ದೇಸಿ ಅಕ್ಕಿ ತಳಿಗಳು: ಪೋಷಕಾಂಶಗಳ ಖಜಾನೆ

Submitted by addoor on Tue, 05/01/2018 - 17:16

ನಮ್ಮ ದೇಶದಲ್ಲಿ ಅಕ್ಕಿಯ ಹುಟ್ಟು ೧೪,೦೦೦ ವರುಷಗಳ ಹಿಂದೆ ಎಂಬುದೊಂದು ಅಂದಾಜು. ಮುಂದಿನದು ನಮ್ಮ ರೈತರ ಪ್ರಯೋಗಶೀಲತೆಯ ಸಾಹಸಗಾಥೆ. ಅದರಿಂದಾಗಿ ಕಳೆದ ೧೦,೦೦೦ ವರುಷಗಳಲ್ಲಿ ನಮ್ಮ ದೇಶದಲ್ಲಿ ೧,೧೦,೦೦೦ ಭತ್ತದ ತಳಿಗಳ ಅಭಿವೃದ್ಧಿ. ಆದರೆ ಈಗ ಉಳಿದಿರುವುದು ಕೇವಲ ೬,೦೦೦ ಭತ್ತದ ತಳಿಗಳು. ಇದಕ್ಕೆ ಪ್ರಧಾನ ಕಾರಣ ೧೯೭೦ರ ದಶಕದ ಹಸುರು ಕ್ರಾಂತಿ ಮತ್ತು ಅದರೊಂದಿಗೆ ನಮ್ಮ ಹಳ್ಳಿಗಳಿಗೆ ಲಗ್ಗೆಯಿಟ್ಟ ಏಕತಳಿ ಕೃಷಿ ಮತ್ತು ಸಂಕರ ತಳಿಗಳು. ಈ ಸತ್ಯಾಂಶ ತಿಳಿದು, ದೇಸಿ ಭತ್ತದ ತಳಿಗಳನ್ನು ಉಳಿಸಲು ಪಣತೊಟ್ಟರು ಶೀಲಾ ಬಾಲಾಜಿ.

ಇದೆಲ್ಲ ಶುರುವಾದದ್ದು ಕೆಲವು ವರುಷಗಳ ಮುಂಚೆ. ಜನಹಿತ ಕಾಯಕಕ್ಕಾಗಿ “ಏಮ್ ಫಾರ್ ಸೇವಾ” ಎಂಬ ಸರಕಾರೇತರ ಸಂಸ್ಥೆ ಸ್ಥಾಪಿಸಿದ್ದರು ಶೀಲಾ ಬಾಲಾಜಿ. ತಮಿಳುನಾಡಿನ ತಂಜಾವೂರು ಜಿಲ್ಲೆಯ ಮಂಜಕ್ಕುಡಿ ಗ್ರಾಮದಲ್ಲಿ ಕಾವೇರಿ ನದಿ ಬಯಲಿನ ಭತ್ತದ ಹೊಲಗಳ ನಡುವೆ ಸುತ್ತಾಡುತ್ತಾ ರೈತರನ್ನು ಅವರು ಸಂಪರ್ಕಿಸುತ್ತಿದ್ದರು. ಒಂದು ದಿನ ರೈತನೊಬ್ಬ ರಾಸಾಯನಿಕ ಪೀಡೆನಾಶಕವನ್ನು ಬಿರುಸಿನಿಂದ ಸಿಂಪಡಿಸುತ್ತಿದ್ದುದನ್ನು ಕಂಡರು. ಆ ಅಪಾಯಕಾರಿ ವಿಷಕ್ಕೆ ಒಡ್ಡಿಕೊಳ್ಳುತ್ತಿದ್ದ ರೈತನಿಗೆ ಅದರಿಂದಾಗುವ ಆರೋಗ್ಯ ಗಂಡಾಂತರಗಳನ್ನು ವಿವರಿಸಿದರು. ಆದರೆ, ಆ ರೈತ ಇವರ ಮಾತಿಗೆ ಕಿವಿಗೊಡಲಿಲ್ಲ; ತಾನು ಬೆಳೆಸುತ್ತಿರುವುದು ಸಂಕರ ಭತ್ತದ ತಳಿ; ವಿಷ ರಾಸಾಯನಿಕ ಸಿಂಪಡಿಸದಿದ್ದರೆ ಫಸಲು ಕೈಸೇರದು ಎಂಬುದಾತನ ಪ್ರತಿಕ್ರಿಯೆ.

