ಹೆಚ್ಚು ಸತ್ವದ, ಕಡಿಮೆ ಕ್ಯಾಲೋರಿಯ “ತುಳಸಿ ರಸಗುಲ್ಲಾ”

ಹೆಚ್ಚು ಸತ್ವದ, ಕಡಿಮೆ ಕ್ಯಾಲೋರಿಯ “ತುಳಸಿ ರಸಗುಲ್ಲಾ”

ರಸಗುಲ್ಲಾ ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ತಿನಿಸು. ಆದರೆ ಬಾಯಲ್ಲಿ ನೀರೂರಿಸುವ ಇದನ್ನು ಹಲವರು ಸೇವಿಸುತ್ತಿಲ್ಲ – ಬಹಳ ಸಿಹಿಯಾಗಿರುವ ಇದರ ಸೇವನೆಯಿಂದ ಮೈತೂಕ ಹೆಚ್ಚಿ, ಆರೋಗ್ಯಕ್ಕೆ ಧಕ್ಕೆಯಾದೀತು ಎಂಬ ಕಾರಣಕ್ಕಾಗಿ. ಇದೀಗ ಅಂಥವರೂ ರಸಗುಲ್ಲಾ ಸವಿಯುವಂತಾಗಿದೆ. ಯಾಕೆಂದರೆ, ಕೆಲವು ಯುವ ಉದ್ಯಮಶೀಲರು, ವಿನೂತನ ವಿಧಾನದಲ್ಲಿ ತಯಾರಿಸುತ್ತಿರುವ ರಸಗುಲ್ಲಾದಲ್ಲಿ ಸತ್ವ ಹೆಚ್ಚು, ಕ್ಯಾಲೋರಿ ಕಡಿಮೆ.

ಪಾರಂಪರಿಕ ರಸಗುಲ್ಲಾಕ್ಕೆ ಇತ್ತೀಚೆಗೆ ಭೌಗೋಲಿಕ ಸೂಚಿ (ಜೋಗ್ರಫಿಕಲ್ ಇಂಡೆಕ್ಸ್) ಲಭಿಸಿದೆ. ಬಿಳಿ ಬಣ್ಣದ ಸ್ಪಂಜಿನ ಗೋಲಿಗಳಂತಿರುವ ಇವು ಸಕ್ಕರೆಯ ದ್ರಾವಣದಲ್ಲಿ ತೇಲುತ್ತ ಇರುತ್ತವೆ. “ಬಹಳ ಜನರಲ್ಲಿ, ಮುಖ್ಯವಾಗಿ ಯುವಜನರಲ್ಲಿ, ಡಯಬಿಟಿಸ್ ಮತ್ತು ಬೊಜ್ಜಿನ ಭಯದಿಂದಾಗಿ ರಸಗುಲ್ಲಾದ ಸಕ್ಕರೆಯಂಶದ ಬಗ್ಗೆ ಆತಂಕವಿದೆ” ಎನ್ನುತ್ತಾರೆ ಸೀತಾಂಶು ರಾಯ್. ಇದುವೇ ಜನರು ಆತಂಕವಿಲ್ಲದೆ ತಿನ್ನಬಹುದಾದ ರಸಗುಲ್ಲಾ ಅನುಶೋಧಿಸಲು ಅವರಿಗೆ ಪ್ರೇರಣೆ.

ಅವರ ಸಿಹಿತಿಂಡಿಗಳ ಅಂಗಡಿ ಸತ್ಯನಾರಾಯಣ ಮಿಸ್ತನ್ನ ಭಂಡಾರ್, ಹೂಗ್ಲಿ ಜಿಲ್ಲೆಯ ಸಿಂಗೂರ್ ಪಟ್ಟಣದಲ್ಲಿದೆ. ಇದು ಅವರ ಮುತ್ತಜ್ಜನಿಂದ ಬಂದ ಬಳುವಳಿ. ಬೆಂಗಳೂರಿನಲ್ಲಿ ಇನ್ಫೋಸಿಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು ಸೀತಾಂಶು ಅವರ ಸೋದರ ಅಭಿಷೇಕ್; ೨೦೧೪ರಲ್ಲಿ ರಾಜೀನಾಮೆಯಿತ್ತು ತನ್ನೂರಿಗೆ ಮರಳಿದರು – ಕುಟುಂಬದ ವ್ಯವಹಾರವನ್ನು ವಿಸ್ತರಿಸಲಿಕ್ಕಾಗಿ. ಈ ಹಿರಿಯ ಸೋದರರು, ೨೨ ವರುಷ ವಯಸ್ಸಿನ ತಮ್ಮ ಅರುಣಾಂಶು ಜೊತೆ ಸೇರಿಕೊಂಡು, ಪಾರಂಪರಿಕ ರಸಗುಲ್ಲಾಕ್ಕೆ ಹೊಸ “ಸತ್ವ” ನೀಡಲು ನಿರ್ಧರಿಸಿದರು.

