ಭಾಗ - ೫ ಭೀಷ್ಮ ಯುಧಿಷ್ಠಿರ ಸಂವಾದ: ಬೂರುಗ ವೃಕ್ಷದ ವೃತ್ತಾಂತವು

ಭಾಗ - ೫ ಭೀಷ್ಮ ಯುಧಿಷ್ಠಿರ ಸಂವಾದ: ಬೂರುಗ ವೃಕ್ಷದ ವೃತ್ತಾಂತವು

        ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
        ಯುಧಿಷ್ಠರಿನು ಹೀಗೆ ಕೇಳಿದನು, ಪಿತಾಮಹಾ! ಬಲಹೀನನಾದವನು, ಬಲವಂತನೂ, ಬುದ್ಧಿವಂತನೂ ಆದವನೊಡನೆ ವಿರೋಧವನ್ನು ಮೈಮೇಲೆಳೆದುಕೊಂಡು ಕಟ್ಟಿಕೊಂಡರೆ ಅವನ ಗತಿ ಏನಾಗುತ್ತದೆ? ದಯಮಾಡಿ ತಿಳಿಸುವಂತವರಾಗಿ" ಎಂದು ಹೇಳಿ ಕೈಗಳನ್ನು ಜೋಡಿಸಿಕೊಂಡು ಅಭ್ಯರ್ಥಿಸುತ್ತಾ ನಿಂತುಕೊಂಡ.
        ಭೀಷ್ಮನು ಅದಕ್ಕೆ ಈ ವಿಧವಾಗಿ ಉತ್ತರವಿತ್ತನು, "ಧರ್ಮನಂದನನೇ! ಈ ವಿಷಯದಲ್ಲಿ ಒಂದು ಕಥೆ ಇರುವುದು. ಅದನ್ನು ಹೇಳುತ್ತೇನೆ, ಕೇಳುವವನಾಗು. ಅದರಲ್ಲಿ ನೀನು ಕೇಳಿರುವ ಪ್ರಶ್ನೆಗೆ ಸೂಕ್ತ ಉತ್ತರವು ದೊರೆಯುತ್ತದೆ."
ಬಹು ಹಿಂದೆ, ಹಿಮವತ್ಪರ್ವತ ಪ್ರಾಂತದಲ್ಲಿ ಒಂದು ಬೃಹತ್ತಾದ ಬೂರುಗ ವೃಕ್ಷವಿದ್ದಿತು. ನೂರಾರು ವರ್ಷಗಳಿಂದ, ತನ್ನ ರೆಂಬೆ ಕೊಂಬೆಗಳನ್ನು ಬಹಳ ವಿಶಾಲವಾಗಿ ಹರಿಡಿಕೊಂಡು ಅದು ಅಲ್ಲಿ ನೆಲೆಸಿತ್ತು. ಅದರ ಬೇರುಗಳೂ ಸಹ ಭೂಮಿಯಲ್ಲಿ ಬಹಳಷ್ಟು ಆಳವಾಗಿ ವ್ಯಾಪಿಸಿದ್ದವು. ಒಮ್ಮೆ ನಾರದ ಮಹರ್ಷಿಗಳು ಆ ದಾರಿಯಾಗಿ ಬಂದರು. ಅವರು ಆ ಬೃಹತ್ ವೃಕ್ಷವನ್ನು ನೋಡಿದರು. ಅದರ ವೈಶಾಲ್ಯವನ್ನು ನೋಡಿ ಆಶ್ಚರ್ಯಚಕಿತರಾದರು. ಕುತೂಹಲದಿಂದ ಅವರು ಆ ಮಹಾನ್ ವೃಕ್ಷದ ಬಳಿಗೆ ಹೋಗಿ ಅದನ್ನು ಉದ್ದೇಶಿಸಿ ಮಾತನಾಡಿದರು. 
"ಬೂರುಗ ವೃಕ್ಷವೇ! ಇಷ್ಟೊಂದು ಎತ್ತರವಾಗಿ, ಇಷ್ಟೊಂದು ವಿಶಾಲವಾಗಿ ಹರಡಿಕೊಂಡಿರುವ ನೀನು ಮೃಗಪಕ್ಷ್ಯಾದಿಗಳಿಗೆ ಆಶ್ರಯದಾತನಾಗಿದ್ದೀಯ. ನಿನ್ನನ್ನು ನೋಡಿ ನನಗೆ ಅತೀವ ಸಂತೋಷವಾಗುತ್ತಿದೆ. ಆದರೆ ನನಗೆ ಒಂದು ಅನುಮಾನವು ಉಂಟಾಗುತ್ತಿದೆ. ಅದೇನೆಂದರೆ, ಎಲ್ಲಾ ಮರಗಳು ಒಂದಿಲ್ಲೊಂದು ಬಾರಿ ವಾಯುದೇವನ ಪ್ರಕೋಪಕ್ಕೆ ಗುರಿಯಾಗದೆ ವಿಧಿಯಿಲ್ಲ. ಆದರೆ ನಿನ್ನ ವಿಷಯವು ಬೇರೆಯೇ ಇದ್ದಂತಿದೆ. ನಿನಗೂ ವಾಯುದೇವರಿಗೂ ಅದು ಹೇಗೆ ಸಖ್ಯವು ಏರ್ಪಟ್ಟಿತು? ಅಥವಾ ಅವನೇ ನಿನ್ನ ಮೇಲಿನ ದಯೆಯಿಂದ ನಿನ್ನನ್ನು ಹಾಗೆ ಬಿಟ್ಟು ಬಿಟ್ಟಿದ್ದಾನೆಯೇ? ಸ್ವಲ್ಪ ವಿವರಿಸುವಂತವನಾಗು, ಕೇಳುವ ಬಯಕೆಯಾಗುತ್ತಿದೆ." 
