ಭಾಗ - ೧ ಭೀಷ್ಮ ಯುಧಿಷ್ಠಿರ ಸಂವಾದ: ಮೂಷಿಕ ಮಾರ್ಜಾಲ ವೃತ್ತಾಂತವು

ಭಾಗ - ೧ ಭೀಷ್ಮ ಯುಧಿಷ್ಠಿರ ಸಂವಾದ: ಮೂಷಿಕ ಮಾರ್ಜಾಲ ವೃತ್ತಾಂತವು

        ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
         ಯುಧಿಷ್ಠಿರನು ಭೀಷ್ಮನನ್ನು ಹೀಗೆಂದು ಪ್ರಶ್ನಿಸಿದನು,
         ಪಿತಾಮಹಾ! ಬಲವಂತರಾದ ಶತ್ರುಗಳ ಮಧ್ಯೆ ಸಿಲುಕಿಕೊಂಡ ಒಬ್ಬ ಬಲಹೀನನಾದ ರಾಜನು ಏನು ಮಾಡಬೇಕು? ಶತ್ರುಗಳ ಬಾಧೆಯಿಂದ ತನ್ನನ್ನು ತಾನು ಯಾವ ವಿಧವಾಗಿ ಕಾಪಾಡಿಕೊಳ್ಳಬೇಕು? ಆ ಕಡೆಯವರನ್ನು ಮತ್ತು ಈ ಕಡೆಯವರನ್ನು ನಿಗ್ರಹಿಸಿ ತಾನು ಯಾವ ವಿಧವಾಗಿ ದಡ ಸೇರಬೇಕು? ಯಾವ ರೀತಿಯಾಗಿ ವಿಜಯವನ್ನು ಸಾಧಿಸಬೇಕು? ನನ್ನ ಸಂಶಯವನ್ನು ನಿವಾರಿಸಬೇಕಾಗಿ ಬೇಡಿಕೊಳ್ಳುತ್ತಿದ್ದೇನೆ." ಹೀಗೆ ಹೇಳಿದ ಧರ್ಮರಾಯನು ಕೈಗಳನ್ನು ಜೋಡಿಸಿ ವಿನಯವೇ ಮೂರ್ತಿವೆತ್ತಂತವನಾಗಿ ಬದಿಗೆ ಸರಿದು ನಿಂತುಕೊಂಡನು. 
         ಭೀಷ್ಮನು ಅವನಿಗೆ ಈ ವಿಧವಾಗಿ ಉತ್ತರಿಸಿದನು.
        "ಧರ್ಮನಂದನನೇ! ಈ ವಿಷಯದಲ್ಲಿ ಮೂಷಿಕ ಮಾರ್ಜಾಲ ವೃತ್ತಾಂತವೆನ್ನುವ ಉಪಾಖ್ಯಾನವೊಂದಿದೆ. ಅದನ್ನು ನಿನಗೆ ಹೇಳುತ್ತೇನೆ, ಅದರಿಂದ ನಿನ್ನ ಪ್ರಶ್ನೆಗೆ ಉತ್ತರವು ಲಭಿಸುತ್ತದೆ"
        "ಒಂದಾನೊಂದು ಅಡವಿಯಲ್ಲಿ ಒಂದು ಆಲದ ಮರವಿತ್ತು. ಅದರ ಬುಡದಲ್ಲೊಂದು ಬಿಲವಿತ್ತು. ಅದರಲ್ಲಿ ಒಂದು ಇಲಿಯು ವಾಸವಾಗಿತ್ತು. ಅದರ ಹೆಸರು ಪಲಿತ. ಆ ಆಲದ ಮರದ ಮೇಲೆ ಒಂದು ಮಾರ್ಜಾಲವು (ಬೆಕ್ಕು) ವಾಸವಾಗಿತ್ತು. ಅದರ ಹೆಸರು ರೋಮಶ. ಆ ಆಲದ ಮರದ ಹತ್ತಿರಕ್ಕೆ ದಿನವೂ ಒಬ್ಬ ಭೇಟೆಗಾರ ಬಂದು ತನ್ನ ಬಲೆಯನ್ನು ಹರಡುತ್ತಿದ್ದ. ಬೆಳಗಿನ ಝಾವ ಬಂದು ಅದರಲ್ಲಿ ಸಿಕ್ಕಿಕೊಂಡ ಪ್ರಾಣಿಯನ್ನು ಹಿಡಿದುಕೊಂಡು ಹೋಗುತ್ತಿದ್ದ. ಒಂದು ದಿನ ಅತ್ತ-ಇತ್ತ ತಿರುಗುತ್ತಾ ಆ ಮಾರ್ಜಾಲವು ಅದರಲ್ಲಿ ಸಿಲುಕಿಕೊಂಡಿತು. ಅದು ಹೊರಕ್ಕೆ ಬರಲಾರದೆ ಕಂಗಾಲಾಗಿ ಒದ್ದಾಡುತ್ತಿತ್ತು. ಆ ಮಾರ್ಜಾಲವು ಬಲೆಯಲ್ಲಿ ಸಿಲುಕಿಕೊಂಡಿದ್ದನ್ನು ನೋಡಿ ಇಲಿಯು ಧೈರ್ಯವಾಗಿ ಹೊರಗೆ ಬಂದು ತನ್ನ ಆಹಾರಕ್ಕಾಗಿ ಅತ್ತಿತ್ತ ಓಡಾಡಲಾರಂಭಿಸಿತು. ಇಷ್ಟರಲ್ಲೇ ಒಂದು ಗೂಬೆ ಹಾಗು ಒಂದು ಮುಂಗುಸಿ ಅಲ್ಲಿಗೆ ಬಂದವು. ಇಲಿಗೆ ಹೃದಯ ಬಾಯಿಗೆ ಬಂದಂತಾಯಿತು. ಈ ಗೂಬೆ ಹಾಗು ಮುಂಗುಸಿ ತನ್ನನ್ನು ನುಂಗಿ ಹಾಕುತ್ತವೆ. ಈ ಕಡೆ ನೋಡಿದರೆ ಆ ಬೆಕ್ಕೋ ತನ್ನ ಆಜನ್ಮ ಶತ್ರು. ಆದರೂ ಸಹ ಆ ಬೆಕ್ಕು ಈಗ ಆಪತ್ತಿನಲ್ಲಿದೆ. ಆದ್ದರಿಂದ ಈಗ ಒಂದು ಉಪಾಯವನ್ನು ಮಾಡೋಣ ಎಂದು ಮೂಷಿಕವು ಆಲೋಚಿಸಿತು. ಅದು ಬೆಕ್ಕಿನ ಬಳಿಗೆ ಹೋಗಿ ಹೀಗೆ ಹೇಳಿತು. "ಮಿತ್ರಾ, ನೀನು ಇದೀಗ ಬಲೆಯಲ್ಲಿ ಸಿಲುಕಿಕೊಂಡಿದ್ದೀಯಾ. ನಿನ್ನ ಬಲೆಯನ್ನು ನಾನು ಕತ್ತರಿಸಿ ಹಾಕುತ್ತೇನೆ. ನಿನ್ನ ಸ್ನೇಹವು ನನಗೆ ಬೇಕು. ಆ ಮುಂಗುಸಿ ಹಾಗು ಗೂಬೆ ಅವರೆಡರ ಮೇಲೆ ನೀನೊಂದು ಕಣ್ಣಿಡಬೇಕು". ಬೆಕ್ಕಿಗೆ ಇದಕ್ಕಿಂತ ಇನ್ನೇನು ಬೇಕು. ಅದು, "ಮೂಷಿಕ ಶೇಖರಾ, ದೇವರ ಸಾಕ್ಷಿಯಾಗಿ ಹೇಳತ್ತಿದ್ದೇನೆ, ನಾನು ನಿನಗೆ ಅಭಯವನ್ನು ಕೊಡುತ್ತೇನೆ. ಮೊದಲು ನನ್ನ ಸಂಗತಿಯನ್ನು ನೋಡು. ಬಾ! ಬಾ! ನಮ್ಮಿಬ್ಬರಿಗೆ ಈಗ ಒಪ್ಪಂದವಾಗಿದೆ" ಎಂದು ಹೇಳಿತು. ಈ ವಿಧವಾಗಿ ಅವೆರೆಡೂ ಒಂದು ನಿರ್ಣಯಕ್ಕೆ ಬಂದವು. ಆ ಇಲಿಯು ಬೆಕ್ಕಿನ ಹತ್ತಿರ ಬಂದು  ಕುಳಿತಿತು. ಇದನ್ನು ನೋಡಿ ಆ ಗೂಬೆ ಮತ್ತು ಮುಂಗುಸಿಗಳು ತಮ್ಮ ಕಿವಿಗಳನ್ನು ನಿಮಿರಿಕೊಳ್ಳುತ್ತಾ ಹೊರಟು ಹೋದವು. 
       ಆದರೆ ಇಲಿ ಮಾತ್ರ ಅವರಸಪಡಲಿಲ್ಲ, ಅದು ಬಲೆಯನ್ನು ಕಡಿಯುವುದಕ್ಕೆ ಮೊದಲು ಮಾಡಲಿಲ್ಲ. ಅದು ಅಲ್ಲಿಯೇ ಅತ್ತಿಂದಿತ್ತ ತಿರುಗತೊಡಗಿತು. ಬೆಕ್ಕು ಇಲಿಯನ್ನು ಉದ್ದೇಶಿಸಿ, "ಇದು ಕೃತಘ್ನತೆಯಲ್ಲವೇ?" ಎಂದು ಕೇಳಿತು. "ಇದು ದ್ರೋಹವಲ್ಲವೇ" ಎಂದು ಅದನ್ನು ಝಾಡಿಸಿತು. ಆಗ ಆ ಇಲಿಯು ಹೀಗೆ ಹೇಳಿತು, "ನನಗೆ ರಕ್ಷಣೆಯನ್ನು ಒದಗಿಸಿದ್ದೀಯಾ, ಅಂಥಹುದರಲ್ಲಿ ನಿನಗೆ ನಾನು ಕೇಡು ಉಂಟು ಮಾಡುತ್ತೇನೆಯೇ? ಆದರೆ ನನಗೊಂದು ಭಯವಿದೆ. ನೀನು ಈಗಲೇ ಹೊರಬಂದರೆ ನೀನು ನನ್ನನ್ನೇನು ಮಾಡುತ್ತೀಯೋ! ಏಕೆಂದರೆ ಈಗಾಗಲೇ ನೀನು ಹಸಿವೆಯಿಂದ ಬಳಲುತ್ತಿದ್ದೀಯ. ಎಷ್ಟೇ ಆದರೂ ನೀನು ಬಲವಂತ, ಬಲವಂತರೊಂದಿಗೆ ಸಂಧಿ ಮಾಡಿಕೊಳ್ಳುವಾಗ ಅತಿಯಾದ ನಂಬಿಕೆ ಒಳ್ಳೆಯದಲ್ಲವೆಂದು ಹಿರಿಯರು ಹೇಳುತ್ತಾರೆ. ಆದ್ದರಿಂದ ನನ್ನನ್ನು ತಪ್ಪಾಗಿ ತಿಳಿಯಬೇಡ. ಭೇಟೆಗಾರ ಬರುತ್ತಾನಲ್ಲವೇ! ಬರಲಿ ಬಿಡು, ಅವನು ಅಷ್ಟು ದೂರದಲ್ಲಿರುವಾಗಲೇ ನೋಡಿ ನಾನು ಬಲೆಯನ್ನು ಕಡಿದು ಹಾಕುತ್ತೇನೆ. ಭೇಟೆಗಾರನನ್ನು ನೋಡಿ ನೀನು ಕೂಡಲೇ ಮರವನ್ನು ಹತ್ತುತ್ತೀಯ. ನಾನೂ ಸಹ ನನ್ನ ಬಿಲದೊಳಕ್ಕೆ ದೂರುತ್ತೇನೆ. 
     "ಇಷ್ಟರಲ್ಲೇ ಬೆಳಕಾಯಿತು. ಭೇಟೆಗಾರನು ಬಂದೇ ಬಂದ. ಅವನೊಂದಿಗೆ ಕೆಲವು ಭೇಟೆ ನಾಯಿಗಳೂ ಬಂದವು. ಬೆಕ್ಕಿಗೆ ಪ್ರಾಣವು ಹೋದಂತಾಯಿತು. ಅದು ಇಲಿಯನ್ನು ಅವಸರಪಡಿಸಿತು. ಇಲಿಯೂ ಸಹ ಕೂಡಲೇ ಸಮೀಪಿಸಿ, "ನಿನಗೇತಕೆ, ನಾನಿದ್ದೇನೆ" ಎಂದು ಹೇಳಿ ಬಲೆಯ ದಾರಗಳನ್ನು ಕಡಿದು ಹಾಕಿತು. ಬಲೆಯಿಂದ ಹೊರಬಿದ್ದ ಬೆಕ್ಕು ’ಬದಕಿದೆಯಾ ಬಡಜೀವವೇ’ ಎನ್ನುತ್ತಾ ಒಂದೇ ಏಟಿಗೆ ಮರವನ್ನೇರಿತು. ಇಲಿಯು ಸಂತೋಷದಿಂದ ತನ್ನ ಬಿಲದೊಳಗೆ ತೂರಿ ದೂರದಿಂದಲೇ ಮುಂದಿನ ವಿದ್ಯಮಾನಗಳನ್ನು ಗಮನಿಸುತ್ತಾ ಕುಳಿತಿತು. ಭೇಟೆಗಾರನು ಬಂದೇ ಬಂದನು, ಅವನು ಬಲೆಯು ಹಾಳಾದದ್ದನ್ನು ನೋಡಿ, ಇದರಿಂದೇನು ಮಾಡಲು ಸಾಧ್ಯವೆಂದು ಗೊಣಗಿಕೊಳ್ಳುತ್ತಾ ತನ್ನ ದಾರಿ ಹಿಡಿದು ಹೊರಟ. 
      ಅನಂತರ, ಬೆಕ್ಕು ಹಾಗು ಇಲಿ ಒಬ್ಬರಿಗೊಬ್ಬರು ಕೃತಜ್ಞತೆಗಳನ್ನು ಹೇಳಿಕೊಂಡರು. ಶುಕ್ರನೀತಿಯನ್ನು ಜ್ಞಾಪಕ ಮಾಡಿಕೊಂಡವು. ಬಲವಂತನಾದ ಶತ್ರುವಿನೊಡನೆ ಒಂದು ಪ್ರಯೋಜನಕ್ಕಾಗಿ ಸಂಧಿ ಮಾಡಿಕೊಳ್ಳಬಹುದು. ಆದರೆ ಅದು ತಾತ್ಕಾಲಿಕವಷ್ಟೆ. ಆಮೇಲೆ ಅವರ ದಾರಿ ಅವರಿಗೆ. ಇಲ್ಲದಿದ್ದರೆ ಕೇಡು ತಪ್ಪದು. ನಂಬಲನರ್ಹವಾದವರನ್ನು ನಂಬಬಾರದು. ಇಲಿ ಬೆಕ್ಕನ್ನು ಅದು ಹೇಗೆ ತಾನೆ ನಂಬೀತು? ನಂಬಿಕೆಗೆ ಸೂಕ್ತರಾದವರನ್ನೂ ಸಹ ಅತಿಯಾಗಿ ನಂಬುವುದು ಒಳ್ಳೆಯದಲ್ಲ. ತನ್ನನ್ನು ಇತರರು ನಂಬುವಂತೆ ಪ್ರವರ್ತಿಸಬೇಕು. ಆದರೆ ತಾನು ಇತರರನ್ನು ನಂಬುವುದು ನೀತಿಯಲ್ಲ. ಇದೇ ಯೋಗ್ಯವಾದ ವಿಧಾನ. ಇದೇ ಶುಕ್ರನೀತಿ. 
       "ಯುಧಿಷ್ಠಿರಾ! ನೀನು ಕೇಳಿದ ಪ್ರಶ್ನೆಗೆ ಇದರೊಳಗೇ ಉತ್ತರವು ಅಡಗಿದೆ, ಆಲೋಚಿಸಿ ನೋಡು"

