ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ!

ಭಾಗ - ೨೮ ಭೀಷ್ಮ ಯುಧಿಷ್ಠಿರ ಸಂವಾದ: ವ್ಯಾಸ ಕೀಟಕ ಸಂವಾದ ಅಥವಾ ಸರ್ವಭೂತ ದಯೆ!

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.  
 
        ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನನಗೆ ಒಂದು ಸಂದೇಹ. ಮಹಾವೀರನಾದವನು ಧರ್ಮವನ್ನು ರಕ್ಷಿಸುವ ನಿಮಿತ್ತವಾಗಿ ಯುದ್ಧವನ್ನು ಮಾಡಲು ಹಿಂದೆ-ಮುಂದೆ ಆಲೋಚಿಸಬಾರದು. ತನ್ನ ಮುಂದೆ ಇರುವ ಲಕ್ಷ್ಯ ಸಾಧನೆಗಾಗಿ ಹೋರಾಡುತ್ತಿರುವಾಗ ಪ್ರಾಣ ಹೋದರೂ ಸಹ ಲೆಕ್ಕಿಸುವುದಿಲ್ಲ. ಪ್ರಾಣವನ್ನು ತೃಣಪ್ರಾಯವಾಗಿ ಕಂಡು ಅದನ್ನು ತ್ಯಜಿಸಲು ಸಿದ್ಧನಾಗಿರುವವನನ್ನೇ ವೀರನೆಂದು ಜನರು ಗೌರವಿಸುತ್ತಾರೆ. ಆದರೆ ಪ್ರಾಣತ್ಯಾಗ ಮಾಡುವುದು ಎಲ್ಲರಿಗೂ ಸಾಧ್ಯವಾಗದು. ಪ್ರಪಂಚದಲ್ಲಿ ಪ್ರತಿ ಜೀವಿಗೆ ಬದುಕಬೇಕೆಂಬ ಅಭಿಲಾಷೆಯಿರುತ್ತದೆ. ಎಂತಹ ಹೀನಸ್ಥಿತಿಯಲ್ಲಿ ಜೀವಿಸುವವನಾದರೂ ಸಹ ಪ್ರಾಣದೊಂದಿಗೆ ಇರಬೇಕೆಂದು ಬಯಸುತ್ತಾನೆ. ಜೀವಿಗಳಲ್ಲಿರುವ ’ಬದುಕುವ ಇಚ್ಛೆ’ಯ ವಿಶೇಷವನ್ನು ಕುರಿತು ತಿಳಿಯುವ ಅಭಿಲಾಷೆಯನ್ನು ಹೊಂದಿದ್ದೇನೆ. ದಯಮಾಡಿ ಅದನ್ನು ಕುರಿತು ವಿವರಿಸುವಂತಹವರಾಗಿ."
ಭೀಷ್ಮನು ಹೀಗೆ ಉತ್ತರಿಸಿದನು, "ಧರ್ಮನಂದನನೇ! ಈ ವಿಷಯದಲ್ಲಿ ನಾನು ಬಹು ಹಿಂದೆ ಕೇಳಿದ ’ವ್ಯಾಸ-ಕೀಟ ಸಂವಾದ’ವೆನ್ನುವ ಪ್ರಸಂಗವೊಂದು ಇದೆ, ಅದನ್ನೇ ನಿನಗೆ ಹೇಳುತ್ತೇನೆ, ಕೇಳುವಂತಹವನಾಗು."
