ನೋವು ನಲಿವುಗಳ ಜೊತೆಗಿನ ಹಳ್ಳಿಸಂಬಂಧ:

ನೋವು ನಲಿವುಗಳ ಜೊತೆಗಿನ ಹಳ್ಳಿಸಂಬಂಧ:

ಹೀಗೆ ಒಮ್ಮೆ ಒಂದಿಷ್ಟು ದಿನ ಆಫೀಸಿಗೆ ರಜೆ ಹಾಕಿ ನೆಮ್ಮದಿಯಿಂದ ನಾಲ್ಕು ದಿನ ಊರಲ್ಲಿ ಇರೋಣ ಎಂದು ನಿರ್ಧರಿಸಿ ಊರಿಗೆ ಹೊರಟೆ. ಹೇಳಿ ಕೇಳಿ ಬೇಸಿಗೆ ಕಾಲ. ಸೂರ್ಯನು ಅದೇಷ್ಟು ಪ್ರಖರವಾದ ಕಿರಣಗಳಿಂದ ಭೂಮಿಯನ್ನು ಸುಡುತ್ತಾನೆ ಎಂಬುದು ಅಂದೆ ತಿಳಿದಿದ್ದು. ವಾತಾವರಣದಲ್ಲಿ ಬಿಸಿಗಾಳಿ, ಸಿಕ್ಕಾಪಟ್ಟೆ ಸೆಕೆ. ಕಾದ ಕಾವಲಿಯಂತೆ ಮಾಡಿತ್ತು ನಮ್ಮ ಹಳ್ಳಿಯನ್ನು.
ಬೆಂಗಳೂರನ್ನು ಸೇರಿ ಸುಮಾರು ವರ್ಷವಾಗಿತ್ತು. ಇಲ್ಲಿಯ ವಾತಾವರಣ ಎಂಬುದು ಯಾವ ನಗರಗಳಲ್ಲೂ ಕಾಣಸಿಗದು. ಅದಕ್ಕಾಗಿ ಅಲ್ಲವೇ ಪ್ರತಿಯೊಬ್ಬರು ಅತಿಯಾಗಿ ಮಹಾನಗರಿ ಬೆಂಗಳೂರನ್ನು ಇಷ್ಟ ಪಡೋದು. ಯಾವುದೇ ಇನ್ನುಳಿದ ನಗರಕ್ಕೆ ಹೋಗಿ, ನಿಮಗೆ ಬೆಂಗಳೂರಿನ ವಾತಾವರಣದ ಅನುಭವ ಸಿಗುವುದಿಲ್ಲ. ಯಾವುದಾದರೊಂದು ಹೆಚ್ಹೋ ಕಡಿಮೆಯೊ ಇರುತ್ತದೆ. ಇಂತಹ ನಗರಿಯಲ್ಲಿ ಇದ್ದುದರಿಂದ ಊರ ಸ್ಥಿತಿಗತಿಗಳನ್ನು ಮರೆತಂತೆ ಇದ್ದೆ. ಆದರೆ ರಜೆಯ ನಿಮಿತ್ತ ಊರಿಗೆ ಬಂದಾಗ ಊರಿನಲ್ಲಿ, ವಯಸ್ಸಿನಲ್ಲಿ ಹಿರಿಯರಾದ ರಾಮಜ್ಜ ನನಗೆ ಊರಿನ ಬಗ್ಗೆ ಅವರು ತಿಳಿದುಕೊಂಡಿರುವ ಬಗೆಗೆ ಕೊಟ್ಟ ವಿವರಣೆ ಹಾಗೂ ಊರಿನ ಸ್ಪಷ್ಟ ಚಿತ್ರಣ ನನಗೆ ಊರನ್ನು ಬಿಟ್ಟು ಯಾಕೆ ನಗರಪ್ರದೇಶವನ್ನ ಸೇರಿದೆ ಎಂದು ನನ್ನನ್ನು ನಾನೇ ಜರಿದು ಕೊಳ್ಳುವಂತೆ ಮಾಡಿತು.
ಊರಿಗೆ ಹೋದ ಮಾರನೆಯ ದಿನ ಸಂಜೆಯ ಹೊತ್ತಿಗೆ ಹೀಗೆ ಊರ ಸುತ್ತಾಡಿ ಬರೋಣ ಎಂದು ಹೊಲದ ಕಡೆ ಹೆಜ್ಜೆ ಹಾಕಿದೆ. ಊರ ಹಿರಿತಲೆ, ಸಜ್ಜನ ರಾಮಜ್ಜನ ಮನೆಯು ನಮ್ಮ ಹೊಲಕ್ಕೆ ತಾಗಿಗೊಂಡು ಇದ್ದುದರಿಂದ ನೇರವಾಗಿ ಅಲ್ಲಿಗೆ ಧಾವಿಸಿದೆ. ನಮ್ಮಲ್ಲಿ ಏನಿದ್ದರೂ ಪುಸ್ತಕದ ವಿಷಯ ಅಥವಾ ಅಂತರ್ಜಾಲಗಳ ವಿಷಯಗಳೇ ತುಂಬಿಕೊಂಡಿರುವಂತ ಸಂಧರ್ಭದಲ್ಲಿ, ಪ್ರತಿಯೊಂದು ಅನುಭವದ ಮೂಲಕ ತಿಳಿದುಕೊಂಡಿರುವ ರಾಮಜ್ಜನಲ್ಲಿ ಕುಳಿತು ಮಾತಾಡುವ ಮನಸ್ಸಾಯಿತು. ಆಗಷ್ಟೇ ಚಹಾ ಕುಡಿದು ಎಲೆಗೆ ಸುಣ್ಣ ಸವರುತ್ತಾ ಮನೆಯ ಪಡಶಾಲೆಯಲ್ಲಿ ಕುಳಿತಿದ್ದರು. ಹೋಗಿ ನಮಸ್ಕರಿಸಿದೆ.
ವಯಸ್ಸಾದಂತೆ ಇಂದ್ರಿಯಗಳು ತಮ್ಮ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ ಎಂಬಂತೆ ಸುಮಾರು 85ರ ಆಸುಪಾಸಿನ ರಾಮಜ್ಜನಿಗೆ ನನ್ನ ಪರಿಚಯ ಹೇಳಿಕೊಂಡ ನಂತರ ತಿಳಿಯಿತು. "ಓ ನೀನು ಬೇಸಾಯ ಮಾಡಲಾಗದೆ ಊರ ಬಿಟ್ಟು ಪೇಟೆ ಸೇರಿದವನು, ಸುಮಾರು ವರ್ಷಗಳಾಯಿತು, ಪೇಟೆ ಮನುಷ್ಯನ ತರ ಕಾಣಿಸುತ್ತಿದ್ದೀಯಾ ಅದಕ್ಕಾಗಿ ಗುರುತು ಸಿಗಲಿಲ್ಲ" ಅಂದ. ನನಗೆ ಸ್ವಲ್ಪ ಮಟ್ಟಿನ ಅರಿವಾಯಿತು ರಾಮಜ್ಜನಿಗೆ ಉದ್ಯೋಗ ಅರಸಿ ಪೇಟೆ ಹೋದವರ ಬಗ್ಗೆ ಅಷ್ಟೊಂದು ಒಳ್ಳೆಯ ಭಾವನೆಗಳಿಲ್ಲ ಎಂಬುದು. ಇವನೇ ಸರಿಯಾದ ವ್ಯಕ್ತಿ ನನ್ನಲ್ಲಿ ಕಾಡುತ್ತಿದ್ದ ಕೆಲವು ಪ್ರಶ್ನೆಗಳಿಗೆ ಇವನೇ ಸರಿಯಾಗಿ ಉತ್ತರ ಕೊಡಬಲ್ಲ ಎಂಬುದು ಮನದಟ್ಟಾಗಿ ಮಾತಿಗೆ ಕುಳಿತೆ.
ರಾಮಜ್ಜನಲ್ಲಿ ವಿಷಯಗಳನ್ನು ಕೆದಕಬೇಕು, ಹಳ್ಳಿಯ ಇತಿಹಾಸವ ತಿಳಿಬೇಕು, ಆಗಿನ ಜನರು ಇಂದಿನ ಜನರ ಬಗ್ಗೆ ಅವನ ಅಭಿಪ್ರಾಯ ತಿಳಿಬೇಕು, ಅವಾಗಿನ ಕಾಲದ ಬೇಸಾಯ ಪದ್ದತಿ, ಧಾರ್ಮಿಕ, ಮನೋರಂಜನೆ, ವಿದ್ಯಾಭ್ಯಾಸ ಇನ್ನು ಮುಂತಾದ ವಿಷಯಗಳನ್ನು ಕೇಳಿ ತಿಳಿದುಕೊಳ್ಳಬೇಕು ಎಂಬ ಮನಸ್ಸಾಗಿ ಮಾತು ಮುಂದುವರಿಸಿದೆ. ಕೇಳಿದ ಪ್ರಶ್ನೆಗಳಿಗಿಂತ ಹೇಳಿದ ಉತ್ತರಗಳು ತಲೆ ತಿರುಗಿಸುವಂತಿತ್ತು. ಅದರಲ್ಲಿ ಆಯ್ದ ಪ್ರಶ್ನೆ ನಿಮ್ಮ ಮುಂದೆ ಹೇಳಲಿಚ್ಛಿಸುತ್ತೇನೆ. ಪ್ರಶ್ನೆ ನನ್ನದು ಹೀಗಿತ್ತು. ಅಜ್ಜ, ಭೂ ಸುಧಾರಣಾ ಕಾನೂನು ಜಾರಿಯಾದಾಗ ನಿಮ್ಮಲ್ಲಿದ್ದ ಆಸ್ತಿಯ ಕೆಲವು ಭಾಗ ಗೇಣಿ ಕೊಟ್ಟವರ ಪಾಲಾಯಿತಂತೆ ಹೌದ? ರಾಮಜ್ಜ ಉತ್ತರಿಸಿದ. "ಹೌದು ಮಗ, ಅಂದು ನಮ್ಮ ಮನೆಯ ಆಳುಗಳು ಹಾಗೂ ಗೇಣಿ ಬಂದವರ ಮೂಲಕ ನಾನು ಬೇಸಾಯ ಮಾಡುತ್ತಿದ್ದೆ. ಏಕೆಂದರೆ ನನಗೊಬ್ಬ ಮಗ ಇದ್ದ ಮಂದಮತಿ ಅವನು. ಪ್ರತಿಯೊಂದು ನಾನೇ ನಿಭಾಯಿಸಬೇಕಾಗಿತ್ತು. ಅಸಾಧ್ಯವಾದಾಗ ಹೀಗೆ ಗೇಣಿ ಕೊಡುತ್ತಿದ್ದೆ. ಆ ಅಮ್ಮ ಅಂದು ಭೂ ಸುಧಾರಣಾ ಕಾನೂನು ಜಾರಿಗೆ ತಂದಳೊ ನನ್ನಲ್ಲಿದ್ದ ಸುಮಾರು ಅರ್ಧದಷ್ಟು ಭಾಗ ಭೂಮಿ ಇಂತಿವರ ಪಾಲಾಯಿತು. ಯಾರದೋ ಭೂಮಿಯಲ್ಲಿ ಬೆವರು ಸುರಿಸಿ ದುಡಿಯುತ್ತಿದ್ದವರೆಲ್ಲ ಭೂಮಿ ಒಡೆಯರಾದರು. ಒಳ್ಳೆದಾಗಿರಲಿ. ಆದರೆ ಅದೇ ಭೂಮಿ ಇಂದು ಉಳುವರಿಲ್ಲದೆ, ಬಿತ್ತುವರಿಲ್ಲದೆ ಭಂಜರಾಗಿ ಹೋಗಿದೆ. ಕಾರಣ ಅವರ ಮಕ್ಕಳೆಲ್ಲ ನಿನ್ನಂತೆ ಪೇಟೆ ಸೇರಿದರು. ಅವರಿಗೆ ಈ ಅಲ್ಪ ಸ್ವಲ್ಪ ಭೂಮಿಯಲ್ಲಿ ದುಡಿಯಲು ಆಶಕ್ತಿ ಇಲ್ಲ. ಮಕ್ಕಳು ಚೆನ್ನಾಗಿರಬೇಕೆಂಬ ಭಾವನೆ ಎಲ್ಲರದು. ಮನೆಯಲ್ಲಿ ನನ್ನ ಪ್ರಾಯದವರು ಏನು ಮಾಡಿಯಾರು ಹೇಳು. ನೋಡು ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ನಮ್ಮ ಸುತ್ತ ಮುತ್ತಲಿನ ಹೊಲ ಹಾಳು ಬಿದ್ದಿದೆ. ಊರಿಗೆ ಊರೇ ಭಿಕೋ ಎನ್ನುತ್ತಿದೆ. ಯುವ ಜನತೆಯ ಸಂಚಾರವಿಲ್ಲ. ವಯಸ್ಸಾದವರು ಅಲ್ಲಲ್ಲಿ ಕೆಮ್ಮುವ ಶಬ್ದವಷ್ಟೇ ಕೇಳುತ್ತಿದ್ದೇವೆ. ನಮ್ಮ ಆಯಸ್ಸು ಮುಗಿದ ಮೇಲೆ ಈ ಊರಿನಲ್ಲಿ ಉಳಿವರು ಯಾರು ಮಗ? ನಾವು ಹುಟ್ಟಿ ಬೆಳೆದದ್ದು ಇಲ್ಲಿ, ಇದೆ ನಮಗೆ ಪ್ರಪಂಚ. ಇದನ್ನು ಬಿಟ್ಟು ನಾವಂತೂ ಹೋಗಲಾರೆವು. ಆದರೆ ನಮ್ಮ ಕಾಲದ ನಂತರ ನೀವೆಲ್ಲ ಬರುತ್ತೀರಾ ಮನೆಗೆ? ಮುಂದುವರಿಸುತ್ತೀರಾ ಕೃಷಿಯನ್ನು? ಎಲ್ಲರೂ ಬರದೆ ಹೋದರೆ ಮುಂದೊಂದು ದಿನ ದೇಶಕ್ಕೆ ಅನ್ನ ಕೊಡುವವ ಯಾರು ಮಗ? ನೋಡು ಮಗ ಮುಂದೊಂದು ದಿನ ನಾವು ಉಣ್ಣಲು ಉಪಯೋಗಿಸುವ ಅಕ್ಕಿಗೆ ಸರಕಾರ ಸಬ್ಸಿಡಿ ಕೊಟ್ಟರೂ ಯಾವುದೇ ಅಚ್ಚರಿಯಿಲ್ಲ. ನಾನು ಕೇಳಿದ್ದೇನೆ ಪೇಟೆಯಲ್ಲಿ ಉಸಿರಾಡಲು ಕಷ್ಟವಂತೆ, ತಿರುಗಾಡಲು ಕಷ್ಟವಂತೆ, ಆರೋಗ್ಯ ಸಮಸ್ಯೆ ಅಂತೆ. ಇಷ್ಟೆಲ್ಲಾ ಇರುವಾಗ ಯಾಕೆ ಮಗ ಅಲ್ಲಿಗೆ ಹೋಗಿ ನಾಲ್ಕು ಕಾಸಿನ ಆಸೆಗೆ ಆರೋಗ್ಯ ಹಾಳು ಮಾಡಿಕೊಳ್ತೀರಾ ಮಗ? ನೋಡು ನನಗೆ 85 ವರ್ಷ ಈಗಲೂ ನಾನು ತೋಟಕ್ಕೆ ಹೋಗಿ ಅಡಿಕೆ, ತೆಂಗಿನಕಾಯಿ ಬಿದ್ದರೆ ತಂದು ಹಾಕುತ್ತೇನೆ ಮನೆಗೆ. ಧನಕರುಗಳನ್ನು ಕಾಯುತ್ತೇನೆ. ನನ್ನಿ ವಯಸ್ಸಿನಲ್ಲಿ ನಿಮ್ಮಲ್ಲಿ ಆದಿತಾ ಮಗ?" ಎಂದ. ಕೇಳಿದ ಒಂದು ಪ್ರಶ್ನೆಗೆ ಇಡೀ ಹಳ್ಳಿಯ ಚಿತ್ರಣವನ್ನೇ ತೆರೆದಿಟ್ಟ ನಮ್ಮ ರಾಮಜ್ಜ.
ಹಿರಿಯವರು ಏನಾದರೂ ಹೇಳುತ್ತಾರೆ ಎಂದರೆ ಮೂಗು ಮುರಿಯುವರೇ ಹೆಚ್ಚಾಗಿರುವ ಸಂದರ್ಭದಲ್ಲಿ ಅವರ ಅನುಭವದ ನುಡಿಗಳು ನನಗೆ ನೂರಕ್ಕೆ ನೂರು ಸತ್ಯ ಎನಿಸಿತು. ನಾವು ಪೇಟೆಗಳಲ್ಲಿ ಅನುಭವಿಸುವ ಕಷ್ಟಗಳನ್ನು ಅವರು ಹೀಗೆಯೇ ಯಾರಿಂದಲಾದರು ತಿಳಿದುಕೊಂಡಿರಬಹುದು. ಆದರೆ ಅದನ್ನು ಅವರ ಅನುಭವಕ್ಕೆ, ಹಳ್ಳಿಯ ಜೀವನಕ್ಕೆ ಹೋಲಿಸಿ ಅದೆಷ್ಟು ದೃಢವಾಗಿ ನಗರಜೀವನವನ್ನು ತಿರಸ್ಕರಿಸಿ ಬಿಟ್ಟರು. ಹೀಗೊಂದು ಕಾರ್ಯಕ್ರಮದಲ್ಲಿ ಮೋದಿಜಿ ಹೇಳಿದ ಮಾತು ನೆನಪಾಯಿತು. ನಗರ ಪ್ರದೇಶಗಳ ದಿನ ನಿತ್ಯದ ಸಮಸ್ಯೆಗಳಾದ ಟ್ರಾಫಿಕ್, ಚರಂಡಿ ನೀರು, ತ್ಯಾಜ್ಯ ವಿಲೇವಾರಿ, ವಾತಾವರಣದ ಕಲುಷಿತ ಇನ್ನು ಮುಂತಾದವುದವುಗಳ ನಿವಾರಣೆಗೆ 30 ವರ್ಷಗಳ ನಂತರ ಉಂಟಾಗುವ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು..ಅದರಿಂದ ಮಾತ್ರ ನಗರದ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು ಎಂಬುದು. ಆದರೆ ಇಂದಿನ ಸರ್ಕಾರಗಳು ಕಮಿಷನ್ ಆಸೆಗೆ ದೂರದೃಷ್ಟಿತ್ವ ಇಲ್ಲದ ಯೋಜನೆಗಳನ್ನು ಜಾರಿಗೆ ತಂದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತಿರುವುದು ವಿಪರ್ಯಾಸದ ಸಂಗತಿ.
ಹಳ್ಳಿಗಳಲ್ಲಿನ ಇಂದಿನ ಪರಿಸ್ಥಿತಿ ಕಣ್ಣಿಗೆ ಕಟ್ಟಿದಂತೆ ಹೇಳಿದ ಅಜ್ಜನ ಮಾತುಗಳು ನನಗೂ ಹೌದು ಎನ್ನಿಸಿತು. ಇನ್ನಷ್ಟು ಮಾತನಾಡಬೇಕು, ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ನನ್ನಲ್ಲಿ ಕಾತುರತೆ ಇತ್ತು. ಆದರೆ ಹೋಗಿದ್ದು ಸಂಜೆಯ ಹೊತ್ತಾಗಿದ್ದುದರಿಂದ ರಾಮಜ್ಜನಿಗೆ ಇನ್ನೊಮ್ಮೆ ಬರುವೆ ಇನ್ನಷ್ಟು ವಿಷಯಗಳನ್ನು ಚರ್ಚಿಸೋಣ ಎಂದು ಹೇಳಿ ನಮಸ್ಕರಿಸಿ ಮನೆ ಕಡೆ ಹೆಜ್ಜೆ ಹಾಕಿದೆ.

 

-ಪಿ. ಕೆ. ಜೈನ್ ಚಪ್ಪರಿಕೆ 

 

Comments