*****
(ಆಧಾರ - ಶ್ರೀಯುತ ದೋನೆಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆಯಲ್ಲಿ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  

Rating
No votes yet

Comments

Submitted by makara Sat, 09/15/2018 - 10:22

ಸಂಪದಿಗ ಮಿತ್ರರೆಲ್ಲರಿಗೂ ಸರ್. ಎಂ.ವಿ. ಯವರ ಹುಟ್ಟುಹಬ್ಬದ ಪ್ರಯುಕ್ತ ಆಚರಿಸುವ "ಇಂಜನೀಯರ್ಸ್ ಡೇ" ಶುಭಾಶಯಗಳು. ಈ ಲೇಖನದ ಮುಂದಿನ ಭಾಗ - ೨ ಭೀಷ್ಮ ಯುಧಿಷ್ಠಿರ ಸಂವಾದ: ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8-%E0%B2%AD...

Submitted by makara Thu, 09/20/2018 - 17:43

ಈ ಮಾಲಿಕೆಯ ಲೇಖನವನ್ನು ವಾರದ ವಿಶೇಷ ಬರಹಗಳಲ್ಲೊಂದಾಗಿ ಆಯ್ಕೆ ಮಾಡಿದ ಸಂಪದ ನಿರ್ವಹಣಾ ಮಂಡಳಿ ಮತ್ತು ಶ್ರೀಯುತ ಹರಿಪ್ರಸಾದ್ ನಾಡಿಗರಿಗೆ ಧನ್ಯವಾದಗಳು. ಸಂಪದ ಬಳಗದ ವಾಚಕರಿಗೂ ಧನ್ಯವಾದಗಳು. :)