ಬಾಳೆಹಣ್ಣಿಗೆ ಕೈಚಾಚುವ ಕೋತಿಗಳು

Submitted by addoor on Wed, 06/27/2018 - 09:21

ಉತ್ತರ ಕನ್ನಡದ ದಾಂಡೇಲಿ ಹತ್ತಿರದ ಕುಳಗಿಯ  ನಿಸರ್ಗಧಾಮದಲ್ಲಿ ಅಭ್ಯುದಯ  ಪತ್ರಿಕೋದ್ಯಮ  ಶಿಬಿರದ ಕೊನೆಯ ದಿನ.  ಫೆಬ್ರವರಿ 9, 2004. ಅಂದು  ಮಧ್ಯಾಹ್ನ ನಮ್ಮ ಡೇರೆಗೆ  ಬಂದಾಗ ಕಂಡದ್ದೇನು? ಕೋತಿಗಳ ರಂಪ. ಅವು ನಮ್ಮ  ಡೇರೆಯೊಳಗೆ  ನುಗ್ಗಿ ಅಲ್ಲಿಟ್ಟಿದ್ದ ಕಿತ್ತಳೆ ಹಣ್ಣುಗಳನ್ನು  ಕಬಳಿಸಿದ್ದವು.

ಯಾಕೆ ಹೀಗಾಯಿತು?ಎಂದು  ಯೋಚಿಸುತ್ತಿದ್ದಂತೆ, ಯಲ್ಲಾಪುರದಿಂದ  ಕುಳಗಿಗೆ  ಕಾರಿನಲ್ಲಿ  ಬರುತ್ತಿದ್ದಾಗ ಗೆಳೆಯ  ಬಾಲಚಂದ್ರ ತಿಳಿಸಿದ  ವಿವರ ಕಣ್ನಿಗೆ  ಕಟ್ಟಿದಂತಾಯಿತು. ನಾವು ಕಾಡಿನ ರಸ್ತೆಯಲ್ಲಿ  ಹಾದು ಬರುತ್ತಿದ್ದೆವು.  ಅದು ತೇಗದ ಕಾಡು. ಹಸುರಿನ ಗುರುತಿಲ್ಲದ  ಅದನ್ನು ಕಾಡು ಅನ್ನಬೇಕೇ?  ಫೆಬ್ರವರಿಯಲ್ಲೇ  ತೇಗದ  ಮರಗಳ  ಬಹುಪಾಲು   ಎಲೆಗಳು   ಒಣಗಿ   ಉದುರಿದ್ದವು.  ಆ ಮರಗಳೆಡೆಯಿಂದ  ಬೀಸಿ ಬರುತ್ತಿದ್ದದ್ದು  ತಂಪು ಗಾಳಿಯಲ್ಲ, ಬಿಸಿಗಾಳಿ. ಆಗ  ಹೇಳಿದ್ದರು  ಬಾಲಚಂದ್ರ, ‘ ಇಲ್ಲಿ  ದಟ್ಟ  ಕಾಡಿತ್ತು.  ಎಂಬತ್ತು  ಸಾವಿರ  ಹೆಕ್ಟೇರಿನಲ್ಲಿ  ಕಾಡು ಕಡಿದು  ತೇಗ ನೆಟ್ಟರು.  ಈಗ  ಏನಾಗಿದೆ ನೋಡಿ. ಆರಂಭದ ವರುಷಗಳಲ್ಲಿ  ಅವು 15-20 ಅಡಿ   ಎತ್ತರ  ಬೆಳೆದರೂ  ಅನಂತರದ 30  ವರುಷಗಳಲ್ಲಿ  ತೇಗದ ಮರಗಳಲ್ಲಿ ಬೆಳವಣಿಗೆಯೇ  ಇಲ್ಲ ಅನ್ನಬಹುದು.  ಬೋರರ್  ಕೀಟಗಳು ತೇಗದ ಮರಗಳನ್ನು  ಕೊರೆದು ಹಾಕಿವೆ.  ಇಲ್ಲಿರುವ  ಪ್ರಾಣಿ ಪಕ್ಷಿಗಳಿಗಂತೂ  ಜೀವಿಸುವುದೇ ಕಷ್ಟವಾಗಿದೆ.   ಇಲ್ಲಿ  ಸಾವಿರಾರು  ತೇಗದ  ಮರಗಳಿವೆ. ಆದರೆ  ಹಣ್ಣಿನ ಮರಗಳಿಲ್ಲ.   ಅವನ್ನೆಲ್ಲ  ಕಡಿದು ಹಾಕಿದ ಕಾರಣ  ಈಗ  ಮಂಗಗಳಿಗೆ  ತಿನ್ನಲು  ಹಣ್ಣುಗಳಿಲ್ಲ.  ಬೇಸಿಗೆಯಲ್ಲಿ   ಅವು  ರಸ್ತೆ ಬದಿಯಲ್ಲಿ  ಕೂರುತ್ತವೆ.  ನಮ್ಮ ಹಾಗೆ  ಕಾರಿನಲ್ಲಿ  ಹೋಗುವವರು ಕಾರು ನಿಲ್ಲಿಸಿ  ಬಾಳೆಗಣ್ಣು ಹಿಡಿದು  ಕೈ ಚಾಚಿದರೆ   ಓಡಿ ಬಂದು ತಗೊಂಡು  ಹೋಗ್ತವೆ ' .