ಶೀಲಾ ಬಾಲಾಜಿಗೆ ಆಗಿನಿಂದ ಒಂದೇ ಚಿಂತೆ: ಅಂತಹ ರೈತರ ಆತಂಕಗಳಿಗೆ ಪರಿಹಾರ ಏನು? ಅದಕ್ಕಾಗಿ ರೈತರ ಹೊಲಗಳಿಗೆ ಭೇಟಿ ನೀಡುತ್ತಲೇ, ಶತಮಾನಗಳ ಮುಂಚೆ ಭಾರತದಲ್ಲಿದ್ದ ಭತ್ತದ ತಳಿವೈವಿಧ್ಯದ ಬಗ್ಗೆ ತಿಳಿದುಕೊಳ್ಳಲು ಶುರುವಿಟ್ಟರು. ಜೊತೆಗೆ ಆ ತಳಿಗಳ ವಿವಿಧ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳ ಬಗ್ಗೆಯೂ ಅವರಿಂದ ಸಂಶೋಧನೆ. ಆ ದೇಸಿ ತಳಿಗಳು ನಮ್ಮ ದೇಶದ ಮಣ್ಣು ಮತ್ತು ಹವಾಮಾನದಲ್ಲಿ ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ, ಚೆನ್ನಾಗಿ ಬೆಳೆಯುತ್ತಿದ್ದವು ಎಂಬುದು ಅವರಿಗೆ ಮನದಟ್ಟಾಯಿತು. ಆದ್ದರಿಂದ, ಏಮ್ ಫಾರ್ ಸೇವಾದ ೪೦ ಎಕ್ರೆ ಜಮೀನಿನಲ್ಲಿ ಭತ್ತದ ದೇಸಿ ತಳಿಗಳನ್ನೇ ಬೆಳೆಯಬೇಕೆಂಬ ಸಂಕಲ್ಪ ಮಾಡಿದರು.

