ಗುರುತಿನ ಹೆಜ್ಜೆಗಳು

ಗುರುತಿನ ಹೆಜ್ಜೆಗಳು

ಕವನ

ಅಪ್ಪ ಅಮ್ಮನ ಮಡಿಲಲಿ
ಆ ಸುಂದರ ಬಾಲ್ಯದಲಿ
ನಾನಿಟ್ಟ ಅಂಬೆಗಾಲಿನ ಹೆಜ್ಜೆಗಳು
ಮರೆಯಲಾಗದ ಪ್ರಪ್ರಥಮ ಹೆಜ್ಜೆಗಳು.
 
ಅಮ್ಮ ತೋರಿದ ಮುದ್ದು ಮಮತೆಯಲಿ
ಅಪ್ಪ ತೋರಿದ ಬುದ್ದಿ ಮಾರ್ಗದಲಿ
ಗುರು ತೋರಿದ ವಿದ್ಯೆಯ ಹಾದಿಯಲಿ
ಈಗ ನೆನಪಾಗುತಿವೆ ನಾ ನಡೆದಿದ್ದ ಶ್ರದ್ದೆಯ ಹೆಜ್ಜೆಗಳು.
 
ನನ್ನ ಜೀವನದಿ ನಾನಿಟ್ಟ ಹೆಜ್ಜೆಗಳು
ಮರೆಯಲಾಗದ ತಿರುವುಗಳು
ಅವಳ ಪ್ರೀತಿಗೆ ಹಂಬಲಿಸಿ
ಹಿಂಬಾಲಿಸಿದ ಹೆಜ್ಜೆಗಳು
ಹೇಳಿಕೊಳ್ಳ(ಲಾಗ)ದೇ ಹಿಂಜರಿದ ಹೆಜ್ಜೆಗಳು.
 
ಹಲವು ಸೋಲುಗಳು ಕೆಲವು ವಿಜಯಗಳು
ಕಿತ್ತಿಡಲು ಆಗುತ್ತಿಲ್ಲ ದುಃಖದ ಹೆಜ್ಜೆಗಳು
ಕಿತ್ತು ತಿನ್ನುವ ಬಡತನದ ಮಾಯೆಗಳು.
 
ಸುಂದರ ಬೆಟ್ಟದ ತುದಿಯ ಪಯಣಕೆ
ಚಪ್ಪಲಿಗಳಿಲ್ಲದ ಕಾಲ್ನಡಿಗೆಗಳು
ಕಲ್ಲು-ಮುಳ್ಳುಗಳ ತುಳಿದು
ಎಳ್ಳು-ನೀರು ಬಾಯಿಗೆ ಬರುವವರೆಗೂ
ಎಲ್ಲೆಂದರಲ್ಲಿ ದುಡಿದು, ದಣಿದು ಕೊನೆಗೂ
ನಿಲ್ಲಲಾಗದ ನನ್ನನು ಹೊತ್ತೊಯ್ಯುತಿವೆ
ಎಂಟು ಕಾಲಿನ ಅದಾವುದೋ ಋಣಮುಕ್ತ ಹೆಜ್ಜಗಳು.
 
ಭಾವನಾಪ್ರಿಯ ಮೌನೇಶ
 

Comments

Submitted by kavinagaraj Thu, 07/12/2018 - 21:55

ಹೆಜ್ಜೆಗಳು ಗುರುತು ಉಳಿಸಿದರೆ, ಹೆಜ್ಜೆಯಿಟ್ಟವನು ಸಾವಿನ ನಂತರವೂ ಬದುಕುವನು!