ವಿಸ್ತಾರವಾದ ಕಾಡು ಕಡಿದು ತೇಗ  ನೆಟ್ಟಿದ್ದರ ದುಷ್ಪರಿಣಾಮಗಳು   ಒಂದೆರಡಲ್ಲ. ಮುಂಚೆ  ಧಾರಾಕಾರ ಮಳೆಯಾಗುತ್ತಿದ್ದ ಅಲ್ಲೀಗ  ಪ್ರಾಕೃತಿಕ  ಸಮತೋಲನವೇ      ಏರುಪೇರಾಗಿದೆ. ಕೇವಲ 20 ಕಿ.ಮೀ  ದೂರದಲ್ಲಿರುವ ಕಾಳಿ ನದಿ ಕಳಿವೆಯಲ್ಲಿ  600 ಮಿ.ಮೀ ವಾರ್ಷಿಕ ಮಳೆ ಆಗುತ್ತಿದೆ.  ಕಾಡು ಕಡಿದ ಬಳಿಕ ಇಲ್ಲಿ   ವಾರ್ಷಿಕ ಮಳೆ  ಪ್ರಮಾಣ ಕಡಿಮೆ  ಆಗ್ತಾ ಬಂದು  ಈಗ  ಕೇವಲ  800 ಮಿ.ಮೀ. ಮಳೆ  ಆಗುತ್ತಿದೆ.  ಅದರಿಂದಾಗಿ  ದಟ್ಟ ಕಾಡಿನ  ತಂಪು  ನೆರಳು   ಇರಬೇಕಾಗಿದ್ದ  ಪ್ರದೇಶದಲ್ಲಿ   ಈಗ   ಬಿಸಿ ಗಾಳಿಯ  ಬೇಗೆ.   ಅವರ ಮಾತು ಮುಗಿಯುತ್ತಿದ್ದಂತೆ  ರಸ್ತೆಯಿಂದ  ತುಸು  ದೂರದಲ್ಲೇ  ಮುಗಿಲೆತ್ತರದ  ಬೆಂಕಿಯ  ಜ್ವಾಲೆಗಳು  ಕಾಣಿಸಿದವು. ರಸ್ತೆ  ಪಕ್ಕದಲ್ಲಿ  ಕೂಲಿಯಾಳುಗಳ ನಾಲ್ಕು  ಸೈಕಲ್ ಗಳಿದ್ದವು.   ಎರಡು  ಸೈಕಲ್ ಗಳಿಗೆ  ಖಾಲಿ ಪ್ಲಾಸ್ಟಿಕ್  ಕೊಡಗಳನ್ನು  ಕಟ್ಟಲಾಗಿತ್ತು.  ಬೆಂಕಿ  ಆರಿಸಲು ಬಂದಿದ್ದ  ನಾಲ್ಕೈದು  ಆಳುಗಳು   ವೇಗವಾಗಿ  ಹಬ್ಬುತ್ತಿದ್ದ  ಬೆಂಕಿಯ  ಜ್ವಾಲೆಗಳನ್ನು  ನಂದಿಸಲು  ಸಾಧ್ಯವಿತ್ತೇ? ‘  ಇಲ್ಲಿ  ಆಗಾಗ  ಹೀಗೆ ಬೆಂಕಿ ಬೀಳುತ್ತಲೇ  ಇರುತ್ತದೆ.  ಇಲ್ಲಿದ್ದ ದಟ್ಟ  ಕಾಡನ್ನು   ಉಳಿಸಿದ್ದರೆ  ಹೀಗಾಗುತ್ತಿರಲಿಲ್ಲ'  ಎಂದರು ಬಾಲಚಂದ್ರ.

