ಮೋಡಗಳೇಕೆ ಗುರುತ್ವಾಕರ್ಷಣೆಗೆ ಒಳಗಾಗುವುದಿಲ್ಲ?

ಮೋಡಗಳೇಕೆ ಗುರುತ್ವಾಕರ್ಷಣೆಗೆ ಒಳಗಾಗುವುದಿಲ್ಲ?

ಭೂಮಿಯ ಗುರುತ್ವಾಕರ್ಷಣೆಯ ಶಕ್ತಿಯ ಬಗ್ಗೆ ನಿಮಗೆ ತಿಳಿದೇ ಇದೆ. ಭೂಮಿಯ ಮೇಲ್ಭಾಗದಲ್ಲಿರುವ ಯಾವುದೇ ವಸ್ತು ಭೂಮಿಯತ್ತ ಸೆಳೆಯಲ್ಪಡುತ್ತದೆ. ಆದರೆ ಭೂಮಿಯ ಮೇಲೆ ಚಲಿಸುತ್ತಿರುವ ಮೋಡಗಳೇಕೆ ಭೂಮಿಯತ್ತ ಸೆಳೆಯಲ್ಪಡುವುದಿಲ್ಲ ಎಂಬ ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಗುರುತ್ವಾಕರ್ಷಣೆಯ ನಿಯಮದ ಪ್ರಕಾರ ಆ ಮೋಡಗಳು ಭೂಮಿಗೆ ಅಪ್ಪಳಿಸಬೇಕಿತ್ತಲ್ಲವೇ? ಅದಕ್ಕೂ ಒಂದು ವೈಜ್ಞಾನಿಕ ಕಾರಣವಿದೆ. ಬನ್ನಿ ತಿಳಿದುಕೊಳ್ಳುವ.

ಮೋಡಗಳು ರೂಪುಗೊಳ್ಳುವುದು ಹೇಗೆಂದರೆ, ಸೂರ್ಯನ ಶಾಖದಿಂದ ನೀರು ಕಾದು ಆವಿಯಾಗುತ್ತದೆ. ಆವಿ ಭರಿತ ವಾಯು ಬಿಸಿಯಾಗಿರುವುದರಿಂದ ಅದು ಹಗುರವಾಗಿರುತ್ತದೆ. ಆ ಗಾಳಿಯ ಬಿಸಿ ಏರಿದಂತೆ ಅದು ಮೇಲಕ್ಕೇರಿ, ತಂಗಾಳಿ ಕೆಳಕ್ಕೆ ಇಳಿಯುತ್ತದೆ. ಈ ಕ್ರಿಯೆ ಸತತವಾಗಿ ನಡೆಯುತ್ತಾ ಹೋದಂತೆ ಮೇಲುಮೇಲಕ್ಕೆ ಏರಿದ ನೀರಾವಿ ಬಹಳ ತಂಪಾದ ಪ್ರದೇಶವನ್ನು ತಲುಪುತ್ತದೆ. ಅಲ್ಲಿ ಅದು ಸಾಂದ್ರೀಕೃತವಾಗಿ ನೀರಿನ ಹನಿಗಳು ರೂಪುಗೊಳ್ಳುತ್ತವೆ. ಈ ಹನಿಗಳ ಗುಂಪೇ ಮೋಡಗಳು. ಈ ಹನಿಗಳು ಗುರುತ್ವಾಕರ್ಷಣೆಗೆ ಒಳಗಾಗುವುದಿಲ್ಲ ಎಂದಲ್ಲ. ಆದರೆ ಅವು ಬಹು ಸೂಕ್ಷ್ಮವಾಗಿರುವುದರಿಂದ ಅವುಗಳ ತೂಕಕ್ಕಿಂತ ಮೇಲೇರುತ್ತಿರುವ ವಾಯು ಪ್ರವಾಹದ ಪ್ರಭಾವದ್ದೇ ಮೇಲುಗೈ ಆಗುತ್ತದೆ. ಮೋಡಗಳು ಇನ್ನೂ ಮೇಲಕ್ಕೆ, ಇನ್ನೂ ತಂಪಾದ ಪ್ರದೇಶಕ್ಕೆ ಹೋದಂತೆ ನೀರಿನ ಹನಿಗಳು ಘನೀಭವಿಸಿ ಸೂಕ್ಷ್ಮಗಾತ್ರದ ಹಿಮದ ಹರಳುಗಳಾಗುತ್ತವೆ. ಆಗಲೂ ಅವು ಅತ್ಯಂತ ಸೂಕ್ಷ್ಮ ಗಾತ್ರವಾದುದರಿಂದ ಗುರುತ್ವಾಕರ್ಷಣೆಗೆ ಒಳಗಾಗಿ ಕೆಳಕ್ಕೆ ಬೀಳದೆ ತೇಲಾಡುತ್ತಲೇ ಇರುತ್ತವೆ.

