ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ?

ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್ ಆಗಿದ್ದೇವಾ?

ಅವರ ಹೆಸರು ಜವಹರ್. ವಯಸ್ಸು ೧೯ ವರುಷ. ಬದುಕಿನ ಪರಮ ಗುರಿ ಪರಿಸರ ರಕ್ಷಣೆ. ಅದಕ್ಕಾಗಿ ಅವರು ಮಾಡಿದ ದಿಗ್ಭ್ರಮೆ ಹುಟ್ಟಿಸುವ ಕೆಲಸ: ಕಾಲುವೆಗೆ ಹಾರಿ ಬಲಿದಾನ. ಇದು ನಡೆದದ್ದು ತಮಿಳ್ನಾಡಿನ ತಂಜಾವೂರಿನಲ್ಲಿ, ಸಪ್ಟಂಬರ್ ೨೦೧೬ರಲ್ಲಿ.
ಜವಹರ್ ಬಿಟ್ಟುಹೋಗಿರುವ ಆತ್ಮಹತ್ಯಾ ಹೇಳಿಕೆಯ ವಿಡಿಯೋ ರೆಕಾರ್ಡಿಂಗಿನಲ್ಲಿರುವ ಮಾತು: “ನನ್ನ ಬಲಿದಾನ ಭಾರತದಲ್ಲಿ ಪ್ಲಾಸ್ಟಿಕಿನ ಬಳಕೆ ಬಗ್ಗೆ ಗಂಭೀರ ಚಿಂತನೆಯನ್ನು ಹುಟ್ಟು ಹಾಕುತ್ತದೆಂಬ ಆಶಯದಿಂದ ನನ್ನ ಪ್ರಾಣತ್ಯಾಗ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನನ್ನ ಶಾಂತಿಯುವ ಪ್ರತಿಭಟನೆಗಳೆಲ್ಲವೂ ವ್ಯರ್ಥವಾದ ಕಾರಣ, ನನಗೆ ಆತ್ಮಹತ್ಯೆಯ ಆಯ್ಕೆ ಅನಿವಾರ್ಯವಾಯಿತು.”
ಪ್ಲಾಸ್ಟಿಕಿನ ಅವಾಂತರ ಇಷ್ಟು ತೀವ್ರವಾಗಿದೆಯೇ? ಒಮ್ಮೆ ನಿಮ್ಮ ಮನೆಯಲ್ಲಿ ಇರುವುದನ್ನೆಲ್ಲ ಗಮನಿಸಿ. ನೀವು ಖರೀದಿ ಮಾಡುವುದನ್ನೆಲ್ಲ ಪರಿಶೀಲಿಸಿ. ಎಲ್ಲದರಲ್ಲಿಯೂ ಪ್ಲಾಸ್ಟಿಕ್ ಆವರಿಸಿಕೊಂಡಿದೆ, ಅಲ್ಲವೇ? ಹೌದು, ಪ್ಲಾಸ್ಟಿಕ್ ನಮ್ಮ ಬದುಕನ್ನೇ ಆವರಿಸಿಕೊಂಡಿದೆ. ಅದು ಅಗ್ಗ, ಅದರ ಬಾಳಿಕೆ ದೀರ್ಘ, ಅದು ಭಾರೀ ಅನುಕೂಲ ಎಂಬ ಸಬೂಬುಗಳನ್ನು ಹೇಳುತ್ತಾ, ಮತ್ತೆಮತ್ತೆ ದಿನದಿನವೂ ಪ್ಲಾಸ್ಟಿಕನ್ನು ಮನೆಯೊಳಗೆ ತರುತ್ತಿದ್ದೇವೆ, ಅಲ್ಲವೇ? ಅದರಿಂದಾಗಿಯೇ, ೫೦ ವರುಷಗಳ ಮುಂಚೆ ಉತ್ಪಾದನೆ ಮಾಡುತ್ತಿದ್ದ ಪರಿಮಾಣಕ್ಕಿಂತ ೨೦ ಪಟ್ಟು ಅಧಿಕ ಪ್ಲಾಸ್ಟಿಕನ್ನು ಈಗ ಉತ್ಪಾದಿಸುತ್ತಿದ್ದೇವೆ! ಮುಂದಿನ ೨೦ ವರುಷಗಳಲ್ಲಿ ಪ್ಲಾಸ್ಟಿಕಿನ ಉತ್ಪಾದನೆ ಇಮ್ಮಡಿಯಾಗಲಿದೆ!

