ರೇಡಿಯೋ ಕೇಳಲು ಲೈಸೆನ್ಸ್ ಬೇಕಿತ್ತಾ?
ಮೇಲಿನ ಶೀರ್ಷಿಕೆ ಓದಿದಾಗ ಈಗಿನ ಯುವಕರಿಗೆ ಆಶ್ಚರ್ಯವಾದೀತು. ಆದರೆ ಹಿಂದೆ ೭೦ರ ದಶಕದಲ್ಲಿ ನೀವು ರೇಡಿಯೋ ಬಳಸಬೇಕಾದಲ್ಲಿ ಲೈಸೆನ್ಸ್ ಮಾಡಿಸಕೊಳ್ಳ ಬೇಕಿತ್ತು.
ಇತ್ತೀಚೆಗೆ ಮನೆಯನ್ನು ನವೀಕರಣ ಸಲುವಾಗಿ ಸ್ವಚ್ಛಗೊಳಿಸುತ್ತಿರುವಾಗ ರೇಡಿಯೋ ಲೈಸನ್ಸ್ ಸಿಕ್ಕಿತು. ಇದು ನನ್ನ ಅಮ್ಮನ ಹೆಸರಿನಲ್ಲಿ ೧೯೭೯-೮೦ರ ಸಮಯದ ಲೈಸನ್ಸ್. ಆ ಸಮಯದಲ್ಲಿ ಈಗಿನಂತೆ ಉಚಿತವಾಗಿ ರೇಡಿಯೋ ಕೇಳಲು ಅನುಮತಿಯಿರಲಿಲ್ಲ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಂದ ಲೈಸೆನ್ಸ್ ಪಡೆದುಕೊಳ್ಳ ಬೇಕಿತ್ತು. ಅಂಚೆ ಇಲಾಖೆಯಲ್ಲಿ ಅದಕ್ಕೆ ಬೇಕಾಗುವ ಹಣ ಕೊಟ್ಟು ಅಂಚೆ ಚೀಟಿ ಪಡೆದುಕೊಂಡು ಮೊಹರು ಒತ್ತಿಸಿ ಪ್ರತೀ ವರ್ಷ ಲೈಸೆನ್ಸ್ ನವೀಕರಣ ಮಾಡಿಕೊಳ್ಳ ಬೇಕಾಗುತ್ತಿತ್ತು. ಮೊದಲ ವರ್ಷ ರೂ.೭.೫೦ ಇದ್ದ ಪಾವತಿ ಎರಡನೇ ವರ್ಷಕ್ಕೆ ೧೫ ರೂ ಆಗಿರುವುದನ್ನು ಗಮನಿಸಬಹುದು.
ಲೈಸೆನ್ಸ್ ಇಲ್ಲದವರು ಭಾರೀ ಜಾಗರೂಕತೆಯಿಂದ ತಮ್ಮ ರೇದಿಯೋಗಳನ್ನು ಕಾಪಾಡಿಕೊಳ್ಳುತ್ತಿದ್ದರಂತೆ. ವಿಷಯ ಗೊತ್ತಾದರೆ ಅಂಚೆ ಇಲಾಖೆಯವರು ಅಥವಾ ರೇಡಿಯೋ ಇನ್ಸ್ಪೆಕ್ಟರ್ ರೇಡಿಯೋವನ್ನು ಜಪ್ತಿ ಮಾಡುವ ಅವಕಾಶವಿತ್ತಂತೆ. ೧೯೮೪ರಲ್ಲಿ ರೇಡಿಯೋಗೆ ಲೈಸೆನ್ಸ್ ಪಡೆದು ಕೊಳ್ಳಬೇಕೆಂಬ ಕಾನೂನು ರದ್ದಾಯಿತು.
Comments
ಚಿತ್ರ ನೋಡುತ್ತಿದ್ದಂತೆ ಯಾವುದೋ…
ಚಿತ್ರ ನೋಡುತ್ತಿದ್ದಂತೆ ಯಾವುದೋ ಗತಕಾಲಕ್ಕೆ ಜಾರಿದಂತಾಯ್ತು! ೪೦ ವರ್ಷಗಳಿಂದ ಒಮ್ಮೆಯೂ ನೆನೆದಿರದಿದ್ದ ವಿಷಯ/ಚಿತ್ರವೊಂದು ಧುತ್ತೆಓದು ಎದುರಿಗೆ ಕಾಣಿಸಿಕೊಂಡಾಗ ಆದ ಅನುಭವ???
