ಗಾಂಧಿ ಬಜಾರ್ ಪತ್ರಿಕೆ - ಈಗ ನೆನಪು ಮಾತ್ರ

ಗಾಂಧಿ ಬಜಾರ್ ಪತ್ರಿಕೆ - ಈಗ ನೆನಪು ಮಾತ್ರ

"ಪುಸ್ತಕ ಲೋಕದ ಪರಿಚಾರಕ” ಎಂದು ಕರೆದುಕೊಂಡಿದ್ದ “ಗಾಂಧಿ ಬಜಾರ್ ಪತ್ರಿಕೆ”ಯ ಕೊನೆಯ ಸಂಚಿಕೆ ಡಿಸೆಂಬರ್ ೨೦೧೬ರದ್ದು. ಅದರ ಮುಖಪುಟದಲ್ಲಿತ್ತು ಜ್ನಾನಪೀಠ ಪ್ರಶಸ್ತಿ ಪಡೆದ ಕನ್ನಡದ ಐವರು ಸಾಹಿತಿಗಳ ಭಾವಚಿತ್ರ.

ಆ ಮಾಸಪತ್ರಿಕೆಯ ಸಂಪಾದಕರು ಬಾಕಿನ (ಬಾಲಕೃಷ್ಣ ಕೆ.ಎನ್.) ಬೆಂಗಳೂರಿನ ಬಸವನಗುಡಿಯ ಪ್ರಸಿದ್ಧ ಮುದ್ರಣಾಲಯ “ಲಿಪಿ ಮುದ್ರಣ”ದಲ್ಲಿ ಅಚ್ಚಾಗುತ್ತಿತ್ತು ಗಾಂಧಿ ಬಜಾರ್ ಪತ್ರಿಕೆ. ಪತ್ರಿಕೆ ಶುರು ಮಾಡಲು ಪ್ರಜಾವಾಣಿಯ ಪತ್ರಕರ್ತಮಿತ್ರ ವೈಎನ್ಕೆ (ವೈ. ಎನ್. ಕೃಷ್ಣಮೂರ್ತಿ) ಅವರು ಒತ್ತಾಯ ಹಾಗೂ ಪ್ರೋತ್ಸಾಹವೇ ಕಾರಣವೆಂದು ಕೊನೆಯ ಸಂಚಿಕೆಯಲ್ಲಿ ಸಂಪಾದಕ ಬಾಕಿನ ಹೇಳಿಕೊಂಡಿದ್ದಾರೆ. ಲಿಪಿ ಮುದ್ರಣಕ್ಕೆ ಹೆಚ್ಚು ಕಡಿಮೆ ಪ್ರತಿ ದಿನವೂ ಬೆಳಗ್ಗೆ ಅಥವಾ ಸಂಜೆ ಬಂದು ಬಾಕಿನ ಜೊತೆ ಸಾಹಿತಿಗಳ ಮತ್ತು ಸಾಹಿತ್ಯದ ಕುರಿತು ಮಾತುಕತೆ ನಡೆಸುತ್ತಿದ್ದ ವೈಎನ್ಕೆ ಪತ್ರಿಕೆಯೊಂದನ್ನು ಶುರು ಮಾಡುವ ಪ್ರಸ್ತಾಪ ಮಾಡಿದರಂತೆ. ಎಲ್ಲ ಸಲಹೆ-ಸಹಕಾರದ ಭರವಸೆಯನ್ನೂ ನೀಡಿದರಂತೆ.

ಅನಂತರ ದೆಹಲಿಯ ಪತ್ರಿಕೆಗಳ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿ ಪತ್ರಿಕೆಯ ನೋಂದಾವಣಿ ಮಾಡಿಸಿದರು ಬಾಕಿನ. ೨೪ ಆಗಸ್ಟ್ ೧೯೮೬ರಂದು ವಾರಪತ್ರಿಕೆ “ಗಾಂಧಿ ಬಜಾರ್ ಪತ್ರಿಕೆ"ಯ ಮೊದಲ ಸಂಚಿಕೆ ಟ್ಯಾಬ್‌ಲೈಡ್ ಆಕಾರದಲ್ಲಿ (೮ ಪುಟ) ಪ್ರಕಟವಾಯಿತು. ಅದು ಬೆಂಗಳೂರಿನ ದಕ್ಷಿಣ ಭಾಗದ ಉಪನಗರಗಳ ಪ್ರಥಮ ವಾರಪತ್ರಿಕೆಯಾಗಿತ್ತು. ಆಗಷ್ಟೇ ಕಬೀರ್ ಸಮ್ಮಾನ್ ಪುರಸ್ಕೃತರಾಗಿದ್ದ ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರ ಭಾವಚಿತ್ರದೊಂದಿಗೆ ಮೊದಲ ಸಂಚಿಕೆ ಪ್ರಕಟವಾಗಿತ್ತು.