ಅಬ್ಬ, ಎಲ್ಲಿ ಕಂಡರಲ್ಲಿ ಪ್ಲಾಸ್ಟಿಕ್! ಕೆರೆಗಳಲ್ಲಿ, ನದಿಗಳ ಬದಿಗಳಲ್ಲಿ, ಸಮುದ್ರ ತೀರಗಳಲ್ಲಿ, ಉದ್ಯಾನಗಳಲ್ಲಿ, ಕಾಡುಗಳ ಅಂಚಿನಲ್ಲಿ, ಗುಡ್ಡಗಳಲ್ಲಿ, ಪರ್ವತಗಳಲ್ಲಿ, ರಸ್ತೆಗಳ ಇಬ್ಬದಿಗಳಲ್ಲಿ, ರೈಲುಹಳಿಗಳ ಇಕ್ಕಡೆಗಳಲ್ಲಿ, ಸಮುದ್ರಗಳ ತಳಗಳಲ್ಲಿ – ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟಗಳು, ಚೀಲಗಳು, ಬಾಟಲಿಗಳು, ಕವರುಗಳು, ಬ್ಯಾಗುಗಳು, ಕನ್-ಟೈನರುಗಳು ತುಂಬಿಕೊಂಡಿವೆ. “ಪ್ರಾಕೃತಿಕ ಪರಿಸರವನ್ನು ಶಾಶ್ವತವಾಗಿ ಮಾಲಿನ್ಯ ಮಾಡುವ” ಪ್ಲಾಸ್ಟಿಕಿನ ಅಪಾಯ ನಿಜವಾಗುತ್ತಿದೆ ಎನ್ನುತ್ತದೆ ಪ್ಲಾಸ್ಟಿಕಿನ ಬಗ್ಗೆ ಪ್ರಕಟವಾಗಿರುವ ಇತ್ತೀಚೆಗಿನ ಜಾಗತಿಕ ವರದಿ.

ಜನವಸತಿಗಳಿಂದ ಬಹಳ ದೂರದಲ್ಲಿರುವ ಶಾಂತಸಾಗರದ ಮತ್ತು ಆರ್ಕಟಿಕ್ ದ್ವೀಪಗಳಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯದ ರುದ್ರ ನರ್ತನ. ಪ್ರತಿ ವರುಷ ಸಾಗರ ಸೇರುತ್ತಿರುವ ಪ್ಲಾಸ್ಟಿಕಿನ ಪರಿಮಾಣ ಎಂಭತ್ತು ಲಕ್ಷ ಟನ್! ಅಂದರೆ, ಪ್ರತಿ ನಿಮಿಷಕ್ಕೊಂದು ತ್ಯಾಜ್ಯಟ್ರಕ್ ತುಂಬ ಪ್ಲಾಸ್ಟಿಕನ್ನು ಸಾಗರಕ್ಕೆ ಸುರಿದಂತೆ! ಇದನ್ನು ನಿಯಂತ್ರಿಸದಿದ್ದರೆ, ೨೦೫೦ರ ಹೊತ್ತಿಗೆ ಪ್ರತಿ ನಿಮಿಷಕ್ಕೆ ನಾಲ್ಕು ತ್ಯಾಜ್ಯಟ್ರಕ್ ತುಂಬ ಪ್ಲಾಸ್ಟಿಕ್ ಸಾಗರ ಸೇರಲಿದೆ! ನಾವು ಜಗತ್ತಿನ ಉದ್ದಗಲದಲ್ಲಿ ಪ್ರತಿ ನಿಮಿಷ ಹತ್ತು ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸುತ್ತಿದ್ದರೆ ಇನ್ನೇನಾದೀತು?

