ಬುದ್ಧ ಕೃಷಿ
ಚಿತ್ರ
ಅರಮನೆಯ ಅಂಗಳದವನು
ಕೆಸರ ಹೊಲಕ್ಕೆ ಕಾಲಿಡುವನೆ!
ನಳನಳಿಸುವ ಕಳೆಯ ಕಿತ್ತು
ಪೈರುಗಳಾರೈಕೆ ಮಾಡುವನೆ!
ಬೆಳೆದ ಬೆಳೆಯ ಚೈತನ್ಯ ಹೀರುವನೆ!
ಆದರಿವನೋ...
ಅಮೃತ ಮಹಲಿನಿಂದ ನಿವೃತ್ತಿಗೊಂಡು
ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?!
ಹೆಪ್ಪುಗಟ್ಟಿದ್ದ ನಂಬಿಕೆಗಳ
ದ್ರವಿಸಿ ದೂರಿಸಿ
ಮೌಢ್ಯ ಕಳೆಗಳ ಬೇರ ಕಳಚಿ
ಕಳೆತು ರೈತನಾದವನು!
ಚಿತ್ತಕ್ಕೆ ಚಿಂತನೆಯ ನೀರ
ನಿರಂತರ ಹನಿಸಿ
ಬಿಸಿಯುಣಿಸಿ ನಿಷ್ಠುರ ಸತ್ಯ
ಬೆಳೆವ ಕೃಷಿಕನಾದವನು
ಬೆಳೆದ ಚಿಂತನೆಯ ಬೆಳೆಯ
ಬಳಿ ಬಂದವರ ಹೊಲಗಳಿಗೆರಚಿ
ವಿಸ್ತರದ ಬಿತ್ತನೆಗೆ ತೊಡಗಿದವನು
ಬೆಳೆದವರು ಬೆಸೆದು
ದೆಸೆದೆಸೆಗೂ ಬುದ್ಧನುಡಿ
ಬೀಜಗಳ ಹರಡಿದರು
ಕಳೆ ಬೆಳೆಯುವುದು ನಿಂತಿಲ್ಲ
ಬುದ್ಧ ಕೃಷಿಯೂ ನಿಲ್ಲದು
- ಅನಂತ ರಮೇಶ್
(ಚಿತ್ರ ಕೃಪೆ: ಪಿಕ್ಸಾಬೆ)
Rating
Comments
ಉ: ಬುದ್ಧ ಕೃಷಿ
ವೈಚಾರಿಕ ಕ್ರಾಂತಿ ನಿಂತ ನೀರಾಗಬಾರದು ಎಂಬ ಸಂದೇಶ!
In reply to ಉ: ಬುದ್ಧ ಕೃಷಿ by kavinagaraj
ಉ: ಬುದ್ಧ ಕೃಷಿ
ತಮ್ಮ ನುಡಿ ಸತ್ಯ. ಪ್ರತಿಕ್ರಿಯೆಗೆ ಧನ್ಯವಾದಗಳು.