ಬಸವನಗುಡಿ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮತ್ತು ವಾರ್ತಾಪತ್ರಿಕೆ ಮಳಿಗೆಗಳಲ್ಲಿ ಗಾಂಧಿ ಬಜಾರ್ ಪತ್ರಿಕೆಯ ಪ್ರತಿಗಳು ಮಾರಾಟಕ್ಕೆ ಲಭ್ಯವಿದ್ದವು. ಮೊದಲ ಸಂಚಿಕೆಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ. ವಾರಪತ್ರಿಕೆಯಾಗಿ ೩೨ ವಾರಗಳು ಪ್ರಕಟವಾಯಿತು ಗಾಂಧಿ ಬಜಾರ್ ಪತ್ರಿಕೆ. ಪ್ರತೀ ವಾರ ವಿವಿಧ ಸಾಹಿತಿಗಳ ಲೇಖನಗಳು, ವೈಎನ್ಕೆಯವರ ಅಂಕಣ ಮತ್ತು ಎಚ್. ಉಮಾಪತಿಯವರ ವ್ಯಂಗ್ಯಚಿತ್ರ ಪ್ರಕಟವಾಗುತ್ತಿತ್ತು.

ಅನಂತರ ಗಾಂಧಿ ಬಜಾರ್ ಪತ್ರಿಕೆ ಮಾಸಿಕವಾಗಿ ಮುಂದುವರಿಯಿತು. ಮುಖಪುಟದಲ್ಲಿ ಕವಿಗಳ, ಸಾಹಿತಿಗಳ ಭಾವಚಿತ್ರದ ಪ್ರಕಟಣೆ ವಾಡಿಕೆಯಾಗಿತ್ತು. ಮಾಸಪತ್ರಿಕೆಯಲ್ಲಿ ಜಾಹೀರಾತುಗಳೂ ಪ್ರಕಟವಾಗುತ್ತಿದ್ದವು. ಕನ್ನಡ ನಾಡಿನಾದ್ಯಂತ ಸುಮಾರು ೬೦೦ ಚಂದಾದಾರರು ಪತ್ರಿಕೆ ಮುನ್ನಡೆಯಲು ನೆರವಾದರು. ಐಟಿ ಕಂಪೆನಿಯೊಂದು ಪ್ರತಿ ತಿಂಗಳೂ ಜಾಹೀರಾತು ನೀಡುವ ಮೂಲಕ ಪತ್ರಿಕೆಯ ಪ್ರಕಟಣೆಯನ್ನು ಬೆಂಬಲಿಸಿತು.

ಗಾಂಧಿ ಬಜಾರ್ ಪತ್ರಿಕೆಗೆ ವೈಎನ್ಕೆಯವರ ದೀರ್ಘಕಾಲದ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಸಂಪಾದಕ ಬಾಕಿನ ಕೃತಜ್ನತೆಯಿಂದ ನೆನೆಯುತ್ತಾರೆ. “ಚುರ್ ಚುರ್ ಬತ್ತಿ” ಅಂಕಣದಲ್ಲಿ ವೈಎನ್ಕೆ ಅವರ ವಿಶಿಷ್ಟ ಶೈಲಿಯ ರಾಜಕೀಯ ವಿಚಾರಗಳ ವ್ಯಂಗ್ಯ ಬರಹಗಳು ಜನಪ್ರಿಯವಾಗಿದ್ದವು. ಅದೇ ಅಂಕಣದಲ್ಲಿ "ಕೊನೆಯ ಕಿಡಿ” ಪ್ರಸಕ್ತ ವಿದ್ಯಮಾನಗಳ ಬಗ್ಗೆ ವೈಎನ್ಕೆಯವರು ಚುರುಕು ಬರಹ. ವೈಎನ್ಕೆಯವರು “ಪ್ರಜಾವಾಣಿ" ದಿನಪತ್ರಿಕೆಯ ಸಂಪಾದಕರಾಗಿದ್ದಾಗಲೂ “ಗಾಂಧಿ ಬಜಾರ್ ಪತ್ರಿಕೆ”ಯಲ್ಲಿ ತಮ್ಮ ಅಂಕಣ ಮುಂದುವರಿಸಿದ್ದು ವಿಶೇಷ. ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ಇದರ ವಿಶೇಷಾಂಕ ಪ್ರಕಟವಾಗುತ್ತಿತ್ತು.

