ವಾರಕ್ಕೆ ೧೨ ಲಕ್ಷ ಅಡಿಕೆಹಾಳೆ ತಟ್ಟೆ ರಫ್ತಿನ ಯಶೋಗಾಥೆ

ವಾರಕ್ಕೆ ೧೨ ಲಕ್ಷ ಅಡಿಕೆಹಾಳೆ ತಟ್ಟೆ ರಫ್ತಿನ ಯಶೋಗಾಥೆ

ಅದೊಂದು ಬೃಹತ್ ಕಟ್ಟಡ. ಫುಟ್‍ಬಾಲ್ ಅಂಗಣದಂತಹ ನಾಲ್ಕು ಮಹಡಿಗಳು. ಎಲ್ಲಿಕಂಡರಲ್ಲಿ ಮೂಟೆಮೂಟೆ ಅಡಿಕೆಹಾಳೆ ತಟ್ಟೆಗಳು. ಅಲ್ಲಿರುವ ಕೆಲಸಗಾರರು ಸುಮಾರು ೫೦೦ ಹಾಗೂ ಯಂತ್ರಗಳು ನೂರಾರು.
ಇದು “ಇಕೊ ಬ್ಲಿಸ್” ಅಡಿಕೆಹಾಳೆ ತಟ್ಟೆ ಕಾರ್ಖಾನೆಯ ಒಂದು ನೋಟ. ಅದರ ಮೆನೇಜಿಂಗ್ ಡೈರೆಕ್ಟರ್ ಬಲಿಪಗುಳಿ ರಾಜಾರಾಮ್ ಸಿ.ಜಿ. ಇತ್ತೀಚೆಗೆ ನಮಗೆ ಕಾರ್ಖಾನೆಯನ್ನು ತೋರಿಸುತ್ತಾ, “ನಾವೀಗ ವಾರಕ್ಕೆ ಎರಡು-ಮೂರು ಕನ್‍ಟೈನರುಗಳಲ್ಲಿ ೨೨ ನಮೂನೆಯ ಅಡಿಕೆಹಾಳೆ ತಟ್ಟೆಗಳನ್ನು ರಫ್ತು ಮಾಡುತ್ತೇವೆ. ಒಂದೊಂದು ಕನ್‍ಟೈನರಿನಲ್ಲಿರುತ್ತವೆ ಮೂರರಿಂದ ನಾಲ್ಕು ಲಕ್ಷ  ಅಡಿಕೆಹಾಳೆ ತಟ್ಟೆಗಳು” ಎಂದಾಗ ಕೋಟಿಗಟ್ಟಲೆ ರೂಪಾಯಿ ವಾರ್ಷಿಕ ವಹಿವಾಟಿನ ಆ ಉದ್ದಿಮೆಯ ಇನ್ನೊಂದು ನೋಟ ದಕ್ಕಿತು.
“ಇಲ್ಲಿ ೫೦೦ ಕೆಲಸಗಾರರು ದುಡಿಯುತ್ತಿದ್ದಾರೆ. ಇದಲ್ಲದೆ, ಸುಮಾರು ೧,೫೦೦ ಫ್ರಾಂಚೈಸಿ ಕೊಟ್ಟಿದ್ದೇವೆ. ಆ ಪ್ರತಿಯೊಂದು ಘಟಕದಲ್ಲಿ ದುಡಿಯುತ್ತಿರುವವರು ಸರಾಸರಿ ಐದು ಜನರು. ಒಟ್ಟಾರೆಯಾಗಿ ನಮ್ಮ ಉದ್ದಿಮೆಯಿಂದ ೭,೦೦೦ಕ್ಕಿಂತ ಜಾಸ್ತಿ ಜನರಿಗೆ ಉದ್ಯೋಗ ಸಿಕ್ಕಿದೆ” ಎಂದು ರಾಜಾರಾಮ್ ಮಾಹಿತಿ ನೀಡಿದಾಗ, ಆ ಉದ್ದಿಮೆಯ ಮತ್ತೊಂದು ನೋಟ ಕಾಣಿಸಿತು.
