ಸ್ವಾತಂತ್ರ್ಯ ??
ಗುರು ಒಂದು ಟೀ ಕೊಡಮ್ಮ...
ಉರಿಯುತ್ತಿದ್ದ ಸೀಮೆ ಎಣ್ಣೆ ಸ್ಟವ್ ಮೇಲೆ ಇಟ್ಟಿದ್ದ ಟೀ ಪಾತ್ರೆಯಲ್ಲಿದ್ದ ಕೆನೆ ಕಟ್ಟಿದ್ದ ಟೀ ಅನ್ನು ಒಮ್ಮೆ ಸೌಟಿನಿಂದ ಕದಡಿ ಒಂದು ಗ್ಲಾಸಿಗೆ ಸುರಿದು ಕೊಟ್ಟ.... ನಾನು ಅವನು ಕೊಟ್ಟ ಟೀ ಅನ್ನು ಮೆಲ್ಲಗೆ ಸುರ್ ಎಂದು ಸೌಂಡ್ ಮಾಡಿಕೊಂಡು ಕುಡಿಯುತ್ತಾ ಹಾಗೇ ಅಲ್ಲಿದ್ದ ಪೇಪರ್ ಕೈಗೆತ್ತಿಕೊಂಡು ಕಣ್ಣಾಡಿಸುತ್ತಿದ್ದೆ.
ಸ್ವಲ್ಪ ಹೊತ್ತಿನ ನಂತರ ಅವನು ಏನ್ಸಾರ್ ಈ ಸಲ ಸ್ವಾತಂತ್ರ್ಯ ದಿನಾಚರಣೆ ಜೋರಾ ಎಂದು ಕೇಳಿದ. ನಾನು ಪೇಪರ್ ಪಕ್ಕಕ್ಕಿಟ್ಟು ಅಯ್ಯೋ ಸುಮ್ನಿರಪ್ಪಾ ಏನ್ ಸ್ವಾತಂತ್ರ್ಯನೋ ಏನೋ...ಏನು ಮಾಡಲು ಹೋದರು ಅದು ಮಾಡಬಾರದು ಇದು ಮಾಡಬಾರದು ಅಂತ ನಿರ್ಬಂಧಗಳು... ಇದನ್ಯಾರು ಸ್ವಾತಂತ್ರ್ಯ ಅಂತಾರೆ...
ಅದೇನ್ ಸರ್ ಹಾಗಂತೀರಾ...ನಮ್ ದೇಶದಲ್ಲಿ ಸ್ವಾತಂತ್ರ್ಯ ಇಲ್ಲ ಅಂದರೆ ನನಗೆ ನಂಬಲು ಸಾಧ್ಯವೇ ಇಲ್ಲ... ನಾನು ನೋಡಿದ ಮಟ್ಟಿಗೆ ನಮ್ಮಲ್ಲಿರೋ ಅಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ದೇಶದಲ್ಲಿಲ್ಲ....
ಅಲ್ಲಾ ಗುರು ಅದು ಹೇಗೆ ಹೇಳ್ತೀಯ... ಯಾವುದಾದರೂ ಒಂದು ಉದಾಹರಣೆ ಕೊಡು ನೋಡೋಣ...
ಸರ್ ಒಂದೇನು ಎಷ್ಟೊಂದು ಕೊಡ್ತೀನಿ... ಮೊದಲಿಗೆ ಬರವಣಿಗೆಯಲ್ಲಿ ಸ್ವಾತಂತ್ರ್ಯ... ನಮ್ಮಲ್ಲಿ ನೀವು ಯಾವುದೇ ಹಿಂದೂ ಗ್ರಂಥವನ್ನು ಅಥವಾ ಹಿಂದೂ ದೇವತೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಹೀಯಾಳಿಸಿ ಬರೆಯಬಹುದು... ನೀವು ಅದನ್ನು ಪ್ರಶ್ನಿಸಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನುತ್ತಾರೆ.... ಇನ್ನು ಮಾತಿನ ಸ್ವಾತಂತ್ರ್ಯ, ನೀವು ಓರ್ವ ಹಿಂದೂ ಸ್ವಾಮೀಜಿಗಳನ್ನು, ಹಿಂದೂ ಮಠಗಳನ್ನು, ಹಿಂದೂ ಸಂಘಟನೆಗಳನ್ನು ವಾಚಾಮಗೋಚರವಾಗಿ ನಿಂದಿಸಬಹುದು... ಅದನ್ನು ಪ್ರಶ್ನಿಸಿದರೆ ಅದನ್ನು ವಾಕ್ ಸ್ವಾತಂತ್ರ್ಯ ಎನ್ನುತ್ತಾರೆ.
