ಶವ-ಸ್ಥಿತಿ

ಶವ-ಸ್ಥಿತಿ

ಅಮ್ಮ ಹೋಗ್ಬಿಟ್ಳಂತೆ ಕಣೋ, ಅಕ್ಕ ಫೋನಿನಲ್ಲಿ ಬಿಕ್ಕುತ್ತಿದ್ಳು. ಈಗ ಹೊರಟ್ರು ೧೭ ಗಂಟೆ ಜರ್ನಿ ಯು ಎಸ್ ಇಂದ ಭಾರತಕ್ಕೆ. ಈ ಹಾಳು ದೇಶಕ್ಕೆ ಯಾಕಾಗಿ ಬಂದೆ? ಶ್ಯೆ. ಓ ಈ ಟೈಮಲ್ಲಿ ನಾನು ಯೋಚಿಸ್ಬೇಕಿರೋದು ಅಮ್ಮನ ಬಗ್ಗೆ. ಸತ್ತವಳ ಬಗ್ಗೆ ಯೋಚನೆಯಲ್ಲ ನೆನಪುಗಳು ಮಾತ್ರ ಇರುತ್ವೆ. ಟಿಕೆಟ್ ಬುಕ್ ಮಾಡ್ಸಿ ಹೊರಡೋ ಏರ್ಪಾಟು ಮಾಡ್ಕೋಬೇಕು. ಇವಳೇನಂತಾಳೋ. ಅವಳಿಗೆ ಹೇಳಿದೆ. ಅಮ್ಮ ಹೋಗ್ಬಿಟ್ರಂತೆ, ಹೊರಡ್ಬೇಕು. ಓ ಸೋ ಸ್ಯಾಡ್, ಸರಿ ಸಣ್ಣೋನಿಗೆ ಕ್ಲಾಸ್ ಇದೆ ನೀವು ಹೋಗ್ಬನ್ನಿ. ಎಲ್ರೂ ಹೋಗಕ್ಕೆ ಕಷ್ಟ ಆಗುತ್ತೆ. ಖರ್ಚು ಜಾಸ್ತಿ ಅಲ್ವ. ನಾವು ವೈಕುಂಠಕ್ಕೆ ಬರೋ ಹಾಗೆ ಏರ್ಪಾಟು ಮಾಡ್ಕೋತೀನಿ. ಸಣ್ಣವನಿಗೆ ೧೦ ವರ್ಷ, ಅಜ್ಜಿಯ ನೆನಪೇ ಇಲ್ಲ. ಪ್ರತಿ ಬಾರಿ ಹೋದಾಗ ಇವಳು ಅವರಮ್ಮನ ಮನೆಗೆ ಕರ್ಕೊಂಡು ಹೋಗಿ ಕೂತು ಬಿಡ್ತಿದ್ಳು. ನಮ್ಮನೆಗೆ ಒಂದೋ ಎರಡೋ ದಿನ ಅಷ್ಟೆ. ಭಾವಗಳು ಬಲಿಯಕ್ಕೆ ಯಾವ ಅವಕಾಶವಿಲ್ಲ. ನಮ್ಮ ಮನೆಯ ಯಾವ ಸಂಪ್ರದಾಯಗಳನ್ನೂ ಇವಳು ಕಲೀಲಿಲ್ಲ. ಸಣ್ಣವನಿಗೆ ಕಲಿಸಲಿಲ್ಲ. ಎಲ್ಲಾ ಅವರಮ್ಮನ ಮನೇದೇ. ಅಮ್ಮ ಫೋನಿನಲ್ಲಿ ಹೇಳೋರು, ಒಂದೆರಡು ಶ್ಲೋಕಗಳು ಕಲ್ಸೋ, ಕಲೀಲಿ, ಅಮರಕೋಶ ಹೇಳ್ಕೊಡು, ಭಜಗೋವಿಂದ ಓದ್ಸು, ಅದ್ಯಾವ್ದೂ ಆಗಲಿಲ್ಲ. ಇಂಗ್ಲಿಷ್ ಕತೆ ಮಾತು ಅಂಕಿಗಳು ಉದ್ದಕ್ಕೂ ಹೊರಡಿಸಿದ್ದು. ನನ್ನ ಮಗು ನನ್ನ ಮನೆಯ ಮಗುವಾಗಲೇ ಇಲ್ಲ. ಯು ಎಸ್ ನಲ್ಲಿ ಅವರಮ್ಮನ ಮನೆ ಕಡೆ ಜನ ಇದಾರೆ. ಇಲ್ಲೇ ಹತ್ತಿರದಲ್ಲೇ. ಅಲ್ಲಿಗೆ... ಇವಳಿಗೆ ಇನ್ನೂ ಸುಲಭ. ಥೋ ನಮ್ಮನೆಯವರು ಯಾಕೆ ಯು ಎಸ್ ನಲ್ಲಿ ಸೆಟ್ಲ್ ಆಗಲಿಲ್ಲ. ಜರ್ಮನಿ ದುಬೈ ಅಂತ ಯಾಕೆ ನಿಂತರು. ಬುದ್ಧಿ ಇಲ್ಲ. ಓ ಅಮ್ಮನ ನೆನಪು ಬೇಕು. ನಾನು ಅಕ್ಕ ಇಬ್ಬರೇ. ಅಮ್ಮ ಹೆಚ್ಚು ಇದ್ದದ್ದು ಅಪ್ಪನೊಟ್ಟಿಗೆ. ಮಕ್ಕಳಿಗೂ ತನ್ನ ಪ್ರೀತಿಯನ್ನ ಮಮತೆಯನ್ನ ಕೊಡಲಾರದಷ್ಟು ಬ್ಯುಸಿ ಅಪ್ಪ ಕೆಲಸಗಳನ್ನು ಮಾಡಿಕೊಡೋದ್ರಲ್ಲಿ. ಅಪ್ಪನೂ ಹಾಗೆ ಇದ್ರು. ಈಗ ಹೇಗಿದಾರೋ. ಕೈಕಾಲು ಆಡ್ತಿರೊಲ್ಲ ಅಪ್ಪನಿಗೆ. ಇಡೀ ಜೀವನ ಅಮ್ಮನೊಟ್ಟಿಗೆ ಅಮ್ಮನಿಲ್ಲದೆ ಹುಲ್ಲು ಕಡ್ಡಿ ಕೂಡ ಎತ್ತಿಡಲಾರದ ಅಪ್ಪ. ಹೇಗಿದಾರೋ. ಜೊತೆಲಿ ತಕ್ಷಣ ನಾನಿರಬೇಕಿತ್ತು. ಈ ಹದಿನೇಳು ಗಂಟೆ ಪ್ರಯಾಣದಲ್ಲಿ ಅಲ್ಲಿನ ಭಾವ ಡೈಲ್ಯೂಟ್ ಆಗಿರುತ್ತೆ. ನನ್ನ ಸ್ಥಾನವನ್ನ ಅಥವಾ ಸಾಂತ್ವನವನ್ನ ಇನ್ಯಾರೋ ತಗೊಂಡಿರ್ತಾರೆ ಅಥವಾ ಅಪ್ಪನಿಗೇ ಅದು ಕರಗಿರುತ್ತೆ. ಸಂಕಟವನ್ನ ನುಂಗಿ ಕಾರ್ಯಗಳನ್ನ ಮಾಡೋ ಮನಸ್ಸು ಬಂದುಬಿಟ್ಟಿರುತ್ತೆ. ನಾನು ನೆಂಟನ ಹಾಗಾಗಿರ್ತೀನಿ. ಇವಳು ಬಂದಿಲ್ಲ ಅನ್ನೋದು ಎದ್ದು ಕಾಣುತ್ತೆ. ಮೊದಲಿಂದಲೂ ಇವಳಿಗೆ ಅಷ್ಟಕ್ಕಷ್ಟೆ. ಅಮ್ಮ ಅಂದರೆ ದ್ವೇಷವಿಲ್ಲದಿದ್ದರೂ ಒಳ್ಳೆಯ ಹೊಂದಾಣಿಕೆಯಲ್ಲಿ ಬಾಳಲೇ ಇಲ್ಲ. ಸದಾ ತನ್ನಮ್ಮ, ಅಪ್ಪ, ಅಣ್ಣನ ಮಾತುಗಳಲ್ಲೇ ಇದ್ದವಳು. ಮೊದ ಮೊದಲು ತಿಂಗಳಿಗೆ ಒಂದ್ಸರ್ತಿ ಹೋಗ್ತಿದ್ದವಳು. ಆಮೇಲಾಮೇಲೆ ವಾರಕ್ಕೆ ಒಂದು ಸರ್ತಿ ಹೋಗೋದಕ್ಕೆ ಆರಂಭ ಮಾಡಿದ್ದು. ಏನಾದ್ರೂ ನೆಪ ಇರೋದು. ಯಾರೋ ಬಂದಿದಾರೆ, ಏನೋ ಫಂಕ್ಷನ್, ಅಣ್ಣ ಯು ಎಸ್ ಗೆ ಹೋಗ್ತಾನೆ, ವಾಪಾಸ್ ಬರ್ತಾನೆ, ಹುಡುಗಿ ನೋಡ್ತಿದಾರೆ, ಮನೆ ಕಟ್ಟಿಸಿದ್ದಾರೆ, ಅಣ್ಣನ ಮದ್ವೆ, ಹೀಗೆ ಸದಾ ನೆಪ ಇರ್ತಿತ್ತು. ಅಮ್ಮನಿಗೆ ಮೊಮ್ಮಗು ಸೊಸೆ ಜೊತೆ ಇರ್ಬೇಕು ಅಂತ ಆಸೆ ಅದಾಗ್ಲಿಲ್ಲ. ಅಲ್ಲಿ ಬಂದ್ರೆ ಸುಮ್ನೆ ಕೂರೋದು, ಇಲ್ಲಾಂದ್ರೆ ಬೋರಾಗುತ್ತೆ ಅಂತ ಪುಸ್ತಕ ಹಿಡಿಯೋದು. ಕೆಲಸಗಳಲ್ಲಿ ಇನ್ವಾಲ್ವ್ಮೆಂಟ್ ಇಲ್ಲ. ನಾಳೆ ನಾಳಿದ್ದು ಮಾಡಿದ್ರಾಯ್ತು ಅನ್ನೋ ಭಾವ,. ಎಲ್ಲದಕ್ಕೂ ಮಿಶಿನ್ ಗಳಿವೆ. ಇನ್ಯಾಕೆ ಮೈ ಕೈ ನೋವು ಮಾಡ್ಕೋಬೇಕು. ಅವರ ಅಮ್ಮನ ಮನೇಲಿ ಹೊಸ ಸಾಮಾನು ಬಂದ್ರೆ ಅದು ಖುಷಿಯ ವಿಚಾರ, ನಮ್ಮನೆಗೆ ಬಂದ್ರೆ ಅದು ಕಳಪೆ ಅನ್ನೋ ಭಾವ. ಇದಕ್ಕೆ ಪ್ರತಿವಾದ ಹೂಡಬೇಕು ಅಂತ ನನಗನ್ನಿಸೋದು ಆದರೆ ಅಷ್ಟು ಧೈರ್ಯವೂ ಇಲ್ಲ , ಅದೇನೋ ಹಿಂಜರಿಕೆಯ ಭಾವ ಕಾಡೋದು. ಎಲ್ಲಿಂದಲೋ ಬಂದಿದಾಳೆ ಹೊಂದಿಕೊಳ್ಳಕ್ಕೆ ಕಷ್ಟವಾಗುತ್ತೆ ಅಂತ ಸಮರ್ಥನೆ ಕೊಟ್ಟು ಸುಮ್ಮನಾಗ್ತಿದ್ದೆ. ಅಪ್ಪ ಅಮ್ಮನೊಟ್ಟಿಗೆ ಹಳ್ಳಿಯಲ್ಲಿ ಒಂದು ವಾರ ಸಹ ಇರಕ್ಕೆ ಅವಳಿಗಾಗ್ತಿರ್ಲಿಲ್ಲ. ಅಮ್ಮ ಹಪಹಪಿಸೋರು, ಮೊಮ್ಮಗು ಸೊಸೆ ... ಇನ್ನೆಲ್ಲಿ ಅಮ್ಮ. 
