ಭಾಗ - ೩೧ ಭೀಷ್ಮ ಯುಧಿಷ್ಠಿರ ಸಂವಾದ: ಭೀಷ್ಮನ ಅಂತಿಮ ಸಂದೇಶ

ಭಾಗ - ೩೧ ಭೀಷ್ಮ ಯುಧಿಷ್ಠಿರ ಸಂವಾದ: ಭೀಷ್ಮನ ಅಂತಿಮ ಸಂದೇಶ

ಚಿತ್ರ

        ಇದು ಭೀಷ್ಮ ಯುಧಿಷ್ಠಿರ ಸಂವಾದವೆನ್ನುವ ರಾಜನೀತಿ ಶಾಸ್ತ್ರದ ನಿರ್ಣಾಯಕ ಭಾಗ
      ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಇದೋ ಧರ್ಮನಂದನನ ಸಾಷ್ಟಾಂಗ ಪ್ರಣಾಮಗಳು. ನೀವು ಇಷ್ಟು ದಿನ ಧರ್ಮಬೋಧನೆಯನ್ನು ಮಾಡಿ ನಮ್ಮನ್ನು ಕರ್ತವ್ಯೋನ್ಮುಖರಾಗುವಂತೆ ಮಾಡಿರುವಿರಿ. ನೀವು ಇನ್ನೂ ಹೇಳಬೇಕಾಗಿರುವುದೇನಾದರೂ ಇದ್ದರೆ ದಯಮಾಡಿ ಅದನ್ನು ತಿಳಿಸಬೇಕೆಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ."
      ಭೀಷ್ಮನು ಹೀಗೆ ನುಡಿದನು, "ಧರ್ಮನಂದನನೇ! ನಾನು ಹೇಳಬೇಕಾದುದೆಲ್ಲವನ್ನೂ ಹೇಳಿದ್ದೇನೆ. ಇನ್ನು ನನ್ನ ದೇಹದಲ್ಲಿ ಶಕ್ತಿಯು ಕ್ಷೀಣಿಸುತ್ತಿದೆ. ನನ್ನ ಜಿಹ್ವೆ, ಕರ್ಣ, ನೇತ್ರ, ಮನಸ್ಸು, ಚಿತ್ತಗಳೆಲ್ಲವೂ ತಿರೋಹಿತವಾಗಿ ಏಕತ್ರವಾಗಿವೆ. ನನ್ನ ಪ್ರಾಣಗಳು ನನ್ನ ದೇಹದಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ ಎನಿಸುತ್ತಿದೆ. ಈ ದಿನ ಅದೇಕೊ ತಿಳಿಯದು, ಸೂರ್ಯಭಗವಾನನೂ ಸಹ ಭಗಭಗನೆ ಹೊತ್ತಿ ಉರಿಯುತ್ತಿದ್ದಾನೆ. ನಾನು ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಉಳಿದದ್ದೇನಾದರೂ ಇದ್ದರೆ ಅದನ್ನು ನೀನು ಶ್ರೀ ಕೃಷ್ಣನ ಮೂಲಕ ಗ್ರಹಿಸು."
       "ಶ್ರೀ ಕೃಷ್ಣನನ್ನು ಮಾನವಮಾತ್ರನೆಂದು ಭಾವಿಸಬೇಡ. ಅವನು ಅಪ್ರಮೇಯನು. ನಿನ್ನ ಮನಸ್ಸಿನಲ್ಲಿ ಏನೇ ಸಂದೇಹವುಂಟಾದರೂ ಸಹ ಅವನು ನಿನ್ನೊಳಗೆ ಅಂತರ್ಯಾಮಿಯಾಗಿದ್ದು ನಿನಗೆ ಮಾರ್ಗದರ್ಶನ ಮಾಡುತ್ತಾನೆ."
       "ಆ ಕೃಷ್ಣ ಪರಮಾತ್ಮನಿಂದಲೇ ಈ ಪೃಥ್ವಿಯ ಸೃಷ್ಟಿಯಾಗಿದೆ. ಆಕಾಶವು ಏರ್ಪಟ್ಟಿದೆ. ಸೃಷ್ಟಿಯಲ್ಲಿನ ಸಕಲವೂ, ಈ ನದಿಗಳು, ಈ ಪರ್ವತಗಳು, ಈ ದಿಕ್ಕುಗಳು, ಈ ಜೀವರಾಶಿಗಳು ಈ ಸೃಷ್ಟಿ ಪರಂಪರೆ ಎಲ್ಲವೂ ಭಗವದ್ವಿಲಾಸವೇ."
