ನೀವು ಅರಿಯದ ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹಿರಿಯಜ್ಜನ ನೆನಪುಗಳು

ನೀವು ಅರಿಯದ ಶತಾಯುಷಿ, ಸ್ವಾತಂತ್ರ್ಯ ಸೇನಾನಿ ಹಿರಿಯಜ್ಜನ ನೆನಪುಗಳು

ಪಂಡಿತ ಸುಧಾಕರ್ ಚತುರ್ವೇದಿಯವರು ಇನ್ನಿಲ್ಲ ಎಂದು ಎರಡು ದಿನಗಳ ಹಿಂದೆ ದಿನಪತ್ರಿಕೆಯಲ್ಲಿ ಸಣ್ಣ ಸುದ್ದಿಯೊಂದನ್ನು ಗಮನಿಸಿದಾಗ ಅವರ ಸುದೀರ್ಘ ೧೨೩ ವರ್ಷಗಳ ಜೀವನದ ಬಗ್ಗೆ ತಿಳಿಯುವ ಮನಸ್ಸಾಯ್ತು. ಬಹುಷಃ ನಾನು ಮತ್ತು ನನ್ನಂತೆ ಬಹುತೇಕರು ಹುಟ್ಟಿರದ ಕಾಲಘಟ್ಟದಲ್ಲಿ ಜೀವಿಸಿದ (ಜನನ: ಎಪ್ರಿಲ್ ೨೦, ೧೮೯೭) ಈ ಹಿರಿಯ ಶತಾಯುಷಿಯ ಬದುಕೇ ಒಂದು ಸಾಧನೆಯೆಂದರೆ ತಪ್ಪಾಗಲಾರದು. ಇಂದು ಸುಧಾಕರ್ ಚತುರ್ವೇದಿ ಎಂದರೆ ಯಾರಿಗೂ ಪರಿಚಯವಿರಲಾರದು. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯವರ ಅತ್ಯಂತ ನಿಕಟವರ್ತಿಯಾಗಿದ್ದವರು ಇವರು. ಮೂರು ಶತಮಾನಗಳನ್ನು ಅತ್ಯಂತ ಜತನದಿಂದ ಗಮನಿಸಿದ ಹಿರಿಯರು ತಮ್ಮ ಅಂತ್ಯಕಾಲದವರೆಗೂ ಚಟುವಟಿಕೆಯಿಂದ ಬದುಕಿದ್ದರು ಎಂದರೆ ಅಚ್ಚರಿಯೇ ಸರಿ. 
ಇವರ ಬಗ್ಗೆ ಲೇಖಕ ರೋಹಿತ್ ಚಕ್ರತೀರ್ಥರವರು ಗಮನಿಸಿದಂತೆ, ಅವರು ತಮ್ಮ ನೂರಾ ಇಪ್ಪತ್ತಮೂರನೇ ವರ್ಷದ ಸಮಯದಲ್ಲೂ ನೀಟಾಗಿ ಶೇವಿಂಗ್ ಮಾಡಿಕೊಳ್ಳುತ್ತಿದ್ದರಂತೆ. ಇಂತಹ ಹಿರಿಯ ಜೀವ ನಮ್ಮ ಜೊತೆ ಈಗಿಲ್ಲ. ಆದರೆ ಅವರ ಸಾಧನೆಯ ಸ್ವಲ್ಪ ವಿಷಯಗಳನ್ನು ನೆನಪು ಮಾಡಿಕೊಳ್ಳೋಣ.
ಬಾಲ್ಯ, ವಿದ್ಯಾಭ್ಯಾಸ: ರಾಮನವಮಿಯ ಶುಭ ದಿನದಂದು ಜನ್ಮತಾಳಿದ ಸುಧಾಕರ್ ಇವರ ಹಿರಿಯರು ನೆಲೆಸಿದ ಊರು ತುಮಕೂರಿನ ಕ್ಯಾತಸಂದ್ರವಾದರೂ ಇವರ ಹುಟ್ಟು ಮಾತ್ರ ಬೆಂಗಳೂರಿನಲ್ಲಾಯಿತು. ತಂದೆ ಕೃಷ್ಣ ರಾಯರು ಹಾಗೂ ತಾಯಿ ಲಕ್ಷ್ಮಮ್ಮ. ಬಾಲ್ಯದಿಂದಲೂ ಚೂಟಿಯಾಗಿದ್ದ ಬಾಲಕನ ಪ್ರತಿಭೆಯನ್ನು ಗುರುತಿಸಿದ ಹಿರಿಯರು ಇವರನ್ನು ಹದಿಮೂರರ ಹರೆಯದಲ್ಲೇ ಹರಿದ್ವಾರಕ್ಕೆ. ಅಲ್ಲಿಯ ಪ್ರಖ್ಯಾತ ಕಾಂಗಡಿ ಗುರುಕುಲದಲ್ಲಿ ಸ್ವಾಮೀ ಶೃದ್ಧಾನಂದರ ಶಿಷ್ಯರಾಗಿ ಸುಮಾರು