ಅದಕ್ಕಾಗಿ ಅವರು ಆಯ್ಕೆ ಮಾಡಿದ ವಿಧಾನ: ತುಳಸಿ ಮತ್ತು ಸ್ಟೀವಿಯಾ ಬೆರೆಸಿದ ರಸಗುಲ್ಲಾದ ತಯಾರಿ. ಅಂದರೆ, ಔಷಧೀಯ ಗುಣಗಳಿರುವ ತುಳಸಿಯ ಸಾರ ಮತ್ತು ಸಸ್ಯಜನ್ಯ ಸಿಹಿ ತುಂಬಿದ ಸ್ಟೀವಿಯಾದ ಎಲೆಗಳನ್ನು ಸೇರಿಸಿ (ಇದರಿಂದ ರಸಗುಲ್ಲಾದ ಸಕ್ಕರೆಯ ಸಿಹಿಯ ಪ್ರಮಾಣ ಕಡಿಮೆ ಮಾಡಲು ಸಾಧ್ಯ) ಹೊಸ ರೀತಿಯಲ್ಲಿ ರಸಗುಲ್ಲಾ ತಯಾರಿಸುವುದು. ಆದರೆ ಇದು ಸುಲಭದ ಕೆಲಸವಾಗಿರಲಿಲ್ಲ. ಹಾಲಿಗೆ ಲಿಂಬೆಹಣ್ಣಿನ ಹುಳಿ ಹಾಕಿ, ಹೆಪ್ಪು ಮಾಡಿ ತಯಾರಿಸುವ ಚೀಸ್ (ರಸಗುಲ್ಲಾದ ಮುಖ್ಯ ಒಳಸುರಿ)ನ ಪಿಎಚ್ ಹೊಂದಿಸಬೇಕಾಗಿತ್ತು – ಯಾಕೆಂದರೆ, ಇದರಿಂದಲೇ ರಸಗುಲ್ಲಾದ ರುಚಿ ಪರಿಪಕ್ವ. ಜೊತೆಗೆ, ತುಳಸಿ ಎಲೆಗಳ ಸಾರ ತಯಾರಿಸಿ, ಸೋಸಿ, ರಸಗುಲ್ಲಾಕ್ಕೆ ಸೇರಿಸಬೇಕು.

ಈ ಹೊಸ ವಿಧಾನವನ್ನು ಪರಿಪೂರ್ಣ ಮಾಡಲಿಕ್ಕಾಗಿ ರಾಯ್ ಸೋದರರು ಕಲ್ಕತ್ತಾ ವಿಶ್ವವಿದ್ಯಾಲಯದ ವಿಜ್ನಾನಿಗಳ ನೆರವು ಪಡೆದರು. ಹಿರಿಯ ವಿಜ್ನಾನಿ ಅಭಿಜಿತ್ ಮಿತ್ರ ಮತ್ತು ಕಿರಿಯ ವಿಜ್ನಾನಿ ಪ್ರೊಸೆನ್ಜಿತ್ ಪ್ರಾಮಾಣಿಕ್ – ಇವರು ರಾಯ್ ಸೋದರರ ರಸಗುಲ್ಲಾ ಅನುಶೋಧನೆಗೆ ಮಾರ್ಗದರ್ಶನ ನೀಡಿದವರು.

