ನಮ್ಮ ಸ್ನಾನ ಹೇಗಿರಬೇಕು...?
ಕೆಲವರ ಸ್ನಾನವನ್ನು ಗಮನಿಸಿ ನೋಡಿ, ಅವರು ಸ್ನಾನ ಮಾಡಲು ಬಾತ್ ರೂಂ ಹೊಕ್ಕರೆ ಒಂದು ಗಂಟೆ ಕಳೆದರೂ ಹೊರಗೆ ಬರಲೊಲ್ಲರು. ಇನ್ನು ಕೆಲವರದ್ದು ‘ಕಾಗೆ ಸ್ನಾನ'. ಅವರು ಬಾತ್ ರೂಂ ಒಳಗೆ ಹೊಕ್ಕಿದಷ್ಟೇ ವೇಗದಲ್ಲಿ ಹೊರಗೆ ಬಂದು ಬಿಡುತ್ತಾರೆ. ಹಾಗಾದರೆ ಸರಿಯಾದ ಸ್ನಾನ ವಿಧಾನ ಏನು? ಯೋಚಿಸಬೇಕಾದ ಸಂಗತಿಯಲ್ಲವೇ? ಸ್ನಾನ ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಮನುಷ್ಯನಿಗಂತೂ ಬಹಳ ಮುಖ್ಯ. ಏಕೆಂದರೆ ಮಾನವ ಸಂಘ ಜೀವಿ. ಪ್ರತೀ ದಿನ ಬಹಳಷ್ಟು ಮಂದಿಯನ್ನು ಭೇಟಿಯಾಗುತ್ತಾನೆ. ಸ್ನಾನ ಮಾಡದೇ ಇದ್ದ ವ್ಯಕ್ತಿಯ ಮೈಯಿಂದ ದುರ್ಗಂಧ ಹೊರಹೊಮ್ಮುವುದು ಸಹಜ. ಧೂಳು, ಬೆವರು, ನಾವು ಕೆಲಸ ಮಾಡುವ ವಾತಾವರಣ ಹೀಗೆ ಹತ್ತು ಹಲವು ಸಂಗತಿಗಳು ನಮ್ಮ ಮೈಯನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಹೀಗಾದಾಗ ಒಂದು ಸೊಗಸಾದ ಸ್ನಾನ ನಮ್ಮಲ್ಲಿ ಮತ್ತೆ ಲವಲವಿಕೆಯನ್ನು ಮೂಡಿಸುತ್ತದೆ ಎಂಬುದು ಸತ್ಯ. ಹಾಗಾದರೆ ಸ್ನಾನ ಮಾಡುವ ವಿಧಾನ ಹೇಗಿರಬೇಕು? ಗಣಿತ-ವಿಜ್ಞಾನ ಪತ್ರಿಕೆಯಾದ ‘ಸೂತ್ರ'ದಲ್ಲಿ ವೈದ್ಯರಾದ ಡಾ.ಕಿರಣ್ ವಿ.ಎಸ್. ಅವರು ಸೊಗಸಾಗಿ ವಿವರಣೆ ನೀಡಿದ್ದಾರೆ.