       ನಾರದರ ಮಾತುಗಳನ್ನು ಕೇಳಿ ಉಬ್ಬಿಹೋದ ಬೂರುಗ ವೃಕ್ಷವು, "ನಾರದಾ! ನನ್ನ ಶಕ್ತಿ ಏನು ಎನ್ನುವುದನ್ನು ನೀನು ನೋಡುತ್ತಲೇ ಇದ್ದೀಯಲ್ಲವೇ. ವಾಯುದೇವನ ಬಲವನ್ನು ನನ್ನ ಬಲದ ಮುಂದೆ ನೀವಾಳಿಸಿ ಒಗೆಯಬೇಕಷ್ಟೆ. ನನ್ನ ಎದುರಿಗೆ ವಾಯುದೇವನು ಬಂದು ನಿಲ್ಲುವ ಸಾಹಸವನ್ನೂ ಮಾಡಲಾರ. ನನ್ನ ಬಲದಲ್ಲಿನ ಎಂಟನೇ ಒಂದು ಭಾಗವೂ ಸಹ ವಾಯುದೇವನಿಗೆ ಇಲ್ಲ" ಎಂದು ಅದು ತನ್ನ ಪ್ರತಾಪವನ್ನು ಕೊಚ್ಚಿಕೊಂಡಿತು. 
       "ಅಯ್ಯಾ! ಹಾಗೆ ಮಾತನಾಡದಿರು, ವಾಯುದೇವನಿಗೆ ಪರ್ವತಗಳನ್ನೂ ಸಹ ಕುಟ್ಟಿ ಪುಡಿಮಾಡಬಲ್ಲ ಶಕ್ತಿ ಸಾಮರ್ಥ್ಯಗಳಿವೆ. ಭೂತಲವೆಲ್ಲಾ ವಾಯುದೇವನ ಕೃಪೆಯಿಂದಲೇ ಕಾರ್ಯನಿರ್ವಹಿಸುತ್ತಿವೆ. ಅಂತಹ ವಾಯುದೇವನನ್ನು ಕುರಿತು ಹೀಗೆ ಕ್ಷುಲ್ಲಕ್ಕವಾಗಿ ಮಾತನಾಡುವುದು ತರವಲ್ಲ" ಎಂದು ನಾರದರು ಬೂರುಗ ವೃಕ್ಷಕ್ಕೆ ಹಿತಬೋಧನೆಯನ್ನು ಮಾಡಿದರು. 
      ಬೂರುಗ ವೃಕ್ಷವು ಅಹಂಕಾರದಿಂದ, "ಏನು ನಾರದ ನೀನು ಹೇಳುತ್ತಿರುವುದು! ನನ್ನ ಶಕ್ತಿ ಸಾಮರ್ಥ್ಯಗಳೇನು ಎನ್ನುವುದನ್ನು ತಿಳಿಯಬೇಕಾದರೆ ಸ್ವತಃ ವಾಯುದೇವನನ್ನೇ ನನ್ನ ಬಳಿಗೆ ಬಂದು ತಿಳಿದುಕೊಳ್ಳಲು ಹೇಳು, ಹೋಗು. ಅವನಿಗೆ ’ಪ್ರಭಂಜನ’ನೆನ್ನುವ (ಎಲ್ಲವನ್ನೂ ಭಂಜಿಸುವವನು) ನಾಮವಿದೆ. ಅದನ್ನು ಸುಳ್ಳೆಂದು ನಾನು ನಿರೂಪಿಸುತ್ತೇನೆ" ಎಂದು ಹೇಳಿತು. 
        ಆ ಬೂರುಗ ವೃಕ್ಷದ ಅಹಂಕಾರವನ್ನು ನೋಡಿದ ನಾರದರು ಬೇಸ್ತುಬಿದ್ದರು. "ಸರಿ, ನಿನ್ನ ವಿಷಯವನ್ನು ಹೋಗಿ ವಾಯುದೇವನಿಗೆ ಮುಟ್ಟಿಸುತ್ತೇನೆ" ಎಂದು ಹೇಳಿ ಅಲ್ಲಿಂದ ನಾರದರು ಹೊರಟು ಹೋದರು. ಅವರು ನೇರವಾಗಿ ವಾಯುದೇವನ ಬಳಿಗೆ ಬಂದವರೇ ಬೂರುಗ ವೃಕ್ಷದ ಸಂಗತಿಯನ್ನು ವಿಶದೀಕರಿಸಿದರು. ವಾಯುದೇವನು ಬಂದು ಬೂರುಗ ವೃಕ್ಷವನ್ನು ಕೇಳಿದ. ಬೂರುಗ ವೃಕ್ಷವು ಅಹಂಕಾರದಿಂದ ವಾಯುದೇವನನ್ನು ಮಾತನಾಡಿಸುವ ಗೋಜಿಗೆ ಹೋಗದೆ ತನ್ನ ತಲೆಯನ್ನು ಪಕ್ಕಕ್ಕೆ ತಿರುವಿತು. "ನಾಳೆ ಪುನಃ ಬರುತ್ತೇನೆ, ಸಿದ್ಧವಾಗಿ ಇರು" ಎಂದು ಹೇಳಿದ ವಾಯುದೇವನು ಅಲ್ಲಿಂದ ನಿರ್ಗಮಿಸಿದ. ಆ ರಾತ್ರಿ ಬೂರುಗ ವೃಕ್ಷವು ಆಲೋಚಿಸಿತು, "ಅನಾವಶ್ಯಕವಾಗಿ ನಾರದನ ಮುಂದೆ ಪೌರುಷವನ್ನು ಕೊಚ್ಚಿಕೊಂಡು ನನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡೆ. ಸುಮ್ಮನಿರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡಂತಾಯ್ತು ನನ್ನ ಸ್ಥಿತಿ. ಸಖಾಸುಮ್ಮನೇ ಕಾಲು ಕೆರೆದು ಜಗಳವಾಡಿಕೊಂಡು ನನ್ನ ನಾಶವನ್ನು ತಂದುಕೊಂಡೆ. ಈಗ ಏನು ಮಾಡಲಿ? ನಾಳೆ ಮುಂಜಾನೆಯಲ್ಲವೇ ವಾಯುದೇವನು ಬರುವುದು!" ಹೀಗೆ ಆಲೋಚಿಸಿದ ಬೂರುಗ ವೃಕ್ಷವು ಒಂದು ನಿರ್ಣಯಕ್ಕೆ ಬಂದಿತು. "ನನ್ನ ಎಲೆಗಳನ್ನು ನಾನೇ ಉದುರಿಸಿಕೊಳ್ಳುತ್ತೇನೆ. ನನ್ನ ರೆಂಬೆ ಕೊಂಬೆಗಳನ್ನು ನಾನೇ ಕತ್ತರಿಸಿಕೊಳ್ಳುತ್ತೇನೆ. ನನ್ನ ಹೂವು, ಕಾಯಿಗಳನ್ನು ನಾನೇ ಉದುರಿಸಿಕೊಳ್ಳುತ್ತೇನೆ. ಆಗ ವಾಯುದೇವನು ನನ್ನನ್ನೇನು ಮಾಡಬಲ್ಲ! ಹೀಗೆಂದು ಆಲೋಚಿಸಿದ ಬೂರುಗ ವೃಕ್ಷವು ಬೆಳಗಾಗುವುದಷ್ಟರಲ್ಲಿ ತನ್ನ ಎಲೆ, ಹೂವು, ಕಾಯಿಗಳನ್ನು ಉದುರಿಸಿಕೊಂಡು ತನ್ನ ರೆಂಬೆಕೊಂಬೆಗಳನ್ನು ಮುರಿದುಕೊಂಡು ಸಂಪೂರ್ಣ ಬೋಳಾಗಿ ತನ್ನ ಬೊಡ್ಡೆಯೊಂದನ್ನೇ ಉಳಿಸಿಕೊಂಡು ನಿಂತುಕೊಂಡಿತು. 
       ಹೇಳಿದಂತೆಯೇ ವಾಯುದೇವನು ಬಂದನು. ಅವನು ಬೂರುಗ ವೃಕ್ಷವನ್ನು ನೋಡಿ, "ಛೇ...ಛೇ...! ನಾನು ಮಾಡಬೇಕೆಂದುಕೊಂಡ ಕೆಲಸವನ್ನು ನೀನೇ ಮಾಡಿಕೊಂಡಿದ್ದೀಯ. ಇಷ್ಟೇ ಏನು ನಿನ್ನ ಧೈರ್ಯ, ಇದೇ ಏನು ನಿನ್ನ ಪೌರುಷ, ಇದೇ ಏನು ನಿನ್ನ ಅಹಂಕಾರ? ಒಟ್ಟಿನಲ್ಲಿ ಒಳ್ಳೆಯ ಉಪಾಯವನ್ನೇ ಆಲೋಚಿಸಿದ್ದೀಯ! ಈ ಮಹಾನ್ ಉಪಾಯವನ್ನು ನಿನ್ನ ಬಂಧುಬಳಗಕ್ಕೂ ಹೇಳಿಕೊಡು" ಎಂದು ಅದನ್ನು ಹಂಗಿಸಿ ತನ್ನ ದಾರಿ ಹಿಡಿದು ಹೊರಟ.
         "ಆದ್ದರಿಂದ ಧರ್ಮಜನೇ! ಬಲವಂತನಾದ ವೀರನೊಂದಿಗೆ ದುರ್ಬಲನಾದವನು ಈರ್ಷ್ಯೆಯಿಂದ ಕಲಹವನ್ನು ಏರ್ಪಡಿಸಿಕೊಳ್ಳಬಾರದು. ಹಾಗೊಂದು ವೇಳೆ ಮಾಡಿದ್ದೇ ಆದಲ್ಲಿ ಅವರಿಗೂ ಸಹ ಬೂರುಗ ವೃಕ್ಷಕ್ಕೆ ಒದಗಿದ ಗತಿಯೇ ಪ್ರಾಪ್ತವಾಗುತ್ತದೆ" ಎಂದು ಭೀಷ್ಮನು ವಿವರಿಸಿದನು. 
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
 
