ಕೃಷ್ಣನೊಂದಿಗೆ ರಾಧೆಯ ಕೊನೆಯ ಕ್ಷಣಗಳು

ಕೃಷ್ಣನೊಂದಿಗೆ ರಾಧೆಯ ಕೊನೆಯ ಕ್ಷಣಗಳು

ಬಂದಿತೇ ಕರ್ತವ್ಯದ ಕರೆ?
ಸನ್ನಿಹಿತವಾಯ್ತೆ ಮಥುರೆಗೆ ತೆರಳುವ ಸಮಯ?
ತರವೇ ತೆರಳುವುದು ರಾಧೆಯ ನೋಡದೆ ?
ಏಕೆ ಕೈಯಿಂದ ಜಾರುತಿರುವುದು  ಮುರಳಿ ?
ಮುರಳಿಯ ಉಸಿರು ರಾಧೆ, ಅವಳಿಲ್ಲದೆ ಮುರಳಿಯೇ ?
ಹೊರಟನು ಕೃಷ್ಣನು ಹುಡುಕುತ ಮುರಳಿಯ ಉಸಿರನು.
 
ಅರಿವಿರದೇ ಕಾದಿರುವಳು ರಾಧೆ ಮನಮೋಹನ ಬರುವನೆಂದು
ತಡವಾಯ್ತೆಂದು ಅಲ್ಲೊಮ್ಮೆ ಇಲ್ಲೊಮ್ಮೆ ಮಗದೊಮ್ಮೆ ನೋಡುತಿರುವಳು
ಲತೆಗಳನು ಸವರುತ್ತಾ ಬಂದೊಡನೆ ಹೇಳು ಎನುತ, ಪುಷ್ಪಗಳನ್ನು ನೋಡಿ
ವ್ರಜಪಾಲನ ಅಲಂಕಾರಕೆ ಇಂದು ನಿಮ್ಮ ಸರದಿ ಎಂದು ಬೊಗಸೆಯಲ್ಲಾಯುತ್ತಾ,
ಕಣ್ಣದುರಲು ಅಳುಕಿ ಕ್ಷೇಮವೇ ನನ್ನ ಕೃಷ್ಣ, ಕೃಷ್ಣಾ ಕೃಷ್ಣಾ ಎಂದು ಕೂಗುತ್ತಾ,
ಯಮುನೆಯೇ ನೀ ಕಂಡೆಯಾ ನನ್ನ ಕೃಷ್ಣನ, ಇಂದು ನೀ ಸೋಕಿಲ್ಲವೇ ಅವನ ಪಾದಗಳ?
ಗೋವುಗಳೇ ನೀವುಗಳು ಕಂಡಿರೇ ನನ್ನ ಗೋಪಾಲನ, ಕೇಳಲಿಲ್ಲವೇ ಅವನ ಮುರಳಿನಾದವನಿಂದು?
ಸವಿಯಲಿಲ್ಲವೇ ನಿಮ್ಮ ಜಿಹ್ವೆಯಿಂದು ನೆಕ್ಕಿ ಕೃಷ್ಣನ ಕೈಗಳ ಅಮೃತವನಿಂದು?
ಮುದ್ದಿಸಲಿಲ್ಲವೇ ಕೃಷ್ಣನ ಕೈಗಳು ನಿಮ್ಮನಿಂದು, ನೀವೂ ಕರೆಯಿರಿ ಗೋಪಾಲನ ಎಂದಳುತ
ಕಪೋತ ಶುಕಗಳೇ ಕೃಷ್ಣನಿಗೇಕೇ ತಡ?
ಹುಡುಕಿ ನೋಡಿ ಕರೆ ನೀಡಿ ಬರ ಹೇಳಿ ರಾಧೆ ಕಾಯುತಿಹಳೆಂದು
ದಾರಿ ತಪ್ಪಿತೇ ವ್ರಂದಾವನ ಸಂಚಾರಿಗೆ?
ಇಂದೇಕೋ ತಳಮಳ, ತ್ರಿಭಂಗಿಯ ಸಾನಿಧ್ಯದಾತುರ.
 
ಓ ಹರಿಣಗಳೇ... ಕೃಷ್ಣ ಬಂದೊಡನೆ ಬಿಡದಿರಿ ಸುತ್ತುವರಿದು
ಓ ಕೋಗಿಲೇ... ನಿಮ್ಮವರೆಲ್ಲರ ಒಟ್ಟುಗೂಡಿಸಿ ಮುರಳಿಯನಾದಕೆ ಪಲ್ಲವಿ ಹಾಡಿರಿ
ಓ ನವಿಲುಗಳೇ.. ಸಮೂಹದಿ ನಾಟ್ಯವಾಡಿ ಜಗನ್ಮೋಹನನೇ ಬಂಧಿಸಿರಿ
ಓ ಗೋವರ್ಧನನೇ... ವಾಯುವೇಗವ ತಡೆದು ನೀ ನೀಡು  ಹಿತಮಾರುತವ
ಓ ವಾಯುವೇ... ಯಮುನೆಯ ಮೇಲಿನ ತಂಪನು ಕೃಷ್ಣನಿಗೆ ಸಿಂಪಡಿಸು
ಓ ಯಮುನೆಯೇ... ನಿನ್ನೋರೆತದ ನಾದದಿ ಮೈಮರೆಸಿ ಕುಂಜವಿಹಾರನ ಪವಡಿಸುವುದು
 