ತುಳಸಿ ರಸಗುಲ್ಲಾ ತಯಾರಿ ವಿಧಾನ: ರಾಯ್ ಸೋದರರು ತಾಜಾ ತುಳಸಿ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ, ಸ್ಟೀವಿಯಾ ಎಲೆಗಳನ್ನೂ ಒಣಗಿಸಿ ಹುಡಿ ಮಾಡುತ್ತಾರೆ. ತುಳಸಿ ಎಲೆಗಳನ್ನು ತರುವುದು ತಮ್ಮ ಹಳ್ಳಿ ಹರಿಪಾಲ್ ಅಲ್ಲಿಂದ; ಸ್ಟೀವಿಯಾ ಎಲೆಗಳನ್ನು ಖರೀದಿಸುವುದು ಆರಾಮ್-ಬಾಗಿನ ಒಂದು ತೋಟಗಾರಿಕಾ ನರ್ಸರಿಯಿಂದ. ಈ ಎರಡೂ ಹುಡಿಗಳನ್ನು ಕ್ರಿಮಿಶುದ್ಧೀಕರಣಗೊಳಿಸಿದ ನೀರಿನಲ್ಲಿ ೨೦ ನಿಮಿಷ ಕುದಿಸಿ, ಒಂದು ದಿನ ಹಾಗೆಯೇ ಬಿಡುತ್ತಾರೆ. ಅನಂತರ, ಈ ಮಿಶ್ರಣವನ್ನು ಚೀಸ್-ಬಟ್ಟೆಯಲ್ಲಿ ಸೋಸುತ್ತಾರೆ. ಆಗ ಉಳಿಯುವ ತುಳಸಿ ಎಲೆಗಳ ಉಳಿಕೆಯನ್ನು ಚೀಸಿಗೆ ಸೇರಿಸಿ, ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡುತ್ತಾರೆ; ಇದರಿಂದಾಗಿ, ಆ ಉಂಡೆಗಳು ತಿಳಿ-ಹಸುರು ಬಣ್ಣ ಪಡೆಯುತ್ತವೆ. ಈ ಉಂಡೆಗಳನ್ನು ತುಳಸಿಯ ಎಲೆಪುಡಿ ಮತ್ತು ಸ್ಟೀವಿಯಾದ ಎಲೆಪುಡಿಗಳ ಸಾರವಿರುವ ದೊಡ್ಡ ಬಾಣಲೆಗಳಲ್ಲಿ ಕುದಿಸುತ್ತಾರೆ. ಇವುಗಳ ಸಿಹಿಪ್ರಮಾಣ ಹೆಚ್ಚಿಸಲಿಕ್ಕಾಗಿ, ಪಾರಂಪರಿಕ ರಸಗುಲ್ಲಾಕ್ಕೆ ಹಾಕುವ ಸಕ್ಕರೆಯ ಪರಿಮಾಣದ ಶೇಕಡಾ ೧೦ನ್ನು (ದ್ರಾವಣ ಮಾಡಿ) ಬಾಣಲೆಯಲ್ಲಿ ಕುದಿಯುವ ಚೀಸ್ ಉಂಡೆಗಳಿಗೆ ಸೇರಿಸುತ್ತಾರೆ. ಹೀಗೆ, ಬಾಯಲ್ಲಿ ನೀರೂರಿಸುವ “ತುಳಸಿ ರಸಗುಲ್ಲಾ” ತಯಾರು.

