'ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತಾ ಮರವಾದೆ !'

'ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತಾ ಮರವಾದೆ !'

ಸಂತ ಶಿಶುನಾಳ ಶರೀಫರ ಒಂದು ಕವಿತೆ 'ಬಿದಿರು ನಾನಾರಿಗಲ್ಲದವಳು'. ಇದರಲ್ಲಿ ಬಿದಿರಿನ ನಾನಾ ಉಪಯೋಗಗಳನ್ನು ಬಹಳ ಸೊಗಸಾಗಿ ಕವಿತೆಯ ರೂಪದಲ್ಲಿ ವರ್ಣಿಸಿದ್ದಾರೆ ಶರೀಫರು. ಹುಲ್ಲಿನ ಜಾತಿಗೆ ಸೇರುವ ಈ ಬಿದಿರು ಸಸ್ಯ, ಬೆಳೆದಾಗ ಮರದಂತೆಯೇ ಗೋಚರಿಸುತ್ತದೆ. ಅತ್ಯಂತ ವೇಗವಾಗಿ ಬೆಳೆಯುವ ಸಸ್ಯ ಎಂಬ ಹೆಗ್ಗಳಿಕೆಯೂ ಬಿದಿರಿಗಿದೆ. ಹಿಂದೆಲ್ಲಾ ಬಿದಿರು ನೆಡಲು, ಕಡಿಯಲು ಅರಣ್ಯ ಇಲಾಖೆಯ ಅನುಮತಿ ಬೇಕಾಗಿತ್ತು. ಈ ಕಾರಣದಿಂದ ಬಿದಿರು ಬೆಳೆಯುವವರ ಸಂಖ್ಯೆ ಕಡಿಮೆಯಾಗಿ ಬಿದಿರು ಕಾಡುಗಳೇ ಕಡಿಮೆಯಾದವು. ಈಗ ಕಾನೂನು ಬದಲಾಗಿದೆ. ಬಿದಿರನ್ನು ಬೆಳೆದು, ಕಡಿಯಲು ನೀವು ಸ್ವತಂತ್ರ. ಏಕೆಂದರೆ ಇದು ಮರವಲ್ಲ. ಮರದ ಜಾತಿಗೂ ಸಂಬಂಧಿಸಿದ್ದಲ್ಲ. ಈ ಕಾರಣದಿಂದಾಗಿ ಬಿದಿರು ಬೆಳೆಸಲು ಈಗ ಹಲವಾರು ಮಂದಿ ಮನಸ್ಸು ಮಾಡಿದ್ದಾರೆ.

ಬಿದಿರಿನ ಉತ್ಪನ್ನಗಳನ್ನು ಅನಾದಿ ಕಾಲದಿಂದಲೂ ಮಾನವ ಬಳಸುತ್ತಾ ಬಂದಿದ್ದಾನೆ. ಈಗಿನ ಕಾಲಕ್ಕೆ ಅವುಗಳು ಇನ್ನಷ್ಟು ಪ್ರಸ್ತುತವಾಗಿವೆ. ಏಕೆಂದರೆ ಮಾನವ ನಿರಂತರವಾಗಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ನಂತಹ ಉತ್ಪನ್ನಗಳನ್ನು ಬಳಸುತ್ತಾ ಬಂದಿದ್ದಾನೆ. ನಾನು ಈ ಹಿಂದೆಯೇ 'ಸಂಪದ'ದಲ್ಲಿ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಲೇಖನ ಬರೆಯುವಾಗ ಒಂದು ವಿಷಯವನ್ನು ಉಲ್ಲೇಖ ಮಾಡಿದ್ದೆ. ಅದೇನೆಂದರೆ ನಾವು ಜೀವನದಲ್ಲಿ ಪ್ರಥಮವಾಗಿ ಬಳಸಿದ ಟೂತ್ ಬ್ರಷ್ ಇನ್ನೂ ಮಣ್ಣಿನಲ್ಲಿ ಕರಗದೇ ಉಳಿದಿರಬಹುದು ಎಂದು. ನಿಜಕ್ಕೂ ಇದು ಸತ್ಯ ಮಾತು ಏಕೆ ಗೊತ್ತೇ? ಪ್ಲಾಸ್ಟಿಕ್ ನೂರಾರು ವರ್ಷಗಳಾದರೂ ಮಣ್ಣಿನಲ್ಲಿ ಕರಗದೇ ಉಳಿಯುತ್ತದೆ. ನಾವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡು ಹುಡುಕಲು ಬಿದಿರು ನಮಗೆ ಸಹಕಾರಿ.

