ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ

ಡಿಸೆಂಬರ್ ೭ : ಎರಡು ವಿಶೇಷತೆಗಳ ದಿನ

ಮೊನ್ನೆ ತಾನೇ ಡಿಸೆಂಬರ್ ೭ ಕಳೆದು ಹೋಯಿತು. ಆಯಾ ದಿನದ ವಿಶೇಷತೆಗಳನ್ನು ಗುರುತಿಸುವವರು ಆ ದಿನದ ಎರಡು ಮಾಹಿತಿಗಳನ್ನು ಗಮನಿಸಿರಬಹುದು. ದಿನ ವಿಶೇಷದ ಬಗ್ಗೆ ತಿಳಿಯದವರಿಗಾಗಿ ಚುಟುಕಾದ ಮಾಹಿತಿ ಇಲ್ಲಿ ನೀಡ ಬಯಸುವೆ. ಡಿಸೆಂಬರ್ ೭ನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ (International Civil Aviation Day) ಹಾಗೂ ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ (The Armed Forces Flag Day) ಎಂದು ಆಚರಿಸಲಾಗುತ್ತದೆ. 

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ : ಬಹಳ ಹಿಂದೆ, ಆಗಿನ್ನೂ ವಿಮಾನಗಳು ಆಗಸದಲ್ಲಿ ಹಾರಾಡುತ್ತಿರಲಿಲ್ಲ. ಆ ಸಮಯ ಮಾನವನಿಗೊಂದು ಕನಸಿತ್ತು. ನಾನೂ ಯಾಕೆ ಹಕ್ಕಿಯಂತೆ ಆಕಾಶದಲ್ಲಿ ಹಾರಾಡಬಾರದು ಎಂದು. ನಂತರದ ದಿನಗಳಲ್ಲಿ ಅದು ವಿಮಾನ, ಹೆಲಿಕಾಪ್ಟರ್ ಮೊದಲಾದುವುಗಳ ಹಾರಾಟದ ಮೂಲಕ ಆ ಕನಸು ನನಸಾಯಿತು. ಈಗಂತೂ ವಿಮಾನ ಸೇವೆಯಿಲ್ಲದ ದಿನಗಳನ್ನು ಕಲ್ಪಿಸಲೂ ಅಸಾಧ್ಯ. ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನಾಗರಿಕ ವಿಮಾನಯಾನ ಸೇವೆಯು ಬಹು ಅಗತ್ಯ. 

೧೯೪೪ರ ಡಿಸೆಂಬರ್ ೭ರಂದು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) ನ್ನು ಸ್ಥಾಪಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಮತ್ತು ಏಕರೂಪತೆಯನ್ನು ಭದ್ರ ಪಡಿಸುವ ಸಲುವಾಗಿ ಈ ಸಂಸ್ಥೆಯನ್ನು ಮಾಡಲಾಯಿತು. ಈ ಸಂಸ್ಥೆಯು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಒಪ್ಪಂದಕ್ಕೆ ಸಹಿ ಹಾಕಿ ೫೦ ವರ್ಷಗಳು ತುಂಬಿದ ಸವಿನೆನಪಿಗಾಗಿ ನಾಗರಿಕ ವಿಮಾನಯಾನ ದಿನವನ್ನು ಆಚರಿಸುತ್ತದೆ. ೧೯೯೬ರಲ್ಲಿ ವಿಶ್ವ ಸಂಸ್ಥೆಯೂ ಡಿಸೆಂಬರ್ ೭ನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ ಎಂದು ಅಧಿಕೃತವಾಗಿ ಫೋಷಿಸಿತು. ನಾಗರಿಕ ವಿಮಾನಯಾನ ಸೇವೆಯು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಲು ಒಂದು ಸಂಪರ್ಕ ಕೊಂಡಿ. ಈ ಸೇವೆಯ ಮೂಲಕ ನಾವು ಅತೀ ಕಡಿಮೆ ಸಮಯದಲ್ಲಿ ಒಂದೆಡೆಯಿಂದ ಮತ್ತೊಂದು ಕಡೆ ಪ್ರಯಾಣ ಸಾಧ್ಯ. 

ವಿಮಾನಯಾನ ಸೇವೆಯು ಈಗ ಬಹಳಷ್ಟು ಸುರಕ್ಷಿತವಾಗಿದೆ. ಸರಕಾರೀ ವಿಮಾನಯಾನವಲ್ಲದೇ, ಖಾಸಗಿ ವಿಮಾನ ಯಾನ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿವೆ. ಭವಿಷ್ಯದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ನಾಗರಿಕರಿಗೆ ಇನ್ನಷ್ಟು ಭದ್ರತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದೆಂಬ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸುತ್ತಾರೆ.

ಜನರಲ್ಲಿ ಈ ದಿನದ ಬಗ್ಗೆ ಅರಿವು ಮೂಡಿಸಲು ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಸರಣಿ ಉಪನ್ಯಾಸಗಳು, ವಿಚಾರ ಗೋಷ್ಟಿಗಳು ಎಲ್ಲವನ್ನೂ ನಾಗರಿಕ ವಾಯುಯಾನದ ಮಹತ್ವವನ್ನು ಜನರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಾರೆ. ಈ ವರ್ಷ ೨೦೨೦ರಿಂದ ೨೦೨೨ರವರೆಗೆ ‘ಜಾಗತಿಕ ವಿಮಾನಯಾನ ಬೆಳವಣಿಗೆಗಾಗಿ ಸುಧಾರಿತ ಆವಿಷ್ಕಾರಗಳು' ಎಂಬ ಮೂಲಮಂತ್ರದೊಂದಿಗೆ ಕಾರ್ಯನಿರ್ವಹಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ. 

ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ: ಭಾರತ ದೇಶದಲ್ಲಿ ನಾವು ಸೈನಿಕರಿಗೆ ಬಹಳಷ್ಟು ಗೌರವ ನೀಡುತ್ತೇವೆ. ಸರಕಾರಗಳೂ ಸೈನಿಕರ ಜೀವನ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹದ ಸದುದ್ದೇಶಕ್ಕಾಗಿ ೧೯೪೯ರಿಂದಲೂ ಡಿಸೆಂಬರ್ ೭ನ್ನು ದೇಶದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ. ದೇಶ ರಕ್ಷಣೆಗಾಗಿ ಪ್ರಕ್ಷುಬ್ಧ ಪರಿಸ್ಥಿತಿಯಲ್ಲೂ, ತನ್ನ ಜೀವದ ಹಂಗು ತೊರೆದು ಕಾಯುವ ಸೈನಿಕನ ಗೌರವಾರ್ಥ ಈ ದಿನವನ್ನು ಆಚರಣೆಗೆ ತರಲಾಗಿದೆ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಯೋಧನ ಗೌರವಾರ್ಥ, ಅವರಿಗೆ ಶೃದ್ಢಾಂಜಲಿ ಸಲ್ಲಿಸುವುದರ ಜತೆಯಲ್ಲಿ ಆ ಯೋಧರನ್ನು ನಂಬಿರುವ ಕುಟುಂಬಗಳ ನೆರವಿಗಾಗಿ ಈ ದಿನದಂದು ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.

ಈ ದಿನದಂದು ಪುಟ್ಟ ಧ್ವಜ ಅಥವಾ ಧ್ವಜ ದಿನಾಚರಣೆಯ ಸ್ಟಿಕ್ಕರನ್ನು ಸಾರ್ವಜನಿಕರಿಗೆ ನೀಡಿ, ಆ ಮೂಲಕ ಅವರಿಂದ ದೇಣಿಗೆಯನ್ನು ಸ್ವೀಕರಿಸಿ ಅದನ್ನು ಸೇನೆಗೆ ಅರ್ಪಿಸುವ ಮಹೋನ್ನತ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. ಈ ನಿಧಿಯಿಂದ ಸಂಗ್ರಹವಾಗುವ ಹಣವು ಹುತಾತ್ಮ ಸೈನಿಕರ ಕುಟುಂಬಕ್ಕೆ ಹಾಗೂ ಯುದ್ಧದ ಸಮಯದ ಅಗತ್ಯತೆಗೆ ಉಪಯೋಗವಾಗುತ್ತದೆ. ಈ ವರ್ಷ ಡಿಸೆಂಬರ್ ೭ರಿಂದ ಮೊದಲ್ಗೊಂಡು ಇಡೀ ತಿಂಗಳು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲು ಕೇಂದ್ರ ಸರಕಾರವು ತೀರ್ಮಾನ ಕೈಗೊಂಡಿದೆ. ಆ ಮೂಲಕ ಸೈನಿಕರ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಅಧಿಕ ಪ್ರಮಾಣದ ನಿಧಿಯನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ.

ನಾವೂ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಸೈನಿಕರ ಕಲ್ಯಾಣಕ್ಕೆ ಸಹಾಯ ಮಾಡುವ. ಆ ಮೂಲಕ ಅವರು ನಮ್ಮ ಸುರಕ್ಷತೆಗೆ, ದೇಶ ಕಾಯುವ ಕೆಲಸಕ್ಕೆ ಕೃತಜ್ಞತೆಯನ್ನು ಸಲ್ಲಿಸೋಣ. ಜೈ ಹಿಂದ್!  

ಚಿತ್ರಗಳು : ಅಂತರ್ಜಾಲ ಕೃಪೆ

 

Comments

Submitted by ಬರಹಗಾರರ ಬಳಗ Thu, 12/10/2020 - 10:56

ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಬಗ್ಗೆ ಅತ್ಯುತ್ತಮ ಮಾಹಿತಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಇದನ್ನು ಅರಿತರೆ ಒಳ್ಳೆಯದು. ಮೊದಲೆಲ್ಲ ಶಾಲೆಗಳಲ್ಲಿ ಈ ಪುಟ್ಟ ಧ್ವಜ(ಸ್ಟಾಂಪ್)ನ್ನು ನೀಡಿ, ಶಿಕ್ಷಕರು ಹಣ ಸಂಗ್ರಹಿಸಿ ಕೊಡುವ ವ್ಯವಸ್ಥೆ ಇತ್ತು. ಈ ವರ್ಷ ಗೊತ್ತಿಲ್ಲ. ಮಾಹಿತಿಗಾಗಿ ಧನ್ಯವಾದಗಳು.

-ರತ್ನಾ ಭಟ್ ತಲಂಜೇರಿ, ನಿವೃತ್ತ ಮುಖ್ಯೋಪಾಧ್ಯಾಯಿನಿ