ಹಳೆಯ ಚಂದಮಾಮದಲ್ಲಿ ಕಳ್ಳರ ಕಥೆ, ನಕ್ಕು ನಕ್ಕು ಸುಸ್ತು!!

ಹಳೆಯ ಚಂದಮಾಮದಲ್ಲಿ ಕಳ್ಳರ ಕಥೆ, ನಕ್ಕು ನಕ್ಕು ಸುಸ್ತು!!

ಒಬ್ಬ ರಾಜ. ಅವನ ರಾಜ್ಯದಲ್ಲಿ ದಿನೇದಿನೇ ಕಳ್ಳರ ಕಾಟ ಹೆಚ್ಚಾಗುತ್ತಿತ್ತು. ರಾಜನು ಮಾರು ವೇಷದಲ್ಲಿ ಒಂದು ಹಳ್ಳಿಗೆ ಹೋದ.

ಅಲ್ಲಿ ಅರಳಿಕಟ್ಟೆಯಲ್ಲಿ ಕೂತ ಹಿರಿಯರೊಂದಿಗೆ ಕೇಳಿದ. 'ನಿಮ್ಮಲ್ಲಿ ಕಳ್ಳತನ ಬಹಳ ಎಂದು ಕೇಳಿದ್ದೇನೆ, ನೀವೆಲ್ಲ ಹೇಗೆ ಬದುಕುತ್ತಿರುವಿರೋ, ಪಾಪ' ಎಂದ. ಅವರು 'ಹಣವಂತರಿಗೆ ಕಳ್ಳರ ಭಯ, ನಮಗೇತರ ಭಯ ? ನಮ್ಮನ್ನು ರಾಜರ ಕಡೆಯವರು ಎಂದೋ ಲೂಟಿ ಮಾಡಿ ಬಿಟ್ಟಿದ್ದಾರೆ' ಎಂದರು!

'ದಿನಾ ಕಳ್ಳತನ ಮಾಡಿದರು ಕಳ್ಳರು ಏಕೆ ಸಿಗುತ್ತಿಲ್ಲ? ' ಎಂಬ ರಾಜನ ಪ್ರಶ್ನೆಗೆ ಅವರು 'ದೊಡ್ಡ ಕಳ್ಳರನ್ನು ರಾಜರ ಕಡೆಯವರು ಕಾಪಾಡುತ್ತಾರೆ, ಸಣ್ಣ ಕಳ್ಳರನ್ನು ಜನಸಾಮಾನ್ಯರು ಕಾಪಾಡುತ್ತಾರೆ' ಎಂದರು!!

'ಆಂ, ಸಣ್ಣ ಕಳ್ಳರನ್ನು ಜನಸಾಮಾನ್ಯರು ಕಾಪಾಡುತ್ತಾರೆಯೇ? ಅದೇಕೆ ?' ಅಂತ ಮಾರುವೇಷದಲ್ಲಿದ್ದ ರಾಜ ಕೇಳಿದರೆ 'ಅವರು ಭಾರಿ ಕಳ್ಳರಂತೆ ನೀತಿಬಾಹಿರರಲ್ಲ, ರುಜುಮಾರ್ಗದವರು, ಸರಳ ಜೀವಿಗಳು' ಎಂದು ಗಂಭೀರವಾಗಿ ಉತ್ತರ ಕೊಟ್ಟರು!!!

ರಾಜನು ಮತ್ತೊಂದು ಹಳ್ಳಿಗೆ ಹೋಗಿ ಏನೂ ಕೆಲಸ ಮಾಡದೆ ಕಾಲ ಕಳೆಯುತ್ತಿರುವನನ್ನು ಸಮೀಪಿಸಿ 'ನಾನು ಒಬ್ಬ ಕಳ್ಳ . ನ್ಯಾಯ ಮಾರ್ಗದಿಂದ ಕಳ್ಳತನ ಮಾಡಿ ಬದುಕಬೇಕೆಂದು ಇದ್ದೇನೆ. ನನಗೆ ಆ ವಿದ್ಯೆಯನ್ನು ಕಲಿಸಿ' ಎಂದು ಕೇಳಿಕೊಂಡ. ಅವನು 'ನೀನು ನೀತಿ ನಿಯಮಗಳನ್ನು ಪಾಲಿಸಿದರೆ ಬಹಳ ಮುಂದಕ್ಕೆ ಬರುತ್ತೀಯ' (!!!!) ಎಂದು ಹೇಳಿ, ಅವನನ್ನು ತನ್ನ ಜೊತೆಗೆ ಸೇರಿಸಿಕೊಂಡ .