ಪ್ಲಾಸ್ಟಿಕಿನ ದೊಡ್ಡ ಅಪಾಯ ಏನೆಂದರೆ ಅದು ಕೊಳೆಯುವುದಿಲ್ಲ. ಇಲ್ಲಿಯ ವರೆಗೆ ಅದನ್ನು ತಿಂದು ಜೀರ್ಣಿಸಬಲ್ಲ ಸೂಕ್ಷ್ಮಜೀವಿ ಪತ್ತೆಯಾಗಿಲ್ಲ. ಆದ್ದರಿಂದ, ಒಮ್ಮೆ ಬಳಸಿ ಎಸೆದ ಪ್ಲಾಸ್ಟಿಕ್ ನೂರಾರು ವರುಷ ಹಾಗೆಯೇ ಉಳಿಯುತ್ತದೆ. ಈಗ ಸಾಗರಗಳ ತಳದಲ್ಲಿ ೧೫ ಕೋಟಿ ಟನ್ಗಿಂತ ಜಾಸ್ತಿ ಪ್ಲಾಸ್ಟಿಕ್ ಸಂಗ್ರಹವಾಗಿದೆ ಎಂಬುದು ವಿಜ್ನಾನಿಗಳ ಅಂದಾಜು. ಪ್ಲಾಸ್ಟಿಕಿನ ಬಳಕೆ ಹೀಗೆಯೇ ಮುಂದುವರಿದರೆ, ೨೦೫೦ರ ಹೊತ್ತಿಗೆ ಸಾಗರಗಳಲ್ಲಿ ಮೀನುಗಳಿಗಿಂತ ಅಧಿಕ ಪರಿಮಾನದ ಪ್ಲಾಸ್ಟಿಕ್ ಇರುತ್ತದೆ ಎಂಬುದು ವಿಜ್ನಾನಿಗಳ ಇನ್ನೊಂದು ಅಂದಾಜು!
ಉಡಾಫೆ ಮಾಡುವಂತಿಲ್ಲ!
ಅದರಿಂದ ಏನಾಗುತ್ತದೆ ಎಂಬ ಉಡಾಫೆಯೇ? ಹಾಗಾದರೆ ತಿಳಿಯಿರಿ: ನಾವೆಲ್ಲ ಅಂದುಕೊಂಡಂತೆ ಪ್ಲಾಸ್ಟಿಕ್ ನಿಷ್ಕ್ರಿಯ ವಸ್ತುವಲ್ಲ. ಅಧಿಕ ಉಷ್ಣತೆಯಲ್ಲಿ, ಪ್ಲಾಸ್ಟಿಕಿನಿಂದ ಬಿಡುಗಡೆಯಾಗುತ್ತವೆ – ಅಪಾಯಕಾರಿ ರಾಸಾಯನಿಕಗಳು (ಮುಖ್ಯವಾಗಿ ಥಾಲೇಟುಗಳು ಮತ್ತು ಬೈಸ್ಪಿನೋಲ್-ಎ). ಇದರ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಇವು ಮನುಷ್ಯರ ದೇಹದ ಹಾರ್ಮೋನ್ ಸಮತೋಲನವನ್ನು ಏರುಪೇರು ಮಾಡಬಲ್ಲವು! ಇದು ಎಲ್ಲ ರೀತಿಯ ಅನಾರೋಗ್ಯಕ್ಕೆ ಕಾರಣವಾದೀತು: ನಪುಂಸಕತೆ, ನವಜಾತ ಶಿಶುಗಳ ಅಂಗವಿಕಲತೆ, ಹೃದಯದ ರೋಗಗಳು, ಅಲರ್ಜಿಗಳು ಮತ್ತು ಕ್ಯಾನ್ಸರ್!
