಳಷ್ಟು ಇರುತ್ತದೆ. ಅವರು ಅನುಸರಿಸುವ ವಿಧಾನವು ನಮ್ಮ ತೋಟದಲ್ಲೊಂದು ಬದಲಾವಣೆಗೆ ಪ್ರೇರಣೆಯಾದೀತು. ಅವರೊಂದು ಸಮಸ್ಯೆಯನ್ನು ಎದುರಿಸಿದ ನಮೂನೆ, ನಮ್ಮ ಒಂದು ಸಮಸ್ಯೆಯ ಪರಿಹಾರದ ದಿಕ್ಕು ತೋರಿಸೀತು.

“ಸಮೃದ್ಧಿ” ಬಳಗದೊಂದಿಗೆ ಕಳೆದೆರಡು ವರುಷಗಳ ಒಡನಾಟದ ಅನುಭವದಲ್ಲಿ ನಾನು ಗಮನಿಸಿದ ನಾಲ್ಕು ಮುಖ್ಯ ಅಂಶಗಳು ಹೀಗಿವೆ:
೧)ಯುವಜನರು ಕೃಷಿಯಿಂದ ದೂರವಾಗುತ್ತಿದ್ದಾರೆ ಎಂಬುದು ಹಲವರ ಅನಿಸಿಕೆ. ಆದರೆ, ಕೃಷಿಕರ ವೇದಿಕೆ “ಸಮೃದ್ಧಿ”ಯಲ್ಲಿ ಹಲವು ಯುವಕರು ಸಕ್ರಿಯರಾಗಿರುವುದು ಚೇತೋಹಾರಿ ಬೆಳವಣಿಗೆ. ಕಳೆದ ವರುಷದ ಕಾರ್ಯದರ್ಶಿ ಅರುಣ್ ಮೆಹಂದಳೆ, ಈ ವರುಷದ ಕಾರ್ಯದರ್ಶಿ ರಾಮ್ ಪ್ರತೀಕ್ ಕರಿಯಾಲ, ಕೋಶಾಧಿಕಾರಿ ಮರಿಕೆಯ ಎ.ಪಿ. ಸದಾಶಿವ ಅವರ ಮಗ ಸುಹಾಸ್ – ಇವರೆಲ್ಲರೂ ಕಾಲೇಜು ಶಿಕ್ಷಣ ಪೂರೈಸಿ, ಈಗ ಕೃಷಿಯಲ್ಲಿ ತೊಡಗಿಕೊಂಡವರು; “ಸಮೃದ್ಧಿ”ಯ ಕೆಲಸಗಳಿಗೆ ಕೈಜೋಡಿಸಿದವರು. ಯುವಜನರನ್ನು ಸೆಳೆದದ್ದು ಇದರ ದೊಡ್ದ ಸಾಧನೆ.