ದಕ್ಷಿಣ ಭಾರತದ ಕೋಟಿಗಟ್ಟಲೆ  ತೆಂಗಿನ ಮರಗಳಿಗೆ  ಕೇವಲ  ಎರಡು ವರ್ಷಗಳ  ಅವಧಿಯಲ್ಲಿ  ದಾಳಿ ಮಾಡಿರುವ  ತೆಂಗಿನ ನುಸಿಯ  ತಾಕತ್ತಿನ   ಎದುರು  ನಾವು ಹೀಗೆಯೇ ಕೈಚೆಲ್ಲಿ ನಿಲ್ಲಬೇಕಾಗಿದೆ. ಹತ್ತಿ ಬೆಳೆಗೆ  ಬೆಳೆಗಾರರು  ಸುರಿಯುವ  ಎಲ್ಲ  ಕೀಟನಾಶಕಗಳಿಗೂ  ಸಡ್ಡು ಹೊಡೆದು  ಹಾನಿ ಮಾಡುವ  ಕೀಟಗಳ ಎದುರು  ನಾವು ಹುಲುಮಾನವರಾಗಿದ್ದೇವೆ.

ಚಿಕ್ಕಮಂಗಳೂರು  ಜಿಲ್ಲೆಯ  ಕಡೂರು ತಾಲೂಕಿನ ಹಲವೆಡೆಗಳಲ್ಲಿ  ಸಾವಿರಾರು  ಎಕರೆ ತೆಂಗಿನ  ತೋಟಗಳು ನಾಶವಾಗಿವೆ.   ಅಲ್ಲಿನ  ಬುಕ್ಕಾಬುಂಧಿ  ಹಾಗೂ  ಶಾಂತವೇರಿ  ಪ್ರದೇಶಗಳಲ್ಲಿ  ಸಾವಿರಾರು   ಎಕರೆಗಳಲ್ಲಿ  ಅಡಿಕೆ  ತೋಟಗಳು   ಒಣಗಿ  ಹೋಗಿವೆ.   ಇದಕ್ಕೆ  ಕಾರಣ ನೀರಿನಾಸರೆ  ಬತ್ತಿ  ಹೋದದ್ದು.  ಎಕರೆಗೆ  ನಾಲ್ಕೈದು  ಬೋರ್ ವೆಲ್  ಕೊರೆದು  ಸಾವಿರಾರು  ವರುಷಗಳಿಂದ  ನೆಲದಾಳದಲ್ಲಿ  ಸಂಗ್ರಹವಾಗಿದ್ದ  ಅಂತರ್ಜಲಕ್ಕೆ  ಕನ್ನವಿಕ್ಕಿದ್ದರಿಂದ  ಹೀಗಾಗಿದೆ.   ಒಂದೇ  ಮಾತಿನಲ್ಲಿ  ಹೇಳಬೇಕೆಂದರೆ,  ಇವೆಲ್ಲವೂ  ನಾವು ಪ್ರಾಕೃತಿಕ ಸಮತೋಲನ ಕೆಡಿಸಿದ್ದರ ಪರಿಣಾಮಗಳು.

ನಲುವತ್ತು  ವರುಷಗಳ ಮುನ್ನ ಹೆಬ್ಬಾಳದ ಕೃಷಿ  ಕಾಲೇಜಿನಲ್ಲಿ ನಾನು ಕಲಿಯುತ್ತಿದ್ದಾಗ  ಒಮ್ಮೆ  ಡಾ. ನಾರ್ಮನ್ ಬೋರ್ಲಾಗ್  ಅಲ್ಲಿಗೆ  ಬಂದಿದ್ದರು.  ಅವರು ಹಸುರು ಕ್ರಾಂತಿಗೆ ಕಾರಣವಾದ  ಗೋಧಿಯ ಅಧಿಕ  ಇಳುವರಿ  ತಳಿಗಳ ಜನಕರು.  ಅವರು   ಒಂದು ಮಾತು ಹೇಳಿದ್ದರು 'ಅಧಿಕ ಇಳುವರಿ ತಳಿಗಳು ದೈತ್ಯ ರಕ್ಕಸರಿದ್ದಂತೆ. ಅವುಗಳಿಂದ ಅಧಿಕ ಇಳುವರಿ ಪಡೆಯಬೇಕಾದರೆ ಅಧಿಕ ಪ್ರಮಾಣದಲ್ಲಿ  ರಾಸಾಯನಿಕ  ಗೊಬ್ಬರಗಳನ್ನು  ಸುರಿಯಲೇ  ಬೇಕು'. ಜೊತೆಗೆ  ಅವರೊಂದು   ಎಚ್ಚರಿಕೆ  ನೀಡಿದ್ದರು. ‘ಸಾವಿರಾರು ಹೆಕ್ಟೇರ್ ಗಳ ಪ್ರದೇಶದಲ್ಲಿ    ಒಂದೇ ಜಾತಿಯ ಭತ್ತ ಅಥವಾ ಗೋಧಿ  ತಳಿ ಬೆಳೆಯುವುದರಿಂದ   ಅಪಾಯಗಳು  ಇದ್ದೇ ಇವೆ. ಯಾವುದಾದರೊಂದು  ಕೀಟ  ಅಥವಾ  ರೋಗ ದಾಳಿ  ಮಾಡಿದಾಗ  ಅದನ್ನು ನಿಯಂತ್ರಿಸಲಾಗದಿದ್ದರೆ  ಜಗತ್ತಿನ  ಬಹುಪಾಲು  ಜನರಿಗೆ  ಆಹಾರ   ಇಲ್ಲವಾದೀತು'. ಆಗಲೇ ಪ್ರಾಕೃತಿಕ  ಅಸಮತೋಲನದ ಭೀಕರ  ಪರಿಣಾಮಗಳನ್ನು  ಅವರು ಸೂಚಿಸಿದ್ದರು.