ಈ ನಡುವೆ, ಆದಿರಂಗಮ್ ಗ್ರಾಮದಲ್ಲಿ ಜರಗುತ್ತಿದ್ದ “ನೆಲ್ ತಿರುವಿಜ” ಎಂಬ ಧಾನ್ಯಗಳ ಉತ್ಸವದ ಬಗ್ಗೆ ಶೀಲಾ ಅವರಿಗೆ ಮಾಹಿತಿ. ಅದರಿಂದ ಪ್ರೇರಿತರಾಗಿ ೨೦೧೩ರಿಂದ ಮಂಜಕ್ಕುಡಿ ಗ್ರಾಮದಲ್ಲಿಯೂ ಆ ಉತ್ಸವ ಸಂಯೋಜಿಸಲು ಶುರು. ಈ ಉತ್ಸವದ ಮೂಲಕ ಶೀಲಾರಿಗೆ ಪ್ರತಿ ವರುಷ ೫೦೦ಕ್ಕಿಂತ ಅಧಿಕ ರೈತರ ಪರಿಚಯ; ದೇಸಿ ಭತ್ತದ ತಳಿಗಳ ಬೀಜ ಸಂಗ್ರಹಣೆಗೆ ಅವರಿಂದ ಸಹಾಯ.
ಮೊದಲ ಧಾನ್ಯಗಳ ಉತ್ಸವದ ನಂತರ, ಹೆಚ್ಚೆಚ್ಚು ರೈತರಿಗೆ ಏಮ್ ಫಾರ್ ಸೇವಾದ ಭತ್ತದ ಕೃಷಿಯ ಯಶಸ್ಸಿನ ಬಗ್ಗೆ ತಿಳಿಯಿತು. ಹಾಗಾಗಿ, ಎರಡನೇ ವರುಷದ ಧಾನ್ಯಗಳ ಉತ್ಸವದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಅವಕಾಶವನ್ನು ಶೀಲಾ ಚೆನ್ನಾಗಿ ಬಳಸಿಕೊಂಡರು – ದೇಸಿ ಭತ್ತದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದರೆ ಆಗುವ ಲಾಭಗಳ ಬಗ್ಗೆ ರೈತರಿಗೆ ತಿಳಿಸಲಿಕ್ಕಾಗಿ. ಅವರ ಡೈರಿಯಲ್ಲಿರುವ ೪೩ ದನಗಳಿಗೆ ಸಾವಯವ ಆಹಾರವನ್ನೇ ತಿನ್ನಿಸಿ, ಅವುಗಳ ಸೆಗಣಿ ಮತ್ತು ಮೂತ್ರದಿಂದ ೪೦ ಎಕ್ರೆ ಭತ್ತದ ಹೊಲಗಳಿಗೆ ಬೇಕಾಗುವಷ್ಟು ಅತ್ಯುತ್ತಮ ಸಾವಯವ ಗೊಬ್ಬರ ಸಿಗುತ್ತಿರುವುದನ್ನು ರೈತರಿಗೆ ವಿವರಿಸಿದರು. ಇದರಿಂದಾಗಿ, ಹಲವು ರೈತರಿಗೆ ಸಾವಯವ ಪದ್ಧತಿಯ ಪ್ರಾಮುಖ್ಯತೆ ಮನವರಿಕೆಯಾಯಿತು; ಆ ರೈತರು ದೇಸಿ ಭತ್ತದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯಲು ಶುರು ಮಾಡಿದರು.

ನಲುವತ್ತು ಎಕ್ರೆಗಳಲ್ಲಿ ಭತ್ತದ ಕೃಷಿಯ ಎರಡನೆಯ ಬೆಳೆಯಿಂದ ಶೀಲಾ ಅವರಿಗೆ ಸಿಕ್ಕಿದ್ದು ಭರ್ಜರಿ ಇಳುವರಿ. ಅದನ್ನು ಮಾರಾಟ ಮಾಡುವ ಇರಾದೆಯಿಂದ ತನ್ನ ಪರಿಚಿತರನ್ನೆಲ್ಲ ವಿಚಾರಿಸಿದರು: “ದೇಸಿ ತಳಿಯ ಅಕ್ಕಿ ಬೇಕೇ?” ಯಾರೂ ಖರೀದಿಸಲು ಆಸಕ್ತಿ ತೋರಲಿಲ್ಲ. ಈಗಿನ ತಲೆಮಾರಿನವರಿಗೆ ಬಿಳಿಯಕ್ಕಿ ತಿನ್ನುವುದೇ ಅಭ್ಯಾಸವಾಗಿತ್ತು; ದೇಸಿ ಅಕ್ಕಿ ತಳಿಗಳ ರುಚಿ ಅಥವಾ ಪರಿಮಳದ ಬಗ್ಗೆ ಅವರಿಗೆ ಗೊತ್ತೇ ಇಲ್ಲ.