'ಸರಿ, ಇವತ್ತು ರಾಜನ ಖಜಾನೆಗೆ ಕನ್ನ ಹಾಕೋಣ' ಎಂದು ಆ ಕಳ್ಳ ಹೇಳಿದ. 'ಅದು ಅಪಾಯಕಾರಿಯಲ್ಲವೇ? ಯಾವುದಾದರೂ ಸಣ್ಣ ಜನರ ಮನೆಯಲ್ಲಿ ಕಳ್ಳತನ ಮಾಡೋಣ' ಎಂದು ಮಾರುವೇಷದ ರಾಜ ಹೇಳಿದರೆ ಆತ 'ನಾವು ಸಣ್ಣ ಕಳ್ಳರು, ಆದ್ದರಿಂದ ಸಿರಿವಂತರನ್ನೇ ದೋಚುವೆವು' ಎಂದ !!!!!( ಅಂದರೆ ಮಹಾ ಕಳ್ಳರು ಬಡವರನ್ನು ದೋಚುವವರು !)

'ಮತ್ತೆ ಈ ಕಳ್ಳತನದಲ್ಲಿ ನಮ್ಮ ನಮ್ಮ ಪಾಲು ಹೇಗೆ? ನೀವು ಕಲಿಸುವವರು, ಗುರುಗಳು, ನಿಮ್ಮ ಹೆಚ್ಚಿನ ಭಾಗ ಹೋಗಬೇಕು' ಅಂತ ಮಾರುವೇಷದ ರಾಜ ಹೇಳಿದರೆ ಆ ಕಳ್ಳ 'ಇಲ್ಲ, ಇಲ್ಲ,
ನಾವು ಸಿಕ್ಕಿಬಿದ್ದಾಗ ಇಬ್ಬರಿಗೂ ಸಮಾನ ಶಿಕ್ಷಣ ವಿಧಿಸುತ್ತಾರೆ. ಆದ್ದರಿಂದ ಇಬ್ಬರಿಗೂ ಸಮಪಾಲು' ಎಂಬ ನೀತಿಯನ್ನು ಕಳ್ಳ ಹೇಳಿದ!

'ನಿಮ್ಮ ಮಾತನ್ನು ನಾನು ನಂಬುವುದು ಹೇಗೆ?' ಅಂತ ಇವನು ಕೇಳಿದಾಗ, ಕಳ್ಳನು 'ನಾನು ಸುಳ್ಳನ್ನು ಗುರುದಕ್ಷಿಣೆಯಾಗಿ ಕೊಟ್ಟು ಬಿಟ್ಟಿದ್ದೇನೆ' ಎಂದುಬಿಟ್ಟ!!

ಅಂತೆಯೆ ಅವರು ರಾಜನ ಖಜಾನೆಗೆ ಕನ್ನ ಹಾಕಿದಾಗ ಅಲ್ಲಿ ಒಂದು ಕಡೆ ಮೂರು ವಜ್ರಗಳು ಸಿಕ್ಕವು ಕಳ್ಳನು 'ನೀನು ಒಂದು ತೆಗೆದುಕೋ, ನಾನು ಒಂದು ತೆಗೆದುಕೊಳ್ಳುತ್ತೇನೆ, ಅವುಗಳನ್ನು ಮಾರಿದರೆ ಬರುವ ಹಣ ನಮ್ಮ ಜೀವನಕ್ಕೆ ಸಾಕು' ಎಂದು ಹೇಳಿದ. ಮೂರನೇ ವಜ್ರವನ್ನು ಅಲ್ಲೇ ಬಿಟ್ಟು ಬಂದರು.