ಇದೆಲ್ಲ ಶುರುವಾದದ್ದು ೧೮೭೦ರಲ್ಲಿ – ಜಾನ್ ವೆಸ್ಲಿ ಹ್ಯಾಟ್ ಮೊತ್ತಮೊದಲ ಪ್ಲಾಸ್ಟಿಕ್ ಸೆಲ್ಯುಲೋಯ್ಡ್ ತಯಾರಿಸುವ ವಿಧಾನಕ್ಕೆ ಪೇಟೆಂಟ್ ಪಡೆದಾಗ. ಅನಂತರ ಪ್ಲಾಸ್ಟಿಕಿನ ಹುಲಿಹಬ್ಬ. ದಟ್ಟದರಿದ್ರರೂ ಖರೀದಿಸ ಬಹುದಾದ ಪ್ಲಾಸ್ಟಿಕ್ ಉತ್ಪನ್ನಗಳ ಮೆರವಣಿಗೆ. ವಿಶೇಷ ಗುಣಲಕ್ಷಣಗಳ ಬೇರೆಬೇರೆ ಪ್ಲಾಸ್ಟಿಕುಗಳ ಆವಿಷ್ಕಾರ: ಸ್ಟೈರೊಫೋಮ್, ಪಿವಿಸಿ, ಪಾಲಿಕಾರ್ಬೊನೇಟ್, ಪಿಇಟಿ, ನೈಲಾನ್, ಕೆವ್ಲಾರ್, ಟೆಫ್ಲೋನ್ ಇತ್ಯಾದಿ. “ಪ್ಲಾಸ್ಟಿಕ್: ಎ ಟಾಕ್ಸಿಕ್ ಲವ್ ಸ್ಟೋರಿ” ಎಂಬ ಪ್ರಸಿದ್ಧ ಪುಸ್ತಕದಲ್ಲಿ ಸುಸಾನ್ ಫ್ರಿನ್ಕೆಲ್ ತೀರಾ ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ಉತ್ಪಾದಿಸ ಬಹುದಾದ ಪ್ಲಾಸ್ಟಿಕ್, ಶ್ರೀಮಂತರಿಗೂ ಬಡವರಿಗೂ ಸಮಾನವಾಗಿ ಲಭ್ಯ ಎನ್ನುತ್ತಾರೆ.
ನಾವೆಲ್ಲರೂ ಸ್ವಲ್ಪ ಪ್ಲಾಸ್ಟಿಕ್-ಮಯ
ಪ್ಲಾಸ್ಟಿಕಿನ ಅಪಾಯಗಳ ಬಗ್ಗೆ ಜಾಗೃತಿ ಮೂಡುತ್ತಿದೆ. ಆದರೆ, ಪ್ಲಾಸ್ಟಿಕಿನ ರಾಕ್ಷಸಬಾಹುಗಳಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ೨೦೧೩ರಲ್ಲಿ, ಅಮೇರಿಕಾದ ಸಾಮಾನ್ಯ ನಾಗರಿಕ ಒಂದು ವರುಷದಲ್ಲಿ ಬಳಸಿದ ಪ್ಲಾಸ್ಟಿಕಿನ ಪರಿಮಾಣ ೧೦೯ ಕಿಗ್ರಾ. ಹಾಗೂ, ಚೀನಾದ ನಾಗರಿಕ ಬಳಸಿದ್ದು ೪೫ ಕಿಗ್ರಾ. (ಭಾರತದಲ್ಲಿ ಈ ಪರಿಮಾಣ ೯.೭ ಕಿಗ್ರಾ. ಆದರೆ, ಇದು ವರುಷದಿಂದ ವರುಷಕ್ಕೆ ಶೇ.೧೦ ಪ್ರಮಾಣದಲ್ಲಿ ಹೆಚ್ಚುತ್ತಿದೆ.) ಆದ್ದರಿಂದಲೇ, ಅಟ್ಲಾಂಟದ “ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್”ನ ಈ ಹೇಳಿಕೆ ಅಚ್ಚರಿ ಹುಟ್ಟುಸುವುದಿಲ್ಲ: “ಕನಿಷ್ಠ ಶೇಕಡಾ ೮೦ ಅಮೆರಿಕನ್ನರ ದೇಹದಲ್ಲಿ ಅಳತೆ ಮಾಡಬಹುದಾದ ಪ್ರಮಾಣದ ಪ್ಲಾಸ್ಟಿಕ್ ಇದೆ.”