ಹತ್ತು ವರ್ಷಗಳ ಕಾಲ ವೇದದಲ್ಲಿ ಪರಿಣತಿಯನ್ನು ಪಡೆದರು. ಇವರ ಚತುರ್ವೇದಿ ಎಂದ ಅಡ್ಡ ಹೆಸರು ಬಂದದ್ದು ಹಿರಿಯರಿಂದಲ್ಲ. ನಾಲ್ಕು ವೇದಗಳನ್ನು ಅಧ್ಯಯನ ಮಾಡಿ ಇವರು ಗಳಿಸಿಕೊಂಡ ಪದವಿ ಅದು. (ಲಾಲ್ ಬಹಾದ್ದೂರ್ ಅವರಿಗೆ ಶಾಸ್ತ್ರಿ ಪದವಿ ದೊರೆತಂತೆ). 
ಸ್ವಾತಂತ್ರ್ಯ ಹೋರಾಟ: ಬಾಲ್ಯದಿಂದಲೂ ದೇಶಭಕ್ತರಾಗಿದ್ದ ಇವರು ತಮ್ಮನ್ನು ತಾವು ಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡದ್ದು ಭೀಕರ ಜಲಿಯಾನ್‌ವಾಲಾಭಾಗ್ ಹತ್ಯಾಕಾಂಡದ ನಂತರ. ಸುಧಾಕರ್ ತಮ್ಮ ಗುರು ಶೃದ್ಧಾನಂದರೊಂದಿಗಿದ್ದ ಸಮಯವದು. ಆಗಿನ್ನೂ ಸುಮಾರು ೨೫ರ ಹರಯ. ಬ್ರಿಟೀಷ್ ಜನರಲ್ ಡಯರ್‌ನ ಮೂರ್ಖತನದ ಪರಮಾವಧಿಗೆ ಬಲಿಯಾದವರು ಸಾವಿರಾರು ಮಂದಿ. ಈ ಘಟನೆ ಸುಧಾಕರ್ ಇವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. ಆ ಘಟನೆಯ ನಂತರ ಆ ಸ್ಥಳಕ್ಕೆ ಭೇಟಿ ನೀಡಿದ ಗಾಂಧೀಜಿಯವರು ಸುಧಾಕರ್‌ರವರನ್ನು ಗಮನಿಸಿ, ಇವರಿಗೆ ವೇದ ಮಂತ್ರಗಳ ಅರಿವಿದೆ ಎಂದು ತಿಳಿದುಕೊಂಡು ಅವರಿಂದಲೇ ಸಾವಿರಾರು ಶವಗಳಿಗೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆಯನ್ನು ಮಾಡಿಸಿದರು. ಇದರಿಂದ ಗಾಂಧೀಜಿಯವರ ಅತ್ಯಂತ ನಿಕಟವರ್ತಿಯಾದರು. ಗಾಂಧೀಜಿಯವರು ಬ್ರಿಟೀಷ್ ಅಧಿಕಾರಿಗಳಿಗೆ ಬರೆದ ಪತ್ರವನ್ನು ತಲುಪಿಸುವ ಕೆಲಸವನ್ನು ಅತ್ಯಂತ ನಿಷ್ಟೆಯಿಂದ ಮಾಡಿದರು. 
ಭಗತ್ ಸಿಂಗ್, ಮದನ್‌ಲಾಲ್ ಧಿಂಗ್ರಾ ಮುಂತಾದ ಹಲವಾರು ಮಂದಿ ಇವರ ಶಿಷ್ಯರಾಗಿದ್ದರು. ಲಾಹೋರ್ ವಿಶ್ವವಿದ್ಯಾನಿಲಯದಲ್ಲಿ ಕೆಲಕಾಲ ಸಂಸ್ಕೃತ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇವರಿಗೆ ಭರ್ತಿ ೫೦ ವರ್ಷ. ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟಗಳಿಂದ ಮದುವೆಯಾಗಲು ಸಮಯ ಸಿಗಲಿಲ್ಲ. ಸಮಯ ಸಿಕ್ಕಾಗ ಮದುವೆಯ ವಯಸ್ಸೇ ದಾಟಿ ಹೋಗಿತ್ತು. ಆದುದರಿಂದ ಸುಧಾಕರ್ ಚತುರ್ವೇದಿಯವರು ತಮ್ಮ ಕೊನೆಕಾಲದವರೆಗೂ ಅವಿವಾಹಿತರಾಗಿಯೇ ಉಳಿದರು.
ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ೫೦ಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ವೇದ ತರಂಗ ಹಾಗೂ ವೇದ ಪ್ರಕಾಶ ಎಂಬ ಪತ್ರಿಕೆಗಳಲ್ಲಿ ಕೆಲ ಕಾಲ ಸೇವೆ ಸಲ್ಲಿಸಿಯೂ ಇದ್ದರು. ಜಾತಿ ಮತ ಬೇಧವಿಲ್ಲದೇ ಬದುಕಬೇಕೆಂಬುದು ಇವರ ಧ್ಯೇಯವಾಗಿತ್ತು ಮತ್ತು ಸಾಯುವವರೆಗೂ ಅದನ್ನೇ ಪಾಲಿಸಿದರು. ಪರಿಶಿಷ್ಟ ಜಾತಿಯವರ ಮಕ್ಕಳನ್ನೇ ದತ್ತು ತೆಗೆದುಕೊಂಡು ಓದಿಸಿ ಸಮಾಜದ ಮುಖ್ಯವಾಣಿಗೆ ಕರೆ ತಂದರು. ಇವರು ಕಲಿಸಿದ ಮಕ್ಕಳು ಈಗ ಐಎಎಸ್ ಆಫೀಸರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ದೊಡ್ದ ಗುರುಕುಲ ಅಥವಾ ಮಠ ಮಾಡುವ ಕೆಲಸವನ್ನು ಯಾವುದೇ ಸ್ವಾರ್ಥವಿಲ್ಲದೇ, ಪ್ರಚಾರವಿಲ್ಲದೇ ಪಂಡಿತಜೀಯವರು ಮಾಡಿದರು. 
ತಮ್ಮ ಕೊನೆಕಾಲದವರೆಗೆ ಹಿತಮಿತವಾದ ಮಾತು ಮತ್ತು ಆಹಾರ, ರಾಜಕೀಯದಿಂದ, ಪ್ರಚಾರದಿಂದ ದೂರವೇ ಉಳಿದರು. 
ಅತ್ಯಂತ ಲವಲವಿಕೆಯ ಸಾರ್ಥಕ ೧೨೩ ವರ್ಷಗಳ ಜೀವನ ನಡೆಸಿದ ಸುಧಾಕರ್ ಚತುರ್ವೇದಿಯವರದ್ದು ನಾವು ಯಾರೂ ಮರೆಯಬಾರದ ಜೀವನ. ಈಗಿನ ಕಾಲಘಟ್ಟದಲ್ಲಿ ಜೀವಿಸುವವರಿಗೆ ಇವರಂಥಾ ವ್ಯಕ್ತಿಗಳು ನಮ್ಮ ನಡುವೆ ಇದ್ದರು ಎಂದರೆ ನಂಬಿಕೆಯೇ ಬರಲಾರದು.  ದೇಶಪ್ರೇಮದ ಹೋರಾಟಕ್ಕೆ ಪಿಂಚಣಿ ಯಾಕೆ? ಎಂದು ತಮಗೆ ಬರಲಿದ್ದ ಪಿಂಚಣಿಯನ್ನು ನಿರಾಕರಿಸಿದ ಪಂಡಿತ್ ಸುಧಾಕರ್ ಚತುರ್ವೇದಿಯವರು ನಿಜ ಅರ್ಥದಲ್ಲಿ ಅಪ್ಪಟ ಭಾರತಮಾತೆಯ ಸುಪುತ್ರ.
ಚಿತ್ರ ಕೃಪೆ: ಅಂತರ್ಜಾಲ 
 

Comments

Submitted by venkatesh Wed, 03/04/2020 - 07:09

ಮಾನ್ಯರೇ, ನೀವು ಅರಿಯದ  ಎನ್ನುವುದಕ್ಕಿಂತ ನಮ್ಮಲ್ಲಿ ಇನ್ನೂ ಹಲವಾರು ಮಂದಿ ಅರಿಯದ ಅಂತ ಹಾಕಬಹುದಿತ್ತು. ಲೇಖನ ಚೆನ್ನಾಗಿದೆ. ನೀವು ಹೇಳಬೇಕೆನ್ನುವ ವಿಷಯ ನಿಜಕ್ಕೂ ಎಲ್ಲರಿಗೂ ತಿಳಿದಿರಬಹುದಾದ ಸಾಧ್ಯತೆಯನ್ನು ಹೇಗೆ ಅಲ್ಲಗಳೆಯುತ್ತೀರಿ ?