ಗಾಂಧಿ ಬಜಾರ್ ಪತ್ರಿಕೆ ಮಾಸಿಕದ ಪ್ರಕಟಣೆ ನಿಲ್ಲುವ ಕೆಲವು ತಿಂಗಳುಗಳ ಮುಂಚೆ ಬಸವನಗುಡಿಗೆ ಹೋಗಿ ಬಾಕಿನ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿದ್ದೆ. ಮಾಲೀಕರು ಲಿಪಿ ಮುದ್ರಣದ ಕಟ್ಟಡವನ್ನು ಮಾರಿ ಬೇರೆಡೆಗೆ ಹೋಗುತ್ತಿರುವ ಕಾರಣ ಮುದ್ರಣಾಲಯವನ್ನು ಮುಚ್ಚಬೇಕಾಗಿದೆಯೆಂದು ತಿಳಿಸಿದ್ದರು. ಭೇಟಿಯ ನೆನಪಿಗಾಗಿ ನನಗೊಂದು ಪುಸ್ತಕ ನೀಡಿದ್ದರು.

ಸಂಪಾದಕ ಬಾಕಿನ ಜನವರಿ ೨೦೧೨ರ ಸಂಚಿಕೆಯ ಮೊದಲ ಪುಟದಲ್ಲಿ "ಹೊರಳು ನೋಟ"ದಲ್ಲಿ ಬರೆದಿದ್ದ ಮಾತುಗಳು:
“ಗಾಂಧಿ ಬಜಾರ್ ಪತ್ರಿಕೆ”ಯ ಪ್ರಕಟಣೆ ೨೫ ವರ್ಷ ದಾಟಿ ೨೬ನೇ ವರ್ಷಕ್ಕೆ ಕಾಲಿಟ್ಟಿದೆ. ೨೫ನೇ ವರ್ಷದ ಕೊನೆಗೆ ಪತ್ರಿಕೆಯ ಪ್ರಕಟಣೆಗೆ ವಿದಾಯ ಹೇಳಬೇಕೆಂದು ಸಂಕಲ್ಪ ಮಾಡಿದ್ದೆ. ಆದರೆ ನನ್ನ ಆತ್ಮೀಯ ಕವಿಮಿತ್ರರು, ಲೇಖಕರು “ನಿಮ್ಮ ಬೆಂಬಲಕ್ಕೆ ನಾವಿದ್ದೇವೆ” ಎಂದು ಭರವಸೆ ಕೊಟ್ಟರು… ಒಂದೊಂದು ಸಂಚಿಕೆಗೂ ಖರ್ಚು ವೆಚ್ಚ ತೂಗಿಸಿಕೊಂಡು ಹೋಗುವುದೇ ಪ್ರಯಾಸದ ಪ್ರಯಾಣ. ಪತ್ರಿಕೆ ಮಾಡಿ ಅದನ್ನು ನಡೆಸಿಕೊಂಡು ಹೋದವರಿಗಷ್ಟೆ ಆ ಸಂಕಟ ಅರ್ಥವಾದೀತು…ಯಾವ-ಯಾರ ಉದ್ಧಾರಕ್ಕಾಗಿ ಈ ಪತ್ರಿಕೆ ಮಾಡುತ್ತಿರುವೆ ಎಂದು ಪ್ರಶ್ನೆ ಹಾಕಿದರೆ ಉತ್ತರಕ್ಕಾಗಿ ನನ್ನಲ್ಲಿ ಶಬ್ದಗಳಿಲ್ಲ…." ಅನಂತರವೂ ದೀರ್ಘ ಐದು ವರ್ಷಗಳ ಅವಧಿ ಅವರು “ಗಾಂಧಿ ಬಜಾರ್ ಪತ್ರಿಕೆ”ಯನ್ನು ಪ್ರಕಟಿಸಿದ್ದು ಸಾಹಸವೇ ಸರಿ.
 
