ಮರುಕಥನ - ಒಂದು ಬಂಗಾಲಿ ಕತೆ
ತುಂಬಿದ ಮದುವೆ ಮನೆ. ಯಜಮಾನನ ಮಗಳ ಮದುವೆ ನಡೆದಿದೆ. ಎಲ್ಲರ ಹಾಗೆ ಯಜಮಾನನ ತಂಗಿ ಬಹಳಷ್ಟು ದುಡಿದಿದ್ದಾಳೆ. ಆದರೆ ಬೀಗರು ಬಂದಾಗ, ಆಕೆಯ ಗಂಡ - ಆತನ ತಲೆ ಸರಿಯಿಲ್ಲ - ನಡೆದುಕೊಂಡ ರೀತಿಯಿಂದ ಯಜಮಾನನಿಗೆ ತಲೆ ತಗ್ಗಿಸುವಂತಾಗಿ ತಂಗಿಯ ಗಂಡನನ್ನು ಬೈದಿದ್ದಾನೆ. ಯಜಮಾನನ ತಂಗಿ - ಆಕೆಯ ಹೆಸರು ಛವಿ - ಸ್ವಾಭಿಮಾನಿ, ತನ್ನ ಗಂಡನೊಂದಿಗೆ ಅಟ್ಟದ ಮೇಲಿನ ಕೋಣೆ ಸೇರಿದ್ದಾಳೆ. ಯಾವುದೇ ಶಾಸ್ತ್ರಗಳಲ್ಲೂ ಪಾಲುಗೊಳ್ಳುತ್ತಿಲ್ಲ. ಯಾರು ಹೋಗಿ ಕರೆದರೂ ಬರುತ್ತಿಲ್ಲ , ಊಟಕ್ಕೂ ಕೆಳಗಿಳಿಯಲಿಲ್ಲ. ಅಲ್ಲಿಗೇ ಊಟ ಕಳಿಸಲು ಮರಳಿ ಕಳಿಸಿದಳು - ಒಂದೇ ಹಟ, ನಾನೂ ಊಟ ಮಾಡುವುದಿಲ್ಲ. ಗಂಡನೂ ಉಣ್ಣುವುದಿಲ್ಲ.
ಅಣ್ಣನೇ ಹೋಗಿ ತಪ್ಪಾಯಿತು ಎಂದು ಕೈ ಮುಗಿದರೂ ಮಣಿಯಲಿಲ್ಲ.
ಹಾಗೇ ಸಂಜೆಯಾಯಿತು. ಕೊನೆಗೆ ಅವಳಿಗೆ ಆಪ್ತನಾದ ಎದುರು ಮನೆಯಾತನೂ ಹೋದ. ಅವಳು ಕೋಣೆಯ ದೀಪವನ್ನೂ ಹಚ್ಚಿರಲಿಲ್ಲ . ಗಂಡನ ಕುರಿತು ವಿಚಾರಿಸಿದಾಗ ಮಲಗಿದ್ದಾನೆ ಎಂದಳು. ಅವಳಿಗೆ ತಿಳಿಹೇಳಲು ಪ್ರಯತ್ನಿಸಿದ. ಇಷ್ಟೊಂದು ಹಟ ಒಳ್ಳೆಯದಲ್ಲ ಎಂದ. ಕೊನೆಗೆ ಗಂಡನಿಗಾದರೂ ಉಣಲು ಬಿಡು ಎಂದ. ಅವರು ಇವತ್ತು ಊಟ ಮಾಡುವುದಿಲ್ಲ, ನಾಳೆಯೂ ಊಟ ಮಾಡುವುದಿಲ್ಲ, ಇನ್ನು ಯಾವತ್ತಿಗೂ ಊಟ ಮಾಡುವುದಿಲ್ಲ ಎಂದಳು.
ದೀಪವನ್ನಾದರೂ ಹಾಕು ಎಂದರೆ ಅದನ್ನು ಮಾಡಳು.