ಕೃಷಿಕ ಮನೆತನದವರಾದ ರಾಜಾರಾಮ್ ಇಂಜಿನಿಯರಿಂಗ್ ಶಿಕ್ಷಣದ ನಂತರ “ಸ್ವಂತ ಉದ್ದಿಮೆ” ಆರಂಭಿಸುವ ಕನಸಿನಲ್ಲಿ ಮುಳುಗಿದರು. ಅಂತೂ ೧೯೯೪ರಲ್ಲಿ ಅಡಿಕೆಹಾಳೆಯಿಂದ ತಟ್ಟೆಗಳನ್ನು ತಯಾರಿಸುವ ಯಂತ್ರವೊಂದನ್ನು ರೂಪಿಸಿದರು. ಮೊದಲ ಮೂರು ತಿಂಗಳಿನಲ್ಲಿ ಅವರು ಉತ್ಪಾದಿಸಿದ್ದು ೧೦,೦೦೦ ತಟ್ಟೆಗಳನ್ನು. ಕ್ರಮೇಣ ಉತ್ಪಾದನೆ ಹೆಚ್ಚಿಸುತ್ತಾ ಈಗ ಇದನ್ನು ಭಾರತದಲ್ಲಿ ಅತ್ಯಧಿಕ ಅಡಿಕೆಹಾಳೆ ತಟ್ಟೆ ಉತ್ಪಾದಿಸುವ ಉದ್ಯಮವಾಗಿ ಬೆಳೆಸಿದ್ದಾರೆ.
ತನ್ನೂರಿನ ಸುತ್ತಮುತ್ತಲಿನ ಹಳ್ಳಿಗಳ ತೋಟಗಳಿಂದ ಅಡಿಕೆಹಾಳೆ ಸಂಗ್ರಹಿಸುತ್ತಿದ್ದ ರಾಜಾರಾಮ್ ಅವರಿಗೆ ಅದು ಏನೇನೂ ಸಾಲದೆಂದು ಆರಂಭದಲ್ಲಿಯೇ ಗೊತ್ತಾಯಿತು. ಹಾಗಾಗಿ ದೂರದ ಊರುಗಳಿಂದಲೂ ಅಡಿಕೆಹಾಳೆ ಖರೀದಿಸಿದರು. ಇದೀಗ ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಿಂದಲೂ ಅಡಿಕೆಹಾಳೆ ಖರೀದಿಸುತ್ತಿದ್ದಾರೆ. ಕೆಲವೇ ವರುಷಗಳಲ್ಲಿ, ಲಾರಿಯಲ್ಲಿ ಅಡಿಕೆಹಾಳೆ ತರಿಸುವುದು ದುಬಾರಿ ಎಂದು ಅವರಿಗೆ ಸ್ಪಷ್ಟವಾಯಿತು. ಒಂದು ಲಾರಿಲೋಡ್ ಅಂದರೆ ೧೫,೦೦೦ – ೨೦,೦೦೦ ಅಡಿಕೆಹಾಳೆ. ಇದನ್ನು ದೂರದ ಊರುಗಳಿಂದ ತರಿಸುವ ಬದಲಾಗಿ, ಅಲ್ಲೇ ಅಡಿಕೆಹಾಳೆ ತಟ್ಟೆ ಉತ್ಪಾದಿಸುವ ಘಟಕ ಆರಂಭಿಸಿದರೆ, ವರುಷಕ್ಕೆ ೭ ಲಕ್ಷ – ೮ ಲಕ್ಷ ತಟ್ಟೆಗಳನ್ನು ಅಲ್ಲೇ ಉತ್ಪಾದಿಸಬಹುದೆಂಬುದು ಅವರ ಲೆಕ್ಕಾಚಾರ. ಹಾಗಾಗಿ, ಆಸಕ್ತರಿಗೆ ಅಡಿಕೆಹಾಳೆ ತಟ್ಟೆ ತಯಾರಿಸುವ ಯಂತ್ರಗಳನ್ನು ಒದಗಿಸಿ, ಅವರು ಉತ್ಪಾದಿಸಿದ ತಟ್ಟೆಗಳನ್ನು ಖರೀದಿಸಲು ಶುರು ಮಾಡಿದರು. ಮಾನವಶಕ್ತಿಯಿಂದ ಅಡಿಕೆಹಾಳೆ ತಟ್ಟೆ ತಯಾರಿಸುವ ಯಂತ್ರದ ಬೆಲೆ ರೂ.೧೮,೦೦೦. ಇದರ ಜೊತೆಗೆ ಹಾಳೆ ಬಿಸಿ ಮಾಡಲಿಕ್ಕಾಗಿ ಅಡುಗೆಅನಿಲ ವ್ಯವಸ್ಥೆ ಮಾಡಿ ಘಟಕ ಆರಂಭಿಸಬಹುದು.