ರಾಯ್ ಸೋದರರು ಪಾರಂಪರಿಕ ರಸಗುಲ್ಲಾದ ಬೆಲೆಗೆ, ಅಂದರೆ ಒಂದು ರಸಗುಲ್ಲಾಕ್ಕೆ ರೂ.೧೦ ದರದಲ್ಲಿ (ಅದೇ ಗಾತ್ರದ) ತುಳಸಿ ರಸಗುಲ್ಲಾ ಮಾರುತ್ತಾರೆ. ಮುಂಚೆ ಅವರ ಅಂಗಡಿಯಲ್ಲಿ ರಸಗುಲ್ಲಾದ ಮಾರಾಟದಿಂದ ಪ್ರತಿ ದಿನ ಸಿಗುತ್ತಿದ್ದ ಸರಾಸರಿ ಆದಾಯ ರೂ.೧೦,೦೦೦. ಅದೀಗ, ಕಳೆದ ಒಂಭತ್ತು ತಿಂಗಳುಗಳಲ್ಲಿ ಇಮ್ಮಡಿಯಾಗಿದೆ ಎಂದು ಮಾಹಿತಿ ನೀಡುತ್ತಾರೆ ಅರುಣಾಂಶು. ತುಳಸಿ ರಸಗುಲ್ಲಾದ ಮಾರಾಟವನ್ನು ರಾಯ್ ಸೋದರರು ಶುರು ಮಾಡಿದ್ದು ಮಾರ್ಚ್ ೨೦೧೭ರಲ್ಲಿ. ತದನಂತರ, ಜೂನ್ ೨೦೧೭ರಲ್ಲಿ, ೨೦ ಕಿಮೀ ದೂರದ ದನ್ಕುನಿಯಲ್ಲಿ ತಮ್ಮ ಸಿಹಿ ಅಂಗಡಿಯ ಶಾಖೆ ತೆರೆದು, ಅಲ್ಲಿಯೂ ತುಳಸಿ ರಸಗುಲ್ಲಾದ ಮಾರಾಟ ಆರಂಭಿಸಿದ್ದಾರೆ ಅಭಿಷೇಕ್. ಹೀಗಾಗಿ, ತಮ್ಮ ರಸಗುಲ್ಲಾ ಮಾರಾಟದ ಆದಾಯ ಈಗ ಮುಮ್ಮಡಿಯಾಗಿದೆ ಎಂದು ಖುಷಿಯಿಂದ ಹೇಳುತ್ತಾರೆ ಅಭಿಷೇಕ್.

“ಪರಾನಾ ಜರ್ನಲ್ ಆಫ್ ಸಾಯನ್ಸ್ ಆಂಡ್ ಎಜುಕೇಷನ್”, ನವಂಬರ್ ೨೦೧೭ರ ಸಂಚಿಕೆಯಲ್ಲಿ “ತುಳಸಿ ರಸಗುಲ್ಲಾ” ಅನುಶೋಧನೆ ಬಗ್ಗೆ ಅಧ್ಯಯನ ಪ್ರಬಂಧ ಪ್ರಕಟಿಸಿದ್ದಾರೆ ಅಭಿಷೇಕ್ ಮತ್ತು ಸಂಗಡಿಗರು. ಆ ಪ್ರಬಂಧದ ಪ್ರಕಾರ: ಅಸ್ಕೊರ್ಬಿಕ್ ಆಸಿಡ್ (ಇದು ಶೀತ ಮತ್ತು ಕಫ ಶಮನಕಾರಿ), ಆಂಟಿ-ಆಕ್ಸಿಡೆಂಟುಗಳು, ವಿಟಮಿನುಗಳು ಮತ್ತು ಖನಿಜಾಂಶಗಳು (ಕ್ಯಾಲ್ಸಿಯಂ, ಪೊಟಾಷಿಯಂ ಹಾಗೂ ಮೆಗ್ನೇಷಿಯಂ) – ಇವುಗಳು ತುಳಸಿ ರಸಗುಲ್ಲಾದಲ್ಲಿ ಅಧಿಕ ಪ್ರಮಾಣದಲ್ಲಿವೆ. ಪಾರಂಪರಿಕ ರಸಗುಲ್ಲಾಕ್ಕೆ ಹೋಲಿಸಿದಾಗ, ತುಳಸಿ ರಸಗುಲ್ಲಾದಲ್ಲಿ ಇರುವ ಪ್ರೊಟೀನಿನ ಪ್ರಮಾಣ ಶೇ.೪೮.೬೮ ಅಧಿಕ; ಕೊಬ್ಬು ಶೇ.೩೨.೭೪ ಮತ್ತು ಸುಕ್ರೋಸ್ ಶೇ.೯.೪೩ ಕಡಿಮೆ. ಕೊಲ್ಕತ್ತಾದ ಜಿಡಿ ಆಸ್ಪತ್ರೆ ಮತ್ತು ಡಯಬಿಟಿಸ್ ಸಂಸ್ಥೆಯ ಆಹಾರತಜ್ನೆ ಮೀನಾಕ್ಷಿ ಮಜುಂದಾರ ತುಳಸಿ ರಸಗುಲ್ಲಾ ಆರೋಗ್ಯದಾಯಕ ಎಂಬುದನ್ನು ಒಪ್ಪುತ್ತಾರೆ. ಪ್ರತಿ ೧೦೦ ಗ್ರಾಮ್ ಪಾರಂಪರಿಕ ರಸಗುಲ್ಲಾದಲ್ಲಿ ೧೮೬ರಿಂದ ೨೦೦ ಕ್ಯಾಲೋರಿ ಇದ್ದರೆ, ತುಳಸಿ ರಸಗುಲ್ಲಾದಲ್ಲಿ ಇರುವ ಕ್ಯಾಲೋರಿ ಪ್ರಮಾಣ ಕೇವಲ ೯೦ರಿಂದ ೧೦೦ ಎಂದು ಅವರು ತಿಳಿಸುತ್ತಾರೆ.

