ಬಾಳಿಗೊಂದು ಚಿಂತನೆ (144) - ದ ರಾ ಬೇಂದ್ರೆ
ಸರಸ ಜನನ
ವಿರಸ ಮರಣ
ಸಮರಸವೇ ಜೀವನ
ಒಂದೇ ಒಂದೇ ಕರ್ನಾಟಕ ಒಂದೇ
ಕುಣಿಯೋಣ ಬಾರ
ಈ ಎಲ್ಲಾ ಸಾಲುಗಳನ್ನು ಬಹಳಷ್ಟು ಸಲ ಓದಿದವರು ನಾವುಗಳು. ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕುವುದು ಮಾತ್ರವಲ್ಲ, ಬಾಳಲೂ ಕಲಿಯಬೇಕು. ಕಲಿಕೆ ನಿರಂತರ ಪ್ರಕ್ರಿಯೆ. ಬಾಳುವುದೆಂದರೆ ಪ್ರಜ್ಞಾವಂತ, ಸುಸಂಸ್ಕೃತನಾಗಿ, ಸಂಸ್ಕಾರವಂತನಾಗಿ ಬಾಳಬೇಕು. ಹುಳವೊಂದು ಹುಟ್ಟುತ್ತದೆ, ಸಾಯುತ್ತದೆ, ಹಾಗಾಗಬಾರದು. ಹಣ ಬಂದಾಗ ಅಹಂ ಬರಬಾರದು.
ಕುರುಡು ಕಾಂಚಾಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೋ
ಈ ರೀತಿಯಾಗಬಾರದು ಮಾನವನ ಜೀವನ. ಆಚಾರ-ವಿಚಾರಗಳಿಂದ ಕೂಡಿದ ಸದಾಚಾರ ಮೊದಲು ಇರಬೇಕು. ಸಮತೂಕದ ಜೀವನ ನಮ್ಮದಾಗಿರಬೇಕು. ಆರಕ್ಕೇರದೆ ಮೂರಕ್ಕಿಳಿಯದಿರೋಣ. ಎಂತಹ ಕಷ್ಟ ಬಂದರೂ ಹೆದರಬಾರದು.
ಹೀಗೆ ಹೇಳಿದವರು ಬೇರಾರು ಅಲ್ಲ, ಕನ್ನಡನಾಡಿನ ‘ಸಾಹಿತ್ಯ ಲೋಕದ ದಿಗ್ಗಜ ವರಕವಿ ಸನ್ಮಾನ್ಯ ದ.ರಾ.ಬೇಂದ್ರೆ’ಯವರು. ಇಂದು (ಜನವರಿ 31) ಅವರ ಜನ್ಮದಿನ. ತಮ್ಮ ‘ನಾಕುತಂತಿ’ ಮೇರುಕೃತಿಗೆ ಜ್ಞಾನಪೀಠ ಪುರಸ್ಕಾರ ಮುಡಿಗೇರಿಸಿಕೊಂಡವರು. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಸಹ ಪಡೆದಿರುತ್ತಾರೆ. ದಾರ್ಶನಿಕರು, ಕವಿ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದವರು. ಮನುಜನ ನಾಡಿ ಬಡಿತ ಇವರ ಲೇಖನಿಗಳಲ್ಲಿ ಹೊರಹೊಮ್ಮುತ್ತಿತ್ತು. ‘ಅಂಬಿಕಾತನಯದತ್ತ’ ಕಾವ್ಯನಾಮದಿಂದ ಪ್ರಸಿದ್ಧರು. ಸುಖ-ದು:ಖಗಳ ಸಮನಾಗಿ ಸ್ವೀಕರಿಸಿ ಬದುಕಿ ಎಂದು ಕರೆಯಿತ್ತ ಮಹಾನ್ ಸಾಧಕರ ಈ ಸಂದರ್ಭದಲ್ಲಿ ನೆನೆಯೋಣ.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
Comments
ದ. ರಾ. ಬೇಂದ್ರೆ ಅಂದೊಡನೆ…
ದ. ರಾ. ಬೇಂದ್ರೆ ಅಂದೊಡನೆ ನೆನಪಾಗುವ ಒಂದು ಕವನ ಸಾಲು:
“ಹಕ್ಕಿ ಹಾರುತಿದೆ ನೋಡಿದಿರ”
ಅಬ್ಬ, ಎಂತಹ ಮಾಂತ್ರಿಕ ಪದಗಳು! ಈ ಮೂರೇ ಮೂರು ಪದಗಳ ಅರ್ಥವ್ಯಾಪ್ತಿ ಪುಟಗಟ್ಟಲೆ ಬರೆದರೂ ಮುಗಿಯದು.
“ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ”
-ಈ ಸಾಲುಗಳಲ್ಲಂತೂ ಮನಮೋಹಕ ಮುಂಜಾನೆಯ ಬಣ್ಣಬಣ್ಣಗಳ ಚಿತ್ರವನ್ನೇ ಚಿತ್ರಿಸಿದ ಗಾರುಡಿಗ ದ. ರಾ. ಬೇಂದ್ರೆ.
ಇಂತಹ ಸಾವಿರಾರು ಕವನ ಸಾಲುಗಳ ಮೂಲಕ ಕನ್ನಡ ಭಾಷೆಯ ವಿಸ್ಮಯವನ್ನು ತೆರೆದಿಟ್ಟ ಹುಟ್ಟುಕವಿ ದ. ರಾ. ಬೇಂದ್ರೆ.
"ಸಾವಿಗೆ ನಾ ಹೆದರುವುದಿಲ್ಲ. ಯಾಕಂದರ ನಾ ಇರೋ ತನಕ ಅದು ಬರೋದಿಲ್ಲ. ಅದು ಬಂದಾಗ ನಾ ಇರೋದಿಲ್ಲ” ಎಂಬ ಮಹಾನ್ ಸತ್ಯವನ್ನು ಜನಸಾಮಾನ್ಯರ ಅಂತರಂಗದಲ್ಲಿ ರಿಂಗಣಿಸುವಂತೆ ನುಡಿದ ದಾರ್ಶನಿಕ ಕವಿ ದ. ರಾ. ಬೇಂದ್ರೆ. ಹುಟ್ಟುಹಬ್ಬದಂದು ಅವರ ಕವನಗಳನ್ನು ನೆನಪು ಮಾಡಿಕೊಳ್ಳೋಣ.