ಹಲವಾರು ಸಂಸ್ಥೆಗಳು ಬಿದಿರಿನ ಸಾಮಾಗ್ರಿಗಳನ್ನು ತಯಾರಿಸುವತ್ತ ಮನಸ್ಸು ಮಾಡಿದ್ದಾರೆ. ಬ್ಯಾಂಬೂ ಇಂಡಿಯಾದಂತಹ ಸಂಸ್ಥೆಗಳು ಬಿದಿರಿನ ಟೂತ್ ಬ್ರಷ್, ಬಿದಿರಿನ ಪೆನ್ ಸ್ಟ್ಯಾಂಡ್, ಅಲಂಕಾರಿಕ ಆಭರಣಗಳು ಇವನ್ನೆಲ್ಲಾ ತಯಾರಿಸುತ್ತಿವೆ. ಬಿದಿರನ್ನು ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಹಲವಾರು ವಿಷಯಗಳಲ್ಲಿ ಬಳಸಬಹುದು. ಆದರೆ ಇಲ್ಲಿ ಸಮಸ್ಯೆ ಇರುವುದು ಬಿದಿರಿನ ಲಭ್ಯತೆ ಮತ್ತು ಕಾನೂನು ತೊಡಕುಗಳು. ನಾವು ಬೆಳೆದ ಬಿದಿರನ್ನು ನಾವು ಸುಲಭವಾಗಿ ಕಡಿದು ವಿಲೇವಾರಿ ಮಾಡಲು ಸಾಧ್ಯವಾಗಬೇಕು. ಆಗ ಬಿದಿರನ್ನು ಬೆಳೆಯುವ ಕೃಷಿಕರು ಹೆಚ್ಚಾಗುತ್ತಾರೆ. ಆಗ ಬಿದಿರು ಉತ್ಪನ್ನ ತಯಾರಕರಿಗೆ ಸುಲಭದಲ್ಲಿ ಬಿದಿರು ಸಿಗುತ್ತದೆ. ಉತ್ಪನ್ನಗಳೂ ಕೈಗೆಟಕುವಂತಾಗುತ್ತವೆ. ಈಗ ಒಂದು ಬಿದಿರಿನ ಟೂತ್ ಬ್ರಷ್ ಸುಮಾರು ೫೦-೬೦ ರೂ.ಗ಼ೆ ದೊರೆಯುತ್ತದೆ. ಅದೇ ಪ್ಲಾಸ್ಟಿಕ್ ಟೂತ್ ಬ್ರಷ್ ಬೆಲೆ ೩೦-೪೦ರೂ, ಗಳ ಆಸುಪಾಸಿನಲ್ಲಿವೆ. ಈ ಬೆಲೆಯ ವ್ಯತ್ಯಾಸವು ಕಡಿಮೆಯಾಗಬೇಕಾದರೆ ಬಿದಿರು ಸುಲಭದಲ್ಲಿ ಮತ್ತು ಯಥೇಚ್ಚವಾಗಿ ಸಿಗಬೇಕು. ನಿಧಾನವಾಗಿ ಬಿದಿರಿನ ಬಗ್ಗೆ ಇರುವ ಅರಣ್ಯ ಇಲಾಖೆಯ ಕಾನೂನುಗಳು ಈಗ ಸಡಿಲವಾಗತೊಡಗಿವೆ.

೨೦೦೯ರಲ್ಲಿ ಜಾಗತಿಕ ಬಿದಿರು ಸಂಸ್ಥೆ ಥೈಲ್ಯಾಂಡ್ ನ ಬ್ಯಾಂಕಾಕ್ ನಗರದಲ್ಲಿ ಹಮ್ಮಿಕೊಂಡಿದ್ದ ೮ನೇ ಜಾಗತಿಕ ಬಿದಿರು ಅಧಿವೇಶನದಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ ೧೮ರಂದು ವಿಶ್ವ ಬಿದಿರು ದಿನ (World Bamboo Day) ಎಂದು ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು. ಈ ಮೂಲಕ ಬಿದಿರು ಬೆಳೆಯಲು ಹಾಗೂ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಲು ನಾಂದಿ ಹಾಡಲಾಯಿತು. ಇದರಂತೆ ಪ್ರತೀ ವರ್ಷ ಈ ದಿನದಂದು ಬಿದಿರು ಬೆಳೆಯ ಹೊಸ ಹೊಸ ತಳಿಗಳ ಬಗ್ಗೆ, ಅವುಗಳ ಉತ್ಪಾದನೆಗಳ ಬಗ್ಗೆ ವಿಚಾರ ಮಂಥನಗಳು ನಡೆಯುತ್ತವೆ.