   "ಕುಂತೀನಂದನನೇ! ಸತ್ಯಯುಗದಲ್ಲಿ ಈ ಕೃಷ್ಣ ಪರಮಾತ್ಮನು ಧರ್ಮಸ್ವರೂಪನಾಗಿ ಇರುತ್ತಾನೆ. ತ್ರೇತಾಯುಗದಲ್ಲಿ ಜ್ಞಾನಸ್ವರೂಪನಾಗಿ ಇರುತ್ತಾನೆ. ದ್ವಾಪರಯುಗದಲ್ಲಿ ಬಲಸ್ವರೂಪನಾಗಿ ಇರುತ್ತಾನೆ. ಕಲಿಯುಗದಲ್ಲಿ ಅಧರ್ಮರೂಪನಾಗಿ ಕೂಡಾ ಅವನು ಸಾಕ್ಷಾತ್ಕಾರಗೊಳ್ಳುತ್ತಾನೆನ್ನುವುದನ್ನು ತಿಳಿ."
        "ಶುಭಾಶುಭಗಳು, ಸ್ಥಾವರ ಜಂಗಮಗಳಿಂದ ಕೂಡಿದ ಈ ಚರಾಚರ ಜಗತ್ತೆಲ್ಲವೂ ಕೃಷ್ಣನಿಂದಲೇ ಹೊರಹೊಮ್ಮಿದೆ. ಅವನಲ್ಲಿಯೇ ಸ್ಥಿರವಾಗಿದೆ ಮತ್ತು ಅವನಲ್ಲಿಯೇ ಲೀನವಾಗುತ್ತದೆ."
        "ಅಂತಹ ಕೃಷ್ಣನು ನಿನಗೆ ಸನ್ನಿಹಿತನಾಗಿದ್ದಾನೆ, ನಿನ್ನ ಆಪ್ತನಾಗಿದ್ದಾನೆ. ಅವನೇ ನಿನ್ನ ಅಂತರ್ವಾಣಿ. ನಿನ್ನ ಅಂತರಾತ್ಮ. ಅವನು ನಿನ್ನ ಬೆಂಬಲಕ್ಕಿದ್ದಾನೆ. ನೀನು ನಿಶ್ಚಿಂತೆಯಿಂದ ರಾಜ್ಯವನ್ನು ಪರಿಪಾಲಿಸು."
       ಈ ವಿಧವಾಗಿ ಕುರುಕುಲ ಶ್ರೇಷ್ಠನಾದ ಭೀಷ್ಮನು ಉಪದೇಶಿಸಿದನು. ಶರಶಯ್ಯೆಯಲ್ಲಿ ಪವಡಿಸಿದ್ದ ಮಹಾವೀರನಾದ ಭೀಷ್ಮಪಿತಾಮಹನು ಮರಣಾಸನ್ನನಾದಾಗ ಅವನ ಸನಿಹಕ್ಕೆ ತೆರಳಿ ಪ್ರತಿದಿನವೂ ಅವನ ಸೇವೆಗೈದು ಪಾಂಡವರು ಅವನಿಂದ ಧರ್ಮಾಮೃತಪಾನವನ್ನು ಮಾಡಿದರು. 
          ಭೀಷ್ಮನು, "ಧರ್ಮನಂದನನೇ! ಸೂರ್ಯಭಗವಾನನು ಉತ್ತರಾಯಣದಲ್ಲಿ ಪ್ರವೇಶಿಸಿದ ಕೂಡಲೇ ಪುನಃ ಬಂದು ನನ್ನನ್ನು ಕಾಣು" ಎಂದು ಹೇಳಿದನು. 
          ಯುಧಿಷ್ಠಿರನು ಪಿತಾಮಹನಿಗೆ ಪ್ರಣಾಮಗಳನ್ನು ಸಲ್ಲಿಸಿ ಪರಿವಾರ ಸಮೇತನಾಗಿ ಹಸ್ತಿನಾಪುರಕ್ಕೆ ಹಿಂದಿರುಗಿ ಪುನಃ ಉತ್ತರಾಯಣ ಪುಣ್ಯಕಾಲವು ಬರುತ್ತಿದ್ದಂತೆ ಮಂತ್ರಿ ಪುರೋಹಿತರೊಡನೆ ಭೀಷ್ಮನಿದ್ದಲ್ಲಿಗೆ ಬಂದನು. 
        ಭೀಷ್ಮಪಿತಾಮಹನು, ವಾಸುದೇವನ ಅನುಜ್ಞೆಯನ್ನು ಪಡೆದು ಯೋಗಯುಕ್ತನಾಗಿ ತನ್ನ ದೇಹವನ್ನು ತ್ಯಜಿಸಿದನು. ಯಾವ ಯಾವ ಅವಯವಗಳಿಂದ ಪ್ರಾಣಗಳು ಹೊರಟುಹೋಗುತ್ತವೆಯೋ ಆಯಾ ಅವಯವಗಳಿಗೆ ನಾಟಿದ್ದ ಬಾಣಗಳು ಅವಷ್ಟಕ್ಕೆ ಅವೇ ಕಳಚಿಬಿದ್ದವು. ಗಾಯಗಳು ಮಾಸಿಹೋದವು. ಭೀಷ್ಮನು ಶರೀರದಲ್ಲಿನ ಎಲ್ಲಾ ಮಾರ್ಗಗಳನ್ನು ನಿರ್ಬಂಧಿಸಿ ಪ್ರಾಣಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಅವನ ಪ್ರಾಣಗಳು ಬ್ರಹ್ಮರಂಧ್ರವನ್ನು ಛೇದಿಸಿಕೊಂಡು ಉತ್ಕ್ರಮಿಸಿದವು. 
ಯುಧಿಷ್ಠಿರಾದಿಗಳು ಶೋಕತಪ್ತರಾಗಿ ರೋಧಿಸಿದರು. ಆಮೇಲೆ ಕೃಷ್ಣ ಹಾಗು ವ್ಯಾಸರಿಂದ ಪ್ರೇರೇಪಿಸಲ್ಪಟ್ಟು ಧರ್ಮರಾಯನು ಅಶ್ವಮೇಧಯಾಗವನ್ನು ಮಾಡಿದನು. ತದನಂತರ ರಾಜ್ಯವನ್ನು ಪರಿಪಾಲಿಸಿ, ಕ್ಷತ್ರಿಯರಿಗೆ ಉಚಿತವಾದ ಕರ್ತವ್ಯಗಳನ್ನು ನಿರ್ವಹಿಸಿ ಮಹಾಪ್ರಸ್ಥಾನದೆಡೆಗೆ ಸಾಗಿ ಸ್ವರ್ಗಾರೋಣವನ್ನು ಮಾಡಿದನು. 
         ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಯು ಅದರ ಕಟ್ಟಕಡೆಯಲ್ಲಿ ಈ ವಿಧವಾಗಿ ಉದ್ಘೋಷಿಸಿದ್ದಾನೆ. 
        "ನಾನು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಸಾರಿ ಸಾರಿ ಹೇಳುತ್ತಿದ್ದೇನೆ ಆದರೆ ಯಾರೂ ನನ್ನ ಮಾತನ್ನು ಕೇಳುತ್ತಿಲ್ಲ. ಧರ್ಮದಿಂದಲೇ ಅರ್ಥವು ದೊರೆಯುತ್ತದೆ, ಧರ್ಮದಿಂದಲೇ ಕಾಮವು ಲಭಿಸುತ್ತದೆ, ಧರ್ಮವೇ ಮೋಕ್ಷಸಾಧನವೂ ಆಗಿದೆ. ಇದುವೇ ಸತ್ಯ, ಆದರೂ ಸಹ ಜನರು ಧರ್ಮಾಚರಣೆಯನ್ನು ಮಾಡಲೊಲ್ಲರು, ಏಕೆ?"
ಊರ್ಧ್ವಬಾಹುರ್ವಿರೋಮ್ಯೇಷ
ನ ಕಶ್ಚಿತ್ ಶೃಣೋತಿಮೇ
ಧರ್ಮಾದರ್ಥಶ್ಚ ಕಾಮಶ್ಚ
ಸ ಕಿಮರ್ಥಂ ನ ಸೇವ್ಯತೇ
ಓಂ ಶಾಂತಿ ಶಾಂತಿ ಶಾಂತಿಃ!