೨)ಕೃಷಿಕರಲ್ಲಿ ಸಾಹಸ ಪ್ರವೃತ್ತಿಯ ಕೊರತೆಯಿದೆ ಎಂಬುದು ಹಲವರ ಅನಿಸಿಕೆ. ಅದು ಸರಿಯಲ್ಲ ಎಂದು ಸ್ಪಷ್ಟವಾದದ್ದು “ಸಮೃದ್ಧಿ”ಯ ಕ್ಷೇತ್ರಭೇಟಿಗಳಿಂದ. ಪಂಜಿಗುಡ್ಡೆ ಈಶ್ವರ ಭಟ್ ಹಿತಾಚಿ ಯಂತ್ರದಿಂದ ಗುಡ್ಡಗಳನ್ನೇ ಬಗೆದು ಬಯಲಾಗಿಸಿ, ಅಡಿಕೆ ತೋಟ ಎಬ್ಬಿಸಿದ್ದು, ಕಡಮಜಲು ಸುಭಾಷ್ ರೈ ಪ್ರತಿ ಎಕ್ರೆಯಲ್ಲಿ ಅಧಿಕ ಸಂಖ್ಯೆಯ ಗೇರು ಸಸಿಗಳನ್ನು ಯಶಸ್ವಿಯಾಗಿ ಬೆಳೆಸಿದ್ದು, ಬಲ್ಯ ವಿಶ್ವೇಶ್ವರ ಭಟ್ ಅವರಿಂದ ತಮ್ಮ ತೋಟದಲ್ಲಿ ಒಂದು ಕಾರ್ಖಾನೆಯಂತೆ ಅಡಿಕೆ – ಕರಿಮೆಣಸಿನ ಕೃಷಿ, ನಡ ಗ್ರಾಮದ ಪ್ರಭಾಕರ ಮಯ್ಯರ ವಿವಿಧ ಕೃಷಿಪ್ರಯೋಗಗಳು – ಇವೆಲ್ಲ ಕೃಷಿಕರ ಸಾಹಸ ಪ್ರವೃತ್ತಿಯ ಅಪ್ಪಟ ನಿದರ್ಶನಗಳು.
೩)ಕೃಷಿಕರಲ್ಲಿ ಉದ್ಯಮಶೀಲತೆಯ ಕೊರತೆಯಿದೆ ಎಂಬುದೂ ಹಲವರ ಅನಿಸಿಕೆ. ಇದೂ ಸರಿಯಲ್ಲ ಎಂದು ಕಂಡು ಬಂದದ್ದು “ಸಮೃದ್ಧಿ”ಯ ಕ್ಷೇತ್ರಭೇಟಿಗಳಲ್ಲಿ. ಮುಂಡಾಜೆಯ “ದೋಸ್ತಿ ಸುಪಾರಿ” ಘಟಕದ ಧಿನೇಶ್ ಪಟವರ್ಧನರ ಅಡಿಕೆ – ಅಧಾರಿತ ಸೊಳ್ಳೆವಿಕರ್ಷಕ “ಮೊಸ್-ಕ್ವಿಟ್”, ಕೆದಿಲ ಹತ್ತಿರದ ಮುದ್ರಜೆಯ ಕೆ. ಸುಬ್ರಹ್ಮಣ್ಯ ಭಟ್ ಅವರ “ಹಾರ್ದಿಕ್ ಹರ್ಬಲ್ಸ್” ಘಟಕದ “ಸತ್ವಮ್” ಮೂಲಿಕಾ ಪಾನೀಯ – ಇವು ಕೃಷಿಕರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೆಲವು ಕಿರುಉದ್ಯಮಗಳು.
೪)ತಿಂಗಳಿಗೊಮ್ಮೆ “ಸಮೃದ್ಧಿ” ಏರ್ಪಡಿಸುವ ಕ್ಷೇತ್ರಭೇಟಿಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಕೃಷಿಯ ಬಗ್ಗೆ ಬಹಳಷ್ಟು ಕಲಿಯಬಹುದು. "ಉದಯವಾಣಿ"ಯ (ಬೆಂಗಳೂರು ಆವೃತ್ತಿ) ನನ್ನ ಅಂಕಣ "ಬಹುಧಾನ್ಯ"ದಲ್ಲಿ ಪ್ರಕಟವಾಗಿರುವ ನೆಟ್ಟಣಿಗೆ – ಮುಡ್ನೂರು ಗ್ರಾಮದ ಸರವು ಜಗನ್ನಾಥ ಶೆಟ್ಟಿ ಬಗ್ಗೆ “ಕರಿಮೆಣಸು ಕೃಷಿ ಯಶಸ್ಸಿಗೆ ಪಂಚಸೂತ್ರ” ಮತ್ತು ಪಡ್ನೂರಿನ ಪಂಜಿಗುಡ್ಡೆ ಈಶ್ವರ ಭಟ್ ಬಗ್ಗೆ “ಅಡಿಕೆ ಕೃಷಿ ಯಶಸ್ಸಿಗೆ ಐದು ಸೂತ್ರಗಳು” ಇತ್ಯಾದಿ ಲೇಖನಗಳ ಹೂರಣವೇ ಇದಕ್ಕೆ ಉದಾಹರಣೆ.