ಆಗ ಶೀಲಾ ಬಾಲಾಜಿಗೆ ಅರ್ಥವಾಯಿತು: ದೇಸಿ ಭತ್ತದ ತಳಿಗಳನ್ನು ಶಾಶ್ವತವಾಗಿ ಉಳಿಸಬೇಕಾದರೆ ಅವನ್ನು ಬೆಳೆಸಿದರೆ ಸಾಲದು; ಜೊತೆಗೆ ಅವನ್ನು ಜನಪ್ರಿಯಗೊಳಿಸಬೇಕು. ಇದು ಸುಲಭ. ಪ್ರತಿಯೊಬ್ಬರೂ ಈ ಕಾಯಕಕ್ಕೆ ಕೈಜೋಡಿಸ ಬಹುದು. ದೇಸಿ ಅಕ್ಕಿ ತಳಿಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ನಿತ್ಯಬಳಕೆಗಾಗಿ ನಾವು ಧಾನ್ಯ ಖರೀದಿಸುವ ಅಂಗಡಿಗಳಲ್ಲಿ ಅವನ್ನೇ ಕೇಳಬೇಕು. ಆಗ ಮಾರಾಟಗಾರರೂ ಅವನ್ನು ರೈತರಿಂದ ಖರೀದಿಸಲು ಶುರು ಮಾಡುತ್ತಾರೆ.
ಈ ಚಿಂತನೆ, ಚೆನ್ನೈಯ ಮೈಲಾಪುರದ ದೇಸಿಕ ರಸ್ತೆಯಲ್ಲಿ “ಸ್ಪಿರಿಟ್ ಆಫ್ ದಿ ಅರ್ತ್” ಎಂಬ ಮಾರಾಟ ಮಳಿಗೆಯ ಆರಂಭಕ್ಕೆ ಕಾರಣವಾಯಿತು (ಸಂಪರ್ಕ (೦)೯೫೦೦೦೮೨೧೪೨). ಆ ಮಳಿಗೆಯಲ್ಲಿ ಈ ದೇಸಿ ಅಕ್ಕಿ ತಳಿಗಳು ಸದಾ ಲಭ್ಯ: ಕಾಟುಯಾನಮ್, ಕಾಲಾಜೀರ, ಕರುಪ್ಪು ಕಾವುನಿ, ಕಿಚಿಲಿ ಚಂಪಾ, ಇಳುಪ್ಪಾಯಿ ಪೂಚಂಪಾ, ಮಾಪಿಳ್ಳೈ ಚಂಪಾ ಮತ್ತು ತೂಯಮಲ್ಲಿ. ಇವೆಲ್ಲವೂ ಪೋಷಕಾಂಶಭರಿತ ಹಾಗೂ ವಿಶೇಷ ಔಷಧೀಯ ಗುಣಗಳ ಅಕ್ಕಿ ತಳಿಗಳು.