ಅಪ್ಪ ರಿಟೈರಾಗಿ ಮನೆಗೆ ಬಂದಾಗ ಅಮ್ಮನಿಗೆ ಕೈ ಕಾಲು ಆಡಲಿಲ್ಲ. ಹೇಗೆ ಇವರನ್ನ ಸುಧಾರಿಸೋದು. ದಿನಾ ಸ್ಕೂಲು ಅಂತ ಬೆಳಗ್ಗೆ ಹೋದ್ರೆ ಸಂಜೆ ಬರೋರು ಬಂದಮೇಲೂ ಟ್ಯೂಷನ್ ಅದು ಇದು ಅಂತ ಇಟ್ಕೊಳ್ಳೋರು. ಈಗ ಪೂರ್ತಾ ಖಾಲಿ ಆಗಿಬಿಡ್ತಾರೆ. ನಾನಂದೆ. ಇಲ್ಲಿಗೆ ಬಂದುಬಿಡು ದೇವಸ್ಥಾನ ಪಾರ್ಕು ಮಠ ಅಂತ ಸುತ್ತಬಹುದು’ , ಇಲ್ಲ ಅಪ್ಪನ ಮನಸ್ಥಿತಿ ಇವಳಿಗೆ ಹೊಂದಿಕೆಯಾಗಲ್ಲ. ತಮ್ಮ ಮನೆತನದ ಆಚರಣೆಯನ್ನು ಮುಂದುವರೆಸಿ ಅಂತ ಅಂತಿದ್ದೋರು ಕಡೆ ಕಡೆಗೆ ನನ್ನ ತಿಥಿಯನ್ನೂ ಯಾರೂ ಮಾಡೋದು ಬೇಡ ಅಂತ ಆತ್ಮಶ್ರಾದ್ಧ ಮಾಡಿಕೊಂಡರು. ಅಮ್ಮ ಮೌನವಾಗಿ ಸುಧಾರಿಸಿಕೊಂಡ್ರು. ಅಪ್ಪನ ಅಪರಾತ್ರಿಯ ಬಸುರಿ ಬಯಕೆಗಳಂಥವನ್ನು ತೀರಿಸುತ್ತಾ ಅಮ್ಮ ನಿಧಾನಕ್ಕೆ ಅಪ್ಪನಿಗೆ ಹೊಂದಿಕೊಂಡ್ರು. ಅಪ್ಪನ ಹಾರಾಟ, ಚೀರಾಟ, ಮೌನ, ಮರೆವು, ಮರೆವಿನಿಂದಾಗುವ ಸಿಟ್ಟು ಎಲ್ಲವನ್ನ ಅಮ್ಮ ಅರಗಿಸಿಕೊಳ್ತಿದ್ರು. ಅಪ್ಪ ರಿಟೈರಾಗಕ್ಕಿಂತ ಮುಂಚೆ ಅಕ್ಕನೊಟ್ಟಿಗೆ ಹೆಚ್ಚಾಗಿ ಮಾತಾಡ್ತಿದ್ದ ಅಮ್ಮ ನಿಧಾನಕ್ಕೆ ನನ್ನೊಟ್ಟಿಗೆ ಹೆಚ್ಚು ಮಾತಾಡಕ್ಕೆ ಆರಂಭಿಸಿದ್ರು. ಅಮ್ಮನಿಗೊಂದು ಅಕೌಂಟ್ ಓಪನ್ ಮಾಡಿಸಿ ಅದರಲ್ಲಿ ದುಡ್ಡು ಹಾಕೋಕೆ ಶುರು ಮಾಡಿದೆ. ಅಮ್ಮನಿಗೆ ಖುಷಿ, ನನ್ ಮಗ ನನಗೆ ಏನೋ ಮಾಡ್ತಿದಾನೆ, ನನ್ನೊಟ್ಟಿಗೆ ಇದಾನೆ ಅನ್ನೋಭಾವ. ಅದು ದುಡ್ಡು ಕೊಟ್ಟಿದ್ದಕ್ಕೆ ಬಂದದ್ದಲ್ಲ. ಅಪ್ಪ ಅಮ್ಮನಿಗೆ ಯಾವತ್ತೂ ದುಡ್ಡನ್ನ ಕೊಟ್ಟಿಲ್ಲ. ಡಬ್ಬೀಲಿಟ್ಟಿರೋರು ಅದು ಮನೆ ದುಡ್ಡು. ಅವರದ್ದೇ ಆದ ದುಡ್ಡಿರಲಿಲ್ಲ. ತಿಂಗಳಿಗೆ ಇಷ್ಟು ಅಂತ ಹಾಕ್ತಿದ್ದೆ. ಒಂದೊಂದ್ಸರ್ತಿ ಅಮ್ಮ ಇಂಥದ್ದು ತಗೊಂಡೆ ಕಣೋ ಅನ್ನೋರು. ಯು ಎಸ್ ಗೆ ಬಂದಮೇಲೆ ಫೋನ್ ಮಾಡಿದಾಗ ಕೇಳ್ತಿದ್ದೆ ಏನ್ ತಗೊಂಡೆ ಅಮ್ಮ’ ಏನಿಲ್ಲ ಕಣೋ ನೀನಿದ್ದಾಗ ನಿನಗೆ ತೋರಿಸಿ ಮುಟ್ಟಿಸಿ ಸಂಭ್ರಮ ಪಡ್ತಿದ್ದೆ. ಈ ಹೊಸ ಫೋನ್ ಬಂದಮೇಲೆ ಎಲ್ಲರ ಮುಖ ನೋಡ್ಬಹುದು,. ನಿನ್ನ ಹೆಂಡತಿ ಮಗುವಿನ ಮುಖ ಒಂದು ಕಾಣಲ್ಲ ನೋಡು.  ಈಗ ಅಲ್ಲಿದೀಯ ಫೋನಿನಲ್ಲಿ ಫೋಟೋ ತೋರಿಸಿ ಸಂಭ್ರಮ ಪಡೋಕ್ಕಾಗಲ್ಲ. ಭಾವಗಳು ಹೇಳ್ಕೊಳಕ್ಕೆ ಜನ ಎದುರಿಗಿರಬೇಕೋ. ಮುಖ ಮೈ ಮುಟ್ಟಿ ಇದು ವಿಷ್ಯ ಅನ್ನೋವಾಗಿನ ಮಾತುಗಳು ಫೋಟೊ ನೋಡಿ ವೀಡಿಯೋ ನೋಡಿ 2Dಯಲ್ಲಿ ಹಂಚಿಕೊಂಡ್ರೆ ಏನ್ ಸುಖ ಹೇಳು? ಅಮ್ಮ ಹೇಳ್ತಾನೇ ಹೋದಳು. ಎಷ್ಟು ಹೊತ್ತು ಮಾತಾಡ್ತೀರಿ ನಿದ್ದೆ ಬರ್ತಿದೆ ಮಲ್ಕೊಬಾರದ? ಇವಳ ಮಾತು ಅಮ್ಮನಿಗೂ ಕೇಳಿಸ್ತು. ’ಲೇಟಾಯ್ತು ಮಲ್ಕೊ ಬದುಕು ಸುಸ್ತಾಗಿದೆ ಅಂತ ಹೇಳ್ತಿದೆ. ಯಾವ ಸಂಬಂಧವೂ ಉಳ್ಕೊಳಲ್ಲ. ಉಳ್ಸಿಕೊಳ್ಳೋ ಹಾಗಿಲ್ಲ’ ’ಹೇಳಮ್ಮ ಅವಳು ಹಾಗೆ ನೀನು ಬೇಜಾರು ಮಾಡ್ಕೋಬೇಡ’, ’ಅವಳು ತೀರ ಕೆಟ್ಟವಳಲ್ಲ ಕಣೋ ಆಸೆಗಳಿದೆ ಆವ್ಳಿಗೆ ಅಷ್ಟೆ’ ನಂಗೊತ್ತು. ಶುಷ್ಕ ನಗೆವೊಂದನ್ನು ಕೊಟ್ಟೆ. ಅದೇ ನಾನಾಡಿದ ಕೊನೆ ಮಾತು. 
