ಇದೇನು ರಾಮಾಯಣದ‌ ಕತೆಯೋ , ಅಲ್ಲ‌ ಮಹಾಭಾರತದ್ದೋ ? ( ಹಳೆಯ ಚಂದಮಾಮಾದಿಂದ‌ ಒಂದು ಕತೆ)

ಇದೇನು ರಾಮಾಯಣದ‌ ಕತೆಯೋ , ಅಲ್ಲ‌ ಮಹಾಭಾರತದ್ದೋ ? ( ಹಳೆಯ ಚಂದಮಾಮಾದಿಂದ‌ ಒಂದು ಕತೆ)

ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ ಸಂತೋಷ‌ ಆಗಿ ಆ ಕಿರಿಯ‌ ರಾಣಿಗೆ ಏನು ಬೇಕೋ ಕೇಳಿಕೋ ಅಂದ‌ . ಅವಳು ಈಗ‌ ಬೇಡ‌ ಸಮಯ‌ ಬಂದಾಗ‌ ಕೇಳುವೆ ಎಂದು ಹೇಳಿ ಇಟ್ಟಳು. ಮುಂದೆ ಆ ಮಕ್ಕಳೆಲ್ಲ‌ ಬೆಳೆದು ದೊಡ್ಡವರಾದಾಗ‌ ಆ ತನ್ನ‌ ಮಗನನ್ನೇ ರಾಜನನ್ನಾಗಿ ಮಾಡುವಂತೆ ಹಟ‌ ಹಿಡಿದಳು .
( ಈ ಕತೆ ರಾಮಾಯಣದ್ದು, ನಮಗೆಲ್ಲ‌ ಗೊತ್ತು ಅಂದಿರಾ ? ಸ್ವಲ್ಪ‌ ತಡೆಯಿರಿ . ಮುಂದೇನಾಯಿತೆಂದು ನೋಡೋಣ‌ .)
ರಾಜ‌ ತನ್ನ‌ ಹಿರಿಯ‌ ಇಬ್ಬರು ಮಕ್ಕಳಿಗೆ ಅವಳಿಂದ‌ ಏನಾದರೂ ಕೇಡಾದೀತೆಂದು ಎಣಿಸಿ , ಅವರನ್ನು ಕರೆಸಿ ಕಾಡಿಗೆ ಹೋಗಲು ಹೇಳಿದ‌ . ಅವರು ಹೊರಟರು .
ಆಗ‌ ಆ ಕಿರಿಯ‌ ರಾಣಿಯ‌ ಮಗ‌, ಮೂರನೇಯವನು, ತಾನೂ ಅವರ‌ ಜತೆ ಹೊರಟು ಬಿಟ್ಟ‌ !
(ಇದೇನೋ ಬೇರೆ ಕತೆ ಅಂದುಕೊಂಡಿದಿರಾ ? ಸರಿ , ಹೌದು ಬೇರೆಯದೇ ಕತೆ . )
ಮೂವರೂ ಹೀಗೆ ಕಾಡಿಗೆ ಹೊರಟರು . ( ರಾಜ‌ , ಕಿರಿಯ‌ ರಾಣಿಯ ಪ್ರತಿಕ್ರಿಯೆ ಅಥವಾ ಸಂಗತಿ ಇಲ್ಲಿಲ್ಲ‌ ) ಸುಸ್ತಾಗಿ , ನೀರಡಿಕೆ ಆಗಿ , ಹಿರಿಯನು ಮೂರನೇಯವನನ್ನು ದೂರದಲ್ಲಿ ಕಾಣುತ್ತಿದ್ದ‌ ಕೊಳವೊಂದರಿಂದ‌ 'ನೀನೂ ನೀರು ಕುಡಿದು , ಅಲ್ಲಿನ‌ ಎಲೆಗಳಿಂದ‌ ದೊನ್ನೆ ಮಾಡಿಕೊಂಡು ಅದರಲ್ಲಿ ನಮಗೂ ನೀರು ತಾ ' ಎಂದು ಕಳಿಸಿದ‌ . ಹಾಗೆ ಹೋದ‌ ಮೂರನೇಯವನನ್ನು ಆ ಕೊಳದಲ್ಲಿದ್ದ‌ ಪಿಶಾಚಿಯೊಂದು ಅವನನ್ನು ಕೊಳದ‌ ಅಡಿಯಲ್ಲಿ ಬಂಧಿಸಿಟ್ಟಿತು. ಸ್ವಲ್ಪ‌ ಹೊತ್ತು ದಾರಿ ಕಾಯ್ದ‌ ಹಿರಿಯನು ಎರಡನೇಯವನನ್ನು ಅಲ್ಲಿಗೆ ಕಳಿಸಿದ‌ , ಅವನದ್ದೂ ಅದೇ ಗತಿ ಆಯಿತು. ಕೊನೆಗೇ ತಾನೇ ಹೋದ‌ . ಅಲ್ಲಿ ಪಿಶಾಚಿಯು ಬೇಡನ‌ ರೂಪದಿಂದ‌ ಬಂದು ಜ್ಞಾನಬೋಧನೆ ಬಯಸಿತು. ( ಹೋ, ಇಲ್ಲಿ ಮಹಾಭಾರತದ‌ ಯಕ್ಷಪ್ರಶ್ನೆ ಕತೆ ಮಿಕ್ಸ್ ಆಗಿದೆ ಅಂದಿರಾ ? )