ಪ್ಲಾಸ್ಟಿಕ್ ರಕ್ಕಸನಿಂದ ಬಚಾವಾಗುವ ದಾರಿ ಇದೆಯೇ? ಕೆಲವು ವ್ಯಕ್ತಿಗಳು ಮತ್ತು ಸಮುದಾಯಗಳು ನಿರ್ದಿಷ್ಟ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಬಹುದು. ಉದಾಹರಣೆಗೆ ಪ್ಲಾಸ್ಟಿಕ್ ಆಟಿಕೆಗಳು; ಅಥವಾ ಪ್ಲಾಸ್ಟಿಕ್ ಉತ್ಪಾದಿಸುವ ಕೈಗಾರಿಕೆಗಳು ಅಪಾಯಕಾರಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡುವಂತೆ ಸಮುದಾಯಗಳು ಯಶಸ್ವಿಯಾಗಿ ಒತ್ತಡ ಹೇರಬಹುದು. ನಿದರ್ಶನ: ಯುಎಸ್ಎ ದೇಶದಲ್ಲಿ ವಿನೈಲ್ ಕ್ಲೋರೈಡಿನ ಬಳಕೆಗೆ ನಾಗರಿಕರ ಪ್ರತಿರೋಧ. ಆದರೆ, ಸಮಸ್ಯೆಯ ಅಗಾಧತೆ ಪರಿಗಣಿಸಿದಾಗ, ಇವೆಲ್ಲ ಪ್ರಯತ್ನಗಳು ಸಾಗರದಲ್ಲಿನ ನೀರ ಬಿಂದುಗಳಂತೆ.
“ಕಡಿಮೆ ಬಳಕೆ ಮಾಡಿ, ಮರು ಬಳಕೆ ಮಾಡಿ, (ಪರಿವರ್ತಿಸಿ) ಪುನರ್-ಬಳಕೆ ಮಾಡಿ’ (ರೆಡ್ಯೂಸ್, ರಿ-ಯೂಸ್, ರಿ-ಸೈಕಲ್) ಎಂಬ ಸುಪ್ರಸಿದ್ಧ ಘೋಷಣೆ ಹೆಚ್ಚು ಪರಿಣಾಮ ಬೀರಿಲ್ಲ. ಗಮನಿಸಿ: ಬಿಐಸಿ ಎಂಬ ಫ್ರೆಂಚ್ ಕಂಪೆನಿ, ದಿನಕ್ಕೆ ೫೦ ಲಕ್ಷ ಬಳಸಿ-ಬಿಸಾಡುವ ಲೈಟರುಗಳನ್ನು ಮಾರುತ್ತಿದೆ! ಚೀನಾ ದೇಶವೂ ಇಂತಹ ಲಕ್ಷಗಟ್ಟಲೆ ಲೈಟರುಗಳನ್ನು ಉತ್ಪಾದಿಸುತ್ತಿದೆ. ಇವುಗಳ ಬದಲಾಗಿ ಹಳೆ ಮಾದರಿಯ ರೀ-ಚಾರ್ಜಬಲ್ ಲೈಟರುಗಳನ್ನು ಬಳಸಲು ಖಂಡಿತ ಸಾಧ್ಯವಿದೆ.