ಇನ್ನೂ ಇದೆ ಸಾರ್... ಬೇರೆ ಯಾವುದೇ ಧರ್ಮದಲ್ಲಿ ಏನೇ ಆಚರಣೆಗಳು ಇದ್ದರು, ಸಂಪ್ರದಾಯಗಳು ಇದ್ದರೂ, ಪದ್ಧತಿಗಳು ಇದ್ದರೂ ಅದು ಸಹನೀಯ ಮತ್ತು ಸ್ವೀಕೃತ... ಅದೇ ಹಿಂದೂ ಧರ್ಮದಲ್ಲಿ ಎಷ್ಟೇ ಪುರಾತನ ಆಚರಣೆ ಇದ್ದರೂ ಸಂಪ್ರದಾಯ ಮತ್ತು ಪದ್ಧತಿಗಳು ಇದ್ದರೂ ಅದು ಮೂಢನಂಬಿಕೆ ಮತ್ತು ಗೊಡ್ಡು ಆಚರಣೆಗಳು ಎಂದು ಯಾವುದೇ ನಿರ್ಬಂಧವಿಲ್ಲದೆ ವಿರೋಧಿಸುತ್ತಾರೆ... ಅದು ಸ್ವಾತಂತ್ರ್ಯವಲ್ಲವೇ...
ಇನ್ನು ಈ ದೇಶದಲ್ಲಿ ಯಾವುದೇ ರಾಜಕಾರಣಿ ಇರಬಹುದು ಅಥವಾ ಸಿನಿಮಾ ನಟರಿರಬಹುದು ಎಂಥಹ ದೊಡ್ಡ ಅಪರಾಧ ಮಾಡಿದರೂ ಯಾವುದೇ ಭಯವಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿರಬಹುದು.. ಕೊಲೆ, ಸುಲಿಗೆ,ದೇಶದ್ರೋಹ ಮಾಡಿದರೂ ಅಥವಾ ಅದರಲ್ಲಿ ಭಾಗಿಯಾಗಿದ್ದರೂ ನಿರ್ಭಯವಾಗಿ ಆಚೆ ಬಂದು ತಾವು ಏನೂ ಮಾಡೇ ಇಲ್ಲ ಎನ್ನುವಂತೆ ಸ್ವತಂತ್ರವಾಗಿ ಓಡಾಡುತ್ತಾರೆ ಮತ್ತೆ ಅವರನ್ನು ದೊಡ್ಡ ವ್ಯಕ್ತಿಗಳಂತೆ ಬಿಂಬಿಸಿ ಸಿನಿಮಾಗಳೇ ಮಾಡುತ್ತಾರೆ... ಇದಕ್ಕಿಂತ ಸ್ವಾತಂತ್ರ್ಯ ಬೇಕಾ ಸರ್...
ಇನ್ನೊಂದು ಪಂಗಡ ಇದೆ ಇದರಲ್ಲಿ..... ಸಾರ್ ಸಾಮಾನ್ಯವಾಗಿ ಡಾಕ್ಟರೇಟ್ ಯಾರಿಗೆ ಕೊಡುತ್ತಾರೆ ಹೇಳಿ... ಒಂದು ವಿಷಯದಲ್ಲಿ ವಿಶೇಷವಾಗಿ ಅಧ್ಯಯನ ಮಾಡಿ ಅದರಲ್ಲಿ PHD ಮಾಡಿ ಸಾಧನೆ ಮಾಡಿದವರಿಗೆ ಇಲ್ಲವಾದರೆ ಯಾವುದೇ ರಂಗದಲ್ಲಿ ಇದುವರೆಗೂ ಯಾರೂ ಮಾಡದ ಸಾಧನೆ ಏನಾದರೂ ಮಾಡಿದರೆ ಅಂಥವರಿಗೆ ಗೌರವಪೂರ್ವಕವಾಗಿ ಡಾಕ್ಟರೇಟ್ ಕೊಡುವುದು ಸಹಜ... ಆದರೆ ನಮ್ಮಲ್ಲಿ ಯಾರು ಬೇಕಾದರೂ ಡಾಕ್ಟರೇಟ್ ತೆಗೆದುಕೊಳ್ಳಬಹುದು...ಭೂಗತ ಲೋಕದ ಪಾತಕಿಗಳು, ಸಣ್ಣ ಪುಟ್ಟ ನಟ ನಟಿಯರು, ರಾಜಕೀಯಕ್ಕೆ ಅಂಬೆಗಾಲಿಡುತ್ತಿರುವ ಪುಢಾರಿಗಳು, ಬುದ್ಧಿಜೀವಿಗಳು,ಪ್ರಗತಿಪರರು, ಚಿಂತಕರು ಎಂದು ಮೈ ಪರಚಿಕೊಳ್ಳುವ ಎಲ್ಲರಿಗೂ ಡಾಕ್ಟರೇಟ್ ಸಿಗುತ್ತದೆ... ಇದು ಸ್ವಾತಂತ್ರ್ಯ ಅಲ್ಲವೇ...