ಮೆಲ್ಲನೆ ನಡೆಯುತ್ತಾ ರಾಧೆಯ ಹುಡುಕುತ್ತಾ ಎದುರು ನಿಂತ ನವನೀತ
ಮಾತನಾಡಿತು ಕಣ್ಣುಗಳು ಸಂಧಿಸಿ, ಆವರಿಸಿ ಪರಿಪೂರ್ಣ ಪ್ರೇಮ ಮಾತು ಬೇಡವಾಯ್ತು,
ಸಖೀ ಬ್ರಂದಾವನಕೆ ನಾ ಬಂದ ಕಾರ್ಯವಾಯ್ತು, ಧರ್ಮದ ಕರೆ ಬಂದಾಯ್ತು,
ನಿನ್ನ ಸನಿಹವಿಂದೇ ಎನಗೆ ಕೊನೆಯಾಯ್ತು, ಮನುಕುಲ ಸಲಹಲು ಎನ್ನನು ಬೀಳ್ಕೊಡು ಎಂದ
ಮರೆಯದು ಈ ಜಗ ರಾಧೇಕೃಷ್ಣ ನಾಮ, ಪವಿತ್ರವಾಗುವುದೀ ಬ್ರಂದಾವನ ಧಾಮ
ನಿನ್ನೊಡನೆ ನಾ ಅಮರನೆಂದ.
 
ತೆಗೆಯದೆ ನೆಟ್ಟ ನೋಟದಿ ಕೃಷ್ಣ ಬಿಂಬವ ಸೆಳೆದಳು ಹೃದಯದಲಿ ಪ್ರೇಮಮಯಿ ರಾಧೆ
ಕೊನೆಯದೊಂದಾಸೆ ನಿನ್ನ ನೆನಪಿಗಾಗಿ
ಮತ್ತೇನು ಬೇಕಿಲ್ಲ ನಿನ್ನ ಮುರಲಿಗಾನವ ಕೇಳುವಾಸೆ -
ಹಾಡು ಕೃಷ್ಣ ಹಾಡು, ಹಾಡು ಕೃಷ್ಣ ಹಾಡು.
ಸಿಹಿಯಾದ ಹಾಡು ಅಮೃತದಂತೆ ಹರಿವ ಹಾಡು.
ಮಾತನಾಡು ಮುಕುಂದ ಮಾತನಾಡು,
ನನ್ನ ಮನಸು ತುಂಬಿ ತುಳುಕುವ ತನಕ ಮಾತನಾಡು.
ವೇದಸಾರದ ತಿಳಿ ನಾದಬ್ರಹ್ಮನ ಲಯತಾಳ
ವೇಣುಗಾನದಲಿ ತುಂಬಿ ಹಾಡು ಕೃಷ್ಣ .
ಹಾಡು ಕೃಷ್ಣ ಹಾಡು ನಿನ್ನ ರಾಧೆಗಾಗಿ ಕೊನೆಯ ಬಾರಿ ಹಾಡು,
ನನ್ನ ಮನಸು ತುಂಬಿ ತುಳುಕುವ ತನಕ ಹಾಡು,
ಹಾಡು ಕೃಷ್ಣ ಹಾಡು, ಹಾಡು ಕೃಷ್ಣ ಹಾಡು, ಕೃಷ್ಣಾ ಕೃಷ್ಣಾ ಕೃಷ್ಣಾ!
 
ಆವರಿಸಿತು ಮುರಳಿಗಾನ ಸಂಪೂರ್ಣ ವ್ರಂದಾವನ
ಕೇಳಿತು ಪ್ರಕ್ರತಿಯು ನಾದ ಬ್ರಹ್ಮನ ವೇಣುಗಾನ
ಕಣ್ಣು ನೆಟ್ಟಂತೆ ನಿಂತಿತು ಮನಸು ತುಂಬಿ ತುಳುಕಿತು
ಮುರಳಿಗಾನದಲಿ ರಾಧೆಯ ಜೀವ ತುಂಬಿತು
ನೇವರಿಸಿ ರಾಧೆಯ, ಕೃಷ್ಣನ ಕೈಗಳು ನೆಟ್ಟ ಕಣ್ಣುಗಳನು ಮುಚ್ಚಿತು
ರಾಧೆಯ ಹ್ರದಯದ ಮೇಲೆ ಮುರಳಿಯು ಜಾರಿತು
ರಾಧೆಗಾಗಿ ಹಾಡಿದ ಹಾಡು ಕೃಷ್ಣನ ಹಾಡು ಕೊನೆಯ ಹಾಡು
ಮುರಳಿಯ ಉಸಿರು ನಿಂತು ಹಾಡದಾಯ್ತು ಕೃಷ್ಣನು ಇನ್ನೆಂದೂ
 