ಎಸೆಯುವ ಪ್ಲಾಸ್ಟಿಕಿನ ಕೇವಲ ಶೇ.೧೦ ಭಾಗ ಮಾತ್ರ ಈಗ ಪುನರ್-ಬಳಕೆ (ರಿ-ಸೈಕಲ್) ಆಗುತ್ತಿದೆ. ಉಳಿದ ಪ್ಲಾಸ್ಟಿಕಿನ ಕೇವಲ ಶೇ.೧೨ ಭಾಗ ಚಿಂದಿ ಮಾಡಲಾಗುತ್ತಿದೆ (ಇನ್ಸಿನರೇಟೆಡ್). ಆದರೆ ಶೇ.೭೯ ಭಾಗ ಪ್ಲಾಸ್ಟಿಕನ್ನು ಮಣ್ಣಿನಲ್ಲಿ ಹೂಳಲಾಗುತ್ತಿದೆ ಅಥವಾ ಅದು ಸಾಗರ ಸೇರುತ್ತಿದೆ. ಪುನರ್-ಬಳಕೆ ಮಾಡುವ ಕಾರ್ಖಾನೆಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಹಿತರಕ್ಷಣೆಯ ಬಗ್ಗೆಯೂ ನಾವು ಚಿಂತಿಸಬೇಕಾಗಿದೆ.
ಮುಂದಿನ ದಾರಿ
ಈ ಪರಿಸ್ಥಿತಿಯಲ್ಲಿ, ಜನವರಿ ೨೦೧೭ರಲ್ಲಿ ಬ್ರಿಟನಿನ ಎಲ್ಲೆನ್ ಮ್ಯಾಕಾರ್ಥರ್ ಪ್ರತಿಷ್ಠಾನವು, ರಾಸಾಯನಿಕ ಕೈಗಾರಿಕೆಯ ಬೃಹತ್ ಕಂಪೆನಿಗಳ ಸಹಯೋಗದಲ್ಲಿ ಪ್ರಕಟಿಸಿರುವ ವರದಿ ಪ್ಲಾಸ್ಟಿಕ್ ಸಮಸ್ಯೆಯ ಪರಿಹಾರಕ್ಕೆ ಒಂದು ಆಶಾಕಿರಣ. ಅದರ ಶೀರ್ಷಿಕೆ: “ಹೊಸ ಪ್ಲಾಸ್ಟಿಕ್ ಆರ್ಥಿಕತೆ: ಪ್ಲಾಸ್ಟಿಕಿನ ಭವಿಷ್ಯದ ಮರುಚಿಂತನೆ”. ಈ ವರದಿ ಮೂರು ಹೊಸದಾರಿಗಳನ್ನು ಶಿಫಾರಸ್ ಮಾಡುತ್ತಿದೆ: (೧) ಎಲ್ಲ ಪ್ಲಾಸ್ಟಿಕಿನ ಪುನರ್-ಬಳಕೆ (೨) ಪರಿಸರಕ್ಕೆ ಪ್ಲಾಸ್ಟಿಕಿನ ರಾಸಾಯನಿಕಗಳು ಲೀಕ್ ಆಗುವುದರ ತಡೆ (೩) ಪೆಟ್ರೋಲಿಯಂನಿಂದ ಉತ್ಪಾದಿಸುವ ಪ್ಲಾಸ್ಟಿಕಿನ ಕಚ್ಚಾವಸ್ತುಗಳ (ರಾಸಾಯನಿಕಗಳ) ಬದಲಾಗಿ ನೈಸರ್ಗಿಕ ಕಚ್ಚಾವಸ್ತುಗಳ ಬಳಕೆ. ಈ ಯೋಜನೆ ಯಾವಾಗ ಜ್ಯಾರಿ ಆದೀತೋ?