"ಎಂಥಾ ಕಲ್ಲು ಮನಸ್ಸು ನಿನ್ನದು? ನಿನ್ನ ಹಠ ಅತಿಯಾಯಿತು. ನಾನು ಕೆಳಗೆ ಹೋಗಿ ಏನು ಹೇಳಲಿ " ?
ಎಂದರೆ " ಏನೂ ಹೇಳಬೇಡ, ಸಜ್ಜೆ ಮನೆಯಲ್ಲಿ ವಧೂವರರ
ರಾತ್ರಿ ಸಾಂಗವಾಗಿ ನೆರವೇರಲಿ, ವ್ಯರ್ಥವಾಗದಿರಲಿ" ಎಂದಳು.
ನಿನ್ನ ಗಂಡನನ್ನಾದರೂ ನನ್ನೊಡನೆ ಮಾತನಾಡಲು ಬಿಡು ಎಂದರೆ ನೀನಿನ್ನು ಹೋಗು, ನನಗೆ ನಿದ್ದೆ ಬರುತ್ತಿದೆ ಎಂದು ಮುಖದ ಮೇಲೆ ಹೊಡೆದಂತೆ ಬಾಗಿಲು ರಪ್ಪನೆ ಹಾಕಿ ಚಿಲಕ ಹಾಕಿಬಿಟ್ಟಳು ಛವಿ.
ಮರುದಿನ ಮುಂಜಾನೆ ಸಹಜವಾಗಿ ಕೆಳಗೆ ಬಂದು
ಸಹಜವಾಗಿ ಹೇಳುತ್ತಾಳೆ - ನಿನ್ನೆಯ ಮದುವೆ ಗಡಿಬಿಡಿಯಲ್ಲಿ ನಿಮಗೆ ತೊಂದರೆ ಕೊಡಲು ಇಚ್ಛಿಸಲಿಲ್ಲ. ಈಗ ಇನ್ನು ತಡ ಮಾಡುವ ಹಾಗಿಲ್ಲ. ಈಗ ನೀವೇ ಹೋಗಿ ನೋಡಿ, ಏನು ಬೇಕೋ ಮಾಡಿ, ಹೇಗಿದ್ದರೂ ಮುಂದಿನ ಕೆಲಸ ಮಾಡಬೇಕಾದವರು ನೀವೇ.
Comments
ಉ: ಮರುಕಥನ - ಒಂದು ಬಂಗಾಲಿ ಕತೆ
ಛವಿಯ ಗಂಡನ ಅಂತ್ಯ ಹೇಗೆ ಮತ್ತು ಏಕೆ ಆಯಿತು ಎಂಬ ಕುತೂಹಲ ಉಳಿಸಬಾರದಿತ್ತು. ಛವಿಯ ಮತ್ತು ಆಕೆಯ ಗಂಡನ ಪೂರ್ಣ ವಿವರ ಇದ್ದಿದ್ದರೆ ಇಂತಹ ಅಂತ್ಯ ಊಹಿಸಬಹುದಿತ್ತು.
In reply to ಉ: ಮರುಕಥನ - ಒಂದು ಬಂಗಾಲಿ ಕತೆ by kavinagaraj
ಉ: ಮರುಕಥನ - ಒಂದು ಬಂಗಾಲಿ ಕತೆ
ಸರ್, ಮೂಲ ಕತೆಯಲ್ಲೂ ಹಾಗೆಯೇ ಇದೆ.
In reply to ಉ: ಮರುಕಥನ - ಒಂದು ಬಂಗಾಲಿ ಕತೆ by shreekant.mishrikoti
ಉ: ಮರುಕಥನ - ಒಂದು ಬಂಗಾಲಿ ಕತೆ
ಮೂಲ ಕತೆಗೆ ನನ್ನ ಈ ಪ್ರತಿಕ್ರಿಯೆ! :}