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಗಟ್ಟಲೆ ಜನರು ತಮ್ಮ ಬರಹಗಳನ್ನು ಕ್ಷಣಕ್ಷಣವೂ ಇಡೀ ಜಗತ್ತಿನ ಓದುಗರಿಗಾಗಿ ಪ್ರಕಟಿಸುತ್ತಾ ಸುದ್ದಿ ಮಾಡುತ್ತಿರುವ ಇಂಟರ್-ನೆಟ್ ಯುಗ ಇಂದಿನದು. ಕೇವಲ ಐದು ವರುಷಗಳ ಹಿಂದಿನ ವರೆಗೂ ೬೦೦ ಚಂದಾದಾರರ ಸಹಕಾರದಿಂದ ಮೂವತ್ತು ವರುಷ ಕನ್ನಡದ ಮಾಸಪತ್ರಿಕೆಯೊಂದನ್ನು ಮುನ್ನಡೆಸಿದ ಸಾಹಸವನ್ನು ಈಗ ಕಲ್ಪಿಸುವುದೂ ಕಷ್ಟ. ಇನ್ನು “ಗಾಂಧಿ  ಬಜಾರ್ ಪತ್ರಿಕೆ” ಕನ್ನಡದ ಪತ್ರಿಕಾ ಪ್ರಪಂಚದಲ್ಲಿ ನೆನಪು ಮಾತ್ರ.

Comments

Submitted by Ashwin Rao K P Thu, 02/03/2022 - 09:15

ಸದಾ ನೆನಪಿನಲ್ಲಿ ಉಳಿಯುವ ಗಾಂಧಿ ಬಜಾರ್ ಪತ್ರಿಕೆ

ಮೂರು ದಶಕಗಳ ಕಾಲ ಸಾಹಿತ್ಯಾಭಿಮಾನಿಗಳ ಜ್ಞಾನತೃಷೆಯನ್ನು ತಣಿಸಿದ ಸಾಹಿತ್ಯ ಪತ್ರಿಕೆ 'ಗಾಂಧಿ ಬಜಾರ್ ಪತ್ರಿಕೆ'ಯ ಕುರಿತಾದ ಲೇಖನ ಓದಿದೆ. ಒಂದು ಪತ್ರಿಕೆಯನ್ನು, ಅದರಲ್ಲೂ ಸಾಹಿತ್ಯಕ್ಕೆ ಸೀಮಿತವಾದ ಪತ್ರಿಕೆಯನ್ನು ಒಂದೆರಡು ವರ್ಷ ನಡೆಸುವುದೇ ಕಷ್ಟಕರವಾದ ಸಂಗತಿಯಾಗಿರುವಾಗ 'ಬಾಕಿನ' (ಬಾಲಕೃಷ್ಣ ಕೆ.ಎನ್.) ಇವರು ಬರೋಬ್ಬರಿ ಮೂವತ್ತು ವರ್ಷ ನಿರಂತರವಾಗಿ ಪ್ರಕಟಿಸಿದ್ದು ನಿಜಕ್ಕೂ ಅದ್ಭುತ ಸಾಧನೆ. 

ತಮ್ಮ ಪತ್ರಿಕೆಗೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ ಅವರು ಬರೆದ ಮಾತುಗಳನ್ನು ಓದಿ ನನ್ನ ಮನಸ್ಸಿಗೂ ಬಹಳ ಬೇಸರವಾಯಿತು. ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸುವ ಹಾದಿಯಲ್ಲಿದ್ದ ಇವರು ತಮ್ಮ ಸಹೃದಯ ಜೊತೆಗಾರರ ಪ್ರೇರಣೆಯಿಂದ ಇನ್ನೂ ಐದು ವರ್ಷ ಮುನ್ನಡೆಸಿದ್ದು ನಿಜಕ್ಕೂ ಅದ್ಬುತ ಸಾಹಸ. ಕನ್ನಡ ಪತ್ರಿಕೆಗಳು ಒಂದೊಂದಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತಿರುವಾಗ ಮೂರು ದಶಕಗಳ ಕಾಲ ರಾರಾಜಿಸಿದ 'ಗಾಂಧಿ ಬಜಾರ್ ಪತ್ರಿಕೆ'ಯೂ ಆರ್ಥಿಕ ಸಂಕಷ್ಟದಿಂದಾಗಿ ಡಿಸೆಂಬರ್ ೨೦೧೬ರಲ್ಲಿ ಪ್ರಕಟಣೆ ಸ್ಥಗಿತಗೊಳಿಸಿದ್ದು ನಿಜಕ್ಕೂ ನೋವಿನ ಸಂಗತಿ. 