ಆದರೆ, ದಿನದಿಂದ ದಿನಕ್ಕೆ ದೈತ್ಯಾಕಾರದಲ್ಲಿ ಬೆಳೆಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ನಿಯಂತ್ರಣಕ್ಕೆ ಬಂದೀತೇ? ಬರಬೇಕಾದರೆ, ಪ್ಲಾಸ್ಟಿಕ್ ಚಟ ಹತ್ತಿಸಿಕೊಂಡಿರುವ ನಮ್ಮ ನಡವಳಿಕೆ ಬದಲಾಗಬೇಕು. ಅದೆಷ್ಟು ಕಷ್ಟ! ಯಾವುದೇ ವಸ್ತು ಖರೀದಿಸಿದರೂ (ತರಕಾರಿಯಿಂದ ತೊಡಗಿ ಇಲೆಕ್ಟ್ರಾನಿಕ್ ಉಪಕರಣಗಳ ವರೆಗೆ) ಅದನ್ನು ಒಯ್ಯಲು ಪ್ಲಾಸ್ಟಿಕ್ ಚೀಲ ಕೇಳುವ ಜನರು ನಾವು. ಯಾವುದೇ ಸಮಾರಂಭದಲ್ಲಿ, ಕುಡಿಯುವ ನೀರಿನಿಂದ ತೊಡಗಿ ಪಾಯಸ, ಐಸ್ಕ್ರೀಮಿನ ವರೆಗೆ ಪ್ಲಾಸ್ಟಿಕ್ ಕನ್-ಟೈನರುಗಳಲ್ಲಿದ್ದರೆ ಭಾರೀ ಅನುಕೂಲ ಎಂದು ಭಾವಿಸುವವರು ನಾವು. ಯಾಕೆಂದರೆ, ಅಮೆರಿಕನ್ನರಂತೆ, ನಾವೆಲ್ಲರೂ “ಸ್ವಲ್ಪ ಪ್ಲಾಸ್ಟಿಕ್ ಆಗಿಬಿಟ್ಟಿದ್ದೇವೆ”, ಅಲ್ಲವೇ? ಇನ್ನಾದರೂ, ನಮ್ಮ ಒಳಿತಿಗಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೋಣ.   
 

Comments

Submitted by vishu7334 Sun, 10/28/2018 - 22:52

ಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ ಎಂಬುದಕ್ಕೆ ಈಗ ಪುರಾವೆಯೂ ಸಿಕ್ಕಿದೆ. ಮೈಕ್ರೊಪ್ಲಾಸ್ಟಿಕ್ ಕಣಗಳು ಈಗ ಮನುಷ್ಯನ ದೇಹದಿಂದ ಹೊರಬಿದ್ದ ಮಲದಲ್ಲಿ ಕಾಣಿಸಿಕೊಳ್ಳತೊಡಗಿದೆ.
https://www.scientificamerican.com/article/microplastics-have-been-found...
ಇನ್ನು ಈ ಕಣಗಳು ಶ್ವಾಸಕೋಶ ಮತ್ತು ಇನ್ನಿತರ ಅಂಗಗಳಿಗೆ ಸೇರಿ ಹೊಸ ರೋಗಗಳಿಗೆ ದಾರಿ ಮಾಡಿ ಕೊಟ್ಟರೆ, ಭವಿಷ್ಯದಲ್ಲಿ ಪ್ಲಾಸ್ಟಿಕ್ ಜನಿತ ರೋಗಗಳ ತಜ್ಞ ವೈದ್ಯರನ್ನ ನೋಡುವ ದಿನಗಳು ದೂರವಿಲ್ಲ. ಸಿಲಿಕೋಸಿಸ್ ಇದ್ದಂತೆ ಪಾಲಿಮರೋಸಿಸ್ ಎಂಬ ರೋಗ ಬಂದರೂ ಆಶ್ಚರ್ಯವಿಲ್ಲ.

ಪ್ಲಾಸ್ಟಿಕಿನ ಮರಣಾಂತಿಕ ದುಷ್ಪರಿಣಾಮದ ಬಗ್ಗೆ ಮತ್ತೊಂದು ಪುರಾವೆ ತಿಳಿಸಿದ್ದಕ್ಕೆ ಧನ್ಯವಾದಗಳು.