        "ವ್ಯಾಸ ಮಹರ್ಷಿಯು ಒಮ್ಮೆ ದಾರಿಗುಂಟ ಹೋಗುತ್ತಿದ್ದರು. ಅದೇ ದಾರಿಯಲ್ಲಿ ಒಂದು ಎತ್ತಿನ ಬಂಡಿಯು ಸಾಗುತ್ತಿತ್ತು. ಬಂಡಿಯ ಚಕ್ರದ ಶಬ್ದಕ್ಕೆ ಭಯಪಟ್ಟು ಒಂದು ಇರುವೆಯು ಅದರಿಂದ ತಪ್ಪಿಸಿಕೊಳ್ಳಲು ಅದೇ ದಾರಿಯಲ್ಲಿ ಜೋರಾಗಿ ಹೋಗುತ್ತಿತ್ತು. ಇದನ್ನು ವ್ಯಾಸ ಮಹರ್ಷಿಗಳು ಗಮನಿಸಿದರು. ಸಕಲ ಪ್ರಾಣಿಗಳ ಭಾಷೆಯನ್ನೂ ಅರಿತ ವ್ಯಾಸರು, ಆ ಇರುವೆಯನ್ನು ಹೀಗೆ ಕೇಳಿದರು, "ಓ ಇರುವೆಯೇ! ಏತಕ್ಕಾಗಿ ಈ ಗೊಂದಲ? ಏತಕ್ಕಾಗಿ ಹೀಗೆ ರಭಸದಿಂದ ಓಡುತ್ತಿದ್ದೀಯಾ?"
       "ಆಗ ಆ ಇರುವೆಯು, "ಮಹಾತ್ಮರೇ! ಈಗ ಬರುತ್ತಿರುವ ಎತ್ತಿನ ಬಂಡಿಯು ನನ್ನ ಮೈಮೇಲೆ ಬರುವಂತೆ ಕಾಣುತ್ತಿದೆ. ಅಲುಗಾಡುತ್ತಿರುವ ಬಂಡಿಯ ಅಚ್ಚಿನ ಶಬ್ದವನ್ನು ಕೇಳಿಯೇ ನನ್ನ ಎದೆಯು ಗಡಗಡ ನಡುಗುತ್ತಿದೆ. ಬಂಡಿಯಲ್ಲಿ ಕುಳಿತವರು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಎತ್ತುಗಳು ಅದೆಷ್ಟೋ ಭಾರವನ್ನು ಎಳೆಯುತ್ತಾ ಏದುಸಿರುಬಿಡುತ್ತಾ ಓಡುತ್ತಿವೆ. ಬಂಡಿಯವನು ಅವುಗಳನ್ನು ಬಾರುಕೋಲಿನಿಂದ ಬೇರೆ ಹೊಡೆಯುತ್ತಿದ್ದಾನೆ . ಈ ಎಲ್ಲವುಗಳ ಮೂಲಕ ಏರ್ಪಟ್ಟ ಭಯಂಕರವಾದ ಶಬ್ದವನ್ನು ಕೇಳುವುದೇ ನನಗೆ ದುರ್ಭರವಾದ ವಿಷಯವಾಗಿದೆ. ಅದಕ್ಕಾಗಿ ಓಡಿಹೋಗುತ್ತಿದ್ದೇನೆ. ಸತ್ತು ಹೋಗುತ್ತೇನೇನೊ ಎನ್ನುವ ಭಯವು ನನಗೂ ಇದೆ. ಬೇಕಾಗಿ ಕಷ್ಟವನ್ನು ಮೈಮೇಲೆ ಎಳೆದುಕೊಳ್ಳಲಾರೆನಷ್ಟೆ" ಎಂದು ಉತ್ತರಿಸುತ್ತಾ ಪಕ್ಕಕ್ಕೆ ತಪ್ಪಿಸಿಕೊಂಡು ಹೋಗ ತೊಡಗಿತು"
        "ಇರುವೆಯ ಮಾತುಗಳನ್ನು ಕೇಳಿಸಿಕೊಂಡು ವ್ಯಾಸರು ಹೇಳಿದರು, "ನಿನಗೆ ಸುಖವೆನ್ನುವುದಾದರೂ ಎಲ್ಲಿದೆ? ವಾಸ್ತವವಾಗಿ ನೀನು ಸತ್ತುಹೋಗುವುದೆ ಒಳಿತು ಎಂದು ನನಗನಿಸುತ್ತಿದೆ. ಕೀಟ ಯೋನಿಯಲ್ಲಿಯೇ ತೊಳಲಾಡುತ್ತಿರುವ ನಿನಗೆ ಮರಣದಲ್ಲಿಯೇ ಸುಖವಿದೆ ಎನ್ನುವುದು ನನ್ನ ಭಾವನೆ." 