ಅಡಿಕೆಹಾಳೆ ತಟ್ಟೆಯ ಗುಣಮಟ್ಟ ಕಾಯ್ದುಕೊಂಡ ಕಾರಣವೇ ಇಕೊ ಬ್ಲಿಸ್ ಕಾರ್ಖಾನೆಯ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಗಳಿಸಲು ಸಾಧ್ಯವಾಗಿದೆ. ಅಡಿಕೆಹಾಳೆಯನ್ನು ಪೈಪಿನಿಂದ ರಭಸವಾಗಿ ನುಗ್ಗಿ ಬರುವ ನೀರಿನಿಂದ ತೊಳೆಯುವುದು ಮೊದಲ ಹಂತ. ಅನಂತರ ಅವನ್ನು ತುಂಡರಿಸಿ, ತುಂಡುಗಳನ್ನು ಒಂದೊಂದಾಗಿ ಯಂತ್ರಗಳ ಅಚ್ಚಿನಲ್ಲಿಟ್ಟು ಶಾಖ ನೀಡಿ ಒತ್ತುವುದು ಎರಡನೇ ಹಂತ. ಆಗ ವಿವಿಧ ವಿನ್ಯಾಸಗಳ ತಟ್ಟೆಗಳ ಅಚ್ಚು ಹಾಳೆಗಳಲ್ಲಿ ಮೂಡುತ್ತದೆ. ತದನಂತರ ಆ ತುಂಡುಗಳ ಅಂಚುಗಳನ್ನು ಕತ್ತರಿಸಿ, ಅವಕ್ಕೆ ಸೂಕ್ತ ವಿನ್ಯಾಸ ನೀಡುವ ಕೆಲಸ. ಬಳಿಕ ಆ ತಟ್ಟೆಗಳನ್ನು ಶುಚಿಮಾಡಿ, ಬೂಸ್ಟ್ ತಗಲದಂತೆ ಅತಿನೇರಳೆ ಕಿರಣಗಳಿಂದ ಕ್ರಿಮಿಶುದ್ಧೀಕರಣ ಮಾಡಲಾಗುತ್ತದೆ. ಕೊನೆಯ ಹಂತದಲ್ಲಿ, ತಟ್ಟೆಗಳನ್ನು ಕ್ಲಿಂಗ್-ಪ್ಲಾಸ್ಟಿಕ್ ಹಾಳೆಯಿಂದ ಸುತ್ತಿ, ರಟ್ಟಿನ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿದಾಗ ಅವು ಮಾರಾಟಕ್ಕೆ ತಯಾರು. ತಟ್ಟೆಗಳನ್ನು ಗ್ರೇಡಿಂಗ್ ಮಾಡಿ, ಅತ್ಯುತ್ತಮ ಗುಣಮಟ್ಟದವನ್ನು ರಫ್ತು ಮಾಡಿ, ಉಳಿದವನ್ನು ಭಾರತದಲ್ಲೇ ಮಾರಲಾಗುತ್ತದೆ.
“ಹಲವು ಉದ್ದಿಮೆಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ನಿಮಗೆ ಆ ಸಮಸ್ಯೆ ಇದೆಯೇ?” ಎಂದು ಕೇಳಿದಾಗ ರಾಜಾರಾಮರ ಉತ್ತರ: “ಇಲ್ಲ. ಯಾಕೆಂದರೆ, ನಾವು ಕಾರ್ಮಿಕರಿಗೆ ಹಲವು ಸವಲತ್ತು ನೀಡಿದ್ದೇವೆ. ಪ್ರಾವಿಡೆಂಟ್ ಫಂಡ್ ಒದಗಿಸಿದ್ದು, ವಾರ್ಷಿಕ ಬೋನಸ್ ಪಾವತಿಸುತ್ತೇವೆ. ಜೊತೆಗೆ ಸುತ್ತಲಿನ ಹಳ್ಳಿಗಳಿಂದ ಕೆಲಸಕ್ಕೆ ಬರುವವರಿಗೆ ನಮ್ಮದೇ ವಾಹನದ ವ್ಯವಸ್ಥೆಯಿದೆ; ಉಳಿದವರಿಗೆ ಇಲ್ಲೇ ವಸತಿ ಸೌಕರ್ಯವಿದೆ. ಮಧ್ಯಾಹ್ನದ ಊಟವನ್ನೂ ನೀಡುತ್ತೇವೆ. ಮುಖ್ಯವಾಗಿ, ಈ ಉದ್ದಿಮೆಯಲ್ಲಿ ಅವರ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿಲ್ಲ”
ಅಡಿಕೆ ಬೆಳೆಗಾರರಿಗಂತೂ ಈ ಉದ್ದಿಮೆಯಿಂದ ಬಹಳ ಪ್ರಯೋಜನವಾಗಿದೆ. ಮುಂಚೆ ಕಸವೆಂದು ಎಲ್ಲೆಂದರಲ್ಲಿ ಎಸೆಯುತ್ತಿದ್ದ ಅಡಿಕೆಹಾಳೆಗಳನ್ನು ಅವರೀಗ ಜೋಪಾನವಾಗಿ ತೆಗೆದಿಡುತ್ತಾರೆ. ಯಾಕೆಂದರೆ ಇಕೊ ಬ್ಲಿಸ್ ಉದ್ದಿಮೆ ಅಡಿಕೆಹಾಳೆಯನ್ನು ಸುಮಾರು ರೂ.೧.೫೦ ದರದಲ್ಲಿ ಖರೀದಿಸುತ್ತಿದೆ. ೧,೦೦೦ ಹಾಳೆ ಮಾರಿದರೆ ರೈತರಿಗೆ ಕನಿಷ್ಠ ರೂ.೧,೫೦೦ ಆದಾಯ!