ಅಕ್ಕ ನಾನು ಕೈ ತುತ್ತು ತಿಂದು ಮೂತಿ ಒರೆಸಿಕೊಂಡು ಅಮ್ಮನ ತೊಡೆ ಮೇಲೆ ಮಲ್ಗೋದಕ್ಕೆ ಜಗಳ ಕಾಯ್ತಿದ್ವಿ. ಬೆಳ್ಳಗಿನ ಸುಂದರ ಮುಖದ ಅಮ್ಮ,  ಅಕ್ಕನ ಜಡೆ ಎಳೆದು ಹೊಡೆತ ತಿಂದು ನೆನಪಿದೆ. ಸ್ಕೂಲಕ್ಕೆ ಕಲಿತ ಎಂಥದ್ದೋ ಕೆಟ್ಟ ಪದಾನ ಅಕ್ಕನ ಮೇಲೆ ಪ್ರಯೋಗಿಸಿ ಅಮ್ಮ ಬಗ್ಗಿಸಿ ಬೆನ್ನ ಮೇಲೆ ಗುದ್ದಿದ್ದು ನೆನಪಿದೆ. ಅಡುಗೆ ಮಾಡಿ ಕೈಗಳನ್ನ ಸೀರೆಗೆ ಒರೆಸಿಕೊಳ್ತಿದ್ದ ಅಮ್ಮನ ಮಡಿಲಲ್ಲಿ ಮಲಗಿದ್ರೆ ಚಟ್ನಿ, ಕಾಯಿತುರಿ, ಮೆಣಸಿನ ಕಾಯಿ, ಮಜ್ಜಿಗೆ, ಎಲ್ಲವೂ ಮಿಶ್ರವಾದ ಒಗರುಗಂಪು ಬರೋದು. ಅಮ್ಮ ಅನ್ನೋ ಭಾವ ಅಲ್ಲಿಂದ ಬಂದದ್ದು. ಅದೆಂಥದೋ ರಕ್ಷಣೆಯ ಭಾವ. ಬೆವರಿನ ಬೆಲೆ ಕಾಣಿಸೋದು. ಆ ವಾಸನೆ ಈಗಲೂ ಮೂಗಲ್ಲಿದೆ. ಈಗಿನ ತುಂಬಾ ಜನ  ಪುನುಗು ಬೆಕ್ಕಿನ ಹಾಗೆ ಇರ್ತಾರೆ. ಅನ್ನಪೂರ್ಣೇಶ್ವರಿ ಅನ್ನಿಸೋದೇ ಇಲ್ಲ. ವಿಶ್ವಸುಂದರಿಯ ಹಾಗೆ ಮಿಸುಕಾಡ್ತಾರೆ. 
’ಎಲ್ಲಿದಿಯೋ’ ಅಕ್ಕನ ಫೋನ್, ರೀಚಾಗಿದೀನಿ, ಇನ್ನೊಂದು ಎರಡು ಗಂಟೆ ಅಲ್ಲಿರ್ತೀನಿ. ಅಪ್ಪ ಹೇಗಿದಾರೆ? ಮೊದಲ ಮಾತು ಅಪ್ಪನ ಬಗ್ಗೆ ಕೇಳಿದ್ದು. ಇದಾರೆ ಕಣೋ, ನೀನು ಬಾರೋ ಬೇಗ. ಅಪ್ಪ ಎರಡು ಸರ್ತಿ ಪ್ರಜ್ಞೆ ತಪ್ಪಿ ಬಿದ್ರು. ಚಿಕ್ಕಪ್ಪ ದೊಡ್ಡಪ್ಪ ಇದಾರೆ ಆದರೂ ಸುಧಾರಿಸೋದು ಕಷ್ಟ. ನೀನಿದ್ರೆ ಸ್ವಲ್ಪ ಸಮಾಧಾನ ಮಾಡ್ಬಹುದು. 
ಬರ್ತಿದೀನೆ. ಭಾವ ಮಕ್ಕಳು ಎಲ್ರೂ ಇದಾರ. 