*****
ಹಿನ್ನುಡಿ
       (ಮೂಲ ಲೇಖಕರು ಭೀಷ್ಮ ಯುಧಿಷ್ಠಿರ ಸಂವಾದ ಎನ್ನುವ ರಾಜನೀತಿ ಶಾಸ್ತ್ರದ ಕಿರುಹೊತ್ತಗೆಗೆ ಬರೆದ ಮುನ್ನುಡಿಯನ್ನು ಇಲ್ಲಿ ಹಿನ್ನುಡಿಯಾಗಿ ಕೊಡುತ್ತಿದ್ದೇನೆ.)
       ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಹಾಗು ಭಗವದ್ಗೀತೆಗಳನ್ನು ಒಟ್ಟಾಗಿ ಪ್ರಸ್ಥಾನತ್ರಯಗಳೆಂದು ಕರೆಯಲಾಗುತ್ತದೆ. ಇವುಗಳೊಂದಿಗೆ ರಾಮಾಯಣ, ಮಹಾಭಾರತಗಳನ್ನೂ ಸೇರಿಸಿ ಪಂಚರತ್ನಗಳೆಂದು ಕರೆಯಲ್ಪಡುತ್ತವೆ. 
ರಾಮಾಯಣ, ಮಹಾಭಾರತಗಳು ಸನಾತನ ಭಾರತೀಯ ಸಂಸ್ಕೃತಿಯ ಪ್ರತಿಬಿಂಬಗಳು. ಭಾರತೀಯ ಸಂಸ್ಕೃತಿಯ ಜೀವನಮೌಲ್ಯಗಳ ಸಮಗ್ರ ದರ್ಶನವು ಈ ಗ್ರಂಥಗಳ ಮೂಲಕ ನಮಗೆ ಲಭಿಸುತ್ತದೆ. ಮಹಾಭಾರತದೊಳಗಿನ (ಶಾಂತಿ ಪರ್ವ, ಅನುಶಾಸನ ಪರ್ವ) ಕಥೆಗಳಲ್ಲಿ ಅಂತರ್ಲೀನವಾಗಿ ಇರುವ ಮೌಲ್ಯಗಳನ್ನು ಆಧುನಿಕ ಸಾಮಾಜಿಕ ಜೀವನ ಪರಿಸ್ಥಿತಿಗಳಿಗೆ ಅನ್ವಯಿಸಿ ತುಲನಾತ್ಮಕವಾಗಿ ಹೇಳುವ ಒಂದು ಚಿಕ್ಕ ಪ್ರಯತ್ನವೇ ಈ ಕಥಾಸರಣಿ. 
      ಈ ಲೇಖನಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳಿಗೆ ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಅಗ್ರಗಣ್ಯರಾದ ಹಿರಿಯರನೇಕರಿಂದ ಕೇಳಿ ತಿಳಿದುಕೊಂಡ ವಿಷಯಗಳು ಹಿನ್ನಲೆಯಾಗಿವೆ. ರಾಮಾಯಣ, ಮಹಾಭಾರತಗಳನ್ನು ನಾವು ಕೇವಲ ಆಧ್ಯಾತ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ ಅವುಗಳನ್ನು ಸಾಮಾಜಿಕ ದೃಷ್ಟಿಕೋನದಿಂದಲೂ ಅಭ್ಯಸಿಸಬೇಕಾದ ಅವಶ್ಯಕತೆ ಇದೆ. 
      ’ರಾಮನು ಧರ್ಮವಿಗ್ರಹನು’ ’ಯುಧಿಷ್ಠಿರನು ಧರ್ಮದ್ರುಮನು’ ಎನ್ನುವ ನುಡಿಗಟ್ಟುಗಳಲ್ಲಿ ಧರ್ಮ ಎನ್ನುವ ಪದಕ್ಕೆ ಆಧ್ಯಾತ್ಮಿಕತೆಯೊಂದಿಗೆ ಸಾಮಾಜಿಕವಾದುದು ಎನ್ನುವ ಅರ್ಥವಿದೆ. 