ಹಿಂದಿನ ಲೇಖನ ಭಾಗ - ೪ ಭೀಷ್ಮ ಯುಧಿಷ್ಠಿರ ಸಂವಾದ: ದೀರ್ಘದರ್ಶಿ, ಪ್ರಾಪ್ತಕಾಲಜ್ಞ ಮತ್ತು ದೀರ್ಘಸೂತ್ರಿಗಳ ವೃತ್ತಾಂತ ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%AA-%E0%B2%AD...

Rating
No votes yet

Comments

Submitted by makara Wed, 09/19/2018 - 05:41

ಈ ಲೇಖನದ ಮುಂದಿನ ಭಾಗ - ೬ "ಭೀಷ್ಮ ಯುಧಿಷ್ಠಿರ ಸಂವಾದ: ಕಾಲಕವೃಕ್ಷ ಮುನಿಯ ವೃತ್ತಾಂತವು" ಓದಲು ಈ ಕೆಳಗಿನ ಕೊಂಡಿಯನ್ನು ನೋಡಿhttps://sampada.net/blog/%E0%B2%AD%E0%B2%BE%E0%B2%97-%E0%B3%AC-%E0%B2%AD...

Submitted by makara Wed, 09/26/2018 - 16:26

ಭೀಷ್ಮ ಯುಧಿಷ್ಠಿರ ಸಂವಾದ ಸರಣಿಯ ಈ ಲೇಖನವನ್ನು ವಾರದ ವಿಶೇಷ ಬರಹವಾಗಿ ಆಯ್ಕೆ ಮಾಡಿ ಲೇಖನಗಳನ್ನು ಬರೆಯಲು ಉತ್ತೇಜನ ನೀಡುತ್ತಿರುವ ಸಂಪದ ನಿರ್ವಹಣಾ ಮಂಡಳಿ ಮತ್ತು ನಾಡಿಗರಿಗೆ ಧನ್ಯವಾದಗಳು. ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಂಪದದ ವಾಚಕ ಮಿತ್ರರಿಗೂ ಕೃತಜ್ಞತೆಗಳು :)