ಈಗ ಬಿದಿರು ಎಂಬುವುದು ಕೇವಲ ಅರಣ್ಯದಲ್ಲಿ ಬೆಳೆಸಲಾಗುವ ಬೆಳೆಯಾಗಿ ಉಳಿದಿಲ್ಲ. ಅದು ಆಹಾರ, ಮರಮಟ್ಟು, ಇಂಧನದ ರೂಪದಲ್ಲಿ ಉಪಯೋಗವಾಗುತ್ತದೆ. ಸರಕಾರಗಳೂ ಬಿದಿರು ಬೆಳೆಯನ್ನು ಉತ್ತೇಜಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಆಸಕ್ತ ಕೃಷಿಕರು ಈ ಬೆಳೆಯನ್ನು ಬೆಳೆದು ಲಕ್ಷಾಧೀಶರಾಗಬಹುದು. ಈಗಾಗಲೇ ಹಲವಾರು ಮಂದಿ ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಕಾನೂನಿನ ವ್ಯಾಪ್ತಿಗೆ ಬರುತ್ತಿದ್ದ ಬಿದಿರು ಬೆಳೆಯು ೨೦೧೭-೧೮ರಿಂದ ಕೃಷಿ ಇಲಾಖೆಯ ಅಡಿಯಲ್ಲಿ ಬರುತ್ತಿದೆ. 

ಬಿದಿರು ಈಗ ಒಂದು ರೀತಿಯ ಕಲ್ಪವೃಕ್ಷವಾಗಿ ಬೆಳೆದಿದೆ. ಎಳೆಯ ಬಿದಿರು (ಕಣಿಲೆ ಅಥವಾ ಕಳಲೆ) ಆಹಾರಕ್ಕಾಗಿ ಬಳಕೆಯಾಗುತ್ತಿದೆ. ಇದರಿಂದ ರುಚಿಕರವಾದ ಖಾದ್ಯಗಳು, ಉಪ್ಪಿನಕಾಯಿಗಳು ತಯಾರಾಗುತ್ತವೆ. ಬಿದಿರಿನಿಂದ ಪೀಠೋಪಕರಣಗಳು, ಅಲಂಕಾರಿಕ ಆಭರಣಗಳು, ವಾಹನಗಳ ಬಿಡಿಭಾಗಗಳು, ಸೈಕಲ್ ಹೀಗೆ ಹತ್ತು ಹಲವಾರು ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಬಿದಿರಿನಲ್ಲಿ ಸಕ್ಕರೆ ಅಂಶ ಇರುವುದರಿಂದ ಎಥೆನಾಲ್ ತಯಾರಿಕೆಗೆ ಅನುಕೂಲಕರವಾಗಿದೆ. ಚೀನಾದಲ್ಲಿ ಬಿದಿರಿನಿಂದ ನೂಲನ್ನು ತಯಾರಿಸುವ ಘಟಕವೊಂದು ಸದ್ಯದಲ್ಲೇ ಸ್ಥಾಪನೆಯಾಗಲಿದೆ. 

ಬಿದಿರಿನ ಗಿಡವು ಪರಿಸರ ಸ್ನೇಹಿ ಗಿಡ. ಒಂದು ಬಿದಿರಿನ ಗಿಡ ವಾರ್ಷಿಕವಾಗಿ ಸುಮಾರು ೩೦೦ ಕೆಜಿ ಆಮ್ಲಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಇದು ಒಬ್ಬ ಮನುಷ್ಯ ವಾರ್ಷಿಕವಾಗಿ ಬಳಸುವ ಆಮ್ಲಜನಕದ ಪ್ರಮಾಣ. ಬಿದಿರು ಸಸ್ಯ ವಾತಾವರಣದಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರುತ್ತದೆ. ಈ ಕಾರಣದಿಂದ ಬಿದಿರು ಪರಿಸರದಲ್ಲಿ ಸಮತೋಲನ ಕಾಪಾಡಲೂ ಅನುಕೂಲಕರವಾಗಿದೆ. ಈಗ ಹಲವಾರು ಸಂಘ ಸಂಸ್ಥೆಗಳು ಬಿದಿರನ್ನು ನೆಡುವ ಬಗ್ಗೆ ಯೋಚನೆ ಮಾಡತೊಡಗಿವೆ.