“ಸ್ನಾನದ ಸಂಪೂರ್ಣ ಪ್ರಯೋಜನ ನಿಮ್ಮ ದೇಹ ಮತ್ತು ಮನಸ್ಸುಗಳಿಗಾಗಬೇಕೇ? ಹಾಗಾದರೆ ಹೀಗೆ ಮಾಡಿ: ಹದ ಬಿಸಿಯಿರುವ ನೀರಿನಿಂದ ಪ್ರಾರಂಭಿಸಿ. ನಿಮ್ಮ ಶಿರ, ಮೈಗಳಿಗೆ ನೀರೆರೆದುಕೊಂಡ ಮೇಲೆ ಸೋಪಿನಿಂದ ಮೈತೊಳೆದುಕೊಳ್ಳಬೇಕು. ಚರ್ಮವನ್ನು ದೊರಗು ಬ್ರಷ್ಷುಗಳಿಂದ ರಭಸವಾಗಿ ಉಜ್ಜಿಕೊಳ್ಳುವ ಅಭ್ಯಾಸ ಖಂಡಿತಾ ತಪ್ಪು. ಕೆಲವರು ತಮ್ಮ ಉಗುರುಗಳಿಂದಲೇ ರಭಸವಾಗಿ ಕೆರೆದುಕೊಳ್ಳುವ ಅಭ್ಯಾಸದವರೂ ಇದ್ದಾರೆ. ಅದೂ ತಪ್ಪು. ಸ್ನಾನವೆಂಬುದು ದೇಹ - ಮನಸ್ಸುಗಳಿಗೆ ಉಲ್ಲಾಸ ತುಂಬುವ ಒಂದು ಚಟುವಟಿಕೆಯೇ ಹೊರತು ನೀವು ನಿಮ್ಮ ದೇಹದೊಡನೆ ನಡೆಸುವ ಯುದ್ಧವಲ್ಲ ! ಸೋಪಿನಿಂದ ಮೈತೊಳೆದುಕೊಂಡ ಬಳಿಕ ಎರೆದುಕೊಳ್ಳುವ ನೀರಿನ ಉಷ್ಣತೆ ಸ್ವಲ್ಪ ಕಡಿಮೆ ಇರಲಿ. ಹಂತ ಹಂತವಾಗಿ ನೀರಿನ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗಿ(ಬಿಸಿ ನೀರಿನ ಬಕೆಟಿಗೆ ನಿಧಾನವಾಗಿ ತಣ್ಣೀರನ್ನು ಬೆರೆಸುತ್ತಾ ಹೋಗಿ) ಕೊನೆಗೆ ನಿಮ್ಮ ಸ್ನಾನ ಉಗುರು ಬೆಚ್ಚಗೆ ನೀರಲ್ಲಿ ಅಥವಾ ಕೊಠಡಿಯ ಉಷ್ಣತೆಯ ನೀರಿನಲ್ಲಿ ಮುಗಿಯಲಿ. ಸ್ನಾನ ಮುಗಿದ ಮೇಲೆ ದೊರಗು ಬಟ್ಟೆಗಳಿಂದ ಮೈಯೊರೆಸಿಕೊಳ್ಳುವುದೂ (ಕೆಲವರಂತೂ ತ್ವಚೆಯಲ್ಲಿ ಒಂದು ಹನಿ ನೀರೂ ಉಳಿದಿರಬಾರದೆಂದು ತಿಕ್ಕಿ ತಿಕ್ಕಿ ಒರೆಸಿಕೊಳ್ಳುತ್ತಾರೆ) ಕೂಡ ಒಳ್ಳೆಯದಲ್ಲ. ಹತ್ತಿಯ ಬಟ್ಟೆಗಳಿಂದ ನಯವಾಗಿ ಮೈಯನ್ನು ಒರೆಸಿಕೊಳ್ಳುವುದು, ಒಂದಷ್ಟು ನೀರಿನಂಶ ಮೈಯಲ್ಲಿ ಹಾಗೇ ಉಳಿಯುವಂತೆ ಬಿಡುವುದು ಸೂಕ್ತ. ಐದು-ಹತ್ತು ನಿಮಿಷಗಳಾದ ಮೇಲೆ ಉಳಿದ ನೀರಿನಂಶವನ್ನು ಒರೆಸಿಕೊಂಡು ನಂತರ ಶುದ್ಧ/ಪೂರ್ತಿಯಾಗಿ ಒಣಗಿದ ಬಟ್ಟೆಗಳನ್ನು ಧರಿಸಿ.”
ಇದು ಸರಿಯಾದ ಕ್ರಮವೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದರೂ ಹಲವಾರು ಮಂದಿಗೆ ತಣ್ಣೀರಲ್ಲಿ ಸ್ನಾನ ಮಾಡುವುದೇ ಬಹಳ ಹಿತಕರವೆನಿಸುತ್ತದೆ. ಮಳೆಗಾಲವಾಗಿರಲಿ ಅಥವಾ ಚಳಿಗಾಲ ಅವರದ್ದು ತಣ್ಣೀರಿನ ಸ್ನಾನವೇ. ಕೆಲವರಿಗೆ ಮೊದಲೇ ಹೇಳಿದಂತೆ ಗಂಟೆಗಟ್ಟಲೇ ಸ್ನಾನ ಮಾಡುವ ಅಭ್ಯಾಸ ಮತ್ತು ಕೆಲವರಿಗೆ ಅರ್ಜೆಂಟ್ ಸ್ನಾನ. ಏನೇ ಇರಲಿ, ನಮ್ಮ ಮೈಯನ್ನು ಸ್ವಚ್ಛವಾಗಿಡುವುದು ಮುಖ್ಯ. ಈ ಕಾರಣಕ್ಕಾಗಿ ದಿನಾಲೂ ಸ್ನಾನ ಮಾಡಿ, ಆರೋಗ್ಯವಾಗಿರಿ.