“ಸಮೃದ್ಧಿ”ಯ ೨೫ನೇ ವರುಷದ ಆರಂಭದ ಸಂಭ್ರಮಾಚರಣೆ ಜರಗಿದ್ದು ೨೯ ಅಕ್ಟೋಬರ್ ೨೦೧೭ರಂದು, ಪುತ್ತೂರಿನ ಹತ್ತಿರದ ಕೋಟೆಮುಂಡುಗಾರಿನ ಸಹಕಾರಿ ಸಂಘದ ಸಭಾಭವನದಲ್ಲಿ, ಈಗಿನ ಅಧ್ಯಕ್ಷರಾದ ಆರ್.ಕೆ. ಭಾಸ್ಕರ ಅವರ ಮುಂದಾಳುತನದಲ್ಲಿ. ಅಂದು ಅಲ್ಲಿ ದಿನವಿಡೀ ಜರಗಿದ ಕಾರ್ಯಕ್ರಮಗಳಲ್ಲಿ ಸುಮಾರು ೫೦೦ ಕೃಷಿಕರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಯಾಕೆಂದರೆ ಕಳೆದ ೨೪ ವರುಷಗಳಲ್ಲಿ ಯಾವುದೋ ಒಂದು ರೀತಿಯಲ್ಲಿ “ಸಮೃದ್ಧಿ” ಅವರ ಬದುಕನ್ನು ತಟ್ಟಿತ್ತು.

ಪುತ್ತೂರಿನಿಂದ ಪ್ರಕಟವಾಗುವ “ಅಡಿಕೆ ಪತ್ರಿಕೆ” ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀಪಡ್ರೆಯವರು ೨೪ ವರುಷಗಳ ಮುಂಚೆ ನೀಡಿದ ಒಂದು ಐಡಿಯಾ “ಸಮೃದ್ಧಿ”ಯಾಗಿ ರೂಪುಗೊಂಡದ್ದೇ ಒಂದು ವಿಸ್ಮಯ. ಆರಂಭದ ವರುಷಗಳಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು “ಅಡಿಕೆ ಪತ್ರಿಕೆ” ತಂಡ “ಸಮೃದ್ಧಿ”ಗೆ ನೀಡಿದ ಸಹಕಾರವನ್ನು ಮರೆಯಲಾಗದು.

ಈಗ ಹಿಂತಿರುಗಿ ನೋಡಿದಾಗ, ಸ್ವಂತ ಕಚೇರಿಯಿಲ್ಲದೆ, ಲಕ್ಷಗಟ್ಟಲೆ ರೂಪಾಯಿ ಹಣವಿಲ್ಲದೆ, ಯಾವ ಸಿಬ್ಬಂದಿಯೂ ಇಲ್ಲದೆ ೨೫ ವರುಷ “ಸಮೃದ್ಧಿ” ಗಿಡಗೆಳೆತನ ಸಂಘ ನಡೆದು ಬಂದದ್ದೇ ಒಂದು ಪವಾಡ. ಇಂತಹ ಪವಾಡಗಳು ಕೃಷಿಕರ ಬದುಕನ್ನು ಸಮೃದ್ಧವಾಗಿಸಲು ಪ್ರತಿಯೊಂದು ಜಿಲ್ಲೆಯಲ್ಲಿಯೂ ನಡೆಯುವಂತಾಗಲಿ.
 

Comments

Submitted by kavinagaraj Fri, 04/13/2018 - 13:18

ಉತ್ತಮ ಕಾರ್ಯ. ಇಂತಹ ಜಾಗೃತಿ ನಾಡಿನೆಲ್ಲೆಡೆ ಆಗಬೇಕು. ಅಕ್ಕ ಪಕ್ಕದ ಜಿಲ್ಲೆಗಳಲ್ಲೂ ಸಮೃದ್ಧಿಯ ಕಾರ್ಯಕರ್ತರು ಪ್ರೇರಣೆ ನೀಡಿದರೆ ವಿಸ್ತಾರಕ್ಕೆ ಸಹಕಾರಿ.