ಈ ದೇಸಿ ಅಕ್ಕಿ ತಳಿಗಳ ಪೋಷಕಾಂಶಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಅವರು ಅನುಸರಿಸುವ ಸಂಸ್ಕರಣಾ ವಿಧಾನ: ಭತ್ತವನ್ನು ಕೈಗಳಿಂದ ಕುಟ್ಟಿ ಅಕ್ಕಿ ಮಾಡುವುದು ಮತ್ತು ಅಕ್ಕಿಯ ತೆಳು ಕವಚ ರಕ್ಷಿಸಲಿಕ್ಕಾಗಿ ಸೆಮಿ-ಪಾಲಿಷ್ ಮಾಡುವುದು. ಈ ಅಕ್ಕಿಗಳ ಪ್ಯಾಕೆಟಿನಲ್ಲಿ ಮಂಜಕ್ಕುಡಿ ಗ್ರಾಮದ ನಕ್ಷೆ ಇದೆ. ಪ್ಯಾಕೆಟಿನ ಸ್ಟಿಕ್ಕರಿನಲ್ಲಿ ಅಕ್ಕಿ ತಳಿಯ ಹೆಸರು ಇತ್ಯಾದಿ ವಿವರಗಳಿವೆ. ದೇಸಿ ಅಕ್ಕಿ ಬೇಯಿಸುವ ಬಗ್ಗೆ ನಿರ್ದೇಶನಗಳು ಮತ್ತು ಆರೋಗ್ಯದಾಯಕ ವಿಷಯಗಳ ಮಾಹಿತಿ ಒಂದು ಕರಪತ್ರದಲ್ಲಿ ಲಭ್ಯ. ಆ ಮಳಿಗೆಯ ತರಬೇತಾದ ಸಿಬ್ಬಂದಿ, ದೇಸಿ ಅಕ್ಕಿ ತಳಿಗಳ ಸೂಕ್ತ ಬಳಕೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ.
ನಮಗಾಗಿ, ನಮ್ಮ ಮಕ್ಕಳು – ಮೊಮ್ಮಕ್ಕಳಿಗಾಗಿ, ದೇಸಿ ಅಕ್ಕಿ ತಳಿಗಳನ್ನು ಉಳಿಸಲೇ ಬೇಕಾದ ಜರೂರಿನ ಬಗ್ಗೆ ಶೀಲಾ ಬಾಲಾಜಿ ಅವರ ಮನಮುಟ್ಟುವ ಈ ಮಾತುಗಳನ್ನು ಕೇಳಿ: “ಭಾರತಕ್ಕೆ ಮೊಟ್ಟಮೊದಲ ಭತ್ತದ ಮಿಲ್ಲಿಂಗ್ ಯಂತ್ರ ಬಂದದ್ದು ೧೯೧೦ರಲ್ಲಿ. ಆಗಿನಿಂದ ನಾವು ತಿನ್ನುವ ಅಭ್ಯಾಸವೇ ಬದಲಾಗಿ ಹೋಯಿತು. ಈಗ ಬಿಳಿಯಕ್ಕಿ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತಿದೆ. ಆದರೆ, ಪ್ರತಿಯೊಂದು ಧಾನ್ಯವೂ ಇನ್ನೊಂದರಷ್ಟೇ ಉತ್ತಮ. ನಾವು ಅದನ್ನು ಸೂಕ್ತ ರೀತಿಯಲ್ಲಿ ತಿನ್ನಬೇಕು ಅಷ್ಟೇ. ಭಾರತದಲ್ಲಿ, ಶಿಶುಗಳಿಗೆ ನಾವು ತಿನ್ನಿಸುವ ಮೊದಲ ಘನ ಆಹಾರವೇ ಅಕ್ಕಿಯ ಅನ್ನ. ಯಾರಾದರೂ ತೀರಿಕೊಂಡಾಗಲೂ ನಾವು ಆಕ್ಕಿಯನ್ನು ಪಕ್ಕದಲ್ಲಿ ಇಡುತ್ತೇವೆ. ಹೀಗೆ, ನಮ್ಮ ಸಂಸ್ಕೃತಿಯಲ್ಲಿ ಅಕ್ಕಿ ಹಾಸುಹೊಕ್ಕಾಗಿದೆ. ಯಾಕೆಂದರೆ, ನಮ್ಮ ಭೌಗೋಳಿಕ ಮತ್ತು ಹವಾಮಾನ ಪರಿಸ್ಥಿತಿಗಳು ಅಕ್ಕಿಯನ್ನು ಈ ಮಣ್ಣಿನ ಅತ್ಯಂತ ಪೋಷಕಾಂಶಭರಿತ ಧಾನ್ಯವನ್ನಾಗಿ ಮಾಡಿವೆ; ಅದು ಅತ್ಯಂತ ಕಡಿಮೆ ಅಲರ್ಜಿದಾಯಕ ಧಾನ್ಯವೂ ಹೌದು. ಆದ್ದರಿಂದ, ಅಕ್ಕಿ ಎಂದರೆ ಹೆದರಬೇಡಿ. ಅದು ಏಕದಳ ಧಾನ್ಯಗಳ ರಾಣಿ. ಅಕ್ಕಿಯನ್ನು ಸರಿಯಾಗಿ ತಿಂದರೆ, ಜಗತ್ತಿನಲ್ಲಿ ಅದಕ್ಕಿಂತ ಉತ್ತಮ ಏಕದಳ ಧಾನ್ಯ ಬೇರೆ ಯಾವುದೂ ಇಲ್ಲ.”   

ಫೋಟೋ: ಸ್ಪಿರಿಟ್ ಆಫ್ ದಿ ಅರ್ತ್ ಮಾರಾಟ ಮಳಿಗೆ, ಚೆನ್ನೈ