ವಸಂತನ ಹಕ್ಕಿಗಳು

ವಸಂತನ ಹಕ್ಕಿಗಳು

ಚಿತ್ರ

1. ರೂಪಕಗಳು
 
ಶಿಶಿರದಲ್ಲಿ ಅವಿತ 
ಕೊರಳ ಬಿಸಿಯಾರದ ಮಾತು
ಹೊಸ್ತಿಲೇರಿದ ಹೊಸ ಋತು 
ಒಡೆವ ಸಂತಸದ ಚಿಗುರು
ಚಿಲಿಪಿಲಿ ಕುಕು ಕಲರವ ಕೇಕೆಗಳು
ವಸಂತನಿಗಂಟಿದ ರೂಪಕಗಳು
 
 
2. ಕಾಲರ್ ಟ್ಯೂನ್
 
ವಸಂತನಿಗೆ ವೈವಿಧ್ಯದ
ಕಾಲರ್ ಟ್ಯೂನ್
ಹರಿಬಿಡುವ
ಬಣ್ಣ ಬಣ್ಣದ 
ವಿಧವಿಧ ಹಕ್ಕಿಗಳು
 
 
3. ಸಾಣೆ
 
ರಾತ್ರಿ ಅಚಾನಕ ಮಳೆ ಸುರಿದು 
ಹೊಳೆವ ಬೆಳಗು 
ವಸಂತನ ಸೊಂಪಿಗೆ
ಹಕ್ಕಿ ಹೊರಳಿಸಿ ಕೊರಳು
ಹಿಡಿದಿದೆ ಸಾಣೆ ಇಂಪಿಗೂ!
 
ಇನಿಯಳ ಸೆಳೆವ 
ಹಕ್ಕಿಯ ಕಲೆ ಎಂಥ ಸೊಬಗು !! 
 
 
4. ಯಾವ ಘರಾನ
 
ಎಷ್ಟು ತೆರನಾದ ನಾದಗಳಿವು
ತಾಲಮಾನಗಳ ಅರಿಯದವು
ಇಂಪನೆಂದಿಗೂ ತೊರೆಯದವು
ಯಾವ ಘರಾನದ ಹಕ್ಕಿಗಳಿವು!
 
                       - ಅನಂತ ರಮೇಶ್
 

Rating
No votes yet

Comments