ಕೊನೇ ಮಾತು: ಮನುಷ್ಯನ ದೇಹದ ಉಷ್ಣತೆಯನ್ನು ಸಮಸ್ಥಿತಿಯಲ್ಲಿಡಲು ಬೇಕಾದ ಅತ್ಯಂತ ಅಗತ್ಯ ವಸ್ತು ನೀರು. ಹಾಗಾಗಿ ಜ್ವರ ಬಂದಾಗ ಮನುಷ್ಯ ಸಾಕಷ್ಟು ನೀರು ಕುಡಿದರೆ ದೇಹದ ಉಷ್ಣತೆಯು ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ.
ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಬಿಸಿನೀರು, ತಣ್ಣೀರಿಗಿಂತ ವೇಗವಾಗಿ ಶೈತ್ಯಗೊಂಡು ಮಂಜುಗಡ್ಡೆಯಾಗುತ್ತದೆ. ಇದನ್ನು ಪೆಂಬಾ ಪರಿಣಾಮ (Mpemba effect) ಎನ್ನುತ್ತಾರೆ.
(ಮಾಹಿತಿ ಸಂಗ್ರಹ : ಸೂತ್ರ ಪತ್ರಿಕೆ)
ಚಿತ್ರ ಕೃಪೆ: ಅಂತರ್ಜಾಲ ತಾಣ
Comments
ಎಷ್ಟು ಬೇಗನೇ ಸ್ನಾನ ಮಾಡಬಹುದು?…
ಎಷ್ಟು ಬೇಗನೇ ಸ್ನಾನ ಮಾಡಬಹುದು? ಎಂದು ಯೋಚಿಸಿದ್ದೀರಾ? ಮೂರೇ ನಿಮಿಷದಲ್ಲಿ ಸ್ನಾನ ಮುಗಿಸಬಹುದು ಎಂದರೆ ನಂಬುತ್ತೀರಾ? “ಯಶಸ್ಸಿನ ಸೂತ್ರಗಳ"ನ್ನು ತಿಳಿಸುವ ಪುಸ್ತಕದಲ್ಲಿ ಈ ಸೂತ್ರವೂ ಒಂದು! ಓದಿದಾಗ ಇದನ್ನು ನಾನೂ ನಂಬಿರಲಿಲ್ಲ. ಆದರೆ, ತುರ್ತು ಸಂದರ್ಭಗಳಲ್ಲಿ ಈ ಸೂತ್ರವನ್ನು ಪ್ರಯೋಗಿಸಿ ನೋಡಿದೆ. ಇದು ಸಾಧ್ಯ ಎಂಬುದು ನನಗೆ ಖಚಿತವಾಗಿದೆ. ಆದ್ದರಿಂದ, ಬದುಕಿನಲ್ಲಿ ಸ್ನಾನವೇ ಮುಖ್ಯ ಎನ್ನುವವರೂ, ಗಂಟೆಗಟ್ಟಲೆ ಸ್ನಾನದ ಕೋಣೆಯಲ್ಲಿ ಅಥವಾ ಬಾತ್ ಟಬ್ಬಿನಲ್ಲಿ ಸ್ನಾನ ಮಾಡುವವರೂ ಇದು ನಿಜವೇ, ಇದು ಅಗತ್ಯವೇ ಎಂದು ಚಿಂತನೆ ಮಾಡೋದು ಒಳ್ಳೆಯದು, ಅಲ್ಲವೇ?