ಉಷ್ಣತೆ ಸಾಕಷ್ಟು ಕಮ್ಮಿಯಾಗಿ, ಹಿಮದ ಹರಳುಗಳು ದೊಡ್ಡದಾಗಿ ಬೆಳೆಯಲು ಆಸರೆ ಒದಗಿಸುವ ಧೂಳಿನ ಕಣಗಳೇ ಮೊದಲಾದುವುಗಳು ಸಾಕಷ್ಟು ದೊರೆತಾಗ, ಹಿಮದ ಹರಳುಗಳು ಬೆಳೆದು ಇನ್ನಷ್ಟು ದೊಡ್ಡದಾಗುತ್ತವೆ. ಆಗ ಬಿಸಿಗಾಳಿಯ ಮೇಲೊತ್ತಡಕ್ಕಿಂತ ಗುರುತ್ವಾಕರ್ಷಣೆಯದ್ದೇ ಮೇಲುಗೈ ಆಗುತ್ತದೆ. ಪರಿಣಾಮವಾಗಿ ಅವು ಕೆಳಕ್ಕೆ ಬೀಳುತ್ತವೆ. ಹಿಮದ ಹರಳುಗಳು ಘನ ಹಿಮದ ರೂಪದಲ್ಲಿ ಬೀಳುವುದೇ, ಆಲಿಕಲ್ಲಾಗಿ ಬೀಳುವುದೇ, ದಾರಿಯಲ್ಲಿ ಮಳೆ ಹನಿಗಳಾಗಿ ಬೀಳುವುದೇ ಎಂಬುವುದು ಆ ಸಮಯದ ವಿಭಿನ್ನ ಪರಿಸ್ಥಿತಿಯನ್ನು ಹೊಂದಿಕೊಂಡಿರುತ್ತದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ 

 

Comments

Submitted by kannadakanda Sat, 10/30/2021 - 18:31

ಮೋಡಗಳು ಗುರುತ್ವಾಕರ್ಷಣೆಗೊಳಗಾದರೂ ಅವು ಅನಿಲರೂಪದಲ್ಲಿರುವುದಱಿಂದ ಅಣುವೇಗವೂ ತೀರಾ ಹೆಚ್ಚಿರುವುದಱಿಂದ ಬೇಗ ಕೆೞಗೆ ಬಾರವು. ಘನೀಕೃತವಾದಾಗ ಅಣುವೇಗವು (Molecular velocity) ಕ್ಷೀಣಿಸಿ ಕೆೞಗೆ ಮೞೆಯಾಗಿ ಸುರಿಯುತ್ತವೆ. ಆದರೆ ವಿಮೋಚನಾವೇಗವು (Escape velocity) ಮೋಡಗಳ ಅಣುವೇಗಕ್ಕಿಂತ ಹೆಚ್ಚಿರುವುದಱಿಂದ ಮೋಡಗಳು ಭೂಮಿಯ ಕಕ್ಷೆ ದಾಟಿ ಹೋಗಲಾಱವು. ಆದರೆ ಚಂದ್ರನಲ್ಲಿ ಮೋಡಗಳು ನಿಲ್ಲುವುದಿಲ್ಲ. ಅಲ್ಲಿ ಅನಿಲದ ರೂಪದಲ್ಲಿರುವ ಮೋಡಗಳ ಅಣುವೇಗವು ಚಂದ್ರನ ವಿಮೋಚನಾವೇಗಕ್ಕಿಂತ ಹೆಚ್ಚಿರುವುದಱಿಂದ ಅನಿಲಗಳ ಕಣಗಳು ಒಂದಱಿಂದೊಂದು ಬೇರ್ಪಟ್ಟು ಚಂದ್ರನ ಕಕ್ಷೆಯಿಂದಲೇ ಜಾಱಿಹೋಗುತ್ತವೆ. ಇದೇ ಕಾರಣಕ್ಕೆ ಚಂದ್ರನ ಮೇಲ್ಮೈಯಲ್ಲಿ ನೀರು ನಿಲ್ಲಲಾಱದು. ನೀರು ಎಲ್ಲ ಉಷ್ಣತೆಯಲ್ಲಿ ಆವಿ(ಅನಿಲ)ಯಾಗುವುದಱಿಂದ ಆವಿಯಾದ ತಕ್ಷಣ ಆವಿಯ ಕಣಗಳು ಒಂದಱಿಂದೊಂದು ಬೇರ್ಪಟ್ಟು ಚಂದ್ರನ ಕಕ್ಷೆಯನ್ನೇ ಬಿಟ್ಟು ಹೋಗುತ್ತವೆ. 

Submitted by shreekant.mishrikoti Tue, 11/16/2021 - 03:30

'ಕನ್ನಡದ ಕಂದ 'ರೇ,

ಹಳೆಯ ರ, ಳ ಅಕ್ಷರಗಳ ವೈಶಿಷ್ಟ್ಯ  , ಉಚ್ಚಾರಣೆ, ಅವುಗಳ ಬಳಕೆ ತಪ್ಪಿದುದು ಏಕೆ?  ಎಂಬೆಲ್ಲ ಮಾಹಿತಿ ಎಲ್ಲಿ ಸಿಗುತ್ತದೆ ? ಏನಾದರೂ ಅಂತರ್ಜಾಲ ಕೊಂಡಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ .  ಇಲ್ಲದೆ ಇದ್ದರೆ ನೀವೆ ತಿಳಿಸಿಕೊಟ್ಟರೆ ತುಂಬ ಉಪಕಾರವಾಗುತ್ತದೆ.

Submitted by kannadakanda Thu, 11/18/2021 - 17:58

In reply to by shreekant.mishrikoti

ಈ ಹಿಂದೆಯೇ ಸಂಪದದಲ್ಲಿ ಱಕಾರ ಮತ್ತು ೞಕಾರದ ಬಗ್ಗೆ ವಿಸ್ತೃತ ಚರ್ಚೆ ಆಗಿದೆ. ಆದರೆ ಆ ಎಲ್ಲ ಕೊಂಡಿಗಳು ಸಿಗುತ್ತಿಲ್ಲ. ಮತ್ತೆ ಹೇೞಿದರೆ ಚರ್ವಿತಚರ್ವಣವಾಗುತ್ತದೆ.