ಶುಕಗಳಿಗೆ ಮಾತು ಬರದಾಯ್ತು ಕಪೋತಗಳ ಗುಟುರು ಗಂಟಲೊಳಗೆ ಗಂಟಾಯ್ತು.
ಹರಿಣಗಳಿಗೆ ಕಾಲು ಮುರಿದಂತಾಯ್ತು, ಗೋವರ್ಧನಗಿರಿಗೆ ನೆಲೆಯೇ ಇಲ್ಲದಂತಾಯ್ತು.
ವ್ರಕ್ಷಗಳು ಅಲುಗದೆ ನಿಂತವು, ಬಳ್ಳಿಗಳು ಸೊರಗಿದವು, ಪುಷ್ಪಗಳು ಮುದುಡಿದವು
ಗೋವುಗಳ ಕರೆ ಹೊರಬರದಾಯ್ತು ಕಣ್ಣುಗಳೇ ಯಮುನೆಯಾಯ್ತು
ನೋಡೆವೇ ಇನ್ನು ಪ್ರಕ್ರತಿ ಪುರುಷನ ಪ್ರೇಮ ನರ್ತನವ
ಕೇಳೆವೇ ಇನ್ನು ಮುರಳಿಯ ಕರೆ, ನೋಡೆವೇ ಗೋಪಾಲನ ಇನ್ನೆಂದಿಗೂ
ಜುಳು ಜುಳು ಸ್ತಬ್ದವಾಯ್ತು ಯಮುನೆಯ ಉಸಿರು ನಿಂತಂತೆ
ನಿಶ್ಚಲನಾದನು ವಾಯು ಜಡವಾಯ್ತು ಮರ ಎಲೆ ತರಗೆಲೆ
ಬರಿದಾಯಿತು ಪರಿಪೂರ್ಣ ಪ್ರೇಮದ ಜಗತು
ಮುಗಿಯಿತೇ ವ್ರಜಭೂಮಿಯ ಪುಣ್ಯ?
ಇನ್ನೆಂದಿಗೂ ಇಲ್ಲಿ ನಡೆಯದೆ ಕೃಷ್ಣನ ಪಾದ?
ಮರುಗಿತು ವ್ರಜಭೂಮಿ ಅಂದು.
 
ರಾಧೆಯ ಜೀವದುಸಿರು ಕೃಷ್ಣ ಪ್ರೇಮವೊಂದೇ
ಕೃಷ್ಣನೊಂದೆ ಮನದಲಾವರಿಸಿದ ವಿಚಾರಗಳು
ಕೃಷ್ಣನ ರೂಪವೊಂದೆ ಕಣ್ಣಮುಂದೆ ಎಚ್ಚರದಲಿ ನಿದ್ರೆಯಲಿ
ಯಮುನೆಯ ನೀಲಿಯೇ ಕೃಷ್ಣನ ಮೋಹಕ ರೂಪದ ನೆನಪು
ಪಕ್ಷಿಗಳ ಕಲರವವೇ ಕೃಷ್ಣನ ನಗುವಿನ ಸದ್ದು
ಕೃಷ್ಣ ಮುರಳಿಗಾನ ನಾದವೇ ರಾದೆಯ ಉಸಿರು
ಆವರಿಸಿದೆ ಇಂದಿಗೂ ಕೃಷ್ಣನ ಹಾಡು ವ್ರಂದಾವನದಲಿ
ರಾಧೆಕೃಷ್ಣ ನಾಮದ ಸವಿಯಲ್ಲಿ
ಭಕ್ತಿಗೆ ಪ್ರೇಮಕೆ ಸಾಟಿ ಇನ್ನೆಂದೂ ರಾಧೆಕೃಷ್ಣ ನಾಮ ಮಾತ್ರವೇ ಒಂದು!.
ರಾಧೆಕೃಷ್ಣ, ರಾಧೆಕೃಷ್ಣ, ರಾಧೆಕೃಷ್ಣ.
 
(ಕೃಷ್ಣನೊಂದಿಗೆ ರಾಧೆಯ ಕೊನೆಯ ಕ್ಷಣಗಳು- Last Moments of Radha with Krishna@ಸಾಯಿನಾಥ ಬಾಲಕೃಷ್ಣ, ಬೆಂಗಳೂರು.
ಪ್ರೇರಣೆ – ಭಗವಾನ್ ಶ್ರೀ ಸತ್ಯ ಸಾಯಿ ಬಾಬ ಅವರ ಹಾಡು – The last song of Krishna.
 

Comments