Submitted by venkatesh Mon, 02/28/2022 - 19:17

'ಇಂಟರ್ ನೆಟ್' ಬಂದಮೇಲೆ ಓದುವ  ಹವ್ಯಾಸವೇ ನಿಂತುಹೋಗಿರುವಾಗ, ಕನ್ನಡ ಪತ್ರಿಕೆ ಓದುವವರು ಯಾರು ? ಎಂದು ಹೇಳಬೇಕಾಗಿದೆ. ನನಗೆ ತಿಳಿದಂತೆ  ನಮ್ಮ ತಲೆಮಾರಿನವರನ್ನು ಬಿಟ್ಟರೆ, ನಮ್ಮ ಮಕ್ಕಳಿಗೆ ಕನ್ನಡ ಓದಲು ಬಾರದು. 'ಕನ್ನಡ ಕಲಿಯಿರಿ' ಎಂದು ಒತ್ತಿ ಹೇಳುವುದನ್ನೂ ಮನೆಯಲ್ಲೂ ಯಾರೂ ಪ್ರಯತ್ನಿಸುವುದಿಲ್ಲ. ನನ್ನ ಹಿರಿಯ ಗೆಳೆಯ ದಿವಂಗತ, ಆರ್. ವೆಂಕಟೇಶ ಮೂರ್ತಿಯವರು ಅವರ ಮಗಳು, ಮತ್ತು ಮೊಮ್ಮಗ ಅಮೆರಿಕದಿಂದ ಬಂದಾಗ, 'ನ್ಯಾಷನಲ್ ಕನ್ನಡ ಶಾಲೆ'ಗೆ ಭರ್ತಿಮಾಡಿದ್ದರು. ೪-೫ ತಿಂಗಳು ಕನ್ನಡದಲ್ಲೇ ಓದಿ, ವಾಪಸ್ ಹೋಗಿದ್ದ ಸಂಗತಿಯನ್ನು ನನ್ನ ಮುಂದೆ ಅವರು ಹೇಳಿಕೊಂಡಿದ್ದರು ; ಅದು  ಇನ್ನೂ ನನಗೆ ನೆನಪಿದೆ. 

ನಗೆ ಪತ್ರಿಕೆ, 'ಕೊರವಂಜಿ'  ಒಮ್ಮೆಲೇ ನಿಂತದ್ದೂ ಇದೇ ತರಹದ ಬೇಸರಕ್ಕೆ ಎಡೆಮಾಡಿಕೊಟ್ಟಿತ್ತು.  ರಾಶಿಯವರ ಮಗ 'ಅಪರಂಜಿ 'ಎನ್ನುವ ಪತ್ರಿಕೆಯನ್ನು ಹೊರತಂದರೂ  ಓದುಗರು ಹೆಚ್ಚು ಸ್ವಾಗತಿಸದೆ ಕೊನೆಗೆ ಪತ್ರಿಕೆಗೆ ಮಂಗಳ ಹಾಡಿದರು. ಮೈಸೂರಿನಿಂದ ಪ್ರಕಟವಾಗುತ್ತಿರುವ 'ಸಂಸ್ಕೃತ ಪತ್ರಿಕೆ ಸುಧರ್ಮ' (?) ವೂ ಹೀಗೆಯೇ ತೆವಳುತ್ತಾ, ಏಳುತ್ತಾ ಸಾಗಿದೆ. ಸಧ್ಯ, ಸರ್ಕಾರ ಅದಕ್ಕೆ ನೆರವಾಗಿರುವುದು ಒಂದು ಸಮಾಧಾನದ ಸಂಗತಿ.