ಅಂದಹಾಗೆ, ದಕ್ಷಿಣ ಆಫ್ರಿಕದಲ್ಲಿ ಈಗಲೂ ಕೂಡ ಟಿವಿ ಲೈಸೆನ್ಸ್ ಚಾಲ್ತಿಯಲ್ಲಿದೆ. ಅಲ್ಲಿಂದ ವಾಪಸ್ಸು ಬರಬೇಕಾದಾಗ ಇದ್ದ್ ಟಿವಿಯನ್ನು ಯಾರಿಗೋ ದಾನವಾಗಿ ಕೊಟ್ಟು ಬಂದಿದ್ದಾರೂ, ನನ್ನ ಹೆಸರಿನಲ್ಲಿದ್ದ ಲೈಸೆನ್ಸ್ ರದ್ದು ಮಾಡಿಲ್ಲದ್ದಿದ್ದ ಕಾರಣ ಲೈಸೆನ್ಸ್ ಬಾಬ್ತು ಪಾವತಿ ಮಾಡಿಲ್ಲವೆಂದು ೨ - ೩ ವರ್ಷಗಳವರೆಗೂ ನನ್ನ ಈ-ಮೇಲ್ಗೆ ನೋಟೀಸ್ ಬರುತ್ತಲೇ ಇತ್ತು!
೧೯೭೪ ರಲ್ಲಿ ನಾನು ಮುಂಬಯಿನ…
೧೯೭೪ ರಲ್ಲಿ ನಾನು ಮುಂಬಯಿನ ಮಾಟುಂಗಾದಲ್ಲಿದ್ದಾಗ ನನ್ನ ಹೊಸ ಟ್ರಾನ್ಸಿಸ್ಟರ್ ತೆಗೆದುಕೊಂಡು ಪಾಂಚ್ ಗಾರ್ಡನ್ ನಲ್ಲಿ ಕ್ರಿಕೆಟ್ ಕೇಮೆಂಟರಿ ಕೇಳುತ್ತಾ ನಡೆಯುತ್ತಿದ್ದೆ. ನನ್ನ ಪಕ್ಕದಲ್ಲಿ ಬಂದ ರೇಡಿಯೋ ಇನ್ಸ್ಪೆಕ್ಟರ್, 'ಆಪ್ ಕೆ ಪಾಸ್ ಲಸೆನ್ಸ್ ಹೈ ಕ್ಯಾ '?ಎಂದಾಗ ಯಾವ ಲಸೆನ್ಸ್ ಅಂತ ತತ್ತರಿಸಿದೆ. 'ಆಪ್ ಕೊ ಮಾಲುಮ್ ನಹಿ ಹೈ ಕ್ಯಾ' ? ರೇಡಿಯೋ ಲಸೆನ್ಸ್ ಕೆ ಬಿನಾ ರೇಡಿಯೋ ಚಲಾನ ಅಪರಾಧ್ ಹೈ ? ಇದರಬಗ್ಗೆ ಸ್ನೇಹಿತರಹತ್ತಿರ ಕೇಳಿದ್ದೆ ಆದರೆ ಪೂರ್ತಿಯಾಗಿ ತಿಳುವಳಿಕೆ ಇರಲಿಲ. 'ಸಾರಿ' ಎಂದು ಹೇಳಿದಾಗಲೂ ಆ ಅಧಿಕಾರಿಗೆ ಮನಸ್ಸು ಬರದೆ, 'ಚಲೋ ಫೈನ್ ಭರೋ 'ಎಂವವನೇ ಪಾವ್ತಿ ಚೀಟಿ ಬರೆಯಲು ಶುರುಮಾಡಿದ್ದ. ಅಷ್ಟರಲ್ಲೇ ಅಲ್ಲಿ ವಾಕಿಂಗ್ ಮಾಡಲು ಅಗಮಿಸಿದ್ದ ನನ್ನ ಗೆಳೆಯ, ಖಂಡೇ ಪಾರ್ಕರ್ ನನ್ನನ್ನು ಮಾತಾಡಿಸುತ್ತಾ 'ಕ್ಯಾ ಚಲ್ ರಹಾ ಹೈ'? ಅಂದಾಗ ಎಲ್ಲಾ ವಿವರಿಸಬೇಕಾಯಿತು. ಖಂಡೇಪಾರ್ಕರ್ ಮರಾಠಿ ಭಾಷೆಯಲ್ಲಿ 'ಸೋಡೂನ್ ದ್ಯಾ; ನವೀನ್ ಆಹೆ' ಎಂದು ಸಮಝಾಯಿಸಿದಾಗ ಆತ, 'ಚಲೋ ಅಭೀಸೆ ಐಸ ಮತ್ ಕರ್ನಾ ? ರೇಡಿಯೋ ಕೆ ಲಿಯೆ ಲಸೆನ್ಸ್ ಲಗ್ತಾ ಹೈ ಬಾಬಾ'; 'ಆಪ್ ಕೊ ಇಸ್ ಬಾತ್ ಕೈಸೆ ಮಾಲುಮ್ ನಹೀ ಹೈ '? ಎಂದು ಗೊಣಗುಟ್ಟುತ್ತಾ ಹೊರಟುಹೋದರು. ನಾನು ನನ್ನ ಗೆಳೆಯ ಖಂಡೇ ಪಾರ್ಕರ್ ಅವರನ್ನು ಮನಸಾರೆ ವಂದಿಸಿದ್ದೆ.