ರಾಯ್ ಸೋದರರ ಯಶಸ್ಸು ತುಳಸಿ ರಸಗುಲ್ಲಾ ತಯಾರಿಗೆ ಇತರ ಹಲವರಿಗೆ ಪ್ರೇರಣೆಯಾಗಿದೆ. ಇವರಿಂದಲೇ ಇದನ್ನು ಖರೀದಿಸಿ ಮಾರುತ್ತಿದ್ದ ಶಂಕರ್ ಪ್ರಾಮಾಣಿಕ್ ಆಗಸ್ಟ್ ೨೦೧೭ರಿಂದ ತಾವೇ ತುಳಸಿ ರಸಗುಲ್ಲಾ ತಯಾರಿಸಿ ಮಾರುತ್ತಿದ್ದಾರೆ. ಇನ್ನೂ ಇಬ್ಬರು ಸಿಹಿತಿಂಡಿ ಮಾರಾಟಗಾರರು ಈಗ ತುಳಸಿ ರಸಗುಲ್ಲಾದ ಮಾರಾಟ ಶುರು ಮಾಡಿದ್ದಾರೆ. “ಆಹಾರೆ ಬಾಂಗ್ಲಾ ೨೦೧೭” ಎಂಬ ಆಹಾರ ಉತ್ಸವದಲ್ಲಿ ರಾಯ್ ಸೋದರರ ಮಳಿಗೆಯಲ್ಲಿ ರಸಗುಲ್ಲಾದ ಮಾರಾಟ ಬಿರುಸಾಗಿತ್ತು. ಅಲ್ಲಿಗೆ ಭೇಟಿ ನೀಡಿದ್ದ ಬೆಂಗಳೂರು ಮತ್ತು ಗೋವಾದ ಉದ್ಯಮಶೀಲರು ಈಗ ವಿಜ್ನಾನಿ ಅಭಿಜಿತ್ ಮಿತ್ರ ಅವರನ್ನು ಸಂಪರ್ಕಿಸಿದ್ದಾರೆ – ತುಳಸಿ ರಸಗುಲ್ಲಾ ತಯಾರಿ ವಿಧಾನ ಬಗ್ಗೆ ತಿಳಿಯಲಿಕ್ಕಾಗಿ.

ಅಂತೂ, ರಸಗುಲ್ಲಾ ಮೆಲ್ಲುವ ಬಯಕೆ ಇದ್ದರೂ ಸಕ್ಕರೆ ಕಾಯಿಲೆಯ ಆತಂಕದಿಂದ ಅದನ್ನು ದೂರ ಇಟ್ಟವರಿಗೊಂದು ಸಿಹಿಸುದ್ದಿ: ಅದಕ್ಕೆ ಬದಲಾಗಿ, ಅವರು ಸವಿಯಬಹುದಾದ ಹೆಚ್ಚು ಸತ್ವದ, ಕಡಿಮೆ ಕ್ಯಾಲೋರಿಯ “ತುಳಸಿ ರಸಗುಲ್ಲಾ” ಈಗ ಲಭ್ಯ.
 

Comments