      ಈ ದೃಷ್ಟಿಯಿಂದ ಬರೆದ ಈ ಬರಹಗಳು ಓದುಗರಲ್ಲಿ ಆಲೋಚನೆಗಳನ್ನು ಹುಟ್ಟುಹಾಕಿ, ರಾಮಾಯಣ, ಭಾರತಗಳನ್ನು ಇಂದಿನ ಪರಿಸ್ಥಿತಿಗಳಿಗೆ ಅನ್ವಯಿಸಿಕೊಳ್ಳುವ ದೃಷ್ಟಿಯಿಂದ ಮತ್ತಷ್ಟು ದೀರ್ಘ ಅಧ್ಯಯನಕ್ಕೆ ದಾರಿಮಾಡಿಕೊಡುವವೆಂದು ಭಾವಿಸುತ್ತೇನೆ. 
ಸರ್ವೇಜನಾಃ ಸುಖಿನೋ ಭವಂತು. ಸರ್ವೇ ಸನ್ಮಂಗಳಾನಿ ಭವತು. 
-ದೋನೇಪುಡಿ ವೆಂಕಯ್ಯ
*****
(ಆಧಾರ - ಶ್ರೀಯುತ ದೋನೇಪುಡಿ ವೆಂಕಯ್ಯನವರು ತೆಲುಗಿನಲ್ಲಿ ರಚಿಸಿರುವ ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರ ಎಂಬ ಗ್ರಂಥದ ಅಂತಿಮ ಭಾಗದ ಅನುವಾದ. ಈ ಸರಣಿಯನ್ನು ಈ ಹಿಂದೆ ಮೊಗಹೊತ್ತಗೆ - ಫೇಸ್ ಬುಕ್ಕಿನಲ್ಲಿ ನನ್ನ ವ್ಯಕ್ತಿಗತ ಪುಟದಲ್ಲಿ ಪ್ರಕಟಿಸಲಾಗಿತ್ತು. ಈ ಮಾಲಿಕೆಯನ್ನು ಆಸಕ್ತಿಯಿಂದ ಪರಾಂಭರಿಸಿದ ಸಹೃದಯ ಸಂಪದಿಗ ಮಿತ್ರರೆಲ್ಲರಿಗೂ ಧನ್ಯವಾದಗಳು. ಈ ಸರಣಿಯಲ್ಲಿನ ಕಥೆಗಳು ವಾಚಕ ಮಿತ್ರರಿಗೆ ಉಪಯುಕ್ತವೆನಿಸಿದ್ದರೆ ನನ್ನ ಶ್ರಮ ಸಾರ್ಥಕವಾದಂತೆ. 
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ -‌^-
ಚಿತ್ರಗಳ ಕೃಪೆ:  ಗೂಗಲ್
ಹಿಂದಿನ ಲೇಖನ  ಭಾಗ - ೩೦ ಭೀಷ್ಮ ಯುಧಿಷ್ಠಿರ ಸಂವಾದ: ದಾನವೆಂದರೇನು? ಓದಲು ಈ ಕೆಳಗಿನ ಕೊಂಡಿಯನ್ನು ನೋಡಿ https://sampada.net/blog/%E0%B2%AD%E0%B2%BE%E0%B2%97-%E0%B3%A9%E0%B3%A6-...

Rating
No votes yet

Comments

Submitted by addoor Tue, 11/27/2018 - 23:11

ಇಂದಿನ ಗೊಂದಲಮಯ ಬದುಕಿನ ಹಲವಾರು ಪ್ರಶ್ನೆಗಳಿಗೆ ಉತ್ತರಗಳು ಭೀಷ್ಮ - ಯುಧಿಷ್ಠಿರ ಸಂವಾದದಲ್ಲಿ ಅಡಕವಾಗಿವೆ. ೩೧ ಭಾಗಗಳಲ್ಲಿ ಪ್ರಕಟವಾದ ಸಂವಾದವು ಓದುಗರನ್ನು ಚಿಂತನೆಗೆ ಹಚ್ಚುತ್ತದೆ.

ನಿಮ್ಮ‌ ಮಾತು ನಿಜ‌ ಸರ್. ಈ ಸರಣಿ ಎಲ್ಲ‌ ಕಾಲಕ್ಕೂ ಪ್ರಸ್ತುತವೆನಿಸುವ‌ ವಿಷಯಗಳನ್ನೊಳಗೊಂಡಿದೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ ‍:)