ನೀನು ಬಾರೋ
ಮಾತಾಡೆ ಒಬ್ನೇ ಇದೀನಿ ಜೊತೇಲ್ಯಾರೂ ಇಲ್ಲ. ಒಂಟಿ ಅನ್ನಿಸಿಬಿಟ್ಟಿದೆ. ಅಳೋದಕ್ಕೂ ಆಗದ ಸ್ಥಿತಿ. ಮಾತಾಡೆ
ಏನ್ ಹೇಳ್ಳೋ.. ಅಮ್ಮ ಒಂದೆರಡು ತಿಂಗಳಿಂದ ವಿಚಿತ್ರವಾಗಿ ಆಡ್ತಿದ್ರು. ನೀನು ಹಾಕ್ತಿದ್ದ ದುಡ್ಡಲ್ಲಿ ಹೋದ್ವರ್ಷ ಮೊಬೈಲ್ ಫೋನ್ ತಗೊಂಡ್ರು. ಮೊದ್ಲು ಕಷ್ಟ ಆಗೊದು ಆಮೇಲೆ ಸುಲಭ ಆಯ್ತು
ಹ್ಮ್ 
ನಿಧಾನಕ್ಕೆ ವಾಟ್ಸಾಪ್ ಫೇಸ್ ಬುಕ್ಕಿಗೂ ಬಂದ್ರು. 
ಹೌದು ಅಮ್ಮ ರೆಕ್ವೆಸ್ಟ್ ಕಳ್ಸಿದ್ದು ನೋಡಿ ಆಶ್ಚರ್ಯ ಆಯ್ತು
ಅದೇ ಕಣೋ ಸಮಸ್ಯೆ. ಅಲ್ಲಿ ಯಾರೋ ಪರಿಚಯ ಆಗಿದಾರೆ , ಅದೂ ಇದೂ ಮಾತಾಡ್ತಾ ಅಮ್ಮನೊಟ್ಟಿಗೆ ಸ್ನೇಹ ಬೆಳೆಸಿಕೊಂಡ್ರಂತೆ. ಅಮ್ಮ ಸದಾ ಮೊಬೈಲ್ ನಲ್ಲಿರೋರು. ಅಪ್ಪಂಗೆ ಸಿಟ್ಟು ಬಂದಿದೆ. ತನ್ನ ಕಡೆ ಗಮನ ಕೊಡ್ತಿಲ್ಲ ಅನ್ನಿಸಿದೆ. ಹೀಗೆ ಒಮ್ಮೆ ಅಪ್ಪ ಅಮ್ಮನ ಮೊಬೈಲ್ ನೋಡಿದಾರೆ. ಅಲ್ಲಿ ಮೆಸೇಜ್ ಗಳನ್ನ ನೋಡಿದಾರೆ. ಮೆಸೇಜ್ ಗಳು ಯಾವಾಗಲೂ ತಪ್ಪಾದ ಅರ್ಥವನ್ನು ಕೊಡ್ತಾವೆ. ನಮ್ಮ ಆ ಕ್ಷಣದ ಮನಸ್ಥಿತಿಯ ಮೇಲೆ ಅದನ್ನು ಅರ್ಥ ಮಾಡ್ಕೊಂತೀವಿ. ಅಮ್ಮ ಅಮ್ಮನನ್ನ ಹಾದರ ಮಾಡಿದೀಯ ಅಂದುಬಿಟ್ರಂತೆ. ನಾನು ಬಂದೆ ಅದೆಲ್ಲವನ್ನ ನೋಡಿದೆ ಅಪ್ಪನನ್ನ ಸಮಾಧಾನ ಮಾಡಿದೆ. ಅಪ್ಪ ವೈಫೈ ಕಿತ್ತು ಹಾಕಿಸಿದ್ರು. ಅಮ್ಮನಿಗೆ ಅವಮಾನ ಆಯ್ತೋ. ತಾನೇನೊ ತಪ್ಪು ಮಾಡಿಬಿಟ್ಟಿದೀನಿ ಅನ್ನೋ ಭಾವದಲ್ಲಿ ಅಮ್ಮ ನರಳಿದ್ಲು. ಅದು ಇಲ್ಲಿಗೆ ಬಂದು ಮುಟ್ಟಿದೆ.
ಇನ್ನು ಹತ್ತು ನಿಮಿಷಕ್ಕೆ ಅಲ್ಲಿ ಬಂದು ಮುಟ್ತೀನಿ. ಬಂದೆ ಕಣೆ
 

Comments