ಮರುದಿನ ಖಜಾನೆಯಲ್ಲಿ ಆದ ಕಳ್ಳತನದ ಪರಿಶೀಲನೆಗೆ ಹೋದ ಮಂತ್ರಿ ಮೂರನೆಯ ವಜ್ರವನ್ನು ತಾನೇ ಎತ್ತಿಟ್ಟುಕೊಂಡು 'ಖಜಾನೆಯಿಂದ ಮೂರು ವಜ್ರಗಳು ಕಳ್ಳತನ ಆಗಿವೆ' ಎಂದು ರಾಜನಿಗೆ ವರದಿ ಮಾಡಿದ!!!

ಮರುದಿನ ರಾಜ ಆಸ್ಥಾನಕ್ಕೆ ಆ ಕಳ್ಳನನ್ನು ಕರೆಸಿ ಕದ್ದ ಮಾಲನ್ನು ಕೊಡುವಂತೆ ಬಲವಂತ ಮಾಡಿದ, ಆ ಕಳ್ಳ ಒಂದು ವಜ್ರವನ್ನು ಕೊಟ್ಟ.

'ಇವನೇ ಉಳಿದ ಎರಡು ವಜ್ರಗಳನ್ನು ಎಲ್ಲೋ ಬಚ್ಚಿಟ್ಟು ಇರಬೇಕು, ಇವನನ್ನು ಗಲ್ಲಿಗೆ ಹಾಕೋಣ' ಅಂತ ಮಂತ್ರಿ ಅವಸರ ಮಾಡಿದ. ( ಯಾಕೆ ? ಗೊತ್ತಾಯಿತು ತಾನೇ ? )

ಆಗ ರಾಜ 'ತಡೆಯಿರಿ, ಅವಸರ ಬೇಡ, ನಾನೊಬ್ಬ ಕಳ್ಳ ನನ್ನು ಪತ್ತೆ ಮಾಡಿದೆ. ಅವನು ಕದ್ದ ವಜ್ರ ಇಲ್ಲಿದೆ' ಎಂದು ತನ್ನ ಜೇಬಿನಿಂದ ಒಂದು ವಜ್ರ ತೆಗೆದುಕೊಟ್ಟನು.

ಆಗ ಮಂತ್ರಿ ಮೂರನೇ ವಜ್ರವನ್ನು ಕದ್ದವನನ್ನು ಪತ್ತೆ ಮಾಡಲು ಒಂದು ತಿಂಗಳ ಕಾಲಾವಕಾಶ ಕೇಳಿದ.
ಆಗ ರಾಜ 'ಅದಕ್ಕೆ ಏಕೆ ತಿಂಗಳು ಬೇಕು? ಅದು ನಿಮ್ಮ ಜೇಬಿನಲ್ಲಿ ಇದೆ, ತೆಗೆಯಿರಿ' ಎಂದು ತೆಗೆಸಿದ.

ಮತ್ತೆ ಕತೆಯ ಕೊನೆ?

ರಾಜನು ಮಂತ್ರಿಯನ್ನು ಗಲ್ಲಿಗೇರಿಸಿ ಆ ಕಳ್ಳನನ್ನು ಮಂತ್ರಿ ಮಾಡಿದ!

ಇದು ಮಕ್ಕಳ ಕಥೆಯೋ, ದೊಡ್ಡವರ ಕಥೆಯೋ , ಅಲ್ಲಲ್ಲ, ದೊಡ್ಡ ದೊಡ್ಡವರ ಕಥೆಯೋ? ನೀವೇ ಹೇಳಿ.

(ಇದು ೧೯೫೫ರ ಚಂದಮಾಮದಲ್ಲಿ ಇದೆ.)

Rating
Average: 5 (1 vote)

Comments

Submitted by makara Thu, 01/24/2019 - 08:33

ಬಡವರನ್ನು ದೋಚುವವರು ಮಹಾಕಳ್ಳರು - ಸರಿಯಾದ ವಿಶ್ಲೇಷಣೆ. ಉತ್ತಮ ಕಥೆಯನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು, ಮಿಶ್ರಿಕೋಟಿಗಳೆ :)