ಅಭಿವೃದ್ಧಿಯ  ಗೌಜಿ  ಗದ್ದಲದಲ್ಲಿ  ನಾವು   ಇವನ್ನೆಲ್ಲ  ಮರೆತು  ಬಿಡುತ್ತೇವೆ.  ಐದು  ಅಥವಾ ಹತ್ತು  ವರುಷಗಳ ಅನಂತರ ಏನಾದೀತು?    ಎಂಬುದನ್ನಲ್ಲ,  ಒಂದು  ವರುಷದ  ಬಳಿಕ  ಏನಾದೀತು?  ಎಂದು  ಯೋಚಿಸಲಿಕ್ಕೂ ನಮಗೆ ವ್ಯವಧಾನ
ಇಲ್ಲವಾಗಿದೆ.  ಆದರೆ,  ನಮ್ಮ  ತಪ್ಪಿನ  ಪರಿಣಾಮಗಳನ್ನು   ಅನುಭವಿಸಬೇಕಾದವರು  ನಾವೇ ತಾನೇ?

ಚಿಕ್ಕಮಗಳೂರಿನಿಂದ ಎರಡು ಕಿ.ಮೀ ದೂರದ   ಇಂದಾವರದ  ಕುಮಾರೇಗೌಡ  ಅವರದು  ಹೂವಿನ  ಕೈಷಿಯಲ್ಲಿ   ಎತ್ತಿದ ಕೈ.   ಇತ್ತೀಚಿಗೆ   ಅವರು  ಹೇಳಿದ್ದು 'ನಾನೀಗ  ಗುಲಾಬಿಯ ಬದಲಾಗಿ  ಮೇರಿಗೋಲ್ಡ್  ಮತ್ತು ಕಾಕಡ ಬೆಳೆಸಿದ್ದೇನೆ. ದಿನವೂ  ಹೂ ಸಿಗ್ತಿದೆ.  ಒಳ್ಳೆಯ  ಆದಾಯವೂ  ಸಿಗ್ತಿದೆ.  ಯಾಕೆಂದರೆ  ಗುಲಾಬಿಗೆ  ಹೊಡೆದಂತೆ    ಇವುಗಳಿಗೆ   ಯಾವುದೇ ಪೆಸ್ಟಿಸೈಡ್ ಹೊಡೀಬೇಕಾಗಿಲ್ಲ'.

ಪ್ರಕೃತಿಗೆ  ನಮ್ಮಿಂದಾಗುವ  ಘಾಸಿ ಕಡಿಮೆ ಮಾಡುವಲ್ಲಿ   ಇಂತಹ  ಪುಟ್ಟ ಪುಟ್ಟ  ಬದಲಾವಣೆಗಳೂ  ಮುಖ್ಯವಾಗುತ್ತದೆ.  ತೇಗದ  ಕಾಡಿನಲ್ಲಿ  ಹಣ್ಣು  ಸಿಗದೆ  ನಾವು  ನೀಡುವ  ಬಾಳೆಹಣ್ಣಿಗೆ  ಕೈ ಚಾಚಬೇಕಾದ ದುಸ್ಥಿತಿಗೆ ಬಂದಿರುವ  ಕೋತಿಗಳು  ಪ್ರಕೃತಿಯ  ಸಮತೋಲನ ಕಾಯ್ದುಕೊಳ್ಳುವಲ್ಲಿ  ನಮ್ಮ ಕರ್ತವ್ಯವನ್ನು  ಮತ್ತೆ ಮತ್ತೆ  ನಮಗೆ ನೆನಪು ಮಾಡಿಕೊಡುವಂತಾಗಲಿ.