ಪ್ರತಿ ಕಾರ್ಯವನ್ನೂ ಮಾಡಲು…
ಪ್ರತಿ ಕಾರ್ಯವನ್ನೂ ಮಾಡಲು ಪರ್ಯಾಪ್ತ ಸಮಯಾವಧಿ ಬೇಕೇ ಬೇಕು. ಯಾವುದಕ್ಕೂ ಕಾಯಬೇಕಲ್ವಾ ?
ಮಾವಿನ ಕಾಯನ್ನು ಒತ್ತೆ ಹಾಕಿ, ಹಣ್ಣು ಮಾಡುವುದರಿಂದ ಹಿಡಿದು, ಮಗುವಿನಿಂದ ಯುವಕನಾಗಲು ಯಾವ ಶಾರ್ಟ್ ಕಟ್ ವ್ಯವಸ್ಥೆಯೂ ಇಲ್ಲ. ಒಂದುವೇಳೆ ಅದನ್ನು ಪ್ರಚೋದಿಸಿದರೆ, ತೊಂದರೆ ತಪ್ಪಿದ್ದಲ್ಲ.
ಸ್ನಾನವನ್ನು ಮೂರೇ ನಿಮಿಷಗಳಲ್ಲಿ ಮಾಡಬಹುದು, ಎನ್ನುವುದು ಇಂದಿನ ಆದ್ಯತೆಗಳಲ್ಲೊಂದಾಗಿದೆ ಎಂದರೆ ತಪ್ಪಲ್ಲ. ಯಾವುದಕ್ಕೂ ಒಂದು ನಿಯಮಿತ ಸಮಯ ಆಯೋಜಿಸಿಕೊಳ್ಳುವುದು ಅತಿ ಮುಖ್ಯ. ಅದರಲ್ಲೂ ಸ್ನಾನದಲ್ಲಿ ! ಆದರೆ ಲೇಖಕರು ಹೇಳಿದಂತೆ ಅಷ್ಟೊಂದು ಸರಳೀಕರಿಸುವುದೂ ಒಳ್ಳೆಯದಲ್ಲ. ನನ್ನ ಸಂಬಂಧಿಯೊಬ್ಬರ ಮೊಮ್ಮಗ, ಬಚ್ಚಲುಮನೆಗೆ ಹೋದರೆ ಆಯಿತು. ಒಂದು ಗಂಟೆಯಾದರೂ ಬೇಕು ಹೊರಗೆ ಬರಲು. ಒಮ್ಮೆ ಅವರ ಮನೆಯಲ್ಲಿ 'ನಾನು ಹೇಳಿದ ಹಿರಿಯ ವೃದ್ಧ ಮತ ಪಿತೃಗಳು ತಮ್ಮ ಮಗಳ ಮನೆಗೆ ಹೋದರು ಎಂದಾಗ ನಂಬಲು ಆಗಲಿಲ್ಲ'. ಗಮ್ಮತ್ತೇನೆಂದರೆ ಕಾರಣ ಕೇಳಿ ನೀವು ನಗಬಹುದು. ಅವರ ಮೊಮ್ಮಗ (ಮಗನ ಮಗ) ಬಚ್ಚಲು ಮನೆಗೆ ಹೋದನೆಂದರೆ, ವಾಪಾಸ್ ಬರಲು ಎಲ್ಲರೂ ಕಾಯುತ್ತಿರಬೇಕು. ಅದಲ್ಲದೆ ಪಾಯಿಖಾನೆಗೆ ಹೋದಾಗಲೂ ಅಷ್ಟೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಮಗನ ಮುಂದೆ ವೃದ್ಧ ತಂದೆ-ತಾಯಿಗಳು ತೋಡಿಕೊಂಡರು. ಮಗ ತನ್ನ ಮಗನಿಗೆ ಹೇಳಲಾರ ; ಬಹಳ ಲಾಡ್ ಪ್ಯಾರ್ ನಿಮ್ದ ಬೆಳೆಸಿದ್ದಾನೆ. ಅಪ್ಪ ಅಮ್ಮಂದಿರನ್ನು ಬೇಸರಗೊಳಿಸಲಾರದ ಪರಿಸ್ಥಿತಿಯನ್ನು ಅನುಭವವಿಸಿ ಕೊನೆಗೆ, ನೀವು ನನ್ನ ಅಕ್ಕನ ಮನೆಗೆ ಹೋಗಿ, ಎಂದು ಕಳಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ.