ಮಣ್ಣಿನ ಮಕ್ಕಳ ಬದುಕಿಗೆ ಹಣ ಬೇಕೇ?

ಮಣ್ಣಿನ ಮಕ್ಕಳ ಬದುಕಿಗೆ ಹಣ ಬೇಕೇ?

ಅದೊಂದು ರೈತ ಕುಟುಂಬ. ಮನೆಯಲ್ಲಿರೋದು ಇಬ್ಬರು: ಪತಿ ಮತ್ತು ಪತ್ನಿ. ಅನುಸೂಯಾ ಬಾಯಿ ಮತ್ತು ಪತಿ ಪಾಂಡುರಂಗ ಮೆಶ್ ರಾಮ್. ಇವರು ಕಳೆದ ಎರಡು ದಶಕಗಳಿಂದ ತೀರಾ ಸರಳ ಜೀವನ ನಡೆಸುತ್ತಿದ್ದಾರೆ.

ಅಂದರೆ ವಿದ್ಯುತ್, ನಳ್ಳಿನೀರು, ಹವಾಮಾನ ವೈಪರೀತ್ಯ ತಡೆಯಬಲ್ಲ ಮನೆ, ಭದ್ರತಾ ವ್ಯವಸ್ಥೆ, ಸಾಕಷ್ಟು ನಗದು ಹಣ - ಇದ್ಯಾವುದೂ ಇಲ್ಲದೆ ಸುಖಸಂತೋಷದಿಂದ ಬದುಕುತ್ತಿದ್ದಾರೆ. ಇದನ್ನು ಓದಿ ಗೊಂದಲವಾಯಿತೇ?

ಮಹಾರಾಷ್ಟ್ರದ ಯವತ್‌ಮಾಲ್ ಜಿಲ್ಲೆಯ ವಾರ್ಸಿಫೋಡೆ ಗ್ರಾಮದ ಹೊರವಲಯದಲ್ಲಿ ಅವರ ಏಳು ಎಕರೆ ಜಮೀನಿನಲ್ಲಿ ಅವರ ಬದುಕನ್ನು ಹತ್ತಿರದಿಂದ ಗಮನಿಸಿದರೆ ಗೊಂದಲವೆಲ್ಲ ಪರಿಹಾರ. ಅವರ ಸರಳ ಬದುಕಿನ ಆನಂದ ಅವರ ಮುಖದಲ್ಲೇ ಕಾಣಿಸುತ್ತದೆ.

"ನಾವು ಯಾಕೆ ಹೀಗೆ ಬದುಕುತ್ತೇವೆಂದರೆ ಇದನ್ನು ನಾವು ಇಷ್ಟ ಪಡುತ್ತೇವೆ” ಎನ್ನುತ್ತಾರೆ ಪಾಂಡುರಂಗ. "ಇರುವ ಒಬ್ಬಳೇ ಮಗಳು ಮನಿಷಾಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಈಗ ಹೆತ್ತವರ ಜವಾಬ್ದಾರಿಯಿಂದಲೂ ನಾವು ಮುಕ್ತ” ಎಂದೂ ತಿಳಿಸುತ್ತಾರೆ.

ವಾರ್ಸಿಫೋಡೆಯಲ್ಲಿ ನೆಲೆಸುವುದಕ್ಕಿಂತ ಮುಂಚೆ, ಮೆಕ್ಯಾನಿಕ್ ಆಗಿ, ಡ್ರೈವರ್ ಆಗಿ ಮತ್ತು ಮೀನು ಸಾಕಾಣಿಕೆ ಕೇಂದ್ರದಲ್ಲಿ ಪಾಂಡುರಂಗ ದುಡಿದಿದ್ದರು. "ಆಗೆಲ್ಲ ಒಂದಿಲ್ಲದಿದ್ದರೆ ಇನ್ನೊಂದರ ಬಗ್ಗೆ ಆತಂಕ. ಮುಖ್ಯವಾಗಿ ಹಣ ಮತ್ತು ಏರುತ್ತಿರುವ ಬೆಲೆಗಳ ಬಗ್ಗೆ. ಕೊನೆಗೆ ಇಲ್ಲಿಗೆ ಬರಲು ನಿರ್ಧಾರ. ನಮ್ಮ ಜಮೀನಿನಲ್ಲಿ ನಮ್ಮದೇ ಆಹಾರ ಬೆಳೆದು ಚಿಂತೆಯಿಲ್ಲದೆ ಬದುಕುವ ನಿರ್ಧಾರ ಮಾಡಿದೆವು" ಎನ್ನುತ್ತಾರೆ ಪಾಂಡುರಂಗ.

ಕಳೆದ ಹಲವು ವರುಷಗಳಿಂದ ತಮ್ಮದೇ ಆದ ಸರಳ ಜೀವನ ವಿಧಾನವನ್ನು ರೂಪಿಸಿದ್ದಾರೆ ಅನುಸೂಯಾ ಬಾಯಿ ಮತ್ತು ಪಾಂಡುರಂಗ. ಅವರದು ಏಳು ಎಕ್ರೆ ಪಿತ್ರಾರ್ಜಿತ ಜಮೀನು. ಅದರಲ್ಲಿ ಮೂರೆಕೆರೆಯಲ್ಲಿ ಹತ್ತಿ ಕೃಷಿ. ಉಳಿದ ನಾಲ್ಕು ಎಕ್ರೆಯಲ್ಲಿ ಆಹಾರ ಬೆಳೆಗಳ ಕೃಷಿ: ಸಣ್ಣಜೋಳ, ವಿವಿಧ ಬೇಳೆಕಾಳು, ತರಕಾರಿಗಳು, ಎಣ್ಣೆಬೀಜಗಳು, ಸಾಂಬಾರ ಬೆಳೆಗಳು ಇತ್ಯಾದಿ.

ಅವರು ಬೆಳೆಸುವ ಹತ್ತಿಯಿಂದ (ಗಮನಿಸಿ: ಸ್ಥಳೀಯ ದೇಸಿ ತಳಿ) ಅವರಿಗೆ ವರುಷಕ್ಕೆ ರೂ. 40,000 ಆದಾಯ. ಅವರಿಗೆ ಬೇಕಾದ ಗೋಧಿ, ಅಕ್ಕಿ, ಅಪರೂಪಕ್ಕೊಮ್ಮೆ ಬಟ್ಟೆ, ತೀರಾ ಅಗತ್ಯ ವಸ್ತುಗಳು ಇವನ್ನು ಖರೀದಿಸಲು ಮತ್ತು ಕುಟುಂಬದವರ ಮದುವೆ ಇತ್ಯಾದಿ ಸಾಮಾಜಿಕ ಸಮಾರಂಭಗಳಲ್ಲಿ ಉಡುಗೊರೆ ನೀಡಲು ಈ ಹಣ ಸಾಕು. “ತಂಬಾಕು ಅಥವಾ ಶರಾಬಿನ ಚಟದಿಂದಾಗುವ ವೆಚ್ಚ ನಮಗಿಲ್ಲ; ಡಾಕ್ಟರ ಬಳಿ ಹೋಗುವ ಪ್ರಸಂಗವೇ ಬಂದಿಲ್ಲದ ಕಾರಣ ಅವರ ಶುಲ್ಕದ ವೆಚ್ಚವೂ ಇಲ್ಲ” ಎಂದು ಅನುಸೂಯಾ ಬಾಯಿ ದನಿಗೂಡಿಸುತ್ತಾರೆ.

ಸಂಚಾರಕ್ಕಾಗಿ ಅವರಲ್ಲಿ ಒಂದು ಸೈಕಲಿದೆ. ತಿಂಗಳಿಗೊಮ್ಮೆ 75 ಕಿಮೀ ದೂರದ ಮೊಹರ್ ಎಂಬಲ್ಲಿಗೆ ತೀರ್ಥಯಾತ್ರೆ ಹೋಗುವುದರ ಹೊರತಾಗಿ ಉಳಿದೆಲ್ಲ ಓಡಾಟ 25-30 ಕಿಮೀ ವ್ಯಾಪ್ತಿಯಲ್ಲಿ. ಅದಕ್ಕೆ ಅವರಿಗೆ ಸೈಕಲ್ ಸಾಕು.

ನಾಯಿಗಳು, ದನಗಳು, ಬೆಕ್ಕುಗಳು, ಆಡುಗಳನ್ನು ಸಾಕಿದ್ದಾರೆ ಈ ದಂಪತಿ. ಅವುಗಳಿಂದ ಹಣ ಮಾಡಲಿಕ್ಕಾಗಿ ಅಲ್ಲ. ಅವುಗಳ ಪ್ರೀತಿಗಾಗಿ. “ನಮ್ಮೊಂದಿಗೆ ಇವೆಲ್ಲ ಪ್ರಾಣಿಗಳು ಇರುವ ಕಾರಣ, ಇಲ್ಲಿ ನಾವಿಬ್ಬರೇ ಎಂಬ ಯೋಚನೆ ಕಾಡುವುದಿಲ್ಲ" ಎಂದು ವಿವರಿಸುತ್ತಾರೆ ಅನುಸೂಯಾ ಬಾಯಿ. ಅಲ್ಲಿ ಒಂಭತ್ತು ದನಗಳಿದ್ದರೂ ಅವುಗಳ ಹಾಲು ಕರೆಯುವುದಿಲ್ಲ ಎಂದರೆ ನಂಬುತ್ತೀರಾ? ಹಾಲು ಮಾರುವ ಯೋಚನೆಯೇ ಅವರಿಗಿಲ್ಲ. ತಮಗಾಗಿಯೂ ಹಾಲು ಕರೆಯುವುದಿಲ್ಲ! “ಯಾಕೆಂದರೆ ನಾವು ಕುಡಿಯೋದು ಬ್ಲಾಕ್ ಟೀ” ಎನ್ನುತ್ತಾರೆ ಅನುಸೂಯಾ ಬಾಯಿ.

ಹೊಲದಿಂದ ತಮಗೆ ಬೇಕಾದಷ್ಟೇ ತರಕಾರಿ ಕೊಯ್ದು ಉಳಿದದ್ದನ್ನು ಅಲ್ಲೇ ಬಿಡುತ್ತಾರೆ, ಯಾರು ಬೇಕಾದರೂ ಒಯ್ಯಲಿ ಎಂದು. ತಮಗೆ ಯಾವತ್ತೂ ಆಹಾರದ ಕೊರತೆ ಆಗಿಲ್ಲ ಎಂದು ತಿಳಿಸುತ್ತಾರೆ ಅವರು. ಹಾಗಾದರೆ ಹೆಚ್ಚು ಆಹಾರದ ಬೆಳೆ ಬೆಳೆಸುವುದು ಯಾಕೆ? ಪಾಂಡುರಂಗ ಉತ್ತರಿಸುತ್ತಾರೆ: “ಇನ್ನೊಬ್ಬರಿಗೆ ಕೊಡಲಿಕ್ಕಾಗಿ. ನಮ್ಮ ಹಳ್ಳಿಯವರು ನಮ್ಮ ಹೊಲಕ್ಕೆ ಬಂದು ತರಕಾರಿ ಒಯ್ಯುತ್ತಲೇ ಇರುತ್ತಾರೆ. ನಾವು ಎಲ್ಲರನ್ನೂ ನಂಬುತ್ತೇವೆ ಮತ್ತು ಎಲ್ಲರೂ ನಮ್ಮನ್ನು ನಂಬುತ್ತಾರೆ.” “ಈ ವರುಷ ಬೆಂಡೆಕಾಯಿ ಇಳುವರಿ ಚೆನ್ನಾಗಿತ್ತು. ಪ್ರತಿಯೊಂದು ಗಿಡದಿಂದ ನೂರಕ್ಕಿಂತ ಜಾಸ್ತಿ ಬೆಂಡೆಕಾಯಿ ಸಿಕ್ತು. ನಾನು ಅವನ್ನು ಬುಟ್ಟಿಗಟ್ಟಲೆ ಕೊಯ್ದು ರಸ್ತೆ ಬದಿಯಲ್ಲಿ ರಾಶಿ ಹಾಕಿದೆ. ಯಾರುಯಾರೋ ಬಂದು ಒಯ್ದರು” ಎನ್ನುವಾಗ ಅವರಲ್ಲಿ ಸಂತೃಪ್ತ ಭಾವ.

ಹೆಚ್ಚು ಬೆಳೆದದ್ದನ್ನು ಮಾರಿ ಹಣ ಗಳಿಸಬೇಕೆಂದು ಯಾವತ್ತೂ ಅನಿಸಿಲ್ಲವೇ? ಎಂಬ ಪ್ರಶ್ನೆಗೆ ಪಾಂಡುರಂಗ ಅವರ ಉತ್ತರ ಮಾರ್ಮಿಕ: “ಅದೇನೋ ಹೌದು, ಆದರೆ ಅದರಿಂದ ಗೋಜಲುಗಳೇ ಹುಟ್ಟುತ್ತವೆ” ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಿದ್ದರೂ ಅವರೇಕೆ ಪಡೆದಿಲ್ಲ? ದನಗಳ ಹಾಲು ಯಾಕೆ ಮಾರೋದಿಲ್ಲ? ಸರಕಾರದ ಸಬ್ಸಿಡಿ ಯಾಕೆ ಪಡೆಯೋದಿಲ್ಲ? ಬ್ಯಾಂಕಿನಲ್ಲಿ ಉಳಿತಾಯದ ಹಣ ಯಾಕೆ ಇಡೋದಿಲ್ಲ? ಇಂತಹ ಎಲ್ಲ ಪ್ರಶ್ನೆಗಳಿಗೂ ಅವರದು ಅದೇ ಉತ್ತರ.

“ಹಾಗೆಂದರೇನು?" ಎಂದು ಬಹಳ ಒತ್ತಾಯ ಮಾಡಿ ಕೇಳಿದರೆ ಪಾಂಡುರಂಗ ತನ್ನ ದೃಷ್ಠಿಕೋನ ವಿವರಿಸುತ್ತಾರೆ: “ವಿದ್ಯುತ್ ಬಳಸಿದರೆ ಅದರ ಬಿಲ್ ಪಾವತಿಗಾಗಿ ನಾವು ಹೆಚ್ಚು ಹಣ ಗಳಿಸಬೇಕು. ವಿದ್ಯುತ್ ಕಡಿತ ಆದಾಗೆಲ್ಲ ನಮ್ಮ ನೆಮ್ಮದಿ ಕೆಡುತ್ತದೆ. ನಾವು ಹೆಚ್ಚು ಬೆಳೆದದ್ದನ್ನು ಮಾರಾಟ ಮಾಡಬೇಕಾದರೆ ನಮ್ಮ ಜಮೀನಿನಲ್ಲಿ ಮತ್ತು ಪ್ರಾಣಿಗಳೊಂದಿಗೆ ಕಳೆಯುವುದಕ್ಕಿಂತ ಹೆಚ್ಚು ಸಮಯವನ್ನು ಮಾರುಕಟ್ಟೆಯಲ್ಲಿ ಕಳೆಯಬೇಕು. ಸಬ್ಸಿಡಿ ಬೇಕೆಂದರೆ ಅಧಿಕಾರಿಗಳಿಗೆ ಲಂಚ ಕೊಡಬೇಕಾಗುತ್ತದೆ.”

ಹಾಗಾದರೆ, ಹೆಚ್ಚು ಬೆಳೆ ಬೆಳೆಸಲಿಕ್ಕಾಗಿ ಮತ್ತು ಪ್ರಾಣಿಗಳನ್ನು ಸಾಕಲಿಕ್ಕಾಗಿ ಖರ್ಚಾಗುವುದಿಲ್ಲವೇ? ಈ ಪ್ರಶ್ನೆಗೆ “ಏನು ಖರ್ಚಾಗುತ್ತದೆ?” ಎಂಬುದೇ ಪಾಂಡುರಂಗರ ಉತ್ತರ. ಯಾಕೆಂದರೆ, "ಶೂನ್ಯ ಭಂಡವಾಳ ಕೃಷಿ” ಪಾಂಡುರಂಗ - ಅನುಸೂಯಾ ದಂಪತಿಯ ಅತಿ ಮುಖ್ಯ ಸಾಧನೆ. ಅವರದು ಸಾವಯವ ಕೃಷಿ. ಯಾವುದೇ ರಾಸಾಯನಿಕಗಳ ಬಳಕೆ ಇಲ್ಲ. ಅವರು ಬಿತ್ತುವ ಬೀಜಗಳೆಲ್ಲ ದೇಸಿ ತಳಿಗಳದ್ದು; ಅವನ್ನು ಅವರೇ ಸಂರಕ್ಷಿಸಿದ್ದಾರೆ. ಮಲ್ಚಿಂಗ್ ಮತ್ತು ಸಮತಳ ಬದುಗಳು ಅವರ ಜಮೀನಿನ ಫಲವತ್ತತೆ ಹೆಚ್ಚಿಸಿ, ನೀರಾವರಿಯ ಅಗತ್ಯ ಕಡಿಮೆ ಮಾಡಿವೆ. ಬೇವಿನ ಮರಗಳ ಬುಡದಲ್ಲಿ ದನಗಳನ್ನು ಕಟ್ಟುತ್ತಾರೆ - ಅಲ್ಲಿ ಸೆಗಣಿ, ಮೂತ್ರ, ಕೃಷಿ ತ್ಯಾಜ್ಯ ಸೇರಿ ಅತ್ಯುತ್ತಮ ಗೊಬ್ಬರ ಹಾಗೂ ಕೀಟ ನಿಯಂತ್ರಣ ಮಿಶ್ರಣ ಉತ್ಪಾದನೆ ಆಗುತ್ತದೆ. ಇವೆಲ್ಲ ಕ್ರಮಗಳಿಂದಾಗಿ ಅವರ ಜಮೀನಿನಲ್ಲಿ ಕೆಲಸ ಕಡಿಮೆ. "ನಾವೇ ಎಲ್ಲ ಕೆಲಸ ಮಾಡುತ್ತೇವೆ. ಅದೇನಿದ್ದರೂ ದಿನಕ್ಕೆ ಮೂರು ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಅಗತ್ಯವಿಲ್ಲ" ಎಂದು ಅನಸೂಯಾ ಬಾಯಿ ವಿವರಿಸುತ್ತಾರೆ.