        "ಆಗ ಆ ಇರುವೆಯು ಹೀಗೆ ಹೇಳಿತು, "ಮಹಾನುಭಾವಾ! ಜೀವಿಗಳು ಯಾವ ಯೋನಿಯಲ್ಲಿ ಜನಿಸಿದರೂ ಸಹ ಅವುಗಳಿಗೆ ಅದರಲ್ಲಿಯೇ ಸುಖಾನುಭೂತಿ ಇರುತ್ತದೆ. ನನಗೂ ಸಹ ಈ ಶರೀರದಲ್ಲಿ ಸುಖವಿದೆ. ಅದಕ್ಕಾಗಿಯೇ ನಾನು ಬದುಕಿರಬೇಕು ಎಂದು ಬಯಸುತ್ತಿದ್ದೇನೆ. ನನಗೂ ಸಹ ಈ ಶರೀರದ ಸ್ಥಾಯಿಗೆ ಸರಿಹೊಂದುವ ಎಲ್ಲಾ ವಿಧವಾದ ಸುಖಗಳು ಇವೆ; ಅವು ಮನುಷ್ಯರ ಸುಖಕ್ಕಿಂತ ಬೇರೆಯಾಗಿರಬಹುದು."  
        "ಮಹರ್ಷಿಗಳೆ, ನಾನು ಗತ ಜನ್ಮದಲ್ಲಿ ಅತ್ಯಂತ ನಿರ್ದಯನಾಗಿ ವರ್ತಿಸಿದ್ದರಿಂದ ನನಗೀಗ ಈ ಜನ್ಮವು ಪ್ರಾಪ್ತವಾಗಿದೆ. ಆದರೆ ಕೆಲವು ಸತ್ಕರ್ಮಗಳನ್ನು ಕೈಗೊಂಡದ್ದರಿಂದ ನನಗೆ ಪೂರ್ವಜನ್ಮ ಸ್ಮೃತಿ ಇದೆ. ಅದು ಒತ್ತಟ್ಟಿಗಿರಲಿ, ಈ ಜನ್ಮದಲ್ಲಿ ನಿಮ್ಮ ದರ್ಶನ ಭಾಗ್ಯದಿಂದ ನನಗೆ ಸದ್ಗತಿ ದೊರೆಯದೇ ಹೋಗುವುದಿಲ್ಲ ಎನ್ನುವುದು ನನ್ನ ವಿಶ್ವಾಸ"
         "ವ್ಯಾಸ ಮಹರ್ಷಿಗಳು, "ಇರುವೆಯೇ! ನೀನು ಸತ್ಯವಾದ ಮಾತನ್ನೆ ಹೇಳಿರುವೆ. ನನ್ನ ತಪೋಬಲದಿಂದ ನನ್ನ ದರುಶನ ಮಾತ್ರದಿಂದಲೇ ನಿನ್ನನ್ನು ಉದ್ಧರಿಸುತ್ತೇನೆ."
         "ಮತ್ತೊಂದು ಮಾತು. ಸತ್ಕರ್ಮವನ್ನು ಮಾಡುವ ಮೂಲಕ ನಿನಗೆ ಸದ್ಗತಿಯನ್ನು ಹೊಂದುವುದು ಕಷ್ಟಸಾಧ್ಯವಾಗಬಹುದು. ಆದರೆ ನಿನಗೆ ಧರ್ಮದ ಕುರಿತು ಶ್ರದ್ಧೆಯಿದೆ, ಅದು ಸಾಕು"
         "ವ್ಯಾಸ ಮಹರ್ಷಿಗಳು ಹೀಗೆ ನುಡಿದು, ನೀಚ ಜನ್ಮವನ್ನು ಹೊಂದಿದ್ದ ಆ ಕೀಟಕ್ಕೆ ಉತ್ತಮ ಜನ್ಮವನ್ನು ಕರುಣಿಸಿದರು"
        "ಆದ್ದರಿಂದ ಯುಧಿಷ್ಠಿರನೇ! ಪ್ರಪಂಚದಲ್ಲಿ ಪ್ರತಿ ಜೀವಿಗೆ ಪ್ರಾಣದ ಮೇಲೆ ಮಮಕಾರವಿರುತ್ತದೆ. ಕೇವಲ ಪ್ರಾಣಿಗಳಿಗಷ್ಟೇ ಅಲ್ಲ, ವೃಕ್ಷಗಳಿಗೂ ಸಹ ಇರುತ್ತದೆ. ಸುಖದುಃಖ ಭಾವನೆ ಎನ್ನುವುದು ಸಕಲ ಜೀವಿಗಳಿಗೂ ಸಮಾನವಾದುದು. ಹಾಗಿರುವಾಗ ಸರ್ವಭೂತ ದಯೆ ಎನ್ನುವುದು ಪ್ರತಿ ವ್ಯಕ್ತಿಯೂ ತಪ್ಪದೇ ಆಚರಿಸಬೇಕಾದ ಧರ್ಮವಾಗಿದೆ"
        "ಈ ಪ್ರಪಂಚಕ್ಕೆ ಕೇಂದ್ರ ಬಿಂದುವಾದನು ಮನುಷ್ಯ. ಸಮಸ್ತ ಸೃಷ್ಟಿಯಲ್ಲಿ ಈ ಮನುಷ್ಯನಾದವನು ಒಂದು ಅಂಶ ಮಾತ್ರ, ಆದರೆ ಅವನು ಉತ್ತಮವಾದ ಅಂಶ ಮತ್ತು ಸಮಸ್ತ ಸೃಷ್ಟಿಗೆ ಕೇಂದ್ರ ಬಿಂದುವಾಗಿರುವ ಮೂಲ ಚೈತನ್ಯನು. ಆ ಚೈತನ್ಯವನ್ನೇ ಭಗವತ್ ತತ್ತ್ವ ಎಂದು ಬೇಕಾದರೆ ಕರೆಯಬಹುದು"
         "ಆದ್ದರಿಂದ ಮನುಷ್ಯನು ಜೀವಿಸಲಿಕ್ಕಾಗಿ, ಸುಖವನ್ನು ಪಡೆಯಲಿಕ್ಕಾಗಿ ಉಳಿದ ಜೀವರಾಶಿಯನ್ನು ಬಾಧೆಗೊಳಪಡಿಸುವುದು, ಹಿಂಸಿಸುವುದು ತಪ್ಪು. ಜೀವಿಸುವ ಇಚ್ಛೆಯು ಸಮಾನವಾಗಿ ಇರುವ ಇತರ ಜೀವಿಗಳ ಹಿತಕ್ಕಾಗಿ ಶ್ರಮಿಸುವವನೇ ಉತ್ತಮನಾದ ಜೀವಿ"
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದಿಂದ ಆಯ್ದ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು).  
ಚಿತ್ರಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೨೭ ಭೀಷ್ಮ ಯುಧಿಷ್ಠಿರ ಸಂವಾದ: ಹಿರಿಯಣ್ಣನ ಕರ್ತವ್ಯ! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/node/48508
 

Rating
No votes yet

Comments

Submitted by makara Mon, 11/19/2018 - 07:53

ಈ ಲೇಖನದ ಮುಂದಿನ ಭಾಗ - ೨೯ ಭೀಷ್ಮ ಯುಧಿಷ್ಠಿರ ಸಂವಾದ: ಶಾಂಡಲೀದೇವಿ ಸುಮನ ಸಂವಾದ ಅಥವಾ ಸಾಧ್ವಿಯ ಲಕ್ಷಣಗಳು! ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A8%E0%B3%AF-...