ಬಿದಿರಿನಲ್ಲಿ ಹಲವಾರು ತಳಿಗಳಿವೆ. ಭೀಮ ಬಿದಿರು ಎಂಬ ತಳಿ ಬಹಳ ವೇಗವಾಗಿ ಬೆಳೆಯುತ್ತದೆ. ದಿನಕ್ಕೆ ಒಂದೂವರೆ ಅಡಿ ಎತ್ತರ ಬೆಳೆಯುತ್ತದೆ. ಬಿದಿರು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂವು ಬಿಡುತ್ತದೆ. ಹೂವು ಬಿಟ್ಟು ಅದರಲ್ಲಿ ಅಕ್ಕಿಯಂತಹ ಬೀಜಗಳು ಉತ್ಪಾದನೆಯಾಗುತ್ತವೆ. ಇದನ್ನು ಬಿದಿರಿನ ಅಕ್ಕಿ ಎಂದು ಕರೆಯುತ್ತಾರೆ. ಇದು ದೇಹದಲ್ಲಿನ ಕೊಬ್ಬನ್ನು ಕರಗಿಸಲು ಬಹಳ ಸಹಕಾರಿ ಎನ್ನುತ್ತಾರೆ. ಈಗಂತೂ ಬಿದಿರಕ್ಕಿಯ ಹಲವಾರು ಉತ್ಪಾದನೆಗಳು ಮಾರುಕಟ್ಟೆಯಲ್ಲಿವೆ. ಬಿದಿರಕ್ಕಿಯ ಪಾಯಸವನ್ನೂ ಮಾಡುತ್ತಾರೆ. ಬಿದಿರು ಬೆಳೆಗೆ ಉತ್ತಮ ನೀರಾವರಿ ಅಗತ್ಯವಿದೆ. ಈ ಕಾರಣದಿಂದ ಬಿದಿರನ್ನು ನದಿ, ತೊರೆ-ಹಳ್ಳಗಳ ಬದಿಯಲ್ಲಿ ನೆಡುತ್ತಾರೆ. ಇದರಿಂದ ಮಣ್ಣು ಕೊಚ್ಚಣೆಯೂ ಹಿಡಿತದಲ್ಲಿರುತ್ತದೆ. 

ಬಿದಿರು ವೇಗವಾಗಿ ಬೆಳೆಯುವ ಸಸ್ಯವಾದುದರಿಂದ ಇದರಿಂದ ಬಹುಬೇಗನೇ ಪ್ರತಿಫಲವನ್ನು ಪಡೆಯಬಹುದು. ಮಳೆಗಾಲದಲ್ಲಿ ಬುಡದಲ್ಲಿ ಪುಟ್ಟ ಪುಟ್ಟ ಸಸಿಗಳು ಹುಟ್ಟಿಕೊಳ್ಳುವುದರಿಂದ ಸಸ್ಯಾಭಿವೃದ್ಧಿಯೂ ಕಷ್ಟಕರವೇನಲ್ಲ. ಆ ಸಸಿಗಳಿಂದ ಉತ್ತಮ ಆಹಾರವನ್ನೂ ತಯಾರಿಸಬಹುದು. ಈ ಕಾರಣಗಳಿಂದ ಬಿದಿರಿನ ಕೃಷಿ ಲಾಭದಾಯಕವೂ ಹೌದು. ಬಿದಿರನ್ನು ಉಳಿಸಿ ಬೆಳೆಸುವುದರ ಮೂಲಕ ಪರಿಸರ ಸಂರಕ್ಷಣೆಯಲ್ಲೂ ನಾವು ಪಾಲುದಾರರಾಗಬಹುದು. 

ಚಿತ್ರ ಕೃಪೆ: ಅಂತರ್ಜಾಲ ತಾಣ

Comments

Submitted by addoor Thu, 09/22/2022 - 09:53

ಬಿದಿರಿನ ಬಳಕೆ ವಿಧವಿಧ. ಬಿದಿರಿನ ಗಳಗಳನ್ನೇ ಪೈಪಿನಂತೆ ಜೋಡಿಸಿ, ಬೆಟ್ಟದಿಂದ ಹಳ್ಳಿಗೆ ನೀರು ಹರಿಸಿ, ನೀರು ಹೊತ್ತು ತರುವ ಬವಣೆ ನೀಗಿಸಿಕೊಂಡಿದ್ದರು ಮಹಿಳೆಯರು.