ಇಕೊ ಬ್ಲಿಸ್ ಈಗಾಗಲೇ ಕೇಂದ್ರ ಸರಕಾರದಿಂದ ಎರಡು ಪ್ರಶಸ್ತಿ ಗಳಿಸಿದೆ. ಇದನ್ನು ಈಗಿನ ಹಂತಕ್ಕೆ ವಿಸ್ತರಿಸುವುದರಲ್ಲಿ ತನ್ನ ಪತ್ನಿ ರೇಷ್ಮ ಹಾಗೂ ಸೋದರರ ಬೆಂಬಲವನ್ನು ಸ್ಮರಿಸುತ್ತಾರೆ ರಾಜಾರಾಮ್. ಇದು ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾದ ಉದ್ದಿಮೆಗೊಂದು ಮಾದರಿ. ದಕ್ಷಿಣಕನ್ನಡದ ಬಂಟ್ವಾಳ ತಾಲೂಕಿನ ಕೊಡಪದವಿನ ಕೊಡುಂಗೈಯಲ್ಲಿರುವ ಇಕೊ ಬ್ಲಿಸ್ ಕಾರ್ಖಾನೆಗೆ ಮಂಗಳೂರಿನಿಂದ ವಾಹನದಲ್ಲಿ ಒಂದು ಗಂಟೆ ಪ್ರಯಾಣ. ಪ್ಲಾಸ್ಟಿಕ್ ನಿಷೇಧದ ಈಗಿನ ಕಾಲಘಟ್ಟದಲ್ಲಿ ಇಕೊ ಬ್ಲಿಸ್‍ನ ಪರಿಸರಸ್ನೇಹಿ ಉತ್ಪನ್ನಗಳು ಸದ್ದಿಲ್ಲದೆ ಸುದ್ದಿ ಮಾಡಿವೆ!
ಫೋಟೋ ೧: ಇಕೋ ಬ್ಲಿಸ್ ಉದ್ದಿಮೆಯ ಎಂ.ಡಿ. ಬಲಿಪಗುಳಿ ರಾಜಾರಾಮ್ ಅವರೊಡನೆ ಸಂವಾದ
ಫೋಟೋ ೨: ಇಕೋ ಬ್ಲಿಸ್ ಬೃಹತ್ ಫ್ಯಾಕ್ಟರಿ
ಫೋಟೋ ೩: ಅಡಿಕೆಹಾಳೆ ತಟ್ಟೆಗಳ ತಯಾರಿ 

Comments

Submitted by Ashwin Rao K P Thu, 08/06/2020 - 08:15

ವಾರಕ್ಕೆ ಹನ್ನೆರಡು ಲಕ್ಷ ಅಡಿಕೆಹಾಳೆ ತಟ್ಟೆಯನ್ನು ರಫ್ತು ಮಾಡುವುದೆಂದರೆ ಸಾಧಾರಣ ಮಾತಲ್ಲ. ಇಕೋ ಬ್ಲಿಸ್ ಉದ್ದಿಮೆಯು ಅಡಿಕೆ ಬೆಳೆಗಾರರಿಗೊಂದು ವರವಾಗಿದೆ. ಕಸವಾಗಿ ಒಲೆ ಸೇರಿ ಉರಿದು ಬೂದಿಯಾಗುತ್ತಿದ್ದ ಅಡಿಕೆ ಹಾಳೆಗಳು ತಟ್ಟೆಯಾಗಿ ಊಟೋಪಚಾರಕ್ಕೆ ಬಳಕೆಯಾಗುತ್ತಿರುವುದು ಉತ್ತಮ ಬೆಳವಣಿಗೆ. ಅಡಿಕೆ ಬೆಳೆಗಾರರಿಗೆ ಸ್ವಲ್ಪ ಆದಾಯವೂ ದೊರೆತಂತೆ ಆಗುತ್ತದೆ. ಉತ್ತಮ ಮಾಹಿತಿ ಪೂರ್ಣ ಲೇಖನ.