ಈ ರೀತಿಯಲ್ಲಿ ಬದುಕಲು ಸಾಧ್ಯವೇ? ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮಾವರದ ಹತ್ತಿರ ಸುಸ್ಥಿರ ಕೃಷಿಯ ಹರಿಕಾರ ಚೇರ್ಕಾಡಿ ರಾಮಚಂದ್ರರಾಯರು ಎರಡೂವರೆ ಎಕರೆ ಜಮೀನಿನಲ್ಲಿ 60 ವರುಷ ಹೀಗೆಯೇ ಸರಳ ಸಂತೃಪ್ತ ಜೀವನ ನಡೆಸಿದ್ದರು. ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆಯ ಸರಗೂರಿನ ಹತ್ತಿರ ವಿವೇಕ್ ಕಾರ್ಯಪ್ಪ ಮತ್ತು ಜೂಲಿ ದಂಪತಿ 1986ರಿಂದ ಹೀಗೆಯೇ ಬದುಕಿ ತೋರಿಸಿದ್ದಾರೆ. ನಮ್ಮ ಚಿಂತನೆ ಬದಲಾದರೆ, "ನಮ್ಮ ಬದುಕಿಗೆ ಹಣ ಬೇಕೇ? ಎಷ್ಟು?” ಎಂಬ ಪ್ರಶ್ನೆಗೆ ಉತ್ತರ ಸಿಕ್ಕೇ ಸಿಗುತ್ತದೆ.

ಫೋಟೋ 1: ಸುಸ್ಥಿರ ಕೃಷಿಯ ಹರಿಕಾರ ದಿ. ಚೇರ್ಕಾಡಿ ರಾಮಚಂದ್ರ ರಾಯರು
ಫೋಟೋ 2: ದಶಕಗಳ ಕಾಲ ಬಾವಿಯಿಂದ ನೀರೆತ್ತಲು ತಾವು ಬಳಸಿದ್ದ ರಾಟೆ ತೋರಿಸುತ್ತಿರುವ ರಾಮಚಂದ್ರ ರಾಯರು
(ಫೋಟೋಗಳು: ಲೇಖಕರ ಸಂಗ್ರಹದಿಂದ)

Comments

Submitted by Shreerama Diwana Tue, 08/23/2022 - 10:04

ಚೇರ್ಕಾಡಿಯವರ ನೆನಪಾಯ್ತು...

'ಮಣ್ಣಿನ ಮಕ್ಕಳ ಬದುಕಿಗೆ ಹಣ ಬೇಕೇ?' ಎನ್ನುವ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಚೇರ್ಕಾಡಿಯ ಕೃಷಿ ಋಷಿ ರಾಮಚಂದ್ರರಾಯರನ್ನು ನಾನು ಪತ್ರಿಕೆಯ ಉದ್ಯೋಗಿಯಾಗಿದ್ದ ಸಮಯದಲ್ಲಿ (೧೯೯೮-೯೯) ಬ್ರಹ್ಮಾವರದಲ್ಲಿ ಒಮ್ಮೆ ಕಂಡಿದ್ದೆ. ಈ ಲೇಖನದ ಚಿತ್ರದಲ್ಲಿರುವಂತೆ ಸರಳ ಉಡುಗೆ ತೊಟ್ಟು ಸವಿನಯ ಮಾತುಗಳನ್ನು ಆಡುವ ಈ ಸಂತನನ್ನು ಕಂಡು ಮೂಕವಿಸ್ಮಿತನಾಗಿದ್ದೆ. 

ಅವರ ತೋಟಕ್ಕೆ ಹೋಗುವ ಸೌಭಾಗ್ಯ ನನಗೆ ದೊರೆಯದೇ ಹೋದರೂ, ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಕಂಡಿರುವೆ ಎನ್ನುವ ಸಂತೃಪ್ತ ಭಾವನೆ ಇದೆ. ಸರಳವಾಗಿ ಬದುಕುವುದೂ ಒಂದು ಸಾಧನೆ ಹಾಗೂ ತಪಸ್ಸು. ಈ ಲೇಖನದಲ್ಲಿ ಹೇಳಿದ ಪಾಂಡುರಂಗ ಮೆಶ್ ರಾಮ್ ಹಾಗೂ ಅನಸೂಯಾ ದಂಪಗಳದ್ದೂ ಇದೇ ರೀತಿಯ ಸಾಧನೆ ಎಂದು ಹೇಳಬಹುದು. ಅಪರೂಪದ ಲೇಖನಕ್ಕೆ ಧನ್ಯವಾದಗಳು.

-ಅಶ್ವಿನ್