ಈತನ‌ ಉತ್ತರದಿಂದ‌ ಆ ಪಿಶಾಚಿಗೆ ಸಮಾಧಾನ‌ ಆಗಿ ಒಬ್ಬ‌ರನ್ನು ಮಾತ್ರ‌ ತಾನು ಮರಳಿಸಬಲ್ಲೆ , ಯಾರನ್ನು ಮರಳಿಸಲಿ ಎಂದು ಕೇಳಿತು . (ನಿಮ್ಮ‌ ಊಹೆ, ಸರಿ, ಧರ್ಮರಾಯನು ನಕುಲನನ್ನು ಬೇಡಿದ‌ ಹಾಗೆ ) ಇವನು ಮೂರನೇಯವನನ್ನು ‍ ಅಂದರೆ ತನ್ನ‌ ಮಲತಾಯಿಯ‌ ಮಗನನ್ನು ಕೇಳಿದ‌ . ಅವನೇ ಏಕೆ ? ಅಂದರೆ ನಿಮಗೆ ಗೊತ್ತಿರುವ‌ ಆ ಧರ್ಮರಾಯನ‌ ಉತ್ತರವನ್ನೇ ‍‍ , ಅಂದರೆ 'ನನ್ನತಾಯಿಗೆ ನಾನು ಉಳಿದಿರುವಾಗ‌ ನನ್ನ‌ ಚಿಕ್ಕಮ್ಮನಿಗೆ ಒಬ್ಬ‌ ಮಗ‌ ಇರಬೇಡವೇ ? ಅಂತ‌ ಹೇಳಿದ‌ . ಮತ್ತೂ ಹೇಳಿದ‌ ‍ 'ಈತನಿಗಾಗಿ ಚಿಕ್ಕಮ್ಮ‌ ರಾಜ್ಯವನ್ನು ಬೇಡಿದಳು, ತಂದೆ ವಿಧಿಯಿಲ್ಲದೆ ನಮ್ಮಿಬ್ಬರ‌ನ್ನು ಕಾಡಿಗೆ ಕಳಿಸಿದ‌. ಆದರೆ ಸೋದರ‌ ಪ್ರೇಮದಿಂದ‌ ಈ ಹುಡುಗನೂ ನಮ್ಮ‌ ಜತೆ ಬಂದುಬಿಟ್ಟ‌. ಹೀಗಿರಲು ನಾನು ನನ್ನ‌ ಹಿರಿಯ‌ ತಮ್ಮ‌ ‍, ಎರಡನೇಯವನನ್ನು ಉಳಿಸಿಕೊಂಡು ರಾಜಧಾನಿಗೆ ಮರಳಬಹುದೇ ? ಎಲ್ಲರಿಗೆ ಏನೆಂದು ಉತ್ತರ‌ ಹೇಳಬೇಕು ? ಚಿಕ್ಕಮ್ಮನ‌ ಮಗನನ್ನು ಪಿಶಾಚಿ ಹಿಡಿಯಿತು ಎಂದರೆ ಯಾರಾದರೂ ನಂಬಿಯಾರೇ ? ನಾವು ಲೋಕಾಪವಾದಕ್ಕೆ ಗುರಿಯಾಗುವುದಿಲ್ಲವೆ ? '
ಪಿಶಾಚಿಯು ‍ 'ನೀನು
ಜ್ಞಾನಸಂಪನ್ನನಷ್ಟೇ ಅಲ್ಲ‌, ಧರ್ಮವನ್ನು ಆಚರಿಸುವವನು ' ಎಂದು ಸಂತಸ‌ ವ್ಯಕ್ತಪಡಿಸಿ ಇಬ್ಬರನ್ನೂ ಮರಳಿಸಿತು.
( ತಡೀರಿ , ಪಿಕ್ಚರ್ ಇನ್ನೂ ಬಾಕೀ ಇದೆ! )
ಇವರು ಆ ಪಿಶಾಚಿಯೊಂದಿಗೆ ಗೆಳೆತನ‌ ಮಾಡಿಕೊಂಡರು. ಅದರ‌ ಅತಿಥಿಗಳಾಗಿ ಅಲ್ಲಿ ಇದ್ದರು.
ರಾಜ‌ ಸತ್ತು ಹೋದ‌ ಸಂಗತಿ ತಿಳಿದರು , ರಾಜಧಾನಿಗೆ ಮರಳಿದರು , ಹಿರಿಯನು ರಾಜನಾದನು, ಎರಡನೇಯವನನ್ನು ಮಂತ್ರಿಯಾಗಿಯೂ , ಮೂರನೇಯವನನ್ನು ಸೇನಾಪತಿಯನ್ನಾಗಿಯೂ ಮಾಡಿದನು. ಆ ಪಿಶಾಚಿಯನ್ನು ಮರೆಯದೆ , ಅದಕ್ಕೆ ಒಂದು ಅರಮನೆಯನ್ನು ಕೊಟ್ಟು ಅದರ‌ ಊಟೋಪಚಾರಗಳಿಗೆ ವ್ಯವಸ್ಥೆ ಮಾಡಿದ‌.
( ಅದೆಲ್ಲ‌ ಸರಿ , ಆದರೆ ಈ ಹಿರಿಯ‌ ರಾಜಕುಮಾರ‌ ಯಾರು ಅಂದಿರಾ? ಅವನು ಬೋಧಿಸತ್ವನು , ಬುದ್ಧನ‌ ಹಿಂದಿನ‌ ಜನ್ಮಗಳಲ್ಲಿ ಒಂದರ‌ ಕತೆ ಇದು! )

Rating
No votes yet

Comments