ಇನ್ನೂ ಒಂದು ವಿಷಯ ಇದೆ ಸರ್... ನಮಗೆಲ್ಲರಿಗೂ ಯಾರಿಗೆ ಬೇಕೋ ಅವರಿಗೆ ಮತ ಹಾಕುವ ಸ್ವಾತಂತ್ರ್ಯ ಇದೆ ತಾನೇ...ಅದೇ ರೀತಿ ಚುನಾವಣೆಯಲ್ಲಿ ಸೋತವರು ಸೋತವರು ಒಂದಾಗಿ ಅಧಿಕಾರ ಮಾಡುವ ಸ್ವಾತಂತ್ರ್ಯ ಇಲ್ಲವ... ಇದಕ್ಕಿಂತ ಇನ್ನೇನು ಸ್ವಾತಂತ್ರ್ಯ ಬೇಕು ಸರ್ ನಿಮಗೆ... ಇಷ್ಟೆಲ್ಲಾ ವಿಧದಲ್ಲಿ ಸ್ವಾತಂತ್ರ್ಯ ಸಿಗುತ್ತಿರುವ ನಮ್ಮ ದೇಶದಲ್ಲಿ ನಿಮಗೆ ಯಾವ ವಿಷಯದಲ್ಲಿ ಸ್ವಾತಂತ್ರ್ಯ ಇಲ್ಲ... ??
ಗುರುವೇ... ಸಾಕಪ್ಪಾ ಸಾಕು ಸಿಕ್ಕಾಪಟ್ಟೆ ತಿಳ್ಕೊಂಡಿದೀಯ ನೀನು... ಈ ಸಂಭ್ರಮಕ್ಕೇನಾ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಅಂತ ಮಹಾನುಭಾವರು ನಮಗೆ ಸ್ವಾತಂತ್ರ್ಯ ಕೊಡಿಸಲು ಹೋರಾಡಿದ್ದು...
ಹಾ ಸರ್... ಭಗತ್ ಸಿಂಗ್ ಅಂದ ಹಾಗೆ ನೆನಪಾಯಿತು... ಅಂಥ ಮಹಾನುಭಾವರನ್ನು ನಮ್ಮವರು ಉಗ್ರಗಾಮಿ ಎಂದರೂ ಯಾರೂ ತಡೆಯಲಿಲ್ಲ... ಅದೂ ಕೂಡ ಸ್ವಾತಂತ್ರ್ಯ ಅಲ್ಲವೇ...
ಬೇಡ ಗುರು ಬೇಡ... ಸಾಕು ಮಾಡು ಇದೆಲ್ಲ ಕೇಳ್ತಿದ್ದರೆ ನನ್ನ ರಕ್ತ ಕುದಿಯುತ್ತದೆ... ಇಂಥಹ ಸ್ವಾತಂತ್ರ್ಯ ಇದ್ದರೆಷ್ಟು ಬಿಟ್ಟರೆಷ್ಟು...
Comments
ಉ: ಸ್ವಾತಂತ್ರ್ಯ ??
ನಿಜ ಸರ್, ನಮ್ಮಲ್ಲಿ ಸ್ವಾತಂತ್ರ್ಯಕ್ಕಿಂತ ಸ್ವೇಚ್ಛಾಚಾರವೇ ಜಾಸ್ತಿ.