ಪರಿಚಿತ ಮೌನ
ಈ ಬೆಂಗಳೂರೆಂಬ ಮಹಾನಗರದಲ್ಲಿ ಏನುಂಟು ಏನಿಲ್ಲ? ಜನರ ಸಮಯವೊಂದನ್ನು ಬಿಟ್ಟು ಎಲ್ಲವನ್ನೂ ಇಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು. ಇಲ್ಲಿ ಪರಿಚಿತರೇ ಆದರೆ ಯಾರೂ ಆತ್ಮೀಯರಾಗುವುದಿಲ್ಲ. ನೋವು-ಕಷ್ಟ ಅಥವಾ ಬಹುಕಾಲದ ಸ್ನೇಹವಿಲ್ಲದೇ ಯಾರು ಆತ್ಮೀಯರಾಗಲೂ ಸಾಧ್ಯವೂ ಇಲ್ಲ ಬಿಡಿ. ಆದರೆ ಅಪರಿಚಿತತೆ ಎಂಬುದರ ಪರಿಚಯವಾದದ್ದು ನನಗೆ ಇಲ್ಲಿಯೇ. ಪರಿಚಿತ ಬೀದಿಗಳಲ್ಲಿ ಪರಿಚಯಸ್ಥ ಮುಖಗಳ ಎದುರಿಗೆ ಏಕತಾನತೆಯಲ್ಲಿ ಸಾಗುತ್ತಿದ್ದ ಬದುಕು ಒಂದು ಅಪರಿಚಿತ ಪರಿಸರ ಮತ್ತು ಸಂಬಂಧಗಳ ಸೆಳವಿಗೆ ಸಿಕ್ಕಿಕೊಂಡಾಗಲೇ ಆ "ಅದರ" ಪರಿಚಯವಾಯ್ತು. ಎಷ್ಟೆಷ್ಟು ಅಪರಿಚಿತತೆ ಗಾಢವಾಗುತ್ತ ಸಾಗಿದೆಯೋ ಅಷ್ಟಷ್ಟು ಊರಕರೆ ಬಲವಾಗುತ್ತಿದೆ.
ಇಲ್ಲಿ ಬಟ್ಟೆಹೊಲಿಯುವ ದರ್ಜಿಗೂ ನಿಗದಿತ ಸಮಯ ಮತ್ತು ಅವನದೇ ಆದ ಪ್ರತಿಷ್ಠೆಗಳಿರುತ್ತದೆ. ಇಂದು ಬಂದು ಬಟ್ಟೆ ಹೊಲಿಸಿಕೊಂಡವನ ಮುಖ ಮತ್ತೆ ಜೀವಮಾನದಲ್ಲಿ ಎಲ್ಲಿಯೂ ಕಾಣಬರದಂತಾಗಬಹುದೆಂಬ ಪ್ರಜ್ಞೆ ಇರುತ್ತದೆ. ಸ್ವಲ್ಪ ಕಡಿಮೆ ಬೆಲೆಯ ಬಟ್ಟೆ ಧರಿಸಿ ಚಪ್ಪಲಿಯ ಅಂಗಡಿಗೆ ಹೋದರೆ ನಮ್ಮ ವೇಷ ಭೂಷಣ ನೋಡಿ ಒಂದು ನಾಲ್ಕಾರು ಜೊತೆಗಳನ್ನು ನಮ್ಮ ಮುಂದೆಹರಡಿ ತಾವು ತಮ್ಮ ಮೊಬೈಲಿನ ಒಳಗಿಳಿಯುತ್ತಾರೆ. ಚಪ್ಪಲ್ಲಿಯೇ ನಮಗಲ್ಲವೆಂದ ಮೇಲೆ ಬಟ್ಟೆ ಬಂಗಾರದ ಮಾತೇನು? ಆದ್ದರಿಂದ ಒಂದು ಮಟ್ಟದ ಒಳ್ಳೆಯ ಬಟ್ಟೆ ಮತ್ತು ಮುಖದ ತುಂಬ ಇಷ್ಟಗಲದ ಕೃತಕ ನಗು ಕೂಡ ಪಟ್ಟಣಗಳಿಗೆ ಅನಿವಾರ್ಯ.
ಆದರೆ ನನ್ನೂರಿನಲ್ಲಿ (ಅಥವಾ ಎಲ್ಲಾ ಸಣ್ಣ ಪಟ್ಟಣಗಳಲ್ಲಿ) ನಮ್ಮ ವಂಶಕ್ಕೇ ಬಟ್ಟೆ ಹೊಲಿಯುವವರು ತಾವೇ ಏನೋ ಎಂಬಂತೆ ಊರಿನ ದರ್ಜಿಗಳು ವರ್ತಿಸುತ್ತಿದ್ದರು. ನಾನಂತೂ ಎಂದೂ ಊರಲ್ಲಿ ಬಟ್ಟೆ ಹೊಲಿಯಲು ಕೊಟ್ಟು ಡಿಸೈನ್ ಹೇಳಿ ಬಂದಿದ್ದಿಲ್ಲ. ಆದರೂ ಅವಳು ಮಾಡಿಟ್ಟಿರುವ ಅಲಂಕಾರವನ್ನು ತುಂಬಾ ಮೆಚ್ಚುಗೆಯಿಂದ ನೋಡಿದ್ದೇನೆ. ನನ್ನ ಅಮ್ಮ ಅಳತೆಯನ್ನೂ ಕೊಟ್ಟು ಬಂದಿರುವುದಿಲ್ಲ. ಆದರೂ ಅವಳಳತೆಯ ಬ್ಲೌಸ್ ಸಿದ್ಧವಾಗಿರುತ್ತದೆ. ಹೇಗೂ ಮನೆ ಅಂಗಡಿ ಎಲ್ಲಾ ಒಂದೇ ಆಗಿರುವ ಆ ಟೇಲರ ಬಳಿಯಲ್ಲಿ ಊರವರೆಲ್ಲರ ಕಥೆ ಕೇಳಿ ಹೇಳಿ ಅರ್ಧದಿನ ಅಲ್ಲೇ ಕಳೆದು ಬಂದರೂ ಆಶ್ಚರ್ಯವಿಲ್ಲ. ಅಮ್ಮ ಸಣ್ಣಗಾದದ್ದು ನೋಡಿಯೇ ಶುಗರ್ ಗಿಗರ್ ಶುರುವಾಗದಿಯ ಅಮ್ಮಂಗೆ? ಎಂದು ಕಾಳಜಿಯಿಂದ ಕೇಳುವ ಅವರಲ್ಲಿ ಯಾವುದನ್ನು ತಾನೇ ಮುಚ್ಚಿಡಲು ಸಾಧ್ಯ?
ಇನ್ನು "ಕಾಕನ ಅಂಗಡಿ" ಎಂದು ಕರೆಸಿಕೊಳ್ಳುವ ಚಪ್ಪಲಿ ಅಂಗಡಿಗೆ ಹೋದರೆ ಸಾಕು, ಒಂದೆರಡು ಬಗೆಯ ಜೊತೆಯನ್ನು ತೋರಿಸಿದಂತೆ ಮಾಡಿ "ಕೂಸೆ ನೀನಿದ್ನೆ ತಕಹೋಗು. ನಿನ್ನ ಕಾಲಿಗೆ ಇದೇ ಚಂದ ಕಾಣುದು, ಮತ್ತೆ ಬಾಳಿಕೆ ಬರದಿದ್ರೆ ಕೇಳು. ನಿನ್ನ ಅಪ್ಪ ಬ್ಯಾಡ ಅಂದ್ರೆ ಬಾ, ನಾಳೆನೆ ಚೇಂಜ್ ಮಾಡ್ಕೊಡ್ತೆ" ಎಂದು ಒಂದು ಜೊತೆಯನ್ನು ನನ್ನ ತಲೆಗೆ ಕಟ್ಟಿ ಕಳುಹಿಸುತ್ತಾನೆ ಆ ಮಲಯಾಳಿ. ಒಂದು ಮಾತ್ರ ನಿಜ. ಅವ ಕೊಟ್ಟ ಚಪ್ಪಲಿ ಮಾತ್ರ ಬಾಳಿಕೆ ಬಂದಿಲ್ಲವೆಂದು ಬಿಸಾಡಿದ ನೆನಪಿಲ್ಲ ನನಗೆ.
ಕಿರಾಣಿ ಅಂಗಡಿಗೆ ಹೋಗಿ ಟೊಮೆಟೊ ಕೆಚಪ್ ಕೊಂಡರೆ "ಒಹೋ ತಂಗಿದು ಇವತ್ತೆಂತ ಸ್ಪೆಷಲ್ ಗೋಭಿ ಮಂಚೂರಿಯನೇ" ಎನ್ನುವ ನಗುಮೊಗದ ರಾಯರನ್ನು ಬೆಂಗಳೂರಿನ ಮೋರ್, ಮಾರ್ಟ್, ಸೂಪರ್ ಮಾರ್ಕೆಟ್ ಗಳಲ್ಲಿ ಕಾಣಲಾಗುವುದುಂಟೆ? ತಾವೇ ಗುದ್ದಿ ಆಕ್ಸಿಡೆಂಟ್ ಮಾಡಿ ಹೋದರೂ ಮತ್ತೆ ಅವರು ಇದ್ದಾರಾ? ಸತ್ತಿದ್ದರಾ? ಎನ್ನುವಷ್ಟು ವ್ಯವಧಾನವಿಲ್ಲದೇ ಓಡಾಡುವ ಬೆಂಗಳೂರಿನ ಬೀದಿಹೋಕರೆಲ್ಲಿ? ಬೈಕು ಕಾರುಗಳ ಶಬ್ದ ಕೇಳಿದೊಡನೆಯೇ ‘ಇದು ಗೋಪುಕಾಕನ ಮನೆಯದೇ’ ಎಂದು ಗುರುತು ಹಿಡಿದು ಹೊರಬಂದು ಮಾತಾಡಿಸುವ ಹಳ್ಳಿಗರೆಲ್ಲಿ?
ಹೋಲಿಕೆ ಮಾಡಿ ಇದು ಅರಿ ಇದು ತಪ್ಪು ಎಂದು ನಿರ್ಣಯಿಸುವ ಅಧಿಕಾರ ನಮಗಿಲ್ಲ ನಿಜ. ಆದರೂ ಅನುಭವಿಸಿದ ಜೀವನಕ್ಕೂ ಅರಿತ ಮೌಲ್ಯಗಳಿಗೂ ಹೊಂದಬೇಕಾದ ಅನುಸಂಧಾನಕ್ಕೂ ಒಂದು ದೊಡ್ಡ ಕಂದಕವನ್ನು ನಿರ್ಮಾಣ ಮಾಡುತ್ತಿರುವ ಈ ಮಹಾನಗರಗಳೆಂಬ ರಾಕ್ಷಸನ ಮುಷ್ಟಿಯಿಂದ ಪಾರಾಗುವುದೆಂತು? ಊರ ಎಲ್ಲರ ಅಂಗೈ ಗೆರೆಯೂ ಪರಿಚಯವಿರುವಷ್ಟು ಅಥವಾ ಅವರಿವರ ಮನೆಯ ಸುದ್ದಿಯಲ್ಲಿಯೇ ಹೊಟ್ಟೆ ತುಂಬಿಸಿಕೊಳ್ಳುವಷ್ಟು ಅತಿ ಪರಿಚಿತತೆ ಬೇಡದಿದ್ದರೂ ನಗೆ ನಕ್ಕು, ನಗಿಸಿ, ಆತ್ಮೀಯ ಭಾವ ಉಣಿಸುವ ಒಂದೆರಡಾದರೂ ಮುಖಗಳು ಈ ಅಪರಿಚಿತ ಊರಿನಲ್ಲಿ ಬೇಕೆನ್ನಿಸುತ್ತದೆ. ಅಪರಿಚಿತರೊಂದಿಗೆ ಬಿಸಿನೆಸ್ ಡೀಲ್ ಗಾಗಿ ಎಷ್ಟು ಘಂಟೆ ಹರಟಿದರೂ ಮನೆಗೆ ಕರೆಮಾಡಿ ಅಮ್ಮನೊಂದಿಗೆ ಒಂದೆರಡು ಮಾತನಾಡಿದಾಗ ಸಿಗುವ ತೃಪ್ತಿ ಇರುವುದೇನು?
Comments
ಉ: ಪರಿಚಿತ ಮೌನ
ನಿಜ, ಇಂದಿನ ಈ ಧಾವಂತದ ಯುಗದಲ್ಲಿ, ಆತ್ಮೀಯತೆಯೇ ಮರೆಯಾಗುತ್ತಿದೆ. ಬೆಂಗಳೂರೆಂಬ ಮಹಾನಗರದಲ್ಲಂತೂ ಇದನ್ನು ನಿರೀಕ್ಷಿಸೋದೇ ಮಹಾತಪ್ಪು. ಅಲ್ಲವೇ?